ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರ, ದೇಶದ ಜನರಿಗೆ ಉದ್ಯೋಗವನ್ನು ನೀಡಲು ಮತ್ತು ದೇಶದಲ್ಲಿ ಉದ್ಯಮಗಳನ್ನು ಹೆಚ್ಚಿಸುವ ಸಲುವಾಗಿ ದೇಶದಲ್ಲಿ ಹತ್ತಾರು ಸಾರ್ವಜನಿಕ ಉದ್ಯಮಗಳನ್ನು ಆರಂಭಿಸಿದವು. ಅದರಲ್ಲೂ ಬೆಂಗಳೂರಿನಲ್ಲಿ ಐ.ಟಿ.ಐ, ಹೆಚ್.ಎಂ.ಟಿ, ಹೆಚ್.ಎ.ಎಲ್, ಬಿಇಎಲ್, ಬಿ.ಹೆಚ್.ಇ.ಎಲ್ ಮುಂತಾದ ಕಾರ್ಖಾನೆಗಳು ಆರಂಭವಾದಾಗ, ಅದಕ್ಕೆ ಸೇರಲು ಜನರು ಮುಗಿ ಬೀಳತೊಡಗಿದರು. ಈ ಮೇಲೆ ತಿಳಿಸಿದ ಕಾರ್ಖಾನೆಗಳಲ್ಲಿ ಕೆಲಸ ಸಿಗದೇ ಹೋದಾಗ, ಬೆಂಗಳೂರಿಗರಿಗೆ ಪರ್ಯಾಯವಾಗಿ ಕಾಣಿಸಿದ್ದೇ, ಮೈಕೋ, ಕಿರ್ಲೋಸ್ಕರ್, ಎಂಇಐ ಮುಂತಾದ ಖಾಸಗಿ ಕಂಪನಿಗಳು ಎಂದರೆ ಅತಿಶಯವೇನಲ್ಲ.
1953 ರಲ್ಲಿ, ಸ್ಪಾರ್ಕ್ ಪ್ಲಗ್‌ಗಳ ಜೋಡಣೆ ಮತ್ತು ಸಿಂಗಲ್-ಸಿಲಿಂಡರ್ ಇಂಧನ-ಇಂಜೆಕ್ಷನ್ ಪಂಪ್, ನಳಿಕೆ ಹೋಲ್ಡರ್‌ಗಳು ಮತ್ತು ಫಿಲ್ಟರ್‌ಗಳ ತಯಾರಿಕೆಗಾಗಿ ಬೆಂಗಳೂರಿನ ಆಡುಗೋಡಿಯಲ್ಲಿ ಹೊಸ ಘಟಕವನ್ನು ಆರಂಭಿಸಿದ ನಂತರವಂತೂ, ಮೈಕೋ ಕಾರ್ಖಾನೆ electrical & Automobiles ವಿಭಾಗದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಅದು electrical & Automobiles ವಿಭಾಗದಲ್ಲಿ Starters & Spark plugs ಎಂದು ಹೇಳಿದ ತಕ್ಷಣ ಮನಸ್ಸಲ್ಲಿ ಮೂಡುತ್ತಿದ್ದದ್ದೇ ಮೈಕೋ ಉತ್ಪನ್ನಗಳು ಎಂದರು ತಪ್ಪಾಗದು. ಹಾಗಾಗಿಯೇ ದಿನದ 24 ಗಂಟೆಗಳು ವಾರದ 7 ದಿನಗಳು ಹೀಗೆ ವರ್ಷದ 365 ದಿನಗಳೂ ನಿರಂತವಾಗಿ ವಿವಿಧ ಪಾಳಿಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹಾಗಾಗಿಯೇ ಅಲ್ಲಿನ ಉದ್ಯೋಗಿಗಳು 8 ಗಂಟೆಯ ಪಾಳಿ ಮುಗಿದ ನಂತರ ಮತ್ತೆ 4 ಗಂಟೆಗಳ ಕಾಲ ಹೆಚ್ಚಿನ ಕೆಲಸ (over time) ಮಾಡುತ್ತಾ ತಿಂಗಳ ಸಂಬಳದ ಎರಡರಷ್ಟು ಇಲ್ಲವೇ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿನ ಹಣ ಗಳಿಸುತ್ತಿದ್ದ ಕಾರಣ ಸರ್ಕಾರಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ ಅದೆಷ್ಟೋ ಉದ್ಯೋಗಿಗಳು ಅಲ್ಲಿನ ಕೆಲಸ ಬಿಟ್ಟು ಮೈಕೋ ಸೇರಿಕೊಂಡಿದ್ದ ಉದಾಹರಣೆಯೂ ಇತ್ತು.
ಹಾಗಾಗಿಯೇ 50-70ರ ದಶಕದ ಬೆಂಗಳೂರಿನ SSLC ತೇರ್ಗಡೆಯಾದ ಬಹುತೇಕ ಯುವಕರು ಮೈಕೋ ಕಂಪನಿಯಲ್ಲಿ tool-room apprenticeship ಇಲ್ಲವೇ, On Job Training(OJT) ಮೂಲಕ ಕೆಲಸಕ್ಕೆ ಸೇರಿಕೊಂಡು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಕೆಲಸವನ್ನು ಕಲಿತುಕೊಂಡು ಕಾಯಂ ಉದ್ಯೋಗಿಗಳಾಗಿ ಕೈ ತುಂಬಾ ಸಂಬಳ ಪಡೆಯುವಂತಾದರು. ಮೈಕೋ ಕಂಪನಿಯಲ್ಲಿ apprenticeship ಮಾಡಿರುವ ಕೆಲಸಗಾರರು ತಾಂತ್ರಿಕವಾಗಿ ಅತ್ಯುತ್ತಮವಾಗಿರುತ್ತಾರೆ ಎಂದೇ ಪ್ರಸಿದ್ಧಿ ಪಡೆದಿರುವ ಕಾರಣ ಇಂದಿಗೂ ಅಂತಹವರಿಗೆ ಪ್ರಪಂಚಾದ್ಯಂತ ಇರುವ ವಿವಿಧ ಕಂಪನಿಗಳಲ್ಲಿ ಬೇಡಿಗೆ ಇದೆ. 80ರ ದಶಕದಲ್ಲಿ ITI ಅಥವಾ Diploma ಮಾಡಿದ ವಿದ್ಯಾರ್ಥಿಗಳಿಗೆ ಮೈಕೋ ಕಂಪನಿ ಉದ್ಯೋಗದ ಅಕ್ಷಯ ಪಾತ್ರೆಯಂತಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕೆಲಸ ಸಿಗುವಂತಾಯಿತು. ಇದೇ ಕಾರಣಕ್ಕಾಗಿಯೇ ಮೈಕೋದಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕೊಡಲು ಹೆಣ್ಣು ಹೆತ್ತ ಪೋಷಕರೂ ದಂಬಾಲು ಬೀಳುತ್ತಿದ್ದರು ಎಂದರೂ ಉತ್ಪ್ರೇಕ್ಷೆಯೇನಲ್ಲ.
ಹಾಗೆ ನೋಡಿದರೆ ಜರ್ಮನಿ ಮೂಲದ ಬಾಷ್ ಕಂಪನಿ ತನ್ನ ಜರ್ಮನ್ ಇಂಜಿನಿಯರಿಂಗ್ ಉತ್ಪನ್ನಗಳ ಮಾರಾಟಕ್ಕಾಗಿ ಭಾರತದ ಕೊಲ್ಗೊತ್ತಾದಲ್ಲಿ 1922 ರಲ್ಲಿ ತನ್ನ ಮೊದಲ ಮಾರಾಟ ಏಜೆನ್ಸಿಯನ್ನು ಆರಂಭಿಸಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಸ್ವಾತಂತ್ರ್ಯಾನಂತರ, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯು ವೇಗವನ್ನು ಹೆಚ್ಚಿರುವ ಸಲುವಾಗಿ ಮತ್ತು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ವಿದೇಶದಿಂದ ಆಮದುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ ಬಾಷ್ ಕಂಪನಿಗೆ ಸ್ಥಳೀಯವಾಗಿ ತಮ್ಮ ಉತ್ಪನ್ನಗಳ ಬಿಡಿ ಭಾಗಗಳು ದೊರೆಯುವುದರಲ್ಲಿ ತೊಂದರೆ ಆದಾಗ, 1951 ರಲ್ಲಿ, ಮೋಟಾರ್ ಇಂಡಸ್ಟ್ರೀಸ್ ಕಂಪನಿ ಲಿಮಿಟೆಡ್ (MICO) ಎಂಬ ಹೆಸರಿನಲ್ಲಿ ಭಾರತದಲ್ಲಿ ಸ್ಥಳೀಯವಾಗಿ ಬಾಷ್ ಉತ್ಪನ್ನಗಳನ್ನು ತಯಾರಿಸಲು Bosch GmbH ನಿಂದ ಪರವಾನಗಿ ಒಪ್ಪಂದವನ್ನು ಪಡೆದುಕೊಂಡು ಕೇವಲ ಎರಡು ಖಾಯಂ ಉದ್ಯೋಗಿಗಳು ಮತ್ತು ಇಪ್ಪತ್ತೊಂದು ಪಾಲುದಾರರ ಉದ್ಯೋಗಿಗಳ ಬಲದೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ 1953 ರಲ್ಲಿ ಬೆಂಗಳೂರಿನ ಆಡುಗೋಡಿಯಲ್ಲಿ ಸಂಪೂರ್ಣವಾಗಿ ದೊಡ್ಡದಾದ MICO ಕಾರ್ಖಾನೆಯನ್ನು ಆರಂಭಿಸಲಾಯಿತು.
ಅಂದು ಕೇವಲ ಎರಡು ಉದ್ಯೋಗಿಗಳೊಂದಿಗೆ ಉತ್ಪಾದನೆಯನ್ನು ಆರಂಭಿಸಿದ ಕಂಪನಿ ಇಂದು ದೇಶಾದ್ಯಂತ 18 ಉತ್ಪಾದನಾ ತಾಣಗಳು ಮತ್ತು 7 ಅಭಿವೃದ್ಧಿ ಮತ್ತು ಅಪ್ಲಿಕೇಶನ್ ಕೇಂದ್ರಗಳೂ ಒಳಗೊಂಡು ಸುಮಾರು 31,000 ಕ್ಕೂ ಹೆಚ್ಚಿನ ಖಾಯಂ ಉದ್ಯೋಗಿಗಳಿಗೆ ಪ್ರತ್ಯಕ್ಷವಾಗಿ ಕೆಲಸವನ್ನು ಕೊಟ್ಟಿದ್ದರೆ, ಸಾವಿರಾರು ಸಣ್ಣ ಸಣ್ಣ ಉದ್ಯಮಿಗಳಿಗೆ ಹೊರಗುತ್ತಿಗೆಯನ್ನು ನೀಡುವ ಮೂಲಕ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ ಎಂದರೂ ತಪ್ಪಾಗದು.
ಆರಂಭದಲ್ಲಿ ಬಾಷ್ ಕಂಪನಿ, ಕೈಗಾರಿಕಾ ತಂತ್ರಜ್ಞಾನ, ಗ್ರಾಹಕ ಸರಕುಗಳು ಮತ್ತು ಶಕ್ತಿ ಮತ್ತು ಕಟ್ಟಡ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಸೇವೆಗಳ ಪ್ರಮುಖ ಪೂರೈಕೆದಾರರಾಗಿ ಗುರುತಿಸಿಕೊಂಡಿದ್ದಲ್ಲದೇ, ನಂತರ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸುವ ಮೂಲಕ ಭಾರತೀಯ ಕೃಷಿಕರಿಗೂ ಯಾಂತ್ರೀಕರಣಗೊಳಿಸಲು ಸಹಾಯ ಮಾಡುವುದರಲ್ಲಿ ತಮ್ಮ ಗಮನ ಹರಿಸುವ ಮೂಲಕ ರಾಷ್ಟ್ರದ ತಂತ್ರಜ್ಞಾನ ಉದ್ಯಮದ ಅಭಿವೃದ್ಧಿಯನ್ನು ಪೋಷಿಸುವುದರ ಜೊತೆಗೆ ಹಸಿರು ಕ್ರಾಂತಿಯನ್ನೂ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.
90ರ ದಶಕದಲ್ಲಿ ಭಾರತ ದೇಶ ಜಾಗತೀಕ ಉದಾರೀಕರಣಕ್ಕೆ ತೆರೆದುಕೊಂಡದ್ದರಿಂದ ಮಾಹಿತಿ ತಂತ್ರಜ್ಞಾನದ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ತಮ್ಮ ಕಛೇರಿಗಳನ್ನು ಆರಂಭಿಸಿದಾಗ ಬಾಷ್ ಕೂಡಾ ನಗರದ ಹೃದಯ ಭಾಗವಾದ ಕೋರಮಂಗಲದಲ್ಲಿ ತನ್ನ ಬಾಷ್ ಸಾಫ್ಟ್‌ವೇರ್ ಕಂಪನಿಯನ್ನು ಆರಂಭಿಸುವ ಮೂಲಕ ಸಾವಿರಾರು ಮಾಹಿತಿ ತಂತ್ರಜ್ಞಾನ ಇಂಜಿನೀಯರ್ ಗಳಿಗೆ ಉದ್ಯೋಗವನ್ನು ನೀಡುವ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ ಬಾಷ್ ಆರಂಭಿಸದ ಉದ್ಯೋಗಗಳಿಲ್ಲ ಎನ್ನುವಂತಾಗಿರುವುದೂ ಎನ್ನುವುದೂ ಸತ್ಯ.
ನಂತರ 2008ರಲ್ಲಿ ಮೈಕೋ, ಹೊಸ ಬಾಷ್ ಲಿಮಿಟೆಡ್ ಕಂಪನಿಯಾಗಿ ಬದಲಾದರೂ, ಜನ ಮಾನಸದಲ್ಲಿ ಮೋಟಾರ್ ಇಂಡಸ್ಟ್ರೀಸ್ ಕಂಪನಿ (ಮೈಕೋ) ಎಂದೇ ಅಚ್ಚೊತ್ತಿರುವ ಕಾರಣ ಮೈಕೋ ಹೆಸರಿನಿಂದಲೇ ತನ್ನ ಎಲ್ಲಾ ಉತ್ಪನ್ನಗಳನ್ನು ಇಂದಿಗೂ ಉತ್ಪಾದಿಸಿ ದೇಶ ವಿದೇಶಗಳಲ್ಲಿ ಮಾರಾಟವಾಗುತ್ತಿದೆ. ಇತ್ತೀಚೆಗೆ BSH ಗೃಹೋಪಯೋಗಿ ವಸ್ತುಗಳ ತಯಾರಿಕೆಗೂ ಮುಂದಾಗಿದ್ದು 2025 ರ ವೇಳೆಗೆ 75 ಪ್ರತಿಶತದಷ್ಟು ಸ್ಥಳೀಕರಣವನ್ನು ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಈ ರೀತಿಯಾಗಿ ಬಾಷ್ ಇಂಡಿಯಾ ಎಲ್ಲಾ ವಿಭಾಗಗಳಲ್ಲಿಯೂ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಜರ್ಮನ್ ಇಂಜಿನಿಯರಿಂಗ್ ಮತ್ತು ಭಾರತೀಯ ಉದ್ಯಮಶೀಲತೆಯ ಅತ್ಯುತ್ತಮವನ್ನು ಒಟ್ಟುಗೂಡಿಸಿದೆ ಎಂದ್ದು ಬಾಷ್ ಕಂಪನಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಡಾ. ಸ್ಟೀಫನ್ ಹಾರ್ಟುಂಗ್ ಹೇಳಿದ್ದಾರಲ್ಲದೇ, ಮುಂದಿನ 5 ವರ್ಷಗಳಲ್ಲಿ Bosch INR 1000 ಕೋಟಿಗೂ ಅಧಿಕ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ತಿಳಿಸಿರುವುದು ಆಶಾದಾಯಕವಾಗಿದೆ.
ಬಾಷ್ ಇಂಡಿಯಾ ಕಂಪನಿ, ಗುರುವಾರ 30 ಜೂನ್ 2022ಕ್ಕೆ ಭಾರತದಲ್ಲಿ 100 ವರ್ಷಗಳನ್ನು ಪೂರೈಸಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಭಾರತದಲ್ಲಿ ಬಾಷ್‌ನ 100 ವರ್ಷಗಳ ಪ್ರಯಾಣವು ನಮ್ಮ ಸಹವರ್ತಿಗಳ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಇದರಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದ ಬಾಷ್ ಗ್ರೂಪ್‌ನ ಅಧ್ಯಕ್ಷರಾದ ಶ್ರೀ ಸೌಮಿತ್ರ ಭಟ್ಟಾಚಾರ್ಯ ಹೇಳಿರುವುದಲ್ಲದೇ, ಬಾಷ್ ಇಂಡಿಯಾ ಮುಂಬರುವ ದಿನಗಳಲ್ಲಿ ತನ್ನ ಸ್ವಂತ ಶಕ್ತಿಯಿಂದ ಹೊಸ ಆವಿಷ್ಕರಗಳೊಂದಿಗೆ ಡಿಜಿಟಲ್ ತಂತ್ರಜ್ಞಾನ, ಸುಸ್ಥಿರ, ದಕ್ಷ ಮತ್ತು ಪ್ರಧಾನ ಮಂತ್ರಿಗಳ ಆಶಯವಾಗಿರುವ ಸ್ವಾವಲಂಭಿ ಮತ್ತು ಸ್ವಾಭೀಮಾನದ ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರಿಸುತ್ತೇವೆ ಎಂದಿರುವುದು ಉಳಿದ ಕಂಪನಿಗಳೂ ಅನುಕರಣೀಯವಾಗಿದೆ.
ಬಾಷ್ ಕಂಪನಿ ಕೇವಲ ಔದ್ಯೋಗಿಕರಣವಲ್ಲದೇ ಕಲೆ, ಸಾಹಿತ್ಯ, ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಕ್ರೀಡೋತ್ಸವಗಳನ್ನು ನಡೆಸಿಕೊಂಡು ಬರುತ್ತಿರುವುದಲ್ಲದೇ, ಬೆಂಗಳೂರು ನಗರದ ಅನೇಕ ವೃತ್ತಗಳ ನಿರ್ವಹಣೆಯನ್ನು ಹೊತ್ತಿಕೊಂಡು, ಉತ್ತಮವಾದ ಗಿಡಗಳನ್ನು ಬೆಳಸುತ್ತಾ ಉದ್ಯಾನನಗರಿಗೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಬಾಷ್ ಕಂಪನಿಯ ಉದ್ಯೋಗಿಗಳು, ನಾಟಕ, ರಂಗಭೂಮಿ, ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿಯೂ ತಮ್ಮ ಮೈಕೋ ಹೆಸರನ್ನೇ ಸೇರಿಸಿಕೊಂಡು ಕಂಪನಿಯ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.
ಬಾಷ್ ಕಂಪನಿಯಲ್ಲಿ ಕೆಲಸ ಬಹಳ ಕಠಿಣ ಇರುತ್ತಿದ್ದ ಕಾರಣ ಅದೆಷ್ಟೋ ಬಾರಿ ಅವರ ಕೆಲಸಗಾರರು ಸರಿಯಾಗಿ ಊಟ ತಿಂಡಿ ಮಾಡದ ಕಾರಣ ಸುಸ್ತಾಗಿ ತಲೆ ಸುತ್ತು ಬೀಳುತ್ತಿದ್ದದ್ದಲ್ಲದೇ ಸರಿಯಾದ ಪೋಷಕಾಂಶದ ಆಹಾರವಿಲ್ಲದೇ ಸೊರಗಿ ಹೋಗಿದ್ದನ್ನು ಗಮನಿಸಿದ ಕಂಪನಿಯ ತಾಂತ್ರಿಕ ನಿರ್ದೇಶಕರಾಗಿದ್ದ ಶ್ರೀ ಈ ಲ್ಯಾಂಗ್ (E. Lang) ಎನ್ನುವರು ಆಡಳಿತ ಮಂಡಳಿಯವರ ಗಮನಕ್ಕೆ ತಂದು ಬಾಷ್ ಕಂಪನಿಯಲ್ಲಿ ತನ್ನ ಉದ್ಯೋಗಿಗಳಿಗೆ ಉಚಿತವಾಗಿ ಶುಚಿ ರುಚಿಯಾದ, ಪೌಷ್ಟಿಕಾಂಶವುಳ್ಳ ತಿಂಡಿ ಮತ್ತು ಆಹಾರವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ವಯಕ್ತಿಕವಾಗಿ ಒಂದೆರಡು ಬಾರಿ ಅಂತಹ ಆಹಾರವನ್ನು ಸವಿಯುವ ಅವಕಾಶವೂ ಸಿಕ್ಕಿದೆ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಶ್ರೀ ಈ ಲ್ಯಾಂಗ್ ಅವರು ರಸ್ತೆಯ ಅಪಘಾತದಲ್ಲಿ ಮೃತಪಟ್ಟ ನಂತರ ಅವರ ಪೋಟೋವನ್ನು ಕಂಪನಿಯ ಉಪಹಾರ ಗೃಹದಲ್ಲಿ ದೊಡ್ಡದಾಗಿ ಹಾಕಿಸಿ ಇಂದಿಗೂ ವರ್ಷಕ್ಕೊಮ್ಮೆ ಅವರ ಪುಣ್ಯತಿಥಿಯಂದು ಈ ಲ್ಯಾಂಗ್ ದಿನ (E. Lang Day) ಎಂದೇ ಅಲ್ಲಿನ ಸಮಸ್ತ ಉದ್ಯೋಗಿಗಳೂ ಆಚರಿಸುವುದು ನಿಜಕ್ಕೂ ಅನನ್ಯವೇ ಸರಿ.
ಮೈಕೋ ಗೃಹ ನಿರ್ಮಾಣ ಸಂಘವೂ ಸಹಾ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಅತ್ಯಂತ ಸುಂದರವಾದ ಮತ್ತು ತಮ್ಮ ಉದ್ಯೋಗಿಗಳ ಕೈಗೆಟುಕುವ ಬೆಲೆಯಲ್ಲಿ ಮೈಕೋ ಬಡಾವಣೆಗಳನ್ನು ನಿರ್ಮಾಣ ಮಾಡಿ ಹಂಚುವ ಮೂಲಕ ಮಧ್ಯಮ ವರ್ಗದವರಿಗೆ ಬೆಂಗಳೂರಿನಂತಹ ದುಬಾರಿ ನಗರದಲ್ಲೂ ಸೂರು ಕಟ್ಟಿಕೊಳ್ಳುವಂತೆ ಮಾಡಿರುವುದು ಸಹಾ ಮೆಚ್ಚುಗೆಯ ವಿಷಯವಾಗಿದೆ
ಭಾರತದಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಈ ಸಂಭ್ರಮಾಚರಣೆಯ ಅಂಗವಾಗಿ ಬೆಂಗಳೂರಿನ ತನ್ನೆಲ್ಲಾ ಕಛೇರಿಗಳನ್ನೂಆತ್ಯಂತ ನಯನ ಮನೋಹರವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದಲ್ಲದೇ, ಭಾರತದ ಪ್ರಧಾನಿಗಳೇ ದೂರದ ದೆಹಲಿಯಿಂದಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ದೇಶದಲ್ಲಿ ನೂರು ವರ್ಷಗಳ ಯಶಸ್ವಿಯಾಗಿ ಉದ್ಯಮವನ್ನು ನಡೆಸಿಕೊಂಡು ದೇಶದ ಆರ್ಥಿಕ ಮತ್ತು ಔದ್ಯೋಗಿಕರಂಗದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿರುವುದಲ್ಲದೇ, ಕಂಪನಿಯು ಇನ್ನೂ ನೂರಾರು ವರ್ಷಗಳ ಕಾಲ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದ್ದಾರೆ. 100 ವರ್ಷಗಳ ಹಿಂದೆ ಬಾಷ್ ಜರ್ಮನ್ ಕಂಪನಿಯಾಗಿ ಭಾರತಕ್ಕೆ ಬಂದಿತ್ತು ಆದರೆ ಇಂದು ಅದು ಜರ್ಮನ್ ಕಂಪನಿಗಿಂತಲು ಭಾರತೀಯ ಕಂಪನಿಯಾಗಿದೆ ಎನ್ನುವುದೇ ಸೂಕ್ತವಾಗಿದೆ. ಇದು ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಶಕ್ತಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಶತಮಾನೋತ್ಸವ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಮೆಕ್ಯಾನಿಕಲ್ ಇಂಜೀನಿಯರಿಂಗ್ ಮುಗಿಸಿದ ನಂತರ ಮೈಕೋ ಇಲ್ಲವೇ ಟಾಟಾ ಮೋಟರ್ಸ್ ಗೆ ಸೇರಿಕೋಳ್ಳಬೇಕೆಂದು ಇಚ್ಚಿಸಿ ಪ್ರಯತ್ನವನ್ನೂ ಪಟ್ಟಿದ್ದರಂತೆ. ವಿವಿಧ ಕಾರಣಗಳಿಂದ ಅಲ್ಲಿ ಕೆಲಸ ಸಿಗದಿದ್ದಾಗ ಕನಿಷ್ಟ ಪಕ್ಷ ಬಿಡಿ ಭಾಗಗಳ ಪೋರೈಕೆದಾರರಾಗಿಯಾದರೂ ಬಾಷ್ ಜೊತೆ ಸಂಬಂಧವನ್ನು ಹೊಂದಿರ ಬೇಕೆಂದು ಬಯಸಿ ಅಂತಿಮವಾಗಿ ಬಾಷ್ ನಾಗನಾಥಪುರ ಶಾಖೆಗೆ ಕೆಲವು ಬಿಡಿ ಭಾಗಗಳ ಪೋರೈಸಿದ್ದನ್ನು ನೆನಪಿಸಿಕೊಂಡಿದ್ದು ಗಮನಾರ್ಹವಾಗಿತ್ತು.
ಬಾಷ್ ಕಂಪನಿಯ ಸಂಸ್ಥಾಪಕರಾದ ಶ್ರೀ ರಾಬರ್ಟ್ ಬಾಷ್ ಅವರು ಹೆಚ್ಚು ಹಣವನ್ನು ಗಳಿಸಲು ಉತ್ಸುಕರಾಗಿರಲಿಲ್ಲ. ಅವರು ತಮ್ಮ ಸಂಸ್ಥೆಗಳ ಬಗ್ಗೆ ಜನರಿಗೆ ನಂಬಿಕೆಯನ್ನು ಹೆಚ್ಚಿಸಲು ಬಯಸುತ್ತಿದ್ದರು. ಜನರಿಗೆ ತಮ್ಮ ಉತ್ಪನ್ನಗಳ ಮೌಲ್ಯದಲ್ಲಿನ ನಂಬಿಕೆ, ಗೌರವದದ ಜೊತೆಗೆ ಭರವಸೆಗಳಿಗೆ ವಹಿವಾಟಿನ ಲಾಭಕ್ಕಿಂತ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದ್ದರು. ಹಾಗಾಗಿಯೇ ಅವರು ಸಹಾ ಕಾಲವೂ ಹೇಳುತ್ತಿದ್ದ “ನಾನು ಹಣವನ್ನು ಬೇಕಾದರೂ ಕೆಳೆದುಕೊಳ್ಳುತ್ತೇನೆಯೇ ಹೊರತು ಜನರ ನಂಬಿಯೆನ್ನಲ್ಲಾ” ( I would rather loose money than trust) ಎಂಬುದನ್ನು ಬಾಷ್ ಕಂಪನಿಯ ಸದ್ಯದ ಆಡಳಿತ ಮಂಡಳಿ ಇಂದಿಗೂ ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ಮೆಚ್ಚುವಂತಹ ವಿಷಯವಾಗಿದೆ.
ಶತಮಾನೋತ್ಸವ ಆಚರಿಸುತ್ತಿರುವ ಭರದಲ್ಲಿ, ತನ್ನ ನೌಕರರನ್ನು ಹುರಿದುಂಬಿಸುವ ಸಲುವಾಗಿ ತಮ್ಮ ಕಂಪನಿಯು ಸುಸ್ಥಿರ ನಾವೀನ್ಯತೆಗಳ ಮುಂದಿನ ಕಲ್ಪನೆಯನ್ನು ಹುಟ್ಟುಹಾಕಲು ಅನುಮಾನಗಳು, ಗೊಂದಲಗಳು ಮತ್ತು ಅವ್ಯವಸ್ಥೆಗಳ ಮಂಜಿನಿಂದ ಮೇಲೇರಲು ಪ್ರತಿದಿನ ನಿಮಗೆ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಮನಸ್ಸನ್ನು ಹೊಂದಿಸಿ ಮತ್ತು ದೃಢವಿಶ್ವಾಸದಿಂದ ಮುಂದುವರಿಯಿರಿ, ಒಟ್ಟಿಗೆ ನಾವು ಬಾಷ್ ಆಗಿದ್ದೇವೆ ಎಂಬ ಸಾರಾಂಶವುಳ್ಳ ಬಾಷ್ ಗೀತೆಯನ್ನು ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ ಮತ್ತು ಗಾಯನ ಮೂಲಕ ಈ ಸ್ವರಮೇಳ ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸಲಿ ಎಂದು ತಮ್ಮ ಉದ್ಯೋಗಿಗಳ ಜೀವನೋತ್ಸಾಹವನ್ನು ಚಿಮ್ಮಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಕೇಳಲು ಆನಂದಮಯವಾಗಿದೆ.
ಹಾಲಿನಲ್ಲಿ ಸಕ್ಕರೆ ಬೆರೆತು ಬೇರ್ಪಡಿಸಲಾಗದ ಸಿಹಿಯಾಗುವ ಹಾಗೆ ದೂರದ ಜರ್ಮನಿಯ ಕಂಪನಿಯು ಭಾರತೀಯರ ಆಶೋತ್ತರಗಳಿಗೆ ಸ್ಪಂದಿಸಿ ಭಾರತೀಯರ ಮನ ಮತ್ತು ಮನೆಮಾತಾಗಿರುವ ಬಾಷ್ ಇಂಡಿಯಾ ಕಂಪನಿ ಇನ್ನೂ ನೂರಾರು ವರ್ಷಗಳ ಕಾಲ ಭಾರತಾದ್ಯಂತ ಇನ್ನೂ ಹತ್ತಾರು ಉತ್ಪಾದನ ಘಟಕಗಳು ಮತ್ತು ಸಂಶೋಧನಾತ್ಮಕ ಶಾಖೆಗಳನ್ನು ಆರಂಭಿಸುವ ಮೂಲಕ ಆಧುನಿಕ ಭಾರತಕ್ಕೆ ತನ್ನ ಕೊಡುಗೆ ನೀಡುವಂತಾಗಲಿ ಎಂದು ಹಾರೈಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಬಾಷ್ ಕಂಪನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಲ್ಲದೇ ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ಬಾಷ್ ಕಂಪನಿಯ ಉದ್ಯೋಗಿ ಮತ್ತು ನನ್ನ ಸಹೋದರ ಸುದರ್ಶನ್ ಬಾಳಗಂಚಿಗೆ ಹೃತ್ಪೂರ್ವಕ ಧನ್ಯವಾದಗಳು
♥️♥️♥️♥️♥️♥️
LikeLiked by 1 person