ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಾಲಯಗಳು ನಮ್ಮ ಸನಾತನ ಧರ್ಮದ ಶ್ರಧ್ಧಾ ಕೇಂದ್ರಗಳು. ನಮ್ಮ ಧರ್ಮದ ಬಹುತೇಕ ಧಾರ್ಮಿಕ ಚಟುವಟಿಕೆಗಳ ಮುಖ್ಯಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ಅದು ಬ್ರಹ್ಮ, ವಿಷ್ಣು ಇಲ್ಲವೇ ಮಹೇಶ್ವರನ ದೇವಾಯಲಗಳು ಆಗಿರಬಹುದು ಇಲ್ಲವೇ ಎಲ್ಲರೂ ಇಷ್ಟ ಪಡುವ ಕಾಳೀ, ದುರ್ಗೇ,ಗಣೇಶ ಇಲ್ಲವೇ ಆಂಜನೇಯನ ದೇವಸ್ಥಾನವೇ ಆಗಿರಬಹುದು ಇಲ್ಲವೇ ಸ್ಥಳೀಯ ಗ್ರಾಮದೇವತೆಯೇ ಆಗಿರಬಹುದು. ಒಟ್ಟಿನಲ್ಲಿ ಹಿಂದೆಲ್ಲಾ ಊರಿಗೊಂದು ದೇವಸ್ಥಾನ, ಕೆರೆ, ಅರಳೀ ಕಟ್ಟೆಗಳು ಕಡ್ಡಾಯವಾಗಿದ್ದು, ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವ ಗಾದೆಯಂತೆ ನಿಶ್ಚಿತ ದಿನಗಳಲ್ಲಿ ಈ ಎಲ್ಲಾ ಸ್ಥಳಗಳಿಗೆ ಶಾಸ್ತ್ರ ಮತ್ತು ಸಂಪ್ರದಾಯಗಳ ನೆಪದಲ್ಲಿ ಭೇಟಿ ನೀಡಲೇ ಬೇಕೆಂಬ ಅಲಿಖಿತ ನಿಯಮವಿರುತ್ತಿತ್ತು. ಹಾಗಾಗಿಯೇ ವಿವಿಧ ತೀರ್ಥಕ್ಷೇತ್ರಗಳ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಯೂ ಇತ್ತು.

ಅಂದಿನಿಂದಲೂ ಇಂದಿನವರೆಗೂ ಎಲ್ಲರೂ ಈ ಪದ್ದತಿಯನ್ನು ಅನೂಚಾನವಾಗಿ ನಡೆಸುಕೊಂಡು ಬರುತ್ತಿದಾರೆ. ದೇವಾಲಯಗಳಿಗೆ ಭೇಟಿ ನೀಡುವ ಮೊದಲು ಶುಚಿರ್ಭೂತರಾಗಿ ಮನೆಮಂದಿಯೆಲ್ಲಾ ಹೂವು, ಹಣ್ಣು, ಕಾಯಿಗಳೊಂದಿಗೆ ಮನೆ ಮಂದಿಯೆಲ್ಲಾ ಭಕ್ತಿಯಿಂದ ದೇವಸ್ಥಾನಗಳಿಗೆ ಸೂರ್ಯೋದಯ ಸಮಯದಲ್ಲೋ ಇಲ್ಲವೇ ಸೂರ್ಯಾಸ್ತದ ಸಮಯದಲ್ಲೋ ಭೇಟಿ ಹೋಗಿ ಕನಿಷ್ಠ ಪಕ್ಷ ಮೂರು ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬಲಗಾಲು ಇಟ್ಟುಕೊಂಡು ಏಕೋಭಾವದಿಂದ ಧನಾತ್ಮಕಚಿಂತನೆಯಿಂದ ದೇವಾಲಯವನ್ನು ಪ್ರವೇಶಿಸಿ, ಮನಸೋ ಇಚ್ಚೆ ದೇವರ ದರ್ಶನ ಮಾಡಿ ಭಕ್ತಿಯಿಂದ ದೇವರನ್ನು ಸ್ತುತಿಸಿ, ಮಂಗಳಾರತಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ ದೇವಸ್ಥಾನದ ಹೊರೆಗೆ ಬಂದು ಗರುಡಗಂಭದ ಹಿಂದೆ ಮತ್ತೊಮ್ಮೆ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ, ಕೆಲ ಕಾಲ ದೇವಸ್ಥಾನದಲ್ಲಿಯೇ ಕುಳಿತುಕೊಂಡು ನಂತರವೇ ತಮ್ಮ ತಮ್ಮ ಮನೆಗಳಿಗೆ ಹೊಗುವ ಸಂಪ್ರದಾಯವಿದೆ.

ಪ್ರತಿಯೊಬ್ಬರ ಮನೆಗಳಲ್ಲಿಯೂ ದೇವರ ಮನೆಗಳು ಇದ್ದು ಅಲ್ಲಿಯೇ ನಾನಾ ರೀತಿಯ ದೇವರ ಪ್ರತಿಮೆಗಳು ಮತ್ತು ಚಿತ್ರಗಳು ಇದ್ದು ಅದನ್ನೇ ಪ್ರತಿದಿನವೂ ಶ್ರದ್ಧೆಯಿಂದ ಪೂಜಿಸುವಾಗ, ಮತ್ತೇಕೆ ಪ್ರತ್ಯೇಕವಾಗಿ ದೇವಾಲಯಗಳಿಗೆ ಮತ್ತು ತೀರ್ಥಕ್ಷೇತ್ರಗಳಿಗೆ ಏಕೆ ಹೋಗಬೇಕು? ದೇವಸ್ಥಾನಕ್ಕೆ ಹೋದಾಗ ದೇವಾಲಯದ ಪ್ರದಕ್ಷಿಣೆ ಏಕೆ ಹಾಕಬೇಕು? ಮಂಗಳಾರತಿ, ತೀರ್ಥ ಪ್ರಸಾದಗಳನ್ನು ಏಕೆ ಸ್ವೀಕರಿಸಬೇಕು? ಮತ್ತು ದರ್ಶನವಾದ ನಂತರ ಸೀದಾ ಮನೆಗೆ ಹಿಂದಿರುಗದೇ ಸ್ವಲ್ಪ ಕಾಲ ಅಲ್ಲಿಯೇ ಏಕೆ ಕುಳಿತುಕೊಳ್ಳಬೇಕು? ಎಂಬುದರ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ.

ಸಾಧಾರಣವಾಗಿ ಬಹುತೇಕ ದೇವಸ್ಥಾನಗಳ ನಿರ್ಮಾಣವಾಗಲು, ಆ ಸ್ಥಳ ಪುರಾಣವೋ, ಪೌರಾಣಿಕ ಹಿನ್ನಲೆಯೋ ಇಲ್ಲವೇ ಐತಿಹಾಸಿಕ ಘಟನೆಗಳು ಕಾರಣವಾಗಿರುತ್ತದೆ. ಹಾಗಾಗಿ, ಪ್ರತಿಯೊಬ್ಬ ವ್ಯಕ್ತಿಯೂ ಅಂತಹ ದೇವಸ್ಥಾನಗಳಿಗೆ ಭೇಟಿ ನೀಡುವ ಮುಖಾಂತರ ಆ ಎಲ್ಲಾ ವಿಷಯಗಳನ್ನು ಮತ್ತೊಮ್ಮೆ ಮನನ ಮಾಡಿಕೊಂಡು ಮನಕ್ಕೆ ಶಾಂತಿ ಸಿಗಲಿ ಮತ್ತು ಮನಸ್ಸಿನ ದ್ವಂದ್ವಗಳ ಪರಿಹಾರಕ್ಕಾಗಿ ಹೋಗುತ್ತಾರೆ. ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ದೇವಾಲಯದಲ್ಲಿ ಪೂಜೆ ನಡೆಯುವಾಗ ತಮ್ಮ ಮನಸ್ಸಿನಲ್ಲಿ ಇರಬಹುದಾದ ಎಲ್ಲಾ ತಳಮಳಗಳನ್ನು ಬಿಟ್ಟು ಮೆದುಳಿನಲ್ಲಿ ಬರಬಹುದಾದ ಎಲ್ಲಾ ಯೋಚನೆಗಳನ್ನು ಬದಿಗೊತ್ತಿ, ಒಮ್ಮನಸ್ಸಿನಿಂದ ದೇವರ ಅಭಿಷೇಕ ಪೂಜೆಗಳಲ್ಲಿ ಪಾಲ್ಗೊಳ್ಳುವುದರಿಂದ ಹಾಗೆಯೇ ದೇವರ ದರ್ಶನ ಮಾಡುವುದರಿಂದ ಬಹಳಷ್ಟು ಏಕಾಗ್ರತೆ ದೊರೆತು ಮನಸ್ಸಿಗೆ ಒಂದು ರೀತಿಯ ಧನ್ಯತಾಭಾವ ಮೂಡಿದರೆ, ದೇಹಕ್ಕೆ ವಿಶ್ರಾಂತಿ ದೊರತ ಹಿತಾನುಭವವಾಗುತ್ತದೆ.

ದೇವಸ್ಥಾನದ ಪ್ರದಕ್ಷಿಣೆ

ಯಾವುದೇ ಕೆಲಸವನ್ನು ಮಾಡುವ ಮೊದಲು ಅ ಕೆಲಸದ ಕುರಿತಾಗಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಹಾಗೆ ಏಕೋಭಾವನೆಯನ್ನು ಮೂಡಿಸಿ ಕೊಂಡಲ್ಲಿ ಸಂಕಲ್ಪಿತ ಕೆಲಸವು ಸುಲಭವಾಗುತ್ತದೆ. ಹಾಗಾಗಿಯೇ ದೇವಸ್ಥಾನವನ್ನು ಪ್ರವೇಶಿಸಿ ದೇವರ ದರ್ಶನ ಮಾಡುವ ಮೊದಲು ದೇವರ ಬಗ್ಗೆ ಏಕೋಭಾವ ಮೂಡಿಸಲು ಸಾಮಾನ್ಯವಾಗಿ ದೇವಾಲಯವನ್ನು ಎಡದಿಂದ ಬಲಕ್ಕೆ 1, 3, 11, 21 ಬಾರಿ ಪ್ರದಕ್ಷಿಣೆ ಹಾಕಿದ ನಂತರ ದೇವಾಲಯವನ್ನು ಪ್ರವೇಶಿಸುವ ರೂಢಿ ಬಹುತೇಕರಿಗಿದೆ. ಹೀಗೆ ದೇವಾಲಯದ ಪ್ರದಕ್ಷಿಣೆ ಹಾಕುವಾಗ ದೇವಸ್ಥಾನದ ಗೋಡೆಗಳ ಮೇಲೆ ಕೆತ್ತಿರುವ ವಿಗ್ರಹಗಳು ಅಥವಾ ಬಿಡಿಸಿರುವ ಚಿತ್ರಗಳನ್ನು ನೋಡುವ ಮುಖೇನ ದೇವರ ಮೇಲಿನ ಭಕ್ತಿ ಅನನ್ಯವಾಗುತ್ತದೆ ಮತ್ತು ದೇವರ ಮೇಲಿನ ಭಕ್ತಿ ಕೇಂದ್ರೀಕೃತವಾಗುತ್ತದೆ.

ಬಹುತೇಕ ದೇವಾಲಯಗಳನ್ನು ವಾಸ್ತುಪ್ರಕಾರವಾಗಿ ಕಟ್ಟಿರುವ ಕಾರಣ ಅಂತಹ ಪವಿತ್ರ ಕ್ಷೇತ್ರಗಳಲ್ಲಿ ಹೇರಳವಾಗಿ ಸಕಾರಾತ್ಮಕ ಕಂಪನಗಳನ್ನು ಹೊಂದಿರುತ್ತವೆ. ಎಡದಿಂದ ಬಲಕ್ಕೆ ದೇವಾಯಲಗಳನ್ನು ಪ್ರದಕ್ಷಿಣೆ ಹಾಕುವಾಗ ಆ ಸಕಾರಾತ್ಮಕ ಕಂಪನಗಳು ಭಕ್ತರ ಮೈಮನಗಳನ್ನು ತಲುಪಿ ಮನಸ್ಸಿಗೆ ಮುದ ನೀಡುವುದರಲ್ಲಿ ಸಹಕಾರಿಯಾಗಿದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ, ಸಾಮಾನ್ಯವಾಗಿ, ದೇವಾಲಯಗಳು ಭೂಮಿಯ ಕಾಂತೀಯ ಅಲೆಗಳು ಹಾದುಹೋಗುವ ಸ್ಥಳದಲ್ಲಿವೆ. ಸರಳವಾಗಿ ಹೇಳುವುದಾದರೆ, ಉತ್ತರ / ದಕ್ಷಿಣ ಧ್ರುವ ಒತ್ತಡದ ಕಾಂತೀಯ ತರಂಗ ವಿತರಣೆಯಿಂದ ಸಕಾರಾತ್ಮಕ ಶಕ್ತಿಯು ಹೇರಳವಾಗಿ ಲಭ್ಯವಿರುವ ಸ್ಥಳದಲ್ಲಿ ಈ ದೇವಾಲಯಗಳು ಆಯಕಟ್ಟಿನ ರೀತಿಯಲ್ಲಿ ನೆಲೆಗೊಂಡಿವೆ. ಹಾಗಾಗಿ ಅಲ್ಲಿ ಹೆಚ್ಚಿನ ಕಾಂತೀಯ ಮೌಲ್ಯಗಳು ಲಭ್ಯವಿರುತ್ತವೆ ಅದೂ ಅಲ್ಲದೇ ವಿಗ್ರಹವನ್ನು ದೇವಾಲಯದ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡುವ ಮೊದಲು ವಿಗ್ರಹದ ಕೆಳಗೆ ಚಿನ್ನ ಬೆಳ್ಳಿ ತಾಮ್ರ ಮೊದಲಾದ ಲೋಹಗಳ ಜೊತೆಯಲ್ಲಿ ಅನೇಕ ಮುತ್ತು ರತ್ನ ಹವಳ ಪಚ್ಚೆಗಳನ್ನು, ಗರ್ಭಗುಡಿಯಲ್ಲಿ ಹೂತಿಡಲಾಗುತ್ತದೆ. ಈ ಲೋಹಗಳು ಭೂಮಿಯ ಕಾಂತೀಯ ಅಲೆಗಳನ್ನು ಹೀರಿಕೊಳ್ಳುವುದಲ್ಲದೇ ಅದನ್ನು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡುತ್ತದೆ. ಹಾಗಾಗಿ ನಿಯಮಿತ ಸಂಖ್ಯೆಯಲ್ಲಿ ಪ್ರದಕ್ಷಿಣೆ ಹಾಕುವ ವ್ಯಕ್ತಿಯ ದೇಹವು ಸ್ವಯಂಚಾಲಿತವಾಗಿ ಕಾಂತೀಯ ತರಂಗಗಳನ್ನು ಹೀರಿಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.

ಮಂಗಳಾರತಿ

ದೇವರಿಗೆ ಮಹಾಮಂಗಳಾರತಿ ಎಂಬ ಕಲ್ಪನೆಯೇ ಒಂದು ಕ್ಷಣ ರೋಮಾಂಚನವನ್ನು ಉಂಟು ಮಾಡುವುದಲ್ಲದೇ, ಆ ಕ್ಷಣಕ್ಕಾದರೂ ಭಕ್ತಿಪರವಶಭಾವದ ಪುಳಕವನ್ನು ಕೊಡುತ್ತದೆ. ಇನ್ನು ಮಂಗಳಾರತಿಯ ಸಮಯದಲ್ಲಿ ಬಾರಿಸುವ ಶಂಖ,ಜಾಗಟೆ, ನಗಾರಿ ಮತ್ತು ಘಂಟೆಗಳ ಧ್ವನಿಯ ಜೊತೆ ಅರ್ಚಕರ ಏರುಧನಿಯ ಮಂತ್ರಘೋಷಗಳು ನಮ್ಮ ಕಿವಿ ತುಂಬಿ ಮೈದುಂಬಿ ದೇಹದಲ್ಲಿ ವಿದ್ಯುತ್‌ ಸಂಚಾರ ಮೂಡಿದಂತಾಗುವುದಲ್ಲದೇ, ಅವುಗಳ ತರಂಗಗಳು ನಮ್ಮ ದೇಹದೊಳಗೆ ಕಂಪನವನ್ನು ಮಾಡಿಸುವ ಮೂಲಕ ಅದೊಂದು ರೀತಿಯ ದಿವ್ಯವಾದ ಅದ್ಭುತವಾದ ಅವರ್ಣನೀಯವಾದ ಹಿತಾನುಭವವನ್ನು ಮೂಡಿಸುವುದಂತೂ ಸತ್ಯ.

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿ, ಶಾಂತಿ ಶಾಂತಿಃ ||

ಅಜ್ಞಾನವೆಂಬ ಕತ್ತಲನ್ನು ಕಳೆದು, ಸುಜ್ಞಾನವೆಂಬ ಜ್ಯೋತಿಯು ನಮ್ಮ ಬದುಕಲ್ಲಿ ಬೆಳಗಲಿ ಎಂಬಂತೆ ದೇವರಿಗೆ ಬೆಳಗುವ ಈ ಜ್ಯೋತಿಯನ್ನು ನೋಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಮಂಗಳಾರತಿಗೆ ಬಳಸುವ ಕರ್ಪೂರದ ವಾಸನೆ ನಮ್ಮ ಕರಗಳ ಮೂಲಕ ಮೂಗಿನಿಂದ ನರವ್ಯೂಹಕ್ಕೆ ತಲುಪಿ ನರಮಂಡಲವನ್ನು ಹೆಚ್ಚು ಕ್ರಿಯಾಶೀಲವಾಗಿಸುವುದಲ್ಲದೇ, ಶೀತ ನೆಗಡಿಗಳಿಗೂ ಕರ್ಪೂರ ರಾಮ ಬಾಣವಾಗಿದೆ. ಇದರ ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ.

ತೀರ್ಥ ಮತ್ತು ಪ್ರಸಾದ

ಸಾಮಾನ್ಯವಾಗಿ ದೇವಾಲಯಗಳಲ್ಲಿ ಕೊಡುವ ತೀರ್ಥವೂ ದೇವರಿಗೆ ಮಾಡಿದ ಅಭಿಷೇಕದ ನೀರಾಗಿರುತ್ತದೆ. ದೇವಾಲಯಗಳಲ್ಲಿ ಇರುವ ದೇವರ ವಿಗ್ರಹವನ್ನು ಸಾಮಾನ್ಯವಾಗಿ ಸಾಲಿಗ್ರಾಮ ಶಿಲೆ, ಕೃಷ್ಣ ಶಿಲೆ ಅಥವಾ ನವರತ್ನ ಶಿಲೆಗಳಿಂದ ನಿರ್ಮಿಸಲ್ಪಟ್ಟಿರುತ್ತವೆ. ಈ ಶಿಲೆಗಳಲ್ಲಿ ಸಾಕಷ್ಟು ಖನಿಜಾಂಶಗಳು ಇರುತ್ತದೆ ಅಂತಹ ವಿಗ್ರಹಕ್ಕೆ ಮಾಡಿದ ಅಭಿಷೇಕದಲ್ಲಿ ಆ ಎಲ್ಲಾ ಸತ್ವಗುಣಗಳೂ ತುಂಬಿರುತ್ತದೆ. ಅಂತಹ ನೀರನ್ನು ತಾಮ್ರದ ಪಾತ್ರೆಯಲ್ಲಿಯೋ ಇಲ್ಲವೇ ಬೆಳ್ಳಿಯ ಪಾತ್ರೆಯಲ್ಲಿ ಸಂಗ್ರಹಿಸುವುದರಿಂದ ಅದು ಕೇವಲ ನೀರಾಗಿರದೇ, ತಾಮ್ರದ ಮೈಲುತುತ್ತದ ಜೊತೆ ಕೊಂಚ ಪಚ್ಚಕರ್ಪೂರ ಮತ್ತು ತುಳಸೀದಳಗಳನ್ನೂ ಬೆರಸುವ ಮೂಲಕ ಔಷಧೀಯ ಗುಣಗಳುಳ್ಳ ತೀರ್ಥವಾಗುತ್ತದೆ. ಇದನ್ನು ಸೇವಿಸುವುದರಿಂದ ಅನೇಕ ರೋಗರುಜಿನಗಳು ಮಾಯವಾಗುತ್ತದೆ. ಇನ್ನು ಪ್ರಸಾದವು ದೇವರಿಗೆ ನೈವೇದ್ಯ ಮಾಡಿರುವುದರಿಂದ ಅದು ಬಹಳ ಸತ್ವ ಮಯವಾಗಿರುವುದಲ್ಲದೇ, ಭಗವಂತನ ಸೇವೆಗೆ ಬಂದವರು ಹಸಿದ ಹೊಟ್ಟೆಯಲ್ಲಿ ಹೋಗದೇ ಏನಾದರೂ ತಿಂದುಕೊಂಡು ಹೋಗುವಂತಾಗುತ್ತದೆ.

ಇನ್ನೂ ಹೆಚ್ಚಿನ ತೀರ್ಥಕ್ಷೇತ್ರಗಳಲ್ಲಿ ಪ್ರಸಾದ ರೂಪದಲ್ಲಿ ಉಚಿತವಾಗಿ ಹೊಟ್ಟೆಯ ತುಂಬಾ ರುಚಿ ರುಚಿಯಾದ ಊಟೋಪಚಾರಗಳನ್ನು ಹಾಕಿ ದೂರದಿಂದ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳ ಹಸಿವನ್ನು ನೀವಾರಿಸುವ ಸತ್ಸಂಪ್ರದಾಯವೂ ನಮ್ಮ ಅನೇಕ ದೇವಾಲಯಗಳಲ್ಲಿ ಇಂದಿಗೂ ರೂಢಿಯಲ್ಲಿದೆ.

ಇಂದಿಗೂ ಅನೇಕ ದೇವಾಲಯಗಳು ದೂರ ದೂರದ ಊರಿನಿಂದ ಪಟ್ಟಣಗಳಿಗೆ ಓದಲು ಬರುವ ಅನೇಕ ವಿದ್ಯಾರ್ಥಿಗಳಿಗೆ ದಾಸೋಹದ ಕೇಂದ್ರಗಳಾಗಿವೆ.

ದೇವರ ದರ್ಶನವಾದ ನಂತರ ಏಕೆ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತಿರ ಬೇಕು?

ದೇವರ ದರ್ಶನವಾದ ನಂತರ ಸ್ವಲ್ಪ ಕಾಲ ಅಲ್ಲೇ ಏಕೆ ಕುಳಿತುಕೊಳ್ಳಬೇಕು ಎಂಬುದಕ್ಕೆ ಅನೇಕ ಕಾರಣಗಳಿವೆ ಮುಖ್ಯವಾಗಿ,

  • ದೇವರ ದರ್ಶನಕ್ಕಾಗಿ ಬಹಳ ಕಾಲ ಸರದಿಯಲ್ಲಿ ನಿಂತು ಸುಸ್ತಾಗಿರಬಹುದಾದ ಕಾರಣ, ಕೆಲ ಕಾಲ ವಿಶ್ರಾಂತಿಗಾಗಿ ಪೂಜೆಯ ನಂತರ ಕುಳಿತುಕೊಳ್ಳಬೇಕು ಎನ್ನುವುದು ಒಂದು ಕಾರಣವಾದರೆ
  • ಪ್ರಸಾದ ಸ್ವೀಕರಿಸಿದ ನಂತರ ಭುಕ್ತಾಯಾಸದ ಪರಿಹಾರವಾಗಿಯೂ ಕುಳಿತುಕೊಳ್ಳುವುದು ಉತ್ತಮವಾದ ಪರಿಹಾರವಾಗಿದೆ.
  • ದೇವಸ್ಥಾನದಲ್ಲಿ ಕೆಲ ಕಲ ಕುಳಿತುಕೊಳ್ಳುವುದರಿಂದ ಮನಸ್ಸು ಬಹಳ ಶಾಂತವಾಗುತ್ತದೆ. ಮನಸ್ಸು ಶಾಂತವಾದಾಗ ಏನು ಮಾಡಬೇಕು ಏನು ಮಾಡಬಾರದು ಎನ್ನುವುದನ್ನು ಅವಲೋಕನ ಮಾಡುತ್ತದೆ. ಈ ಸ್ಥಳದಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರುವುದಿಲ್ಲ. ಮನಸ್ಸು ಒಳ್ಳೆಯ ಆಲೋಚನೆ ಮಾಡುತ್ತದೆ.
  • ದೇವಸ್ಥಾನದಲ್ಲಿ ಕುಳಿತಾಗ ಕೇಳ ಸಿಗುವ ಘಂಟಾನಾದ ಮತ್ತು ಮಂತ್ರಗಳ ತರಂಗಾಂತರಗಳು ಮನಸ್ಸಿನ ಮೇಲೆ ಪರಿಣಾಮ ಬೀರಿ ಧನಾತ್ಮಕವಾದ ಚಿಂತನೆಯನ್ನು ಮೂಡಿಸುವುದಲ್ಲದೇ, ಮನಸ್ಸು ಬಹಳಷ್ಟು ಉಲ್ಲಾಸಗೊಳ್ಳಲು ಸಹಕಾರಿಯಾಗಿದೆ.
  • ಬಹುತೇಕ ದೊಡ್ಡ ದೊಡ್ಡ ದೇವಾಲಯಗಳಲ್ಲಿ ಮಹಾ ಮಂಗಳಾರತಿಯ ನಂತರ ನಾದಸ್ವರ, ಸಂಗೀತ ಮತ್ತು ನೃತ್ಯಕಾರ್ಯಕ್ರಮಗಳು ನಡೆಯುತ್ತಿದ್ದು ಅಲ್ಲೇ ಕೆಲಕಾಲ ಅವುಗಳನ್ನು ಆನಂದಿಸುವ ಮೂಲಕಎಲ್ಲಾ ರೀತಿಯ ದುಃಖಗಳನ್ನೂ ಕೆಲಕಾಲ ಮರೆತು ನೆಮ್ಮದಿಯಿಂದ ಇರಬಹುದಾಗಿದೆ.
  • ಕೆಲಕಾಲ ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಸಜ್ಜನರ ಮತ್ತು ಸಮಾನ ಮನಸ್ಕರ ಪರಿಚಯವೂ ಆಗುತ್ತದೆ. ಅದ್ದಕ್ಕೇ ಅಲ್ಲವೇ ದೊಡ್ಡವರು ಹೇಳಿರುವುದು ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂದು. ಇಂದಿಗೂ ಇಂತಹ ದೈವಿಕ ಆವರಣದಲ್ಲಿಯೇ ಅನೇಕ ವೈವಾಹಿಕ ಮೈತ್ರಿಗಳು ಕೂಡಿಬರುತ್ತವೆ.

ಒಟ್ಟಿನಲ್ಲಿ ದೇವಾಲಯಕ್ಕೆ ಹೋಗುವ ಮೂಲಕ ಸಕಾರಾತ್ಮಕ ಶಕ್ತಿಯು ಪ್ರತಿಯೊಬ್ಬರಲ್ಲೂ ಮೂಡಿ ಅವರ ನಂಬಿಕೆ ಆತ್ಮ ವಿಶ್ವಾಸಮತ್ತು ಛಲವನ್ನು ಹೆಚ್ಚಿಸುತ್ತದೆ ಎಂಬುದು ನಿರ್ವಿವಾದವಾಗಿರುವ ಕಾರಣ ಪ್ರತಿಯೊಬ್ಬರೂ ನಿಯಮಿತವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ಭಗವಂತನ ದರ್ಶನ ಮಾಡಿ ಹೇರಳವಾಗಿ ಧನಾತ್ಮಕವಾದ ಅಂಶಗಳನ್ನು ಪಡೆದುದು ಮಾನಸಿಕ ನೆಮ್ಮದಿಯೊಂದಿಗೆ ಜೀವನದಲ್ಲಿ ಅತ್ಯಂತ ಯಶಸ್ವಿಯಾಗಲಿ ಎಂಬುದೇ ಈ ಲೇಖನದ ಆಶಯವಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ದೇವಸ್ಥಾನಗಳಿಗೆ ಏಕೆ ಹೋಗಬೇಕು?

  1. ದೇವಸ್ಥಾನಗಳಿಗೆ ಏಕೆ ಹೋಗಬೇಕು? ದೇವಸ್ಥಾನಗಳನ್ನು ಏಕೆ ಸುತ್ತಬೇಕು, ತೀರ್ಥ ಪ್ರಸಾದವನ್ನು ಏಕೆ ತೆಗೆದು ಕೊಳ್ಳ ಬೇಕು? ಮಂಗಳಾರತಿ ಏಕೆ ತೆಗೆದು ಕೊಳ್ಳ ಬೇಕು? ಏಕೆ ಸ್ವಲ್ಪ ಸಮಯ ದೇವಸ್ಥಾನದಲ್ಲಿಕುಳಿತು ಕೊಳ್ಳ ಬೇಕು ಎಂಬ ವಿಷಯವನ್ನು ವಿಷದವಾಗಿ ತಿಳಿಸಿರುವ ಈ ನಿಮ್ಮ ಲೇಖನ ಬಹಳಷ್ಟು ಮೆಚ್ಚುಗೆ ಆಗಿದ್ದು ಇದನ್ನು ತಿಳಿಯ ಪಡಿಸಿದ ಶ್ರೀ.ಶ್ರೀಕಂಠ ಬಾಳಗಂಚಿರವರಿಗೆ ಅನೇಕಾನೇಕ ವಂದನೆಗಳು

    Liked by 1 person

  2. ದೇವಸ್ಥಾನಗಳಿಗೆ ಹೋಗುವುದರಿಂದ ಆಗುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ವಿವರಿಸಿದ್ದೀರಿ.‌ ಮನುಷ್ಯನಿಗೆ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಮನಸ್ಸು ಸರಿ ಇಲ್ಲದಿದ್ದರೆ ಅದು ಅವನ ಎಲ್ಲ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ನೆಮ್ಮದಿ ದೃಷ್ಟಿಯಿಂದ ಮತ್ತು ಕೆಲವು ವೈಜ್ಞಾನಿಕ ಕಾರಣಗಳಿಂದಲೂ ದೇವಸ್ಥಾನಗಳಿಗೆ ಭೇಟಿ ನೀಡುವುದು ಅಗತ್ಯ ಎಂಬುದನ್ನು ಮನದಟ್ಟು ಮಾಡಿದ್ದೀರಿ. ಅಭಿನಂದನೆಗಳು.

    Liked by 1 person

Leave a reply to ಎಸ್.ದ್ವಾರಕಾನಾಥ್ Cancel reply