ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟುವ ಮೂಲಕ ಆರಂಭವಾದ ಮೈಸೂರು ಸಂಸ್ಥಾನ ಈ ದೇಶದಲ್ಲಿ ಹತ್ತು ಹಲವು ಕಾರ್ಯಗಳಿಗೆ ಮೊದಲೆನಿಸಿಕೊಂಡು ಅಂದು ಇಂದು ಮತ್ತು ಎಂದೆಂದಿಗೂ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ.

1799 ರಿಂದ 1868ರ ವರೆಗೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮೈಸೂರನ್ನು ಹೇಗಾದರೂ ಮಾಡಿ ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲ. ಅನಾವಶ್ಯಕ ದುಂದು ವೆಚ್ಚ ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಾಗ, ತಾಳ್ಮೆವಂತರಾದ ರಾಜರು ಶಾಂತಿಯಂದ ಬಗೆ ಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಲೇ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಿರಲೇ ಇಲ್ಲ.

kr5

ಇದೇ ಸಮಯದಲ್ಲೇ ಮೈಸೂರು ಸಂಸ್ಥಾನದ ಆಪ್ತರಾಗಿದ್ದ ಶ್ರೀ ಚೆಟ್ಟಿಯವರು ಮತ್ತು ಅಸ್ಗರ್ ಅಲಿಯವರು ಬ್ರಿಟೀಷರ ಮೆಲೆ ಒತ್ತಡ ತಂದು ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಲೇ ಇದ್ದಾಗಲೇ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮಗ ಶ್ರೀ ಚಾಮರಾಜ ಒಡೆಯರ್ ಮತ್ತು ಸೊಸೆ ಕೆಂಪ ನಂಜಮ್ಮಣ್ಣಿಯವರಿಗೆ 1884ರ ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನನವಾಗಿತ್ತದೆ. ಕೇವಲ 10 ವರ್ಷದ ಬಾಲಕನಾಗಿರುವಾಗಲೇ 28 ಡಿಸೆಂಬರ್ 1894ರಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕ ಕೃಷ್ಣರಾಜರಿಗೆ ಪೆಬ್ರವರಿ 1, 1895ರಲ್ಲಿ ಪಟ್ಟಾಭಿಷೇಕ ಮಹೋತ್ಸವ ಎಲ್ಲರೂ ಮೆಚ್ಚುವಂತೆ ವೈಭವೋಪೇತವಾಗಿ ನಡೆಸಲಾಗುತ್ತದೆ. ಆರಂಭದಲ್ಲಿ ಕೆಲಕಾಲ ಅಮ್ಮನ ಆಶ್ರಯದಲ್ಲೇ ಆಡಳಿತ ನಡೆಸಿ ಮುಂದೆ ಅಲ್ಲಿಂದ 38 ವರ್ಷಗಳ ಮೈಸೂರು ಸಂಸ್ಥಾನದಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ ಭವ್ಯ ಆಡಳಿತವನ್ನು ನಡೆಸಿದ ಕೀರ್ತಿ ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ನೆನಪಿನಲ್ಲಿ ಉಳಿಯುವ ಸಾಕ್ಷಿಗಳಾಗಿ ನಮ್ಮ ಕಣ್ಣ ಮುಂದಿದೆ. ಆಡಳಿತ ಚುಕ್ಕಾಣಿ ಹಿಡಿದ ರಾಜನ ಬಿಗಿಮುಷ್ಠಿಯಲ್ಲಿ ಇಡೀ ರಾಜ್ಯವೇ ಇರಬೇಕು ಎಂದು ಭಾವಿಸಿದೇ ತಾನೊಬ್ಬ ಜನಸೇವಕ. ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಆಗಲೇ ಜನರಿಗೆ ಪರಿಚಯಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ.

kr2

ರಾಜ್ಯಭಾರ ವಹಿಸಿಕೊಂಡ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಮೈಸೂರು ಸಂಸ್ಥಾನ ಕೃಷ್ಣರಾಜರ ದಕ್ಷಾ ರಾಜ್ಯಭಾರ ಮತ್ತು ದೂರಾಲೋಚನೆಯಿಂದ ಆರಂಭಿಸಿದ ವಿವಿಧ ಕೈಗಾರಿಕೆಗಳಿಂದಾಗಿ ಮುಂದಿನ 30-40 ವರ್ಷಗಳಲ್ಲಿ ದೇಶದ ಶ್ರೀಮಂತರಲ್ಲಿ 2ನೇ ಸ್ಥಾನಗಳಿಸುವಷ್ಟರ ಮಟ್ಟಿಗೆ ಏರಿರುತ್ತಾರೆ ಎಂದರೆ ಅವರ ದಕ್ಷತೆ ಮತ್ತು ಕಾರ್ಯವೈಖರಿ ಹೇಗಿತ್ತು? ಎಂಬುದರ ಅರಿವಾಗುತ್ತದೆ. ರಾಜರು ಚಿಕ್ಕವರಿರುವ ಸಮಯದಲ್ಲೇ ಮೈಸೂರಿಗೆ ಭೇಟಿ ನೀಡಿದ ಲಾರ್ಡ್ ಮೆಕಾಲೆ ವ್ಯವಹಾರದ ದೃಷ್ಥಿಯಿಂದ ರಾಜರುಗಳಿಗೆ ಇಂಗ್ಲೀಷ್ ಕಲಿಯಲು ಸೂಚಿಸಿದ್ದನ್ನು ಸ್ವೀಕರಿಸಿದ ಮಹಾರಾಜರು ತಾವು ಇಂಗ್ಲೀಷ್ ಕಲಿತದ್ದಲ್ಲದೇ ತಮ್ಮ ಮಕ್ಕಳುಗಳಿಗಷ್ಟೇ ಇಂಗ್ಲೀಷ್ ಕಲಿಕೆಯನ್ನು ಸೀಮಿತಗೊಳಿಸದೇ ತಮ್ಮ ಪ್ರಾಂತ್ಯದಲ್ಲಿರುವ ಮಕ್ಕಳುಗಳೂ ಆಂಗ್ಲ ಮಾಧ್ಯಮದ ಶಿಕ್ಷಣ ಪಡೆಯುವಂತೆ ಮಾಡುತ್ತಾರೆ.

ಕೃಷ್ಣರಾಜ ಒಡೆಯರ್ ಅವರು ಕರ್ನಲ್ ಫ್ರೇಜರ್ (ಬೆಂಗಳೂರಿನ ಫ್ರೇಜರ್ ಟೌನ್ ಇವರ ಸವಿ ನೆನಪಿನಲ್ಲಿಯೇ ಇದೆ) ಅವರ ಬಳಿ ಇಂಗ್ಲೀಷ್, ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನ್ನು ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಕಲಿಯಲು ಆರಂಭಿಸಿದ ಸಮಯದಲ್ಲೇ ಅರಮನೆಯಲ್ಲಿ ನಡೆಯುತ್ತಿದ್ದ ಖಾಸಗೀ ಶುಭ ಸಮಾರಂಭವೊಂದರಲ್ಲಿ ಅಚಾತುರ್ಯವಾಗಿ ನಡೆದ ಬೆಂಕಿ ಅವಘಡದಲ್ಲಿ ಇಡೀ ಅರಮನೆಯೇ ಹೊತ್ತಿ ಉರಿದಾಗ, ಅದೇ ಫ್ರೇಜರ್ ಅವರು ಮಹಾರಾಜರಿಗೆ ಅಗ್ನಿಶಾಮಕ ದಳದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿದಾಗ ದೇಶದಲ್ಲೇ ಮೊತ್ತ ಮೊದಲಿಗೆ ಅಗ್ನಿಶಾಮಕ ದಳದ ಆರಂಭಕ್ಕೆ ಇದೇ ಕೃಷ್ಣರಾಜ ಒಡೆಯರ್ ಅವರೇ ಕಾರಣೀಭೂತರಾಗುತ್ತಾರೆ

tata_institure

1892ರಲ್ಲಿ ತಮ್ಮ ತಂದೆ ಶ್ರೀ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಈ ನಾಡು ಕಂಡ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದರು ಪರಿವ್ರಾಜಕರಾಗಿ ಮೈಸೂರಿಗೆ ಭೇಟಿ ನೀಡಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶ ಅದರಲ್ಲೂ ಕಾನಕಾನಹಳ್ಳಿ (ಕನಕಪುರದ) ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಲ್ಲದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಲು ಸಲಹೆನೀಡಿದಾಗ, ರಾಣಿಯವರ ಹೆಸರಿನಲ್ಲಿ ಅಮ್ಮಣ್ಣಿ ಕಾಲೇಜ್ ಆರಂಭವಾಗಿರುತ್ತದೆ. ಮುಂದೆ ಸ್ವಾಮಿಗಳು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಇದೇ ರಾಜಾಶ್ರಯದಿಂದಲೇ ಹೋಗಿ ಹಿಂದಿರುಗುವಾಗ ಹಡಗಿನಲ್ಲಿ ಭೇಟಿಯಾದ ಜೆಮ್ ಷೇಡ್ ಜೀ ಟಾಟಾರವರಿಗೆ ಇಲ್ಲಿನ ಮಕ್ಕಳಿಗೆ ವಿಜ್ಞಾನದ ಶಿಕ್ಷಣವನ್ನು ನೀಡಲು ಒಂದು ಒಳ್ಳೆಯ ವಿದ್ಯಾಸಂಸ್ಥೆಯನ್ನು ಕಟ್ಟಲು ಸೂಚಿಸಿದನ್ನು ಪರಿಗಣಿಸಿ ಮುಂಬೈ ರಾಜ ಅದಕ್ಕೆ ಪೂರಕವಾಗಿ ಸಹಕರಿಸಲು ಒಪ್ಪದೇ ಹೋದಾಗ, ಮತ್ತೇ ವಿವೇಕಾನಂದರಿಂದ ಪ್ರೇರೇಪಿತರಾಗಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸೂಕ್ತ ಜಾಗ ಮತ್ತು ಧನ ಸಹಾಯವನ್ನು ಹುಡುಕುತ್ತಿದ್ದ ಜೆಮ್ ಷೇಡ್ ಜೀ ಟಾಟಾರವರನ್ನು ಬೆಂಗಳೂರಿಗೆ ಕರೆಸಿ ಯಶವಂತಪುರದಲ್ಲಿ ಸುಮಾರು 400 ಎಕರೆಯಷ್ಟು ಜಮೀನು ನೀಡಿದ್ದಲ್ಲದೇ ಅಂದಿನ ಕಾಲಕ್ಕೇ ಸುಮಾರು ಐದು ಲಕ್ಷ ರೂಪಾಯಿಗಳ ಧನಸಹಾಯ ಮಾಡಿದ್ದಲ್ಲದೇ ವಾರ್ಷಿಕವಾಗಿ ೫೦,೦೦೦ ರೂಗಳನ್ನು ಕೊಡುವ ವಾಗ್ಧಾನ ಮಾಡಿದವರೂ ಇದೇ ನಾಲ್ವಡಿ ಕೃಷ್ನರಾಜ ಒಡೆಯರ್ ಎಂಬುದು ಹೆಮ್ಮೆಯ ಸಂಗತಿಯಾಗಿದೆ. 27 ಮೇ, 1909 ರಲ್ಲಿ ಸ್ಥಾಪಿಸಲ್ಪಟ್ಟ ಟಾಟಾ ಇನಿಸ್ಟಿಟ್ಯೂಟ್, ಇಂದು ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಹೆಸರಿನಲ್ಲಿ ವಿಶ್ವವಿಖ್ಯಾತವಾಗಿ ಸಾವಿರಾರು ವಿಜ್ಞಾನಿಗಳಿಗೆ ವಿದ್ಯಾತಾಣವಾಗಿದೆ.

ಆರಂಭದಿಂದಲೂ ವಿದೇಶಿಗರೇ ನಿರ್ದೇಶಕರಾಗಿದ್ದ ಟಾಟಾ ಇನಿಸ್ಟಿಟ್ಯೂಟಿನಲ್ಲಿ ಮೊತ್ತ ಮೊದಲ ಬಾರಿಗೆ 1933ರಲ್ಲಿ ನೊಬೆಲ್ ಪುರಸ್ಕೃತರಾಗಿದ್ದ ಸರ್ ಸಿ .ವಿ. ರಾಮನ್ ಅವರನ್ನು ಪ್ರಪ್ರಥಮ ಭಾರತೀಯ ನಿರ್ದೇಶಕರಾಗಿ ನಿಯೋಜಿಸಲಾಯಿತಾದರೂ, ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ಅಲ್ಲಿನ ಒಳ ರಾಜಕೀಯದಿಂದ ಬೇಸತ್ತು ಸರ್ ಸಿ.ವಿ.ರಾಮನ್ ಅವರು ರಾಜೀನಾಮೆ ಕೊಟ್ಟು ಕೋಲ್ಕತ್ತಾಗೆ ಹೊರಡಲು ನಿರ್ಧರಿಸಿದಾಗ, ತಮ್ಮ ರಾಜ್ಯದಿಂದ ಪ್ರತಿಭಾಪಲಾಯನವಾಗ ಬಾರದೆಂದು ಅವರನ್ನು ಮೈಸೂರು ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ಡಿಸೆಂಬರ್ 1934ರಲ್ಲಿ ಟಾಟಾ ಇನ್‍ಸ್ಟಿಟ್ಯೂಟ್‍ ಸಮೀಪದಲ್ಲೇ 10 ಎಕರೆ ಜಮೀನು ಮಂಜೂರು ಮಾಡಿ ಮುಂದೆ 1948ರಲ್ಲಿ ಅದೇ ಸ್ಥಳದಲ್ಲಿಯೇ ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಆರಂಭವಾಗಲು ಕೃಷ್ಣರಾಜ ಒಡೆಯರ್ ಅವರೇ ಕಾರಣರಾದರು.

krs

1902ರಲ್ಲಿ ಆರಂಭವಾದ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕುಂಟುತ್ತಾ ಸಾಗುತ್ತಾ ಕೇವಲ ಮಳೆಗಾಲದಲ್ಲಿ ಮಾತ್ರವೇ ವಿದ್ಯುತ್ ಉತ್ಪಾದಿಸುತ್ತಾ, ಮೈಸೂರು, ಬೆಂಗಳೂರು ಮತ್ತು ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿರುತ್ತದೆ. ವರ್ಷದ 365 ದಿನಗಳೂ ವಿದ್ಯುತ್ ಉತ್ಪಾದಿಸಬೇಕಾದರೇ ನೀರನ್ನು ಎಲ್ಲಾದರೂ ತಡೆ ಹಿಡಿದು ಅದನ್ನು ಪ್ರತಿದಿನವೂ ಪೂರೈಸುವಂತೆ ಮಾಡುವ ಯೋಜನೆಯಿಂದಾಗಿಯೇ ಮೈಸೂರಿನ ಸಮೀಪದ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟೆಯನ್ನು ಕಟ್ಟಿ ನೀರನ್ನು ತಡೆಹಿಡಿಯುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಆ ಸಮದಲ್ಲಿ ಮುಂಬೈಯಲ್ಲಿ ಎಂಜಿನಿಯರ್ ಆಗಿದ್ದ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು 1909 ರಲ್ಲಿ ಮಹಾರಾಜರು ಮೈಸೂರಿಗೆ ಕರೆಸಿಕೊಂಡು ತಮ್ಮ ಕನಸಿನ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ 1911ರಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಮೊದಲ ವರದಿ ಸಿದ್ಧಪಡಿಸುತ್ತಾರೆ. ಆದರೆ ಈ ಯೋಜನೆಗೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಎಂದು ಮದ್ರಾಸ್ ಸರ್ಕಾರದ ಆಕ್ಷೇಪ ಎತ್ತಿದಾಗ, ಆ ಅಣೆಕಟ್ಟೆಗೆ ಹಣವನ್ನು ಹೊಂದಿಸಲು ತಮ್ಮ ರಾಣಿಯವರ ಚಿನ್ನಾಭರಣ, ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳಿದ್ದ ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ಹೆಚ್ಚಿನ ಪ್ರಮಾಣದಲ್ಲಿ ಹಣ ಸಿಗುವ ಕಾರಣದಿಂದ ದೂರದ ಬಾಂಬೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಹೊಂದಿಸುವ ಮೂಲಕ 1911 ಅಕ್ಟೋಬರ್ 12ರಂದು ಅವರ ಕನಸಿನ ಯೋಜನೆ ಆರಂಭವಾಗಿ 1932ರಲ್ಲಿ ಪೂರ್ಣವಾಗಿ ಇಂದಿಗೂ ಮೈಸೂರು ಮಂಡ್ಯ ಕಾವೇರಿ ಜಲಾನಯನ ಪ್ರದೇಶದ ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ನೀರಿನ ಆಶ್ರಯವಾಗಿರುವುದಲ್ಲದೇ ಬೆಂಗಳೂರು ಮಹಾನಗರವೂ ಸೇರಿದಂತೆ ಕೋಟ್ಯಾಂತರ ಜನರಿಗೆ ಕುಡಿಯುವ ನೀರಿನ ಆಗರವಾಗಿದೆ. ಜೋಗದ ಜಲಪಾತದಲ್ಲಿ ವಿದ್ಯುತ್ ಉತ್ಪಾದನಾ ಘಟಕವೂ ಮಹಾರಾಜರ ಕೊಡುಗೆಯೇ ಆಗಿದೆ.

ಇಂದು ನಾಡಿನಾದ್ಯಂತ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದ್ದರೆ ಆದನ್ನು ನಮ್ಮ ರಾಜರು ಅಂದಿನ ಕಾಲದಲ್ಲೇ ಜಾರಿಗೆ ತಂದು ಪ್ರತೀ ಗ್ರಾಮಗಳಿಗೂ ಒಂದು ಕನ್ನಡಿ ಮತ್ತು ಬಾಚಣಿಗೆ ಕೊಟ್ಟು ಪ್ರತಿಯೊಬ್ಬರೂ ಶುಭ್ರವಾಗಿ ಇರಬೇಕು ಎಂದು ಅಜ್ಞಾಪಿಸಿರುತ್ತಾರೆ. ಅದೇ ರೀತಿ ತಮ್ಮ ದೂರದೃಷ್ಟಿಯಿಂದ ಮೈಸೂರಿನ ಪ್ರತೀ ರಸ್ತೆಗಳು ವಿಶಾಲವಾಗಿ ಇರುವಂತೆ ಎಂದೂ ಕೂಡಾ ರಸ್ತೆಗಳಲ್ಲಿ ಜನ ಸಂದಣಿಯಾಗದಂತೆ ನೋಡಿಕೊಂಡಿರುತ್ತಾರೆ. ಬ್ರಿಟೀಷರೇ ಹೇಳಿದಂತೆ ಬ್ರಿಟನ್ ಬಿಟ್ಟರೇ ಬ್ರಿಟೀಷರು ವಾಸ ಮಾಡುವಂತಹ ಸುಸಜ್ಜಿತ, ವ್ಯವಸ್ಥಿತ ಮತ್ತು ಸುಂದರ ನಗರ ಮತ್ತೊಂದು ಎಂದರೆ ಅದು ಮೈಸೂರು ಎಂದು ಹೇಳಿದ್ದದ್ದು ಮೈಸೂರಿನ ಹೆಮ್ಮೆಯ ಸಂಕೇತವಾಗಿದೆ.

ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿಡುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿದ್ದಲ್ಲದೇ, ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಲ್ಲದೇ, ಬೆಂಗಳೂರು, ಮೈಸೂರು ನಗರಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು ಇದೇ ನಾಲ್ವಡಿಯವರೇ.

ಆರ್ಥಿಕತೆ, ಕೃಷಿ, ಶಿಕ್ಷಣ ವಲಯದಲ್ಲಿ ಅನೇಕ ಸುಧಾರಣೆಗಳ ಮೂಲಕ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ ದಕ್ಷ ಆಡಳಿತಗಾರ, ರಾಜರ್ಷಿ’ ಬಿರುದಾಂಕಿತ ನಮ್ಮ ನಾಡಿನ ಹೆಮ್ಮೆಯ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ‌ಹಲವಾರು ಸಾಧನಗಳನ್ನು ಈ ಚಿತ್ರದಲ್ಲಿ ‌ ನೆನಪಿಸಿ ಕೊಳ್ಳಲಾಗಿದೆ.

kr3

ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಅವರು, ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲ ಎಂದು ಭಾವಿಸಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರೆ, 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದಲ್ಲದೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ 7000 ವಯಸ್ಕರ ಶಾಲೆ. ಹೀಗೆ ಒಂದರ ಹಿಂದೆ ಒಂದರಂತೆ ಶಿಕ್ಷಣ ಕ್ಷೇತ್ರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸೇವೆ ಅಪಾರವಾಗಿದೆ.
ಪ್ರಜೆಗಳ ಸಮಸ್ಯೆಯನ್ನು ಆಲಿಸಲು ಪ್ರಜಾ ಪ್ರತಿನಿಧಿ ಸಭೆಯನ್ನು ಬಲಗೊಳಿಸಿ, 1907ರಲ್ಲಿ ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದರು. ಇವರ ಕಾಲದಲ್ಲೇ ದೇವದಾಸಿ ಪದ್ದತಿಯ ನಿರ್ಮೂಲನೆ, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದಲ್ಲದೇ, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದರು. ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲೇ ಬೇಕೆನ್ನುವ ಕಾನೂನು ರೂಪಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿದ್ದರು.

ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯೂ ಸಹಾ ಇವರ ಕಾಲದಲೇ ಜಾರಿಗೆ ಆಗಿತ್ತು. ಯಾಂತ್ರಿಕೃತ ಕೈಗಾರಿಕೆಗಳ ಮೂಲಕ ಹೆಚ್ಚು ಹೆಚ್ಚು ಉತ್ಪಾದಿಸಬಹುದು ಮತ್ತು ಹೆಚ್ಚಿನ ಜನರಿಗೆ ಉದ್ಯೋಗವನ್ನು ಕೊಡಬಹುದು ಎಂದು ನಿರ್ಧರಿಸಿ ಇವರ ಕಾಲದಲ್ಲೇ ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಪೇಪರ್ ಮಿಲ್, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಹಾಗೆ ಹೆಚ್ಚಾಗಿ ತಯಾರಾದ ಗಂಧದ ಎಣ್ಣೆಯು ಹಾಳಾಗದಂತೆ ತಡೆಯಲು ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಹೇರಳವಾಗಿ ಕಬ್ಬು ಬೆಳೆಯುವ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಹೀಗೆ ದಿನವೆಲ್ಲಾ ಪಟ್ಟಿ ಮಾಡ ಬಹುದಾದಷ್ಟು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದರು.

SBM

ಪ್ರಜೆಗಳ ಆರೋಗ್ಯಕ್ಕಾಗಿ ಮೊತ್ತ ಮೊದಲ ಬಾರಿಗೆ ಲಸಿಕಾ ಕಾರ್ಯಕ್ರಮವನ್ನು ತಮ್ಮ ಅರಮನೆಯ ಅವರಣದಲ್ಲಿ ಮಹಾರಾಣಿಯವರಿಗೆ ಹಾಕಿಸುವ ಮೂಲಕ ಆರಂಭಿಸಿದ್ದಲ್ಲದೇ, ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳನ್ನೂ ಆರಂಭಿಸಿದ್ದರು. ಇಂದಿಗೂ ಪ್ರಖ್ಯಾತವಾಗಿರುವ ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ, ಮೈಸೂರಿನ ಕ್ಷಯರೋಗ ಆಸ್ಪತ್ರೆಯನ್ನೂ ಅಭಿವೃದ್ಧಿಪಡಿಸಿದರು. ವಾಣಿಜ್ಯ ಕ್ಷೇತ್ರದಲ್ಲಿ ಆರ್ಥಿಕವಾಗಿ ಸಧೃಢತೆಯನ್ನು ಹೊಂದುವ ಸಲುವಾಗಿ ಖಾಸಗೀ ಸಹಭಾಗಿತ್ವದೊಡನೆ ಮೈಸೂರು ಬ್ಯಾಂಕ್ ಆರಂಭಿಸಿದ್ದಲ್ಲದೇ, ರೈತರಿಗೆ ಸ್ಥಳೀಯವಾಗಿ ಸಾಲ ಸೌಲಭ್ಯಗಳು ದೊರೆಯುವಂತಾಗಲು 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಿ ಅದರ ರೈತರು ತಮ್ಮ ಜಮೀನು ಅಡಮಾನ ಇಟ್ಟು ಸಾಲ ಪಡೆದು ನಂತರ ಹಣ ತೀರಿಸಿ ತಮ್ಮ ಜಮೀನು ಬಿಡಿಸಿಕೊಳ್ಳುವಂತಹ ಸಹಕಾರ ಅಡಮಾನ ಬ್ಯಾಂಕುಗಳನ್ನು ಆರಂಭಿಸಿದ ಕೀರ್ತಿಯೂ ಸಹಾ ನಾಲ್ವಡಿ ಕೃಷ್ಣರಾಜರಿಗೇ ಸಲ್ಲುತ್ತದೆ.

ಮೈಸೂರು, ಬೆಂಗಳೂರು ನಗರಗಳಲ್ಲಿ ನಿರ್ಮಾಣವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನ ವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು ಹೀಗೆ ಹತ್ತು ಹಲವು ಕಟ್ಟಡಗಳ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಮಹಾರಾಜರೇ ಕಾರಣೀಭೂತರಾಗಿದ್ದಾರೆ.

hal

ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಂದ ಉದ್ಯಾನ ನಗರವಾಗಿ, ನಂತರ ಟಾಟಾ ಇನಿಸ್ಟಿಟ್ಯೂಟ್ ಮತ್ತು ರಾಮನ್ ಇನಿಸ್ಟಿಟ್ಯೂಟ್ ಮೂಲಕ ವಿಜ್ಞಾನ ನಗರವಾಗಿ ಬೆಳೆಯುತ್ತಿದ್ದಾಗಲೇ. ಬೆಂಗಳೂರಿಗೆ ವಿಮಾನ ನಗರವೆಂಬ ಖ್ಯಾತಿಯನ್ನೂ ತಂದು ಕೊಡುವ ಸಲುವಾಗಿ ಕೈಗಾರಿಕೋದ್ಯಮಿ ವಾಲ್‌ಚಂದ್ ಹೀರಾಚಂದ್ ಅವರೊಂದಿಗೆ ಒಡಂಬಡಿಕೆಯೊಂದಿಗೆ ಅಂದಿನ ಕಾಲಕ್ಕೇ 4 ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳದೊಂದಿಗೆ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ (HAL) ಎಂಬ ಸಂಸ್ಥೆಯನ್ನು ಆರಂಭಿಸಲು ಕಾರಣೀಭೂತರಾಗಿದ್ದರು. ಮಹಾರಾಜರು ಕಾಲವಾದ ಕೆಲವೇ ತಿಂಗಳುಗಳ ನಂತರ ಡಿಸೆಂಬರ್ 23, 1940 ಎಚ್.ಎ.ಎಲ್. ಕಾರ್ಖಾನೆಗೆ ಆರಂಭವಾಗುವ ಮೂಲಕ ಬೆಂಗಳೂರು ವಿಮಾನ ನಗರ ಎಂದೂ ಖ್ಯಾತಿ ಪಡೆಯಿತು. ಈ ಕಾರಣಗಳಿಂದಾಗಿಯೇ ಮುಂದೇ ಬಾಹ್ಯಾಕಾಶ ನಗರ ನಂತರ ಅದು ಎಲೆಕ್ಟ್ರಾನಿಕ್ಸ್ ನಗರವಾಗಿ ಸದ್ಯಕ್ಕೆ ವಿಶ್ವಮಾನ್ಯ ಮಾಹಿತಿ ತಂತ್ರಜ್ಞಾನ ನಗರವಾಗಿದೆ. ವೈಮಾಂತರಿಕ್ಷ ಕ್ಷೇತ್ರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಇಂದಿನ ಅನನ್ಯ ಸಾಧನೆಗಳಿಗೆ ಮೈಸೂರು ಮಹಾರಾಜರು ತಮ್ಮ ದೂರದೃಷ್ಟಿಯಿಂದ ಸ್ಥಾಪಿಸಿದ ಈ ಎಲ್ಲ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳೇ ಮೂಲ ಕಾರಣ ಎನ್ನುವುದು ಅಪ್ಪಟ ಸತ್ಯವಾಗಿದೆ.

ಸ್ವತಃ ಲಲಿತಕಲೆ, ಸಂಗೀತ ಮತ್ತು ವೇದ ಪಾರಂಗತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 36000 ಪುಟಗಳ ಋಗ್ವೇದವನ್ನು 1000 ಪುಟಗಳ 36 ಸಂಪುಟದ ಪುಸ್ತವನ್ನಾಗಿ ಮಾಡಿಸಿ ಎಲ್ಲರಿಗೂ ಹಂಚಿಕೆ ಮಾಡಿದ್ದಲ್ಲದೇ, ಸ್ವತಃ 21 ಕೃತಿಗಳನ್ನು ರಚಿಸಿ ಅದಕ್ಕೇ ಅವರೇ ಸ್ವತಃ ರಾಗ ಸಂಯೋಜನೆ ಮಾಡಿ ಆಡು ಮುಟ್ಟದ ಸೊಪ್ಪಿಲ್ಲಾ ಕೃಷ್ಣರಾಜ ಒಡೆಯರ್ ಕೈಯ್ಯಾಡಿಸದ ಕ್ಷೇತ್ರವಿಲ್ಲಾ ಎಂದೇ ಪ್ರಖ್ಯಾತರಾಗಿದ್ದರು.

ಮೈಸೂರಿನ ಹೆಸರನ್ನು ವಿಶ್ವವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಎಲ್ಲವೂ ಹದವಾಗಿ ಬೆರೆಸಿ, ಮೈಸೂರಿನ ಅರಮನೆಯ ಬಾಣಸಿಗರಾಗಿದ್ದ ಶ್ರೀ ಕಾಕಾಸುರ ಮಾದಪ್ಪನವರು ಅಚಾನಕ್ಕಾಗಿ ತಯಾರಿಸಿದ ಈ ಸಿಹಿ ತಿಂಡಿಗೆ ಮೈಸೂರ್ ಪಾಕ್ ಎಂದು ನಾಮಕರಣ ಮಾಡಿದ್ದೂ ಇದೇ ಮಹಾರಾಜರೇ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯ ಬಹುದಾಗಿದೆ

kro1

ದೇಶದಲ್ಲಿ ಕರ್ನಾಟಕದ ಭವ್ಯ ಇತಿಹಾಸಕ್ಕೆ ಅಡಿಪಾಯ ಹಾಕಿದ್ದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ತಮ್ಮ ವಯೋಸಹಜವಾಗಿ ಆಗಸ್ಟ್ 3, 1940ರಲ್ಲಿ ನಿಧನರಾಗುತ್ತಾರೆ. 1895 ರಿಂದ 1902 ವರೆಗೆ 7 ವರ್ಷಗಳ ಕಾಲ ತಾಯಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರ ಆಡಳಿತಾವಧಿಯು ಸೇರಿದಂತೆ 1902ರಿಂದ 1940ರ ತನಕದ 38 ವರ್ಷಗಳೂ ಸೇರಿ 45 ವರ್ಷಗಳ ಕಾಲ ನಡೆಸಿದ ಅವರ ಆಡಳಿತಾವಧಿ ಮೈಸೂರಿನ ಸುವರ್ಣಯುಗ ಎಂದರೆ ತಪ್ಪಾಗದು. ಮೈಸೂರು ಸಂಸ್ಥಾನದ ಮಹಾರಾಜರಾಗಿ ಕನ್ನಡಿಗರ ಹೆಮ್ಮೆಯನ್ನು ಪ್ರಪಂಚಾದ್ಯಂತ ಪಸರಿಸಿದ ಪ್ರಾಥಃಸ್ಮರಣೀಯರಾದ ಕರುನಾಡಿನ ಭಾಗ್ಯವಿಧಾತ, ರಾಜರ್ಷಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನದಿನಂದು ಅವರಿಗೆ ಗೌರವನ್ನು ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಅಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

5 thoughts on “ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

  1. ಮೈಸೂರು ಎಂದರೆ ಮಹಾರಾಜರು . ಅವರನ್ನು ಸ್ಮರಿಸುವುದು ನಮ್ಮ ಪುಣ್ಯ. ನಿಮ್ಮ ಈ ಲೇಖನ ತುಂಬಾ ಅದ್ಭುತವಾಗಿದೆ. ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಕಾರ್ಯವೈಖರಿಯನ್ನು. ಹಾಗೂ ಜನರಿಗಾಗಿ ಮಾಡಿದ ಜನಸೇವೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ಧನ್ಯವಾದಗಳು ಸರ್

    Liked by 1 person

    1. Very good article,this generation must read all these and know the history. Our illfate is we never celeberate the birthdays of our heroes. But wodeyar is gem of a king ,you have covered all corner of his ruling and contributions.

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s