ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ ಆ ಮಹಾನ್ ಸಾಧಕನಿಗೆ ಭಕ್ತಿ ಪೂರ್ವಕ ಧನ್ಯವಾದಗಳನ್ನು ಅರ್ಪಿಸೋಣ.
ಪರಾಶರ ಮುನಿಗಳು ಪರ್ಯಟನೆ ಮಾಡುತ್ತಿದ್ದಾಗ ಅದೊಮ್ಮೆ ಯಮುನಾ ನದಿಯನ್ನು ದಾಟಲು ನದಿಯ ಮತ್ತೊಂದು ತುದಿಯಲ್ಲಿದ್ದ ಅಂಬಿಗನನ್ನು ಕರೆದಾಗ ಆಶ್ಚರ್ಯಕರ ರೀತಿಯಲ್ಲಿ ಅದು ಅಂಬಿಗನಾಗಿರದೇ ಆಕೆಯ ಮಗಳು ಸತ್ಯವತಿಯಾಗಿರುತ್ತಾಳೆ. ಹೆಸರು ಸತ್ಯವತಿಯಾದರೂ, ಅಕೆಯ ಮೈಯಿಂದ ಸದಾಕಾಲವೂ ಮೀನಿನ ವಾಸನೆ ಸೂಸುತ್ತಿದ್ದರಿಂದ ಆಕೆ ಮತ್ಸಗಂಧಿ ಎಂದೇ ಕುಖ್ಯಾತಳಾಗಿರುತ್ತಾಳೆ. ದೈವಾಂಶ ಸಂಭೂತರಾದ ಪರಾಶರನ್ನು ಕಂಡು ಆಕೆ ಭಕ್ತಿಯಿಂದ ಒಂದು ದಡದಿಂದ ಮತ್ತೊಂದು ದಡವನ್ನು ದಾಟಿಸಿದ ನಂತರ ಹಣದ ಬದಲಾಗಿ ತನ್ನ ದೇಹದ ವಾಸನೆಯನ್ನು ಹೋಗಲಾಡಿಸಲು ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪಿದ ಪರಾಶರರು ಆ ಆಕೆಯ ದೇಹದ ದುರ್ಗಂಧವನ್ನು ಹೋಗಲಾಡಿಸಿ ಸುವಾಸನೆ ಬರುವಂತೆ ಮಾಡಿದ್ದಲ್ಲದೇ ಆಕೆಯ ದೇಹದ ಸುವಾಸನೆ ಹತ್ತಾರು ಮೈಲುಗಳ ದೂರ ಪಸರಿಸಿದ ಕಾರಣ ಅಂದಿನಿಂದ ಆಕೆ ಯೋಜನಗಂಧಿ ಎಂದು ಪ್ರಖ್ಯಾತಳಾಗುತ್ತಾಳೆ.
ಹೀಗೆ ತಮ್ಮಿಂದಲೇ ಮತ್ಸಗಂಧಿ ಯೋಜನಗಂಧಿಯಾದ ನಂತರ ಆಕೆಯ ಮೇಲೆ ಅನುರಕ್ತರಾದ ಪರಾಶರರು ಅಕೆಗೊಂದು ಗಂಡು ಮಗವೊಂದನ್ನು ಕರುಣಿಸಿ ಈ ಮಗು ಸಾಕ್ಷಾತ್ ವಿಷ್ಣುವಿನ ಅಂಶವೆಂದೂ, ಮುಂದೆ ಈತ ಮಹಾನ್ ಪಂಡಿತನಾಗಿ ಲೋಕ ಕಲ್ಯಾಣವಾಗುತ್ತದೆ ಎಂದು ಹೇಳಿದ್ದಲ್ಲದೇ ಆತ ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿರುತ್ತಾನೆ ಎಂದು ಹರಸಿ ಅಲ್ಲಿಂದ ಹೋಗುತ್ತಾರೆ. ಹೀಗೆ ಮತ್ಸ್ಯಗಂಧಿ ಅಥವಾ ಸತ್ಯವತಿಯತಿಗೆ ಜನಿಸಿದ ಮಗು ಕಪ್ಪಗೆ ಇದ್ದ ಕಾರಣ ಕೃಷ್ಣಾ ಎಂದೂ, ದ್ವೀಪದಲ್ಲಿ ಜನಿಸಿದ ಕಾರಣ ದ್ವೈಪಾಯನ ಎಂದೂ ಕರೆಯಲ್ಪಟ್ಟು ನಂತರ ಆ ಮಗು ಕೃಷ್ಣ-ದ್ವೈಪಾಯನ ಎಂದೇ ಖ್ಯಾತಿ ಪಡೆಯುತ್ತದೆ.
ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾನು ವಿದ್ಯೆಯನ್ನು ಕಲಿಯಲು ಹೋಗುವುದಾಗಿ ತಾಯಿಯನ್ನು ಕೇಳಿಕೊಂಡಾಗ, ಮಗನನ್ನು ಕಳುಹಿಸಲು ಯೋಜನಗಂಧಿ ಒಪ್ಪದಿದ್ದಾಗ, ಅಮ್ಮಾ ನೀನು ಮನಸ್ಸಿನಲ್ಲಿ ನನ್ನ ನೆನಸಿಕೊಂಡಾಗಲೆಲ್ಲಾ ನಿಮ್ಮ ಬಳಿಗೆ ಮನೋವೇಗದಲ್ಲಿ ಬಂದು ನಿನ್ನ ಇಚ್ಚೆಗಳನ್ನು ಪೂರೈಸುತ್ತೇನೆ ಎಂದು ಭಾಷೆ ಕೊಟ್ಟು ವಿದ್ಯೆಯನ್ನು ಕಲಿಯುವ ಸಲುವಾಗಿ ಗುರುಗಳನ್ನು ಅರಸಿ ಹೊರಡುತ್ತಾನೆ.
ಬಹಳ ಹುಡುಕಾಟದ ನಂತರ ಅವನಿಗೆ ಋಷಿ ವಾಸುದೇವರು ದೊರೆತು ಅವರಿಂದ ಆರಂಭಿಕ ಶಿಕ್ಷಣವನ್ನು ಪಡೆದು ನಂತರದ ದಿನಗಳಲ್ಲಿ ಋಷಿಗಳಾದ ಸನಕಾ ಮತ್ತು ಸನಂದನ ಅಲ್ಲದೇ ಇತರೇ ಋಷಿಮುನಿಗಳಿಂದ ವಿವಿಧ ಶಾಸ್ತ್ರಗಳು ಮತ್ತು ಗ್ರಂಥಗಳನ್ನು ಅಧ್ಯಯನ ಮಾಡಿದ ವ್ಯಾಸರು ಎಂದೇ ಪ್ರಖ್ಯಾತರಾಗುತ್ತಾರೆ. ಅದೇ ಸಮಯದಲ್ಲೇ ಅಪೌರುಷಿಯವಾಗಿ ಜನರಿಂದ ಜನರಿಗೆ ಒಲಿದಿದ್ದ ವೇದಗಳು ಬಹಳ ಕಠಿಣವಾಗಿದ್ದ ಕಾರಣ ಮನುಜ ಕುಲದ ಹಿತಕ್ಕಾಗಿ ಮತ್ತು ಜನರು ಸುಲಭವಾಗಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವಂತೆ ಅದೇ ವೇದಗಳನ್ನು ನಾಲ್ಕು ಭಾಗಗಳಾಗಿ ವಿಗಂಡಿಸಿದ ನಂತರ ಅವರು ವೇದವ್ಯಾಸ ಎಂದೇ ಜನರು ಕರೆಯಲಾರಂಭಿಸುತ್ತಾರೆ. ನಾಲ್ಕು ವೇದಗಳ ವಿಸ್ತರಣೆಯ ಜೊತೆಗೆ, ವೇದ ವ್ಯಾಸರು 18 ಮಹಾಪುರಾಣಗಳನ್ನು ಬರೆದು ಅವವುಗಳನ್ನುಉಪಖ್ಯಾನರು ಅಥವಾ ಉಪನ್ಯಾಸಗಳ ಮೂಲಕ ಸುಲಭವಾಗಿ ಎಲ್ಲರಿಗೂ ಬೋಧಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಇದರ ಜೊತೆಗೆ ಬ್ರಹ್ಮಸೂತ್ರಗಳನ್ನು ಸಹ ಪ್ರತಿಪಾದಿಸಿದರು. ಇವೆಲ್ಲವುಗಳ ಜೊತೆಗೆ ಮಹರ್ಷಿ ವೇದ ವ್ಯಾಸರು ಸ್ವತಃ ತಾವೇ ಭಾಗಿಯಾಗಿದ್ದ ಮತ್ತು ಸಾಮಾನ್ಯ ಜನರಿಗೂ ಅತ್ಯುನ್ನತ ಜ್ಞಾನವನ್ನು ಸರಳವಾಗಿ ಕಥಾರೂಪದಲ್ಲಿ ಅರ್ಥಮಾಡಿಕೊಳ್ಳುವಂತಹ ಮಹಾಭಾರತದ ಕರ್ತೃವೂ ಆಗಿರುವುದು ಗಮನಾರ್ಹವಾಗಿದ್ದು ಆ ಕಥೆಯೂ ಬಲು ರೋಚಕವಾಗಿದೆ.
ಕೃಷ್ಣ ದ್ವೈಪಾಯನರು ವಿದ್ಯಾಭ್ಯಾಸಕ್ಕಾಗಿ ತಾಯಿಯನ್ನು ತೊರೆದ ನಂತರ ಯೋಜನಗಂಧಿ ಯಥಾ ಪ್ರಕಾರ ದೋಣಿಯನ್ನು ಚಲಾಯಿಸುತ್ತಿರುವಾಗ ಅಲ್ಲಿಗೆ ಬಂದ ಚಂದ್ರವಂಶದ ಹಸ್ತಿನಾಪುರದ ರಾಜ ಶಂತನು ಆಕೆಯಲ್ಲಿ ಅನುರಕ್ತನಾಗಿ ನಂತರ ಆತ ಮತ್ತು ಗಂಗೆಯ ಮಗನಾದ ಗಾಂಗೇಯ ತನ್ನ ತಂದೆಗಾಗಿ ತಾನು ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆಮಾಡಿ ಭೀಷ್ಮ ಎನಿಸಿಕೊಂಡ ನಂತರ ಶಂತನು ಮತ್ತು ಯೋಜನಗಂಧಿಯು ಮದುವೆಯಾಗಿ ಅವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಇಬ್ಬರು ಗಂಡು ಮಕ್ಕಳಾಗಿ ಅವರಿಬ್ಬರೂ ಅಕಾಲಿಕವಾಗಿ ಸಂತಾನವಿಲ್ಲದೇ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದಾಗ, ತಮ್ಮ ವಂಶ ಕೊನೆಯಾಗದಿರಲೆಂದು, ಪ್ರಾಚೀನ ಪದ್ಧತಿ ನಿಯೋಗವನ್ನು ಅನುಸರಿಸಿ ವ್ಯಾಸರ ತಾಯಿ ಸತ್ಯವತಿಯು ತನ್ನ ಮಗನನ್ನು ನೆನಸಿಕೊಂಡಾಗ ತಾಯಿಗೆ ಕೊಟ್ಟ ಮಾತಿನಂತೆ ತಾಯಿಯ ಎದುರಲ್ಲಿ ಹಾಜರಾಗಿ ಆಕೆಯ ಇಚ್ಚೆಯಂತೆ. ಆಕೆಯ ಮೃತನಾದ ಮಗನಾದ ವಿಚಿತ್ರವೀರ್ಯನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರಿದ ಪರಿಣಾಮ ವಿಚಿತ್ರವೀರ್ಯನ ಮೊದಲ ಪತ್ನಿಯರಾದ ಅಂಬಿಕೆ ಧೃತರಾಷ್ಟ್ರ ಮತ್ತು ಅಂಬಾಲಿಕೆಗೆ ಪಾಂಡುವಿನ ಜನನವಾದರೆ, ಆವರಿಬ್ಬರ ದಾಸಿಯ ಮಗನಾಗಿ ವಿದುರನ ಜನ್ಮವಾಗುತ್ತದೆ.
ಹೀಗೆ ಮೂರು ಮಕ್ಕಳ ತಂದೆಯಾದರೂ ಅವರು ವ್ಯಾಸರ ಪುತ್ರರಾಗಿ ಪರಿಗಣಿತರಾಗದೇ, ಅವರ ಮತ್ತೊಬ್ಬ ಪುತ್ರ ಶುಕನೇ ಅವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. ವೇದ, ಶಾಸ್ತ್ರಗಳಲ್ಲಿ ಪರಿಣಿತರು, ಪರಿಪಕ್ವ ಜ್ಞಾನಿ. ವರ್ತಮಾನ, ಭೂತ, ಭವಿಷತ್ ವಿಚಾರಗಳೆಲ್ಲವನ್ನೂ ಬಲ್ಲವರಾಗಿದ್ದ ವೇದವ್ಯಾಸರು, ತಾವೇ ಪರೋಕ್ಷವಾಗಿ ಭಾಗಿಯಾಗಿದ್ದ ಮಹಾಭಾರತದಂತಹ ಧಾರ್ಮಿಕ, ರಾಜನೈತಿಕ, ಸಾಮಾಜಿಕ ಹೀಗೆ ಮೂರೂ ಬಗೆಯಲ್ಲೂ ಸ್ವಾರಸ್ಯ ಸಂಗತಿಗಳಿಂದ ಕೂಡಿದ್ದ ಅರ್ಥಪೂರ್ಣ ಹಾಗೂ ಸತ್ವಪೂರ್ಣ ಎನಿಸಿರುವ ಮಹಾನ್ ಗ್ರಂಥವನ್ನು ಬರೆಯಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವ ಕಾರಣ, ಈ ಕಾರ್ಯ ತನ್ನೊಬ್ಬನಿಂದಲೇ ಅಸಂಭವವೆಂಬುದು ತಿಳಿದು ಆ ಮಹಾಕಾವ್ಯವನ್ನು ರಚಿಸಲು ಶೀಘ್ರವಾಗಿ ಬರೆಯಬಲ್ಲಂತಹ ಶೀಘ್ರಲಿಪಿಕಾರರನ್ನು ಹುಡುಕುತ್ತಿದ್ದ ಸಮಯದಲ್ಲೇ ಅವರಿಗೆ ವಿದ್ಯೆಗಳ ಅಧಿಪತಿ ಸಿದ್ಧಿ ವಿನಾಯಕನ ನೆನಪಾಗಿ ಭಕ್ತಿಯಿಂದ ಅವನನ್ನೇ ಕೇಳಿಕೊಂಡಾಗ, ಗಣೇಶನು ಸಹಾ ವ್ಯಾಸರು ಈ ಮಹಾಕಾವ್ಯವನ್ನು ರಚಿಸುವಾಗ ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಬೇಕೆಂಬ ಷರತ್ತು ವಿಧಿಸುತ್ತಾನೆ. ಇದಕ್ಕೆ ಬುದ್ಧಿವಂತರಾದ ವ್ಯಾಸರು ಸಹಾ ಪ್ರತಿಯಾಗಿ ತಾವು ಹೇಳುವ ಪ್ರತೀ ಶ್ಲೋಕವನ್ನು ಗಣೇಶನು ಅರ್ಥ ಮಾಡಿ ಕೊಂಡೇ ಬರೆಯಬೇಕು ಎಂಬ ಷರತ್ತನ್ನು ಒಡ್ಡುತ್ತಾರೆ. ಹೀಗೆ ದ್ವಿಪಕ್ಷೀಯ ಷರತ್ತಿನೊಂದಿಗೆ ಆರಂಭವಾದ ಮಹಾಭಾರತ ಎಂಬ ಮಹಾಕಾವ್ಯದಲ್ಲಿ ವ್ಯಾಸರಿಗೆ ವಿಶ್ರಾಂತಿಯ ಅವಶ್ಯಕತೆ ಇದ್ದಾಗಲೆಲ್ಲಾ ಕಷ್ಟಕರವಾದ ಶ್ಲೋಕಗಳನ್ನು ಹೇಳಿ ಗಣೇಶನು ಕ್ಲಿಷ್ಟಕರ ಶ್ಲೋಕಗಳನ್ನು ಅರ್ಧೈಸಿಕೊಳ್ಳುವ ಸಮಯದ ಮಧ್ಯದಲ್ಲಿ ಆಯಾಸ ಪರಿಹರಿಸಿಕೊಳ್ಳುವಷ್ಟು ಕುಶಾಗ್ರಮತಿಯಾಗಿರುತ್ತಾರೆ. ಹೀಗೆ ಇಂದಿಗೂ ಮತ್ತು ಅಚಂದ್ರಾರ್ಕವಾಗಿ ಇರುವಂತಹ ಮಾಹಾನ್ ಕಾವ್ಯ ಮಹಾಭಾರತದ ರಚನೆಗೆ ವ್ಯಾಸರು ಮತ್ತು ವಿನಾಯಕ ಇಬ್ಬರೂ ಕಾರಣಿಭೂತರಾಗುತ್ತಾರೆ. ಮುಂದೆ ವ್ಯಾಸರ ಮಗನಾದ ಶುಕನು ಭಾಗವತ ಪುರಾಣದ ನಿರೂಪಕನಾಗುತ್ತಾನೆ.
ವ್ಯಾಸರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿರುವ ಕಾರಣ ವ್ಯಾಸರು ಇಂದಿಗೂ ಅಮರರಾಗಿದ್ದು ಭಕ್ತರ ಯೋಗಕ್ಷೇಮಕ್ಕಾಗಿ ನಮ್ಮ ನಿಮ್ಮ ಮಧ್ಯದಲ್ಲೇ ಇದ್ದು ನಿಜವಾದ ಮತ್ತು ನಿಷ್ಠಾವಂತ ಭಕ್ತರಿಗೆ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಆದಿ ಶಂಕರಾಚಾರ್ಯರಿಗೆ ವೇದ ವ್ಯಾಸರ ದರ್ಶನದ ಭಾಗ್ಯ ದೊರೆತಿತ್ತು ಎನ್ಮಲಾಗುತ್ತದೆ. ಹಾಗಾಗಿ ಅನೇಕ ಆಧ್ಯಾತ್ಮಿಕ ಗುರುಗಳು ಇಂದಿಗೂ ವ್ಯಾಸರ ಕೃತಿಗಳನ್ನು ಅಧ್ಯಯನ ಮಾಡುತ್ತಲೇ ಅವರ ದರ್ಶನದ ಭಾಗ್ಯ ಪಡೆಯಲು ವಿಶೇಷ ಸಾಧನೆಗಳನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹಾಗಾಗಿಯೇ ವೇದವ್ಯಾಸರ ಜನ್ಮಕಥೆಯನ್ನುಆಧರಿಸಿ ಇಂದಿನ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ ಯಮುನಾ ನದಿಯ ತೀರವಾದ ಕಲ್ಪಿ ಎನ್ನುವಲ್ಲಿ ವ್ಯಾಸರ ಜನನವಾಯಿತು ಎಂದೇ ನಂಬಲಾಗಿದೆ.
ವೇದವ್ಯಾಸರು ಅಮರರು ಎನ್ನುವ ಪುರಾವೆ ಎಂಬಂತೆ ವ್ಯಾಸರ ಜನನವಾದ ಎಷ್ಟೋ ಸಹಸ್ರ ವರ್ಷಗಳ ನಂತರ ಪತಂಜಲಿಯ ಜನನವಾಗಿ ಆತ ರಚಿಸಿದ ಯೋಗ ಸೂತ್ರಗಳ ವ್ಯಾಖ್ಯಾನವಾದ ಯೋಗ-ಭಾಷ್ಯವನ್ನು ವ್ಯಾಸರು ಬರೆದಿದ್ದಾರೆ ಎನ್ನುವ ಕಾರಣ, ವ್ಯಾಸರನ್ನು ಅಮರರೆಂದೇ ಒಪ್ಪಿಕೊಳ್ಳಲೇ ಬೇಕಾಗಿದೆ.
ಹೀಗೆ ವೇದವ್ಯಾಸರು ಕೇವಲ ಮಹರ್ಷಿಗಳಷ್ಟೇ ಅಲ್ಲದೇ ಅವರೊಬ್ಬ ಕ್ರಾಂತಿಕಾರಿ ಸುಧಾರಕ, ಪಥ ಬದಲಿಸಬಲ್ಲ ಕವಿ, ಶ್ರೇಷ್ಠ ಬರಹಗಾರ, ಅದ್ಭುತ ಸಂಪಾದಕ, ಉತ್ಸಾಹದಿಂದ ಬೋಧನೆಯನ್ನು ಸಾಂಸ್ಥಿಕೀಕರಿಸಿದ ಸ್ಪೂರ್ತಿದಾಯಕರು ಎಂದರೂ ಅತಿಶಯವಲ್ಲ. ತೀರ್ಥಯಾತ್ರೆಗಳನ್ನು ಸೃಷ್ಟಿಸುವ ಮೂಲಕ, ಚಿತ್ತ-ಶುದ್ಧಿ (ಮನಸ್ಸಿನ ಶುದ್ಧೀಕರಣ)ಯ ಜೊತೆಗೆ ರಾಷ್ಟ್ರೀಯ ಏಕತೆಗೆ ಎತ್ತಿ ಹಿಡಿದ ಕಾರಣ ಅವರನ್ನು ಮೊದಲ ರಾಷ್ಟ್ರ ನಿರ್ಮಾತೃ ಎಂದೂ ಉಲ್ಲೇಖಿಸಬಹುದಾಗಿದೆ.
ಇನ್ನು ಸ್ವತಃ ವೇದವ್ಯಾಸರು ದಲಿತ ಮತ್ತು ಕೆಳಜಾತಿ ಸಮುದಾಯದಲ್ಲಿ ಹುಟ್ಟಿದರೂ, ತಮ್ಮ ಅಸಾಧಾರಣ ಸಾಮರ್ಥ್ಯ ಮತ್ತು ಸಾಧನೆಗಳ ಮೂಲಕ ಹಿಂದೂ ಧರ್ಮದ ಕ್ರಾಂತಿಗೊಳಿಸಲು, ಮರುಸಂಘಟಿಸಲು ಮತ್ತು ಸುಧಾರಣೆಗೆ ಸಹಾಯ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೃಷ್ಣ ದ್ವೈಪಾಯನ ವೇದವ್ಯಾಸ ಅವರು ಪ್ರಾಚೀನ ಭಾರತದ ಮೊದಲ ಅಂತರ-ಜಾತಿಯ ಸಂಬಂಧಕ್ಕೆ ಹುಟ್ಟಿದವರಾಗಿದ್ದರೂ ಅವರನ್ನು ಸಕಲ ಹಿಂದೂಗಳು ಗುರು ಸ್ಥಾನ ಕೊಡುವ ಮೂಲಕ ಅಂದಿನ ಕಾಲದಲ್ಲಿ ಈಗಿನಂತಹ ವಿಪರೀತ ಜಾತಿ ಪದ್ದತಿಗಳು ಇರಲಿಲ್ಲ ಎಂಬುದಕ್ಕೆ ಜ್ವಲಂತ ಸಾಕ್ಷಿಗಿದ್ದಾರೆ. ಹಾಗಾಗಿ ಪ್ರತೀ ವರ್ಷವೂ ಅವರ ಜನ್ಮದಿನವಾದ ಆಷಾಢ ಮಾಸದ ಪೌರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ ಎಂದು ಗುರುಶಿಷ್ಯರ ಅನುಬಂಧಕ್ಕೆ ಮೀಸಲಾಗಿದ್ದು, ಈಗಾಗಲೇ ತಿಳಿಸಿರುವಂತೆ ಆಸ್ತಿಕರು ತಮ್ಮ ತಮ್ಮ ಗುರುಗಳಿಗೆ ಯಥಾಶಕ್ತಿ ಗುರು ಕಾಣಿಕೆಯನ್ನು ನೀಡುವ ಮೂಲಕ ಕೃತಾರ್ಥರಾಗುತ್ತಾರೆ. ಆದಕ್ಕಾಗಿಯೇ ಅಲ್ವೇ ಯಾವುದೇ ಮಹತ್ಕಾರ್ಯವನ್ನು ಸಾಧಿಸಲು ಮುಂದೆ ಗುರಿ ಸ್ವಷ್ಟವಾದ ಗುರಿ ಇರಬೇಕು ಮತ್ತು ಬೆನ್ನ ಹಿಂದೆ ದಿಟ್ಟ ಗುರು ಇರಬೇಕು ಎನ್ನುವ ಗಾದೆ ಇರೋದು? ಅದಕ್ಕೇ ಅಲ್ಲವೇ ಪುರಂದರ ದಾಸರು ಹೇಳಿರುವುದು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು.
ಏನಂತೀರೀ?
ನಿಮ್ಮವನೇ ಉಮಾಸುತ
Wonderful very good information
LikeLiked by 1 person
ಧನ್ಯೋಸ್ಮಿ
LikeLike
ಬಹಳ ಚೆನ್ನಾಗಿ ಬರೆದಿದ್ದೀರಿ. ಇಂದಿನ ಪರ್ವ ದಿನಕ್ಕೆ ಅತ್ಯಂತ ಪ್ರಸ್ತುತವಾದ ಬರಹ.
LikeLiked by 1 person
ಧನ್ಯೋಸ್ಮಿ
LikeLike