ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್ ನಿನಗ್ ಇಷ್ಟಾ ಇಲ್ಲೇನ್? ಎಂದು ಹೇಳಿ ಅಮೇರಿಕಾದ ಆಹಾರ ಪದ್ದತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿಸಿದ್ದದ್ದನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿ ಮತ್ತು ಆಶ್ಚರ್ಯವಾಗಿದ್ದಲ್ಲದೇ, ನನಗೇ ಅರಿವಿಲ್ಲದಂತೆಯೇ ನಮ್ಮ ಆಹಾರ ಪದ್ದತಿಗಳ ಬಗ್ಗೆ ಹೆಮ್ಮೆ ಮೂಡಿದ್ದಂತೂ ಸತ್ಯ.

mcdನನ್ನ ಸ್ನೇಹಿತನೇ ಹೇಳಿದಂತೆ, ಅಮೆರಿಕಾದಲ್ಲಿ ಎಲ್ಲರೂ ಸಿರಿವಂತರೇನಲ್ಲ, ಅಲ್ಲಿಯೂ ಸಹಾ ಅತ್ಯಂತ ಬಡ ಕಾರ್ಮಿಕ ವರ್ಗದವರು ಇದ್ದು ಅವರೆಲ್ಲರೂ ತಮ್ಮ ದಿನ ನಿತ್ಯದ ಆಹಾರವಾಗಿ  ಮೆಕ್ಡೊನಾಲ್ಡ್ಸ್, ಕೆ.ಎಫ್.ಸಿ  ಪಿಜ್ಜಾ ಹಟ್ ಗಳಿಂದ ಬರ್ಗರ್, ಚಿಕನ್ ಮತ್ತು ಪಿಜ್ಜಾಗಳಂತಹ  ಜಂಕ್ ಫುಡ್ ಅಂದರೆ ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಚಿಸಿಕೊಂಡರೆ, ಅಮೆರಿಕ ಮತ್ತು ಯುರೋಪಿನ ಸಿರಿವಂತ  ಮಿಲಿಯನೇರ್ಗಳು ಮಾತ್ರಾ ತಾಜಾ ತರಕಾರಿಗಳನ್ನು ಬೇಯಿಸಿ ತಿನ್ನುತ್ತಾರೆ. ಅಲ್ಲಿ  ತಾಜಾ ಹಿಟ್ಟಿನಿಂದ ತಯಾರಿಸಿದ ಬಿಸಿ ಬಿಸಿ ಬ್ರೆಡ್ (ರೊಟ್ಟಿ)ಗಳ ಜೊತೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಲಾಡ್ ಗಳನ್ನು ತಿನ್ನುವವರು ನಿಜಕ್ಕೂ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಂದರೆ ಅಲ್ಲಿ ಶ್ರೀಮಂತರಿಗೆ ಮಾತ್ರ ತಾಜಾ ತರಕಾರಿಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ.

ದುರಾದೃಷ್ಟವಷಾತ್ ಬಡ ಜನರು ಮಾತ್ರಾ  ಪ್ಯಾಕೇಜ್ ಮಾಡಿದ ಆಹಾರವನ್ನು ತಿನ್ನುತ್ತಾರೆ. ವಾರಕ್ಕೊಮ್ಮೆ ತಮಗೆ ಅವಶ್ಯಕವಾಗಿರುವ ಆಹಾರವನ್ನು ಖರೀದಿಸಿ ಅವುಗಳನ್ನು  ಫ್ರೀಜರ್ನಲ್ಲಿ ಇಟ್ಟುಕೊಂಡು ಅಗತ್ಯವಿದ್ದಾಗ  ಮೈಕ್ರೋ ವೇವ್ ಒಲೆಯಲ್ಲಿ ಬಿಸಿ ಮಾಡಿ ಸೇವಿಸುತ್ತಾರೆ.

kfcಆದರೆ ಅದೇ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿ, ಶ್ರೀಮಂತರು ಇತ್ತೀಚೆಗೆ ತಮ್ಮ ಮನೆಗಳ ಫ್ರೀಜರ್ಗಳಲ್ಲಿ ಇದೇ ಪ್ಯಾಕ್ಡ್ ಜಂಕ್ ಪುಡ್ ಗಳನ್ನು ಸಂಗ್ರಹಿಸಿಕೊಳ್ಳುವುದು ಐಶಾರಾಮ್ಯ ಎಂದು ಭಾವಿಸಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ಇಷ್ಟಕ್ಕೇ ಸೀಮಿತವಾಗಿರಿಸದೇ,  ಮಕ್ಕಳ ಹುಟ್ಟುಹಬ್ಬ ಅಥವಾ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಇದೇ  ಮೆಕ್ಡೊನಾಲ್ಡ್ಸ್ ಪಿಜ್ಜಾ ಹಟ್ , ಕೆ.ಎಫ್.ಸಿಗಳಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಅದೇ  ಅಮೆರಿಕದಲ್ಲಿನ  ಶ್ರೀಮಂತರು ಬಿಡಿ ಯಾವುದೇ, ಮಧ್ಯಮ ವರ್ಗದವರೂ ಸಹಾ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಈ ಜಂಕ್ ಪುಡ್ ಜಾಯಿಂಟ್ಸ್ ಗಳಲ್ಲಿ ಆಚರಿಸಲು ಇಚ್ಚಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.

ft1ಅದೇ ಭಾರತದ ಪ್ರತೀ ಬಡವರ ಮನೆಗಳಲ್ಲಿಯೂ ತಾಜಾ ತಾಜವಾಗಿ ತಯಾರಿಸಿದ ಬಿಸಿ ಬಿಸಿ ರೊಟ್ಟಿ, ಅನ್ನದೊಂದಿಗೆ ತಾಜಾ ತರಕಾರಿಗಳಿಂದ ತಯಾರಿಸಿದ ಪಲ್ಯಗಳು, ವಿಧ ವಿಧವಾದ ದಾಲ್ ಮತ್ತು ತಾಜಾವಾದ ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿಗಳ ಜೊತೆ ಇಡೀ ಮನೆಯವರೆಲ್ಲಾ ಒಟ್ಟಾಗಿ ಸಂತೋಷದಿಂದ ಆಹಾರವನ್ನು ಸೇವಿಸುತ್ತಾರೆಯೇ ಹೊರತು ಶೈತ್ಯೀಕರಿಸಿದ ಆಹಾರವನ್ನು ಸೇವಿಸುವುದಿಲ್ಲ, ಸೇವಿಸುವುದಿಲ್ಲ ಎನ್ನುವುದಕ್ಕಿಂತ ಅಂತಹ ಆಹಾರ ಪದಾರ್ಥಗಳನ್ನು ಖರೀದಿಸಲು ಶಕ್ತರಾಗಿಲ್ಲ ಎನ್ನುವುದು ವಾಸ್ತವಾಂಶವಾಗಿದೆ.

junkಅಂಧ ಪಾಶ್ಚಾತ್ಯೀಕರಣದಿಂದ ಐಶಾರಾಮ್ಯದ ಸಂಕೇತ ಎಂದು ಪ್ಯಾಕ್ಡ್ ಆಹಾರ ತಿನ್ನುವುದು ನಿಜಕ್ಕೂ ಗುಲಾಮಗಿರಿಯ ಮನಸ್ಥಿತಿ ನಮ್ಮವರದ್ದು ಎಂದರೂ ತಪ್ಪಾಗದು.  ಯುರೋಪ್, ಅಮೇರಿಕಾ ದೇಶದ ಜನರು ನಮ್ಮ ಜನಸಾಮಾನ್ಯರಂತೆ ತಾಜಾ ಆಹಾರವನ್ನು ತಿನ್ನಲು ಹಂಬಲಿಸುತ್ತಿದ್ದರೆ, ಅದೇ ನಮ್ಮವರು ಅಲ್ಲಿಯ ಬಡ ಜನರಂತೆ ಫ್ರಿಜ್ನಲ್ಲಿ ಇರಿಸಲಾಗಿರುವ ಹಳೆಯ ಪ್ಯಾಕ್ ಮಾಡಿದ ಆಹಾರವನ್ನು ತಿನ್ನಲು ಹಂಬಲಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತಿದೆ. ಇಲ್ಲಿ ಬಡವ ಬಲ್ಲಿದ ಎನ್ನುವುದಕ್ಕಿಂತಲೂ, ಜಂಕ್ ಆಹಾರ ದೇಹಕ್ಕೆ ಅನಾರೋಗ್ಯಕ್ಕೆ ಈಡು ಮಾಡಿದರೆ, ಅದೇ ತಾಜಾ ಆಹಾರ ತಿನ್ನುವುದು ಆರೋಗ್ಯಕರ ಎನ್ನುವುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ.

ph2ಇಲ್ಲಿ ನಮಗೆ ಸುಲಭವಾಗಿ ಲಭ್ಯವಿರುವ ಆಹಾರಗಳನ್ನು ನಾವು ಲಘುವಾಗಿ ಪರಿಗಣಿಸಿ, ಅಲ್ಲಿನ ಬಡತನದ ಆಹಾರವನ್ನು  ಅಳವಡಿಸಿಕೊಳ್ಳಲು ನಾವು ಬಯಸಿದರೇ, ಅದೇ  ಅಮೇರಿಕನ್ನರು ನಮ್ಮ ಜನಸಾಮಾನ್ಯರ ಆಹಾರಗಳನ್ನು ಸೇವಿಸುವುದು  ಐಷಾರಾಮ್ಯ  ಎಂದು ಭಾವಿಸುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ತಾಜಾ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಹವಾಮಾನ ಮತ್ತು ಬೆಳೆಗಳನ್ನು ಅವಲಂಬಿತವಾಗಿ ಏರಿಳಿತ ಕಂಡರೆ, ಪ್ಯಾಕೇಜ್ ಮಾಡಿದ ಆಹಾರದ ಬೆಲೆಗಳು ವರ್ಷಪೂರ್ತಿ ಸ್ಥಿರವಾಗಿರುವುದಲ್ಲದೇ, ಅವುಗಳ ಗಡುವು ದಿನಾಂಕಗಳು ಹತ್ತಿರ ಬರುತ್ತಿದ್ದಂತೆ,ಬೆಲೆಗಳು ಅಗ್ಗವಾಗುತ್ತದೆ. ಡಬ್ಬಿಯಲ್ಲಿಟ್ಟ ಆಹಾರವು ಕೆಟ್ಟು ಹೋಗುವ ಸಂಭವವಿರುವ ಕಾರಣ ವ್ಯಾಪಾರಿಗಳು ಕೆಲವೊಮ್ಮೆ ಉಚಿತವಾಗಿಯೂ ಹಂಚುವ ಉದಾಹರಣೆಗಳನ್ನು ನೋಡಬಹುದಾಗಿದೆ. ಅನೇಕ ಬಾರಿ ಈ ರೀತಿಯ ಉಚಿತವಾದ ಆಹಾರಗಳನ್ನು ಪಡೆಯಲು ಅಂಗಡಿಯ ಮುಂದೆ ತಡರಾತ್ರಿಯವರೆಗೂ ಸಾವಿರಾರು ಜನರು ಲಗ್ಗೆ ಹಾಕಿ ಪರಸ್ಪರ ಹೊದೆದಾಡಿರುವ ಪ್ರಸಂಗಳಿಗೇನೂ ಕಡಿಮೆ ಏನಿಲ್ಲ.

ff1ಅದೇ 135+ ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ  ಇಲ್ಲಿಯವರೆಗೆ ತಾಜಾ ಹಣ್ಣು ಮತ್ತು ತರಕಾರಿಗಳಿಗೆ ಅಂತಹ ಕೊರತೆ ಇರದೇ ಋತುಗಳ ಅನುಸಾರವಾಗಿ ಅಲ್ಪಪ್ರಮಾಣದ ಬೆಲೆ ಏರಿಕೆಗಳೊಂದಿಗೆ ಲಭ್ಯವಿರುವ ಕಾರಣ ನಮ್ಮ ದೇಶದ ಸಾಮಾನ್ಯ ಜನರೂ ತಾಜಾ ತಾಜವಾದ ಶುಚಿ ಮತ್ತು ರುಚಿ ಯಾದ  ಆಹಾರವನ್ನು ಸೇವಿಸುವಷ್ಟು  ಅದೃಷ್ಟಪಡೆದಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದುರಾದೃಷ್ಟವಷಾತ್ ಗುಲಾಮೀ ದಾಸ್ಯತನದಿಂದ ಮತ್ತು ಪ್ರತಿಷ್ಟೆಯ ಸಂಕೇತ ಎಂದು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಹಲವರು  ಶ್ರೀಮಂತಿಕೆಯ ಪ್ರತೀಕ ಎಂದು ಬಹುದಿನ ಕೆಡದಂತೆ ರಾಸಾಯನಿಕ ಸಂರಕ್ಷಕಗಳನ್ನು ಬೆರೆಸಿ ಪ್ಯಾಕೇಜ್ ಮಾಡಿದ ಆಹಾರಕ್ಕೆ ಜೋತು ಬೀಳುತ್ತಿರುವ ಮೂಲಕ ವಿನಾಕಾರಣ ತಮ್ಮ ಮೇಲೆ ತಾವೇ ಅನಾರೋಗ್ಯವನ್ನು ಹೇರಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ.

rotimakingನಿಜ ಹೇಳಬೇಕೆಂದರೆ ಜಂಕ್ ಫುಡ್ ಸೇವಿಸುತ್ತಿರುವ ಪಟ್ಟಣವಾದ ಸಿರಿವಂತರುಗಳು ಇಪ್ಪತ್ತೈದು ಮೂವ್ವತ್ತು ವರ್ಷಕ್ಕೇ ಸ್ಥೂಲಕಾಯರಾಗಿ ಅಧಿಕ ರಕ್ತದೊತ್ತಡ, ಮಧುಮೇಹ ಇಲ್ಲವೇ ಹೃದಯಾಘಾತಕ್ಕೆ ಒಳಗಾಗಿ ಆರೋಗ್ಯಕ್ಕಾಗಿ ಲಕ್ಷಾಂತರ ಹಣವನ್ನು ವ್ಯಯಿಸುತ್ತಿದ್ದರೆ, ಅದೇ  ಪಟ್ಟಣದಲ್ಲಿರುವ ಮಧ್ಯಮ ವರ್ಗದವರು ಮತ್ತು ಹಳ್ಳಿಗರು ತಾಜಾ ತಾಜಾ ಆಹಾರವನ್ನು ಸೇವಿಸಿ ದೀರ್ಘಾಯುಷ್ಯವಂತರಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಇವೆಲ್ಲವುಗಳ ಅರಿವಿದ್ದರಿಂದಲೇ ಏನೋ? ನಮ್ಮ ಪೂರ್ವಜರು ಪ್ರತೀ ದಿನವೂ ಪ್ರತೀ ಹೊತ್ತು ತಾಜಾ ತಾಜಾ ಆಹಾರವನ್ನು ಮನೆಗಳಲ್ಲೇ ತಯಾರಿಸಿಕೊಂಡು ಸೇವಿಸುವ ಪದ್ದತಿಯನ್ನು ರೂಢಿಗೆ ತಂದಿದ್ದರು ಎಂದೆನಿಸುತ್ತದೆ ಅಲ್ಲವೇ? ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೇ,  ದೊಡ್ಡವರ ಮನೆ ನೋಟ ಚೆಂದ, ಬಡವರ ಮನೆಯ ಊಟ ಚೆಂದಾ! ಎಂಬ ಗಾದೆಯೂ ರೂಢಿಗೆ ಬಂದಿರ ಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ  ಆತ್ಮೀಯರೊಬ್ಬರು ಕಳುಹಿಸಿ ಕೊಟ್ಟಿದ್ದ ಸಂದೇಶದಿಂದ ಪ್ರೇರಿತವಾದ ಲೇಖನವಾಗಿದೆ.

Leave a comment