ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ನಮ್ಮ ಸನಾತನ ಧರ್ಮದಲ್ಲಿ ನಮಗೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಅಧ್ಭುತವಾದ ಪುರಾಣ ಪುಣ್ಯ ಗ್ರಂಥಗಳು ಮತ್ತು  ಕಥೆಗಳೇ ಪವಿತ್ರವಾಗಿದ್ದು ಅದರ ಆಧಾರದಲ್ಲಿ ನಮ್ಮ ಜೀವನ ಪದ್ದತಿಯನ್ನು ರೂಡಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಈ ರೀತಿಯ ಪುರಾಣ ಪುಣ್ಯ ಕಥೆಗಳೆಲ್ಲವೂ  ಕೇವಲ ಕಾಲ್ಪನಿಕ ಕಥೆಯಷ್ಟೇ ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡದೇ ಇಲ್ಲಾ ಎನ್ನುವ ವಿತಂಡ ವಾದವೂ ಇದೆ. ಆದರೆ  ಇಂತಹವರಿಗೆ ಸೂಕ್ತವಾದ ಉತ್ತರವನ್ನು ನೀಡಬಹುದಾದ ಮತ್ತು  ಜಗತ್ತಿನಲ್ಲಿ ಅತಿ ವಿರಳವಾಗಿ ಕಂಡು ಬರುವ ಪಾರ್ವರ್ತಿ ಸಮೇತನಾಗಿ  ಶಯನ ಭಂಗಿಯಲ್ಲಿರುವ ಪರಶಿವನಿರುವ ಪವಿತ್ರ ಕ್ಷೇತ್ರ ಸುರಟಪಲ್ಲಿಯ ಶ್ರೀ ಪಳ್ಳಿಕೊಂಡೇಶ್ವರ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ.

sumudra4ನಮ್ಮ ಪುರಾಣದ ಪ್ರಕಾರ ದೇವತೆಗಳು ಮತ್ತು ರಾಕ್ಷಸರು ಇಬ್ಬರೂ ಸೇರಿ ಅಮೃತವನ್ನು ಪಡೆಯುವ ಸಲುವಾಗಿ   ಕ್ಷೀರಸಾಗರದ ಮಂಥನ ಮಾಡಲು ಮುಂದಾದಾಗ,  ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ಆದಿಶೇಷನನ್ನು ಹಗ್ಗವನ್ನಾಗಿಸಿ ಸಮುದ್ರ ಮಂಥನವನ್ನು ಮಾಡುವ ಸಮಯದಲ್ಲಿ ಮಹಾಲಕ್ಷ್ಮೀ, ಕಾಮಧೇನು ಮುಂತಾದವುಗಳು ದೊರೆಯುವುದರ ಜೊತೆ,  ಅಮೃತ ದೊರೆಯುವ ಮುನ್ನಾ, ಹಾಲಾಹಲ ವಿಷವೂ ಉತ್ಪತ್ತಿಯಾಗಿ ಆ  ವಿಷವು ಹೊರಸೂಸಿದ ಮಾರಕ ಧೂಮವು ಇಡೀ ಜಗತ್ತನ್ನೇ ಆವರಿಸಿಕೊಂಡು, ಸಮುದ್ರ ಮಂಥನ ಮಾಡುತ್ತಿದ್ದ ದೇವಾನು ದೇವತೆಗಳು ಮತ್ತು ಅಸುರರಲ್ಲದೇ ಇಡೀ ಮನುಕುಲಕ್ಕೇ ಮಾರಕವಾಗಿ ಎಲ್ಲರೂ  ಉಸಿರುಗಟ್ಟುವಿಕೆಯಿಂದ ಕುಸಿದು ಬೀಳುವುದನ್ನು ಗಮನಿಸಿ ಇದನ್ನು ತಡೆಯಲು ಬ್ರಹ್ಮ ವಿಷ್ಣು ಆದಿಯಾಗಿ ವಿಫಲರಾದಾಗ ಅಂತಿಮವಾಗಿ  ಎಲ್ಲರೂ ಪರಶಿವನಲ್ಲಿ ಮೊರೆ ಹೋಗುತ್ತಾರೆ.

shiva1ಭಕ್ತರ ಬೇಡಿಕೆಗಳನ್ನು ಇಲ್ಲಾ ಎನ್ನದಂತೆ ಸದಾಕಾಲವೂ ಪೂರೈಸುವ ಕರುಣಾಸಾಗರ ಪರಮೇಶ್ವರನು ಹಿಂದೂ ಮುಂದೂ ಯೋಚಿಸದೇ,  ಪ್ರಪಂಚದ ಸಕಲ ಜೀವರಾಶಿಗಳನ್ನು ರಕ್ಷಿಸುವ ಸಲುವಾಗಿ ಆ ಹಾಲಾಹಲವನ್ನು ಕುಡಿಯಲು ಮುಂದಾದ ವಿಷಯ ಪಾರ್ವತಿ ದೇವಿಗೆ ತಿಳಿದು ಆಕೆ ಕೈಲಾಸದಿಂದ ಬರುವಷ್ಟರಲ್ಲಿ ಪರಶಿವನು ಹಾಲಾಹಲವನ್ನು ಕುಡಿದು ಇನ್ನೇನು ವಿಷ ಗಂಟಲು  ದಾಟಿ ಜಠರಕ್ಕೆ ಪ್ರವೇಶಿಸುವ ಮುನ್ನವೇ ಪಾರ್ವತಿ ದೇವಿಯು ತನ್ನ ಪತಿ ಪರಮೇಶ್ವರನ ಗಂಟಲನ್ನು ಬಿಗಿಯಾಗಿ ಹಿಡಿದುಕೊಂಡು ಆ ಕಾರ್ಕೋಟಕ ವಿಷ ಜಠರವನ್ನು ತಲುಪದಂತೆ ತಡೆಯುವ ಮೂಲಕ  ಪರಶಿವನ ಪ್ರಾಣವನ್ನು ಕಾಪಾಡುತ್ತಾಳೆ. ಹೀಗೆ  ವಿಷವನ್ನು ಕುಡಿದ ಪರಶಿವ ವಿಷಕಂಠ ಎನಿಸಿಕೊಂಡಿದ್ದಲ್ಲದೇ,  ಆ ವಿಷವು ಗಂಟಲಲ್ಲೇ ಸಿಕ್ಕಿಕೊಂಡು ಕುತ್ತಿಗೆಯ ಭಾಗ ನೀಲಿ ಬಣ್ಣಕ್ಕೆ ತಿರುಗಿ ನೀಲಕಂಠ ಎಂಬ ಹೆಸರೂ ಬರುತ್ತದೆ.

suru3ಈ ಪ್ರಸಂಗದ ನಡೆದ ನಂತರ  ಶಿವ ಪಾರ್ವತಿಯರು ತಮ್ಮ ಪರಿವಾರದ ಸಮೇತರಾಗಿ  ಕೈಲಾಸಕ್ಕೆ ಹೋಗುವ ಸಮಯದಲ್ಲಿ ಪರಶಿವನಿಗೆ ಒಂದು ರೀತಿಯಲ್ಲಿ ತಲೆ ಸುತ್ತಿದಂತಾಗಿ ಆತ ವಿಶ್ರಾಂತಿಗಾಗಿ ಒಂದು ಪ್ರದೇಶದಲ್ಲಿ ತನ್ನ ಪತ್ನಿ ಪಾರ್ವತಿಯ ತೊಡೆಯ ಮೇಲೆ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ಪ್ರಯಾಣವನ್ನು ಮುಂದುವರೆಸುತ್ತಾರೆ. ಹಾಗೆ ಪರಶಿವನು ವಿಶ್ರಾಂತಿ ಪಡೆದ ಸ್ಥಳವೇ ಇಂದು ತಮಿಳುನಾಡು ಮತ್ತು ಆಂಧ್ರ ಪದೇಶದ ಗಡಿಬಾಗದಲ್ಲಿರುವ  ಸುರುಟ್ಟುಪಳ್ಳಿ ಎಂದು ಹೇಳಲಾಗುತ್ತದೆ. ತಮಿಳುಭಾಷೆಯಲ್ಲಿ  ಸುರುಟು ಎಂದರೆ ತಲೆಸುತ್ತು ಎಂಬ ಅರ್ಥವಿರುವ ಕಾರಣ ಶಿವನಿಗೆ ತಲೆಸುತ್ತು ಬಂದ ಈ ಪ್ರದೇಶಕ್ಕೆ ಸುರುಟ್ಟುಪಳ್ಳಿ ಎಂಬ ಹೆಸರು ಬಂದಿದ್ದು ಅದರ ನೆನಪಿಗಾಗಿ  ಆ ಪ್ರದೇಶದಲ್ಲಿ ಪರಶಿವನು ಪಾರ್ವತೀ ದೇವಿಯ ಮಡಿಲಲ್ಲಿ  ಒರಗಿರುವ ಭಂಗಿಯಲ್ಲಿರುವ  16 ಅಡಿಗಳಷ್ಟು ದೊಡ್ಡದಾದ ಪ್ರತಿಮೆಯನ್ನು ಸ್ಥಾಪಿಸಿ ಅಲ್ಲೊಂದು ದೇವಾಲಯವನ್ನು ಕಟ್ಟಿ ಆ ದೇವರಿಗೆ  ಪಲ್ಲಿಕೊಂಡೇಶ್ವರ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಪಲ್ಲಿ ಕೊಂಡೇಶ್ವರ ಎಂದರೆ ಒರಗಿರುವ ದೇವರು ದೇವರು ಎಂಬ ಅರ್ಥವೂ ಇರುವುದು ಗಮನಾರ್ಹವಾಗಿದೆ.  ಸಾಮಾನ್ಯವಾಗಿ ಭಗವಾನ್ ವಿಷ್ಣುವಿನನ್ನು  ರಂಗನಾಥ ಸ್ವಾಮಿಯ ರೂಪದಲ್ಲಿ ಈ ರೀತಿಯಾಗಿ ಮಲಗಿರುವ ದೇವಾಲಗಳನ್ನು ವಿವಿದೆಡೆಯಲ್ಲಿ ಕಾಣಬಹುದಾದರೆ, ಈ ರೀತಿ ವಿಶಿಷ್ಟವಾಗಿ ಮಲಗಿರುವ ಭಂಗಿಯಲ್ಲಿರುವ ಪರಶಿವನನ್ನು ಕಾಣುವುದು ಬಹುಶಃ ಏಕೈಕ ಸ್ಥಳ ಇದಾಗಿದೆ ಎಂದರೂ  ತಪ್ಪಾಗದು.

ಪುರಾಣ ಪ್ರಸಿದ್ಧ ಈ ಹಿಂದೂ ದೇವಾಲಯವು ಇಂದಿನ ತಮಿಳುನಾಡು ಮತ್ತು  ಆಂಧ್ರಪ್ರದೇಶದ ಗಡಿಯಲ್ಲಿ ಚಿತ್ತೂರ್ ಜಿಲ್ಲೆಗೆ ಸೇರಿರುವ  ಅರಣಿ ನದಿಯ ದಡದಲ್ಲಿ ಹಸಿರಿನಿಂದ ಕೂಡಿದ ಮತ್ತು ಬೆಟ್ಟಗಳಿಂದ ಆವೃತವಾದ ಪ್ರಶಾಂತ ವಾತಾವರಣವಿರುವ ಸುರುಟುಪಲ್ಲಿ ಎಂಬ ಹಳ್ಳಿಯಲ್ಲಿದೆ. ಸಾಮಾನ್ಯವಾಗಿ ಲಿಂಗರೂಪದಲ್ಲಿ ಕಾಣುವ ಶಿವ ಇಲ್ಲಿ ಮಲಗಿರುವ ವಿಗ್ರಹರೂಪದಲ್ಲಿರುವ ಕಾರಣ ಈ ದೇವರನ್ನು ಭೋಗ ಸಾಯನ ಶಿವ ಎಂದು ಕರೆಯಲಾಗುತ್ತದೆ.  ಪಾರ್ವತಿಯ ಮಡಿಲಲ್ಲಿ ತಲೆಯನ್ನಿಟ್ಟು ವಿಶ್ರಾಂತಿ ಪಡೆಯುತ್ತಿದ್ದ ಶಿವನ ಯೋಗಕ್ಷೇಮದ ಬಗ್ಗೆ ಚಿಂತಿಸಿದ ದೇವಾನು ದೇವತೆಗಳು ಅಲ್ಲಿ ನೆರೆದು ಶಿವನ ಸುತ್ತಲೂ ನಿಂತು, ಭಗವಂತನು ತನ್ನ ಕಣ್ಣುಗಳನ್ನು ತೆರೆಯಲು ಕಾಯುತ್ತಿದ್ದರು  ಎಂಬುದರ ಪ್ರತೀಕವಾಗಿ ಈ ದೇವಸ್ಥಾನದಲ್ಲಿ  ಗಣೇಶ, ಸುಬ್ರಹ್ಮಣ್ಯ, ಸೂರ್ಯ, ಚಂದ್ರ, ಇಂದ್ರ ಮತ್ತು ನಾರದ ಮುನಿಗಳು ಶಿವನ ಸುತ್ತಲೂ ನಿಂತಿರುವುದನ್ನು ಇಲ್ಲಿ  ಕಾಣಬಹುದಾಗಿದೆ. ಅದಲ್ಲದೇ ಕುಬೇರ, ಆದಿಶಂಕರ ಮತ್ತು ವಿವಿಧ ಋಷಿ ಮುನಿಗಳ ದೈವಿಕ ವಿಗ್ರಹಗಳು ಈ ದೇವಾಲಯದಲ್ಲಿವೆ.

ಐತಿಹಾಸಿಕ ಪುರಾವೆಗಳ ಪ್ರಕಾರ  ಈ ದೇವಾಲಯವನ್ನು 14 ನೇ ಶತಮಾನದಲ್ಲಿ  (1344-47) ವಿಜಯನಗರ ಸಾಮ್ರಾಜ್ಯದ ಹರಿ ಹರ ಮತ್ತು ಬುಕ್ಕ ರಾಯರಿಂದ ನಿರ್ಮಿಸಲಾಗಿದ್ದು ನಂತರ 1833 ರಲ್ಲಿ ಕಾಳಹಸ್ತಿ ರಾಜಕುಮಾರಿಯು ಈ ದೇವಾಲಯವನ್ನು ನವೀಕರಿಸಿದರು ಎಂದು ಹೇಳುವ ಶಾಸನವು ಇಲ್ಲಿ ಕಾಣಬರುತ್ತದೆ. ಈ ದೇವಾಲಯಕ್ಕೆ  ಚಿಕ್ಕ ರಾಜಗೋಪುರದ ಮೂಲಕ ಪ್ರವೇಶಿಸಿದಾಗ ಎಡಭಾಗದಲ್ಲಿ ವಾಲ್ಮೀಕೇಶ್ವರ ಮತ್ತು ದೇವಿ ಮರಕತಾಂಬಿಕಾ ಮತ್ತು ಬಲಭಾಗದಲ್ಲಿ ಪಲ್ಲಿಕೊಂಡೇಶ್ವರನ ಗುಡಿ ಇದ್ದು ಭಕ್ತಾದಿಗಳು ದೇವಿ ಮರಕತಾಂಬಿಕಾ ಮತ್ತು ವಾಲ್ಮೀಕೇಶ್ವರನದರ್ಶನ ಪಡೆದು ನಂತರ ಪಲ್ಲಿಕೊಂಡೇಶ್ವರರನ್ನು ಪೂಜಿಸುವುದು ರೂಢಿಯಲ್ಲಿದೆ.

ಸಕಲ ಸಂಪತ್ತಿನ ಒಡೆಯ ಕುಬೇರನು ತನ್ನ ಪತ್ನಿಯರಾದ ಕೌಬೇರಿ ಮತ್ತು ಭದ್ರನೊಂದಿಗೆ ದೇವಾಲಯದ ಪ್ರವೇಶದ್ವಾರದಲ್ಲಿ ದ್ವಾರಪಾಲಕರಾಗಿ ಇದ್ದರೆ,  ದೇವಿ ಮರಕತಾಂಬಿಕೆಯ ಎರಡೂ ಬದಿಯಲ್ಲಿ ಕಾಮಧೇನು ಮತ್ತು ಕಲ್ಪ ವೃಕ್ಷವಿದ್ದು ಮುಂಭಾಗದಲ್ಲಿ ಸಾಲಿಗ್ರಾಮ ಶಿಲೆಯ ಗಣಪತಿಯ ಮೂರ್ತಿ ಇದೆ.  ದೇವಿ ಪಾರ್ವತಿಯ ಎರಡೂ ಬದಿಯಲ್ಲಿ ಸೂರ್ಯ ಮತ್ತು ಚಂದ್ರರು ಇದ್ದಾರೆ. ಭಗವಾನ್ ಮಹಾ ವಿಷ್ಣು ಲಕ್ಶ್ಮೀ ಬ್ರಹ್ಮ ಸರಸ್ವತಿ ಅಲ್ಲದೇ, ಋಷಿಗಳಾದ  ಮಾರ್ಕಂಡೇಯ, ಅಗಸ್ತ್ಯ, ವಾಲ್ಮೀಕಿ, ಇಂದ್ರ, ನಾರದರು, ಸನಕ ಮತ್ತು ಸಾನಂದ ಮುನಿಗಳು, ನಂದಿಕೇಶ್ವರ, ಸುಬ್ರಹ್ಮಣ್ಯಸ್ವಾಮಿಯು ತನ್ನ ಪತ್ನಿಯರಾದ, ವಲ್ಲಿ ಮತ್ತು ದೇವಯಾನಿಯೊಂದಿಗೆ ಇದ್ದಾರೆ.

ಈ ದೇವಾಲಯದ ಮತ್ತೊಂದು ವಿಶೇಷತೆ ಏನೆಂದರೆ ಪಲ್ಲಿಕೊಂಡೇಶ್ವರ – ಸರ್ವ ಮಂಗಳೆ, ವಾಲ್ಮೀಕೇಶ್ವರ – ಮರಕತಾಂಬಿಕಾ; ವಿನಾಯಕ – ಸಿದ್ಧಿ-ಬುದ್ಧಿ, ಸುಬ್ರಹ್ಮಣ್ಯ – ವಲ್ಲಿ-ದೇವಯಾನಿ,  ಸಾಸ್ತಾ (ಅಯ್ಯಪ್ಪ ದೇವರು)– ಪೂರ್ಣ- ಪುಷ್ಕಲಾ, ಕುಬೇರ-ಕೌಬೇರಿ – ಭದ್ರ, ದಕ್ಷಿಣಾಮೂರ್ತಿ – ತಾರಾ, ಕಾಶೀ ವಿಶ್ವನಾಥ – ವಿಶಾಲಾಕ್ಷಿ ಹೀಗೆ ಇಲ್ಲಿರುವ ಎಲ್ಲಾ ದೇವತೆಗಳು ತಮ್ಮ ಸಂಗಾತಿಗಳೊಂದಿಗೆ ಇರುವುದರ ಜೊತೆಗೆ ಇಡೀ ಕೈಲಾಸವೇ ಈ ದೇವಾಲಯದಲ್ಲಿ ನೆರೆದಿರುವ ಅಪರೂಪದ ದೃಶ್ಯವಾಗಿದೆ. 

ರಾಮಾಯಣವನ್ನು ಬರೆಯಲು ಪ್ರಾರಂಭಿಸುವ ಮೊದಲು ಈ ಸ್ಥಳದಲ್ಲಿ  ವಾಲ್ಮೀಕಿ ಋಷಿಗಳು ಶಿವನನ್ನು ಕುರಿತು  ತಪಸ್ಸು ಮಾಡಿದರು ಎಂಬ ಕಾರಣಕ್ಕಾಗಿ ಇಲ್ಲಿನ ದೇವರಿಗೆ ವಾಲ್ಮೀಕೇಶ್ವರ ಎಂದು ಕರೆಯಲಾಗುತ್ತದೆ. ರಾವಣನನ್ನು ಕೊಂದು ಅಯೋಧ್ಯೆಯ ರಾಜನಾದ ನಂತರ ಭಗವಾನ್ ರಾಮನು ತನ್ನ ಪತ್ನಿ ಸೀತೆ, ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತರೊಂದಿಗೆ ಈ ದೇವಾಲಯಕ್ಕೆ ಭೇಟಿ ನೀಡಿದನೆಂದು ನಂಬಲಾಗಿದ್ದು ಭಗವಾನ್ ರಾಮನ ಮಕ್ಕಳಾದ ಲವ ಮತ್ತು ಕುಶರ ಪಾದದ ಗುರುತುಗಳನ್ನು ವಾಲ್ಮೀಕೇಶ್ವರ ದೇಗುಲದ ಮುಂಭಾಗದ ಎಡಭಾಗದಲ್ಲಿ ಕಾಣಬಹುದಾಗಿದೆ.

ಇವೆಲ್ಲದರ ಹೊರತಾಗಿ ಈ ದೇವಾಲಯವು ಪ್ರದೋಷ ಪೂಜೆಗೆ ಪ್ರಸಿದ್ಧವಾಗಿದೆ. ಪರಶಿವನು ಹಾಲಾಹಲವನ್ನು ಕುಡಿದ ನಂತರ ಸಮುದ್ರ ಮಂಥನವನ್ನು ಮುಂದುವರೆಸಿದ ದೇವರು ಮತ್ತು ದಾನವರು, ದ್ವಾದಶಿಯಂದು ಅಮೃತವನ್ನು ಪಡೆದು ಅದನ್ನು ದಾನವರಿಗೂ ಕೊಡದೇ, ಶಿವನನ್ನು  ಪ್ರಾರ್ಥಿಸುವುದು ಬಿಡಿ ಕಡೆಗೆ ಧನ್ಯವಾದವನ್ನೂ ಹೇಳದೆ ಅಮೃತವನ್ನು ಸ್ವೀಕರಿಸಿ ಈ   ವಿಜಯದ ಸಂಕೇತವಾಗಿ ನೃತ್ಯ ಮಾಡಲು ಆರಂಭಿಸುತ್ತಾರೆ.

tandava3ನಂತರ  ತ್ರಯೋದಶಿಯಂದು ತಮ್ಮ ತಪ್ಪಿನ ಅರಿವಾಗಿ, ತಮ್ಮ ಪಾಪವನ್ನು ಪರಿಹರಿಸಲು ಪರಶಿವನನ್ನು ಕೇಳಿಕೊಂಡಾಗ ಶಿವನು ಅವರ ತಪ್ಪನ್ನು ಮನ್ನಿಸಿ  ಕ್ಷಮಿಸುವುದಲ್ಲದೇ, ತನ್ನ ವಾಹನ ನಂದಿಯ ಕೊಂಬುಗಳನ್ನು ಹಿಡಿದು ದೇವಾನು ದೇವತೆಗಳ  ಜೊತೆ ನೃತ್ಯ ಮಾಡುತ್ತಾನೆ. ಹೀಗೆ ಭಗವಾನ್ ಶಿವನು ನೃತ್ಯ ಮಾಡಿದ ಸಮಯವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಯಾರು ಭಗವಾನ್ ಶಿವನನ್ನು ಪ್ರಾರ್ಥಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಪ್ರತೀ ಪಕ್ಷದ ತ್ರಯೋದಶಿಯಂದು ತಿಂಗಳಲ್ಲಿ ಎರಡು ಬಾರಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಪ್ರದೋಷ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಲಾಗುತ್ತದೆ. ಅಂತಹ ಪ್ರದೋಷದ ಸಮಯದಲ್ಲಿ ಭೂಕೈಲಾಸ  ಎಂದೇ ಪರಿಗಣಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಪಲ್ಲಿಕೊಂಡೇಶ್ವರನಿಗೆ ಮಾಡಲಾಗುವ ವಿಶೇಷ ಅಭಿಷೇಕ ಮತ್ತು ಪೂಜೆಯಲ್ಲಿ ಪಾಲ್ಗೊಳ್ಳುವುದು  ಫಲಪ್ರದವೆಂದು ಪರಿಗಣಿಸಲಾಗಿರುವ ಕಾರಣ ಪ್ರದೋಷ ಸಮಯದಲ್ಲಿ ಇಲ್ಲಿಗೆ ಹೆಚ್ಚಿನ ಭಕ್ತಾದಿಗಳು ಬಂದು ಪೂಜೆ ಸಲ್ಲಿಸುತ್ತಾರೆ.

ಈ ದೇವಾಲಯದಲ್ಲಿ ಬೆಳಗ್ಗೆ 6:30ಕ್ಕೆ ಉಷತ್ಕಾಲಂ, 8:00 ಗಂಟೆಗೆ ಕಲಶಾಂತಿ, 12:00 ಗಂಟೆಗೆ ಉಚ್ಚಿಕಾಳಂ, ಸಂಜೆ 5:00 ಗಂಟೆಗೆ ಸಾಯರಕ್ಷೈ, ರಾತ್ರಿ 8:00 ಗಂಟೆಗೆ ಅರ್ಧ ಜಾಮ ಹೀಗೆ ದಿನಕ್ಕೆ ಆರು ಬಾರಿ  ಅಭಿಷೇಕ, ಅಲಂಕಾರ, ನೈವೇದ್ಯ, ಮತ್ತು ದೀಪರಾರ್ತಿಯನ್ನು ವಾಲ್ಮೀಕೇಶ್ವರ ಮತ್ತು ಮರಗದಾಂಬಿಕೆ ಇಬ್ಬರಿಗೂ. ನಾಗಸ್ವರ ಮತ್ತು ತಾಳವಾದ್ಯದೊಂದಿಗೆ ಸಕಲ ಆಗಮಶಾಸ್ತ್ರದ ಪ್ರಕಾರ ನಡೆಸಲಾಗುತ್ತದೆ.  ಇದಲ್ಲದೇ,  ಸೋಮವಾರ  ಮತ್ತು ಶುಕ್ರವಾರ, ಪ್ರದೋಷದ ದಿನ, ಅಮಾವಾಸ್ಯೆ ಹುಣ್ಣಿಮೆ, ಸಂಕಷ್ಟಹರ ಚತುರ್ಥಿಯಲ್ಲದೇ ಕಾರ್ತೀಕ ಮಾಸ ಮತ್ತು ಇತರೇ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಪ್ರದೋಷ ಪೂಜೆಯ ಸಮಯದಲ್ಲಿ ಸುಮಾರು 15,000 ಮತ್ತು ಶಿವರಾತ್ರಿ ಉತ್ಸವದ ಸಮಯದಲ್ಲಿ ಸುಮಾರು 30,000- 50,000ದ ವರೆಗೂ ಈ ದೇವಲಯಕ್ಕೆ ಭಕ್ತಾದಿಗಳು ಭೇಟಿ ನೀಡಿ ಇಲ್ಲಿನ ದೇವರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ದೇವಾಲಯ ಭೌಗೋಳಿಕವಾಗಿ ಆಂಧ್ರ ಪ್ರದೇಶಕ್ಕೆ ಸೇರಿದ್ದರೂ ಚೆನ್ನೈನಿಂದ ಮತ್ತು ತಿರುಪತಿಯಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಕಾರಣ ಆರಾಮವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ರೈಲುಮಾರ್ಗದಲ್ಲಿ  ಸಮೀಪದ ರೈಲು ನಿಲ್ದಾಣವಾದ ಶ್ರೀಕಾಳಹಸ್ತಿಗೆ ಬಂದು ಅಲ್ಲಿಂದ  ಸುಮಾರು 57 ಕಿಮೀ ದೂರದಲ್ಲಿರುವ ಈ ದೇವಾಲಯಕ್ಕೆ  ರಸ್ತೆಯ ಮೂಲಕ ದೇವಸ್ಥಾನವನ್ನು ತಲುಪಬಹುದಾಗಿದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ  ಇನ್ನೇಕೆ ತಡಾ.  ಸ್ವಲ್ಪ ಸಮಯಮಾಡಿಕೊಂಡು ಪಾರ್ವತಿಯ ತೊಡೆಯ ಮೇಲೆ ಶಯನ ಭಂಗಿಯಲ್ಲಿರು ಪರಶಿವನದ ಜೊತೆ ಸಮಸ್ತ ಕೈಲಾಸವೇ ಇರುವ ಈ ಭೂಕೈಲಾಸವೇ ಎನ್ನಬಹುದಾದಂತಹ ದೇವಸ್ಥಾನಗಳ ಸಂಕೀರ್ಣಕ್ಕೆ ಭೇಟಿ ನೀಡಿ ಸಾರಾ ಸಗಟಾಗಿ ಎಲ್ಲಾ ದೇವರುಗಳ ಕೃಪಾಶೀರ್ವಾದಕ್ಕೆ ಪ್ರಾತರಾಗಿ ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚ್ಕೋತೀರೀ ತಾನೇ?

ಏನಂತೀರಿ?
ನಿಮ್ಮವನೇ ಉಮಾಸುತ

One thought on “ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

  1. ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇಂತಹದೊಂದು ದೇವಸ್ಥಾನ ಇರುವುದರ ಬಗ್ಗೆ ಅರಿವೇ ಇರಲಿಲ್ಲ. ನಾವೇ ಭೇಟಿ ಕೊಟ್ಟು ಬಂದೆವೇನೋ ಎನಿಸುವ ಮಟ್ಟಿಗೆ ಸುಂದರವಾದ ಲೇಖನ. ಧನ್ಯವಾದಗಳು.
    ಉಷಾ ವಾಸು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s