ಹಂಪೆಯ ಸಾಸಿವೆ ಕಾಳು ಗಣೇಶ

hampe2ಭಾರತದ ಇತಿಹಾಸದಲ್ಲಿ ವಿಜಯನಗರದ ಸಾಮ್ರಾಜ್ಯ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸಿದೆ. ಸುಮಾರು 7ನೇ ಶತಮಾನದಲ್ಲಿ ಅರಬ್ ಪ್ರಾಂತ್ಯದಿಂದ ಭಾರತದ ಸಂಪತ್ತನ್ನು ದೋಚುವ ಸಲುವಾಗಿ ಧಾಳಿಯನ್ನು ಆರಂಭಿಸಿದ ಮೊಘಲರು 13ನೇ ಶತಮಾನದ ಹೊತ್ತಿಗೆ ಉತ್ತರ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುವಷ್ಟು ಪ್ರಾಭಲ್ಯಕ್ಕೆ ಬಂದು ತಮ್ಮ ಏಕ್ ಮಾರ್ ದೋ ತುಕುಡಾ ಎನ್ನುವ ಅಕ್ರಮಕಾರೀ ಧಮನಕಾರಿ ವಿಧಾನಗಳಿಂದ ಒಂದೊಂದೇ ರಾಜ್ಯಗಳನ್ನು ವಶಪಡಿಸಿಕೊಂಡು ದಕ್ಷಿಣ ರಾಜ್ಯಗಳತ್ತ ಧಾಪುಗಾಲು ಹಾಕುತ್ತಿದ್ದದ್ದನ್ನು ಮನಗಂಡ ಗುರುಗಳಾದ ಶ್ರೀ ವಿದ್ಯಾರಣ್ಯರು ಹಕ್ಕ ಬುಕ್ಕ ಎಂಬ ಇಬ್ಬರು ತರುಣರಿಗೆ ಪ್ರೇರಣಾದಾಯಕ ಶಕ್ತಿಯಾಗಿ ನಿಂತು ಡೆಕ್ಕನ್‌ನಲ್ಲಿ ತುಘಲಕ್ ಆಳ್ವಿಕೆಯ ವಿರುದ್ಧ 1336 ರಲ್ಲಿ ಹಂಪೆಯಲ್ಲಿ ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಬಲ ಶಕ್ತಿಯಾಗಿ ಮುಂದಿನ ಎರಡು ಶತಮಾನಗಳಿಗೂ ಹೆಚ್ಚು ಕಾಲ ಮೊಘಲರ ದಾಳಿಯನ್ನು ಸಮರ್ಥವಾಗಿ ತಡೆಯಿತಲ್ಲದೇ, ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಮುತ್ತು ರತ್ನ ವಜ್ರ ವೈಢೂರ್ಯಗಳನ್ನು ರಸ್ತೆ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುವಂತಹ ವೈಭವೋಪೇತವಾದ ಸಾಮ್ರಾಜ್ಯವಾಗಿತ್ತು ಎಂದು ಇತಿಹಾಸಕಾರರು ಬಣ್ಣಿಸುತ್ತಾರಲ್ಲದೇ ಆದೇ ಸಮಯದಲ್ಲಿ ಶಿಲ್ಪ ಕಲೆ, ಸಂಗೀತ, ಸಾಹಿತ್ಯದಲ್ಲಿಯೂ ಅತ್ಯಂತ ಉಜ್ಛ್ರಾಯ ಸ್ಥಿತಿಯಲ್ಲಿತ್ತು ಎಂದೇ ದಾಖಲಿಸಿದ್ದಾರೆ.

hampeಅಷ್ಟು ವೈಭವೋವೋಪೇತವಾಗಿ ಮೆರೆದಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ರಾಜಾ ಕೃಷ್ಣದೇವರಾಯನ ನಂತರ ಸಮರ್ಥ ರಾಜರುಗಳ ಕೊರತೆಯಿಂದಾಗಿ ಮೊಘಲರ ಸತತ ಧಾಳಿಯ ಜೊತೆಗೆ ಸಾಮಂತರ ಧಾಳಿಯಿಂದ ಹಂಪಿಯ ಶಿಲ್ಪ ಕಲಾಕೃತಿಗಳು ವಿಕೃತಗೊಂಡರೆ ವಿಜಯನಗರ ಸಾಮ್ರಾಜ್ಯ ಹರಿದು ಹಂಚಿ ಹೋದರೂ ಇಂದಿಗೂ ಆ ಭವ್ಯ ಇತಿಹಾಸದ ಪಳೆಯುಳಿಕೆ ಇನ್ನೂ ಆಕರ್ಷಣೆ ಉಳಿಸಿಕೊಂಡು ಲಕ್ಷಾಂತರ ಪ್ರವಾಸಿಗರನ್ನೂ ಮತ್ತು ಆಸ್ತಿಕ ಬಂಧುಗಳನ್ನೂ ಆಕರ್ಷಿಸುತ್ತಿದೆ. ಅಂದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದಿದ್ದ ಹಂಪೆ, ಇಂದು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡು ಅಳಿದುಳಿದಿರುವ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ.

virupakshaವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ವಿರೂಪಾಕ್ಷ ದೇಗುಲ ಅತ್ಯಂತ ಹಳೆಯ ದೇವಾಲಯವಾಗಿದ್ದು, ವಿರೂಪಾಕ್ಷನ ಜೊತೆ ಕನ್ನಡಿಗರ ಹೆಮ್ಮೆಯ ತಾಯಿ ಭುವನೇಶ್ವರಿಯೂ ಸಹಾ ಅಲ್ಲಿ ನೆಲೆಸಿದ್ದು, ಅದು ಭಕ್ತಾದಿಗಳ ಮತ್ತು ಪ್ರವಾಸಿಗರ ಪ್ರಮುಖ ತಾಣವಾಗಿದೆ.  ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರದಲ್ಲೇ ಇರುವ ಜನರನ್ನು ಹೆಚ್ಚು ಆಕರ್ಷಿಸುವ ಗಣೇಶನ ಎರಡು ವಿಗ್ರಗಳಿದ್ದು ಒಂದನ್ನು ಸಾಸಿವೆ ಕಾಳು ಗಣೇಶ ಮತ್ತು ಮತ್ತೊಂದನ್ನು ಕಡಲೆಕಾಳು ಗಣೇಶ ಎಂದು ಕರೆಯಲಾಗುತ್ತದೆ.

ganeshaಹಿಂದೂ ಸಂಪ್ರದಾಯದಲ್ಲಿ ಗಣೇಶ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದು ಹಿಂದೂಗಳಲ್ಲಿರುವ ಎಲ್ಲಾ ಜಾತಿಗಳಿಗೂ ಸಲ್ಲಬಹುದಾದ ಏಕೈಕ ದೇವರಾಗಿದ್ದಾನೆ ಎಂದರೂ ಅತಿಶಯವಲ್ಲ. ಹಾಗಾಗಿ ಹಿಂದೂಗಳಲ್ಲಿ ಯಾವುದೇ ಶುಭಕಾರ್ಯಗಳು ನಡೆದರೂ, ಕಾರ್ಯ ನಿರ್ವಿಘ್ನವಾಗಿ ನಡೆಲೆಮ್ದೇ ವಿಘ್ನವಿನಾಷಕನಿಗೇ ಆದ್ಯ ಪೂಜೆ ಮಾಡುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಪುರಾಣದ ಪ್ರಕಾರ ಗಣೇಶನು ಆಹಾರದ ಪ್ರಿಯ. ಅದೊಮ್ಮೆ ತನ್ನ ಅಮ್ಮನೊಂದಿಗೆ ಅಜ್ಜನ ಮನೆಗೆ ಹೋಗಿ ಅಲ್ಲಿ ಯಥೇಚ್ಚವಾಗಿ ಭೂರಿ ಭೋಜನವನ್ನು ಮಾಡಿ ತನ್ನ ವಾಹನವಾದ ಮೂಷಿಕದ ಮೇಲೆ ಕೈಲಾಸಕ್ಕೆ ಹಿಂದಿರುಗುವಾಗ ಗಣೇಶನ ಭಾರವನ್ನು ತಡೆಯಲಾರದೇ ಮೂಷಿಕವು ಎಡವಿದಾಗ, ಅದರ ಮೇಲಿದ್ದ ಗಣೇಶ ಕೆಳಗೆ ಬಿದ್ದು, ಅದಾಗಲೇ ವಿಪರೀತ ಆಹಾರವನ್ನು ಸೇವಿಸಿದ್ದ ಪರಿಣಾಮ ಆತನ ಹೊಟ್ಟೆ ಬಿರಿದು ಅವನು ಸೇವಿಸಿದ್ದ ಆಹಾರವೆಲ್ಲವೂ ಹೊರಗೆ ಚಲ್ಲಾ ಪಿಲ್ಲಿಯಾದಾಗ, ಅಲ್ಲಿಯೇ ಹೋಗುತ್ತಿದ್ದ ಹಾವೊಂದನ್ನು ಹಿಡಿದು ಅದನ್ನೇ ತನ್ನ ಬಿರಿದಿದ್ದ ಹೊಟ್ಟೆಗೆ ಕಟ್ಟಿಕೊಂಡ ಎನ್ನಲಾಗುತ್ತದೆ. ಈ ಪ್ರಸಂಗವನ್ನು ನೋಡಿ ಚಂದ್ರ ನಕ್ಕಿದ್ದನ್ನು ಕಂಡು ಕೋಪಗೊಂಡ ಗಣೇಶ ಆತನಿಗೆ ಶಾಪ ಕೊಟ್ಟ ಕಥೆ ಜೌತಿಯ ಚಂದ್ರನ ದರ್ಶನದ ಅಗುವ ಅವಘಡದ ಕುರಿತಾಗಿ ಶಮಂತಕೋಪಾಖ್ಯಾನದಲ್ಲಿ ಉಲ್ಲೇಖಿಸಲಾಗಿದೆ.

sasiveಈ ಕಥೆಗೆ ಪೂರಕವಾಗಿರುವಂತೆಯೇ ಸುಮಾರು 8 ಅಡಿ (2.5 ಮೀಟರ್) ಎತ್ತರವಿರುವ ಒಂದೇ ಬಂಡೆಯಲ್ಲೇ ಕೆತ್ತಲಾಗಿರುವ ಅತ್ಯಂತ ದೊಡ್ಡದಾದ ಗಣಪತಿಯ ಪ್ರತಿಮೆಯನ್ನೇ ಸಾಸಿವೆ ಕಾಳು ಗಣೇಶ ಎಂದು ಕರೆಯಲಾಗಿದ್ದು, ಇಂದಿಗೂ ಇದು ಹಂಪಿಯ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. 8 ಅಡಿ ಎತ್ತರದ ಗಣೇಶನಿಗೆ ಅತ್ಯಂತ ಸಣ್ಣ ಧಾನ್ಯವಾದ ಸಾಸಿವೆ ಎಲ್ಲಿ? ಎಂದು ಯೋಚಿಸುತ್ತಿದ್ದರೆ ಅದರ ಹಿಂದೆ ಎರಡು ರೀತಿಯ ತರ್ಕಗಳು ಇದ್ದು ಅವೆರಡೂ ಸಹಾ, ಬಲು ರೋಚಕವಾಗಿದೆ.

sg31500 AD ಯಷ್ಟು ಹಳೆಯದಾಗಿದೆ ಎನ್ನಲಾಗಿರುವ ಈ ವಿಗ್ರಹವನ್ನು ವಿಜಯನಗರ ಸಾಮ್ರಾಜ್ಯದ ರಾಜ ನರಸಿಂಹ II ರ ನೆನಪಿಗಾಗಿ ಸ್ಥಾಪಿಸಲಾಗಿದೆ ಎಂದು ಹೇಳುತ್ತದೆ. ನಾಲ್ಕು ತೋಳುಗಳೊಂದಿಗೆ ಅರ್ಧ ಕಮಲದ ಭಂಗಿಯಲ್ಲಿ ಇರುವ ಈ ಗಣೇಶ ಎಡಗೈಯುಲ್ಲಿ ಮುರಿದ ದಂತವ ಜೊತೆ ಕುಣಿಕೆಯನ್ನು ಹಿಡಿದ್ದಿದ್ದರೆ, ಬಲಗೈಯಲ್ಲಿ ಆತನಿಗೆ ಅತ್ಯಂತ ಪ್ರಿಯವಾದ ಸಿಹಿತಿಂಡಿ ಕಡುಬಿನ ಜೊತೆ ಮತ್ತೊಂದು ಕೈಯಲ್ಲಿ ಅಂಕುಶವನ್ನು ಕಾಣಬಹುದಾಗಿದೆ. ಇನ್ನು ಕಥೆಯಲ್ಲಿಯೇ ಹೇಳಿರುವ ಪ್ರಕಾರ ಡೊಳ್ಳು ಹೊಟ್ಟೆಯಿರುವ ಈ ಗಣಪನ ಹೊಟ್ಟೆಯು ಸಾಸಿವೆ ಕಾಳಿನ ಆಕಾರದಲ್ಲಿ ಇರುವ ಕಾರಣ ಇದಕ್ಕೆ ಸಾಸಿವೆ ಕಾಳು ಗಣಪ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಈ ಹೊಟ್ಟೆಯ ಸುತ್ತ ಕಟ್ಟಿಕೊಂಡಿರುವ ಸರ್ಪವನ್ನು ಬಲು ಆಕರ್ಷಣೀಯವಾಗಿ ಕೆತ್ತಲಾಗಿದೆ. ಇನ್ನು ಮತ್ತೊಂದು ಜನಪದ ಇತಿಹಾಸದ ಪ್ರಕಾರ ಈ ಗಣೇಶನ ಪ್ರತಿಮೆಯನ್ನು ಕ್ರಿ.ಶ.1506ರಲ್ಲಿ ಚಂದ್ರಗಿರಿಯ ಸಾಸಿವೆ ಕಾಳಿನ ವ್ಯಾಪಾರಿಯೊಬ್ಬರು ವಿಜಯನಗರ ಸಾಮ್ರಾಜ್ಯದ ನರಸಿಂಹ 2 ಅವರಿಗಾಗಿ ತಾವು ಬೆಳೆದ ಸಾಸಿವೆಯನ್ನು ಹಂಪಿಯಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಈ ಗಣೇಶನ ವಿಗ್ರಹವನ್ನು ನಿರ್ಮಿಸಿದ ಕಾರಣದಿಂದಾಗಿ ಈ ಗಣಪನಿಗೆ ಸಾಸಿವೆ ಕಾಳು ಗಣೇಶ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಬೃಹತ್ ಬಂಡೆಯನ್ನುಪಯೋಗಿಸಿ ಕೆತ್ತಿರುವ ಈ ಏಕಶಿಲೆಯ ಸುತ್ತಲೂ ತೆರೆದ ಮಂಟಪವನ್ನು ನಿರ್ಮಿಸಲಾಗಿದ್ದು ವರ್ಷದ 365 ದಿನಗಳೂ ಪ್ರವಾಸಿಗರು ವೀಕ್ಷಿಸಬಹುದಾಗಿದೆ.

kadalekalu_ganeshaಈ ಸಾಸಿವೆ ಕಾಳು ಗಣೇಶನ ಸಮೀಪವೇ ಮತ್ತೂಂದು ಸುಂದರವಾದ ಮತ್ತು 18 ಅಡಿಯಟ್ಟ್ಟು ಎತ್ತರವಿರುವ ಏಕಶಿಲಾಗಣಪತಿಯೂ ಇದ್ದು ಅದನ್ನು ಕಡಲೆಕಾಳು ಗಣೇಶ ಎಂದು ಕರೆಯಲಾಗುತ್ತದೆ.

ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಮತ್ತು ಶ್ರವಣ ಬೆಳಗೊಳದಂತೆ ಕರ್ನಾಟಕದ ಶಿಲ್ಪಕಲೆಗಳ ವೈಭವದ ಮತ್ತೊಂದು ಊರಾದ ಹಂಪೆಯಲ್ಲಿ ಪ್ರಮುಖವಾಗಿ ವಿರೂಪಾಕ್ಷ ದೇವಸ್ಥಾನವಲ್ಲದೇ, ವಿಜಯ ವಿಠಲ ದೇವಸ್ಥಾನದಲ್ಲಿರುವ ಭವ್ಯವಾದ ಕಲ್ಲಿನ ರಥವನ್ನಂತೂ ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೇ ಮಹದಾನಂದವಾಗುತ್ತದೆ. ಅದೇ ಪ್ರಾಂಗಣದಲ್ಲಿಯೇ ಇರುವ ಸಂಗೀತದ ನಾದದಿಂದ ಉಂಟಾದ 56 ಸಂಗೀತ ಕಂಬಗಳನ್ನು ಹೊಂದಿರುವ ದೊಡ್ಡ ರಂಗ ಮಂಟಪವು ಅಚ್ಚರಿಗಳಲ್ಲೊಂದು. ಇನ್ನು ಅದರೊಂದಿಗೆ ಸೂರ್ಯಾಸ್ತದ ಸ್ಥಳಗಳು, ಅಚ್ಯುತರಾಯ ದೇಗುಲ, ಅನೆಗೊಂದಿ, ಅಂಜನಾದ್ರಿ ಪರ್ವತ, ತುಂಗಭದ್ರಾ ನದಿ, ಪುರಂದರ ಮಂಟಪ, ರಾಣಿ ಸ್ನಾನಗೃಹ, ಹಂಪೆ ಬಜಾರ್, ಹೇಮಕೂಟ ಇಲ್ಲಿ ನೋಡುಗರಿಗೆ ಅಚ್ಚರಿಯನ್ನು ಮೂಡಿಸುವುದಲ್ಲದೇ ಇಂದು ಹಾಳು ಹಂಪೆ ಎಂದೇ ಕರೆಯಲ್ಪಡುವ ಈ ಹಂಪೆಯೇ ಇಷ್ಟು ಚೆನ್ನಾಗಿರಬೇಕಾದರೇ, ಅಂದು ನಿಸ್ಸಂದೇಹವಾಗಿಯೂ ಸ್ವರ್ಗಕ್ಕೆ ಕಿಚ್ಚನ್ನು ಹಬ್ಬಿಸುವಂತಹ ಸೊಬಗನ್ನು ಹೊಂದಿತ್ತು ಎನಿಸುವಂತಿದೆ. ಪ್ರತಿ ಕಲ್ಲು ಕಲ್ಲುಗಳು ಇತಿಹಾಸವನ್ನು ಹೇಳುವ ಇನ್ನು ಹತ್ತು ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರುವ ಹಂಪೆಗೆ ಸಮಯ ಮಾಡಿಕೊಂಡು ಸಕುಟುಂಬ ಸಮೇತರಾಗಿ  ಹೋಗಿ ವಿರೂಪಾಕ್ಷ, ತಾಯಿ ಭುವನೇಶ್ವರಿ, ಯಂತ್ರೋದ್ಧಾರಕ ಹನುಮಂತನ ಜೊತೆ ಹೇಮಕೂಟದಲ್ಲಿರುವ ಸಾಸಿವೆ ಕಾಳು ಮತ್ತು ಕಡಲೇಕಾಳು ಗಣೇಶನ ದರ್ಶನವನ್ನು ಮಾಡಿ ಸ್ವಾಮಿಯ ಕೃಪಾಶೀರ್ವಾದವನ್ನು ಪಡೆದು ಅದರ ರಸಾನುಭವಗಳನ್ನು ನಮ್ಮೊಂದಿಗೆ ಹಂಚ್ಕೊತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s