ಕನ್ನಡ ಚಳುವಳಿ ಅಂದು ಇಂದು

karnataka11947ರಲ್ಲಿ ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿದ ಸಂಧರ್ಭದಲ್ಲಿ ಭಾರತ ದೇಶ 565 ಸಣ್ಣ ಪುಟ್ಟ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದಂತಹ ಸಂಧರ್ಭದಲ್ಲಿ ಸರ್ದಾರ್ ಪಟೇಲ್ ಅವರ ನೇತೃತ್ವದಲ್ಲಿ ಒಕ್ಕೂಟ ದೇಶವನ್ನು ರಚಿಸಲು ಮುಂದಾದಾಗ ಯಾವುದೇ ಷರತ್ತುಗಳು ಇಲ್ಲದೇ ಮೊಟ್ಟ ಮೊದಲನೆಯದಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದೇ ನಮ್ಮ ಮೈಸೂರು ಸಂಸ್ಥಾನ. ಕಲೆ, ಸಾಹಿತ್ಯ, ಜನರ ಬುದ್ಧಿಮತ್ತೆ, ನೈಸರ್ಗಿಕ ಮತ್ತು ಆರ್ಥಿಕ ಶ್ರೀಮಂತಿಕೆ, ಔದಾರ್ಯ ಹೀಗೆ ಎಲ್ಲದ್ದರಲ್ಲೂ ಕರ್ನಾಟಕ ಮತ್ತು ಕನ್ನಡಿಗರು ಅಂದು ಇಂದು ಮತ್ತು ಮುಂದೆಯೂ ಅಗ್ರೇಸರರೇ. ಭಾರತದ ಸ್ವಾತಂತ್ರ್ಯಾನಂತರ ಹತ್ತು ಹದಿನಾರು ಪ್ರಾಂತ್ಯ್ರಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಒಗ್ಗೂಡಿಸಲು ತ್ಯಾಗ ಮತ್ತು ಬಲಿದಾನವನ್ನು ಗೈದ ಲಕ್ಷಾಂತರ ಕನ್ನಡಿಗರಲ್ಲಿ ತಮ್ಮ ಇಡೀ ಜೀವನವನ್ನು ಸಂಪೂರ್ಣವಾಗಿ ಕರ್ನಾಟಕದ ಏಕೀಕರಣಕ್ಕಾಗಿಯೇ ಮುಡಿಪಾಗಿಟ್ಟವರು ಭೀಷ್ಮ ಪಿತಾಮಹ, ಕನ್ನಡದ ಕುಲಪುರೋಹಿತರು ಎಂದೇ ಪ್ರಖ್ಯಾತರಾಗಿದ್ದ  ಶ್ರೀ ಆಲೂರು ವೆಂಕಟರಾಯರು. ಅವರ ನಂತರದ ದಿನಗಳಲ್ಲಿ ನಿಸ್ವಾರ್ಥವಾಗಿ ಕನ್ನಡ ಪರ ಹೋರಾಟಗಳನ್ನು ಮುಂದುವರೆಸಿಕೊಂಡು ಹೋದವರು ಅ. ನ. ಕೃಷ್ಣರಾಯರು ಮತ್ತು ಮ. ರಾಮಮೂರ್ತಿಗಳು. ದುರಾದೃಷ್ಟವಷಾತ್ 70ರ ದಶಕದ ನಂತರ ನಾಯಿಕೊಡೆಗಳಂತೆ ಹುಟ್ಟಿಕೊಂಡ ಕನ್ನಡ ಪರ ಸಂಘಟನೆಗಳು ಸ್ವಾರ್ಥಕ್ಕಾಗಿ ಕನ್ನಡಪರ ಹೋರಾಟಗಳನ್ನು ದಿಕ್ಕು ತಪ್ಪಿಸಿದ್ದರ ಕಾರಣದಿಂದಾಗಿಯೇ ಈ ಲೇಖನ ಬರೆಯುವ ಅನಿವಾರ್ಯ ಸಂಧರ್ಭ ಬಂದಿದೆ.

alooruಮೊಟ್ಟ ಮೊದಲನೆಯದಾಗಿ ಕನ್ನಡ ಪರ ಹೋರಾಟ ಎಂದರೆ ಕೇವಲ ಕನ್ನಡದ ಬಾವುಟ ಹಿಡಿದು ಬೀದಿಗೆ ಬಂದು ಕನ್ನಡೇತರವ ಮೇಲೆ ಹಲ್ಲೆ ಮಾಡಿಯೋ ಇಲ್ಲವೇ ಕನ್ನಡವಲ್ಲದ ನಾಮಫಲಕಗಳಿಗೆ ಮಸಿ ಬಳಿಯುವುದಲ್ಲ. ಕನ್ನಡ ಪರ ಹೋರಾಟಗಳಲ್ಲಿ ಸ್ವಾರ್ಥಕ್ಕೆ ಎಣೆಯಿಲ್ಲದೇ, ನಿಸ್ವಾರ್ಥವಾಗಿ ಕನ್ನಡಿಗರ ಏಳಿಗೆಗೆ ಸಹಕಾರಿಯಾಗುವಂತಿರ ಬೇಕು. ಹಾಗಾಗಿಯೇ ಶ್ರೀ ವೆಂಕಟರಾಯರು, ಕನ್ನಡಿಗರಲ್ಲಿ ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ಮೂಡಿಸುವುದಕ್ಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡವರು.  ಪ್ರತೀ ಕನ್ನಡಿಗನ ಹೃದಯದಲ್ಲಿ ಕನ್ನಡಾಂಬೆಯು ಸ್ಥಾಪನೆಯಾದಾಗ ಮಾತ್ರವೇ ನವ ಕರ್ನಾಟಕದ ನಿರ್ಮಾಣ ಸಾಧ್ಯ ಎಂಬುದನ್ನು ಅಚಲಚಾಗಿ ನಂಬಿದ್ದ ಶ್ರೀಯುತರು ಅದಕ್ಕಾಗಿ ಹಲವಾರು ಪತ್ರಿಕೆಗಳನ್ನು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಸೇರಿದಂತೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಹುಟ್ಟಿಗೆ ಕಾರಣೀಭೂತರಾದರು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಗಳಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೊಟ್ಟಣ, ಪೆನ್ಸಿಲ್, ಉಡುಗೆ ತೊಡುಗೆಗಳ ತಯಾರಿಕೆಯ ಪ್ರಾಯೋಗಿಕ ತರಭೇತಿ ನೀಡುತ್ತಿದ್ದಲ್ಲದೆ, ಲಲಿತ ಕಲೆಗಳಾದ ಚಿತ್ರ ಕಲೆ, ಸಾಹಿತ್ಯ ಮತ್ತು ಮುದ್ರಣಗಳಲ್ಲಿಯೂ ಅಲ್ಲಿಯ ವಿಧ್ಯಾರ್ಥಿಗಳಿಗೆ ತರಭೇತಿ ನೀಡಿ ಕನ್ನಡಿಗರು ಸ್ವಾವಲಂಭಿಗಳಾಗಿ ಬೆಳೆಯುವಂತಾಗಲು ಪ್ರೇರೇಪಿಸಿದವರು. ಸಕ್ಕರೆ ಕಾರ್ಖಾನೆ, ಬೆಳಗಾವಿ ಬಳಿಯ ಖಾನಾಪುರದಲ್ಲಿ ಹೆಂಚಿನ ಕಾರ್ಖಾನೆ, ಹೊಳೆ ಆಲೂರಿನಲ್ಲಿ ಹತ್ತಿಯ ಗಿರಣಿ ಹೀಗೆ ಅನೇಕ ಉದ್ಯಮಗಳನ್ನು ಹುಟ್ಟುಹಾಕಿ ಜನರ ಆಶಾಕಿರಣವಾಗಿದ್ದರು. ಕೇವಲ ಶಿಕ್ಷಣ ಮತ್ತು ಔದ್ಯೋಗೀಕರಣಕ್ಕೆ ಮಾತ್ರವೇ ತಮ್ಮನ್ನು ಸೀಮಿತ ತೊಳಿಸದೇ ಕೃಷಿ ಕ್ಷೇತ್ರ ಮತ್ತು ಬಟ್ಟೆಯ ವ್ಯಾಪಾರ ಮತ್ತು ಸಹಕಾರಿ ಸಂಘಗಳನ್ನು ಆರಂಭಿಸುವ ಮೂಲಕ ಕನ್ನಡಿಗರ ಅಭಿವೃದ್ಧಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟಿದ್ದರು.

ramamurthyಐವತ್ತರ ದಶಕದಲ್ಲಿ ಭಾಷಾವಾರು ಆಧಾರಾದ ಮೇಲೆ ಕನ್ನಡನಾಡು ರಚನೆಯಾದರೂ ಸ್ಥಳೀಯ ಕನ್ನಡಿಗನೇ ನಿರಾಶ್ರಿತನಾಗಿ ಕನ್ನಡವೇ ಅನಾಥವಾಗುವಂಹ ವಾತಾವರಣ ನಿರ್ಮಾಣವಾಗಿದ್ದಂತಹ ಸಮಯ. ಪ್ರತಿದಿನವೂ ಪ್ರತಿನಿತ್ಯವೂ ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲೊಡ್ಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದವು. ಎಷ್ಟೋ ಬಡಾವಣೆಗಳಲ್ಲಿ ಕನ್ನಡ ಎಂದರೆ ಎನ್ನಡ ಎನ್ನುವ ಪರಿಸ್ಥಿತಿ. ಇದೇ ಕಾಲಘಟ್ಟದಲ್ಲಿ ಬೆಂಗಳೂರಿಗೆ ಬಂದ ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್ ಮುಂತಾದ ವಿದ್ಯಾರ್ಥಿಗಳ ಗುಂಪು ಕನ್ನಡ ಯುವಜನ ಸಭಾ ಎಂಬ ಹೆಸರಿನಲ್ಲಿ ಕನ್ನಡಪರ ಚಟುವಟಿಕೆಗಳನ್ನು ಆರಂಭಿಸಿದ್ದರಾದರೂ ಅದನ್ನು ಮುಂದುವರಿಸಿಕೊಂಡು ಹೋಗುವ ಛಾತಿಯಾಗಲೀ ಅಥವಾ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದಾಗ, ಕನ್ನಡ ಮತ್ತು ಕನ್ನಡಿಗರ ರಕ್ಷಣೆಗಾಗಿ ಹೋರಾಟಕ್ಕೆ ಧುಮುಕಿದವರೇ ಅದಾಗಲೇ ತಮ್ಮ ಕಾದಂಬರಿಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಹಿರಿಯ ಸಾಹಿತಿ ಶ್ರೀ ಅ.ನ.ಕೃಷ್ಣರಾಯರು ಮತ್ತು ಅದಾಗಲೇ ನೂರಾರು ಕನ್ನಡ ಪುಸ್ತಕಗಳ ಲೇಖಕರಾಗಿ ಜನಪ್ರಿಯರಾಗಿದ್ದ ಶ್ರೀ ಮ. ರಾಮಮೂರ್ತಿಗಳು. ಅವರಿಬ್ಬರೂ ಜೊತೆಗೂಡಿ 04-02-1962ರಂದು ಬೆಂಗಳೂರು ಕನ್ನಡಿಗರ ಸಮಾವೇಶ ನಡೆಸುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನಾದ್ಯಂತ ಗೋಡೆಗಳ ಮೇಲೆ ಕನ್ನಡ ನಾಡಿನ ಏಳಿಗೆಗಾಗಿ ದುಡಿವೆವು ನಾವು, ಮಡಿವೆವು ನಾವು, ಒಂದಾಗಿ ಎಂಬ ಬರಹಗಳು ರಾರಾಜಾಸಿದವು.

anakruಅಂದಿನ ಕಾಲದಲ್ಲಿ ನಡೆಯುತ್ತಿದ್ದ ಸಂಗಿತ ಕಾರ್ಯಕ್ರಮಗಳಲ್ಲಿ ಹೆಸರಿಗಷ್ಟೇ ಕರ್ನಾಟಕ ಸಂಗೀತ ಕಾರ್ಯಕ್ರಮ ಎಂದಿದ್ದರೂ, ಬಹುತೇಕ ಗಾಯಕರು ಹಾಡುತ್ತಿದ್ದದ್ದು ತ್ಯಾಗರಾಜರ ಕೃತಿಗಳನ್ನೋ ಇಲ್ಲವೇ ಬೇರೆ ಯಾವುದೋ ಭಾಷೆಯ ಹಾಡುಗಳನ್ನೇ. ಇನ್ನು ಹಿಂದೂಸ್ಥಾನಿ ಸಂಗೀತಗಾರರಂತೂ ಕನ್ನಡದಲ್ಲಿ ಹಾಡುಗಳೇ ಇಲ್ಲವೇನೋ ಎನ್ನುವಂತೆ ಕೇವಲ ಹಿಂದಿ ಮತ್ತು ಮರಾಠಿ ಹಾಡುಗಳನ್ನೇ ಹಾಡುತ್ತಿದ್ದರು. ಅದು ಮೈಸೂರಿನ ಅರಮನೆಯ ದರ್ಬಾರಾಗಲೀ, ರಾಮೋತ್ಸವಗಳಲ್ಲಾಗಲೀ ಎಲ್ಲಡೆಯೂ ಕನ್ನಡ ಹಾಡುಗಳಿಗೆ ಪ್ರಾಶಸ್ತ್ಯವೇ ಇಲ್ಲದಿದ್ದಾಗ, ಅದನ್ನು ಪ್ರತಿಭಟಿಸಿ, ಕರ್ನಾಟಕ ಸಂಗೀತಗಾರರಿಗೆ ದಾಸರ ಪದಗಳನ್ನೂ, ಹಿಂದೂಸ್ಥಾನೀ ಸಂಗೀತಗಾರರಿಗೆ ವಚನ ಸಾಹಿತ್ಯದ ಲಭ್ಯತೆಯನ್ನು ತಾವೇ ಸ್ವತಃ ಹಾಡಿ ತೋರಿಸಿ ಅವರೆಲ್ಲರೂ ಕನ್ನಡದ ಹಾಡುಗಳನ್ನು ಹಾಡುವಂತೆ ಮಾಡಿದವರೇ ಶ್ರೀ ಅ.ನ. ಕೃಷ್ಣರಾಯರು. 27- 05-1962ರಂದು ಚಾಮರಾಜಪೇಟೆ ಶ್ರೀ ರಾಮ ಸೇವಾ ಮಂಡಳಿಯಲ್ಲಿ ಶ್ರೀಮತಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಕಛೇರಿ ವ್ಯವಸ್ಥೆಯಾಗಿತ್ತು. ಅಂದು ಅ.ನ.ಕೃ. ಮತ್ತು ರಾಮಮೂರ್ತಿಯವರ ನಾಯಕತ್ವದಲ್ಲಿ ಸಂಗೀತ ಕಚೇರಿಗಳಲ್ಲಿ ಕನ್ನಡ ಕಲಾವಿದರಿಗೆ, ಮತ್ತು ಕನ್ನಡ ಹಾಡುಗಳಿಗೆ ಪ್ರಾಶಸ್ತ್ಯ ನೀಡದೇ ಇರುವುದರ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿ ಆ ಕಛೇರಿ ನೀಡಲು ಬಂದಿದ್ದ ಸುಬ್ಬಲಕ್ಷ್ಮೀಯವರ ಬಳಿ ತಮ್ಮ ಹೋರಾಟವನ್ನು ವಿವರಿಸಿದಾಗ, ಅವರ ಅವರ ಮಾತುಗಳಿಗೆ ಸ್ಪಂದಿಸಿ ಸುಬ್ಬಲಕ್ಷ್ಮೀಯವರೂ ಸಹಾ ಕಛೇರಿಯನ್ನು ನೀಡದೇ ಹಿಂದಿರುಗಿದ್ದರು.

ಅದೇ ರೀತಿ ಕನ್ನಡ ಚಿತ್ರಗಳಿಗೆ ಬೆಂಗಳೂರಿನಲ್ಲಿಯೇ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಮತ್ತೆ ಆನಕೃ ಮತ್ತು ರಾಮಮೂರ್ತಿಗಳು ಜಂಟಿಯಾಗಿ ನಡೆಸಿದ ಹೋರಾಟದ ಪರಿಣಾಮವಾಗಿ ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶನದ ಬಂಗಾರಿ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ನಿಸ್ವಾರ್ಥವಾಗಿ ಕನ್ನಡದ ಅಸ್ಮಿತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು ಅಂದಿನ ಕನ್ನಡಪರ ಹೋರಾಟಗಾರರು. ತಮ್ಮ ಸಾಹಿತ್ಯ ಕೃಷಿಯ ಮೂಲಕ ದೈನಂದಿನ ಜೀವನದ ಅವಶ್ಯಕತೆಗೆ ಹಣವನ್ನು ಹೊಂದಿಸಿಕೊಳ್ಳುತ್ತಿದ್ದರೇ ಹೊರತು, ಅವರೆಂದೂ ತಮ್ಮ ಜೀವನಕ್ಕಾಗಿ ಕನ್ನಡ ಹೋರಾಟವನ್ನು ಮಾಡಲೇ ಇಲ್ಲ ಎನ್ನುವುದು ಗಮನಾರ್ಹವಾಗಿತ್ತು.

kannada270ರ ಕರ್ನಾಟಕದ ಗಡಿ ಚಾಮರಾಜನಗರದಿಂದ ಬಂದ ವಾಟಾಳ್ ನಾಗರಾಜ್ ಆರಂಭದಲ್ಲಿ ಕೆಲ ಕನ್ನಡಪರ ಹೋರಾಟ ನಡೆಸಿ ಜನಪ್ರಿಯರಾದದ್ದನ್ನೇ ಗಮನಿಸಿದ ಕೆಲವರು ಜೀವನಕ್ಕೆಂದು ಬೆಂಗಳೂರಿಗೆ ವಲಸೆ ಬಂದು ಮೈ ಬಗ್ಗಿಸಿ ಕೆಲಸ ಮಾಡಲಾಗದೇ ಕನ್ನಡ ಹೋರಾಟದ ಹೆಸರಿನಲ್ಲಿ ಹಣ ಮಾಡಿಕೊಂಡು ಐಶಾರಾಮ್ಯದ ಜೀವನ ನಡೆಸುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

  • ಮಾತೆತ್ತಿದರೆ ಹೋರಾಟ, ಬಂದ್. ಆ ಲೆಖ್ಖ ಕೊಡಿ ಈ ಲೆಖ್ಖ ಕೊಡಿ ಎಂಬು ಬೊಬ್ಬಿರಿಯುವ ಈ ನಾಯಕರುಗಳು, ಬೆಂಗಳೂರಿಗೆ ಅಬ್ಬೇಬ್ಬಾರಿಯಾಗಿ ಬಂದು ಈಗ ಕೋಟ್ಯಾಧಿಪತಿಗಳಾಗಿ ಹೇಗಾದರು? ಅವರ ಆದಾಯದ ಮೂಲವೇನು? ಆ ಆದಾಯಕ್ಕೆ ತೆರಿಗೆ ಕಟ್ಟುತ್ತಿದ್ದಾರೆಯೇ? ಇವರೆಲ್ಲರೂ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದಾರೆಯೇ?
  • ಕನ್ನಡ ಹೆಸರಿನಲ್ಲಿ ಸಂಘವೊಂದನ್ನು ನೊಂದಾಯಿಸಿ ಅದಕ್ಕೊಂದು ಲೆಟರ್ ಹೆಡ್ ಮಾಡಿಸಿ ಕಾಲ ಕಾಲಕ್ಕೆ ಆ ಉತ್ಸವ ಈ ಉತ್ಸವ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡಾಭಿವೃದ್ಧಿ ಪ್ರಾಧಿಕಾರದ ಮೂಲಕ ಕೋಟ್ಯಾಂತರ ಜನರ ತೆರಿಗೆ ಹಣವನ್ನು ಕಬಳಿಸಿಸುವ ಲೆಖ್ಖವನ್ನು ಎಂದಾದರೂ ಕೊಟ್ಟಿದ್ದಾರೆಯೇ?
  • ಹಕಾರ-ಅಕಾರ, ಅಲ್ಪಪ್ರಾಣ-ಮಹಾಪ್ರಾಣವನ್ನು ಸರಿಯಾಗಿ ಬಳಸಿ ಕಾಗುಣಿತ ಮತ್ತು ವ್ಯಾಕರಣ ಶುದ್ಧವಾಗಿ ಕನ್ನಡಲ್ಲಿ ನಾಲ್ಕು ಸಾಲುಗಳನ್ನು ಬರೆಯುವುದನ್ನು ಬಿಡಿ, ಮಾತನಾಡಲು ಬಾರದವರೆಲ್ಲಾ ಹೆಗಲು ಮೇಲೆ ಕೆಂಪು, ಹಳದಿ ವಸ್ತ್ರವನ್ನು ಹಾಕಿಕೊಂಡಾಕ್ಷಣ ಕನ್ನಡ ಹೋರಾಟಗಾರರಾಗುವರೇ?
  • ಕನ್ನಡಪರ ಹೋರಾಟಕ್ಕೂ, ರಾಜಕೀಯ ಪಕ್ಷಗಳು ಕರೆಗೊಡುವ ಬಂದ್ ಎತ್ತಲಿಂದೆತ್ತ ಸಂಬಂಧ? ಯಾರೋ ರಾಜಕೀಯ ನಾಯಕರು ಎಲ್ಲೋ ಕರೆ ನೀಡಿದ್ದಕ್ಕೆ ಕುರಿ, ಕೋಳಿ, ಹಂದಿ, ಎಮ್ಮೆ, ಮೇಕೆಯನ್ನು ರೈಲ್ವೇ ನಿಲ್ದಾಣದ ಮುಂದೆಯೋ ಇಲ್ಲವೇ ವಿಧಾನಸೌಧದ ಮುಂದೆ ಹಿಡಿದುಕೊಂಡು ಹೆಚ್ಚೂ ಕಡಿಮೆ ವರ್ಷಕ್ಕೆ ನಾಲ್ಕೈದು ಬಂದ್ ಮಾಡಿಸುವುದರಿಂದ ಕನ್ನಡ ಮತ್ತು ಕನ್ನಡಿಗರಿಗೆ ಏನಾದರೂ ಪ್ರಯೋಜನವಿದೆಯೇ?
  • ಲೆಖ್ಖಕ್ಕೆ ಆರು ಕೋಟಿ ಕನ್ನಡಿಗರು ಇದ್ದರೆ, ನೊಂದಾಯಿತ ಕನ್ನಡಪರ ಸಂಘಟನೆಗಳ ಪಟ್ಟಿ ಮಾತ್ರಾ ಹನುಮಂತನ ಬಾಲದಷ್ಟು ಉದ್ದವಾಗಿದ್ದು ಎಲ್ಲಾ ಸಂಘಟನೆಗಳ ಹೆಸರನ್ನು ಸಂಪೂರ್ಣವಾಗಿ ಓದಬೇಕಾದರೆ ಕನಿಷ್ಟ ಪಕ್ಷ ಎರಡು ಮೂರು ದಿನಗಳು ಬೇಕಾದೀತು. ಗಲ್ಲಿ ಗಲ್ಲಿಗೆ ಈ ಪರಿಯಾಗಿ ಕನ್ನಡ ಸಂಘಟನೆಗಳು ಇದ್ದರೂ ಕರ್ನಾಟಕದಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರಬೇಕಾದ ಪರಿಸ್ಥಿತಿಗೆ ಈ ಕನ್ನಡ ಪರ ಸಂಘಟನೆಗಳ ನಿಲುವೇನು ಎಂಬುದನ್ನು ತಿಳಿಯ ಪಡಿಸುವರೇ?
  • ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಕನ್ನಡ ಶಾಲೆಗಳು ಅಲ್ಲೋಂದು ಇಲ್ಲೋಂದು ಆಳಿದುಳಿದ ಪಳುವಳಿಕೆಯಂತೆ ಉಳಿದುಕೊಂಡಿರುವಾಗ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಎಷ್ಟು ಶಾಲೆಗಳು ಇವೆ? ನಮ್ಮ ಮುಂದಿನ ಪೀಳಿಗೆಯ ಎಷ್ಟು ಮಕ್ಕಳು ಕನ್ನಡವನ್ನು ಕಲಿಯುತ್ತಿದ್ದಾರೆ? ಎಂಬುದರ ಲೆಖ್ಖವೇನಾದರು ಈ ಸಂಘಟನೆಗಳಿಗೆ ಅರಿವಿದೆಯೇ? ಈ ಸಂಘಟನೆಗಳು ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿವೆಯೇ?
  • ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಟ ನಡೆಸಿ ಬಲವಂತದ ಮಾಘಸ್ನಾನ ಮಾಡಿಸುವ ಈ ಸಂಘಟನೆಗಳು ಅನ್ಯಭಾಷಿಕರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸೊಗಡನ್ನು ಕಲಿಸುವಂತಹ ಯಾವುದಾದರೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಉದಾಹರಣೆಗಳಿವೆಯೇ?
  • ಕನ್ನಡ ಕನ್ನಡ ಎಂದು ಬೊಬ್ಬಿರಿಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನೇಡತರ ಶಾಸಕರ ಸಂಖ್ಯೆಯೇ ಹೆಚ್ಚಾಗಿರುವುದು ಈ ಕನ್ನಡಪರ ಸಂಘಟನೆಗಳ ಕಣ್ಣಿಗೆ ಕಾಣುವುದಿಲ್ಲವೇ?
  • ಇಂತಹ ಹೋರಾಟಗಾರರು ಕನ್ನಡ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಾಗಲೀ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದು ಕೇವಲ ಅವರ ವಯಕ್ತಿಕ ತೆವಲು ಮತ್ತು ಅಗ್ಗದ ಪ್ರಚಾರದ ಹಪಾಹಪಿಗಿದೆ. ಅಂತಹ ಕಾರ್ಯಕ್ರಮದ ಅವರ ಸಾಧಕ ಬಾಧಕಗಳು ವಯಕ್ತಿಕವಾಗಿರುತ್ತದೆಯೇ ಹೊರತೂ ಅದರಿಂದ ಕನ್ನಡಕ್ಕಾಗಲೀ ಕನ್ನಡಿಗರಿಗಾಗಲೀ ಕಿಂಚಿತ್ತೂ ಉಪಯೋಗವಿಲ್ಲ ಎನ್ನುವುದನ್ನು ಎಲ್ಲರೂ ಅರಿಯಲೇ ಬೇಕಿದೆ.
  • rcb_Rupesh_rajannaಕನ್ನಡ ನಾಡು ನಡೆ ನುಡಿಯ ಪರ ಇಂದಿನ ಕನ್ನಡ ಹೋರಾಟಗಾರ ಮನಸ್ಥಿತಿ ಯಾವ ರೀತಿಯಲ್ಲಿದೆ ಎನ್ನುವುದಕ್ಕೇ ಇತ್ತೀಚಿನ ಈ ಘಟನೆಯೇ ಸಾಕ್ಷಿ. ರಾಯಲ್ಸ್ ಚಾಲೆಂಜ್ ಬೆಂಗಳೂರು ಅರ್ಥಾತ್ ಆರ್‌ಸಿಬಿ ಎನ್ನುವುದು ಐಪಿಲ್ ಪಂದ್ಯಾವಳಿಯ ಒಂದು ತಂಡವಷ್ಟೇ, ತಂಡದ ಹೆಸರಿನಲ್ಲಿ ಬೆಂಗಳೂರು ಇರುವುದರ ಹೊರತಾಗಿ ಕರ್ನಾಟಕಕ್ಕೂ ಕನ್ನಡಿಗರಿಗೂ ಆ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಈ ಕ್ರಿಕೆಟ್ ತಂಡಕ್ಕೆ ಕೇವಲ ಕರ್ನಾಟಕವಲ್ಲದೇ, ದೇಶ ಏಕೆ? ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಬಹುಸಃ ಇದನ್ನೆಲ್ಲಾ ಮನಗಂಡ ಆರ್ ಸಿಬಿ ತಂಡದ ಆಡಳಿತ ಮಂಡಳಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಿಂದಿ ಪೇಜ್‌ ಆರಂಭಿಸಿದ್ದೇ ತಡಾ, ನಮ್ಮ ತಥಾಗಥಿತ ಉಟ್ಟು ಖನ್ನಢ ಓಲಾಟಗಾರರ ನವರಂಧ್ರಗಳು ಜಾಗೃತವಾಗಿ, ಇದರ ಕುರಿತು ಭಾರೀ ಆಕ್ರೋಶ ಮತ್ತು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಆರ್‌ಸಿಬಿ ಅವರು ಬೆಂಗಳೂರು ಹೆಸರನ್ನು ಕೈಬಿಡಬೇಕು ಇಲ್ಲವೇ ಕರ್ನಾಟಕ ಬಿಟ್ಟು ತೊಲಗಬೇಕು ಎಂದು ಕಿಡಿಕಾರಿದ್ದರೆ, ರೂಪೇಶ್‌ ರಾಜಣ್ಣ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ನಲ್ಲಿ ನಿಮಗೆ ಬೆಂಬಲ ಕೊಡ್ತಿರೋದು, ಬೆಂಗಳೂರು ಅನ್ನೋ ಹೆಸರಿಗೆ. ಈ ರೀತಿ ನಮ್ಮ ತಂಡ ಅಂತ ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ನಿಮ್ಮ ಐಪಿಎಲ್ ಕಪ್, ಆರ್‌ಸಿಬಿ ಗಿಂತಲೂ ನಮಗೆ ನಮ್ಮ ಕನ್ನಡ,ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು ಎಂದು ಹೇಳಿದ್ದಾರೆ. ಅಲ್ಲದೇ Remove Hindi page of rcb immediately ನಮಗೆ ಅದು ಬೇಕಾಗಿಲ್ಲ ಎಂದು ಹೇಳಿದ್ದಾರೆ. ಆರೇ! ಆರ್‌ಸಿಬಿ ಹಿಂದಿ ಪೇಜು ತೆಗೆಸುವುದರಿಂದ ಕನ್ನಡಿಗರಿಗೆ ಯಾವ ರೀತಿ ಪ್ರಯೋಜನ ಆಗುತ್ತದೆ? ಎಂದು ಯಾರಾದರೂ ಎದ್ದು ನಿಂತು ಗಟ್ಟಿ ಧ್ವನಿಯಲ್ಲಿ ಕೇಳಿದ ಕೂಡಲೇ, ಈ ಓಲಾಟಗಾರ ಪಾಲಿಗೆ ಆತ ಕನ್ನಡ ವಿರೋಧಿ ಮತ್ತು ಕೋಮುವಾದಿಯಾಗುತ್ತಾನೆ. 

    ಪ್ರಸ್ತುತವಾಗಿ ರಾಜ್ಯಾದ್ಯಂತ ವಕ್ಫ್ ಹೆಸರಿನಲ್ಲಿ ರಾಜ್ಯಾದ್ಯಂತ ಕಂಡ ಕಂಡ ಕಡೆ ಕನ್ನಡಿಗರ ಜಮೀನುಗಳಿಗೆ ಕನ್ನಾ ಹಾಕುತ್ತಿರುವಾಗ, ನಮ್ಮ ಧಾರ್ಮಿಕ ಮೆರವಣಿಗಳ ಮೇಲೇ ಮಸೀದಿಗಳಿಂದ ಕಲ್ಲು ತೂರಾಟವಾಗುವಾಗ, ಎಂದೋ ಯಾರೋ ಪುಣ್ಯಾತ್ಮರು ಕಟ್ಟಿಸಿಕೊಟ್ಟಿದ್ದ ಕನ್ನಡದ ಶಾಲೆಗಳು ಜೀರ್ಣಾವಸ್ಥೆ ತಲುಪಿ ಇಂದೋ ನಾಳೆಯೋ ಬಿದ್ದು ಹೋಗುವಂತಹ ಸ್ಥಿತಿ ತಲುಪಿರುವಾಗ, ಬೆಂಗಳೂರು, ಶಿವಮೊಗ್ಗ, ಕರಾವಳಿ, ಗುಲ್ಬರ್ಗಾದ ಕೆಲವೊಂದು ಪ್ರದೇಶಗಳ ಹೆಸರುಗಳು ಮತ್ತು ವೃತ್ತಗಳ ಹೆಸರು ಸದ್ದಿಲ್ಲದೇ ಉರ್ದು ಹೆಸರಿಗೆ ಬದಲಾಗುತ್ತಿರುವಾಗ ಅದರ ವಿರುದ್ದ ಚಕಾರವೆತ್ತದೇ ಯಾವುದೋ ಕೆಲಸಕ್ಕೆ ಬಾರದ ವಿಷಯಳಿಗೆ ಉಗ್ರ ಹೋರಾಟ ಎಂದು ಬೀದಿಗಿಳಿಯುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತಿದೆ ಮತ್ತು ಇಂತಹ ಇಬ್ಬಂಧಿ ಧೋರಣೆಯೇ ಪದೇ ಪದೇ ಕನ್ನಡಿಗರ ಅಸ್ತಿತ್ವ ಮತ್ತು ಅಸ್ಮಿತೆ ಎನ್ನುತ್ತಾ ಹಾರಾಡುವುದು ಕೇವಲ ಅವರ ಸ್ವಾರ್ಥಕ್ಕಾಗಿ ಎನ್ನುವುದು ಸ್ಪಷ್ಟವಾಗುತ್ತದೆ.

kannada3ಕನ್ನಡ ಪರ ಹೋರಾಟ ಎಂದರೆ ಏನು ಎಂಬುದನ್ನು ಇಂದಿನ ಹೋರಾಟಗಾರರು ಖಂಡಿತವಾಗಿಯೂ ಆಲೂರು ವೆಂಕಟರಾಯರು, ಗಳಗನಾಥರು, ಅನಕೃ, ಮ. ರಾಮಮೂರ್ತಿಗಳಂತಹ ಮಹನೀಯರಿಂದ ಕಲಿತುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವಾಗಿದೆ. ನಮ್ಮ ಕನ್ನಡ ಭಾಷೆಯ ಅಳಿವು ಉಳಿವು ಮತ್ತು ರಕ್ಷಣೆಯನ್ನು ನಾವು ಯಾವುದೇ ಸ್ವಾರ್ಥ ಸಂಘಟನೆಗಳಿಗೆ ಗುತ್ತಿಗೆ ನೀಡಿಲ್ಲ ಮತ್ತು ನೀಡುವುದರ ಅವಶ್ಯಕತೆಯೂ ಇಲ್ಲ.‌ ಕನ್ನಡಿಗರಾದ ನಾವು ಕನ್ನಡದ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸುವ ಸಲುವಾಗಿ ಮನ ಮತ್ತು ಮನೆಗಳಲ್ಲಿ ಕನ್ನಡವನ್ನು ಬಳಸಿದರೇ ಸಾಕು ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎನ್ನುವುದನ್ನು ನಾವುಗಳು‌ ಮೊದಲು ಅರಿಯಬೇಕಾಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

3 thoughts on “ಕನ್ನಡ ಚಳುವಳಿ ಅಂದು ಇಂದು

  1. Sir ಬಾಳಗಂಚಿ ಹೊನ್ನದೇವಿ ನಮ್ಮ ಮನೆದೇವರು. ಅಲ್ಲಿನ ಸ್ಥಳ ಇತಿಹಾಸ ಮತ್ತು ಶಿವಗಂಗೆಯ ಹೊನ್ನದೇವಿ ದೇವಾಲಯದ ಮಧ್ಯೆ ಇರುವ ಸಂಬಂಧದ ಬಗ್ಗೆ ಲೇಖನ ಬರೆಯಬಹುದೇ? ದೇವಸ್ಥಾನದ ಅವರಣದಲ್ಲಿ ಕೆಲವು ಶಾಸನಗಳನ್ನು ನೋಡಿದ ನೆನಪು, ಅದರ ಬಗ್ಗೆಯೂ ಮಾಹಿತಿ ನೀಡಬಹುದೇ?

    Liked by 1 person

    1. ಹೊನ್ನಾದೇವಿ, ಹೊನ್ನರಸಮ್ಮ, ಹೊನ್ನರಳಮ್ಮ, ಹೊನ್ನಮ್ಮ, ಸ್ವರ್ಣಾಂಬ ಎಂಬ ಹೆಸರಿನ ಗ್ರಾಮದೇವತೆಗಳು ಕರ್ನಾಟಕದ ಸುಮಾರು ಕಡೆ ಇದ್ದು ಅವುಗಳಿಗೇ ಆದ ಪ್ರತ್ಯೇಕ ಜನಪದ ಪುರಾಣಗಳಿವೆಯೇ ಹೊರತು, ಒಂದಕ್ಕೊಂದು ಸಂಬಂಧವಿಲ್ಲ ಎನ್ನುವುದನ್ನು ನಮ್ಮ ತಂದೆಯವರಿಂದ ಕೇಳಿ ತಿಳಿದಿದ್ದೆ. ಇನ್ನು ಬಾಳಗಂಚಿ ಹೊನ್ನಾದೇವಿ, ಚೋಮನ ಹಬ್ಬ ಮತ್ತು ಹೆಬ್ಬಾರಮ್ಮನ ಕುರಿತಾಗಿ ಈಗಾಗಲೇ ಲೇಖನಗಳು ನಮ್ಮ ಬ್ಲಾಗಿನಲ್ಲಿ ಲಭ್ಯವಿದೆ.

      Like

  2. ಇದಕ್ಕೆ ಸರ್ಕಾರದ ಕನ್ನಡ ಕಾವಲು ಸಮಿತಿಯ ನಿಷ್ಕ್ರಿಯತೆ ಕೂಡ ಸೇರಿಸಬಹುದಿತ್ತು, ಕಡತಗಳಲ್ಲಿ ಮಾತ್ರ ಕೆಲವೊಮ್ಮೆ ಆರ್ಭಟಿಸುವುದು ಬಿಟ್ಟರೆ, ಅದರಿಂದ ಕಿಂಚಿತ್ತೂ ಪ್ರಯೋಜನವಿಲ್ಲದಂತಾಗಿದೆ. ಸುಮ್ಮನೆ ಕಾಲಕಾಲಕ್ಕೆ ಹಾಯಾಗಿ ತಿಂದುಂಡುಕೊಂಡಿರುವ ಇರುವ ಬಿಳಿಯಾನೆ‌ ಅದು.
    ಉಮಾಸುತ ರವರ ಲೇಖನ ನಿಜವಾದ ಕನ್ನಡಿಗರ ಕಣ್ತೆರೆಸುವಂತಿದೆ. ಅಕ್ಕರಕ್ಷರವೂ ಸತ್ಯ. ಅಂದಿನ ಸಾಹಿತಿಗಳ ಕನ್ನಡ ಪರ ಹೋರಾಟ ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ನಿಜವಾದ ಕಾಳಜಿಯಿಂದ ಕೂಡಿರುತ್ತಿತ್ತು. ಆದರೆ, ಇಂದಿನ ಖನ್ನಡ ಓಲಾಟಗಾರರು ಕೇವಲ ಹಫ್ತಾ ವಸೂಲಿ ದಂಧೆಗಿಳಿದು ದುಡ್ಡು ಮಾಡುವ ಏಕೈಕ ಉದ್ದೇಶ ಹೊಂದಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು.

    Like

Leave a comment