ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಪ್ರತೀದಿನ ಬೆಳಿಗ್ಗೆ ದೇವರನ್ನೇ ನೋಡುತ್ತಾ ಬಲಗಡೆ ತಿರುಗಿ ಎದ್ದು. ದೇವರಿಗೆ ಕೈ ಮುಗಿದು, ದೇವರೇ ಈ ದಿನ ಒಳ್ಳೆಯದಾಗಿರಲಿ, ಯಾವ ಕೆಟ್ಟ ಸುದ್ಧಿಯೂ ಕೇಳದಂತಾಗಲಿ ಎಂದು ಪ್ರಾರ್ಥಿಸುತ್ತಲೇ ಇಂದೂ ಕೂಡಾ ಎದ್ದು ಪ್ರಾಥರ್ವಿಧಿಗಳನ್ನು ಮುಗಿಸಿ ಇನ್ನೇನು ವ್ಯಾಮಾಮಕ್ಕೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಒಮ್ಮೆ ಸಾಮಾಜಿಕ ಜಾಲತಾಣಗಳತ್ತ ಕಣ್ಣು ಹಾಯಿಸಿ ಬಿಡೋಣ ಎಂದು ನೋಡಿದರೆ, ಎದೆ ಧಸಕ್ ಎನ್ನುವ ಸುದ್ದಿ ನೋಡಿ, ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಬೇರೆ ಕಡೆ ಎಲ್ಲಾ ಜಾಲಾಡಿದರೂ ಆ ಕುರಿತಂತೆ ಯಾವುದೇ ಮಾಹಿತಿ ದೊರೆಯದಿದ್ದಾಗ, ಸ್ವಾಮೀ ದಯವಿಟ್ಟು ನೀವು ಹಾಕಿರುವ ಈ ಸೂಕ್ಷ್ಮ ವಿಚಾರವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಎಚ್ಚರಿಸಿ, ಭಗವಂತ ಈ ಸುದ್ದಿ ಸುಳ್ಳಾಗಿರಲಿ ಎಂದು ಪ್ರಾರ್ಥಿಸಿದ್ದಂತೂ ನಿಜ.

venkat4

ಸಾಮಾಜಿಕಜಾಲ ತಾಣಗಳಲ್ಲಿ ಅಂಬರೀಶ್ ಅವರನ್ನು, ಎಸ್. ಜಾನಕಿಯವರನ್ನು ಮತ್ತು ಪ್ರೊ. ವೆಂಕಟ ಸುಬ್ಬಯ್ಯನವರನ್ನು ಅದೆಷ್ಟೋ ಬಾರಿ ನಿಧನರಾದ ಸುದ್ದಿ ಕೇಳಿದ್ದ ನಮಗೆ ಆರಂಭದಲ್ಲಿ ಅಂತಹದ್ದೇ ಸುಳ್ಳು ಸುದ್ದಿ ಎಂಬ ಭಾವನೆ ಮೂಡಿತಾದರೂ, ನಂತರ ಟವಿಯಲ್ಲಿ ಸುದ್ದಿ ಮಾಧ್ಯಮವನ್ನು ಹಾಕಿ ನೋಡಿದರೆ, ಅವರು ಹೇಳಿದ್ದ ಸುದ್ದಿ ನಿಜವಾಗಿತ್ತು. ಶತಾಯುಷಿಗಳಾಗಿದ್ದ 108ನೇ ವಯಸ್ಸಿನ ಕನ್ನಡದ ಅತ್ಯಂತ ಹಿರಿಯ ವಿದ್ವಾಂಸರಾಗಿದ್ದ ಇಗೋ ಕನ್ನಡ ಎನ್ನುವ ಅಂಕಣದ ಮೂಲಕ ಕನ್ನಡವನ್ನು ಎಲ್ಲರ‌ ಮನೆ ಮತ್ತು ಮನಗಳಿಗೆ ಮುಟ್ಟಿಸಿದ ಖ್ಯಾತಿ ಹೊಂದಿದ್ದ ನಿಘಂಟು ತಜ್ಞರೆಂದೇ ಪ್ರಖ್ಯಾತರಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಎಲ್ಲರ ಪ್ರೀತಿಯ ಜಿ.ವಿ ಅವರು ತಮ್ಮ ವಯೋಸಹಜ ಖಾಯಿಲೆಗಳಿಂದಾಗಿ‌ ದಿ, 19.04.2021 ಸೋಮವಾರದ ಮುಂಜಾನೆ ಸುಮಾರು 1.15ಕ್ಕೆ ತಮ್ಮ ಮನೆಯಲ್ಲಿ ನಮ್ಮನ್ನು ಅಗಲಿರುವ ಸುದ್ದಿ ಪ್ರಕಟವಾಗುತ್ತಿತ್ತು..

ಆರಂಭದಲ್ಲಿ ಮೈಸೂರಿನ ಭಾಗವೇ ಆಗಿದ್ದ, ಈಗ ಆಡಳಿತಾತ್ಮಕವಾಗಿ ಮಂಡ್ಯ ಜಿಲ್ಲೆಯ ಭಾಗವಾಗಿರುವ ಶ್ರೀರಂಗಪಟ್ಟಣದ ಗಂಜಾಂ ಎಂಬ ಪುಟ್ಟ ಗ್ರಾಮ ಎರಡು ಅನರ್ಘ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿದೆ. ಒಂದು ಗಂಜಾಂ ನಾಗಪ್ಪನವರು ಮತ್ತೊಂದು ಪ್ರೊ. ಶ್ರೀ ವೆಂಕಟಸುಬ್ಬಯ್ಯನವರು. ಶ್ರೀ ನಾಗಪ್ಪನವರು ಪ್ರಪಂಚಾದ್ಯಂತ ಸುಪ್ರಸಿದ್ಧ ವಜ್ರದ ವ್ಯಾಪಾರಕ್ಕೆ ಪ್ರಖ್ಯಾತವಾದರೆ, ಶ್ರೀ ವೆಂಕಟಸುಬ್ಬಯ್ಯನವರು ಕನ್ನಡ ಸಾರಸ್ವತ ಲೋಕದಲ್ಲಿ ಸ್ವತಃ ವಜ್ರದಂತೆ ಪ್ರಕಾಶಮಾನವಾಗಿ ಪ್ರಜ್ವಲಿಸಿದರು ಎಂದರೂ ಅತಿಶಯೋಕ್ತಿಯೇನಲ್ಲ. ಗಂಜಾಂ ಗ್ರಾಮದ ಶ್ರೀ ತಿಮ್ಮಣ್ಣಯ್ಯ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠ ಪುತ್ರರಾಗಿ 23.08.1913 ರಂದು ಜನಿಸಿದರು. 1927 ರಿಂದ 1930ರ ವರೆಗೆ ತಮ್ಮ ಪ್ರೌಢಶಾಲೆ ಶಿಕ್ಷಣವನ್ನು ಏಕಶಿಲಾ ಬೆಟ್ಟಕ್ಕೆ ಖ್ಯಾತಿ ಹೊಂದಿರುವ ಮಧುಗಿರಿಯಲ್ಲಿ ಮುಗಿಸಿ 1937ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ 1938 ರಲ್ಲಿ ಬಿ.ಟಿ. ಪದವಿಯನ್ನೂ ಪಡೆದರು.

ಜೀವನೋಪಾಯಕ್ಕಾಗಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು 1938ರಲ್ಲಿ ಮೊದಲು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ, ನಂತರ ಕೆಲಕಾಲ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರಲ್ಲದೇ, ಆದಾದನಂತರ ಬೆಂಗಳೂರಿಗೆ ತಮ್ಮ ನಿವಾಸವನ್ನು ಬದಲಾಯಿಸಿಕೊಂಡು ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದು ಅಂತಿಮವಾಗಿ ಬೆಂಗಳೂರಿನ ಪ್ರತಿಷ್ಥಿತ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಕಡೆಗೆ 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿ ಪಡೆದರು. ಇವಿಷ್ಟೇ ಹೇಳಿ ಅವರ ವೃತ್ತಿ ಬದುಕನ್ನು ಮುಗಿಸಲಾಗದು. ಪ್ರಾಧ್ಯಾಪಕ ವೃತ್ತಿಯಲ್ಲಿ ಇದ್ದುಕೊಂಡೇ ಪ್ರವೃತ್ತಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯನ್ನು ಸಲ್ಲಿಸಿದ್ದರು.

venkat5

ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಜಿವಿಯವರ ಪಾತ್ರ ಅಪಾರವಾದದ್ದು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿ ರಚನೆ ಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬಾಲ ಕರ್ನಾಟಕ ಎಂಬ ಸಂಘ ಸ್ಥಾಪನೆ ಮಾಡಿದ್ದಲ್ಲದೇ, ಎಚ್.ಎಂ. ಶಂಕರ ನಾರಾಯಣರಾಯರು ಹೊರ ತಂದಿದ್ದ ರೋಹಿಣಿ ಎಂಬ ಕೈಬರಹದ ಪತ್ರಿಕೆಗೂ ತಮ್ಮ ಸೇವೆ ಸಲ್ಲಿಸಿದ್ದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿದ್ದರು. 1943ರ ವರ್ಷದಲ್ಲಿ ಡಿ. ಎಲ್. ನರಸಿಂಹಾಚಾರ್ಯರು ನಿಘಂಟಿಗೆ ಶಬ್ದಗಳನ್ನು ಆರಿಸುವುದಕ್ಕೆ ಆಯೋಜಿಸಿದ್ದ ಕೆಲವರಲ್ಲಿ ಪ್ರೊ. ಜಿ. ವಿ. ಅವರೂ ಒಬ್ಬರಾಗಿ ಆಡು ಭಾಷೆ ಹಳೆಗನ್ನಡದಿಂದ, ಹೊಸಗನ್ನಡದಿಂದ ನಿಘಂಟಿಗೆ ಬೇಕಾದ ಶಬ್ದಗಳನ್ನು ಆಯ್ಕೆ ಮಾಡುವ ಜವಾಬ್ಧಾರಿ ವಹಿಸಿಕೊಂಡಿದ್ದರು. ಮುಂದೆ ಜಿ. ವಿ. ಅವರಿಗೆ ಪ್ರೊಫೆಸರ್ ಆಗಿದ್ದ ಎ. ಆರ್. ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದಾಗ, ಕನ್ನಡ ನಿಘಂಟಿನ ಕುರಿತಾಗಿ ಜಿವಿಯವರ ಅಪರಿಮಿತ ಪ್ರೀತಿ ಮತ್ತು ಆಸಕ್ತಿಯನ್ನು ಗಮನಿಸಿ ಅವರನ್ನು ವೈಯಕ್ತಿಕವಾಗಿ ತಮ್ಮ ಮನೆಗೆ ಕರೆಸಿಕೊಂಡು ಅವರಿಗೆ ಸಂಸ್ಕೃತ ನಿಘಂಟು, ವೈದಿಕ ನಿಘಂಟು ಮತ್ತು ಯಾಸ್ಕನ ನಿರುಕ್ತವನ್ನ ಪಾಠ ಮಾಡಿದರು. ಇದರಿಂದ ಜಿ. ವಿ. ಅವರ ಪಾಂಡಿತ್ಯ ಮತ್ತಷ್ಟೂ ಹೆಚ್ಚಾಗಿ ನಿಘಂಟಿನ ಕೆಲಸದಲ್ಲಿ ತಮ್ಮನ್ನು ಮತ್ತಷ್ಟೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಹಾಯಕಾರಿಯಾಗಿದ್ದಲ್ಲದೇ ಅಂತಿಮವಾಗಿ 1973 ರಿಂದ 1989 ವರೆಗೆ ಜಿ.ವಿ. ಅವರೇ ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುವಂತಾದದ್ದು ಈಗ ಇತಿಹಾಸ. ಈ ಮೂಲಕ ಕನ್ನಡ ಸಾರಸ್ಚತ ಲೋಕಕ್ಕೆ ತಮ್ಮ ತನು ಮನ ಧನವನ್ನು ಅರ್ಪಿಸಿ ಸೇವೆ ಸಲ್ಲಿಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇದಲ್ಲದೇ ಅಖಿಲ ಭಾರತ ನಿಘಂಟುಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹೆಗ್ಗಳಿಗೆ ಶೀಯುತರದ್ದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಲೋಕಕ್ಕೆ ಎಲ್ಲರ ತನು ಮನ ಸೇವೆ ಒಪ್ಪಬಹುದು ಅದರೆ ಈ ಜಿ.ವಿಯವರ ಧನ ಸೇವೆ ಹೇಗೆ? ಎಂಬ ಅಚ್ಚರಿ ಮೂಡುವುದು ಸಹಜ. ಸಾಹಿತ್ಯ ಪರಿಷತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದಾಗಲೇ ಜಿ.ವಿ.ಯವರು ಅಧ್ಯಕ್ಷರಾಗುತ್ತಾರೆ. ಸರ್ಕಾರದಿಂದ ದೊರೆಯುತ್ತಿದ್ದ ವಾರ್ಷಿಕ ಅನುದಾನ ಸಾಲದೇ ಹೋದಾಗ, ಸರ್ಕಾರದ ಜೊತೆ ಹಲವಾರು ಚರ್ಚೆ ನಡೆಸಿ ಆ ಅನುದಾನವನ್ನು ಅಂದಿನ ಕಾಲಕ್ಕೆ 25000 ರೂಗಳಿಗೆ ಹೆಚ್ಚಿಸುವಂತೆ ಮಾಡುವುದರಲ್ಲಿ ಜಿವಿಯವರ ಪಾತ್ರ ಅತ್ಯಂತ ಹೆಚ್ಚಿನದ್ದಾಗಿತ್ತು. ಇನ್ನು ಅವರು ಅಧ್ಯಕ್ಷರಾಗಿದ್ದಾಗಲೇ ಅವರ ಕರ್ಣಕರ್ಣಾಮೃತ ಸಂಗ್ರಹ ಪಿಯುಸಿಗೆ ಪಠ್ಯವಾದಾಗ ಅದಕ್ಕೆ ಬಂದ ಗೌರವ ಧನ ಸಂಪಾದಕರಿಗೆ ಸೇರಬೇಕೇ ಇಲ್ಲವೇ ಪರಿಷತ್ತಿಗೆ ಸೇರಬೇಕೇ ಎಂಬ ಜಿಜ್ಞಾಸೆ ಮೂಡಿ ಆ ಕುರಿತಂಟೆ ಚರ್ಚೆಯಾಗುತ್ತಿದ್ದಾಗ ಜಿವಿಯವರು ಸಂತೋಷದಿಂದಲೇ ಆ ಹಣವನ್ನು ತಮ್ಮ ಪತ್ನಿ ಶ್ರೀಮತಿ ಲಕ್ಷ್ಮಿ ಜಿ. ವೆಂಕಟಸುಬ್ಬಯ್ಯನವರ ಹೆಸರಿನಲ್ಲಿ ದತ್ತಿಯಾಗಿಡಲು ಒಪ್ಪಿಕೊಂಡು ಅಗಿನ ಕಾಲಕ್ಕೇ ಅತೀ ದೊಡ್ಡ ಮೊತ್ತವಾದ 8000 ರೂಗಳನ್ನು ಪುದುವಟ್ಟಾಗಿ ಇಟ್ಟಂತಹ ಧೀಮಂತ ಮತ್ತು ಹೃದಯ ಶ್ರೀಮಂತ ವ್ಯಕ್ತಿಗಳಾಗಿದ್ದರು ಪ್ರೊ. ವೆಂಕಟ ಸುಬ್ಬಯ್ಯನವರು.

ಜಿವಿಯವರ ನಿಸ್ವಾರ್ಥ ಸೇವೆಗೆ ಮತ್ತೊಂದು ಉದಾಹರಣೆಯೆಂದರೆ ರಾಮಕೃಷ್ಣ ಸ್ಟೂಡೆಂಟ್ ಹೋಂ ಅನ್ನು ಕಟ್ಟಿ ಬೆಳೆಸಿದದ್ದು. ಮಕ್ಕಳಿಗೆ ಪಾಠ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದ ಶ್ರೀ ಎಂ. ಬಿ. ಗೋಪಾಲಸ್ವಾಮಿ ಅವರು ಈ ಮನೆ ಪಾಠದ ಸಂಘಕ್ಕೆ ಜೀವಿಯವರನ್ನು ಕರೆದುಕೊಂಡು ಹೋಗಿ, ದಯವಿಟ್ಟು ಈ ಬಡ ಮಕ್ಕಳಿಗೆ ಪಾಠ ಮಾಡ ಬೇಕೆಂದು ಕೇಳಿಕೊಂಡಾಗ, ಅತ್ಯಂತ ಸಂತೋಷದಿಂದ ಒಪ್ಪಿಕೊಂಡ ಜಿವಿಯವರು ಪ್ರತಿನಿತ್ಯವೂ ಇದಕ್ಕೆಂದೇ ಕೆಲ ಸಮಯವನ್ನು ಬಿಡುವು ಮಾಡಿಕೊಂಡು ಸಹಸ್ರಾರು ಬಡ ಮಕ್ಕಳಿಗೆ ಬಹಳ ಪ್ರೀತಿಯಿಂದ ಪಾಠ ಮಾದಿದರು. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಪ್ರೊ ಜಿವಿ ಅವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಅತ್ಯಂತ ಗಣ್ಯರಾಗಿ ಬೆಳೆದಿರುವುದು ಮತ್ತೊಂದು ಹೆಗ್ಗಳಿಕೆ.

venkat3

ಶಿಕ್ಷಣ ಮಾಧ್ಯಮವಾಗಿ ಕನ್ನಡ ಹೇಗಿರಬೇಕು, ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. ಒಬ್ಬ ನಿಘಂಟಿನ ಸಂಪಾದಕರಾಗಿಯೂ ಅವರು ಎಲ್ಲಾ ಪದಗಳನ್ನು ಪ್ರಾಂತೀಯ ಭಾಷೆಗೆ ಅನುವಾದಿಸುವುದನ್ನು ವಿರೋಧಿಸುತ್ತಿದ್ದರು. ವಿಜ್ಞಾನವನ್ನು ಬೋಧಿಸುವಾಗ ಪಾರಿಭಾಷಿಕ ಶಬ್ದಗಳನ್ನು ಉಪಯೋಗ ಮಾಡದೆ, ಅದನ್ನು ಅನುವಾದ ಮಾಡಲು ಪ್ರಯತ್ನಿಸಿದ್ದೇದ್ದೇ ಮೊದಲ ತಪ್ಪು. ಇದರಿಂದ ಕನ್ನಡದಲ್ಲಿ ವಿಜ್ಞಾನ ಬೋಧಿಸಲಾಗದು ಎಂಬ ತಪ್ಪು ಕಲ್ಪನೆ ಮೂಡಿದ್ದಲ್ಲದೇ, ಅದಕ್ಕಾಗಿಯೇ ಇಂಗ್ಲಿಷ್ ಮೀಡಿಯಂ ಆರಂಭವಾಗಲು ಕಾರಣವಾಯಿತು. ಎಲ್ಲರಿಗೂ ಮಾತೃಭಾಷೆ ಇಲ್ಲವೇ ಆಯಾಯಾ ಪ್ರಾಂತೀಯ ಭಾಷೆಯಲ್ಲಿಯೇ ಶಿಕ್ಷಣವಾಗಿ, ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿ ಕಲಿಸಿದಾಗಲೇ ನಮ್ಮ ದೇಶದ ಸಂಸ್ಕೃತಿ ಸೊಗಡು ಮಕ್ಕಳಿಗೆ ತಿಳಿದು ದೇಶದ ಬಗ್ಗೆ ಅಭಿಮಾನ ಮೂಡುತ್ತದೆ ಎಂಬುದನ್ನು ಬಲವಾಗಿ ಜಿವಿಯವರು ಪ್ರತಿಪಾದಿಸಿದ್ದರು.

ಅದೊಮ್ಮೆ ಇಷ್ಟೆಲ್ಲಾ ಸಾಧನೆ ಮಾಡಲು ನಿಮಗೆ ಯಾರಿಂದ ಮತ್ತು ಹೇಗೆ ಪ್ರೇರಣೆಯಾಯಿತು ಎಂಬುದನ್ನು ವೆಂಕಟಸುಬ್ಬಯ್ಯನವರಲ್ಲಿ ವಿಚಾರಿಸಿದಾಗ, ತಮ್ಮ ನೂರನೇ ವರ್ಷದ ಹುಟ್ಟು ಹಬ್ಬದ ಸಂದಭದಲ್ಲಿ ತಮ್ಮ ಸುದೀರ್ಘ ಬದುಕನ್ನು ಕುರಿತು ಜಿ.ವಿ ಅವರೇ ಹೀಗೆ ಹೇಳಿಕೊಂಡಿದ್ದಾರೆ. ಸಂಸ್ಕೃತದಲ್ಲಿ ಒಂದು ಮಾತಿದೆ. ‘ಜೀವನ್ ಭದ್ರಾಣಿ ಪಶ್ಯತಿ’ ಅಂತ. ಆ ಮಾತು ನನಗೆ ಚೆನ್ನಾಗಿ ಅನ್ವಯಿಸುತ್ತೆ. ನಾನು ಹೊಸಗನ್ನಡ ಅರುಣೋದಯದ ಕಾಲವನ್ನು ಕಂಡವನು. ಹೊಸಗನ್ನಡ ಬೆಳೆಯಬೇಕು ಎಂಬ ಬಿ. ಎಂ. ಶ್ರೀಕಂಠಯ್ಯನವರ ಪ್ರಯತ್ನದ ಪರಿಣಾಮವಾಗಿ ಆಂದೋಲನ ಸುಮಾರು 75 ವರ್ಷಗಳ ಕಾಲ ಬಹಳಷ್ಟು ಕೆಲಸ ಮಾಡಿತು. ಬಹುಶಃ ಇನ್ಯಾವ ಭಾರತೀಯ ಭಾಷೆಯಲ್ಲಿಯೂ ಆಗದಂತಹ ಸಾಹಿತ್ಯದ ಪ್ರಯೋಗ, ಪ್ರಯೋಜನ ಆದದ್ದನ್ನು ಬಿ. ಎಂ. ಶ್ರೀಕಂಠಯ್ಯನವರ ನೇರ ಶಿಷ್ಯನಾಗಿದ್ದ ಕಾರಣ ಅವರ ಉತ್ಸಾಹ ಮತ್ತು ಪರಿಶ್ರಮವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ 100 ವರ್ಷ ಬದುಕಿರೋದಿದೆಯಲ್ಲ, ನನಗೆ ಒಂದು ವಿಧದಲ್ಲಿ ಸಂತೋಷವನ್ನು ತರುತ್ತೆ. ನೂರು ವರ್ಷ ಅನ್ನೋದು ಇಷ್ಟು ಬೇಗ ಆಗ್ ಹೋಗತ್ಯೆ? ಇಷ್ಟೇನಾ ನೂರು ವರ್ಷ ಅನ್ನೋದು ಅಂತ ಆಶ್ಚರ್ಯನೂ ಆಗುತ್ತೆ. ನಾನು ಎಷ್ಟು ಕೆಲಸ ಮಾಡಬಹುದಾಗಿತ್ತೋ ಅಷ್ಟು ಕೆಲಸ ಮಾಡಿಲ್ಲ ಅಂತ ಒಂದ್ಕಡೆ ವ್ಯಸನಾನೂ ಇದೆ. ನನಗೆ ಕೆಲವು ವಿಚಾರಗಳಲ್ಲಿ ಹೆಚ್ಚು ಸಾಮರ್ಥ್ಯ ಇತ್ತು. ಅದನ್ನು ಉಪಯೋಗಿಸಿಕೊಳ್ಳುವ ಅವಕಾಶ ಒದಗಲಿಲ್ಲ. ನಾನು ವಿಶ್ವವಿದ್ಯಾಲಯದಲ್ಲಿ ಇದ್ದಿದ್ರೆ, ಬೇಕಾದಂತಹ ಗ್ರಂಥಗಳೆಲ್ಲ ಸಿಕ್ಕುವ ಹಾಗಿದ್ದಿದ್ರೆ, ನನ್ನ ಮನಸ್ಸಿನಲ್ಲಿ ಏನೇನು ಇಚ್ಛೆ ಇಟ್ಕೊಂಡಿದ್ನೋ ಅದನ್ನೆಲ್ಲ ಮಾಡಬಹುದಾಗಿತ್ತು. ಕನ್ನಡ ಎಂ. ಎ ಪರೀಕ್ಷೆಗೆ ಆಗ ನಾನು ಮತ್ತು ಶಂಕರನಾರಾಯಣರಾವ್ ಇಬ್ಬರೇ ವಿದ್ಯಾರ್ಥಿಗಳು. ಬಿ.ಎಂ.ಶ್ರೀ ಅವರು ಮೌಖಿಕ ಪರೀಕ್ಷೆಗೆ ಬಂದಿದ್ದರು. ಪರೀಕ್ಷೆಯ ನಂತರ, ಪರೀಕ್ಷೆಯಲ್ಲಿ ನೀವು ಸಫಲರಾಗಿದ್ದೀರಿ. ಆದರೆ ನಿಮ್ಮ ಜವಾಬ್ಧಾರಿ ಇಲ್ಲಿಗೇ ಮುಗಿಯುವುದಿಲ್ಲ. ಏಕೆಂದರೆ ನಾವು ಮುದುಕರಾಗಿಬಿಟ್ವಿ. ಈ ಕನ್ನಡವನ್ನ ನಿಮ್ಮ ಕೈಲಿ ಇಡ್ತಾ ಇದೀವಿ’ ಅಂತ ಹೇಳಿದ್ರು. ಅವರು ಅಂದು ಆಡಿದ ಮಾತೇ ನನಗೆ ಕನ್ನಡದ ಕೆಲಸ ಮಾಡಲು ಪ್ರೇರಣೆಯಾಯಿತು ಎಂದು ಬಿಚ್ಚು ಮನಸ್ಸಿನಿಂದ ಹೇಳಿಕೊಂಡಿದ್ದರು.

venkat2

ಸದಾಕಾಲವೂ ಪ್ರಚಾರದಿಂದ ದೂರವಿದ್ದು ಎಲೆ ಮರೆಕಾಯಿಯಂತೆ ಕನ್ನಡದ ಸೇವೆ ಸಲ್ಲಿಸುತ್ತಿದ್ದ ಜಿವಿಯವರು ಕನ್ನಡಿಗರ ಮನ ಮತ್ತು ಮನೆಗಳಿಗೆ ತಲುಪಿದ್ದು 80-90 ರ ಸಮಯದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಭಾನುವಾರದ ಸಾಪ್ತಾಹಿಕ ಪುರವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ಇಗೋ ಕನ್ನಡ ಎಂಬ ಅಂಕಣದ ಮೂಲಕ ಎಂದರೆ ತಪ್ಪಾಗಲಾರದು. ಬಹಳ ಪ್ರಸಿದ್ಧಿ ಪಡೆದಿದ್ದ ಈ ಅಂಕಣದ ಮೂಲಕ ಅವರು ಭಾಷಾ ಬಳಕೆಗೆ ಸಂಬಂಧಿಸಿದ ಅನೇಕ ಗೊಂದಲಗಳನ್ನು ಬಗೆಹರಿಸಲು ನೆರವಾಗಿದ್ದರು. ಕನ್ನಡ ಭಾಷೆ ಅಥವಾ ಪದಗಳ ಅರ್ಥ ವಿವರಣೆಗೆ ಹಾಗೂ ಭಾಷೆಗೆ ಸಂಬಂಧಿಸಿದ ಗೊಂದಲಗಳ ನಿವಾರಣೆಗೆ ಇಂದಿಗೂ ವೆಂಕಟಸುಬ್ಬಯ್ಯ ಅವರು ರಚಿಸಿದ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತದೆ ಎಂದರೆ ಅವರ ಕೃತಿಯ ಖ್ಯಾತಿ ಎಂತಹದ್ದು ಎಂಬುದರ ಅರಿವಾಗುತ್ತದೆ.

venkat1

ಶ್ರೀಯುತರಿಗೆ
1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ
1994ರಲ್ಲಿ ಸೇಡಿಯಾಪು ಪ್ರಶಸ್ತಿ
2005ರಲ್ಲಿ ಮಾಸ್ತಿ ಪ್ರಶಸ್ತಿಗಳಲ್ಲದೇ ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಗೋಕಾಕ್ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ನಿರ್ಮಾಣ್ ಸ್ವರ್ಣ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಗೌರವ ಮುಂತಾದ ಹಲವಾರು ಗೌರವಗಳು ಪ್ರೊ. ಜಿ. ವಿ. ಅವರಿಗೆ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಅವರಿಗೆ ನೀಡುವ ಮೂಲಕ ಆಂತಹ ಪ್ರಶಸ್ತಿಗಳಿಗೇ ಗೌರವ ಹೆಚ್ಚಾಗಿದೆ ಎಂದರೂ ತಪ್ಪಾಗದು.

ಪ್ರೊ ಜಿ. ವೆಂಕಟಸುಬ್ಬಯ್ಯನವರು ವಿಮರ್ಶಾ ಕೃತಿಯಾಗಿ ನಯಸೇನ, ಸಂಪಾದಿತ ಕೃತಿಗಳಾಗಿ ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ ಅನುವಾದದ ಕೃತಿಗಳಾಗಿ ಶ್ರೀ ಶಂಕರಾಚಾರ್ಯ, ಕಬೀರ, ಲಿಂಡನ್ ಜಾನ್ಸನ್, ಮಕ್ಕಳ ಕೃತಿಗಳಾಗಿ ರಾಬಿನ್‌ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ; ಕಾವ್ಯಕೃತಿಗಳಾಗಿ ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ ಮುಂತಾದವು ಪ್ರಖ್ಯಾತವಾಗಿವೆ. ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ಕನ್ನಡ ಸಾಹಿತ್ಯಲೋಕದ ಸಾರಸ್ವತರು ಮುಂತಾದ ವಿಶಿಷ್ಟ ಕೃತಿಗಳೂ ಸೇರಿದಂತೆ ಸುಮಾರು 60ಕ್ಕೂ ಹೆಚ್ಚಿನ ಮಹತ್ವಪೂರ್ಣ ಕೃತಿಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿರುವ ಪ್ರೊ. ಜಿ. ವೆಂಕಟ ಸುಬ್ಬಯ್ಯನವರು ನಿಸ್ಸಂದೇಹವಾಗಿ ನಮ್ಮ ಕನ್ನಡದ ಕಲಿಗಳೇ ಸರಿ.

ಇನ್ನು ಮುಂದೆ ಭೌತಿಕವಾಗಿ ಪ್ರೊ ಜಿ. ವೆಂಕಟಸುಬ್ಬಯ್ಯನವರು ನಮ್ಮೊಂದಿಗೆ ಇಲ್ಲದೇ ಹೋದರೂ, ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಅನನ್ಯವಾದ ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಅಂತಹ ಹಿರಿಯ ಜೀವಿಯ ಆತ್ಮಕ್ಕೆ ಸದ್ಗತಿ ದೊರೆಯಲಿ. ಆವರ ದಃಖ ತಪ್ತ ಕುಟುಂಬದವರಿಗೂ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ.

One thought on “ಪ್ರೊ. ಜಿ. ವೆಂಕಟಸುಬ್ಬಯ್ಯನವರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s