ಅದು ಎಂಭತ್ತರ ದಶಕ ಭಾರತೀಯ ಚಿತ್ರರಂಗ ಕಂಡ ಅದ್ಭುತ (ವಯಕ್ತಿಕ ಮತ್ತು ರಾಜಕೀಯ ಸಿದ್ದಾಂತದ ಹೊರತು ಪಡಿಸಿ) ನಟ ಕಮಲಹಾಸನ್ ಅವರ ತಮಿಳು ಚಿತ್ರವಾದ ನಾಯಗನ್ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆಯುತ್ತಿದ್ದು, ಅದೇ ಚಿತ್ರದಲ್ಲಿ ಕನ್ನಡ ಪ್ರಖ್ಯಾತ ನಟಿ ತಾರಾ (ಅನುರಾಧ) ಕೂಡಾ ಸಹನಟಿಯಾಗಿ ನಟಿಸುತ್ತಿದ್ದರು. ಚಿತ್ರೀಕರಣದ ಬಿಡುವಿನಲ್ಲಿ ಕಮಲ್ ಹಾಗೇ ತಾರಾ ಅವರೊಂದಿಗೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ತಮ್ಮ ಮತ್ತು ಕನ್ನಡ ಚಿತ್ರರಂಗದ ಅವಿನಾಭಾವ ಸಂಬಧವನ್ನು ಮೆಲುಕು ಹಾಕುತ್ತಾ, ಹಾಗೇ ಕುತೂಹಲಕ್ಕೆ ನಿಮ್ಮ ಅಭಿಪ್ರಾಯದಲ್ಲಿ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಯಾರು? ಎಂದು ಕೇಳಿದಾಗ, ಒಂದು ಕ್ಷಣ ತಬ್ಬಿಬ್ಬಾದ ನಟಿ ತಾರಾ, ಆ ಕ್ಷಣದಲ್ಲಿ ಏನೂ ತೋಚದೇ, ಸರ್, ಇದೆಂತಹ ಪ್ರಶ್ನೆ ಕೇಳುತ್ತಿದ್ದೀರೀ? ನೀವೇ ಭಾರತೀಯ ಚಿತ್ರರಂಗದ ಶ್ರೇಷ್ಠ ನಟರು ಎಂದು ಹೇಳಿದಾಗ, ಕಮಲ್ ಹಾಗೇ ನಗುತ್ತಾ, ನೀವು ನನ್ನನ್ನು ಹೀಗೆ ಹೊಗಳುತ್ತಿರುವುದು ನನಗೆ ಸುತಾರಾಂ ಇಷ್ಟವಾಗುತ್ತಿಲ್ಲ. ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಅಲೆದಾಡಿದ್ರು ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿರುವ ಅನಂತ್ ನಾಗ್ ಅವರಿಗಿಂತ ಶ್ರೇಷ್ಠ ನಟರು ಬೇಕೇ? ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಅನಂತ್ ನಾಗ್ ಭಾರತೀಯ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರು ಎಂದಿದ್ದರಂತೆ. ಹೀಗೆ ಕಮಲ್ ಅವರಿಂದ ಕಮಾಲ್ ಎನಿಸಿಕೊಂಡಿದ್ದ ಅನಂತ್ ನಾಗರಕಟ್ಟೆ ಎಲ್ಲರ ಪ್ರೀತಿಯ ಅನಂತ್ ನಾಗ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.
ಚೆನ್ನಾಗಿ ನೃತ್ಯ ಮತ್ತು ಫೈಟಿಂಗ್ ಮಾಡಲು ಬರುವವರೇ ನಾಯಕರಾಗಲು ಅರ್ಹರು ಎಂಬುದನ್ನು ಸುಳ್ಳು ಮಾಡಿದ, ತನ್ನ ಸಹಜ ಅಭಿನಯದಿಂದಲೇ, ಕನ್ನಡಿಗರ ಮನಸೂರೆಗೊಂಡ ಅನಂತ್ ನಾಗ್ ಉತ್ತರ ಕನ್ನಡದ ಚಿತ್ರಾಪುರ ಮಠದ ಆನಂದ ಆಶ್ರಮದಲ್ಲಿ ಮ್ಯಾನೇಜರ್ ಆಗಿದ್ದ ತಂದೆ ಸದಾನಂದ ನಾಗರಕಟ್ಟೆ ಮತ್ತು ತಾಯಿ ಆನಂದಿ ಅವರ ಹಿರಿಯ ಮಗನಾಗಿ 1948ರ ಸೆಪ್ಟೆಂಬರ್ 4ರಂದು ಜನಿಸುತ್ತಾರೆ. ಮಠದ ಆಶ್ರಮದ ವಾತಾವರಣ ಎಂದ ಮೇಲೆ ಸಹಜವಾಗಿಯೇ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳು ಹೆಚ್ಚಾಗಿರುವ ಕಾರಣ ಅನಂತ್ ಮತ್ತು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ ಮತ್ತು ನಟ ಶಂಕರ್ ಅಲ್ಲಿಯ ವಾತಾವರಣಕ್ಕೆ ತಕ್ಕಂತೆ ಧಾರ್ಮಿಕ ಚಟುವಟಿಕೆಗಳ ಜೊತೆ ಜೊತೆಯಲ್ಲೇ ಬಾಲ್ಯದ ಶಿಕ್ಷಣ ಆಟ ಪಾಠಗಳಲ್ಲಿ ತೊಡಗಿಕೊಳ್ಳುತ್ತಾರೆ. ಮನೆ ಮಾತು ಕೊಂಕಣಿ ಆದರೆ ಪ್ರಾಥಮಿಕ ಶಿಕ್ಷಣ ನಡೆದದ್ದು ಕನ್ನಡ ಮಾಧ್ಯಮದಲ್ಲಿ.
ಅವರಿದ್ದ ಸ್ಥಳ ಸ್ವಲ್ಪ ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವರ ತಂದೆ ಅನಂತ್ ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸುತ್ತಾರೆ. ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಾಲೆಯ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅನಂತ್, ಮರಾಠಿ ಮತ್ತು ಆಂಗ್ಲಭಾಷೆಯ ಗಂಧಗಾಳಿಯೂ ಗೊತ್ತಿಲ್ಲದೇ ಏಕಾಏಕಿ ಮುಂಬೈಗೆ ಬಂದ ಕಾರಣ ಮೊದಲ ವರ್ಷ ಅನುತ್ತೀರ್ಣರಾಗುತ್ತಾರೆ. ಆದರೆ ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ಅದನ್ನೇ ಸವಾಲಾಗಿ ಸ್ವೀಕರಿಸಿ ಮನೆಯಲ್ಲೇ ಕುಳಿತುಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಮರು ವರ್ಷದಲ್ಲೇ S.S.L.C. ತೇರ್ಗಡೆಯಾಗಿದ್ದಲ್ಲದೇ, ಅದೇ ಸಮಯದಲ್ಲೇ ಹೊತ್ತು ಕಳೆಯಲೆಂದು ಮರಾಠಿ ನಾಟಕಗಳತ್ತ ಮುಖ ಮಾಡುತ್ತಾರೆ.
ನೋಡಲು ಅತ್ಯಂತ ಸುರದ್ರೂಪಿಯಾಗಿದ್ದ ಅನಂತ್ ಆವರನ್ನು 17-18 ನೇ ವಯಸ್ಸಿನಲ್ಲೇ ಮರಾಠಿ ರಂಗಭೂಮಿಯ ತನ್ನ ಎರಡೂ ಕೈಗಳಿಂದ ಸೆಳೆದುಕೊಂಡಿದ್ದಲ್ಲದೇ, ನೋಡ ನೋಡುತ್ತಲೇ ಕೆಲವೇ ಕೆಲವು ವರ್ಷಗಳಲ್ಲಿ ಮರಾಠಿ ರಂಗಭೂಮಿಯಲ್ಲಿ ಅನಂತ್ ಅತ್ಯಂತ ಜನಪ್ರಿಯ ನಟರಾಗಿ ಗುರುತಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲೇ, ಕರ್ನಾಟಕ ಮೂಲದ ಹಿಂದಿಯ ಪ್ರಸಿದ್ಧ ನಿರ್ದೇಶಕರಾಗಿದ್ದ ಶ್ರೀ ಶ್ಯಾಂ ಬೆನೆಗಲ್ ಅವರು ತಮ್ಮ ಅಂಕುರ್ ಸಿನಿಮಾಕ್ಕಾಗಿ ಹೊಸಮುಖವನ್ನು ಹುಡುಕುತ್ತಿದ್ದ ವಿಷಯ ಮತ್ತೊಬ್ಬ ಮರಾಠಿ ರಂಗಭೂಮಿ ಮತ್ತು ಹಿಂದೀ ಚಿತ್ರ ನಟ ಅಮುಲ್ ಪಾಲೇಕರ್ ಅವರ ಕಿವಿಗೆ ಬಿದ್ದು ಅವರು ಅನಂತ್ ಅವರನ್ನು ಶ್ಯಾಂ ಬೆನಗಲ್ ಅವರಿಗೆ ಪರಿಚಯಿಸುವ ಮೂಲಕ ಅನಂತ್ ಅವರ ಸಿನಿ ಪಯಣ ಆರಂಭವಾಗುತ್ತದೆ. ಅದಾದ ನಂತರ ಅಮೋಲ್ ಪಾಲೇಕರ್ ನಿರ್ದೇಶನದ ಅನಹತ್ ಚಿತ್ರದಲ್ಲೂ ನಟಿಸಿದ ಅನಂತ್ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಒಂದರ ಹಿಂದೆ ಒಂದರಂತೆ, ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಯುವ, ಕೊಂಡುರಾ, ಉತ್ಸವ್ ಮುಂತಾದ ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಾರೆ.
1973ರಲ್ಲಿ ಕನ್ನಡದ ಹೆಸರಾಂತ ನಿರ್ದೇಶಕರಾದ ಶ್ರೀ ಪಿ. ವಿ. ನಂಜರಾಜ ಅರಸ್ ಅವರ ಸಂಕಲ್ಪ ಎಂಬ ಹೊಸ ಅಲೆಯ ಚಿತ್ರದ ಮೂಲಕ ಅನಂತ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 1975ರಲ್ಲಿ ಜಿ.ವಿ. ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ಸಂಗೀತಗಾರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಅನಂತ್ ಮುಂದೆ 1977ರ ದೊರೈ ಭಗವಾನರ ಬಯಲುದಾರಿ ಚಿತ್ರದಲ್ಲಿ ಚಲುವೆ ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಕಲ್ಪನಾಳನ್ನು ಹುಡುಕುವ ಪಾತ್ರದಲ್ಲಿ ನಟಿಸಿದ ಮೇಲಂತೂ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡ ನಂತರ ಅನಂತ್ ಅವರಿಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಅನಂತ್ ಅವರ ಸಹಜಾಭಿನಯಯವನ್ನು ಮೆಚ್ಚಿದ್ದ ಅನೇಕ ಚಿತ್ರ ನಿರ್ದೇಶಕರು ತಮ್ಮ ಚಿತ್ರದ ಕೆಲವೊಂದು ಪಾತ್ರಗಳಿಗೆ ಅನಂತ್ ಅವರೇ ಬೇಕು ಎಂದು ಕರೆದುಕೊಂಡು ಹೋಗಿ ಪಾತ್ರಗಳನ್ನು ಕೊಟ್ಟ ಕಾರಣ ಅನಂತ್ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಪ್ತ ಭಾಷಾ ನಟರಾಗುವ ಮೂಲಕ ಕೇವಲ ಕರ್ನಾಟಕಕ್ಕೇ ಸೀಮೀತರಾಗದೇ, ರಾಷ್ಟ್ರಮಟ್ಟ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ನಟರಾಗಿ ಬೆಳದದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಅನಂತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ನಂಜರಾಜ ಅರಸ್ ಅವರು ಅನಂತನಾಗ್ ಮತ್ತು ವಿಷ್ಣುವರ್ಧನ್ ಅವರಿಬ್ಬರ ಜೋಡಿಯಲ್ಲಿ ಡಾ. ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ದಾಟು ಚಿತ್ರವನ್ನು ಆಧರಿಸಿ ಆರಂಭಿಸಿದ ಸಿನಿಮಾ ಕೆಲವು ಕಾರಣಗಳಿಂದ ನಿಂತು ಹೋದದ್ದು ಅಂದಿನ ಸಿನಿಪ್ರಿಯರಿಗೆ ಬೇಸರವನ್ನು ತಂದಿದ್ದಂತೂ ಸುಳ್ಳಲ್ಲ.
ಅಂದಿನ ಸಿನಿಮಾಗಳು ನಾಯಕ ಪ್ರಧಾನವಾಗಿದ್ದು, ನಾಯಕ ಅನ್ಯಾಯದ ವಿರುದ್ಧ ಸಿಡಿದೆದ್ದು ಸಮಾಜಕ್ಕೆ ನ್ಯಾಯ ಒದಗಿಸುವ ಪಾತ್ರವೋ ಇಲ್ಲವೇ, ನಾಯಕಿಯೊಂದಿಗೆ ಹಾಡುತ್ತಾ, ನರ್ತಿಸುತ್ತಾ, ಮರ ಸುತ್ತುತ್ತಾ, ಆಗ್ಗಾಗ್ಗೆ ಖಳ ನಟರನ್ನು ಹೊಡೆಯುತ್ತಿರುವ ಪಾತ್ರಗಳಾದರೇ, ಅವರ ಜೊತೆ ಜೊತೆಯಲ್ಲೇ ಹಾಸ್ಯ ನಟರ ಪಾತ್ರಗಳೂ ಮತ್ತೊಂದು ಟ್ರಾಕ್ ನಲ್ಲಿ ನಡೆಯುತ್ತಿತ್ತು. ಈ ರೀತಿಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಅನಂತ್ ನಾಗ್, ನಾಯಕನೇ ಹಾಸ್ಯಪ್ರಧಾನ ಪಾತ್ರಗಳನ್ನು ಮಾಡಿದಾಗ ಜನರು ಅದನ್ನೂ ಒಪ್ಪಿ ಅಪ್ಪಿಕೊಂಡದ್ದು ಅನಂತ್ ಅವರಿಗೆ ವರದಾನವಾಯಿತು ಎಂದರೂ ತಪ್ಪಾಗದು.
ನಾರದನ ಪಾತ್ರದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ ನಂತರ, ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ದೊರೈ-ಭಗವಾನ್ ಅವರ ನಿರ್ದೇಶನದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಅವರ ಜೋಡಿ ಒಂದಾದ ಮೇಲೊಂದು ಸುಂದರ ಸಾಂಸಾರಿಕ ಚಿತ್ರಗಳನ್ನು ನೀಡುವ ಮೂಲಕ ಇವರಿಬ್ಬರೂ ನಿಜ ಜೀವನದಲ್ಲಿ ಸತಿ ಪತಿಗಳೇನೋ? ಇಲ್ಲವೇ ಮಧ್ಯಮ ವರ್ಗದ ಸಂಸಾರ ಎಂದರೆ ಈ ರೀತಿಯಾದ ಸುಂದರವಾದ ಸಂಸಾರ ಇರಬೇಕು ಎಂದು ಕೊಳ್ಳುವಷ್ಟು ಚನ್ನಾಗಿ ಅಭಿನಯಿಸುತ್ತಿದ್ದರು.
ಇವೆಲ್ಲದರ ನಡುವೆ ಅವರ ಒಡಹುಟ್ಟಿದ ಸಹೋದರ ಶಂಕರ್ ನಾಗ್ ಜೊತೆಯಲ್ಲಿ ಸಂಕೇತ್ ಎಂಬ ಡಬ್ಬಿಂಗ್ ಸ್ಟುಡಿಯೋ ಪ್ರಾರಂಭಿಸಿ ಕನ್ನಡದ ಹಿನ್ನಲೆ ಗಾಯಕರು ಮತ್ತು ಸಂಗೀತ ವಾದ್ಯಗಾರರಿಗೆ ಬೆಂಗಳೂರಿನಲ್ಲೇ ಕೈತುಂಬ ಕೆಲಸ ಸಿಗುವಂತೆ ಮಾಡಿದ್ದಲ್ಲದೇ, ಅಣ್ಣ ತಮ್ಮಂದಿರೇ ಸೇರಿಕೊಂಡು ತಮ್ಮದೇ ನಿರ್ಮಾಣದಲ್ಲಿ ರಮೇಶ್ ಭಟ್ ಅವರರೊಡಗೂಡಿ ಮಿಂಚಿನ ಓಟ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವು ಇರೋದು ಹೀಗೆ ಚಿತ್ರಗಳು, ದೂರದರ್ಶನಕ್ಕಾಗಿ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿ ಹೀಗೆ ಐದಾರು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ತಮ್ಮನ್ನು ತಾವು ಪರೀಕ್ಷಿಸಿಕೊಂಡಿದ್ದಲ್ಲದೇ, ಅನಂತ್ ನಾಗ್ ಯಾವುದೇ ರೀತಿಯ ಪಾತ್ರವನ್ನು ಸರಾಗವಾಗಿ ಮಾಡಬಲ್ಲರು ಎಂಬುದನ್ನು ನಿರೂಪಿಸಿದರು. ಇನ್ನು ಎಂಭತ್ತರ ದಶಕದಲ್ಲಿ ಅನಂತ್ ಮತ್ತು ಫಣಿರಾಮಚಂದ್ರ ಜೊತೆಯಲ್ಲಿ ರಮೇಶ್ ಭಟ್, ಮಾಸ್ಟರ್ ಆನಂದ್ ಮತ್ತು ವಿನಯಪ್ರಸಾದ್ ತಂಡದ ಸಾಲು ಸಾಲು ಹಾಸ್ಯ ಚಿತ್ರಗಳು ಕನ್ನಡಿಗರ ಮನಸ್ಸೂರೆಗೊಂಡಿತ್ತು.
ಇನ್ನು ವಯಕ್ತಿಕವಾಗಿ ಮುಂಬೈ ರಂಗಭೂಮಿ ಕಾಲದಿಂದಲೂ ಪರಿಚಯವಿದ್ದ ಮತ್ತು ಎಂಭತ್ತರ ದಶಕದಲ್ಲಿ ದೂರದರ್ಶನದ ಅತ್ಯಂತ ಜನಪ್ರಿಯ ಹಿಂದಿ ಧಾರವಾಹಿ ರಜನಿ ನಾಯಕಿ ಪ್ರಿಯಾ ತಂಡೂಲ್ಕರ್ ಅವರು ಅನಂತ್ ಅವರೊಂದಿಗೆ ಬಹಳ ಕಾಲ ಇರುತ್ತಿದ್ದ ಕಾರಣ, ಅವರಿಬ್ಬರೂ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿರುವಾಗ, ಯಾವುದೋ ವೈಮನಸ್ಯದಿಂದ ಪರಸ್ಪರ ದೂರವಾದಾಗ, ಅನಂತ್ ಮತ್ತು ಶಂಕರ್ ಇಬ್ಬರೊಂದಿಗೂ ನಾಯಕಿಯಾಗಿ ಅಭಿನಯಿಸಿದ್ದ ಪಂಜಾಬ್ ಮೂಲದ ಗಾಯತ್ರಿಯವರನ್ನು ಮದುವೆಯಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಅವರಿಬ್ಬರಿಗೂ ಅದಿತಿ ಎಂಬ ಮಗಳಿದ್ದು ಆಕೆಯೂ ಸಹಾ ಮದುವೆಯಾಗಿ ಸುಂದರ ದಾಂಪತ್ಯದ ಜೀವನವನ್ನು ನಡೆಸುತ್ತಿದ್ದಾರೆ.
ಎಂಭತ್ತರ ದಶಕದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರ ಪರಮ ಆಪ್ತರಾಗಿದ್ದ ಕಾರಣ ಅಣ್ಣ ತಮ್ಮಂದಿರಿಬ್ಬರೂ ಸಹಾ ಹೆಗಡೆಯವರ ಪರವಾಗಿ ಚುನಾವಣಾ ಪ್ರಚಾರ ಮಾಡುವ ಮೂಲಕ ಸದ್ದಿಲ್ಲದೆ ರಾಜಕೀಯಕ್ಕೂ ಅನಂತ್ ಕಾಲಿಟ್ಟಿದ್ದರು. ಎಲ್ಲವೂ ಚೆನ್ನಾಗಿಯೇ ಸಾಗುತ್ತಿದ್ದ ಸಮಯದಲ್ಲೇ, 30 ಸೆಪ್ಟಂಬರ್ 1990ರಂದು ಜೋಕುಮಾರ ಸ್ವಾಮಿ ಚಿತ್ರದ ಆರಂಭಕ್ಕಾಗಿ ಹೋಗುವ ಮಾರ್ಗದಲ್ಲೇ ದಾವಣಗೆರೆ ಬಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತಮ್ಮ ಶಂಕರ್ ನಾಗ್ ಆವರನ್ನು ಕಳೆದುಕೊಂಡ ಕೆಲವು ವರ್ಷಗಳ ಕಾಲ ಅಕ್ಷರಶಃ ಅನಂತ್ ಒಬ್ಬಂಟಿಯಾಗಿ ಹೋದರು.
ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಸೋತ ಅನಂತ್, ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿದ್ದಲ್ಲದೇ(MLC), 1994ರಲ್ಲಿ ಅವರು ವಾಸಿಸುತ್ತಿದ್ದ ಮಲ್ಲೇಶ್ವರಂ ಕ್ಷೇತ್ರದಲ್ಲಿ ಜೆಡಿಯು ಪರವಾಗಿ ಗೆಲುವು ಸಾಧಿಸಿದ್ದಲ್ಲದೇ, ಜೆ.ಹೆಚ್. ಪಟೇಲ್ ಅವರ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೆಲವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಹೇಳಿಕೊಳ್ಳುವಂತಹ ಸಾಧನೆ ಮಾಡದ ಕಾರಣ 2004ರ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತ ನಂತರ ಸಕ್ರೀಯ ರಾಜಕಾರಣದಿಂದ ಸ್ವಯಂ ನಿವೃತ್ತಿ ಹೊಂದಿ ಮತ್ತೆ ಸಿನಿಮಾಗಳತ್ತ ಮುಖ ಮಾಡಿದರು.
ಹಣ್ಣು ಮಾಗಿದಂತೆ ಹೆಚ್ಚು ರುಚಿಯಾಗಿರುತ್ತದೆ ಎನ್ನುವಂತೆ ನಾಯಕ ನಟನಿಂದ ಪೋಷಕನಟನಾದ ನಂತರ ಅನಂತ್ ಅವರ ಅಭಿನಯ ಮತ್ತಷ್ಟು ಪಕ್ವಗೊಂಡಿದ್ದನ್ನು ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಯೋಗರಾಜ್ ಭಟ್ ಬಳಸಿಕೊಂಡು ಮುಂಗಾರು ಮಳೆ, ಗಾಳಿಪಟ, ಸೇರಿದಂತೆ ತಮ್ಮ ಸಾಲು ಸಾಲು ಚಿತ್ರಗಳಲ್ಲಿ ಅನಂತ್ ನಾಗ್ ಅವರಿಗೆ ಅತ್ಯುತ್ತಮ ಪಾತ್ರಗಳನ್ನು ಕೊಡುವ ಮೂಲಕ ಅವರ ಅಬಿನಯಕ್ಕೆ ಮತ್ತಷ್ಟು ಮೆರಗನ್ನು ನೀಡಿದರೂ ಎಂದರೂ ತಪ್ಪಾಗದು. ಇತ್ತೀಚಿನ ವರ್ಷದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಿದ ಅಪಾರ ಯಶಸ್ಸು ಕಂಡ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಮರೆವಿನ ರೋಗಕ್ಕೆ ತುತ್ತಾದ ಒಬ್ಬ ವೃದ್ಧರಾಗಿ ನೀಡಿರುವ ಅಭಿನಯ ಅತ್ಯಂತ ಶ್ರೇಷ್ಠವಾಗಿದೆ. ಅದೇ ರೀತಿ ರಿಷಭ್ ಶೆಟ್ಟರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಯಸ್ಸಾದ ತುಂಟ ಮುದುಕ ನಂತರ ವಕೀಲಿಕೆ ನಡೆಸಿ ಮುಚ್ಚಿ ಹೋಗುತ್ತಿದ್ದ ಕನ್ನಡ ಶಾಲೆಯನ್ನು ಮಕ್ಕಳಿಗಾಗಿ ಉಳಿಸಿಕೊಟ್ಟ ಪಾತ್ರವಂತೂ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ
ಅನಂತ್ ನಾಗ್ ನಾಯಕರಾಗಿ ಉಚ್ವ್ರಾಯ ಸ್ಥಿತಿಯಲ್ಲಿರುವಾಗಲೇ, ಕನ್ನಡದ ಇತರೇ ನಾಯಕರೊಂದಿಗೆ ಸಹ ನಟನಾಗಿ ನಟಿಸುವುದದಕ್ಕೆ ಹಿಂಜರಿಯದೇ, ಡಾ. ರಾಜ್ ಕುಮಾರ್ ಅವರೊಡನೆ ಕಾಮನಬಿಲ್ಲು, ವಿಷ್ಣುವರ್ಧನರೊಡನೆ ನಿಷ್ಕರ್ಷ, ಮತ್ತೆ ಹಾಡಿತು ಕೋಗಿಲೆ, ಜೀವನದಿಯಲ್ಲಿ ನಟಿಸಿದರೆ, ರವಿಚಂದ್ರನ್ ಅವರೊಂದಿಗೆ ರಣಧೀರ ಮತ್ತು ಶಾಂತಿಕ್ರಾಂತಿ, ಉಪೇಂದ್ರರೊಡನೆ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದಲ್ಲದೇ ಇತ್ತೀಚೆಗೆ ಹೊಸಾ ಹೊಸಾ ನಿರ್ದೇಶಕರು ಮತ್ತು ನಟರೊಂದಿಗೆ ಸಹಾ ನಟಿಸುತ್ತಾ, ಅವರಿಗೂ ಧೈರ್ಯವನ್ನು ತುಂಬುತ್ತಾ ಚಿತ್ರದ ಯಶಸ್ವಿಗೆ ಕಾರಣೀಭೂತರಾಗುತ್ತಿದ್ದಾರೆ ಎನ್ನುವುದಕ್ಕೆ ಕೆಜಿಎಫ್-1 ಸಿನಿಮಾವೇ ಸಾಕ್ಷಿಯಾಗಿದೆ. ಇವಿಷ್ಟರ ಮಧ್ಯೆ ಒಂದೆರಡು ಯಶಸ್ವಿ ಧಾರವಾಹಿಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕೇವಲ ಕನ್ನಡ ಚಿತ್ರರಂಗವಲ್ಲದೇ ಏಳು ಭಾಷೆಗಳಲ್ಲಿ ನಟಿಸಿ ಅತ್ಯಂತ ಪ್ರತಿಭಾನ್ವಿತ ಮತ್ತು ಪ್ರಬುದ್ಧ ನಟನಾಗಿ ಸೈ ಎನಿಸಿಕೊಂಡರೂ ಅದೇಕೋ ಏನೋ ಅನಂತ್ ನಾಗ್ ಅವರಿಗೆ ಸಲ್ಲಬೇಕಾದ ಪ್ರಶಸ್ತಿ ಪುರಸ್ಕಾರಗಳು ಇದುವರೆವಿಗೂ ಸಿಗದಿರುವುದಕ್ಕೆ ಎಲ್ಲಾ ಕನ್ನಡಿಗರಿಗೂ ಬೇಸರವಿದೆ. ನೆನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದ ನಟ ನಟಿಯರಿಗೆಲ್ಲಾ ಪದ್ಮ ಪ್ರಶಸ್ತಿಗಳು ಸುಲಭವಾಗಿ ಸಿಗುತ್ತಿದ್ದರೂ ಅನಂತ್ ಅವರಿಗೆ ಅಂತಹ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಇನ್ನೂ ಮರೀಚಿಕೆಯಾಗಿರುವುದು ನಿಜಕ್ಕೂ ಯಕ್ಷ ಪ್ರಶ್ನೆಯಾಗಿದೆ.
ಜಿ.ಎಸ್ ಶಿವರುದ್ರಪ್ಪನವರ ಎದೆ ತುಂಬಿ ಹಾಡುವೆನು ಹಾಡಿನಲ್ಲಿರುವ ಸಾಲಿನಂತೆ ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ. ಹಾಡುವುದು ಅನಿವಾರ್ಯ ಕರ್ಮ ಎನಗೇ... ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎನ್ನುವಂತೆ 74ರ ವಯಸ್ಸಿನಲ್ಲೂ ಅನಂತ್ ನಾಗ್ ಚಿಕ್ಕ ಹುಡುಗರೂ ನಾಚುವಂತೆ ಮೈಕಟ್ಟನ್ನು ಮತ್ತು ಸುರದ್ರೂಪತನವನ್ನು ಕಾಪಾಡಿಕೊಂಡು ಇಂದಿಗೂ ಅತ್ಯುತ್ತಮ ನಟನೆಯ ಮೂಲಕ ಆರು ಕೋಟಿ ಕನ್ನಡಿಗರ ಕಣ್ಮಣಿಯಾಗಿರುವ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳು ಎನ್ನುವುದರಲ್ಲಿ ತಪ್ಪಿಲ್ಲಾ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನಿರೂಪಣೆ ನಿಜಕ್ಕೂ ಶ್ಲಾಘನೀಯ, ಮನಮುಟ್ಟುವಂತಿದೆ.
LikeLiked by 1 person
ಧನ್ಯೋಸ್ಮಿ
LikeLike