ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಶಿಲಾಯುಗದ ಕಾಲದಲ್ಲಿ ಮನುಷ್ಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ವಿವಿಧ ಈ ರೀತಿಯ ಧ್ವನಿ, ಸನ್ನೆಗಳ ಮೂಲಕ ಸಂಭಾಷಣೆ ನಡೆಸುತ್ತಿದ್ದು ನಂತರದ ದಿನಗಳಲ್ಲಿ ತಮ್ಮ ದೈನಂದಿನದ ಪರಸ್ಪರ ಸಂಭಾಷಣೆ, ವ್ಯವಹಾರ ಮತ್ತು ತಮ್ಮ ಅಲೋಚನೆ, ಅಭಿಲಾಷೆಗಳನ್ನು ಮತ್ತೊಬ್ಬರಿಗೆ ವ್ಯಕ್ತಪಡಿಸುವ ಸಲುವಾಗಿ ಭಾಷೆಗಳು ಅಲ್ಲಿ ಅಲ್ಲಿಯ ಸಂಸ್ಕೃತಿಗೆ ಅನುಗುಣವಾಗಿ ಹುಟ್ಟಿಕೊಂಡವು. ಹೀಗೆ ಭಾಷೆಯಿಂದಾಗಿ, ಒಬ್ಬರನ್ನೊಬ್ಬರು ಪ್ರಶ್ನಿಸಲು, ಕೇಳಿದ  ಪ್ರಶ್ನೆಗಳಿಗೆ ಉತ್ತರಿಸಲು, ತಮ್ಮ ಆಲೋಚನೆಗಳು ಮತ್ತು ಆಸೆಗಳನ್ನು ಸಂವಹನ ಮಾಡಲು ಮತ್ತು ಇತರರ ಅಭಿವ್ಯಕ್ತಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಯಿತು.

lang2ಪ್ರಪಂಚದಾದ್ಯಂತ ಸುಮಾರು 196 ದೇಶಗಳಿದ್ದು ಅವೆಲ್ಲಾ ದೇಶಗಳಲ್ಲಿ ಸರಿ ಸುಮಾರು 7,117 ಭಾಷೆಗಳನ್ನು ಮಾತನಾಡುತ್ತಾರೆ ಎಂದು ನಂಬಲಾಗಿದೆ. ಇನ್ನು ವಿಶ್ವದ ಎರಡನೇ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವಂತಹ ಭಾರತದಲ್ಲಿ ಸುಮಾರು 700 ಕ್ಕೂ ಹೆಚ್ಚು ಭಾಷೆಗಳಿದ್ದು ಭಾರತದ ಸಂವಿಧಾನದ ಪ್ರಕಾರ, 22 ಅನುಸೂಚಿತ ಅಥವಾ ಅಧಿಕೃತ ಭಾಷೆಗಳಿಗೆ ಮಾನ್ಯತೆ ಮತ್ತು ಬೆಂಬಲವನ್ನು ನೀಡಲಾಗಿದ್ದು, ಉಳಿದ ಭಾಷೆಗಳು ಸ್ಥಳೀಯವಾಗಿ ಅಯಾಯಾ ಪ್ರಾಂತ್ಯಗಳಿಗೆ ಸೀಮಿತವಾಗಿವೆ.

ಭಾರತದಲ್ಲಿ ಪ್ರತೀ 20-30 ಕಿಮೀ ದೂರ ಕ್ರಮಿಸಿದರೂ ಸ್ಥಳೀಯ ಭಾಷೆಗಳನ್ನು ಮಾತನಾಡುವ ಶೈಲಿ ವಿಭನ್ನವಾಗಿದ್ದರೂ ವಿವಿಧತೆಯ ನಡುವೆ ಏಕತೆಯನ್ನು ಹೊಂದಿರುವುದು ನಿಜಕ್ಕೂ ಅದ್ಭುತವೇ ಸರಿ. ಭಾರತದಲ್ಲಿ ಇರುವ ಎಲ್ಲಾ ಭಾಷೆಗಳಿಗೂ ಲಿಪಿ ಇಲ್ಲದೇ ಹೋದರೂ ಪ್ರತಿಯೊಂದು ಭಾಷೆಗಳಲ್ಲಿ ಇರುವ ಸಾಹಿತ್ಯವಂತೂ ಅವರ್ಣನೀಯ.  ಈ ಎಲ್ಲಾ ಭಾಷೆಗಳ ಸೊಗಡು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

sanskritಇನ್ನು ಪ್ರಪಂಚದ ಅತ್ಯಂತ ಹಳೆಯ ಭಾಷೆ ಮತ್ತು ತಾಯಿ ಭಾಷೆ ಎಂದೇ ಗುರುತಿಸಲ್ಪಡುವ ಸಂಸ್ಕೃತದ ಬಗ್ಗೆಯಂತೂ ಹೇಳುವುದೇ ಬೇಡ ಎನಿಸುತ್ತದೆ.  ಹಾಗಾಗಿಯೇ ಸಂಸ್ಕೃತ ಭಾಷೆಯನ್ನು ದೇವಭಾಷಾ ಎಂದು ಕರೆಯಲಾಗುವುದಲ್ಲದೇ, ಭಾರತೀಯ ಭಾಷೆಗಳೂ ಸೇರಿದಂತೆ ಬಹುತೇಕ ಎಲ್ಲಾ ಯುರೋಪಿಯನ್ ಭಾಷೆಗಳೂ ಸಂಸ್ಕೃತದಿಂದ ಪ್ರೇರಿತವಾಗಿವೆ ಎಂದೇ ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾಗಿಯೇ ಪ್ರಪಂಚದಾದ್ಯಂತ ಹರಡಿರುವ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಸ್ಕೃತವನ್ನು ಅತ್ಯಂತ ಪ್ರಾಚೀನ ಭಾಷೆ ಎಂದು ಪರಿಗಣಿಸುತ್ತವೆ. ಇನ್ನು ಭಾರತದ ವೇದ, ಉಪನಿಷತ್ತು ಮತ್ತು ಅನೇಕ ಪುರಾಣ ಗ್ರಂಥಗಳೂ ಸಹಾ ಸಂಸ್ಕೃತದಲ್ಲೇ ಇರುವುದು ಇದನ್ನು ಮತ್ತಷ್ಟು ಪುಷ್ಟೀಕರಿಸುವ ಕಾರಣ ವಿದೇಶಿಗರು ಸಂಸ್ಕೃತವನ್ನು ಕಲಿತು ವೇದ ಉಪನಿಷತ್ತುಗಳನ್ನು ನಮಗಿಂತಲೂ ಉತ್ತಮವಾಗಿ ಅರಿತಿದ್ದಾರೆ.

englishವ್ಯಾಪಾರದ ಉದ್ದೇಶ ಇಟ್ಟುಕೊಂಡು ಆಗಸ್ಟ್ 24, 1608ರಲ್ಲಿ  ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ರೂಪದಲ್ಲಿ ಬ್ರಿಟಿಷರು ಭಾರತದ ಗುಜರಾತಿನ ಬಂದರು ಪಟ್ಟಣ ಸೂರತ್‌ ಮೂಲಕ ಮೊದಲು ಭಾರತಕ್ಕೆ ಬಂದಿಳಿದಾಗ, ಅವರಿಗೆ ಎದುರಾದ  ಮೊತ್ತ ಮೊದಲ ಸಮಸ್ಯೆಯೇ ಸ್ಥಳೀಯರೊಡನೆ ಸಂವಹನೆ.  ಅವರಿಗೆ  ಇಂಗ್ಲೀಷ್ ಹೊರತಾಗಿ ಬೇರೆ ಭಾಷೆ ಗೊತ್ತಿರಲಿಲ್ಲ. ಇಲ್ಲಿನವರಿಗೆ ಗುಜರಾತಿ ಹಿಂದಿ ಹೊರತಾಗಿ ಮತ್ತೊಂದು ಭಾಷೆಯ ಅರಿವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊರಗಿನವರು ಸ್ಥಳಿಯರೊಡನೆ ಬೆರೆಯುವ ಸಲುವಾಗಿ ಶೀಘ್ರದಲ್ಲಿ ಸ್ಥಳೀಯ ಭಾಷೆಯನ್ನು ಕಲಿತುಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ವಿಶಾಲ ಹೃದಯ ಮತ್ತು ಅತಿಥಿಗಳನ್ನು ದೇವರೆಂದೇ ಕಾಣುವ ಭಾರತೀಯರು, ಅವರಿಗೆ ನಮ್ಮ ಭಾಷೆಯನ್ನು ಕಲಿಸುವ ಬದಲು ನಾವೇ ಅವರ ಭಾಷೆಯನ್ನು ಕಲಿತು ಅವರೊಡನೆ ಸಂಭಾಷಣೆ ಮಾಡುವುದು ಹೆಮ್ಮೆಯ ಪ್ರತೀಕ ಎಂದು ತಿಳಿದದ್ದೇ ನಮಗೆ ಮಾರಕವಾಗಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ.

english2ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಕೇವಲ 94 ದೇಶಗಳಲ್ಲಿ ಮಾತ್ರ ಇಂಗ್ಲೀಷ್ ಭಾಷೆಯ ಬಳಕೆ ಇದ್ದು ಉಳಿದ ದೇಶಗಳಲ್ಲಿ ತಮ್ಮ ಸ್ಥಳೀಯ ಭಾಷೆಗಳಿಗೆ  ಒತ್ತು ನೀಡಲಾಗುತ್ತಿದೆ. ಅಲ್ಲಿನವರು ವಿದೇಶಾಂಗ ವ್ಯವಸ್ಥೆಯಲ್ಲಿ ಅವಶ್ಯಕತೆ ಇದ್ದಾಗ ದುಭಾಷಿಗಳ ಮೂಲಕ ವ್ಯವಹಾರಗಳನ್ನು ಮಾಡಲಾಗುತ್ತಿದೆ.  ಬ್ರಿಟೀಷರು ಭಾರತವನ್ನು ವಸಾಹತು ಮಾಡಿಕೊಂಡಾಗ  ಅವರನ್ನು ಮೆಚ್ಚಿಸುವ ಸಲುವಾಗಿ ಮತ್ತು ಸಮಾಜದ ಇತರರ ಮುಂದೆ ಕೊಚ್ಚಿಕೊಳ್ಳುವ ಸಲುವಾಗಿ ಕಲಿತ ಇಂಗ್ಲೀಷ್ ಭಾಷೆ, ಬ್ರಿಟೀಷರು ಭಾರತವನ್ನು ಬಿಟ್ಟು 75ವರ್ಷಗಳಾದರೂ ಇಂಗ್ಲೀಷಿನಲ್ಲಿ ಮಾತನಾಡುವುದು ಪ್ರತಿಷ್ಠೆಯ ಸಂಕೇತ ಎಂಬ ದಾಸ್ಯದಲ್ಲೇ ಭಾರತೀಯರು ಮುಳುಗಿರುವುದು ನಿಜಕ್ಕೂ ಶೋಚನೀಯವಾಗಿದೆ.

ಇಂತಹ ದಾಸ್ಯಕ್ಕೆ ಇತ್ತೀಚಿನ ಒಂದೆರಡು ಉದಾಹರಣೆಯನ್ನು ಇಲ್ಲಿ ನೀಡುವುದು ಉಚಿತವೆನಿಸುತ್ತದೆ.

ಕೆಲ ದಿನಗಳ ಹಿಂದೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಪತಿಷ್ಠಿತ ಬಡಾವಣೆಯೊಂದರಲ್ಲಿ ತರಕಾರಿ ತರಲು ತರಕಾರಿ ಅಂಗಡಿಗೆ ಹೋಗಿ, ಅಲ್ಲಿನ ವ್ಯಾಪಾರಿ ನೋಡಲು ಶುದ್ಧವಾದ ಗ್ರಾಮೀಣ ವ್ಯಕ್ತಿಯಂತೆಯೇ ಇದ್ದರೂ, ಯಾವುದೇ ತರಕಾರಿ ಮತ್ತು ಹಣ್ಣುಗಳನ್ನು ಕನ್ನಡದಲ್ಲಿ ಕೇಳಿದರೂ ಅದಲ್ಲಿ ಬೀನ್ಸ್, ಬ್ರಿಂಜಾಲ್, ಕ್ಯಾಪ್ಸಿಕಾಂ, ರೆಡ್ ಚಿಲ್ಲೀಸ್ ಎಂದು ಇಂಗ್ಲೀಷಿನಲ್ಲೇ ಹೇಳುತ್ತಿದ್ದದ್ದನ್ನು ಕೇಳಿ, ಏನಪ್ಪಾ ನೀನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇದ್ದೀಯೋ? ಇಲ್ಲವೇ ಯಾವುದಾದರೂ ವಿದೇಶದಲ್ಲಿ ಇದ್ದೀಯೋ? ಎಂದು ಕೇಳಿದಾಗ, ಏನು ಮಾಡೋದು ಸ್ವಾಮೀ, ನಮ್ಮಲ್ಲಿ ಬರುವ ಹೆಚ್ಚಿನವರಿಗೆ ಕನ್ನಡ ಗೊತ್ತಿದ್ದರೂ, ಠಸ್ಸು ಪುಸ್ಸು ಎಂದು ಇಂಗ್ಲೀಷಿನಲ್ಲೇ ಕೇಳುವುದರಿಂದ ಕಾಲಾಯ ತಸ್ಮೈ ನಮಃ ಎಂದು ಅವರಿಗೆ ಇಷ್ಟವಾಗುವ ಹಾಗೇ ಮಾತಾನಾಡ್ತೀವಿ. ಎಲ್ಲಾ ಹೊಟ್ಟೇ ಪಾಡು ಸ್ವಾಮೀ ಎಂದಾಗ, ಛೇ! ಎಂದು ಎನಿಸಿದ್ದು ಸುಳ್ಳಲ್ಲ.

ಇನ್ನು ಯಾವುದೇ ಮದುವೆ, ಮುಂಜಿ, ನಾಮಕರಣ ಬಿಡಿ ತಿಥಿಗಳಲ್ಲಿಯೂ ಅಡಿಗೆ ಬಡಿಸುವವರು ಕನ್ನಡದಲ್ಲಿ ಮಾತಾನಾಡುವುದೇ ಇಲ್ಲಾ ಅನ್ನ, ಸಾರು, ಹುಳಿ, ಮೊಸರು, ಮಚ್ಚಿಗೆ ಪಲ್ಯ ಕೋಸಂಬರಿ, ಗೊಜ್ಜು, ಹುಳಿದೊವ್ವೆ, ಚಿತ್ರಾನ್ನಾ, ಹೀಗೆ ಹೆಸರು ಕೇಳಿದ ತಕ್ಷಣವೇ ಬಾಯಲ್ಲಿ ನೀರುರಿಸುವಂತಿದ್ದರೂ, ಅಡುಗೆ ಬಡಿಸುವ ಭಟ್ಟರು ಮಾತ್ರಾ, ವೈಟ್ ರೈಸ್, ಕಲರ್ ರೈಸ್, ಸಾಂಬಾರ್, ರಸಂ, ಘೀ, ಕರ್ಡ್ಸ್, ಬ್ರಿಜಾಂಲ್ ಕರಿ, ಪಿಕ್ಕಲ್ಸ್, ಸ್ವೀಟ್ಸ್ ಬಿಡಿ ಕುಡಿಯುವ ನೀರಿಗೂ ವಾಟರ್ ಬಾಟೆಲ್ ಎಂದು ಹೇಳುವ ಮಟ್ಟಿಗೆ ಬಂದಿದ್ದಾರೆ ಎಂದರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಮ್ಮ ಭಾರತೀಯ ಭಾಷೆಗಳೆಲ್ಲವೂ ಮೃತ ಭಾಷೆಗಳಾಗುವ ದಿನ ದೂರವಿಲ್ಲ ಎಂಬುದನ್ನು ನೆನೆದು ದುಃಖವಾಗುತ್ತದೆ.

ಇದು ಕೇವಲ ಪಟ್ಟಣಗಳಿಗಷ್ಟೇ ಸೀಮಿತವಾಗಿರದೇ ಸಣ್ಣ ಸಣ್ಣ ಹಳ್ಳಿಗಳಿಗೂ ತಲುಪಿಯಾಗಿದೆ.  ಸಣ್ಣ ಸಣ್ಣ ಊರುಗಳಲ್ಲಿಯೂ Internationa Schoolsಗಳು ಆರಂಭವಾಗಿ, ಸರ್ಕಾರಿ ಶಾಲೆಗಳಿಗೆ ಮಕ್ಕಳೆ ಇಲ್ಲವಲ್ಲಾ ಎಂದು ಕೇಳಿದಾಗ, ಯಾಕೆ ಸ್ವಾಮೀ ಬಡವರ ಮಕ್ಕಳು ಇಂಗ್ಲೀಷ್ ಕಲಿಬಾರ್ದಾ! ಎನ್ನುವ ಕೊಂಕು ಬೇರೆ ಎತ್ತುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲೀಷ್ ಕಲಿತರೆ ಬೇಸರವಿಲ್ಲಾ. ಆದರೆ ಅದನ್ನೇ ಮನೆಯಲ್ಲೂ ಮುಂದುವರೆಸಿದಾಗ ಮಾತ್ರವೇ ತೊಂದರೆ. ನಮ್ಮ  ಭಾರತೀಯ ಭಾಷೆಗಳಲ್ಲಿ ನಮ್ಮ ಪ್ರತಿಯೊಂದು ಸಂಬಂಧಕ್ಕೂ ಒಂದೊಂದು ಸುಂದರವಾದ ಹೆಸರಿದೆ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ ದೊಡ್ಡಪ್ಪ, ಅತ್ತೇ ಮಾವ, ಅತ್ತಿಗೆ-ನಾದಿನಿ, ಆದರೆ ಇಂಗ್ಲೀಷಿನಲ್ಲಿ  ಈ ಎಲ್ಲಾ ಸಂಬಂಧಕ್ಕೂ  ಒಂದೇ ಶಬ್ಧ ಅಂಕಲ್ ಮತ್ತು ಆಂಟಿ ಎಂಬುದಾಗಿದ್ದು, ಇದೇ ಆಂಟಿಯನ್ನೇ ಹಳ್ಳಿಗಳಲ್ಲೂ ಅಂಟಿಸಿಕೊಂಡಾಗಿದೆ. ಅಕ್ಕಾ  ಅಣ್ಣಾ ಮಾಮ ಈ  ಎಲ್ಲಾ ಪದಗಳು ಮಾಯವಾಗಿ ಬ್ರೋ, ಸಿಸ್, ಅಂಕಲ್, ಮಮ್ಮಿ ಡ್ಯಾಡಿ ಪದಗಳನ್ನು ಕೇಳಲು ಕರ್ಣ ಠೋರವಾಗಿರುವುದಂತೂ ಸತ್ಯ.

ಈ ಇಂಗ್ಲೀಷ್ ವ್ಯಾಮೋಹ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ರಾಮ, ಕೃಷ್ಣ, ಗೋವಿಂದ, ಕೇಶವ, ಶಿವ, ಲಕ್ಷ್ಮೀ ಕಮಲ, ಸರಸ್ವತಿ, ಲತಾ  ಎಂಬ ದೇವಾನು ದೇವತೆಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟು ಪ್ರತೀ ಬಾರಿ ಆ  ಹೆಸರುಗಳನ್ನು ಕರೆಯುತ್ತಿದ್ದಾಗ ಪರೋಕ್ಷವಾಗಿ ಭಗವಂತನ ನಾಮ ಸ್ಮರಣೆ ಆಗುತ್ತದೆ  ಎಂಬುದು ನಮ್ಮ ಹಿರಿಯರ ಭಾವನೆಯಾಗಿತ್ತು. ಆದರೆ ಇಂದು ಅವೆಲ್ಲವೂ ಮಾಯವಾಗಿ ಆ ಹೆಸರುಗಳೂ ಇಂಗ್ಲೀಷ್ ಮಯವಾಗಿದೆ. ಮಕ್ಕಳಿಗೆ ಬಿಡಿ, ಮನೆಯ ನಾಯಿ ಮರಿಗಳಿಗೂ ಇಂಗ್ಲೀಷ್ ಹೆಸರನ್ನಿಟ್ಟು ಅವುಗಳಿಗೂ ಟಾಮೀ, ಕಮ್, ಗೋ, ಸಿಟ್ ಎಂದು ಇಂಗ್ಲೀಷ್ ನಲ್ಲೇ ಮಾತನಾಡಿಸುವ ಪರಿ ನಿಜಕ್ಕೂ ವಿಪರ್ಯಾಸವೇ ಸರಿ.

ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲ ಗುರುಗಳು ಎಂಬುದು ನಿರ್ವಿವಾದವಾದ ಸಂಗತಿ. ಹಿಂದೆಲ್ಲಾ ಮೆನೆಯಲ್ಲಿ ಚಿಕ್ಕ ಮಕ್ಕಳಿಗೆ ತಮ್ಮ ತಮ್ಮ ಭಾಷೆಯ ದೇವರ ಹಾಡುಗಳು, ಶ್ಲೋಕಗಳನ್ನು ಹೇಳಿಕೊಡುತ್ತಿದ್ದ ಕಾಲವೆಲ್ಲಾ ಬಯಲಾಗಿ ಅಲ್ಲೂ ಸಹಾ ಬಾ ಬಾ ಬ್ಲಾಕ್ ಷಿಪ್ ಹ್ಯಾವ್ ಯು ಎನಿ ಉಲ್? ಎಂದೋ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್..  ಹೀಗೆ  ಚಿಕ್ಕಂದಿನಿಂದಲೇ ಎಲ್ಲವೂ  ಆಂಗ್ಲ ಮಯವಾಗಿರುವುದು ನಿಜಕ್ಕೂ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೇವೆ ಎನಿಸುತ್ತಿದೆ. ಇನ್ನು ಮಕ್ಕಳಿಗೆ ಬೆಕ್ಕು, ಇಲಿ, ನಾಯಿ, ಆನೆ, ಹುಲಿ, ಸಿಂಹ, ಒಂಟೆ, ಕುದುರೆ ಮೇಕೆ ಎಂದು ಗೋಡೆಯ ಮೇಲೆ ನೇತು ಹಾಕಿರುತ್ತಿದ್ದ ಪಟವನ್ನು ತೋರಿಸಿ ಹೇಳಿಕೊಡುತ್ತಿದ್ದ ಕಾಲವೆಲ್ಲಾವೂ ಮಾಯವಾಗಿ ಆ ಜಾಗದಲ್ಲಿ,  Cat, Rat, Dog, Elephant, Tiger, Lion, Camel, Horce, Goat ಪದಗಳಲ್ಲದೇ, ಇಂದಿನ ಮಕ್ಕಳಿಗೆ ಯಾವುದೇ  ತರಕಾರಿಗಳ ಸ್ಥಳೀಯ ಹೆಸರುಗಳೇ ತಿಳಿಯದೇ ಎಲ್ಲವೂ beans, carrot, cucumber, pumpkin, Beetroot, coriander, curry leave ಎಂದೇ ಹೇಳಿಕೊಡುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

lang3ಮಕ್ಕಳು ಚಿಕ್ಕವರಿದ್ದಾಗ ಅವರ ಮಾತೃಭಾಷೆಯಲ್ಲಿ ಹೇಳಿಕೊಟ್ಟಲ್ಲಿ ಅವರುಗಳು ಅದನ್ನು ಚೆನ್ನಾಗಿ ಕಲಿತುಕೊಳ್ಳುತ್ತಾರೆ. ಹೀಗೆ ಮಾತೃ ಭಾಷೆಯನ್ನು ಚೆನ್ನಾಗಿ ಕಲಿತವರು ಮುಂದೆ ಯಾವುದೇ ಭಾಷೆಯನ್ನಾದರು ಸುಲಭವಾಗಿ ಕಲಿತುಕೊಳ್ಳುತ್ತಾರೆ ಎಂದು ಶಿಕ್ಷಣ ತಜ್ಞರೇ ಹೇಳಿದ್ದರೂ ನಮ್ಮ ಭಾರತೀಯರಿಗೆ ಅದೇನೋ ಇಂಗ್ಲೀಷ್ ವ್ಯಾಮೋಹ. ತಮ್ಮ ಮಕ್ಕಳು ಚಿಕ್ಕಂದಿನಿಂದಲೇ, ಟಸ್ಸು ಪುಸ್ಸು ಎಂದು ಇಂಗ್ಲೀಷ್ನಲ್ಲಿ ಮಾತಾಡಿದರೇ ಅವರಿಗೆ ಅದೇನೋ ಕರ್ಣಾನಂದ ಎನ್ನುವಂತೆ ವರ್ತಿಸುವುದು ಬೇಸರದ ಸಂಗತಿಯಾಗಿದೆ.

ಹಾಗೆಂದ ಮಾತ್ರಕ್ಕೆ  ಇಂಗ್ಲೀಷ್ ಭಾಷೆಯೇ ಬೇಡ ಎಲ್ಲವೂ ಮಾತೃ ಭಾಷೆ ಇಲ್ಲವೇ ಸ್ಥಳೀಯ ಭಾಷೆಯಲ್ಲೇ ಇರಬೇಕು ಎನ್ನುವುದು ನಮ್ಮ ವಾದವಲ್ಲ. ಅವಶ್ಯಕತೆ ಇದ್ದ ಕಡೆ ಇಂಗ್ಲೀಷ್ ಪದಗಳನ್ನು ಬಳಸುವುದು ತಪ್ಪಲ್ಲ. ಉದಾ. Bus, Car, Lorry, Train, Engineer ಮುಂತಾದ ಪದಗಳನ್ನು  ಹಾಗೇ ಇಂಗ್ಲೀಷ್ ನಲ್ಲಿಯೇ ಬಳಸಿದರೆ ಉತ್ತಮ ಎನಿಸುತ್ತದೆ.

ಕೆಲ ವರ್ಷಗಳ ಹಿಂದೆ ಕೆಲಸವನ್ನು ಹುಡುಕಿಕೊಂಡು ನಮ್ಮ ಸ್ನೇಹಿತ ಹೇಳಿದ್ದ ಕಂಪನಿಗೆ ಹೋಗಿದ್ದೆ.  ಆ ಕಂಪನಿಯಲ್ಲಿ ಮಾಲಿಕರಿಂದ ಹಿಡಿದು ಎಲ್ಲರೂ ಕನ್ನಡಿಗರೇ ಆಗಿದ್ದು, ಕನ್ನಡಿಗರಿಗೆ ತಮ್ಮ ಕಛೇರಿಯಲ್ಲಿ  ಮೊದಲ ಆದ್ಯತೆಯನ್ನು ನೀಡುವ ಮನಸ್ಥಿತಿಯವರಾಗಿದ್ದ ವಿಷಯ ಕೇಳಿ ನನಗೂ ಬಹಳ ಸಂತೋಷವಾಗಿತ್ತು.  ಆ ಕಛೇರಿಗೆ ಹೋಗಿ ನನ್ನ ಪರಿಚಯ ಮಾಡಿಕೊಂಡಾಗ, ಎಲ್ಲಿ ನಿಮ್ಮ ಜಾತಕ ಕೊಡಿ ಎಂದು ಕೇಳಿದಾಗ  ಇವರು ಕೆಲಸಕ್ಕೆ ಕರೆದಿದ್ದಾರೋ ಇಲ್ಲವೇ ಮದುವೆಗೆ ಹೆಣ್ಣು ಹುಡುಕುತ್ತಿದ್ದಾರೋ? ಎಂದು ತಬ್ಬಿಬ್ಬಾದಾಗ, ನನ್ನ ಕಸಿವಿಸಿಯನ್ನು ಅರ್ಥಮಾಡಿಕೊಂಡ ನನ್ನ ಸ್ನೇಹಿತ, ಲೋ, ನಿನ್ನ Resume ಕೊಡೋ ಎಂದಾಗ, ಅವರು Resumeಗೆ ಜಾತಕ ಎನ್ನುತ್ತಾರೆ ಎಂದು ಅರಿವಾಗಿ ಇದು ಏಕೋ ಅತಿಯಾಯಿತು ಎಂದೆನಿಸಿದ್ದಂತೂ ಸುಳ್ಳಲ್ಲ.

ಇನ್ನು ಇಂಗ್ಲೀಷ್ ಭಾಷೆಗೆ ನಮ್ಮ ಸ್ಥಳೀಯ ಭಾಷೆಗಳು ಸಡ್ಡು ಹೊಡೆಯಬೇಕಾದರೆ ಅದಕ್ಕೆ ಖಾಸಗೀ ಕಂಪನಿಗಳು ಮತ್ತು ಸರ್ಕಾರದ ಸಹಕಾರವೂ ಬೇಕೆನಿಸುತ್ತದೆ. ಕೇವಲ ಇಂಗ್ಲೀಷ್ ಭಾಷೆಯನ್ನು ಕಲಿತವರಿಗೆ ಮಾತ್ರಾ ಅದ್ಯತೆ  ಎಂಬವ ಕಡೆ ಸ್ಥಳೀಯ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದವರಿಗೂ ಔದ್ಯಮಿಕ ವಲಯದಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ , ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಿ/ಸರ್ಕಾರೇತರ/ಸ್ವಾಯತ್ತ ಸಂಸ್ಥೆಗಳಲ್ಲಿ  ಉದ್ಯೋಗಾವಕಾಶಗಳು ಸೃಷ್ಟಿಯಾದಲ್ಲಿ  ಕಷ್ಟ ಪಟ್ಟು ಇಂಗ್ಲೀಷ್ ಕಲಿಯಲು ಪರದಾಡುವ ಬದಲು ಸ್ಥಳೀಯ ಭಾಷೆಯನ್ನು ಕಲಿತು ಸ್ವಾವಲಂಭಿಗಳಾಗುತ್ತಾರೆ.

ವಿಶ್ವ ವಿಖ್ಯಾತ ಇಂಜೀನಿಯರ್ ಸರ್ ಎಂ ವಿಶ್ವೇಶ್ವರಯ್ಯನವರು, ಕುವೆಂಪು, ಮಾಸ್ತಿ, ಬಿಂಎಂಶ್ರೀ ಅವರು ಅಷ್ಟೇ ಏಕೆ ಸಾಫ್ಟ್ವೇರ್ ಕಂಪನಿಯ ದಿಗ್ಗಜರುಗಳಾದ ಇನ್ಫೋಸಿಸ್ ನಾರಾಯಣ ಮೂರ್ತಿಗಳು ಅವರ ಪತ್ನಿ ಸುಧಾಮೂರ್ತಿಗಳು, ನಂದನ್ ನೀಲೇಕಣಿ ಮುಂತಾದ ದಿಗ್ಗಜರುಗಳೆಲ್ಲಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲಿತದ್ದು ತಮ್ಮ ಮಾತೃಭಾಷೆಗಳಲ್ಲೇ. ನಂತರದ ದಿನಗಳಲ್ಲಿ ಅವರುಗಳು ಕೇವಲ ವ್ಯವಹಾರಕ್ಕಾಗಿ  ಇಂಗ್ಲೀಷ್ ಭಾಷೆಯನ್ನು ಕಲಿತು ಇಂದು ವಿಶ್ವ ವಿಖ್ಯಾತರಾಗಿದ್ದಾರೆ ಎನ್ನುವುದನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡಬೇಕು. ಊಟದ ತಟ್ಟೆಯಲ್ಲಿ ಉಪ್ಪಿನ ಕಾಯಿ, ಪಲ್ಯ, ಕೋಸಂಬರಿ, ಗೊಜ್ಜು ಇವೆಲ್ಲವೂ ಕೇವಲ ನಾಲಿಗೆ ರುಚಿಗಾದರೇ, ಹೊಟ್ಟೆಯನ್ನು ತುಂಬಿಸುವುದು ಮಾತ್ರ ಅನ್ನಾ ಸಾರು ಎನ್ನುವಂತೆ ನಮ್ಮ ಮಾತೃ ಭಾಷೆಯೂ ಸಹಾ ಅನ್ನದಂತಾಗಿದ್ದರೆ, ಇಂಗ್ಲೀಷ್ ಕೂಡೇ ಸೇರಿದಂತೆ ಉಳಿದ ಭಾಷೆಗಳು ನೆಂಚಿಕೊಳ್ಳುವ ವಸ್ತುಗಳಂತಾಗಿದ್ದರೆ ಉತ್ತಮ.

ಹಾಂ, ಇನ್ನೊಂದು ಮಾತು. ಇಂಗ್ಲೀಷ್ ಮತ್ತು ಕೆಲವು ಭಾರತೀಯ ಭಾಷೆಗಳಲ್ಲಿ ಸೀಮಿತ ವರ್ಣಮಾಲೆಗಳು ಇರುವ ಕಾರಣ ಬರೆಯುವುದೇ ಒಂದು ಓದುವುದೇ ಒಂದು ಆಗಿರುವಾಗ, ಆಡಿದ್ದನ್ನೇ ಬರೆಯಬಲ್ಲ ಮತ್ತು ಬರೆದದ್ದನ್ನೇ ಓದಬಲ್ಲಂತಹ ‍ಸುಂದರವಾದ ಭಾಷಾ ಸಾಮರ್ಥ್ಯ ಇರೋದು ಕೇವಲ ನಮ್ಮ ಭಾರತೀಯ ಭಾಷೆಗಳಿಗಷ್ಟೇ ಎನ್ನುವ ಹೆಮ್ಮೆಯೂ ನಮ್ಮದೇ. ಹಾಗಾಗಿ ಇಂಗ್ಲೀಷ್ ಕಲಿತರೇ ಮಾತ್ರಾ ಪ್ರತಿಷ್ಠೆಯ ಸಂಕೇತ ಎನ್ನುವುದನ್ನು ಮರೆತು ನಮ್ಮ ಭಾಷೆಯನ್ನೇ ಚೆನ್ನಾಗಿ ಕಲಿತು ಅದನ್ನೇ ಉಳಿಸೋಣ ಮತ್ತು ಬೆಳಸೋಣ ಅಲ್ವೇ?

ಇದೇ ಲೇಖನ ವಿಶ್ವ ಸಂವಾದ ಕೇಂದ್ರದ ವೆಬ್ ಸೈಟಿನಲ್ಲೂ ಪ್ರಕಟವಾಗಿದೆ. https://vskkarnataka.org/english-indian-language/

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

Leave a reply to ಶ್ರೀಕಂಠ ಬಾಳಗಂಚಿ Cancel reply