ಕರ್ನಾಟಕದ ನಾಟಕ ಮತ್ತು ಸಿನಿಮಾ ಪ್ರಿಯರಿಗೆ ಗುಬ್ಬಿ ವೀರಣ್ಣ ಎಂಬ ಹೆಸರನ್ನು ಕೇಳಿದ ತಕ್ಷಣವೇ ಮೈರೋಮಾಂಚನವಾಗುತ್ತದೆ ಎಂದರೆ ಅತಿಶಯವಲ್ಲ. ಕನ್ನಡ ರಂಗಭೂಮಿ ಮತ್ತು ಕನ್ನಡದ ಚಲನಚಿತ್ರಗಳ ಆರಂಭದ ದಿನಗಳಲ್ಲಿ ಅವುಗಳಿಗೆ ಕಾಯಕಲ್ಪ ನೀಡಿ ಅದರಲ್ಲೂ ವೃತ್ತಿ ರಂಗಭೂಮಿಗೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟ ಪ್ರಾತಃಸ್ಮರಣಿಯರು ಎಂದರೂ ತಪ್ಪಾಗದು. ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳಾಗಿದ್ದರು. ಅವರೊಬ್ಬ ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿ ಬಹುಮುಖ ಪ್ರತಿಭೆಯಾಗಿದ್ದಲ್ಲದೇ, ತಮ್ಮ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ, ಮೂಲಕ ಸಾವಿರಾರು ಕಲಾವಿದರುಗಳಿಗೆ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಿದ್ದಲ್ಲದೇ, ಅವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಹೊರಹಾಕುವ ಸಲುವಾಗಿ ವೃತ್ತಿ ರಂಗಭೂಮಿಯಲ್ಲಿ ನೂರಾರು ಹೊಸ ರಂಗ ಪ್ರಯೋಗಳನ್ನು ಮಾಡುವ ಮೂಲಕ ಇಂದಿಗೂ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಗುಬ್ಬಿ ವೀರಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.
ತುಮಕೂರು ಜಿಲ್ಲೆಯ ಗುಬ್ಬಿ ಎಂಬ ಗ್ರಾಮದಲ್ಲಿ ಅದಾಗಲೇ ಕಲಾವಿದರಾಗಿ, ನಾಟಕ ಕಂಪನಿಯ ಮಾಲಿಕರಾಗಿ ಚಿರಪರಿಚಿತರಾಗಿದ್ದ ಹಂಪಣ್ಣನವರು ಮತ್ತು ರುದ್ರಾಂಬೆ ದಂಪತಿಗಳ ಮಗನಾಗಿ ವೀರಣ್ಣನವರು 1890ರಲ್ಲಿ ಗುಬ್ಬಿಯಲ್ಲಿ ಜನಿಸಿದರು. ವೀರಣ್ಣನವರು ಜನಿಸುವ 6 ವರ್ಷಗಳ ಮುಂಚೆಯೇ ಅಂದರೆ, 1884ರಲ್ಲೇ. ಚಂದ್ರಣ್ಣ ಮತ್ತು ಅಬ್ದುಲ್ ಅಜೀಜ್ ಸಾಹೇಬ್ ಅವರು ಜೊತೆಗೂಡಿ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಎಂಬ ಕಂಪೆನಿ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿರುತ್ತಾರೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ ವೀರಣ್ಣನವರಿಗೆ ಆಟ, ಪಾಠ, ವಿದ್ಯಾಭ್ಯಾಸ ಎಲ್ಲವೂ ತಮ್ಮ ತಂದೆಯವರ ಗುಬ್ಬಿ ಕಂಪೆನಿಯೇ. ರಂಗಭೂಮಿ ಕಲಾವಿದರಿಗೆ ಅಗತ್ಯವೆನಿಸಿದ್ದ ಸಂಗೀತದ ಬಾಲ ಪಾಠ, ಹಾಡುಗಾರಿಕೆ, ತಬಲಾ, ಪಿಟೀಲು ಮುಂತಾದ ವಿದ್ಯೆಗಳನ್ನು ತಮ್ಮ ಕಂಪನಿಯಲ್ಲೇ ಕರಗತ ಮಾಡಿಕೊಳ್ಳ ತೊಡಗಿದ ವೀರಣ್ಣ, ಕೇವಲ ಆರು ವರ್ಷದ ಬಾಲಕನಾಗಿದ್ದಾಗಲೇ 1896ರ ವರ್ಷದಲ್ಲಿಯೇ ತಮ್ಮ ಕಂಪನಿಯಲ್ಲಿ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣನವರು ಅಂದಿನಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಅಂದೆಲ್ಲಾ ಪುರುಷರೇ ಸ್ತ್ರೀಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಕಾಲವಾಗಿದ್ದರಿಂದ ತರುಣಾವಸ್ಥೆಗೆ ಬರುವವರೆಗೂ ವೀರಣ್ಣನವರು ನಿರ್ವಹಿಸುತ್ತಿದ್ದದ್ದು ಸ್ತ್ರೀ ಪಾತ್ರಗಳೇ. ನಂತರ ಗಂಟಲು ಒಡೆದ ಕಾರಣ, ಪುರುಷ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಅವರಿಗೆ 27 ವರ್ಷಗಳಾಗಿದ್ದಾಗ ಅವರ ತಂದೆಯವರು ನಿಧನರಾದ ಕಾರಣ, 1917ರಲ್ಲಿ ವೀರಣ್ಣನವರೇ ತಮ್ಮ ತಂದೆಯವರು ಪ್ರಾರಂಭಿಸಿದ್ದ ಗುಬ್ಬಿ ಕಂಪೆನಿಯ ಮಾಲೀಕರಾಗ ಬೇಕಾಯಿತು. ಅಲ್ಲಿಂದ್ದ ಗುಬ್ಬೀ ವೀರಣ್ಣನವರ ಬದುಕಿನಲ್ಲಿ ಭಾರೀ ಬದಲಾವಣೆಯಾಯಿತು. ಕೇವಲ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಯಲ್ಲೇ ಪ್ರವಾಸ ಮಾಡುತ್ತಿದ್ದ ತಮ್ಮ ಕಂಪನಿಯನ್ನು ಇಡೀ ದಕ್ಷಿಣ ಭಾರತವಷ್ಟೇ ಅಲ್ಲದೇ ಉತ್ತರ ಭಾರತಕ್ಕೂ ಕನ್ನಡ ರಂಗಭೂಮಿಯ ಕೀರ್ತಿಯನ್ನು ಪಸರಿದರು.
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ನಟಿಯರು, ನಿರ್ದೇಶಕರು, ಸಂಭಾಷಣೆಕಾರರು, ಸಂಗೀತಕಾರಲ್ಲಿ ಅನೇಕರು ಇದೇ ಗುಬ್ಬಿ ಕಂಪನಿಯಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು ಎನ್ನುವುದೇ ಗುಬ್ಬಿ ಕಂಪನಿಯ ಹೆಗ್ಗಳಿಕೆಯಾಗಿದೆ. ವರನಟ ರಾಜ್ ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರೂ ಸಹಾ ಇದೇ ಗುಬ್ಬೀ ಕಂಪನೆಯಲ್ಲಿ ಪಾತ್ರನಿರ್ವಹಿಸುತ್ತಿದ್ದ ಕಾರಣ, ರಾಜ್ ಕುಮಾರು ಮತ್ತು ಅವರ ಸಹೋದರ ವರದಪ್ಪನವರು ಬಾಲ ಕಲಾವಿದರಾಗಿ ಬಣ್ಣ ಹಚ್ಚಿದ್ದೂ ಸಹಾ ಇದೇ ಕಂಪನಿಯಲ್ಲಿಯೇ. ನಟರತ್ನಾಕರ ಹಿರಣ್ಣಯ್ಯನವರೂ ಕೆಲ ವರ್ಷಗಳ ಕಾಲ ಇದೇ ಗುಬ್ಬಿ ಕಂಪೆನಿಯಲ್ಲಿ ಕಲಾವಿದರಾಗಿದ್ದರು. ನಾಡು ಕಂಡ ಶ್ರೇಷ್ಠ, ನಟ, ಸಂಭಾಷಣೆಕಾರ ಮತ್ತು ನಿರ್ದೇಶಕರಾದ, ಎಚ್. ಎಲ್. ಎನ್. ಸಿಂಹ, ಜಿ. ವಿ. ಅಯ್ಯರ್, ಬಿ. ವಿ. ಕಾರಂತ್ ಸಹಾ ಇದೇ ಕಂಪನಿಯವರೇ. ಹುಟ್ಟು ಕಿವುಡರಾಗಿದ್ದರೂ, ಶ್ರೇಷ್ಠ ಹಾಸ್ಯನಟರಾಗಿದ್ದ ಶ್ರೀ ಟಿ. ಎನ್. ಬಾಲಕೃಷ್ಣರವರು ಇದೇ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ ಸೇರಿಕೊಂಡು ಮುಂದೇ ಶ್ರೇಷ್ಠ ನಟರಾಗಿದ್ದಲ್ಲದೇ, ಮದರಾಸಿನ ಸ್ಟುಡಿಯೋಗಳಿಗೆ ಸಡ್ಡು ಹೊಡೆಯಲೆಂದೇ, ಕನ್ನಡಿಗರೇ ಅಭಿಮಾನ ಪಟ್ಟು ಕೊಳ್ಳುವಂತಹ ಅಭಿಮಾನ್ ಸ್ಟುಡಿಯೋ ಕಟ್ಟಿದಂತಹ ಮಹಾನ್ ವ್ಯಕ್ತಿಗಳಾದರು. ರಾಜ್ ಕುಮಾರ್ ಅವರ ನಟನೆ, ಸ್ಪಷ್ಟ ಸಂಭಾಷಣೆ ಮತ್ತು ಸುಶ್ರಾವ್ಯ ಗಾಯನವನ್ನು ಯಾರಾದರೂ ಹೊಗಳಿದಲ್ಲಿ ಅವರು ನಿಸ್ಸಂಕೋಚವಾಗಿ ಇವೆಲ್ಲವೂ ಗುಬ್ಬಿ ನಾಟಕ ಕಂಪೆನಿಯಲ್ಲಿ ದೊರೆತ ಉತ್ಕೃಷ್ಟವಾದ ತರಭೇತಿ ಮತ್ತು ಅನುಭವ. ಹಾಗಾಗಿ ಇವೆಲ್ಲದರ ಸಂಪೂರ್ಣ ಶ್ರೇಯ ಗುಬ್ಬಿ ಕಂಪನಿಗೇ ಸೇರುತ್ತದೆ ಎನ್ನುತ್ತಿದ್ದರು.
ಯಾವುದೇ ಸಂದರ್ಭ ನೋಡಿದರೂ, ಗುಬ್ಬಿ ಕಂಪೆನಿಯಲ್ಲಿ ಸುಮಾರು 150 ಕಲಾವಿದರುಗಳು ತೆರೆಯ ಹಿಂದೆ ಮುಂದೆ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಕಂಪೆನಿಯಲ್ಲಿದ್ದ ಎಲ್ಲಾ ವಯೋಮಾನದ ಕಲಾವಿದರುಗಳ ವೈಯಕ್ತಿಕ ಪರಿಚಯವನ್ನಿಟ್ಟು ಕೊಂಡು ಅವರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ ಅದರ ಅನುಗುಣವಾಗಿ ಅವರ ಸರ್ವತೋಮುಖವಾದ ಬೆಳವಣಿಗೆಗೆ ವೀರಣ್ಣನವರು ಸಹಾಯ ಮಾಡುತ್ತಿದ್ದದ್ದು ಅತ್ಯಂತ ಶ್ಲಾಘನೀಯವಾಗಿತ್ತು. ಜನರನ್ನು ತಮ್ಮತ್ತ ಸೆಳೆಯಲೋ ಅಥವಾ ಆವರ ಮೆಚ್ಚುಗೆ ಗಳಿಸಲು ಪಾತ್ರಕ್ಕೆ ಅವಶ್ಯಕತೆ ಇಲ್ಲದಿದ್ದರೂ ಜೋರು ಧನಿಯಲ್ಲಿ ಸಂಭಾಷಣೆ ಹೇಳುವುದೂ ಇಲ್ಲವೇ ಹಾಡಿದಾಗ ವೀರಣ್ಣನವರು ಮುಲಾಜಿಲ್ಲದೇ, ಅಷ್ಟೊಂದು ಕಿರುಚಾಟ ಅನವಶ್ಯಕ ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಿದ್ದರು. ಅದೇ ರೀತಿ ಯಾರಾದರೂ ಸುಶ್ರಾವ್ಯವಾಗಿ ಹಾಡಿದಾಗ ಅಥವಾ ಅದ್ಭುತವಾಗಿ ಸಂಭಾಷಣೆ ಹೇಳಿದಾಗಲೋ ಇಲ್ಲವೇ ನಟನೆ ಮಾಡಿದಾಗಲೂ ಭೇಷ್ ಭೇಷ್ ತುಂಬಾ ಚನ್ನಾಗಿತ್ತು ಎಂದು ಬೆನ್ನು ತಟ್ಟಿ ಅಭಿನಂದಿಸುವುದನ್ನೂ ರೂಢಿಯಲ್ಲಿಟ್ಟುಕೊಂಡಿದ್ದ ಕಾರಣ ಅಲ್ಲಿನ ವಾತಾವರಣ ಕಂಪನಿ ಆಗಿರದೇ ಒಂದೇ ಕುಟುಂಬದಂತೆಯೇ ಇರುತ್ತಿತ್ತು. ತಮ್ಮ ಕಂಪೆನಿಯಲ್ಲಿ ಕೆಲಸ ಮಾಡಿ ನಂತರ ಸ್ವಾವಲಂಭಿಗಳಾಗಿ ತಮ್ಮದೇ ಕಂಪನಿ ಕಟ್ಟಿಕೊಂಡಾಗ ಸಂತೋಷ ಪಡುತ್ತಿದ್ದಲ್ಲದೇ, ಹಾಗೆ ಕಂಪನಿ ಬಿಟ್ಟು ಹೋಗಿ ಅರ್ಥಿಕವಾಗಿ ಸಂಕಷ್ಟದಲ್ಲಿದ್ದರೆ, ಎಲ್ಲಾ ಹಮ್ಮು ಬಿಮ್ಮುಗಳನ್ನು ಬಿಟ್ಟು ಅಂತಹವರಿಗೆ ಮರಳಿ ತಮ್ಮದೇ ಕಂಪನಿಯಲ್ಲಿ ಕೆಲಸ ಕೊಡುವಂತಹ ಮಾತೃಸ್ವರೂಪಿಯಾಗಿದ್ದರು ಎನ್ನುವುದು ಗಮನಾರ್ಹ.
ಜನರಿಗೆ ಮನೋರಂಜನೆ ನೀಡುವ ಸಲುವಾಗಿ ಗುಬ್ಬಿ ಕಂಪೆನಿಯನ್ನು ಮೈಸೂರು ಬೆಂಗಳೂರಿಗೂ ವಿಸ್ತರಿಸಿದ್ದಲ್ಲದೇ, ದಕ್ಷಿಣ ಭಾರತದಾದ್ಯಂತ ಪ್ರವಾಸವನ್ನೂ ಮಾಡಿದ್ದಲ್ಲದೇ, 1926ರಲ್ಲಿಯೇ ಪ್ರಥಮ ಬಾರಿಗೆ ವೃತ್ತಿ ರಂಗಭೂಮಿಯಲ್ಲಿ ವಿದ್ಯುತ್ ದೀಪದ ಬಳಗೆ ಮಾಡಿದ ಕೀರ್ತಿ ವೀರಣ್ಣನವರಿಗೇ ಸಲ್ಲುತ್ತದೆ. ಮುಂದೆ 1934ರ ಡಿಸೆಂಬರ್ 31ರಂದು ಬೆಂಗಳೂರಿನಲ್ಲಿ ಪ್ರದರ್ಶಿಸಿದ ಕುರುಕ್ಷೇತ್ರ ನಾಟಕದಲ್ಲಿ ಅದ್ಭುತವಾದ ಪರದೆಗಳು ರಂಗವಿನ್ಯಾಸ ಅಲ್ಲದೇ, ಸ್ತ್ರೀ ಪಾತ್ರವನ್ನು ಸ್ತ್ರೀಯರೇ ವಹಿಸುವಂತೆ ಮಾಡಿದ್ದಲ್ಲದೇ, ವೇದಿಕೆಯ ಮೇಲೆ ನಿಜವಾದ ಆನೆ, ಕುದುರೆಗಳನ್ನು ತರುವ ಮೂಲಕ ಅಕ್ಷರಶಃ ಕುರುಕ್ಷೇತ್ರವನ್ನೇ ಜನರ ಮುಂದೆ ಸೃಷ್ಟಿಸಿಬಿಟ್ಟಿದ್ದರು.
ಈ ರೀತಿಯಾದ ಅದ್ಧೂರಿಯಾದ ಕುರುಕ್ಷೇತ್ರದ ಪ್ರಸಿದ್ಧಿ ಹೈದರಾಬಾದಿನ ನಿಜಾಮರಿಗೂ ತಲುಪಿ, ಆ ನಾಟಕವನ್ನು ತಮ್ಮ ಅರಮನೆಯಲ್ಲಿ ಪ್ರದರ್ಶನ ಮಾಡಬೇಕೆಂದು ಕೋರುತ್ತಾರೆ. ಆದರೆ, ಇಡೀ ರಂಗಭೂಮಿಯ ವ್ಯವಸ್ಥೆಯನ್ನು ದೂರದ ಹೈದರಾಬಾದಿಗೆ ಸಾಗಿಸುವುದಕ್ಕೆ ತೊಂದರೆ ಆಗುವ ಕಾರಣ, ದಯವಿಟ್ಟು ಇಡೀ ರಾಜಪರಿವಾರವೇ, ನಾಟಕ ನಡೆಯುತ್ತಿದ್ದ ಸ್ಥಳಕ್ಕೇ ಬರಬೇಕೆಂದು ವಿನಯದಿಂದ ವೀರಣ್ಣನವರು ಕೋರಿದಾಗ, ಅದಕ್ಕೊಪ್ಪಿ ಬೆಂಗಳೂರಿಗೆ ಬಂದಾಗ ಸಕಲ ರಾಜಮರ್ಯಾದೆಯಿಂದ ಸ್ವಾಗತಿಸಿ ಅದ್ದೂರಿಯಾಗಿ ನಾಟಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ರಂಗಭೂಮಿ ನಿಂತ ನೀರಾಗದೇ, ನಿರಂತರವಾಗಿ ಕಲಾವಿದರುಗಳು ಹರಿವು ಇರಲೇ ಬೇಕೆಂಬ ದೂರಾಲೋಚನೆಯಿಂದ, 1925ರಲ್ಲೇ, 14 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗೆ ನಾಟಕ ತರಬೇತಿ ನೀಡಲೆಂದು ಬಾಲಕ ವಿವರ್ಧಿನಿ ಎಂಬ ಕಲಾಸಂಘವನ್ನು ಸ್ಥಾಪಿಸಿ ಅನೇಕ ಕಲಾವಿದರುಗಳನ್ನು ಬೆಳಕಿಗೆ ತಂದ ಕೀರ್ತಿಯೂ ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ.
ಗುಬ್ಬೀ ಕಂಪೆನಿಯ ನಾಟಕಗಳಾದ ಸದಾರಮೆ, ಕುರುಕ್ಷೇತ್ರ, ಜೀವನ ನಾಟಕ, ದಶಾವತಾರ, ಪ್ರಭಾಮಣಿ ವಿಜಯ, ಕಬೀರ್, ಗುಲೇಬಾಕಾವಲಿ, ಅಣ್ಣ ತಮ್ಮ, ಲವ ಕುಶ ಮುಂತಾದವುಗಳು ಪ್ರಸಿದ್ಧಿಯಾಗುತ್ತಿದ್ದಂತೆಯೇ, ತಮ್ಮ ಕಾರ್ಯಕ್ಷೇತ್ರವನ್ನು ಅಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಚಲನಚಿತ್ರಗಳಲ್ಲೂ ವಿಸ್ತರಿಸಲು ಮುಂದಾಗಿ ತಮ್ಮದೇ ಆದ ಗುಬ್ಬೀ ಪ್ರೊಡಕ್ಷನ್ಸ್ ಆರಂಭಿಸಿ ಅದರ ಮೂಲಕ 1926ರಲ್ಲಿ ಹೆಸರಾಂತ ಸಾಹಿತಿಗಳಾದ ದೇವುಡು ನರಸಿಂಹಶಾಸ್ತ್ರಿಗಳ ಸಹಕಾರದೊಂದಿಗೆ ಹರಿಮಯ, ‘ಹಿಸ್ ಲವ್ ಅಫೈರ್’ ಮತ್ತು ಕಳ್ಳರ ಕೂಟ ಎಂಬ ಚಿತ್ರಗಳನ್ನು ನಿರ್ಮಿಸಿ ತಕ್ಕ ಮಟ್ಟಿಗೆ ಯಶಸ್ವಿಯನ್ನೂ ಕಂಡರು. ನಂತರ ತಮ್ಮ ಕಂಪನಿಯ ಅತ್ಯಂತ ಜನಪ್ರಿಯ ನಾಟಕವಾಗಿದ್ದ ಸದಾರಮೆಯನ್ನೇ 1935ರಲ್ಲಿ ಅದೇ ಹೆಸರಿನಲ್ಲೇ ನಿರ್ಮಾಣ ಮಾದಿದ್ದಲ್ಲದೇ ಅ ಚಿತ್ರದಲ್ಲಿ ಅವರೇ ಪ್ರಧಾನ ಪಾತ್ರ ವಹಿಸಿದ್ದದ್ದು ಗಮನಾರ್ಹವಾಗಿತ್ತು. ತಮ್ಮ ಕಂಪನಿಯಲ್ಲೇ ಇದ್ದ ಹೊನ್ನಪ್ಪ ಭಾಗವತರ್ ಅವರಿಗಾಗಿ ಸುಭದ್ರಾ ಎಂಬ ಕನ್ನಡ ಚಿತ್ರವಲ್ಲದೇ, ಸತ್ಯ ಶೋಧನೈ ಎಂಬ ತಮಿಳು ಚಿತ್ರವಲ್ಲದೇ, ಜೀವನ ನಾಟಕ, ಗುಣಸಾಗರಿ ಚಿತ್ರಗಳನ್ನು ನಿರ್ಮಿಸಿದ್ದರು. ತಮ್ಮ ಚಲನಚಿತ್ರ ಸಂಸ್ಥೆಯ ಹೆಸರನ್ನು ದಿ ಕರ್ನಾಟಕ ಫಿಲಂಸ್ ಲಿಮಿಟೆಡ್ ಎಂದು ಬದಲಿಸಿಕೊಂಡು ಮೇ 7, 1954ರಲ್ಲಿ ಸಿ. ಆರ್. ಬಸವರಾಜು ಅವರೊಂದಿಗೆ ಎಚ್ ಎಲ್ ಎನ್ ಸಿಂಹ ಅವರ ನಿರ್ದೇಶನದ ಬೇಡರ ಕಣ್ಣಪ್ಪ ನಿರ್ಮಿಸಿ, ಆ ಚಿತ್ರದಲ್ಲಿ ತಮ್ಮ ಕಂಪನಿಯ ನಟರೇ ಆಗಿದ್ದ ರಾಜ್‌ಕುಮಾರ್ ಮತ್ತು ನರಸಿಂಹರಾಜು ಅವರನ್ನು ನಟರಾಗಿ ಜಿ.ವಿ. ಅಯ್ಯರ್ ಅವರನ್ನು ಚಿತ್ರಕಥೆಗಾರರಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಮುಂದೆ ಇದೇ ಕಲಾವಿದರುಗಳೇ ಕನ್ನಡ ಚಿತ್ರರಂಗದ ಅಧಾರ ಸ್ಥಂಭಗಳಾಗಿ ವಿಜೃಂಭಿಸಿದ್ದು ಗಮನಾರ್ಹವಾಗಿದೆ.
- ವೀರಣ್ಣನವರ ಹಾಸ್ಯಾಭಿನಯವನ್ನು ಮೆಚ್ಚಿ 1912 ರಲ್ಲಿ ಮೈಸೂರಿನ ಜನತೆ ಅವರಿಗೆ ಚಿನ್ನದ ಪದಕವನ್ನಿತ್ತು ಗೌರವಿಸಿತು.
- 1921ರಲ್ಲಿ ಬೆಂಗಳೂರಿನಲ್ಲಿ ವೀರಣ್ಣನವರ ಪ್ರದರ್ಶನವನ್ನು ಮೆಚ್ಚಿ ಕನ್ನಡಕ್ಕೊಬ್ಬನೇ ಕೈಲಾಸಂ ಎಂದೇ ಖ್ಯಾತಿ ಪಡೆದೆ ಟಿ.ಪಿ. ಕೈಲಾಸಂ ಅವರು ವೀರಣ್ಣನವರಿಗೆ ಕೈಗಡಿಯಾರವನ್ನು ನೀಡಿ ಸನ್ಮಾನಿಸಿದರು.
- 1932ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವೀರಣ್ಣನವರ ಅಭಿನಯವನ್ನು ಮೆಚ್ಚಿ, ವರ್ಸಟೈಲ್ ಕಮೇಡಿಯನ್ಎಂ ಬ ಬಿರುದನ್ನು ನೀಡಿ ಸನ್ಮಾನಿಸಿದರು.
- 1942ರಲ್ಲಿ ಮೈಸೂರನಲ್ಲಿ ನಡೆದ ದಸರಾ ಉತ್ಸವದಲ್ಲಿ ಅಂದಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರು ವೀರಣ್ಣನವರಿಗೆ ನಾಟಕ ರತ್ನ ಎಂಬ ಬಿರುದು ನೀಡಿ ಸನ್ಮಾನಿಸಿದರು.
- 1955ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯೂ ಸಹಾ ವೀರಣ್ಣನವರಿಗೆ ಸಲ್ಲುತ್ತದೆ.
- 1972ರ ವರ್ಷದಲ್ಲಿ ಕೇಂದ್ರ ಸರ್ಕಾರವೂ ಸಹಾ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆಯಲ್ಲದೇ,ಕರ್ನಾಟಕಾಂಧ್ರ ನಾಟಕ ಸಾರ್ವಭೌಮ’ ಎಂದು ಬಿರುದಿಗೂ ಪಾತ್ರರಾಗುತ್ತಾರೆ.
- ಮೈಸೂರು ವಿಶ್ವವಿದ್ಯಾಲಯವು ಸಹಾ ವೀರಣ್ಣನವರಿಗೆ ಡಿ.ಲಿಟ್ ಗೌರವವನ್ನು ನೀಡಿದೆ.
- ವೃತ್ತಿ ರಂಗಭೂಮಿಯಲ್ಲಿ ಗುಬ್ಬೀ ವೀರಣ್ಣನವರ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಅವರ ಹೆಸರಿನಲ್ಲಿ ಶ್ರೇಷ್ಠ ರಂಗಭೂಮಿ ಸಾಧನೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡುತ್ತಿದೆ.
ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗಕ್ಕೆ ಅಪೂರ್ವ ಕಾಣಿಕೆಯಿತ್ತ ಗುಬ್ಬಿ ವೀರಣ್ಣನವರು 1972ರ ಅಕ್ಟೊಬರ್ 18ರಂದು ವಯೋಸಹಜವಾಗಿ ನಿಧನವಾದರೂ, ಅವರ ಇಡೀ ಕುಟುಂಬ ಮತ್ತು ಅದರ ಮುಂದುವರೆದ ವಂಶಸ್ಥರು ಇಂದಿಗೂ ಸಹಾ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಲಾಸೇವೆಯನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಗುಬ್ಬಿ ವೀರಣ್ಣನವರ ಕಲಾಸಾಧನೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಅನನ್ಯ ಮತ್ತು ಅನುಕರಣೀಯ. ಹೀಗೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಖ್ಯಾತಿಯನ್ನು ಪ್ರಪಂಚಾದ್ಯಂತ ಪಸರಿಸಿರುವ ನಾಟಕ ರತ್ನ ಗುಬ್ಬಿ ವೀರಣ್ಣನವರು ಖಂಡಿತವಾಗಿಯೂ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ