ಶ್ರೀ ಶಿವಮೊಗ್ಗ ಸುಬ್ಬಣ್ಣ

sub9

ಭಾರತದ ಉಳಿದೆಲ್ಲಾ ಭಾಷೆಗಳ ಸಾರಸ್ವತ ಲೋಕಕ್ಕಿಂತಲೂ ವಿಭಿನ್ನವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಭಾಗಗೀತೆಗಳ ಮೂಲಕ ತಮ್ಮ ಭಾವನೆಗಳನ್ನು ಕನ್ನಡ ಕವಿಗಳು ವ್ಯಕ್ತಪಡಿಸಿದ್ದರೆ, ಅಂತಹ ಕವಿಗಳ ಭಾವನೆಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ರಾಗ ಸಂಯೋಜನೆ ಮಾಡಿ ತಮ್ಮ ಅದ್ಭುತ ಕಂಠಸಿರಿಯಿಂದ ಆ ಹಾಡುಗಳನ್ನು ಎಲ್ಲರ ಭಾವ ಮಿಡಿಯುವ ಹಾಗೆ ಹಾಡುವ ಅದ್ಬುತ ಸುಗಮ ಸಂಗೀತಗಾರರೂ ಸಹಾ ಕನ್ನಡ ಸಾರಸ್ವತ ಲೋಕದಲ್ಲಿದ್ದಾರೆ. ತಮ್ಮ ಅದ್ಭುತವಾದ ಕಂಚಿನ ಕಂಠದಿಂದ ನೂರಾರು ಕವಿಗಳ ಸಾವಿರಾರು ಭಾವಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಮನ ಮತ್ತು ಮನೆ ಮಾತಾಗಿದ್ದ ಮತ್ತು 1979ರಲ್ಲಿ ಕಾಡು ಕುದುರೆ ಚಲನಚಿತ್ರದಲ್ಲಿ ಕಾಡು ಕುದುರೆ ಓಡಿ ಬಂದಿತ್ತಾ… ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಗಳಿಸುವ ಮೂಲಕ ಹಿನ್ನೆಲೆ ಗಾಯನದಲ್ಲಿ ಪ್ರಪ್ರಥಮಬಾರಿಗೆ ರಾಷ್ಟ್ರಪಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟಿದ್ದಂತಹ ಅದ್ಭುತವಾದ ಗಾಯಕ ಶ್ರೀ ಶಿವಮೊಗ್ಗ ಸುಬ್ಬಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರು.

ಕರ್ನಾಟಕದ ಮಲೆನಾಡಿನ ಶಿವಮೊಗ್ಗ ಚಿಲ್ಲೆಯ ನಗರದ ಗ್ರಾಮದಲ್ಲಿ ಖ್ಯಾತ ವೇದ ಪಂಡಿತರೂ ಮತ್ತು ಸಂಗೀತ ವಿದ್ವಾಂಸರಾಗಿದ್ದ ಶ್ರೀ ಶಾಮಣ್ಣನವರ ಪೂರ್ವಜರು ಕುಂದಾಪುರದ ಕಡೆಯವರಾಗಿದ್ದು ಕಾಲಾಂತರದಲ್ಲಿ ನಗರಕ್ಕೆ ವಲಸೆ ಬಂದಿರುತ್ತಾರೆ. ಅವರ ಪುತ್ರ ಶ್ರೀ ಗಣೇಶರಾಯರು ಮತ್ತು ಶ್ರೀಮತಿ ರಂಗಾನಾಯಕಿ ದಂಪತಿಗಳಿಗೆ 1938ರ ಡಿ.14ರಂದು ಜನಿಸಿದ ಮುದ್ಡಾದ ಮಗುವಿಗೆ ಸುಬ್ರಹ್ಮಣ್ಯಂ ಎಂದು ಹೆಸರಿಡುತ್ತಾರೆ. ಮನೆಯಲ್ಲಿ ಸದಾ ಕಾಲವೂ ಸಂಸ್ಕೃತ ವೇದಘೋಷಗಳು ಮೊಳಗುತ್ತಿದ್ದಂತಹ ವಾತಾವರಣವಿತ್ತು. ಬೆಳಗಾದ ತಕ್ಷಣ ಪ್ರತಿದಿನವೂ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಅವರ ಮನೆಯಲ್ಲಿ ಕೇಳಿ ಬರುತ್ತಿತ್ತು. ಅದಲ್ಲದೇ ಹೇಳೀ ಕೇಳಿ, ಸಂಗೀತದಲ್ಲಿ ಘನ ವಿದ್ವಾಂಸರಾಗಿದ್ದ ಶಾಮಣ್ಣನವರು ಮಾತನಾಡಿದರೇ ಸಾಕು ಅದು ಸುಶ್ರಾವ್ಯ ಹಾಡಿನಂತಿರುತ್ತಿತ್ತು. ಇಂತಹ ಸುಂದರ ವಾತಾವರಣದಲ್ಲಿ ಬೆಳೆದ ಬಾಲಕ ಸುಬ್ರಹ್ಮಣ್ಯರಿಗೆ ಸಹಜವಾಗಿ ಇದೆಲ್ಲವೂ ರಕ್ತಗತವಾಗಿಯೇ ಮೂಡಿಬಂದಿತು.

sub5

ಆರಂಭದಲ್ಲಿ ತಮ್ಮ ತಾತನ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸವನ್ನು ಆರಂಭಿಸಿದರು. ಇವರೊಂದಿಗೆ ಕನ್ನಡದ ಮತ್ತೊಬ್ಬ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ .ಕೆ. ಸುಮಿತ್ರಾ ಅವರೂ ಸಹಾ ಶಾಮಣ್ಣನವರ ಬಳಿಯೇ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ಆದರೆ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಮನೆಯಲ್ಲಿ ಸಂಗೀತ ಸುಲಭವಾಗಿ ಕಲಿಯುವಂತಹ ವಾತಾವರಣವಿದ್ದರೂ, ತಮ್ಮ ವ್ಯಾಸಂಗದ ಕಡೆ ಹೆಚ್ಷಿನ ಗಮನ ಹರಿಸಿದ ಕಾರಣ ಸುಬ್ಬಣ್ಣನವರಿಗೆ ಸಂಗೀತದಲ್ಲಿ ವಿಶೇಷವಾಗಿ ಅಭ್ಯಾಸ ಮಾಡಲಾಗದೇ ಹೋದರೂ ಓದಿನಲ್ಲಿ ಚುರುಕಾಗಿದ್ದರಿಂದ, ತಮ್ಮ ಬಿ.ಎ. ಪದವಿಯನ್ನು ಗಳಿಸಿದ ನಂತರ ಓದನ್ನು ಮುಂದುವರೆಸಿ, ಎಲ್.ಎಲ್.ಬಿ.ಯನ್ನು ಮುಗಿಸಿ, ವಕೀಲರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ಕೆಲವೇ ಕೆಲವು ವರ್ಷಗಳಲ್ಲಿ ಸ್ಥಳೀಯ ನೋಟರಿಯಾಗಿ ನೇಮಕಗೊಂಡು ಜೀವನವನ್ನು ಸರಳವಾಗಿ ಸಾಗಿಸಿಕೊಂಡು ಹೋಗುತ್ತಿದ್ದರು.

ಬಾಲ್ಯದಲ್ಲಿ ಕಲಿತ ವಿದ್ಯೆಗಳೆಲ್ಲವೂ, ಜೀವನದಲ್ಲಿ ನಿರಂತರವಾಗಿ ನಮ್ಮೊಂದಿಗೆ ಸಾಗುತ್ತಲೇ ಹೋಗುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ, ಅವರೊಳಗೆ ರಕ್ತಗತವಾಗಿ ಅಡಕವಾಗಿದ್ದ ಸಂಗೀತಗಾರ ಆಗ್ಗಾಗ್ಗೆ ಅವರನ್ನು ಎಚ್ಚರಿಸಿ ಶಾಲಾ ಕಾಲೇಜುಗಳ ಸಮಾರಂಭಗಳಲ್ಲಿ ಮತ್ತು ಸ್ಪರ್ಥೆಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು. ಹೀಗಾಗಿ ಶಾಲಾ ಕಾಲೇಜು ದಿನಗಳಿಂದಲೂ ಸುಬ್ಬಣ್ಣನವರು ಅದ್ಭುತ ಗಾಯಕರೆಂದೇ ಗುರುತಿಸಿಕೊಂಡಿದ್ದಲ್ಲದೇ, ತಮ್ಮ ಕಂಚಿನ ಕಂಠದ ಗಾಯನದಿಂದ ಎಲ್ಲರ ಮನಸೂರೆಗೊಂಡು ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕಾಲೇಜಿನ ದಿನಗಳಲ್ಲಿ ಅಂದಿನ ಹಿಂದೀ ಚಲನಚಿತ್ರರಂಗದ ಖ್ಯಾತ ಗಾಯಕರುಗಳಾಗಿದ್ದ ಮಹಮ್ಮದ್ ರಫಿ, ಕಿಶೋರ್‌ ಕುಮಾರ್, ಮನ್ನಾಡೆ ಅವರ ಹಾಡುಗಳಿಂದ ಪ್ರಭಾವಿತರಾಗಿ ಅವರ ಹಾಡುಗಳನ್ನು ಅಷ್ಟೇ ಸೊಗಸಾಗಿ ಹಾಡುವ ಮೂಲಕ ಹಾಡಿನ ಸುಬ್ಬಣ್ಣ ಎಂದೇ ಖ್ಯಾತಿ ಪಡೆದು, ತಮ್ಮ ವಕೀಲೀ ವೃತ್ತಿಯೊಂದಿಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಹಾಡುವುದನ್ನೇ ಪ್ರವೃತ್ತಿ ಮಾಡಿಕೊಂಡು ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮ ವಿಶಿಶ್ಟವಾದ ಛಾಪನ್ನು ಮೂಡಿಸಿದ್ದರು. 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾಗಿ ಅದರ ಮೂಲಕ ಶ್ರೋತೃಗಳನ್ನು ರಂಜಿಸಿದ್ದಲ್ಲದೇ, ರಂಗಭೂಮಿಯಲ್ಲೂ ತಮ್ಮ ಕಂಠಸಿರಿಯನ್ನು ಪರಿಚಯಿಸಿದ್ದರು,

sub1

ಸುಬ್ಬಣ್ಣನವರ ಕಂಠಸಿರಿಯನ್ನು ಸಿನಿಮಾರಂಗಕ್ಕೆ ಹಿನ್ನೆಲೆ ಗಾಯಕರಾಗಿ ಪರಿಚಯಿಸಿದ ಕೀರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಾಡಿನ ಹೆಸರಾಂತ ನಾಟಕಕಾರ ಮತ್ತು ಚಿತ್ರ ನಿರ್ದೇಶಕದಾದ ಕವಿ ಶ್ರೀ ಚಂದ್ರಶೇಖರ ಕಂಬಾರರಿಗೆ ಸಲ್ಲುತ್ತದೆ. ತಮ್ಮ ಕರಿಮಾಯಿ ಚಿತ್ರದಲ್ಲಿ ಹಾಡಿಸಿದ್ದಲ್ಲದೇ, ಜಿ. ಸುಬ್ರಹ್ಮಣ್ಯಂ ಎಂಬ ಹೆಸರನ್ನು ಶಿವಮೊಗ್ಗ ಸುಬ್ಬಣ್ಣ ಎಂದು ಬದಲಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕಂಬಾರರ ಮತ್ತೊಂದು ಸಿನಿಮಾ ಕಾಡು ಕುದುರೆ ಚಿತ್ರದಲ್ಲಿ ಕಾಡು ಕುದುರೆ ಓಡಿ ಬಂದಿತ್ತಾ… ಹಾಡಿಗೆ 1979ರಲ್ಲಿ ರಾಷ್ಟ್ರ ಪ್ರಶಸ್ತಿಗಳಿಸಿ ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀ ನೀಲಂ ಸಂಜೀವರೆಡ್ಡಿಯವರಿಂದ ಪ್ರಶಸ್ತಿಯನ್ನು ಪಡೆಯುವ ಮೂಲಕ ಹಿನ್ನಲೆ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿ ಶಿವಮೊಗ್ಗ ಸುಬ್ಬಣ್ಣನವರದ್ದಾಯಿತು.

sub3

ಅದೇ ಸಮಯದಲ್ಲಿಯೇ ಕವಿ ನಿಸಾರ್ ಅಹಮದ್ ಅವರ ಭಾವಗೀತೆಗಳಿಗೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆಯಲ್ಲಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಧ್ವನಿ ಸುರುಳಿ ನಿತ್ಯೋತ್ಸವದಲ್ಲಿಯೂ ಕೂಡ ಸುಬ್ಬಣ್ಣನವರು ಹಾಡಿದ ನಂತರ ಅವರು ಗಾಯಕರಾಗಿ ಸಮಸ್ಥ ಕನ್ನಡಿಗರ ಮನೆ ಮಾತಾಗಿ ಹೋದರು. ನಂತರ ಕುವೆಂಪು ಗೀತೆಗಳು ಗೀತಗಂಗಾ, ದೀಪಿಕಾ, ಕವಿಶೈಲ, ಬಾರೋ ವಸಂತ, ಅಗ್ನಿಹಂಸ, ನಾಮಸ್ಮರಣ, ಉಪಾಸನಾ, ದೇವ ನಿನ್ನ ಬೇಡುವೆ ಮೊದಲಾದ ನೂರಾರು ಧ್ವನಿಸುರುಳಿಗಳಿಗೆ ಸುಬ್ಬಣ್ಣ ಧ್ವನಿಯಾಗುತ್ತಲೇ, ಸಂಗೀತ ಮತ್ತು ತಮ್ಮ ವಕೀಲಿ ವೃತ್ತಿಯ ಮುಂದುವರೆದ ಭಾಗವಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಗಾಯನದ ಜೊತೆ ಜೊತೆಯಲ್ಲೇ ಹೈಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನೂ ಮುಂದುವರೆಸಿಕೊಂಡು ಹೋಗತೊಡಗಿದರು.

sub4

ಆಕಾಶವಾಣಿಯಲ್ಲಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ಕೋಡಗನ ಕೋಳಿ ನುಂಗಿತ್ತಾ.., ಅಳಬೇಡಾ ತಂಗಿ ಅಳಬೇಡ…, ‘ಬಿದ್ದೀಯಬ್ಬೇ ಮುದುಕಿ.., ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ತಮ್ಮ ಅದ್ಭುತ ಕಂಠ ಸಿರಿಯಿಂದ ಕನ್ನಡಿಗರಿಗೆ ಪರಿಚಯಿಸಿದ ನಂತರವಂತೂ ಆ ಹಾಡುಗಳನ್ನು ಬೇರಾವುದೇ ಗಾಯಕರು ಹಾಡಿದರೂ, ಛೇ.. ಇದು ಶಿವಮೊಗ್ಗ ಸುಬ್ಬಣ್ಣನವರು ಹಾಡಿದಂತೆ ಇಲ್ಲಾ ಎನ್ನುವ ಮಾನದಂಡವನ್ನು ಹಾಕುವಂತಾಗಿತ್ತು. ಭಾವಗೀತೆಗಳು, ಜನಪದ ಗೀತೆಗಳು ಮತ್ತು ಭಕ್ತಿಗೀತೆಗಳ ಮೂಲಕ ತಮ್ಮ ಸುಮಧುರ ನಾದವನ್ನು ವಿವಿಧ ಸಾಂಸ್ಕೃತಿಕ ಉತ್ಸವಗಳಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ದೇಶ-ವಿದೇಶಗಳಲ್ಲಿರುವ ಕೋಟ್ಯಾಂತರ ಕನ್ನಡಿಗರಿಗೆ ಅವರ ಗಾಯನದ ಸಿಂಚನ ದೊರೆಯುವಂತಾಯಿತು ಇನ್ನೂ ಕ್ಯಾಸೆಟ್ ಮತ್ತು ಸಿಡಿಗಳ ಮೂಲಕ ಅವರ ಗಾಯನಗಂಗೆ ನಿರಂತರವಾಗಿ ಕನ್ನಡಿಗರಿಗೆ ಲಭಿಸುವಂತಾಯಿತು. ಕನ್ನಡ ಸುಗಮ ಸಂಗೀತ ಕ್ಷೇತ್ರದ ಮತ್ತೊಬ್ಬ ದಿಗ್ಗಜ ಶ್ರೀ ಸಿ. ಅಶ್ವಥ್ ಮತ್ತು ಸುಬ್ಬಣ್ಣವರ ಜುಗಲ್ ಬಂದಿಯೂ ಸಹಾ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು.

1979ರಲ್ಲಿ ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಜತ ಕಮಲ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರೆ, ಸಂಗೀತ ಕ್ಷೇತ್ರದಲ್ಲಿ ಸುಬ್ಬಣ್ಣನವರ ಸಾಧನೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಪ್ರತಿಷ್ಠಿತ ಕನ್ನಡ ಕಂಪು ಪ್ರಶಸ್ತಿ, ಸುಂದರಶ್ರೀ ಪ್ರಶಸ್ತಿ, ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿತ್ತು, ಇದಲ್ಲದೇ ಅವರ ಅಭಿಮಾನಿಗಳು ಮತ್ತು ದೇಶ ವಿದೇಶದ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳಿಗೆ ಸುಬ್ಬಣ್ಣನವರು ಭಾಜನರಾಗಿದ್ದರು. ಕುವೆಂಪು ವಿಶ್ವವಿದ್ಯಾಲಯವೂ ಅವರಿಗೆ ಗೌರವ ಡಾಕ್ಟರೇಟ್‌ ನೀಡಿತ್ತು. ಆಕಾಶವಾಣಿಯ ವಾರ್ಷಿಕ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಸುಬ್ಬಣ್ಣನವರು ಕಾರ್ಯ ನಿರ್ವಹಿಸಿದ್ದರು. 1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ ರಜತಕಮಲ ಪುರಸ್ಕಾರವನ್ನು ಪಡೆದ ಹೆಗ್ಗಳಿಕೆಯೂ ಸುಬ್ಬಣ್ನನವರದ್ದಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

sub6

ಹೀಗೆ ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣನವರು ಇತ್ತೀಚಿನ ಕೆಲವು ವರ್ಷಗಳಿಂದ ವಯೋಸಜತೆಯಿಂದ ಹಾಡುಗಾರಿಕೆಯನ್ನು ನಿಲ್ಲಿಸಿ ನೆಮ್ಮದಿಯಿಂದ ವಿಶ್ರಾಂತ ಜೀವನ ನಡೆಸುತ್ತಿದರು. ಆಗಸ್ಟ್ 11, 2022 ಗುರುವಾರ ತಡರಾತ್ರಿಯಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಅವರನ್ನು ಮನೆಯ ಹತ್ತಿರದಲ್ಲೇ ಇದ್ದ ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಿದಾಗ, ಅಲ್ಲಿ ಅವರಿಗೆ ಹೃದಯಾಘಾತ ಆಗಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಸುವ ಸಲುವಾಗಿ ಆಯಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿದ್ದ ಮಾರ್ಗದ ಮಧ್ಯೆಲ್ಲಿ ಆಂಬುಲೆನ್ಸ್ ನಲ್ಲೇ ಹೃದಯಾಘಾತದಿಂದ ತಮ್ಮ ಕೊನೆಯುಸಿರೆಳೆದಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.

sub2

ಕನ್ನಡದ ಮತ್ತೊಬ್ಬ ಖ್ಯಾತ ಸುಗಮ ಸಂಗೀತಗಾರ ನಗರ ಶ್ರೀನಿವಾಸ ಉಡುಪ ಮತ್ತು ಸುಬ್ಬಣ್ಣನವರ ನಡುವಿನ ಅವಿನಾಭಾವ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಉಡುಪರ ಮಗಳಾದ, ಕನ್ನಡದ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಮತ್ತು ತನ್ನ ಸುಶ್ರಾವ್ಯ ಕಂಠದ ಮೂಲಕ ನಾಡಿನ ಮನೆಮಾತಾಗಿರುವ ಅರ್ಚನ ಉಡುಪರನ್ನು, ವಕೀಲಿ ವೃತ್ತಿ ನಡೆಸುತ್ತಿರುವ ತಮ್ಮ ಮಗ ಶ್ರೀರಂಗರಿಗೆ ಮದುವೆ ಮಾಡಿಕೊಳ್ಳುವ ಮೂಲಕ ಸಂಗೀತದ ಸುಮಧುರ ಕೊಂಡಿಯನ್ನು ಮತ್ತಷ್ಟು ವೃದ್ಧಿಗೊಳಿಸಿದ್ದರು.

sub7

ಮಗ ಶ್ರೀರಂಗ, ಸೊಸ ಅರ್ಚನ ಉಡುಪ, ಮಗಳು ಬಾಗೇಶ್ರೀ ಯರ ಜೊತೆ ಅಸಂಖ್ಯಾತ ಕನ್ನಡಿಗರನ್ನು ಕೈಬಿಟ್ಟು ಶಿವಮೊಗ್ಗ ಸುಬ್ಬಣ್ಣನವರು ಹೃದಯಾಘಾತದಿಂದಾಗಿ ತಮ್ಮ 83ನೇ ವಯಸ್ಸಿನಲ್ಲಿ ನಮ್ಮಲ್ಲರನ್ನೂ ಅಗಲುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾದದ ನಷ್ಟವನ್ನು ಉಂಟು ಮಾಡಿದ್ದಾರಾದರೂ, ಅವರ ಗಾಯನಗಳ ಮೂಲಕ ಕನ್ನಡಿಗರ ಹೃದಯಗಳಲ್ಲಿ ಅಚಂದ್ರಾರ್ಕವಾಗಿ ಶಾಶ್ವತವಾಗಿ ಇದ್ದೇ ಇರುವ ಕಾರಣ ಅವರು ನಮ್ಮ ಹೆಮ್ಮೆಯ‌ ಕನ್ನಡದ ಕಲಿಗಳೇ ಸರಿ. ಕಲಾವಿದರಿಗೆ ಸಾವು ಎಂಬುದು ಎಂದಿಗೂ ಇಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s