ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರ ವಿರುದ್ಧವಾಗಿ ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿ ಕನ್ನಡಿಗರಲ್ಲಿ ಭಾಷಾ ಕಿಚ್ಚನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಸೊಲ್ಲಾಪುರದ ಮರಾಠಿ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಎಂಬ ಶಿಕ್ಷಕನ ಕನ್ನಡ ಭಾಷಾ ಕಲಿಸುವಿಕೆಗಾಗಿ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಅಮೇರಿಕನ್ ಡಾಲರ್ (7ಕೋಟಿ 38 ಲಕ್ಷಗಳು)ಗಳನ್ನು ಗಳಿಸಿದ ಅಧ್ಭುತವಾದ ಮತ್ತು ಆಷ್ಟೇ ಪ್ರೇರಣಾದಾಯಕವಾದ ರೋಚಕ ಕಥೆ ಇದೋ ನಿಮಗಾಗಿ

1947ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ರಾಜ್ಯಗಳನ್ನು ಒಗೂಡಿಸಿದ ನಂತರ 1950ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸಿದರು. ಇಂದಿನಂತೆಯೇ ಅಂದಿನ ರಾಜಕೀಯ ಧುರೀಣರ ನಿರ್ಲಕ್ಷತನದಿಂದಾಗಿ ಕನ್ನಡಿಗರೇ ಬಾಹುಳ್ಯವಿದ್ದ ಸೊಲ್ಲಾಪುರ, ಕೊಲ್ಹಾಪುರ ಮಹಾರಾಷ್ಟ್ರಕ್ಕೆ ಸೇರಿದ ಪರಿಣಾಮ ಇಂದಿಗೂ ಅಲ್ಲಿನ ಬಹುತೇಕರು ತ್ರಿಶಂಕು ಸ್ಥಿತಿಯಲ್ಲಿಯೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಅಂತಹದ್ದೇ ಒಂದು ಬುಡಕಟ್ಟು ಜನರು ವಾಸಿರುವ ಹಳ್ಳಿಯೊಂದರಲ್ಲಿ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯಲ್ಲಿತ್ತು. ಹೆಸರಿಗಷ್ಟೇ ಶಾಲೆಯೆಂದಿದ್ದರು ಅದು ಅಕ್ಷರಶಃ ಜಾನುವಾರುಗಳ ಕೊಟ್ಟಿಗೆಯಾಗಿತ್ತು. ಇನ್ನು ಆ ಶಾಲೆಗೆ ಹಾಜರಾಗುತ್ತಿದ್ದವರು ಮಕ್ಕಳಾಗಿದ್ದರೂ ಬಹುತೇಕ ಹೆಣ್ಣು ಮಕ್ಕಳಿಗೆ ಅಪ್ರಾಪ್ತ ವಯಸಿನಲ್ಲಿಯೇ ಬಾಲ್ಯವಿವಾಹವಾಗಿದ್ದಂತಹ ಶಾಲೆಗೆ 2009 ರಲ್ಲಿ ಶಿಕ್ಷಕನಾಗಿ ರಂಜಿತ್ ಸಿಂಹ ಡಿಸ್ಲೆ ಎಂಬ ಮರಾಠಿ ಯುವಕ ಬರುತ್ತಾರೆ. ಆತ ಎಷ್ಟೇ ಶ್ರಮವಹಿಸಿದರೂ ಆ ಮಕ್ಕಳಿಗೆ ಪಾಠ ಹೇಳಿಕೊಟ್ಟರೂ ಆರ್ಥವಾಗುತ್ತಿರಲಿಲ್ಲ.

ಇದಕ್ಕೆ ಮುಖ್ಯ ಕಾರಣವೆಂದರೆ, ಅವರು ಕಲಿಸುತ್ತಿದ್ದ ಪಠ್ಯಪುಸ್ತಕಗಳೆಲ್ಲವೂ ಆ ಶಾಲೆಯ ವಿದ್ಯಾರ್ಥಿಗಳ ಮಾತೃಭಾಷೆಯಾದ ಕನ್ನಡದಲ್ಲಿ ಇರದೇ ಮರಾಠಿ ಭಾಷೆಯಲ್ಲಿದ್ದದ್ದರಿಂದ ವರೆಗೆ ಅರ್ಥವಾಗುತ್ತಿಲ್ಲ ಎಂಬುದನ್ನು ಅರಿತ ಎಂದು ರಂಜಿತ್ ಸಿಂಹ ಆ ಮಕ್ಕಳ ಸಲುವಾಗಿ ತಾವೇ ಕನ್ನಡವನ್ನು ಓದಲು ಬರೆಯಲು ಕಲಿತುಕೊಂಡು ಮಕ್ಕಳೊಂದಿಗೆ ಕನ್ನಡಲ್ಲೇ ವ್ಯವಹರಿಸಲು ಆರಂಭಿಸಿದಾಗ ಮಕ್ಕಳ ಕಲಿಕಾಸಕ್ತಿ ಉತ್ತಮವಾದದ್ದನ್ನು ಮನಗೊಂಡು ಆರಂಭದಲ್ಲಿ ಮರಾಠಿ ಭಾಷೆಯಲ್ಲಿದ್ದ 1- 4 ನೇ ತರಗತಿಯಿಂದ ಪುಸ್ತಕಗಳನ್ನು ಕನ್ನಡದಲ್ಲಿ ಸ್ವತಃ ಮರು ವಿನ್ಯಾಸಗೊಳಿಸಿದರು. ಕೇವಲ ಓದುವ ಪುಸ್ತಕವಲ್ಲದೇ ಮಕ್ಕಳಿಗೆ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಕಥೆಗಳು ಮತ್ತು ಪದ್ಯಗಳನ್ನು ಆಡೀಯೋ, ವೀಡಿಯೋಗಳ ಮೂಲಕ ಕಲಿಸುವುದನ್ನು ಬಳಕೆಯನ್ನು ತಂದಿದ್ದಲ್ಲದೇ, ಆವುಗಳೆಲ್ಲವನ್ನೂ ಕ್ಯೂಆರ್ ಕೋಡ್ ಸಂಕೇತಗಳ ಒಳಗೆ ಸೇರಿಸಿ, ಪಠ್ಯಪುಸ್ತಕಗಳನ್ನು ಮರು ವಿನ್ಯಾಸಗೊಳಿಸಲು ಸಹಾಯ ಮಾಡಿದರು. ಈ ನವ ನಾವೀನ್ಯತೆಯ ಮೂಲಕ ಅವರು ವಿದ್ಯಾರ್ಥಿಗಳ ಕಲಿಕಾ, ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೇ ಅವರ ಕೌಶಲ್ಯ, ಸೃಜನಶೀಲತೆ ಮತ್ತು ಉತ್ತಮ ಸಂವಹನವನ್ನು ಜಾಗೃತಗೊಳಿಸಿದರು.

ಅವರ ಈ ಪ್ರಯತ್ನದ ಫಲವಾಗಿ, ಆ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಿದ್ದಲ್ಲದೇ, ಅವರ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಸಂಖ್ಯೆಯೂ 100% ದಾಖಲಾಯಿತು. ಅಷ್ಟೇ ಅಲ್ಲದೇ ಈ ಶಾಲೆಯ ಅಭಿವೃದ್ಧಿಯಾಗಿ ಹೆಣ್ಣುಮಕ್ಕಳೂ ಕಲಿಯಲಾರಂಭಿಸಿದ ಪರಿಣಾಮ ಆ ಹಳ್ಳಿಯಲ್ಲಿ ಮುಂದೆ ಯಾವುದೇ ಹದಿಹರೆಯದ / ಅಪ್ರಾಪ್ತ ವಯಸ್ಸಿನ ವಿವಾಹಗಳು ನೆಡೆಯುಲಿಲ್ಲ ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಡಿಸ್ಲೆ ಅವರ ಈ ನವ ನವೀನ ಪ್ರಯತ್ನಗಳು ಮತ್ತು ಯಶಸ್ವಿ ಕಲಿಕಾ ಯೋಜನೆಯಿಂದ ಪ್ರಭಾವಿತರಾದ ಮಹಾರಾಷ್ಟ್ರ ಸರ್ಕಾರವೂ ಸಹಾ 2017ರಲ್ಲಿ ರಾಜ್ಯದ ಎಲ್ಲಾ ಶ್ರೇಣಿಗಳಿಗೆ ಕ್ಯೂಆರ್-ಎಂಬೆಡೆಡ್ ಪಠ್ಯಪುಸ್ತಕಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದಲ್ಲದೇ, ಇನ್ನು ಮುಂದೆ ಎನ್‌ಸಿಇಆರ್‌ಟಿ ಎಲ್ಲಾ ಪಠ್ಯಪುಸ್ತಕಗಳು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿರುವ ಮೂಲಕ ಮಕ್ಕಳು ತಮ್ಮ ಮೊಬೈಲಿನಲ್ಲಿ ಆ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ ಕೂಡಲೇ ಆ ಪಠ್ಯಪುಸ್ತಕಗಳು, ಪದ್ಯಗಳು, ಆಡಿಯೋ, ವಿಡಿಯೋಗಳು ಮೊಬೈಲಿನಲ್ಲಿ ಮೂಡುವಂತಂತ ಅಧ್ಭುತವಾದ ಪ್ರಯತ್ನವಾಗಿದೆ.

ನಿಜ ಹೇಳಬೇಕೆಂದರೆ ಶಿಕ್ಷಕನಾಗಬೇಕೆಂಬುದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ರಂಜಿತ್ ಸಿಂಹ ಡಿಸ್ಲೆಯವರ ಆಸೆಯೇನೂ ಆಗಿರಲಿಲ್ಲ. ಆರಂಭದಲ್ಲಿ ಅವರು ಐಟಿ ಎಂಜಿನಿಯರ್ ಆಗಬೇಕೆಂದು ಬಯಸಿ ಎಂಜಿನಿಯರಿಂಗ್ ಕಾಲೇಜು ಸೇರಿಕೊಂಡರೂ ಅದೇಕೋ ಇಂಜೀನಿಯರಿಂಗ್ ಕಲಿಗೆ ಒಗ್ಗದ ಕಾರಣ ಅವರ ತಂದೆಯವರ ಪ್ರೇರಣೆಯಂತೆ ಶಿಕ್ಷಕರ ತರಬೇತಿಗೆ ಸೇರಿಕೊಂಡರು. ಒಲ್ಲದೇ ಮನಸ್ಸಿನಿಂದಲೇ ಶಿಕ್ಷರಕರ ತರಭೇತಿಗೆ ಸೇರಿದ ರಂಜಿತ್ ಆರಂಭದಲ್ಲಿ ಹಿಂಜರಿಯುತ್ತಿದ್ದರೂ ನಂತರ ಅವರಿಗೇ ಆಸಕ್ತಿ ಮೂಡಿ ಯಶಸ್ವಿಯಾಗಿ ಶಿಕ್ಷಕರ ತರಬೇತಿ ಮುಗಿಸಿದ್ದಲ್ಲದೇ ಸರ್ಕಾರೀ ಶಾಲೆಯ ಶಿಕ್ಷಕರಾಗಿ ಬಂದು ಶಿಕ್ಷಣ ಪದ್ದತಿಯಲ್ಲಿ ನಿಜವಾದ ಬದಲಾವಣೆ ತಂದಿದ್ದಲ್ಲದೇ, ವಿಶ್ವಾದ್ಯಂತ ಅನೇಕ ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸಿದ್ದಾರೆ

ರಂಜಿತ್ ಅವರು ಈಗ ಕೇವಲ ಭಾರತವಲ್ಲದೇ, ಪಾಕಿಸ್ತಾನ, ಇಸ್ರೇಲ್, ಪ್ಯಾಲೆಸ್ಟೈನ್, ಯುಎಸ್, ಉತ್ತರ ಕೊರಿಯಾ, ಇರಾಕ್ ಮತ್ತು ಇರಾನ್ ಸೇರಿದಂತೆ ಎಂಟು ದೇಶಗಳ 19,000 ವಿದ್ಯಾರ್ಥಿಗಳನ್ನು ಸಂಪರ್ಕಿಸಿರುವ ‘ಲೆಟ್ಸ್ ಕ್ರಾಸ್ ದಿ ಬಾರ್ಡರ್ಸ್’ ಯೋಜನೆಯ ಒಂದು ಭಾಗವಾಗಿದ್ದಾರೆ. ಪ್ರಪಂಚಾಧ್ಯಂತ ಗ್ರಾಮೀಣ ವಲಯದ ವಿದ್ಯಾರ್ಥಿಗಳಲ್ಲಿ ಶಾಂತಿ ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಮೈಕ್ರೋಸಾಫ್ಟ್ ಎಜುಕೇಟರ್ ಸಮುದಾಯ ವೇದಿಕೆಯ ಮೂಲಕ ವಿಶ್ವದ ಇತರ ಭಾಗಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಂಜಿತ್‌ ಸಿಂಹ ಕಲಿಸುತ್ತಿರುವುದಲ್ಲದೇ, ವಿದ್ಯಾರ್ಥಿಗಳನ್ನು ವರ್ಚುವಲ್ ಟ್ರಿಪ್‌ಗಳಿಗೆ ಕರೆದೊಯ್ಯುತ್ತಾರೆ. ಅದಲ್ಲದೇ ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ತಮ್ಮ ಮನೆಯ ಪ್ರಯೋಗಾಲಯದಿಂದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸುತ್ತಿದ್ದಾರೆ.

ಈ ಯಶಸ್ವೀ ಪ್ರಯೋಗ ಮೈಕ್ರೋಸಾಫ್ಟ್‌ನ ಸಿಇಒ (ಸತ್ಯ ನಾಡೆಲ್ಲಾ) ಅವರಿಗೂ ತಲುಪಿ ಅವರ ಹಿಟ್ ರಿಫ್ರೆಶ್ ಪುಸ್ತಕದಲ್ಲಿ ರಂಜಿತ್ ಸಿಂಹ ಅವರ ಸಾಧನೆಯನ್ನು ನಮೂದಿಸುವ ಮೂಲಕ ಜಗತ್ತು ರಂಜಿತ್ ಅವರನ್ನು ಗುರುತಿಸುವಂತೆ ಮಾಡಿದ್ದಾರೆ. 2016 ರಲ್ಲಿ ಶಾಲೆಗೆ ಜಿಲ್ಲೆಗೆ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. 2016ರಲ್ಲಿ ನವೀನ ಸಂಶೋಧಕ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. 2018 ರಲ್ಲಿ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್‌ನ ವರ್ಷದ ಇನ್ನೋವೇಟರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. 500 ಕ್ಕೂ ಹೆಚ್ಚು ಪತ್ರಿಕೆ ಲೇಖನಗಳು ಮತ್ತು ಬ್ಲಾಗ್‌ಗಳನ್ನು ಬರೆಯುವ ಮೂಲಕ ಮತ್ತು ದೂರದರ್ಶನ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅವರು ತಮ್ಮ ನವನವೀನ ಶೈಕ್ಷಣಿಕ ವಿಧಾನಗಳನ್ನು ಎಲ್ಲರಿಗೂ ಪರಿಚಯಿಸಿದ್ದಾರೆ.

ಕಳೆದ ಡಿಸೆಂಬರ್ 3, ಗುರುವಾರದಂದು, ಈ 32 ವರ್ಷದ ರಂಜಿತ್ ಸಿಂಹ ಡಿಸ್ಲೆ ಅವರಿಗೆ ಹೆಣ್ಣು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಭಾರತದಲ್ಲಿ ಮಾತೃಭಾಷ ಕಲಿಕೆ ಮತ್ತು ಪಠ್ಯಪುಸ್ತಕಗಳಲ್ಲಿ ಕ್ರಾಂತಿಯುಂಟುಮಾಡಿದ ವ್ಯಾಪಕ ಕಾರ್ಯಗಳಿಗಾಗಿ ಬಹು ನಿರೀಕ್ಷಿತ ಜಾಗತಿಕ ಶಿಕ್ಷಕ ಬಹುಮಾನದ ಜೊತೆಗೆ 1 ಮಿಲಿಯನ್ ಬಹುಮಾನಕ್ಕೆ ಪಾತ್ರವಾಗಿದ್ದಾರೆ. ಅವರ ಈ ಮಹಾನ್ ಸಾಧನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿರುವುದಲ್ಲದೇ, ಒಬ್ಬ ಮನುಷ್ಯನ ಧೃಢ ಸಂಕಲ್ಪದ ಪ್ರಭಾವ ಹೇಗೆ ಇತರರ ಜೀವನವನ್ನು ಬದಲಾಯಿಸುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದಾರೆ.

ಅವರು ಗಳಿಸಿದ ಜಾಗತಿಕ ಶಿಕ್ಷಕ ಪ್ರಶಸ್ತಿಯ ಬಹುಮಾನದ ಹಣವನ್ನು ಈ ಜಾಗತಿಕ ಶಿಕ್ಷಕ ಪ್ರಶಸ್ತಿ ಅಂತಿಮ ಸುತ್ತಿಗೆ ಅವರನ್ನೂ ಸೇರಿದಂತೆ ಆಯ್ಕೆಯಾಗಿದ್ದ 10 ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ ಅಲ್ಲದೇ, ಗಳಿಸಿದ ಹಣದಲ್ಲಿ ಪ್ರತಿ ವರ್ಷ ವಿಶ್ವದ ಯುದ್ಧ ಪೀಡಿತ ದೇಶಗಳ ಕನಿಷ್ಠ 5000 ವಿದ್ಯಾರ್ಥಿಗಳಿಗೆ ತಮ್ಮ ಹೊಸಾ ಕಾರ್ಯಕ್ರಮವಾದ ಶಾಂತಿ ಸೈನ್ಯಕ್ಕೆ ಬಳಸಿಕೊಳ್ಳುವುದಾಗಿ ಹೇಳುವ ಮೂಲಕ ವಸುದೈವ ಕುಟುಂಬಕಂ ಎಂಬುದನ್ನು ಅಕ್ಷರಶಃ ಪಾಲಿಸುತ್ತಾ ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಿ ಮಾಡುವುದರಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.

ನಮ್ಮಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳ ಹೆಸರಿನಲ್ಲಿ ರಾಜಕಾರಣಿಗಳು ಓಟ್ ರಾಜಕೀಯ ಮಾಡುತ್ತಿದ್ದರೆ ಅದನ್ನೇ ಬಂಡವಾಳ ಮಾಡಿಕೊಂಡು ಬಂದ್ ಆಚರಿಸುವ ಮೂಲಕ ತಮ್ಮ ಗಂಜಿ ಗಿಟ್ಟಿಸಿಕೊಳ್ಳುತ್ತಿರುವರ ಮಧ್ಯೆ ಭಾಷೆ ಬೇರೆ ಬೇರೆ ಆದರೂ, ಭಾವ‌ ಮಾತ್ರ ಒಂದೇ, ನಾವು ಭಾರತೀಯರು ಎಂಬ ತತ್ವದಡಿಯಲ್ಲಿ ಮಹಾರಾಷ್ಟ್ರದ ಈ ಮರಾಠಿ ಯುವಕನ ಕನ್ನಡ ಭಾಷಾಭಿಮಾನ ಮತ್ತು ಸಾಧನೆ ಅನನ್ಯ ಮತ್ತು ಅನುಕರಣಿಯವಾಗಿದೆ ಅಲ್ವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s