ಸಂಘ ಪರಿವಾರ ಮತ್ತು ಕಾರ್ಯಕರ್ತರು

ಸ್ವಾತ್ರಂತ್ರ್ಯ ಪೂರ್ವದಲ್ಲಿ ಸ್ವಾತ್ರಂತ್ರ್ಯ ಹೋರಾಟಗಾರರೆಂದೇ ತಮ್ಮನ್ನು ತಾವು ಬಿಂಬಿಸಿಕೊಂಡು ಚಳುವಳಿಯಲ್ಲಿ ಮುಂದಿದ್ದ ಕೆಲವು ಹಿಂದೂ ನಾಯಕರೇ ತಮ್ಮನ್ನು ಹಂದಿ ಎಂದ ಕರೆದರೂ ಬೇಸರವಿಲ್ಲ. ಆದರೆ ದಯವಿಟ್ಟು ತಮ್ಮನ್ನು ಹಿಂದೂ ಎಂದು ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಲ್ಲದೇ, 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಗೋಹತ್ಯೆ ಮತ್ತು ಖಿಲಾಫತ್ ಚಳುವಳಿಯ ಬಗ್ಗೆ ಸೂಕ್ತವಾದ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಆ ಅಧಿವೇಶನದ ಉಸ್ತುವಾರಿಯನ್ನು ಹೊತ್ತಿದ್ದ ಮತ್ತು ಸ್ಥಳೀಯ ಕಾಂಗ್ರೇಸ್ಸಿನ ಸಹಕಾರ್ಯದರ್ಶಿಯಾಗಿದ್ದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಕೇಳಿಕೊಂಡಾಗ, ಇದು ಹಿಂದೂ ಮತ್ತು ಮುಸಲ್ಮಾನರ ಐಕ್ಯತೆಗೆ ಭಂಗ ಬರುತ್ತದೆ ಎನ್ನುವ ಕಾರಣ ನೀಡಿ ಡಾ.ಜೀ ಅವರ ಬೇಡಿಕೆಯನ್ನು ಸಾರಾ ಸಗಟಾಗಿ ಮಹಾತ್ಮಾಗಾಂಧಿ ಮತ್ತವರ ತಂಡ ತೀರ್ಮಾನಿಸಿದಾಗ, ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಅವರನ್ನು ಒಗ್ಗೂಡಿಸಲು ಒಂದು ಬಲವಾದ ಸಂಘಟನೆಯ ಅವಶ್ಯಕತೆಯನ್ನು ಮನಗಂಡು 27, ಸೆಪ್ಟೆಂಬರ್  1925ನೇ ಇಸ್ವಿಯ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಡಾ. ಹೆಡಗೇವಾರ್ ಸ್ಥಾಪಿಸಿದರು.

anghaತಮ್ಮ ಸಂಘಟನೆ ಉಳಿದೆಲ್ಲಾ ಸಂಘಟನೆಗಳಿಗಿಂತಲೂ ಭಿನ್ನವಾಗಿರಬೇಕೆಂದು ಯೋಚಿಸಿ, ವ್ಯಕ್ತಿ ಎಂದ ಮೇಲೆ ಆತ ನಶ್ವರ ಮತ್ತು ಆತನಿಂದ ತಪ್ಪುಗಳಾಗುವುದು ಸಹಜ. ಹಾಗಾಗಿ ಬಹಳ ದೂರಾಲೋಚನೆಯಿಂದ ಯಾವುದೇ ವ್ಯಕ್ತಿಯನ್ನು ಗುರುವಾಗಿಸದೇ, ಸಂಘದಲ್ಲಿ ಯಾವುದೇ ವ್ಯಕ್ತಿಪೂಜೆಗೆ ಆಸ್ಪದವಿಲ್ಲದೇ, ಭಗವಾ ಧ್ವಜವನ್ನು ಗುರುವನ್ನಾಗಿಸಿದರು.

ಡಾ.ಜೀ ಅವರ ಮರಣಾನಂತರ 2ನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಲ್ವಾಲ್ಕರ್ (ಗುರೂಜಿ) ಅವರು ಸಂಘವನ್ನು ಮತ್ತಷ್ಟು ಬೆಳಸಿದ್ದಲ್ಲದೇ, ಸಂಘದ ಚಟುವಟಿಕೆಗಳು ಕೇವಲ ಶಾಖೆಗಷ್ಟೇ ಮೀಸಲಾಗಿರದೇ ಸಮಾಜದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸುವಂತಾಗಬೇಕೆಂದು ನಿರ್ಧರಿಸಿದ ಕಾರಣದಿಂದಾಗಿಯೇ, ವಿಶ್ವಹಿಂದೂ ಪರಿಷದ್, ವನವಾಸಿ ಕಲ್ಯಾಣ, ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘದ ಜೊತೆಯಲ್ಲೇ ರಾಜಕೀಯವಾಗಿ ಪ್ರಾವರ್ಧಮಾನಕ್ಕೆಂದು ಬರಲು ಅಕ್ಟೋಬರ್ 21 1951ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ನೇತೃತ್ವದಲ್ಲಿ ಜನಸಂಘ ಸ್ಥಾಪಿತವಾಗಿ ಸುಮಾರು ವರ್ಷಗಳ ಕಾಲ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಆರಕ್ಕೇರದೇ, ಮೂರಕ್ಕಿಳಿಯದೇ ಇದ್ದ ಪಕ್ಷ 1977 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಜನತಾ ಪಕ್ಷದೊಂದಿಗೆ ವಿಲೀನವಾದರೂ ನಂತರ ಸಂಘದೊಂದಿಗಿನ ಸಂಬಂಧದ ಕುರಿತಾಗಿ ವಿವಾದಗಳಿಂದಾಗಿ ಬೇಸತ್ತು ಜನತಾಪರಿವಾರದಿಂದ ಹೊರಬಂದು 6ನೇ ಏಪ್ರಿಲ್ 1980 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲ ಕೃಷ್ಣ ಅಡ್ವಾಣಿಯವರ ಸಾರಥ್ಯದಲ್ಲಿ ,ಉದಯವಾಗಿ ನಂತರ ಆ ಎಲ್ಲಾ ನಾಯಕರ ಪರಿಶ್ರಮ ಮತ್ತು ಕಾರ್ಯಕರ್ತರ ನಿಸ್ವಾರ್ಥ ತ್ಯಾಗ ಮತ್ತು ಬಲಿದಾನಗಳಿಂದಾಗಿ ಇಂದು ಬಿಜೆಪಿ ಸುಮಾರು 15+ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಿದೆಯಲ್ಲದೇ, ಕೇಂದ್ರದಲ್ಲೂ ಅಧಿಕಾರವನ್ನು ನಡೆಸುತ್ತಿರುವುದು ಈಗ ಇತಿಹಾಸ.

ಆದರೆ ಸಂಘ, ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮತ್ತು ವಿದ್ಯಮಾನಗಳು ನಿಜಕ್ಕೂ ಸಂಘದ ಸಂಸ್ಥಾಪಕರ ಆಶಯಗಳಿಂದ ದೂರವಾಗುತ್ತಿದೆಯೇ? ಎಂಬ ಭಾವನೆ ಮೂಡುತ್ತಿದ್ದು, ವ್ಯಕ್ತಿ ಪೂಜೆಯೇ ಅಧಿಕವಾಗುತ್ತಿಯೋ ಏನೋ? ಎಂಬ ಕಳವಳ ಮೂಡುತ್ತಿದೆ. ಎಲ್ಲದ್ದಕ್ಕಿಂತಲೂ ಹೆಚ್ಚಿನ ಆಘಾತಕಾರಿ ಎಂದರೆ ಒಬ್ಬ ಕಾರ್ಯಕರ್ತನಾಗಿ ಇದನ್ನು ಪ್ರಶ್ನಿಸಿದವರನ್ನೇ ತಪ್ಪಿತಸ್ಥರನ್ನಾಗಿ ಮಾಡಿ ಅವರನ್ನು ಸಂಘಟನೆಯಿಂದಲೇ ಹೊರದಬ್ಬುವ ಕೆಟ್ಟ ಸಂಪ್ರದಾಯಕ್ಕೆ ಮುಂದಾಗಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಆಘಾತ ಕಾರಿಯಾಗಿದೆ.

ಸಂಘದ ಸ್ವಯಂಸೇಕರ ಸ್ವಾಮಿನಿಷ್ಠೆ ಮತ್ತು ಕಾರ್ಯತತ್ಪರತೆಯ ಬಗ್ಗೆ ಸಂಘ ಮತ್ತು ಸಂಘ ಪರಿವಾರದ ವಿರೋಧಿಗಳೂ ಸಹಾ ಚಕಾರ ಎತ್ತುವುದಿಲ್ಲ. ಸಂಘ ಮತ್ತು ಪರಿವಾರ ಈ ಮಟ್ಟಕ್ಕೆ ಬೆಳೆಯಲು ಕೇವಲ ದೇಶವಲ್ಲದೇ, ವಿದೇಶಗಳಲ್ಲಿಯೂ ಇರುವ ಕೋಟ್ಯಾಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದಲೇ ಆಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. Once a swayamsevak is always a swayamsevak ಎನ್ನುವಂತೆ ಸ್ವಯಂಸೇವಕರಾದವರು ಜೀವನ ಪರ್ಯಂತ ಸಂಘನಿಷ್ಠೆ ಮತ್ತು ಅನುಶಾಸನ ಪಾಲನೆ ಮಾಡುತ್ತಲೇ ಹೋಗುತ್ತಾರೆ. ಅವರೆಂದೂ ವ್ಯಕ್ತಿಗಾಗಲೀ ವ್ಯಕ್ತಿತ್ವಕ್ಕಾಗಲೀ ಪ್ರಾಮುಖ್ಯತೇ ಕೊಡದೇ ಹೋದದ್ದಕ್ಕೇ ಇಂದು ಬಿಜೆಪಿಯಲ್ಲೂ ಪಕ್ಷ ಮತ್ತು ಸಿದ್ಧಾಂತವನ್ನು ಗಾಳಿಗೆ ತೂರಿರುವ ಹಲವು ಭ್ರಷ್ಟರು ಆಯ್ಕೆಯಾಗಿ ಅಧಿಕಾರವನ್ನೂ ಅನುಭವಿಸುತ್ತಿದ್ದಾರೆ.

ಕಾರ್ಯುಕರ್ತರ ನಿಷ್ಟೆ ಮತ್ತು ಪಕ್ಷ ಸಿದ್ಧಾಂತವನ್ನು ದುರ್ಬಳಕೆ ಮಾಡಿಕೊಂಡು ಈ ಭ್ರಷ್ಟ ನಾಯಕರು ಮಾಡುವ ಅಪಸವ್ಯಗಳನ್ನು ಕಾರ್ಯಕರ್ತನಾದವನು ಪ್ರಶ್ನಿಸದೇ, ಕಣ್ಣು ಮುಚ್ಚಿಕೊಂದು ಅದನ್ನು ಸಹಿಸಬೇಕು ಮತ್ತು ವಿರೋಧಿಗಳೊಂದಿಗೆ ಸಮರ್ಥನೆ ಮಾಡ ಬೇಕು ಎಂದು ಬಯಸುತ್ತಿರುವುದು ಪಕ್ಷದ ಹಿತದೃಷ್ಟಿಯಿಂದ ಆಘಾತಕಾರಿಯಾದ ಬೆಳವಣಿಗೆಯಾಗಿದೆ. ಪರಿವಾರದಲ್ಲಿ ತಪ್ಪು ನಡೆದಾಗ ಅಥವಾ ಯಾರೇ ಆಗಲಿ ನಮ್ಮ ಗಡಿ-ಗುಡಿ-ನುಡಿಗಳ ಬಗ್ಗೆ ಅವಹೇಳನ ಮಾಡಿದಾಗ ಮುಲಾಜಿಲ್ಲದೇ, ನಮ್ಮ ವಿರೋಧಿಗಳಿಗಿಂತಲೂ ಮೊದಲು ಸಂಘದ ಕಾರ್ಯಕರ್ತರೇ ಟೀಕಿಸಿ ಅದನ್ನು ಸರಿಪಡಿಸ ಬೇಕು ಎಂದೇ ಸಂಘ ಹೇಳಿಕೊಟ್ಟಿದೆ. ಕಾರ್ಯಕರ್ತನೆಂದೂ ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲಾರ ಎಂಬುದು ಪರಿವಾರದವರೆಲ್ಲರಿಗೂ ತಿಳಿದಿದ್ದರೂ, ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವವರು ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಭೋಗ ಪ್ರಧಾನರಾಗಿ ಹೊಂದಾಣಿಕೆ ರಾಜಕೀಯ ಮಾಡುತ್ತಾ ತನಗೆ ತನ್ನ ಮಕ್ಕಳಿಗೆ, ತನ್ನ ಮೊಮ್ಮಕ್ಕಳಿಗೆ ಹೀಗೆ ಹತ್ತಾರು ಮಕ್ಕಳಿಗೆ ವಂಶ ಪಾರಂಪರ್ಯವಾಗಿ ಅಧಿಕಾರ ಮತ್ತು ಆಸ್ತಿಗಳನ್ನು ಮಾಡಿಕೊಂಡು ಹೋಗುತ್ತಿರುವುದು ಕೇವಲ ಪ್ರಜಾತಂತ್ರಕ್ಕಷ್ಟೇ ಅಲ್ಲದೇ ಸಂಘದ ಸಿದ್ಧಾಂತಕ್ಕೂ ವಿರುದ್ಧವಾಗಿದೆ.

  • ಕೇರಳದಲ್ಲಿ ಪ್ರತಿ ದಿನವೂ ಕಮ್ಯೂನಿಷ್ಟರು ಮತ್ತು ಮುಸ್ಲಿಂ ಮತಾಂಧರಿಂದ ಹತರಾಗುತ್ತಿರುವ ಹಿಂದೂ ಕಾರ್ಯಕರ್ತರು
  • ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ರಾತ್ರೋ ರಾತ್ರಿ ಮನೆಗಳಿಗೆ ನುಗ್ಗಿ ಗೋವುಗಳನ್ನು ಕದಿಯುವ ಗೋಗಳ್ಳರ ವಿರುದ್ಧ ಪ್ರಾಣದ ಹಂಗನ್ನೂ ತೊರೆದು ಹೋರಾಡುವ ಹಿಂದೂ ಕಾರ್ಯಕರ್ತರ ವಿರುದ್ದವೇ ಕೇಸುಗಳು
  • ಹಿಂದೂಗಳ ಪರ ಶ್ರೀರಾಮ ಸಂಘಟನೆ ಮೂಲಕ ಹೋರಾಡುತ್ತಿರುವ ಶ್ರೀ ಪ್ರಮೋದ್ ಮುತಾಲಿಕ್ ವಿರುದ್ಧ ಗಡಿಪಾರಿನ ಜೊತೆಗೆ ನೂರಾರು ಕೇಸುಗಳು
  • ಪಶ್ವಿಮ ಬಂಗಾಳದ ಚುನಾವಣೆಯ ನಂತರ ಅಲ್ಲಿ ಬಿಜೆಪಿಯನ್ನು ಸಮರ್ಥಿಸಿದರೆಂದು ಟಿಎಂಸಿ ಕಾರ್ಯಕರ್ತರು ನಡೆಸಿದ ಕೋಮು ದಳ್ಳುರಿ
  • ನಂಜನಗೂಡು ತಮಿಳು ನಾಡು, ಆಂಧ್ರಪ್ರದೇಶದಲ್ಲಿ ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದ್ದು
  • ಕೇವಲ ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಹತ್ತಿಸಿದ ಹಿಜಾಜ್ ಕಿಡಿಯನ್ನು ನಂದಿಸಲಾಗದೇ ಹೋದದ್ದು
  • ಹಿಜಾಬ್ ಚಳುವಳಿಯ ನಂತರ ನಡೆದ ಹರ್ಷನ ಹತ್ಯೆ
  • ಪಠ್ಯ ಪುಸ್ತಕ ಪರಿಷ್ಕರಣೆಯ ಸಮಯದಲ್ಲಿ ಸಮಿತಿಯ ಅಧಕ್ಷ ರೋಹಿತ್ ಚಕ್ರತೀರ್ಥರನ್ನು ಏಕಾಂಗಿಯಾಗಿಸಿದ್ದು
  • ಹಿಂದೂ ತತ್ವ ಸಿದ್ಧಾಂತದ ಅಡಿಯಲ್ಲೇ, ಮೋದಿ ಬ್ರಿಗೇಡ್ ಮತ್ತು ಯುವಾ ಬ್ರಿಗೇಡ್ ಮೂಲಕ ಯುವಕರನ್ನು ಒಗ್ಗೂಡಿಸಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಮತ್ತು ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿರುವ ಮಿಥುನ್ ಚಕ್ರವರ್ತಿ ಸೂಲಿಬೆಲೆಯವರ ವಿರುದ್ದ ವಿರೋಧಿಗಳು ಮುಗಿ ಬಿದ್ದಾಗ ಆತನನ್ನು ಏಕಾಂಗಿಯಾಗಿಸಿದ್ದು
  • ಕೈ ತುಂಬ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ತನ್ನ ಪೋಸ್ಟ್ ಕಾರ್ಡ್ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಟ್ಟಿಯಾಗಿ ನಿಂತು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಪರವಾದಿಸುವ ಮಹೇಶ್ ಹೆಗ್ಡೆಯವರನ್ನೇ ಕಾಂಗ್ರೇಸ್ ಏಜೆಂಟ್ ಎಂದು ಬಿಂಬಿಸಲು ಮುಂದಾಗಿದ್ದು
  • ಇನ್ನು ಪ್ರತೀ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ ಎಂಬ ಗೊಂದಲಮಯ ಹೇಳಿಕೆಯನ್ನು ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ನೀಡಿದ್ದು
  • ಕಾಶಿಯ ಗ್ಯಾನವ್ಯಾಪಿ ಮಸೀದಿಯಲ್ಲಿ ಲಿಂಗ ದೊರೆತ ವಿಷಯದ ಕುರಿತು ಮಾಧ್ಯಮದಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಶಿವನ ವಿರುದ್ಧವಾಗಿ ಅನ್ಯಕೋಮಿನವರು ಆಕೆಯ ಮೇಲೆ ಮುಗಿ ಬಿದ್ದಾಗ, ಬಿಜೆಪಿ ಪಕ್ಷದ ವಕ್ತಾರೆಯಾಗಿ ಗಟ್ಟಿಯಾಗಿ ಹಿಂದೂ ಪರ ನಿಲುವನ್ನು ಎತ್ತಿ ಹಿಡಿದು ಮುಸ್ಲಿಂ ಸಮುದಾಯದ ಬಗ್ಗೆ ಪ್ರಶ್ನಿಸಿದ್ದನ್ನೇ ಮುಂದು ಮಾಡಿಕೊಂಡು ಆಕೆಯನ್ನು ಪಕ್ಷದಿಂದ ಅಮಾನವೀಯವಾಗಿ ಅಮಾನತು ಗೊಳಿಸಿರುವುದು

ಹೀಗೆ ಹೇಳುತ್ತಾ ಹೋದಲ್ಲಿ ಪುಟಗಟ್ಟಲೇ ದಿನಗಟ್ಟಲೇ ಬರೆಯಬಹುದಾದ ಅಂಶಗಳಿಂದ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯವೇನೆಂದರೆ ಸಂಘ ಪರಿವಾರದಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ.

WhatsApp Image 2022-06-06 at 11.54.01 AMಬಿಜೆಪಿಯವರು ಅಧಿಕಾರಕ್ಕೆ ಬರುವ ಮುನ್ನ ಹಿಂದು ಹಿಂದೂ ಎನ್ನುತ್ತಾ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಹಿಂದುತ್ವದ ಬಗ್ಗೆ ಜಪಮಾಡುತ್ತಲೇ, ಚುನಾವಣೆ ಘೋಷಣೆ ಆದ ಕೂಡಲೇ ಜಾತಿ ಆಧಾರಿತವಾಗಿ ಇತರೇ ಪಕ್ಷಗಳಿಂದ ನಾಯಕರನ್ನು ಕರೆತಂದು ಟಿಕೆಟ್ ಕೊಟ್ಟು ನಿಸ್ವಾರ್ಥ ಹಿಂದೂ ಕಾರ್ಯಕರ್ತರನ್ನು ಮರಳು ಮಾಡಿ ಸ್ವಲ್ಪವೂ ಖರ್ಚಿಲ್ಲದೇ ಅಧಿಕಾರಕ್ಕೆ ಏರುತ್ತಾರೆ. ಒಮ್ಮೆ ಸಿಂಹಾಸನಾರೂಢರಾದ ಕೂಡಲೇ ಅವರಲ್ಲಿ ಹಿಂದುತ್ವವೆಲ್ಲವೂ ಮಾಯವಾಗಿ ಅವರು ಗಾಂಧಿವಾದಿಗಳಾಗಿ ಪರಮ ಸಹಿಷ್ಣುಗಳಾಗಿ ಹಿಂದೂಗಳಿಗೆ ಯಾರಾದರು ಒಂದು ಕೆನ್ನೆಗೆ ಹೊಡೆದರೆ, ಕೊಂಚವೂ ಪ್ರತಿಭಟಿಸದೇ ಮತ್ತೊಂದು ಕೆನ್ನೆಗೂ ಹೊಡೆಸಿಕೊಂಡು ಬರಬೇಕೆಂದು ಆಗ್ರಹಿಸುತ್ತಾರೆ. ಅಧಿಕಾರ ಇಲ್ಲದಿದ್ದಾಗ 28 ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯ ಬಗ್ಗೆ ಹಿಂದೂವಾದಿಗಳಾಗಿ ಹೋರಾಟ ಚೀರಾಟ ನಡೆಸುವವರು ಅದೇ ಕಾರ್ಯಕರ್ತರ ಹೆಣ ಮುಂದಿಟ್ಟುಕೊಂಡು ಅನುಕಂಪದ ಆಧಾರಿತವಾಗಿ ಅಧಿಕಾರಕ್ಕೇರಿದ ಕೂಡಲೇ ಬಣ್ಣ ಬದಲಿಸುವ ಗೊಸುಂಬೆಗಳಾಗಿ ರಾಷ್ಟ್ರೀಯವಾದಿಗಳಾಗಿ ಪರಿವರ್ತನೆಗೊಳ್ಳುತ್ತಾರೆ. 28 ಬರ್ಬರ ಹತ್ಯೆಗಳ ಬಗ್ಗೆ ಚಕಾರವನ್ನೂ ಎತ್ತದೇ ಜಾಣ ಮೌನವನ್ನು ತಾಳುವುದಲ್ಲದೇ, ಶಾಸಕನ ಮನೆಯನ್ನು ಸುಡಲೀ, ಶಿಕ್ಶಣ ಸಚಿವರ ಮನೆಯ ಮುಂದೆ ಚಡ್ಡಿ ಸುಟ್ಟರೂ,  ಸಬ್ ಕಾ ಸಾಥ್, ಸಬಕಾ ವಿಕಾಸ್ ಜಪವನ್ನು ಜಪಿಸುವುದನ್ನು ಕಂಡಾಗ ರೋಮ್ ಹೊತ್ತಿ ಉರಿಯುತ್ತಿದ್ದಾಗ ರೋಮ್ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ ಎಂಬ ಕಥೆ ನೆನಪಾಗುತ್ತದೆ.

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮ ಅವಹೇಳನ ಮಾಡಿರುವುದನ್ನೇ ಅಂತರಾಷ್ಟ್ರೀಯ ಸುದ್ದಿಯನ್ನಾಗಿ ಮಾಡಿ ಇದರ ಖಂಡನಾರ್ಹವಾಗಿ ಆ ಮುಸಲ್ಮಾನ ರಾಷ್ಟ್ರಗಳು ಭಾರತೀಯ ಉತ್ಪನ್ನಗಳ ವಿರುದ್ಧ ನಿಷೇಧವನ್ನು ಹೇರಿದ್ದಕ್ಕೆ ಹೆದರಿ ನೂಪುರ್ ಅವರನ್ನು ಅಮಾನತ್ತು ಮಾಡುತ್ತಾರಾದರೇ,

  • ಹಿಂದೂಸ್ಥಾನದ ಪ್ರತೀ ಹಳ್ಳಿಯಲ್ಲೂ ಪ್ರತಿ ದಿನವೂ ಅಲ್ಲಾಹನೇ ನಮ್ಮ ದೇವರು ಅಲ್ಲಾ ಬಿಟ್ಟರೆ ಬೇರೇ ದೇವರಿಲ್ಲಾ ಎಂದು ದಿನಕ್ಕೆ ಐದು ಬಾರಿ ನೂರಾರು ವರ್ಷಗಳಿಂದ ಲೌಡ್ ಸ್ಪೀಕರಿನಲ್ಲಿ ಕೂಗುತ್ತಿದ್ದಾರಲ್ಲಾ ಅದಕ್ಕೇನು ಹೇಳುತ್ತೀರೀ?
  • ದೇಶದ ಎಲ್ಲಾ ಉತ್ಪನ್ನಗಳ ಮೇಲೂ ಸಂವಿಧಾನಬಾಹಿರವಾದ ದೇಶದಲ್ಲಿ ಮಾನ್ಯತೆಯೇ ಪಡೆಯದ ಹಲಾಲ್ ಸರ್ಟಿಫಿಕೇಟ್ ಉತ್ಪನ್ನಗಳನ್ನು ಮಾರಲು ಅನುಮತಿ ನೀಡಿರುವುದಾದರೂ ಏಕೇ ?
  • ನಮ್ಮ ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರುವ ಮತ್ತು ಈ ದೇಶದ ಕಾನೂನನ್ನು ಕಾಲು ಕಸವನ್ನಾಗಿ ನೋಡುವ ಮಂದಿಯ ವಿರುದ್ದ ಕಠಿಣ ಕ್ರಮವಿಲ್ಲ ಏಕೇ?
  • ಕಾಶ್ಮೀರೀ ಪಂಡಿತರು ಕಾಶ್ಮೀರದ ಮೂಲ ನಿವಾಸಿಗಳು ಎಂದು ಇಡೀ ಜಗತ್ತಿಗೇ ತಿಳಿದಿದ್ದರೂ, ದಿನ ನಿತ್ಯವೂ ಕಾಶ್ಮೀರೀ ಪಂಡಿತರ ಮೇಲೆ ಧಾಳಿ ಮಾಡುತ್ತಿರುವ ಮತಾಂದರ ವಿರುದ್ಧ ಯಾವುದೇ ಕ್ರಮವಿಲ್ಲ ಏಕೇ?
  • ಜನಗಳ ತೆರಿಗೆ ಹಣದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹತ್ತಾರು ವರ್ಷಗಳ ಕಾಲ ದೆಹಲಿಯ ಜೆ.ಎನ್.ಯು ವಿನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಭಾರತ್ ತೇರೆ ತುಕ್ಡೇ ಕರೇಂಗೆ ಇನ್ಷಾ ಅಲ್ಲಾ ಇನ್ಷಾ ಅಲ್ಲಾ ಎಂದು ಹೇಳುತ್ತಾ ಹಮೇ ಅಝಾದಿ ಚಾಹಿಯೇ ಎಂದವರ ವಿರುದ್ದ ಕ್ರಮವಿಲ್ಲ ಏಕೇ?

ತಪ್ಪೋ ಸರಿಯೋ ಇತರೇ ಪಕ್ಷಗಳಲ್ಲಿ ಕಾರ್ಯಕರ್ತರಿಗೆ ಇರುವ ಬೆಲೆ ಖಂಡಿತವಾಗಿಯೂ ಸಂಘ ಪರಿವಾರದಲ್ಲಿ ನಿಶ್ವಿತವಾಗಿಯೂ ಇಲ್ಲ ಎನ್ನುವುದು ನಿರ್ವಿವಾದವಾಗಿದೆ. ಅಕಸ್ಮಾತ್ ಕಾರ್ಯಕರ್ತನೇನಾದರೂ ಸಂಕಷ್ಟದಲ್ಲಿ ಸಿಲುಕಿಕೊಂಡಲ್ಲಿ ಅವನ ಪರವಾಗಿ ಪರಿವಾರದ ಯಾವ ನಾಯಕನೂ ಬರಲಾರ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ. ಅಕಸ್ಮಾತ್ ಅವನ ಹೆಣ ಉರುಳಿದಲ್ಲಿ ಮಾತ್ರವೇ ಅದರ ರಾಜಕೀಯ ಲಾಭಕ್ಕಾಗಿ ಬರುವುದಂತೂ ನಿಶ್ಚಿತವಾಗಿದೆ.

ಹಾಗಾಗಿ ಸ್ವಂತಕ್ಕೆ ಸ್ವಲ್ಪ. ಸಮಾಜಕ್ಕೆ ಸರ್ವಸ್ವ ಎಂದು ದೇಶ, ಧರ್ಮ ರಕ್ಷಣೆಯ ಗುಂಗಿನಲ್ಲಿ ಸಂಘ ಪರಿವಾರದ ಪರವಾಗಿ ಉಗ್ರವಾಗಿ ಹೋರಾಟ ಮಾಡಿ ದೇಶ, ಧರ್ಮ ಮತ್ತು ಕಾರ್ಯಕರ್ತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ, ಸಂಘದ ಸಿದ್ಧಾಂತವನ್ನೇ ಗಾಳಿಗೆ ತೂರುವವರ ಪರ ಹೋರಾಟ ನಡೆಸಿ ಸಾವಿರಾರು ಜನರ ವಿರೋಧ ಕಟ್ಟಿಕೊಂಡು ನೂರಾರು ಕೇಸುಗಳನ್ನು ಹಾಕಿಸಿಕೊಂಡು ಕೋರ್ಟು ಕಛೇರಿ ಅಲೆಯುತ್ತಲೇ ಜೀವನ ಸವೆಸುವ ಇಲ್ಲವೇ ಜೀವವನ್ನೇ ಕಳೆದು ಕೊಳ್ಳುವ ಬದಲು ಸಮಾಜ ಮತ್ತು ಸ್ವಂತ ಎರಡಕ್ಕೂ ಸಮಾನವಾದ ಸಮಯವನ್ನು ಕೊಡುತ್ತಾ ನಮ್ಮನ್ನೇ ನೆಚ್ಚಿಕೊಂಡಿರುವವರ ರಕ್ಷಣೆಯನ್ನೂ ಮಾಡುವ ಜವಾಬ್ಧಾರಿ ಅದೇ ಕಾರ್ಯಕರ್ತರದ್ದೇ ಆಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s