ಕೆಲವು ವಾರಗಳ ಹಿಂದೆ ನಮ್ಮ ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಅದೆಲ್ಲಿಂದಲೋ ಬಂದ ಹೆಣ್ಣು ನಾಯೊಂದು ಏಳೆಂಟು ಮರಿಗಳನ್ನು ಹಾಕಿ ಮೂರ್ನಾಲ್ಕನ್ನು ಇಲ್ಲಿಯೇ ಬಿಟ್ಟು ಉಳಿದ ನಾಲ್ಕೈದು ಮರಿಗಳನ್ನು ಪಕ್ಕದ ರಸ್ತೆಯ ಮತ್ತೊಂದು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೊಗಿತ್ತು. ಮನೆಯ ಮುಂದಿನ ರಸ್ತೆಯಲ್ಲಿ ಕ್ರಿಕೆಟ್ ಆಡುವ ನನ್ನ ಮಗ ಮೋರಿಯಲ್ಲಿ ಬಿದ್ದ ತನ್ನ ಚೆಂಡನ್ನು ತೆಗೆದುಕೊಳ್ಳಲು ಹೋದಾಗ, ಇನ್ನೂ ಕಣ್ಣನ್ನೇ ತೆರೆಯದಿದ್ದ ಈ ಪುಟ್ಟ ನಾಯಿಮರಿಗಳು ಕುಂಯ್ ಕುಂಯ್ ಎಂದು ಶಬ್ಧ ಮಾಡುತ್ತಿದ್ದನ್ನು ನೋಡಿದ ತಕ್ಷಣ, ಕ್ರಿಕೆಟ್ ಆಟವನ್ನೇ ಬಿಟ್ಟು ನಿಧಿ ಸಿಕ್ಕಂತಾಗಿ ಎಲ್ಲಾ ಮಕ್ಕಳನ್ನೂ ಸೇರಿಸಿಕೊಂಡು ಆ ಮರಿಗಳ ಲಾಲನೆ ಪೋಷಣೆಗೆ ಸಿಧ್ದವಾಗಿ ಬಿಟ್ಟ. ರಸ್ತೆಯಲ್ಲಿದ್ದ ಎಲ್ಲಾ ಮಕ್ಕಳು ತಮಗೆ ಕುಡಿಯಲು ಕೊಡುತ್ತಿದ್ದ ಹಾಲಿನಲ್ಲೇ ಸ್ವಲ್ಪ ಹಾಲನ್ನು ಮಿಗಿಸಿಕೊಂಡು, ಮತ್ತು ಅಮ್ಮನಿಗೆ ಕಾಣದಂತೆ ಮನೆಯಿಂದ ಬಿಸ್ಕತ್ತುಗ್ಗಳನ್ನು ತಂದು ಈ ಮರಿಗಳಿಗೆ ಕೊಡುತ್ತಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.
ಈ ಮುದ್ದಾದ ನಾಯಿ ಮರಿಗಳಲ್ಲಿ ಒಂದಂತೂ ಬಹಳ ಸುಂದರವಾಗಿ ಬಲು ಚುರುಕಾಗಿತ್ತು. ಉಳಿದೆಲ್ಲಾ ಇನ್ನೂ ಕಣ್ಣು ಮುಚ್ಚಿಕೊಂಡು ಬೆಚ್ಚಗೆ ಮೋರಿಯಲ್ಲೇ ಅಡಗಿ ಕುಳಿತುಕೊಂಡಿದ್ದರೆ, ಒಂದು ಮರಿ ಮಾತ್ರಾ ಸರಾಗವಾಗಿ ಮೋರಿಯನ್ನು ಹತ್ತಿ ನಮ್ಮ ಮನೆಯ ಕಾಂಪೌಂಡಿನೊಳಗೆಲ್ಲಾ ಓಡಾಡುತ್ತಾ ನಮ್ಮ ಕಾಲುಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾ ನಮ್ಮನ್ನೆಲ್ಲಾ ನೆಕ್ಕುತ್ತಾ ನಮ್ಮೆಲ್ಲರ ಅಚ್ಚು ಮೆಚ್ಚೆಗೆಗೆ ಪಾತ್ರವಾಯಿತು. ಮಕ್ಕಳು ಈ ಮುದ್ದಾದ ಮರಿಗೆ ಚಿಂಟು ಎಂದು ನಾಮಕರಣ ಮಾಡಿದ್ದರು. ನಮ್ಮ ಮನೆಯಲ್ಲಿ ಆಟವಾಡುತ್ತಿದ್ದ ಆ ನಾಯಿಮರಿಗಳ ಸುಂದರ ರಸಕ್ಷಣಗಳು.https://youtu.be/cZOE4HSLVDE
ಇದ್ದಕ್ಕಿಂದಂತೆಯೇ ಅದೊಂದು ದಿನ ನಮ್ಮ ಚಿಂಟು ಕಾಣೆಯಾಗಿ ಹೋದಾಗ ಪರಿಪಾಟಲು ಪಟ್ಟಿದ್ದನ್ನು ಚಿಂಟು ಕಾಣೆಯಾಗಿದ್ದಾನೆ ಎಂಬ ಲೇಖನವನ್ನೂ ಬರೆದಿದ್ದೆ.
ಕಡೆಗೂ ಮಗ ಚಿಂಟೂನನ್ನು ಹುಡುಕಿ ತಂದಾಗ ಮನೆಯವರಿಗೆಲ್ಲಾ ಸಮಾಧಾನವಾಗಿತ್ತು. ಬೆಳಗಿನ ಸುಮಾರು ಹೊತ್ತು ನಮ್ಮ ಮನೆಯ ಅಂಗಳದಲ್ಲೇ ಆಟವಾಡುತ್ತಾ ನಲಿಯುತ್ತಿರುತ್ತಿದ್ದ ಚಿಂಟೂ ಕತ್ತಲಾಗುತ್ತಿದ್ದಂತೆಯೇ ಓಡಿ ಹೋಗಿ ತನ್ನ ಅಣ್ಣ ತಮ್ಮಂದಿರನ್ನು ಸೇರಿಕೊಳ್ಳುತ್ತಿದ್ದ. ಪ್ರತೀ ದಿನ ರಾತ್ರಿ ಕತ್ತಲಾದ ನಂತರ ಟಾರ್ಚ್ ಹಾಕಿಕೊಂಡು ಅದನ್ನು ಹುಡುಕಿ ಅದಕ್ಕೆ ಊಟವನ್ನು ಹಾಕಿ ಬರುತ್ತಿದ್ದರು ನಮ್ಮಾಕಿ ಮತ್ತು ಮಕ್ಕಳು. ಹೀಗೆ ನಮ್ಮ ಕುಟುಂಬದ ಅತ್ಯಂತ ಕಿರಿಯ ಸದಸ್ಯನಾಗಿಯೇ ಹೋಗಿದ್ದ ಚಿಂಟು.
ಇದ್ದಕ್ಕಿದ್ದಂತೆಯೇ ನಮ್ಮೆಲ್ಲರ ಪ್ರೀತಿ ಚಿಂಟೂ ಕಡೆಗೆ ಹೋಗಿದ್ದನ್ನು ನೋಡಿ ಇದಕ್ಕೂ ಮೊದಲು ನಮ್ಮ ಮನೆಯಲ್ಲಿರುವ ಮತ್ತೊಂದು ಬೀದಿ ನಾಯಿ ಕರಿಯನಿಗೆ ಒಂದು ರೀತಿಯ ಕುತ್ಸುಕ. ಕರಿಯ ಪ್ರತೀ ಬಾರಿ ನಮ್ಮ ಮನೆಗೆ ಬರುವ ಮುನ್ನಾ ಚಿಂಟೂ ಬಂದಿದ್ದಾನಾ ಎಂಬು ವಾಸನೆ ನೋಡಿ ಕೊಂಡೇ ಬರುತ್ತಿದ್ದ. ಅಕಸ್ಮಾತ್ ಚಿಂಟೂ ಏನಾದರೂ ನನ್ನ ಮನೆಯಾಕಿಯ ತೊಡೆಯ ಮೇಲೆ ಮಲಗಿರುವುದನ್ನು ನೋಡಿದರೆ ಅವನಿಗೇನೋ ಉರಿ. ನನ್ನ ಹೆಂಡತಿಯನ್ನೇ ಗುರಾಯಿಸಿ ನೋಡುತ್ತಾ, ಅವನನ್ನು ಕೆಳಗೆ ಇಳಿಸುವವರೆಗೂ ಗಲಾಟೆ ಮಾಡುತ್ತಿದ್ದ. ಒಟ್ಟಿನಲ್ಲಿ ಕರಿಯ ಮತ್ತು ಚಿಂಟು ನಮ್ಮ ಮನೆಯಲ್ಲಿ ಅಚ್ಚು ಮೆಚ್ಚಾಗಿದ್ದವು.
ನೆನ್ನೆ ಮಧ್ಯಾಹ್ನದಿಂದಲೂ ಚಿಂಟೂ ಯಾಕೋ ನಡುಗುತ್ತಿದ್ದ. ಸಂಜೆ ಒಮ್ಮೆ ವಾಂತಿ ಮಾಡಿಕೊಂಡಿದ್ದನ್ನು ನೋಡಿ ನಮ್ಮೆಲ್ಲರಿಗೂ ಭಯವಾಗಿತ್ತು. ನೆನ್ನೆ ಸಂಜೆಯಿಂದಲೂ ಚಿಂಟೂ ಏನನ್ನೂ ತಿನ್ನದಿದ್ದಾಗ, ನಮ್ಮ ಕರಿಯನೂ ವಾಂತಿ ಮಾಡಿ ಕೊಂಡಾಗ ಒಂದು ದಿನ ಏನನ್ನೂ ತಿನ್ನದೇ ಮಾರನೆಯ ದಿನ ಸರಿಯಾಗಿ ಹೋಗುತ್ತಿದ್ದ ಕಾರಣ ಚಿಂಟೂ ಕೂಡಾ ಹಾಗೆಯೇ ಸರಿ ಹೋಗಬಹುದೇನೋ ಎಂದು ಕೊಂಡು ಸುಮ್ಮನಾದೆವು. ಎಂದಿನಂತೆ ರಾತ್ರಿ ಚಿಂಟೂ ತನ್ನ ಅಣ್ಣ ತಮ್ಮಂದಿರ ಹತ್ತಿರ ಹೋಗದೇ ನಮ್ಮ ಮನೆಯಂಗಳದಲ್ಲೇ ಮಲಗಿಕೊಂಡಾಗ ನಮಗೆ ನೆಮ್ಮದಿ.
ಇಂದು ಬೆಳಿಗ್ಗೆ ಎದ್ದ ತಕ್ಷಣವೇ ಚಿಂಟೂವಿನನ್ನೂ ವಿಚಾರಿಸಿಕೊಂಡು ಅವನಿಗೆ ಹಾಲನ್ನು ಕೊಟ್ಟಾಗ ಚೂರೇ ಚೂರೂ ಕುಡಿದಿದ್ದನ್ನು ನೋಡಿ, ಶಿವರಾತ್ರಿಯ ಪೂಜೆ ಮುಗಿಸಿ ಕೊಂಡು ಚಿಂಟುನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆವು. ಅದೇಕೋ ಏನೋ? ಚಿಂಟು ಮತ್ತೊಮ್ಮೆ ನನ್ನ ಮಡದಿಯ ತೊಡೆಯ ಮೇಲೆ ಮಲಗಿ ಕೊಂಡಾಗ ಸ್ವಲ್ಪ ನೀರು ಕುಡಿಸಿ ಅದರ ಬಾಯಿಗೆ ಚೂರು ಬೆಲ್ಲವನ್ನು ನೆಕ್ಕಿಸಲು ಪ್ರಯತ್ನಿಸಿದಾಗ ಬಾಯಿ ತೆರೆಯದೇ ಹೋದಾಗ ಬಲವಂತದಿಂದ ಬೆಲ್ಲವನ್ನು ತಿನ್ನಿಸಿ, ನಮ್ಮ ಮನೆಯ ಹೊಸಲಿನ ಮುಂದೆ ಹೊದಿಗೆ ಹೊದ್ದಿಸಿ ಮಲಗಿಸಿ ರಂಗೋಲಿ ಇಡಲು ಮನೆಯಾಕೆ ಹೋದ್ದದ್ದೇ ಕಡೆ. ನಂತರ ಮಗ ಕಾಲೇಜಿಗೆ ಹೋಗುವಷ್ಟರಲ್ಲಿ ಚಿಂಟೂ ನಿರ್ಜೀವವಾಗಿ ಹೋಗಿದ್ದ. ಶಿವರಾತ್ರಿಯ ಶುಭದಿನದಂದು ನಮ್ಮ ಚಿಂಟೂ ಶಿವನ ಪಾದವನ್ನು ಸೇರಿಕೊಂಡಿದ್ದ.
ಸದಾಕಾಲವೂ ನಮ್ಮ ಮನೆಯ ಹೊಸ್ತಿಲ ಮೇಲೆ ಹಾಕಿದ್ದ ಮ್ಯಾಟ್ ಮೇಲೆ ಬೆಚ್ಚಗೆ ಮಲಗಿಕೊಂಡು ನಾವು ಬಾಗಿಲು ತೆಗೆಯುವನ್ನೇ ಕಾಯುತ್ತಾ, ಬಾಗಿಲು ತೆಗೆದ ತಕ್ಷಣ ಬಾಲ ಅಲ್ಲಾಡಿಸಿಕೊಂಡು ಮನೆಯೊಳಗೆ ಬಂದು ಬಿಡುತ್ತಿದ್ದ ನಮ್ಮ ಚಿಂಟು ಇನ್ನು ಮುಂದೆ ಈಗ ಕೇವಲ ನೆನಪಷ್ಟೇ. ಚಿಂಟೂವಿನ ಅಕಾಲಿಕ ಅಗಲಿಕೆಯ ವಿಷಯವನ್ನು ಕೇಳುತ್ತಲೇ ನಮ್ಮ ರಸ್ತೆಯ ಮಕ್ಕಳಿಗೆಲ್ಲಾ ಒಂದು ರೀತಿಯ ಗರ ಬಡಿದಂತಾಗಿದೆ. ಬೆಳಗಿನಿಂದಲೂ ಕಣ್ಣಿರು ಸುರಿಸುತ್ತಿರುವ ನಮ್ಮ ಮಡದಿಯ ದುಃಖ ಇನ್ನೂ ನಿಂತೇ ಇಲ್ಲ.
ಮನೆಯಲ್ಲಿ ಶಿವರಾತ್ರಿ ಹಬ್ಬವಿದ್ದ ಕಾರಣ ಎಲ್ಲಾ ಮಕ್ಕಳೂ ಚಿಂಟೂವಿನನ್ನು ನೋಡಿದ ಕೂಡಲೇ, ಅವವನ್ನು ಒಂದು ಗೋಣಿ ಚೀಲದಲ್ಲಿ ಹಾಕಿ ಅದರ ಮೇಲೆ ಆತ ಮಲಗುತ್ತಿದ್ದ ಮ್ಯಾಟನ್ನು ಬೆಚ್ಚಗೆ ಹೊದಿಸಿ ಕಣ್ಣೀರುಡುತ್ತಲೇ, ದೂರದ ಪ್ರದೇಶದಲ್ಲಿ ಚಿಂಟೂನನ್ನೂ ಹಾಕಿ ಬರುವಾಗ ಮನೆಯ ಸದಸ್ಯರೊಬ್ಬರ ಅಂತ್ಯಕ್ರಿಯೆಯನ್ನು ಮುಗಿಸಿ ಬರುವಾಗ ಆಗುವಷ್ಟೇ ಸಂಕಟವಾಗಿದ್ದಂತೂ ಸುಳ್ಳಲ್ಲ. ಮನೆಯಲ್ಲಿ ಹಬ್ಬದ ಸಂಭ್ರಮದ ವಾತಾವರಣವೇ ಮಾಯವಾಗಿ ಸೂತಕದ ಛಾಯೆ ಆವರಿಸಿದೆ.
ಯಾವ ಜನ್ಮದ ಮೈತ್ರಿಯೋ ಏನೋ ಕೆಲ ವರ್ಷಗಳ ಹಿಂದೆ ಕರಿಯ ಮನೆಗೆ ಬಂದ. ಎರಡು ತಿಂಗಳುಗಳ ಹಿಂದೆ ಅಚಾನಕ್ಕಾಗಿ ನಮ್ಮ ಮನೆಗೆ ಬಂದ ಚಿಂಟು ತನ್ನ ಮುದ್ದು ಮುದ್ದಾದ ಚೇಷ್ಟೆಗಳಿಂದ ನಮ್ಮನ್ನೆಲ್ಲಾ ರಂಜಿಸುತ್ತಾ ನಮ್ಮೆಲ್ಲರಿಗೂ ಆಪ್ತನಾಗಿದ್ದವ ಇದ್ದಕ್ಕಿಂದ್ದಂತೆಯೇ ಶಿವರಾತ್ರಿಯಂದು ಶಿವನ ಪಾದ ಸೇರಿಕೊಂಡಿರುವುದು ನಿಜಕ್ಕೂ ಹೇಳಿಕೊಳ್ಳಲಾಗದ ಸಂಕಟವಾಗುತ್ತಿದೆ. ಯಾವುದೋ ಜನ್ಮದ ಋಣಾನುಬಂಧ ಹಾಗೆ ಬಂದು ಹೀಗೆ ಹೋರಟು ಹೋದ ಎಂದೆನಿಸುತ್ತಿದೆ. ನಾವೀಗ ಭಗವಂತ ಚಿಂಟುವಿನ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಸಾಧ್ಯವಾದರೇ ಮತ್ತೊಮ್ಮೆ ನಮ್ಮ ಮನೆಯಲ್ಲಿಯೇ ಹುಟ್ಟಿ ಬರಲಿ ಎಂದಷ್ಟೇ ಪ್ರಾರ್ಥಿಸಬಹುದಷ್ಟೇ.
ಏನಂತೀರೀ?
ನಿಮ್ಮವನೇ ಉಮಾಸುತ
Very sad. Your excursion is understandable and brought deep grief to my heart. Dogs are not our whole life, but they make our lives whole. … Sorry to note. RIP
LikeLiked by 1 person
ನಿಮ್ಮ ಚಿಂಟು ಶಿವರಾತ್ರಿಯಂದೇ ಶಿವನ ಪಾದ ಸೇರಿಕೊಂಡ ವಿಷಯ ಕೇಳಿ ನನಗೂ ತುಂಬಾ ಬೇಜಾರಾಯ್ತು. ನಾಯಿ ಸಾಕಿದ ಅನುಭವ ನನಗೂ ಇದೆ. ನಮ್ಮ ಮನೆಯಲ್ಲಿ ಮೂರು ಬಾರಿ ನಾಯಿಯನ್ನು ತಂದು ಸಾಕಿದ್ದೆವು. ಅದೇನೂ ಕೊಂಡು ತಂದಿದ್ದ ಜಾತಿ ನಾಯಿಯಲ್ಲ. ರಸ್ತೆಯಲ್ಲಿ ಬೀದಿನಾಯಿ ಮರಿಗಳನ್ನು ಹಾಕಿದ್ದಾಗ ನಿಮ್ಮಹಾಗೆಯೇ ತಂದು ಬೆಳೆಸಿ ಸಾಕಿದ ನಾಯಿ. ನಾನು ಆಫೀಸಿನಿಂದ ಮನೆಗೆ ಬರುವಾಗ ಆ ನಾಯಿಗೆ ಬನ್ನು, ಬಿಸ್ಕತ್ತು ತಂದು ಹಾಕುತ್ತಿದ್ದೆ. ನಮ್ಮ ತಾಯಿ, ತಮ್ಮ, ತಂಗಿ ಬೆಳಗಿನಿಂದ ಸಂಜೆಯವರೆಗೆ ಊಟ, ತಿಂಡಿ ಹಾಕಿ ಪ್ರೀತಿಯಿಂದ ನೋಡಿಕೊಂಡಿದ್ದೆವು. ಆದರೆ ಕೆಲವು ವರ್ಷಗಳ ನಂತರ ಏನೋ ಕಾಯಿಲೆ ಬಂದು ಸತ್ತಾಗ ನಮ್ಮ ಮನೆಯಲ್ಲೇ ಒಬ್ಬ ಸದಸ್ಯರು ಸತ್ತಾಗ ಆಗುವಷ್ಟೇ ದುಃಖ ಆಗುತ್ತಿತ್ತು. ಅದನ್ನು ಹೂಳಲು ತೆಗೆದುಕೊಂಡು ಹೋದಾಗ ಬಿಕ್ಕಿಬಿಕ್ಕಿ ಅತ್ತಿದ್ದೂ ಉಂಟು. ನಮ್ಮ ಮನೆ ನಾಯಿಯ ವಿಶೇಷ ಏನೆಂದರೆ ಅದು ಪಾಯಸ, ಆಂಬೊಡೆ, ಸೌತೆಕಾಯಿ ಕೋಸಂಬರಿ, ಹಣ್ಣುಗಳು, ರಸಾಯನವನ್ನು ಇಷ್ಟಪಟ್ಟು ತಿನ್ನುತ್ತಿತ್ತು. ನನ್ನ ಸ್ನೇಹಿತರು ಇದನ್ನು ನೋಡಿ ಬ್ರಾಹ್ಮಣರ ಮನೆ ನಾಯಿ ಎಂದು ಸುಲಭವಾಗಿ ಹೇಳಬಹುದು ತಮಾಷೆ ಮಾಡುತ್ತಿದ್ದರು.
LikeLiked by 1 person