ತಾಜಾ ತಾಜಾ ಬಿಸಿ ಬಿಸಿ ಸುದ್ದಿ. ರಾಜ್ಯದ ಹಿರಿಯ ನಾಯಕರೊಬ್ಬರ ರಾಸಲೀಲೆ, ಕಾವಿಧಾರಿ ಮಠಾಧಿಪತಿಗಳ ಪಲ್ಲಂಗ ಪುರಾಣ ಬಹಿರಂಗ ,ಲಜ್ಜೆಗೆಟ್ಟ ಸರ್ಕಾರ ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ವಿರೋಧ ಪಕ್ಷಗಳ ಆಗ್ರಹ. ಓಲಂಪಿಕ್ಸಿನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ. ಭಾರತದ ವಿರುದ್ಧ ಪಾಕ್ ಗೆ ಕ್ರಿಕೆಟ್ ನಲ್ಲಿ ಮತ್ರೊಮ್ಮೆ ಸೋಲು ಎಂದು ಒಂದು ಕೈಯಲ್ಲಿ ಪೇಪರ್ಗಳ ಬಂಡಲ್ ಹಿಡಿದುಕೊಂಡು ಮತ್ತೊಂದು ಕೈಯ್ಯಲ್ಲಿ ಕೇವಲ ಶೀರ್ಷಿಕೆ ಕಾಣುವ ಹಾಗೆ ಪೇಪರ್ ಕಾಣುವ ಹಾಗೆ ಹಿಡಿದುಕೊಂದು ಜೋರಾಗಿ ಕೂಗುವ ಸಣ್ಣ ವಯಸ್ಸಿನ ಹುಡುಗರನ್ನು ಜನನಿಬಿಡ ಸರ್ಕಲ್ ಗಳ ಬಳಿ ಈ ಹಿಂದೆ ಕಾಣುತ್ತಿದ್ದೆವು. ಈಗೆಲ್ಲಾ ಮೊಬೈಲ್ ಯುಗ ಬೆರಳು ತುದಿಯಲ್ಲಿಯೇ ವಿಶ್ವದ ಮೂಲೆ ಮೂಲೆಗಳು ಕ್ಷಣಮಾತ್ರದಲ್ಲಿಯೇ ಸಿಗುತ್ತಿರುವಾಗ ವೃತ್ತಪತ್ರಿಕೆಗಳನ್ನು ಓದುವವರ ಸಂಖ್ಯೆಯೇ ಕಡಿಮೆಯಾಗುತ್ತಿರುವಾಗ ಈ ರೀತಿಯಾಗಿ ಪತ್ರಿಕೆಗಳನ್ನು ಹಂಚುವ ಹುಡುಕರ ಸಂಖ್ಯೆಯೂ ಕ್ಷೀಣವಾಗುತ್ತಿದೆ. ಸೆಪ್ಟಂಬರ್ -4 ವಿಶ್ವ ಪತ್ರಿಕಾ ವಿತರಕರ ದಿನದಂದು ಪತ್ರಿಕೆಗಳನ್ನು ಹಂಚುವ ಹುಡುಗರ ರೋಚಕ ಆದರೆ ಅಷ್ಟೇ ಹೃದಯವಿದ್ರಾವಕ ಪ್ರಸಂಗಗಳನ್ನು ನೋಡೋಣ ಬನ್ನಿ.
ಈ ಡಿಜಿಟಲ್ ಯುಗದಲ್ಲಿ ಬೆರಳು ತುದಿಯಲ್ಲಿ ವಿಶ್ವದ ವಾರ್ತೆಗಳು ಕ್ಷಣಾರ್ಧದಲ್ಲಿ ತಲುಪುವಂತಿದ್ದರೂ, ಪ್ರತಿ ಭಾಷೆಯಲ್ಲೂ ದಿನದ 24 ಗಂಟೆಗಳೂ Breaking News ಎಂದು ಗಂಟಲು ಹರಿಯುವಹಾಗೆ ಅರಿಚಿಕೊಂಡು ತೋರಿಸುವ ನೂರಾರು ಸುದ್ಧಿ ಮಾಧ್ಯಮಗಳು ಇದ್ದರೂ, ಇಂದಿಗೂ ಬೆಳಿಗ್ಗೆ ಎದ್ದು ಪ್ರಾತರ್ವಿಧಿಯನ್ನು ಮುಗಿಸಿ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಲೇ, ದಿನಪತ್ರಿಕೆಯ ಮೇಲೆ ಕಣ್ಣಾಡಿಸದೇ ಹೋದರೆ ಬಹುತೇಕರಿಗೆ ಸಮಾಧಾನವೇ ಆಗುವುದಿಲ್ಲ ಪತ್ರಿಕೆ ಓದದೇ ಹೋದಲ್ಲಿ ಅನೇಕರಿಗೆ ದಿನವೇ ಆರಂಭವಾಗುವುದಿಲ್ಲ ಎಂದರೂ ತಪ್ಪಾಗುವುದಿಲ್ಲ. ಹಾಗಾಗಿ ಬೆಳ್ಳಂ ಬೆಳಿಗ್ಗೆ ತಾವು ಏಳುವ ಹೊತ್ತಿಗಾಗಲೇ ಮನೆಯ ಮುಂದೆ ಪೇಪರ್ ಬಂದಿರಬೇಕು ಎಂದು ಬಯಸುವವರೇ ಹೆಚ್ಚು. ಪೇಪರ್ ಬರುವುದು ಸ್ವಲ್ಪ ಆಚೀಚೇಯಾದರೂ ಏನಪ್ಪಾ ಇವತ್ತು ತಡವಾಗಿ ಬಂದಿದ್ದೀಯಾ? ಹೀಗೆಲ್ಲಾ ತಡಾ ಮಾಡೋದಾದ್ರೇ ನಾಳೆಯಿಂದ ಬೇರೆಯವರ ಹತ್ತಿರ ಪೇಪರ್ ಹಾಕಿಸ್ಕೋಳ್ತಿವಿ ನೋಡು ಪೇಪರ್ ಹುಡುಗನನ್ನು ದಬಾಯಿಸುವವರಿಗೂ ಇಂದಿಗೂ ಕಡಿಮೇ ಏನಿಲ್ಲ.
ನಿಜ ಹೇಳ್ಬೇಕು ಅಂದ್ರೇ, ಈ ರೀತಿಯಾಗಿ ಬೆಳ್ಳಂಬೆಳಿಗ್ಗೆ ಪ್ರತಿ ಮನೆಗಳಿಗೂ ದಿನಪತ್ರಿಕೆಗಳನ್ನು ತಲುಪಬೇಕು ಎಂದರೆ ಅದರ ಹಿಂದಿನ ಪತ್ರಿಕಾ ವಿತರಕರ ಶ್ರಮ ಅಂತಿಂತಹದಲ್ಲ. ಎಲ್ಲರೂ ಬೆಚ್ಚಗೆ ಹೊದ್ದು ಕೊಂಡು ಮಲಗಿರುವಾಗಲೇ ಇವರು ಚಳಿ ಮಳೆ ಗಾಳೆ ಎಂಬುದನ್ನು ಲೆಖ್ಖಿಸದೇ ಬೆಳಿಗ್ಗೆ 4- 4:30 ಕ್ಕೆಲ್ಲಾ ಎದ್ದು ಪತ್ರಿಕಾ ವಿತರಣೆ ಮಾಡುವ ಸ್ಥಳಕ್ಕೆ ಬಂದು ಪೇಪರ್ ಬಂಡಲ್ ಬಂದಿದೆಯಾ? ಬಂದಿದ್ದರೆ ಸರಿಯಾದ ಸಂಖ್ಯೆ ಇದಯೇ ಎಂದು ಲೆಕ್ಕಾ ಹಾಕುತ್ತಲೇ, ಪೇಪರ್ ಹಂಚುವ ಹುಡುಗರು ಬಂದಿದ್ದಾರಾ ಇಲ್ಲವೇ ಎಂದು ಗಮನಿಸುತ್ತಲೇ ಇರಬೇಕು. ಯಾರಾದ್ರೂ ಬರದೇ ಹೋದರೇ, ಲೇ.. ನೋಡೋ.. ಇಷ್ಟು ಹೊತ್ತಾದ್ರೂ ಅವನು ಬಂದಿಲ್ಲಾ ಒಂದು ಮಿಸ್ ಕಾಲ್ ಕೊಡು ಎಂದು ಎಚ್ಚರಿಸುತ್ತಲೇ, ತಮ್ಮ ಅಕ್ಕ ಪಕ್ಕದಲ್ಲಿರುವ ಇತರೇ ನ್ಯೂಸ್ ಏಜೆನ್ಸಿಯವರ ಬಳಿ ಪತ್ರಿಕೆಗಳ ವಿನಿಮಯ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲರಿಗೂ ಎಲ್ಲಾ ಪತ್ರಿಕೆಯ ಏಜನ್ಸಿ ಇರುವುದಿಲ್ಲ. ಹಾಗಾಗಿ ಅವರೆಲ್ಲರೂ ಪರಸ್ಪರ ವಿನಿಮಯ ಮಾಡಿಕೊಂಡೇ ಸಹಬಾಳ್ವೇ ನಡೆಸಬೇಕು. ಪೇಪರ್ ಎಲ್ಲಾ ಜೋಡಿಸಿಕೊಂಡು ಅದರ ಜೊತೆ ಬರುವ ಪುರವಾಣಿಗಳು ಮತ್ತು ಕೆಲವರು ಕೊಡುವ advertising pamphlet ಗಳನ್ನು ( ಅದರಲ್ಲೇ ಸ್ವಲ್ಪ ಹಣ ಸಿಗುವುದು) ಸೇರಿಸುವಷ್ಟರಲ್ಲಿ ಹುಡುಗರೆಲ್ಲಾ ಬಂದು ಅವರವರ ರೂಟ್ ಗಳಿಗೆ ಅನುಗುಣವಾಗಿ ಪೇಪರ್ಗಳನ್ನು ಹಂಚಿ ಯಾವ ಹುಡುಗ ಬಂದಿಲ್ಲವೋ ಆ ರೂಟಿಗೆ ಸ್ವತಃ ಪತ್ರಿಕಾ ವಿತರಕರೇ ಹೋಗಬೇಕು. ಸ್ವಲ್ಪ ತಡವಾದರು ಬೈಗುಳವನ್ನು ಕೇಳಬೇಕು.
ಇನ್ನು ಪತ್ರಿಕೆಗಳನ್ನು ವಿತರಿಸುವ ಹುಡುಗರು ಬಹುತೇಕರು 6 ರಿಂದ 10ನೇ ತರಗತಿ ಓದುವಂತಹ ಹುಡುಗರಾಗಿರುತ್ತಾರೆ. ಹೌದು ನಿಜ ಸಣ್ಣ ವಯಸ್ಸಿನ ಹುಡುಗರಂದ ಕೆಲಸ ಮಾಡಿಸುವುದು ಬಾಲ ಕಾರ್ಮಿಕರ ನಿಯಮದಂತೆ ಶಿಕ್ಷಾರ್ಹ. ಆದರೆ ಇಲ್ಲಿ ಅನಿವಾರ್ಯ. ದೊಡ್ಡ ವಯಸ್ಸಿನವರು ಈ ಕೆಲಸಕ್ಕೆ ಬರುವುದಿಲ್ಲ. ಇನ್ನು ಸಣ್ಣ ವಯಸ್ಸಿನ ಹುಡುಗರಿಗೆ ತಮ್ಮ ಸಂಸಾರ ಮತ್ತು ಓದನ್ನು ಮುಂದುವರೆಸಲು ಇದೇ ಸಣ್ಣ ಪುಟ್ಟ ಹಣವೇ ಆಧಾರವಾಗಿರುವ ಕಾರಣ ಎಲ್ಲರಿಗೂ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಾಗಿ ಅನೂಚಾನವಾಗಿ ನಡೆದುಕೊಂಡು ಹೋಗುತ್ತಿದೆ. ಪತ್ರಿಕೆ ಹಾಕುವ ಬಹುತೇಕ ಹುಡುಗರ ಬಳಿ ಸರಿಯಾಗಿ ಮೈ ಮುಚ್ಚುವಂತಹ ಬಟ್ಟೆಯೂ ಇರುವುದಿಲ್ಲ. ಇವತ್ತು ಒಂದು ದಿನ ಸ್ವಲ್ಪ ಹೊತ್ತು ಜಾಸ್ತಿ ನಿದ್ದೇ ಮಾಡಿಬಿಡೋಣ ಎನ್ನುವಂತಿಲ್ಲ. ಪ್ರತಿ ದಿನವೂ ಎಲ್ಲರೂ ಏಳುವಷ್ಟರಲ್ಲಿ ಹೊರ ಜಗತ್ತಿನಲ್ಲಿ ವ್ಯವಹಾರಗಳು ಆರಂಭವಾಗುವುದಕ್ಕೂ ಮೊದಲೇ ಪತ್ರಿಕೆ ಹಂಚುವವರು ತಮ್ಮ ಕೆಲಸ ಮುಗಿಸಿ, ತಮ್ಮ ಶಾಲಾ ಕಾಲೇಜುಗಳಿಗೆ ಹೊಗಬೇಕು. ಹಾಗಾಗಿ ಇವರ ಶ್ರಮ ಯಾರ ಕಣ್ಣಿಗೂ ಬೀಳುವುದಿಲ್ಲ. ಒಂದು ದಿನ ಮನೆಗೆ ಪತ್ರಿಕೆ ಮನೆಗೆ ಬಾರದಿದ್ದಾಗ ಅಥವಾ ತಡವಾಗಿ ಬಂದಾಗ ಮಾತ್ರವೇ, ಪತ್ರಿಕೆಗಳನ್ನು ಹಂಚುವ ಈ ಹುಡುಗರ ನೆನಪಾಗುತ್ತಾರೆ. ಒಂದರ್ಥದಲ್ಲಿ ಇವರು ತಮ್ಮ ಕೆಲಸಕ್ಕೆ ಮಾನ್ಯತೆ ಕೇಳದ ನಿಸ್ವಾರ್ಥ ಸೈನಿಕರಿದ್ದಂತೆ.
ಪತ್ರಿಕೆ ಹಂಚುವುದು ನಮಗೇನೂ ಹೊಸದಲ್ಲ. SSLC ಮುಗಿಸಿ ಕೆಲಸ ಸಿಗದೇ, ನಮ್ಮೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡಿಕೊಂಡು ಉಳಿದ ಸಮಯದಲ್ಲಿ ಅಕ್ಕ ಪಕ್ಕದವರ ಹೊಲಗಳಲ್ಲಿ ಕೂಲೀ ಮಾಡುತ್ತಲೋ ಇಲ್ಲವೇ ಭಾವಿಗಳನ್ನು ತೋಡುವ ಕೆಲಸದಲ್ಲಿ ನಿರತರಾಗಿದ್ದ ನಮ್ಮ ತಂದೆಯವರನ್ನು ಅವರ ದೊಡ್ಡಮ್ಮ ಗೌರಮ್ಮನವರು ಮೈಸೂರಿಗೆ ಕರೆದುಕೊಂಡು ಹೋಗಿ ITI ಗೆ ಸೇರಿಸಿ ಹತ್ತಾರು ಮನೆಗಳಲ್ಲಿ ವಾರಾನ್ನ ಕೊಡಿಸಿದರೂ ಉಳಿದ ಖರ್ಚಿಗಾಗಿ ಆಶ್ರಯಿಸಿದ್ದೂ ಪೇಪರ್ ಹಾಕುವ ವೃತ್ತಿಯನ್ನೇ. ಪ್ರತೀ ದಿನ ರಾತ್ರಿ ತಿಂಗಳಿಗೆ 2 ರೂಪಾಯಿಯ ಸೈಕಲ್ ಶಾಪಿನಲ್ಲಿ ಸೈಕಲ್ ತೆಗೆದುಕೊಂಡು ಬೆಳಿಗ್ಗೆ ಪೇಪರ್ ತೆಗೆದುಕೊಂಡು ಪೇಪರ್ ಪೇಪರ್ ಎಂದು ಕೂಗುತ್ತಲೇ ಪೇಪರ್ ಮಾರಿ ಪೇಪರ್ ಒಂದಕ್ಕೆ 1 ಇಲ್ಲವೇ 2 ಪೈಸೆಯಂತೆ ಕಮಿಷನ್ ಹಿಡಿದುಕೊಂಡು ಉಳಿದ ಲೆಕ್ಕ ಕೊಟ್ಟು ಸೈಕಲ್ ಶಾಪಿನಲ್ಲಿ ಸೈಕಲ್ ಬಿಟ್ಟು ಮನೆಗೆ ಬಂದು ಸ್ನಾನ ಸಂಧ್ಯಾವಂಧನೆ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದರು. ಇದೇ ನಂಬಿಕೆಯ ಮೇಲೆ ನಮ್ಮ ಚಿಕ್ಕಪ್ಪನವರನ್ನೂ ಮೈಸೂರಿಗೆ ಕರೆಸಿಕೊಂಡು ಅವರನ್ನೂ ITI ಗೆ ಸೇರಿಸಿ ಹತ್ತಾರು ಮನೆಗಳಲ್ಲಿ ವಾರಾನ್ನ ಕೊಡಿಸಿ ಪೇಪರ್ ಹಾಕಿಸುವ ವ್ಯವಸ್ಥೆ ಮಾಡಿಸಿಕೊಟ್ಟಿದ್ದರು. ತುಸು ಕೋಪಿಷ್ಥರಾಗಿದ್ದ ನಮ್ಮ ಚಿಕ್ಕಪ್ಪ ಪೇಪರ್ ಏಜೆನ್ಸಿಯವರ ಹತ್ತಿರ ನಾಳೆ ಇಂದ ಪೇಪರ್ ಹಾಕೋದಿಕ್ಕೆ ಬರೋದಿಲ್ಲ ಎಂದು ಜಗಳ ಮಾಡಿಕೊಂಡು ಬಂದಾಗ ಸಂಧಾನ ಮಾಡಿಸುತ್ತಿದ್ದದ್ದೂ ನಮ್ಮ ತಂದೆಯವರೇ.
ಮುಂದೆ ITI ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡು ನಂತರ ನಮ್ಮ ಚಿಕ್ಕಪ್ಪನವರನ್ನೂ ಅಲ್ಲೇ ಕೆಲಸಕ್ಕೆ ಸೇರಿಸಿದ ನಂತರವೂ ಅವರು ಬದುಕಿರುವಷ್ಟು ವರ್ಷವೂ ಮೈಸೂರಿಗೆ ಹೋದಾಗಲೆಲ್ಲಾ ಆ ಪೇಪರ್ ಏಜನ್ಸಿಯವರ ಮನೆಗೆ ಇಡೀ ಕುಟುಂಬವನ್ನು ಕರೆದುಕೊಂಡು ಹೋಗಿ ನಮ್ಮೆಲ್ಲರ ನಮಸ್ಕಾರಗಳನ್ನು ಮಾಡಿಸಿ ಹಿರಿಯವರಿಗೆ ಮತ್ತು ನಮ್ಮ ಆಶ್ರಯದಾತರಿಗೆ ಗೌರವ ಕೊಡುವಂತಹ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದರು.
ನಂತರ ನಾನು ಹೈಸ್ಕೂಲ್ ಬರುವ ಹೊತ್ತಿಗೆ ನನಗೆ ವಾರ ಓದುವ ಹುಚ್ಚಿತ್ತು. ಅದರಲ್ಲೂ Sports magazine ಓದುವ ಇಚ್ಚೆಯಿದ್ದರೂ, ಅದನ್ನು ಕೊಂಡು ಓದಲು ಅಗುತ್ತಿರಲಿಲ್ಲ. ಆಗ ನಮ್ಮ ಮನೆಯ ಬಳಿ ಯಾವುದೇ ಗ್ರಂಥಾಲಯ ಇರಲಿಲ್ಲ. ಪತ್ರಿಕೆ ಹಂಚುತ್ತಿದ್ದ ನಮ್ಮ ಸಹಪಾಠಿಯೊಬ್ಬ ಪ್ರತೀ ವಾರವೂ ಶಾಲೆಗೆ Sports magazine ತಂದು ನಮ್ಮೆಲ್ಲರ ಹೊಟ್ಟೆ ಉರಿಸುತ್ತಿದ್ದಾಗಲೇ, ನಾನೂ ಪೇಪರ್ ಹಾಕಲು ಹೋದರೆ ಎಲ್ಲಾ ವಾರಪತ್ರಿಕೆಗಳನ್ನೂ ಓದಬಹುದು ಎಂಬ ಏಕೈಕ ಕಾರಣದಿಂದ ಸುಮಾರು ವರ್ಷಗಳ ಕಾಲ ಛಳಿ, ಮಳೆ, ಗಾಳಿ ಎನ್ನದೇ ಸೈಕಲ್ಲಿನ ಕ್ಯಾರಿಯರ್ ನಲ್ಲಿ ಪೇಪರ್ ಇಟ್ಟುಕೊಂಡು ಪೇಪರ್ ಹಾಕಿದ ಸವಿ ನೆನಪು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಪ್ರತೀ ಬಾರಿಯೂ ಒಂದೊದು ಮನೆಯ ವಾರಪತ್ರಿಕೆಯನ್ನು ಬೇಕೆಂದೇ ಮನೆಗೆ ತೆಗೆದು ಕೊಂಡು ಹೋಗಿ ಇಡೀ ರಾತ್ರಿ ಓದಿ ಮುಗಿಸಿ ಮಾರನೇಯ ದಿನ ಹಾಕುತ್ತಿದ್ದದ್ದನ್ನು ನೆನಸಿಕೊಂಡರೇ ಈಗಲೂ ನಗು ತರಿಸುತ್ತದೆ. ಹಾಗೆ ಕಷ್ಟ ಪಟ್ಟು ಪೇಪರ್ ಹಾಕಿ ಸಂಪಾದಿಸಿದ ಹಣ ಬಹುತೇಕ ಸೈಕಲ್ ರಿಪೇರಿ ಮಾಡಿಸುವುದರಲ್ಲಿ ಅದರಲ್ಲೂ ಕ್ಯಾರಿಯರ್ ಸ್ಪ್ರಿಂಗ್ ಟೈಟ್ ಮಾಡಿಸುವುದರಲ್ಲೇ ಖರ್ಚಾಗಿ ಹೋಗುತ್ತಿದ್ದರೂ, ಓದುವ ಹುಚ್ಚಿನಿಂದಾಗಿ ಪ್ರತಿ ದಿನವೂ ತಪ್ಪಿಸಿಕೊಳ್ಳದೇ ಪೇಪರ್ ಹಾಕಿದ್ದೆ.
ನಾನು ಎಲ್ಲೋ ಓದಿದ ಪ್ರಕಾರ ನಮ್ಮ ತಂದೆ, ನಮ್ಮ ಚಿಕ್ಕಂಪದಿರು ಮತ್ತು ನನ್ನಂತೆಯೇ ದೇಶ ಕಂಡ ಅತ್ಯುತ್ತಮ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿಗಳಾಗಿದ್ದ ದಿ.ಅಬ್ದುಲ್ ಕಲಾಂ ಅವರೂ ಸಹಾ ಬಾಲ್ಯದಲ್ಲಿ ಪತ್ರಿಕೆ ಹಾಕುತ್ತಿದ್ದರಂತೆ. ಈ ಲೇಖನ ಓದಿದ ನಂತರ ಇನ್ನೂ ಅನೇಕರು ತಮ್ಮ ಅನುಭವವನ್ನು ಖಂಡಿತವಾಗಿಯೂ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
ಆಗ ನಾವು ಪೇಪರ್ ಹಾಕುವಾಗ ಇದ್ದ ಕಷ್ಟಗಳು ಈಗಿನ ಹುಡುಗರಿಗೆ ಇಲ್ಲವಾಗಿದೆ. ಇಂದು ಬಹುತೇಕರಿಗೆ ಏಜನ್ಸಿ ಕಡೆಯಿಂದಲೇ ಸೈಕಲ್ ಕೊಡಿಸಿದರೆ ಬಹುತೇಕ ಪೇಪರ್ ಹಾಕುವ ಹುಡುಗರು ಝಮ್ ಎಂದು ಸ್ಕೂಟರ್ ಮೋಟರ್ ಬೈಕಿಗಳಲ್ಲಿ ಬಂದು ಪೇಪರ್ ಸುತ್ತಿ ರೋಯಂ ಎಂದು ಒಂದು, ಎರಡು ಇಲ್ಲವೇ ಮೂರನೇ ಮನೆಗಳಿಗೂ ಪ್ರತಿದಿನ ಕರಾರುವಾಕ್ಕಾಗಿ ಒಂದೇ ಸಮಯಕ್ಕೆ ಜನರು ಬೆಳಿಗ್ಗೆ ಎದ್ದು ಮನೆಯ ಮುಂದೆ ಕಸ ಗುಡಿಸಿ ನೀರು ಹಾಕಿ ರಂಗೋಲಿ ಹಾಕುವ ಮುಂಚಿಗಿಂತಲೂ ಗೇಟಿನೊಳಗೆ ದಿನಪತ್ರಿಕೆಯನ್ನು ಎಸೆದು ಹೋಗಿರುತ್ತಾರೆ.
ಬೇರೆಲ್ಲಾ ಕೆಲಸದಲ್ಲಿ ವಾರಕ್ಕೆ ಒಂದು ಇಲ್ಲವೇ ಎರಡು ರಜೆ ಸಿಕ್ಕರೆ ಈ ಪತ್ರಿಕಾ ವಿತಕರಿಗೆ ವರ್ಷಕ್ಕೆ ಸಿಗುವುದೇ 4 ರಜೆಗಳು ಮಾತ್ರ, ಸಂಕ್ರಾಂತಿ, ಯುಗಾದಿ, ಆಯುಧಪೂಜೆ, ದೀಪಾವಳಿ ಮಾತ್ರ. ಉಳಿದ ದಿನ ರಜೆ ಹಾಕಿದರೆ ಸಿಗುವ ಅಲ್ಪ ಸಂಬಳದಕ್ಕೂ ಕಟ್ ಆಗುವ ಕಾರಣ ಆ ಹುಡುಗರು ಇಂತಹ ಕೊರೋನಾ ಸಂಕಷ್ಟದಲ್ಲೂ ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೇ ಪತ್ರಿಕೆಗಳನ್ನು ಹಂಚುತ್ತಿರುವ, ಮಾಧ್ಯಮಗಳು ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿರುವ ಈ ಪತ್ರಿಕಾ ವಿತರಕರರನ್ನು ಪತ್ರಿಕಾ ಯೋಧರು ಎಂದು ಕರೆದರೂ ತಪ್ಪಾಗದು ಹಾಗಾಗಿ ಅವರು ಖಂಡಿತವಾಗಿಯೂ ಅಭಿನಂದನಾರ್ಹರು.
ಸಣ್ಣ ವಯಸ್ಸಿನಲ್ಲಿ ಅದ್ಯಾವುದೋ ಕಾರಣಕ್ಕಾಗಿಯೋ ಇಲ್ಲವೇ ಮನೆಯಲ್ಲಿನ ಕಷ್ಟದ ಪರಿಸ್ಥಿತಿಯಿಂದಾಗಿಯೋ ಪತ್ರಿಕೆ ಹಂಚುವ ಕೆಲಸಕ್ಕೆ ಸೇರಿಕೊಳ್ಳುವ ಕೆಲವು ನಂತರ ಅದರ ಚಕ್ರವ್ಯೂಹದೊಳಗೆ ಸಿಲುಕಿಕೊಂಡು ಹೊರಬರಲಾಗದೇ ನಮ್ಮ ತಂದೆಯವರ ಜೊತೆ ಪೇಪರ್ ಹಾಕುತ್ತಿದ್ದವರು ಇಂದಿಗೂ ಅದೇ ಪೇಪರ್ ಏಜನ್ಸಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವ ಎಷ್ಟೋ ಮಂದಿಯನ್ನು ನಾವು ಮೈಸೂರಿನಲ್ಲಿ ಭೇಟಿ ಮಾಡಿದ್ದೇವೆ. ಇಂದಿಗೂ ಪತ್ರಿಕಾ ವಿತರಕರದ್ದು ಅಸಂಘಟಿತ ಉದ್ಯೋಗವಾಗಿದ್ದು ಪಿಂಚಣಿ, ವಿಮೆ, ಅನಾರೋಗ್ಯಗಳ ಚಿಕಿತ್ಸೆ ಬಿಡಿ, ಕೇವಲ ದಿನಪತ್ರಿಕೆಗಳು ನೀಡುವ ಕಮಿಷನ್ ಒಂದನ್ನೇ ಅವಲಂಬಿಸಿರುವ ಇವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯೂ ಇಲ್ಲವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಇನ್ನು ತಿಂಗಳು ಪೂರ್ತಿ ಪತ್ರಿಕೆ ಹಾಕಿಸಿಕೊಂಡು ಹೇಳದೇ ಕೇಳದೇ ಮನೆ ಖಾಲಿ ಮಾಡಿಕೊಂಡು ಹೋಗುವವರು ಮತ್ತು ತಿಂಗಳಾನುಗಟ್ಟಲೇ ಪತ್ರಿಕೆಯ ಹಣವನ್ನು ಕೊಡದೇ ಹೋಗುವ ಮಂದಿಗೇನೂ ಕಡಿಮೆ ಇಲ್ಲ.
ದಿನ ಪತ್ರಿಕೆಗಳು ಮತ್ತು ವಾರ ಪತ್ರಿಕೆಗಳನ್ನು ಓದುವ ಓದುಗರ ಪರವಾಗಿ, ಒಂದು ದಿನವೂ ತಪ್ಪದೆ ಜನಸಾಮಾನ್ಯರಿಗೆ ಸುದ್ದಿಯನ್ನು ತಲುಪಿಸುವ ನಿಷ್ಠಾವಂತರಾದ, ಪ್ರಾಥಸ್ಮರಣೀಯರು ಎಂದರೂ ತಪ್ಪಾಗದ, ಈ ಶ್ರಮ ಜೀವಿಗಳಿಗೆ ವಿಶ್ವ ಪತ್ರಿಕಾ ವಿತರಕರ ದಿನದಂದು ನಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸೋಣ.
ಏನಂತೀರೀ?
ನಿಮ್ಮವನೇ ಉಮಾಸುತ