ಶ್ರೀ ಚನ್ನವೀರ ಕಣವಿ

ನವೆಂಬರ್ 1 ಕನ್ನಡ ರಾಜ್ಯೋತ್ಸವದಿನದಂದು ಸಾಮಾನ್ಯವಾಗಿ ಬಹುತೇಕರು ತಮ್ಮ ಫೇಸ್ಬುಕ್ ವಾಲ್ಗಳಲ್ಲಿ ವಾಟ್ಸಾಪ್ ಡಿಪಿಗಳಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ.. ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ ಎಂದು ಹಾಕಿಕೊಳ್ಳುವುದು ರೂಢಿಯಾಗಿದೆ. ಅದೇ ರೀತಿ ಅಂದು ಬಹುತೇಕ ರೇಡಿಯೋ ಮತ್ತು ಟಿವಿಗಳಲ್ಲಿ ಕನ್ನಡ ನಾಡ ಗೀತೆಯ ಜೊತೆ ಜೊತೆಯಲ್ಲೇ, ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರಮನೋಹಾರಿ ಜಯಭಾರತಿ ಜಯಭಾರತಿ ಎಂಬ ಹಾಡನ್ನೂ ಕೇಳುತ್ತಿರುತ್ತೇವೆ. ಕನ್ನಡದ ಬಗ್ಗೆ ಈ ರೀತಿಯ ಜಯ ಘೋಷವನ್ನು ಕನ್ನಡಿಗರಿಗೆ ನೀಡಿದ್ದವರು ಚೆಂಬೆಳಕಿನ ಖ್ಯಾತಿಯ ಹಿರಿಯ ಕವಿ, ನಾಡೋಜ ಪುರಸ್ಕೃತರಾಗಿದ್ದ ಶ್ರಿ ಚನ್ನವೀರ ಕಣವಿಯವರು ಎಂಬುದು ಬಹುತೇಕರಿಗೆ ಪರಿಚಯವೇ ಇಲ್ಲ. 20 ಮತ್ತು 21ನೇ ಶತಮಾನದ ಸಾರಸ್ವತ ಲೋಕದ ಬಹುತೇಕ ದಿಗ್ಗಜರ ಒಟನಾಡಿಯಾಗಿದ್ದ ಶ್ರೀ ಕಣವಿಯವರು 16.02.22 ಬುಧವಾರ ಬೆಳಗ್ಗೆ ದೀರ್ಘಕಾಲದ ಅನಾರೋಗ್ಯದಿಂದಾಗಿ ಚಿಕಿತ್ಸೆಗಳು ಫಲಕಾರಿಯಾಗದೇ, ತಮ್ಮ 93 ನೇ ವಯಸ್ಸಿನಲ್ಲಿ ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದೆ ಎಂದರೂ ತಪ್ಪಾಗದು. ಅ ಹಿರಿಯ ಮಹಾ ಚೇತನದ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ಇದೋ ನಿಮಗಾಗಿ

WhatsApp Image 2022-02-17 at 5.34.57 AMಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕು ಹೊಂಬಳ ಗ್ರಾಮದ ಶ್ರೀ ಸಕ್ಕರೆಪ್ಪ ಹಾಗೂ ಪಾರ್ವತೆಮ್ಮ ದಂಪತಿಯ ಕಿರಿಯ ಪುತ್ರನಾಗಿ 1928 ಜೂನ್ 28ರಂದು ಚನ್ನವೀರ ಕಣವಿಯವರ ಜನನವಾಗುತ್ತದೆ. ಅವರ ತಂದೆ ಗದಗ ತಾಲೂಕಿನ ಶಿರುಂದ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ಕಣವಿ ಅವರು ಬಾಲ್ಯಜೀವನ ಅಲ್ಲಿಯೇ ನಡೆದು ಮನೆಯ ಮೊದಲ ಪಾಠ ಶಾಲೆ ತಂದೆಯೇ ಅವರ ಮೊದಲ ಗುರುಗಳಾಗಿ ವಿದ್ಯೆಯ ಜೊತೆಗೆ ಸತ್ ಸಂಸ್ಕಾರ, ಸಂಪ್ರದಾಯಗಳನ್ನು ಪೋಷಕರಿಂದಲೇ ಕಲಿತುಕೊಳ್ಳುತ್ತಾರೆ. ಗ್ರಾಮೀಣ ನೆಲೆಗಟ್ಟಿನಲ್ಲಿ ಬಾಲ್ಯವನ್ನು ಕಳೆದದ್ದರಿಂದ ಗ್ರಾಮೀಣ ಸೊಗಡು ಅಲ್ಲಿಯ ಮಳೆ, ಬೆಳೆ, ಅಲ್ಲಿ ಓರಗೆಯವರೊಂದಿಗೆ ಬೆರೆತು ಚೆಂಡು, ಬುಗುರಿ, ಚಿನ್ನಿದಾಂಡು ಮರಕೋತಿ ಆಟಗಳನ್ನು ಆಡುತ್ತಾ ಪ್ರಕೃತಿ ಸೌಂದರ್ಯದ ಜತೆಗೆ ಹಳ್ಳಿಯ ಜಾನಪದ ಜೀವನ, ಹಬ್ಬ- ಹರಿದಿನ, ಹುಣ್ಣಿಮೆ, ಜಾತ್ರೆ- ಉತ್ಸವದ ಸಂಭ್ರಮ ಅನುಭವಿಸುತ್ತ ಬೆಳೆದ ಕಾರಣ ಮುಂದೆ ಇವೆಲ್ಲವೂ ಅವರ ಜೀವನದ ಮೇಲೆ ಅಪಾರವಾದ ಪ್ರಭಾವ ಬೀರಿದ್ದ ಪರಿಣಾಮವಾಗಿಯೇ ಮಳೆಗಾಲವನ್ನು ಅತ್ಯಂತ ಚೆಂದವಾಗಿ ತಮ್ಮ ಹತ್ತು ಹಲವಾರು ಕವಿತೆಗಳಲ್ಲಿ ಸಮರ್ಥವಾಗಿ ಬರೆದಿದ್ದ ಕಾರಣ, ಹಿರಿಯ ಕವಿಗಳಾಗಿದ್ದ ಶ್ರೀ ಜಿ.ಎಸ್. ಶಿವರುದ್ರಪ್ಪನವರು ಕಣವಿ ಅವರನ್ನು ಮಳೆಗಾಲದ ಕವಿ ಎಂದು ಬಣ್ಣಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

ಕಣವಿಯವರು 5ನೇಯ ತರಗತಿ ಮುಗಿಸುತ್ತಿದ್ದಂತೆಯೇ ಅವರ ತಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಕಾರಣ, ತಾಯಿಯ ತವರುಮನೆ ಹೊಂಬಳಕ್ಕೆ ಇವರ ಕುಟುಂಬ ಸ್ಥಳಾಂತರಗೊಂಡಿತಲ್ಲದೇ, ಕಣವಿಯವರು ತಮ್ಮ ಅಕ್ಕನ ಮನೆಯಾದ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು. ಎಲ್ಲರಿಗೂ ತಿಳಿದಿರುವಂತೆ ಗರಗ ಗ್ರಾಮ ಸ್ವಾತಂತ್ಯ ಹೋರಾಟಗಾರ ತವರಾಗಿದ್ದು ಅಂದಿನ ಕಾಲದಿಂದಲೂ ಅಲ್ಲಿ ರಾಷ್ಟ್ರಧ್ವಜ ತಯಾರಿಸುವ ಪ್ರತಿಷ್ಠಿತ ಊರಾಗಿತ್ತು. ಅಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಪ್ರಭಾತ ಫೇರಿಯಲ್ಲಿ ದೇಶ,ನಾಡಭಕ್ತಿಯ ಗೀತೆಗಳ ಹಾಡುಗಾರಿಕೆಗಳು ಕಣವಿಯವರಲ್ಲಿ ದೇಶಭಕ್ತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಪ್ರಭಾತ್ ಫೇರಿಯ ನಂತರ ಪ್ರಭಾವಿಗಳ ಪ್ರಜ್ಞೆ ಮೂಡಿಸುವ ಭಾಷಣಗಳನ್ನು ಕೇಳುತ್ತಲೇ ಬೆಳೆದ ಕಣವಿಯವರು ಗರಗ ಶಾಲೆಯ ಗ್ರಂಥಾಲಯದಲ್ಲಿ ಗಳಗನಾಥರ ಮಾಧವ ಕರುಣಾವಿಲಾಸ ಕಾದಂಬರಿ ಓದಲು ಆರಂಭಿಸಿ ಹಚ್ಚಿಸಿಕೊಂಡ ಓದಿನ ರುಚಿ ನಂತರ ಆ ಗ್ರಂಥಾಲಯದಲ್ಲಿದ್ದ ಅಷ್ಟೂ ಪುಸ್ತಕಗಳನ್ನು ಓದಿ ಮುಗಿಸಿದಿದ್ದರು. 1940ರಲ್ಲಿ ನಡೆದ ಮುಲ್ಕಿ ಪರೀಕ್ಷೆಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಗೆಯೇ ಪ್ರಥಮ ಸ್ಥಾನ ಪಡೆದ ಕೀರ್ತಿ ಕಣವಿಯವರದ್ದಾಗಿತ್ತು.

kanivi3ಅಂದಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದರೆ ಶಿಕ್ಷಕ ಹುದ್ದೆ ಸುಲಭವಾಗಿ ಸಿಗುತ್ತಿತ್ತಾದರೂ, ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಸಲುವಾಗಿ ಅಂದಿನ ಮುಂಬಯಿ ಸರಕಾರದ ಸ್ಕಾಲರಷಿಪ್ ದೊರೆತ ಕಾರಣ, ಧಾರವಾಡದ ಆರ್‌ಎಲ್‌ಎಸ್ ಹೈಸ್ಕೂಲಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಊಟ ಮತ್ತು ತಿಂಡಿಗಳಿಗೆ ಶ್ರೀ ಮುರುಘಾಮಠದ ಉಚಿತ ಪ್ರಸಾದನಿಲಯದ ಆಶ್ರಯ ಪಡೆದರು. ಆರ್‌ಎಲ್‌ಎಸ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿದ್ದ ಮತ್ತು ಸಾಹಿತ್ಯ ವಿದ್ಯಾಂಸರೂ ಅಗಿದ್ದ ಶ್ರೀ ವೀ. ರು. ಕೊಪ್ಪಳ ಅವರೊಂದಿನ ಒಡನಾಟವೂ ಕಣವಿ ಅವರನ್ನು ಭಾವಜೀವಿಯಿಂದ ಬುದ್ದಿಜೀವಿಯಾಗುವರೆಗೆ ಬೆಳೆಸಿತು ಎಂದರೂ ತಪ್ಪಾಗದು.

ಹೇಳಿ ಕೇಳಿ ಧಾರವಾಡ ಕವಿಗಳ ತವರೂರು ಧಾರವಾಡಲ್ಲಿ ನಿಂದು ಸುಮ್ಮನೆ ಒಂದು ಕಲ್ಲನ್ನು ಬೀಸಿದರೆ ಅದು ನಿಶ್ಚಯವಾಗಿಯೂ ಒಂದಲ್ಲಾ ಒಂದು ಸಾಹಿತಿಯ ಮನೆಯ ಮೇಲೆ ಬೀಳುತ್ತದೆ ಎನ್ನುವಂತಹ ಕಾಲವದು. ಅದೇ ಕಾಲದಲ್ಲಿಯೇ ಕಣವಿಯವರಿಗೆ ಬೇಂದ್ರೆಯವರ ಗರಿ, ಮಧುರಚೆನ್ನರ ನನ್ನ ನಲ್ಲ, ಕುವೆಂಪು ಅವರ ನವಿಲು ಹೀಗೆ ಹಲವು ಕವನ ಸಂಕಲಗಳನ್ನು ಓದಿ ಪ್ರಭಾವಿತರಾಗಿ ಅವರಲ್ಲಿದ್ದ ಕವಿತ್ವ ಜಾಗೃತಗೊಂಡು ಸೃಷ್ಟಿಯ ಸೊಬಗು ಎಂಬ ಕವಿತೆಯನ್ನು ಬರೆದ್ದದ್ದಲ್ಲದೇ ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸುತ್ತಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನೂ ಗಳಿಸಿದ್ದರು.

ಆದಾದ ನಂತರ ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, 1946ರಲ್ಲಿ ಕರ್ನಾಟಕ ಕಾಲೇಜು ಸೇರಿದ ಕಣವಿಯವರು ದ್ವಿತೀಯ ವರ್ಷಕ್ಕೆ ಬರುವಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ ಲಭಿಸಿದ ಕಾರಣ, ಬಂಧದಿಂದ ಬಿಡುಗಡೆ ಎಂಬ ಕೃತಿಯನ್ನು ರಚಿಸಿದ್ದರು. ಮುಂದೆ 1948ರಲ್ಲಿ ಬಿಎ (ಆನರ್ಸ್) ನಲ್ಲಿ ಕನ್ನಡವನ್ನು ಮುಖ್ಯ ವಿಷಯವಾಗಿಯೂ ಇಂಗ್ಲಿಷನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂ‍ಡು ಪದವಿಯನ್ನು ಮುಗಿಸಿ ತದನಂತರ ಎಂಎ ಸಹಾ ನಿರಾಯಾಸವಾಗಿ ಮುಗಿಸಿದ್ದರು.

ತಮ್ಮ ಓದಿನ ಮಧ್ಯೆಯೇ ಸಾಹಿತ್ಯಾಸಕ್ತಿಯನ್ನು ಮುಂದುವರೆಸಿಕೊಂಡು ಹೋದ ಕಣವಿಯವರು, ಆಗ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅಂದಿನ ಸಾಹಿತ್ಯ ಲೋಕದ ದಿಗ್ಗಜರುಗಳಾದ ಶ್ರೀ ಬಿಎಂ ಶ್ರೀ, ಮಾಸ್ತಿ, ರಾಜರತ್ನಂ, ಅನಕೃ ಸೇರಿದಂತೆ ಹಲವರನ್ನು ಒಂದೇ ವೇದಿಕೆಯಲ್ಲಿ ಭೇಟಿಯಾಗಿ ತಮ್ಮ ಸಾಹಿತ್ಯದ ಗ್ರಹಿಕೆ ಹಿಗ್ಗಿಸಿಕೊಂಡರು. ಅದರ ಪ್ರಭಾವದಿಂದ ತಮ್ಮ ಓರಗೆಯ ಬರಹಗಾರರನ್ನು ಸೇರಿಸಿಕೊಂಡು ಕಾವ್ಯಾನುಭವ ಮಂಟಪ ಕಟ್ಟಿಕೊಂಡು ಪ್ರತಿ ಭಾನುವಾರ ಒಂದು ಕಡೆ ಸೇರಿಕೊಂಡು ಸಾಹಿತ್ಯಾತ್ಮಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದದ್ದುಅವರ ಸಾಹಿತ್ಯ ಬರವಣಿಗೆಗೆ ಹಾಗೂ ಜ್ಞಾನಾರ್ಜನೆಗೆ ಮತ್ತಷ್ಟು ಬಲ ತುಂಬಿದ ಕಾರಣ ಪದವಿಯಲ್ಲಿದ್ದಾಗಲೇ ಅವರ ಕಾವ್ಯಾಕ್ತಿ ಕವನಸಂಕಲನ ಮುದ್ರಣಗೊಂಡಿತು. ಅ ಪುಸ್ತಕಕ್ಕೆ ವರಕವಿಗಳು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ದ.ರಾ. ಬೇಂದ್ರೆಯವರು ಮುನ್ನುಡಿ ಬರೆದಿದ್ದರೆ, ಆದಾದ ನಂತರ ಪ್ರಕಟಗೊಂಡ ಬೆನ್ನಿಗೆ ಬಂದ ಭಾವಜೀವಿಗೆ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ವಿ.ಕೃ ಗೋಕಾಕರು ಮುನ್ನುಡಿ ಬರೆದಿದ್ದರು.

ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ಪಡೆದ ನಂತರ ಅಧ್ಯಾಪಕ ವೃತ್ತಿಗೆ ಸೇರಲು ಬಯಸಿದರಾದರೂ ದುರಾದೃಷ್ಟವಷಾತ್ ಅವರ ಆಸೆ ಈಡೇರದೇ, ಕರ್ನಾಟಕ ವಿಶ್ವ ವಿದ್ಯಾನಿಲಯದ ಪ್ರಸಾರಾಂಗದ ಕಾರ್ಯದರ್ಶಿಯಾಗಿ ತಮ್ಮ ವೃತ್ತಿಯನ್ನು 1952ರಲ್ಲಿ ಆರಂಭಿಸಿ 1983ರವರೆಗೂ ಪ್ರಸಾರಾಂಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದರು.

ಕಣವಿಯರಿಗೆ ಪ್ರಾಧ್ಯಾಪಕರಾಗುವ ಬಯಕೆ ಇದ್ದದ್ದನ್ನು ಅರಿತಿದ್ದ ಕವಿವಿದ ಅಂದಿನ ಕುಲಪತಿಗಳಾಗಿದ್ದ ಡಾ. ಡಿ.ಎಂ. ನಂಜುಂಡಪ್ಪನವರು ಕಣವಿ ಅವರ ಜೀವಧ್ವನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದ ನಂತರ, ಅವರನ್ನು ಕವಿವಿದ ಕನ್ನಡ ವಿಭಾಗಕ್ಕೆ ಗೌರವ ಪ್ರಾಧ್ಯಾಪಕರನ್ನಾಗಿ 2 ವರ್ಷಗಳ ಕಾಲ ನೇಮಕ ಮಾಡುವ ಮೂಲಕ ಪ್ರಾಧ್ಯಾಪಕರಾಗುವ ಕಣವಿಯವರ ಆಸೆಯನ್ನು ಈಡೇರಿಸಿದ್ದರು.

kanive1ಪದವಿಯ ವಿದ್ಯಾರ್ಥಿಯಾಗಿದ್ದಾಗ ವಿಜಯಪುರದಲ್ಲಿ ಮಾಮಲೇದಾರ ಆಗಿದ್ದ ಎಸ್.ವಿ. ಗಿಡ್ನವರ ಅವರ ಪರಿಚಯವಾಗಿ ಅವರ ಮನೆಯಲ್ಲಿ ಇದ್ದ ಕನ್ನಡ, ಇಂಗ್ಲಿಷ್ ಸಾಹಿತ್ಯದ ಪುಸ್ತಕಗಳು, ಕನ್ನಡದ ನಿಯತಕಾಲಿಕೆಗಳನ್ನು ಓದಲು ಹೋಗುತ್ತಿದ್ದ ಕಣವಿಯವರು ನಂತರ ಅವರ ಪುತ್ರಿಯಾದ ಶಾಂತಾದೇವಿಯವರನ್ನು ಮೆಚ್ಚಿ ವಿವಾಹವಾದರು. ಸಂಗೀತ ಮತ್ತು ಸಾಹಿತ್ಯಗಳಲ್ಲಿ ಆಸಕ್ತರಾಗಿದ್ದ ಶಾಂತದೇವಿಯವರು ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡುತ್ತಿದ್ದದ್ದಲದೇ ಕಣವಿಯವರ ಸಾಹಿತ್ಯ ಕೃಷಿಗೆ ಬೆಂಬಲವಾಗಿದ್ದದ್ದು ಗಮನಾರ್ಹವಾಗಿತ್ತು.

ಸಂಪ್ರದಾಯಸ್ಥ ಕುಟುಂಬದ ಹಿನ್ನಲೆಯುಳ್ಳವರಾಗಿದ್ದರೂ ಹೊಸ ಪರಂಪರೆಗೆ ಒಗ್ಗಿಕೊಂಡು ಹೋಗುವ ಮನಸ್ಥಿತಿಯುಳ್ಳವರಾಗಿದ್ದ ಶ್ರೀ ಕಣವಿಯವರು ತಮ್ಮ ಹಿರಿಯ ಮಗ ಶಿವಾನಂದ ಅಂತರ್ ಜಾತಿಯ ವಿವಾಹ ಮಾಡಿಕೊಳ್ಳಲು ಮುಂದಾದಾಗ ಅದನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದರು. ಅದೇ ರೀತಿಯಾಗಿ ಅವರ ಮಗಳ ಮದುವೆಯನ್ನು ಸಂಪ್ರದಾಯಕ್ಕಿಂತ ಭಿನ್ನವಾಗಿ ತಮ್ಮ ಮಿತ್ರ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಂದ ವಧುವರರಿಗೆ ಪ್ರಮಾಣವಚನ ಬೋಧಿಸುವ ಹೊಸ ಪದ್ಧತಿಯನ್ನು ಅನುಸರಿಸಿದರು. ಆದಾದ ನಂತರ ಅವರ ಉಳಿದಿಬ್ಬರು ಕಿರಿಯ ಮಕ್ಕಳ ಮದುವೆಯಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯ ಕ್ರಮವನ್ನು ಅನುಸರಿಸಿದ್ದರು. ಕನ್ನಡಕ್ಕಾಗಿ ಎಂತಹ ಹೋರಾಟಗಳಿಗೂ ಸಿದ್ಧರಾಗಿರುತ್ತಿದ್ದ ಕಣವಿಯವರು ವಯಕ್ತಿಕವಾಗಿ ಅತ್ಯಂತ ಸರಳ ಸಜ್ಜನಿಕೆ ಹಾಗೂ ಸ್ನೇಹಪೂರ್ಣತೆಯಿಂದ ಕೂಡಿದ್ದು, ಮಿತ ಮಾತು, ಪ್ರಚಾರ ಪ್ರಿಯತೆ ಇಲ್ಲದ ಸಮಾಜದ ವಿರುದ್ಧ ಪ್ರತಿಭಟನೆಯನ್ನು ಮಾಡುವ ಮನೋಭಾವದವರಲ್ಲವಾಗಿದ್ದರೂ, ಅರ್ಥ ಕಳೆದುಕೊಂಡ ಸಂಪ್ರದಾಯಗಳನ್ನು ಮೀರಿ ನಿಂತು ಹೊಸಪರಂಪರೆ ಅನುಕರಿಸುವ ಸುಧಾರಣಾವಾದಿಗಳಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಬಹುವರ್ಷ ಸೇವೆ ಸಲ್ಲಿಸಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ 2 ಅವಧಿ ಕಾರ್ಯ ನಿರ್ವಹಿಸಿ, ಸುಮಾರು ಏಳು ದಶಕಗಳ ಸುದೀರ್ಘ ಕಾಲ ನಿಷ್ಠೆಯಿಂದ  

WhatsApp Image 2022-02-16 at 11.04.42 PMತಮ್ಮ ಇಳೀ ವಯಸ್ಸಿನಲ್ಲಿ ಬರವಣಿಗೆಯಿಂದ ದೂರ ಸರಿದರೂ ಸಾಹಿತ್ಯ ಮತ್ತು ಸಂಗೀತ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಧಾರವಾಡದಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲ ಸಾಲಿನ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಿದ್ದದ್ದು ಅವರ ಹೆಗ್ಗಳಿಗೆ. ಖಾಸಗೀ ಛಾನೆಲ್ಲುಗಳು ಧಾರವಾಡದಲ್ಲಿ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು, ರವಿ ಬೆಳಗೆರೆಯವರ ಸಾರಥ್ಯದ ಎಂದೂ ಮರೆಯದ ಹಾಡು, ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ ಹರಟೆ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗಿಗಳಾಗುವ ಮೂಲಕ ಹೊಸ ಕಲಾವಿದರುಗಳೊಂದಿಗೆ ತಮ್ಮ ಸುಧೀರ್ಘವಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ಭಾವ ಜೀವಿಗಳಾಗಿದ್ದರು.

WhatsApp Image 2022-02-16 at 3.43.37 PMಶ್ರೇಷ್ಠ ಮಾನವೀಯ ಗುಣ, ಸರಳ ಸಜ್ಜನಿಕೆಯ ಜೊತೆಗೆ ತಮ್ಮ ಸಮಕಾಲೀನ ಕವಿಗಳ ಸಾಹಿತ್ಯವನ್ನು ನಿರ್ಮತ್ಸರದಿಂದ ವಿಮರ್ಶಿಸುತ್ತಿದ್ದರೂ ವಯಕ್ತಿಕವಾಗಿ ಅವರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಂತಹ ಕನ್ನಡದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಹರಿಕಾರರಾಗಿದ್ದಂತಹ ಶ್ರೀ ಚೆನ್ನವೀರ ಕಣವಿಯವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಹೌದಾದರೂ ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಬತ್ತಲಾರದ ಅಮೃತವಾಹಿನಿಯೇ ಸರಿ. ಅಂತಹ ಸಮನ್ವಯ ಕವಿ ಶ್ರೀ ಚನ್ನವೀರ ಕಣವಿಯವರಿಗೆ ಸಮಸ್ತ ಕನ್ನಡಿಗರೂ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುವುದು ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s