ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು? ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಲೇ ಪೀಡಿಸುತ್ತಿರುವುದನ್ನು ಸಹಿಸಿಕೊಳ್ಳುತ್ತಲೇ ಹೋದ ಕೃಷ್ಣ ಕಡೆಗೆ ಇದಕ್ಕೊಂದು ಪ್ರಾತ್ಯಕ್ಷಿಕವಾಗಿಯೇ ಪರಿಹಾರ ಸೂಚಿಸಬೇಕೆಂದು ಕರ್ಣನನ್ನು ಅಲ್ಲಿಗೆ ಬರಲು ಹೇಳಿ ಕಳಿಸಿದ.
ಕೃಷ್ಣ ಹೇಳಿ ಕಳಿಸಿದ್ದಾನೆ ಎಂದ ಮೇಲೆ ಕುತೂಹಲದಿಂದ ಕರ್ಣನೂ ಅಲ್ಲಿಗೆ ಬಂದಾಗ ಅಲ್ಲಿದ್ದ ಎರಡು ಬೆಟ್ಟವನ್ನು ಚಿನ್ನಮಯವನ್ನಾಗಿಸಿದ ಕೃಷ್ಣ, ಮೊದಲು ಅರ್ಜುನನನ್ನು ಕರೆದು, ಈ ಎರಡೂ ಚಿನ್ನದ ಗ್ರಾಮಸ್ಥರಿಗೆ ವಿತರಿಸಬೇಕು. ಆದರೆ ಅದರಲ್ಲಿ ಒಂದು ಚೂರೂ ಉಳಿಸಬಾರದು ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಬಾರದು ಎಂದು ಹೇಳಿ ಕಳುಹಿಸಿದ.
ಇಷ್ಟೇ ತಾನೇ, ಎಂದು ಹುಂಬತನದಿಂದ ಅಲ್ಲಿಯೇ ಸಮೀಪದ ಹಳ್ಳಿಗೆ ಹೋದಾಗ ಅವನನ್ನು ಗುರುತಿಸಿದ ಎಲ್ಲರು ವಂದಿಸಿದರು. ಕೂಡಲೇ ಆತ ಅಲ್ಲಿಯ ಡಂಗರ ಹೊಡೆಯುವವರನ್ನು ಕರೆಸಿ ಅರ್ಜುನ ಪ್ರತಿಯೊಬ್ಬ ಗ್ರಾಮಸ್ಥರಿಗೂ ಚಿನ್ನವನ್ನು ದಾನ ಮಾಡುತ್ತಿರುವ ಕಾರಣ, ಪ್ರತಿಯೊಬ್ಬರೂ ಅಲ್ಲಿ ಕಾಣುತ್ತಿರುವ ಗುಡ್ಡದ ಬಳಿ ಬರುವಂತೆ ಹೇಳಿಕಳುಹಿಸಿದ. ಚಿನ್ನವನ್ನು ದಾನ ಕೊಡುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಆ ಕೂಡಲೇ ಆ ಗುಡ್ಡದ ಬಳಿ ಬಂದಿದ್ದಲ್ಲದೇ, ಅರ್ಜುನನ್ನು ಮನಸೋ ಇಚ್ಚೆ ಹಾಡಿ ಹೊಗಳುತ್ತಾ ಹೋದಂತೆ ಅರ್ಜುನ ಹಿರಿ ಹಿರಿ ಹಿಗ್ಗಿದ.
ಗ್ರಾಮಸ್ಥರೆಲ್ಲರೂ ಬಂದ ಕೂಡಲೇ ಅರ್ಜುನನು ಹಗಲೂ ರಾತ್ರಿ ಎನ್ನದೇ ಬೆಟ್ಟದಿಂದ ಬಂಗಾರವನ್ನು ಬಗೆದೂ ಬಗೆದೂ ಕೊಡುತ್ತಲೇ ಹೋದ. ಗ್ರಾಮಸ್ಥರು ಮನಸೋ ಇಚ್ಚೆ ಬಂಗಾರವನ್ನು ಪಡೆದುಕೊಂಡು ಹೊದರು ಬೆಟ್ಟ ಕಿಂಚಿತ್ತೂ ಕಡಿಮೆಯಾಗಲಿಲ್ಲ.
ಅರ್ಜುನ ಬಂಗಾರವನ್ನು ದಾನ ಕೊಡುತ್ತಿರುವ ವಿಷಯ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ ಹರಡುತ್ತಲೇ ಅಕ್ಕ ಪಕ್ಕದ ಹಳ್ಳಿಯವರಿಗೆಲ್ಲಾ ತಲುಪಿ ಅವರುಗಳು ಸಹಾ ಓಡೋಡಿ ಬಂದು ದಾನಕ್ಕಾಗಿ ಸರದಿ ಸಾಲಿನಲ್ಲಿ ನಿಲುತ್ತಲೇ ಹೋದರು. ಅದಾಗಲೇ ದಣಿದಿದ್ದ ಅರ್ಜುನನಿಗೆ ಅವರುಗಳ ಹೊಗಳಿಕೆ ಮತ್ತಷ್ಟು ಉತ್ತೇಜನ ತರುತ್ತಿದ್ದ ಕಾರಣ ತನ್ನ ಆಯಾಸವನ್ನು ಲೆಕ್ಕಿಸದೇ ಕೃಷ್ಣ ಮುಂದೆ ಸೋಲಬಾರದು ಎಂಬ ಅಹಂಕಾರದಿಂದ ದಾನವನ್ನು ನಿಲ್ಲಿಸದೇ ಮುಂದುವರಿಸುತ್ತಲೇ ಹೋದ.
ತದ ನಂತರ ಕರ್ಣನನ್ನು ಕರೆದ ಕೃಷ್ಣಾ ಮತ್ತೆರಡು ಚಿನ್ನದ ಪರ್ವತಗಳನ್ನು ತೋರಿಸಿ ಮತ್ತದೇ ನಿಯಮವನ್ನು ತಿಳಿಸಿ ಈ ಬೆಟ್ಟದಲ್ಲಿ ಒಂದು ಚೂರೂ ಉಳಿಸದೇ ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಿಸದೇ ಪ್ರತಿ ಭಾಗವನ್ನು ದಾನ ಮಾಡಲು ತಿಳಿಸಿದ.
ಕೃಷ್ಣನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡ ಕರ್ಣ ಕೃಷ್ಣನಿಗೆ ಪ್ರತಿವಂದಿಸಿ ಕೂಡಲೇ ಬೆಟ್ಟದ ಮತ್ತೊಂದು ಭಾಗದ ಹಳ್ಳಿಗೆ ಹೋಗಿ ಅಲ್ಲಿನ ಗ್ರಾಮಸ್ಥರನ್ನು ಕರೆದು, ನೋಡೀ, ಆ ಎರಡು ಚಿನ್ನದ ಬೆಟ್ಟಗಳು ನಿಮ್ಮದು, ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿ ಸುಮ್ಮನೆ ಕೃಷ್ಣನ ಬಳಿ ಬಂದು ನೀವು ಹೇಳಿದ ಕೆಲಸ ಮುಗಿಯುತು ಎಂದು ಹೇಳಿ ವಂದಿಸಿ ತನ್ನ ಪಾಡಿಗೆ ತಾನು ಹೊರಟೇ ಬಿಟ್ಟ.
ಕರ್ಣನ ಈ ಅಲೋಚನೆ ತನಗೇಕೆ ಬರಲಿಲ್ಲ? ಎಂದು ಅರ್ಜುನ ಗರಬಡಿದವನಂತೆ ಅಲ್ಲಿಯೇ ಮೂಕವಿಸ್ಮಿತನಾಗಿ ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಕೃಷ್ಣ, ಹಾಗೆಯೇ ಮುಗುಳ್ನಕ್ಕು ನೋಡಿದೆಯಾ ಅರ್ಜುನ ಕರ್ಣನನ್ನು ಜನರು ದಾನ ಶೂರನೆಂದು ಏಕೆ ಕರೆಯುತ್ತಾರೆ ಎಂದು ತಿಳಿಯಿತೇ? ಎಂದು ಕೇಳಿದ.
ಆದರೆ ಕರ್ಣನ ಮುಂದೆ ತನಗಾದ ಸೋಲನ್ನು ಅರಗಿಸಿಕೊಳ್ಳಲಾಗದೇ ಅಹಂಕಾರದಿಂದ ಬುಸು ಬುಸುಗುಟ್ಟುತ್ತಿದ್ದ ಅರ್ಜುನನಿಗೆ ತನ್ನ ತಪ್ಪಿನ ಅರಿವೇ ಆಗಿರಲಿಲ್ಲ. ಆಗ ಮಾತನ್ನು ಮುಂದುವರಿಸಿದ ಕೃಷ್ಣಾ, ನೋಡು ಅರ್ಜುನ, ನೀನು ದಾನ ಕೊಡುವ ಮೊದಲು ಹುಂಬತನದಿಂದ ಎಲ್ಲರಿಗೂ ನೀನು ದಾನ ಕೊಡುತ್ತಿರುವ ವಿಷಯವನ್ನು ಡಂಗೂರ ಹೊಡಿಸಿ ತಿಳಿಸಿದೆ. ಆ ಚಿನ್ನದ ಬೆಟ್ಟವನ್ನು ನಾನು ಸೃಷ್ಟಿ ಮಾಡಿ ಕೊಟ್ಟಿದ್ದರು, ದಾನವನ್ನು ಪಡೆದವರೆಲ್ಲರೂ ನಿನ್ನನ್ನು ದಾನ ಶೂರ ಎಂದು ಹೊಗಳಲಿ ಎಂದು ನಿರೀಕ್ಷಿಸಿದೆ. ಹಾಗಾಗಿ ನೀನು ಎಷ್ಟು ದಾನ ಮಾಡಿದರೂ ಅದು ನಿನಗೆ ದಕ್ಕದೇ ಹೋಗಿದ್ದಲ್ಲದೇ, ನೀನು ಎಷ್ಟು ದಾನ ಮಾಡಿದರೂ ಬೆಟ್ಟ ಕಿಂಚಿತ್ತೂ ಕಡಿಮೆ ಆಗಲಿಲ್ಲ. ನೀನು ವಿನಾಕಾರಣ ಆಯಾಸ ಪಟ್ಟೆ.
ಆದರೆ ಅದೇ ಕರ್ಣನಿಗೆ ದಾನದಿಂದ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಹಾಗಾಗಿ ಆತನಿಗೆ ತನಗೆ ವಹಿಸಿದ ಕೆಲಸವನ್ನು ಸುಲಭವಾಗಿ ಮುಗಿಸಬೇಕು ಎಂಬುದಷ್ಟೇ ಆತನ ತಲೆಯಲ್ಲಿ ಇದ್ದ ಕಾರಣ, ಯಾವುದೇ ಹಾರಾಟ ಚೀರಾಟವಿಲ್ಲದೇ, ಗ್ರಾಮಸ್ಥರನ್ನು ಕರೆದು ತಾನು ಯಾರೆಂದೂ ತಿಳಿಸದೇ ಆ ಚಿನ್ನದ ಬೆಟ್ಟವನ್ನು ಸರಿ ಸಮನಾಗಿ ಹಂಚಿಕೊಳ್ಳಲು ತಿಳಿಸಿದ್ದಲ್ಲದೇ, ತಾನು ಮಾಡಿದ ದಾನಕ್ಕಾಗಿ ಅಲ್ಲಿನ ಜನರು ತನ್ನನ್ನು ಹಾಡಿ ಹೊಗಳಲಿ ಎಂಬ ಕಿಂಚಿತ್ತೂ ನಿರೀಕ್ಷೆ ಇಲ್ಲದೇ, ಅಲ್ಲಿಂದ ಶೀಘ್ರವಾಗಿ ನನ್ನ ಬಳಿಗೆ ಬಂದು ವಹಿಸಿದ್ದ ಕೆಲಸವನ್ನು ಮುಗಿಸಿದೆ ಎಂದು ವಂದಿಸಿ ಹೋಗಿ ಬಿಟ್ಟ.
ಯಾವುದೇ ಪ್ರಶಂಸೆ ಅಥವಾ ಕೃತಜ್ಞತೆಯ ರೂಪದಲ್ಲಿ ಪ್ರತಿ ನಿರೀಕ್ಷೆಯೊಂದಿಗೆ ಮಾಡುವ ಉಪಕಾರ ಅಥವಾ ನೀಡುವ ಉಡುಗೊರೆ ಅದು ಉಪಕಾರ ಅಥವಾ ಉಡುಗೊರೆ ಎನಿಸಿಕೊಳ್ಳುವುದಿಲ್ಲ. ಅದು ಶುದ್ಧ ವ್ಯಾಪಾರವಾಗುತ್ತದೆ ಎಂದು ತಿಳಿಸಿದ.
ಭಗವಂತನೇ ನಮಗೆಲ್ಲವನ್ನೂ ಕೊಟ್ಟಿರುವುದು ಅವನ ಮುಂದೆ ನಮ್ಮದೇನೂ ಇಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದಿರುವೆವು ಸುಮ್ಮನೆ ಎಂಬ ಮಾತು ತಿಳಿದಿದ್ದರೂ, ಇಂದಿನವರು ದೇವಾಲಯದಲ್ಲಿ ತಾವು ಇಷ್ಟು ಕೊಟ್ಟು ಅಷ್ಟು ದೊಡ್ಡದಾಗಿ ದಾನಿಗಳು ಎಂದು ಬರೆಸಿಕೊಳ್ಳುತ್ತಾರೆ. ಮದುವೆ ಮುಂಜಿ, ನಾಮಕರಣ, ಹುಟ್ಟಿದ ಹಬ್ಬಗಳಿಗೆ ಹೊಗಿ ಸಣ್ಣ ಉಡುಗೊರೆಯೊಂದನ್ನು ನೀಡಿ ಹೊಟ್ಟೆ ಬಿರಿಯುವಷ್ಟು ತಿಂದುಂಡು ಅವರು ಪ್ರತಿ ಉಡುಗೊರೆಯನ್ನಾಗಿ (ರಿಟನ್ ಗಿಫ್ಟ್) ಏನು ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಳ್ಳುವುದನ್ನು ನೋಡಿದಾಗ ಈ ಕೆಳಗಿನ ಶುಭಾಷಿತ ನೆನಪಾಗುತ್ತದೆ.
ಪರೋಪಕಾರಾಯ ಫಲಂತಿ ವೃಕ್ಷಾ:, ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ:, ಪರೋಪಕಾರಾರ್ಥಮಿದಂ ಶರೀರಂ ||
ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲವನ್ನು ನೀಡುತ್ತದೆ. ನದಿಗಳು ಹರಿಯುತ್ತವೆ, ಹಸುವು ಹಾಲನ್ನು ಕೊಡುತ್ತದೆ. ಅದರಂತೆ ಪರೋಪಕಾರಕ್ಕಾಗಿಯೇ ನಮ್ಮೀ ಶರೀರವಿರುವುದು ಎನ್ನುವುದು ಈ ಶುಭಾಷಿತದ ಅರ್ಥ ತಿಳಿದಿದ್ದರೂ, ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬ ಮಾತು ಗೊತ್ತಿದ್ದರೂ, ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯ, ದಾನ-ಧರ್ಮದಲ್ಲಿ ಮತ್ತೊಪ್ಪರಿಂದ ನಿರೀಕ್ಷೆ ಪಡುವುದು ಸರಿಯಲ್ಲ.
ಅಂದು ದ್ವಾಪರ ಯುಗದಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ ಮಾತು ಇಂದಿಗೂ ಸಹಾ ಅಕ್ಷರಶಃ ಅನ್ವಯವಾಗುತ್ತದೆ ಅಲ್ಲವೇ?
ಆಸೆಯೇ ದುಃಖಕ್ಕೆ ಮೂಲ. ಹಾಗಾಗಿ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸದೇ ಇರುವುದೇ ಸಂತೋಷಕ್ಕೆ ರಹದಾರಿ.
ಏನಂತೀರಿ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ
Sundaravaada Kathe, Namma jeevanadalli naavene madidru we expect exposure. naav yaarge ene sahaya madidru adanna naav bartha tandirlilla, e satya artha madkondre jeevana sundara.
LikeLiked by 1 person
[…] […]
LikeLike