ಎಂ.ಪಿ ಪ್ರಕಾಶ್

ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ವಿದ್ಯಮಾನಗಳನ್ನು ಗಮನಿಸುತ್ತಿದ್ದಲ್ಲಿ, ರಾಜಕೀಯ ಮತ್ತು ರಾಜಕಾರಣಿಗಳು ಎಂದರೆ ಒಂದು ರೀತಿಯ ಅಸಹ್ಯ ಮತ್ತು ವಾಕರಿಗೆ ಬರುವಂತಿದೆ ಎಂದರೂ ತಪ್ಪಾಗದು. ಅಂತಹ ಭ್ರಷ್ಟ ರಾಜಕಾರಣದ ಮಧ್ಯದಲ್ಲಿಯೂ ಅಲ್ಲೊಂದು ಇಲ್ಲೊಂದು ಸರಳ ಸಜ್ಜನ ರಾಜಕಾರಣಿಗಳು ಎಲೆಮರೆ ಕಾಯಿಯಂತೆ ಮಿಂಚಿ ಕಣ್ಮರೆಯಾಗಿ ಹೋಗಿದ್ದಾರೆ. ಸಾಹಿತಿ, ರಂಗಕರ್ಮಿ ಮತ್ತು ಸಮಾಜವಾದಿ ರಾಜಕಾರಣಿಯಾಗಿ ರಾಜ್ಯದ ಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಆಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರು.

mpp11940 ಜುಲೈ 11 ರಂದು ನಾರಾಯಣದೇವರಕೆರೆಯಲ್ಲಿ ಸ್ಥಿತಿವಂತ ಕುಟುಂಬದಲ್ಲಿ ಪ್ರಕಾಶರ ಜನನವಾಗುತ್ತದೆ. ಚಿಕ್ಕಂದಿನಿಂದಲೂ ಓದಿನಲ್ಲಿ ಅತ್ಯಂತ ಚುರುಕಾಗಿದ್ದ ಪ್ರಕಾಶ್, ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರು ನಾರಾಯಣದೇವರಕೆರೆ ಆನಂತರ ಹೊಸಪೇಟೆ ಯಲ್ಲಿ ಮುಗಿಸಿ, ಬಳ್ಳಾರಿಯಲ್ಲಿ ಬಿಎ ಪದವಿಯನ್ನು ಪಡೆದು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಅಲ್ಲಿ ಎಂಎ ಪದವಿಯನ್ನು ಪಡೆದು ದೂರದ ಮುಂಬಯ್ಯಿಗೆ ಹೋಗಿ ಅಲ್ಲಿ ಕಾನೂನು ಪದವಿಯನ್ನು ಪಡೆದು ಮತ್ತೆ ತಮ್ಮೂರಿಗೆ ಹಿಂದಿರುಗುತ್ತಿದ್ದಂತೆಯೇ, 1963 ಬಳ್ಳಾರಿಯ ಚಿಲ್ಲೆಯ ಹಗರಿಬೊಮ್ಮನಹಳ್ಳಿಯ ರುದ್ರಾಂಬ ಅವರೊಂದಿಗೆ ವಿವಾಹವಾಗುತ್ತದೆ.

ಜೀವನದ ನಿರ್ವಹಣೆಗಾಗಿ 1964ರಲ್ಲಿ ಹೂವಿನ ಹಡಗಲಿಯಲ್ಲಿ ವಕೀಲೀ ವೃತ್ತಿಯನ್ನು ಆರಂಭಿಸುತ್ತಾರೆ. ಹೆಸರಿಗೆ ವಕೀಲೀ ವೃತ್ತಿಯಾದರೂ ಅವರ ಸಮಾಜವಾದಿ ಮನಸ್ಥಿತಿಯಿಂದಾಗಿ ತಮ್ಮ ವೃತ್ತಿಯಿಂದ ಆರ್ಥಿಕವಾಗಿ ಬೆಳದದ್ದು ಕಡಿಮೆಯೇ. ಅದೆಷ್ಟೋ ಬಾರಿ ತಮ್ಮ ಬಳಿ ಬರುವ ಬಡವರಿಗೆ ತಮ್ಮ ಕೈಯ್ಯಿಂದಲೇ ಕೋರ್ಟು ಫೀ ಕಟ್ಟಿ ತಾವೇ ಉಚಿತವಾಗಿ ಅವರ ಪರ ವಾದ ಮಾಡಿ ಗೆಲ್ಲಿಸಿಕೊಟ್ಟ ಉದಾಹರಣೆಗಳೆಷ್ಟೋ ಇವೆ. 1967ರಲ್ಲಿ ಸಮಾಜವಾದಿ ಚಳವಳಿಯಲ್ಲಿ ಸಕ್ರೀಯರಾಗಿ ಭಾಗಿಗಳಾಗುವ ಮೂಲಕ ಸಕ್ರೀಯ ಚಳುವಳಿಗಳಿಗೆ ಧುಮುಕಿದ ಪ್ರಕಾಶ್, 1973ರ ಹೊತ್ತಿಗೆ ಬಳ್ಳಾರಿ ಜಿಲ್ಲೆಯ ಸಮಾಜವಾದಿ ಪಕ್ಷದ ಅಧ್ಯಕ್ಷರಾಗುವುದಲ್ಲದೇ, ಅಂದಿನ ಸಂಡೂರು ರಾಜಮನೆತನದ ಶೋಷಣೆಯ ವಿರುದ್ಧ, ಸಂಡೂರು ಹೋರಾಟ ಸಮಿತಿ ಸ್ಥಾಪಸಿ ಆ ಸಮಿತಿಯ ಮೂಲಕ ಶೋಷಿತರನ್ನು ಒಗ್ಗೂಡಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸು ಅವರಿಗೆ ಸಂಡೂರಿನಲ್ಲಾಗುತ್ತಿದ್ದ ದಬ್ಬಾಳಿಕೆಯ ವಿರುದ್ಧ ದೂರನ್ನು ದಾಖಲಿಸುವ ಮೂಲಕ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಾರೆ.

ಈ ಎಲ್ಲಾ ಹೋರಾಟಗಳ ಮುಂದಾಳತ್ವ ವಹಿಸಿದ್ದ ಪ್ರಕಾಶರು ಸ್ಥಳೀಯರ ಒತ್ತಾಸೆಯ ಮೇರೆಗೆ 1973ರಲ್ಲಿ ಪ್ರಥಮಬಾರಿಗೆ ಪದವೀಧರ ಕ್ಷೇತ್ರದಿಂದ ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧಿಸಿ, ಅದರಲ್ಲಿ ಪರಾಜಯಗೊಳ್ಳುವ ಮೂಲಕ ಅವರ ಸಕ್ರೀಯ ರಾಜಕೀಯ ಜೀವನ ಪ್ರಾರಂಭವಾಗುತ್ತದೆ. ಆದರೆ ಈ ಸೋಲಿನಿಂದ ವಿಚಲಿತರಾಗದ ಪ್ರಕಾಶ್ 1975ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧದ ಜನರನ್ನು ಸಂಘಟಿಸಿ ಮತ್ತೆ ಸಕ್ರೀಯವಾಗಿ ಚಳವಳಿಯಲ್ಲಿ ಪಾತ್ರ ವಹಿಸುತ್ತಾರೆ. 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ನಾರಾಯನರ ನೇತೃತ್ವದಲ್ಲಿ ಸರ್ವ ಪಕ್ಷಗಳೂ ಸೇರಿ ಕಟ್ಟಿಕೊಂಡ ಜನತಾ ಪಕ್ಷದಿಂದ ಹೂವಿನ ಹಡಗಲಿ ಕ್ಷೇತ್ರದಲ್ಲಿ ಪ್ರಕಾಶ್ ಸ್ಪರ್ಥಿಸಿ ಕೊಗಳಿ ಕರಿಬಸವನಗೌಡ್ರವರ ವಿರುದ್ದ ಸ್ಪರ್ಧಿಸಿ ಪುನಃ ಸೋಲನ್ನು ಅನುಭವಿಸುತ್ತಾರೆ

ಹೀಗೆ ಎರಡು ಸೋಲುಗಳನ್ನು ಕಂಡರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯದ ರುಚಿ ಕಂಡ ನಂತರ ರಾಜಕೀಯವಾಗಿ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಆದಾದ ನಂತರ ಸೋಲು ಗೆಲುವುಗಳ ಹಗ್ಗ ಜಗ್ಗಾಟಗಳಿದ್ದರೂ, ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಸೋಲು ಗೆಲುವನ್ನು ಸಮನಾಗಿ ಹಂಚಿಕೊಂಡಿದ್ದಾರೆ. ಸೋತಾಗ ಎದೆಗುಂದದೆ, ಗೆದ್ದಾಗ ಬೀಗದೆ ಜನರ ಸೇವೆಯನ್ನು ಮಾಡುತ್ತಾ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನಕ್ಕೇರಿದರೂ, ಜನರ ಮಧ್ಯದಲ್ಲಿ ಅವರ ಕಷ್ಟ ಸುಖಃಗಳಿಗೆ ಸ್ಪಂದಿಸುತ್ತಾ, ಜನಪರ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.

ಬಿಜೆಪಿ ಬೆಂಬಲದಿಂದ ಸರ್ಕಾರ ನಡೆಸಿ ಆರಂಭದಲ್ಲೇ ಪ್ರಖ್ಯಾತರಾದ ಶ್ರೀ ರಾಮಕೃಷ್ಣ ಹೆಗಡೆಯವರು, ಸ್ವಂತ ಬಲದ ಮೇಲೆಯೇ ಅಥಿಕಾರಕ್ಕೆ ಬರಲು ನಿರ್ಧರಿಸಿ ವಿಧಾನಸಭೆಯನ್ನು ವಿಸರ್ಜಿಸಿ ಮತ್ತೆ 1985ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಪ್ರಕಾಶರು ಸಿ.ಅಂದಾನಪ್ಪನವರ ವಿರುದ್ದ ಜಯಶಾಲಿಗಳಾಗಿದ್ದಲ್ಲದೇ, ಪ್ರಥಮಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಲ್ಲದೇ, ನಂತರ ಕೃಷಿ, ನಗರಾಭಿವೃದ್ಧಿ ಖಾತೆ, ಹೀಗೆ ಹತ್ತು ಹಲವಾರು ಖಾತೆಯನ್ನು ನಿಭಾಯಿಸುವ ಮೂಲಕ ಒಬ್ಬ ಉತ್ತಮ ಸಂಸದೀಯ ಪಟು ಎನ್ನುವ ಕೀರ್ತಿಗೆ ಪಾತ್ರರಾಗುತ್ತಾರೆ. ನಂತರ ಮತ್ತೆ 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಜಯಗಳಿಸಿ, ಈ ಬಾರಿ ಬೊಮ್ಮಾಯಿಯವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಜಾಯತ್ ರಾಜ್ ಸಚಿವರಾಗಿ ನಾಡಿನ ಪ್ರಗತಿಗಾಗಿ ಶ್ರಮಿಸುತ್ತಾರೆ. ಇದೇ ಸಮಯದಲ್ಲಿಯೇ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಏಕ ಸದಸ್ಯ ಆಯೋಗ ರಚನೆ ಮಾದಿದ್ದಲ್ಲದೇ, ಕೃಷಿ ಸಚಿವರಾಗಿ ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕಾರಣೀಭೂತರಾಗುತ್ತಾರೆ.

MPP2ಇಷ್ಟೆಲ್ಲಾ ಬಿಡುವಿಲ್ಲದ ರಾಜಕೀಯ ಕೆಲಗಳ ಮಧ್ಯೆಯೂ, ಎಂ.ಪಿ. ಪ್ರಕಾಶ್ ಅವರು ನಾಟಕ, ಕ್ರೀಡೆ, ಮತ್ತಿತರ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಕ್ರೀಯವಾಗಿ ಭಾಗಿಗಳಾಗುತ್ತಿದ್ದಲ್ಲದೇ, 60ರ ದಶಕದಲ್ಲಿ ರಂಗಭೂಮಿಯ ಮೇರು ಕಲಾವಿದರಾಗಿದ್ದ ತಮ್ಮ ದೊಡ್ಡಪ್ಪ, ಕೊಟ್ರಗೌಡರ ಪ್ರಭಾವದಿಂದಾಗಿ, ಹುಚ್ಚಿ ಕರಿಯಲ್ಲಪ್ಪ ಮತ್ತು ಕೆಲ ಯುವಕರೊಂದಿಗೆ ಹಡಗಲಿಯಲ್ಲಿ ರಂಗಭಾರತಿ ಎಂಬ ರಂಗತಂಡವೊಂದರ ಸ್ಥಾಪಕ ಅಧ್ಯಕ್ಷರಾಗಿ ಅದರ ಮೂಲಕ, ಅನೇಕ ನಾಟಗಳಲ್ಲಿ ನಟಿಸಿ ನಿರ್ದೇಶನ ಮಾದುತ್ತಾ, ದೇಶದ ನಾನಾ ರಾಜ್ಯಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸುವ ಮೂಲಕ, ತಾವೊಬ್ಬ ಪರಿಪಕ್ವ ರಂಗಕರ್ಮಿ ಎಂದೂ ಸಾಬೀತು ಪಡಿಸಿದ್ದಲ್ಲದೇ, ಉದಯೋನ್ಮುಖ ಕಲಾವಿದರುಗಳಿಗಾಗಿ ಅನೇಕ ರಂಗಶಿಬಿರಗಳನ್ನೂ ಯಶಸ್ವಿಯಾಗಿ ಆಯೋಜಿಸಿದ್ದರು.

ನಾಟಕದ ಜೊತೆ ಓದುವ ಮತ್ತು ಬರೆಯುವ ಗೀಳನ್ನೂ ಸಹಾ ಹಚ್ಚಿಕೊಂಡಿದ್ದ ಪ್ರಕಾಶ್, ಸಮಕಾಲಿನ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿದ್ದಲ್ಲದೆ, ಬೇಸರದ ಸಮಯದಲ್ಲಿ ಓದುವ ಸಲುವಾಗಿ ತಮ್ಮ ಮನೆಯಲ್ಲಿಯೇ ಅಪಾರ ಪುಸ್ತಕಗಳ ಸಂಗ್ರಹವನ್ನಿಟ್ಟುಕೊಂಡಿದ್ದರು. ಓದಿನ ಜೊತೆ ಬರವಣಿಗೆಯನ್ನೂ ಸಹಾ ರೂಢಿಯಲ್ಲಿ ಇಟ್ಟುಕೊಂಡಿದ್ದ ಎಂ. ಪಿ. ಪ್ರಕಾಶರು ಇತರೇ ಭಾಷೆಯ ಅನೇಕ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಅವುಗಳಲ್ಲಿ ಪ್ರೀತಿಯೇ ದೇವರು ಮತ್ತು ಇತರ ಕಥೆಗಳು, ಸೂರ್ಯಶಿಖಾರಿ, ಡೊಮಿಂಗೋ ಪಿಯಾಸ್ ಕಂಡ ವಿಜಯನಗರ, ಅಲೆಕ್ಸಾಂಡರ್ ಜೆ. ಗ್ರೀನ್ ಲಾ ಮತ್ತು ಕಾಲಿನ್ಗ್ಸ್ ಕಂಡ ವಿಜಯನಗರ, ಚುನಾವಣಾ ಸುಧಾರಣೆಗಳು (ಮೂಲ: ರಾಮಕೃಷ್ಣ ಹೆಗಡೆ), ನನ್ನ ಜೀವನ ಮತ್ತು ರಾಜಕೀಯ (ಎಸ್. ನಿಜಲಿಂಗಪ್ಪ ಅವರ ಆತ್ಮಕಥನ ಅನುವಾದ) ಮುಂತಾದವುಗಳು ಸೇರಿವೆ. ಕಳಿಂಗ ಸೂರ್ಯ, ಥೈಲ್ಯಾಂಡ್ ಪ್ರವಾಸ ಕಥನ, ಅಮೇರಿಕಾ ಪ್ರವಾಸ ಮುಂತಾದವುಗಳು ಪ್ರಕಾಶ್ ಅವರ ಪ್ರವಾಸದ ಕುರಿತಾದ ಬರಹಗಳಾದರೆ, ರಂಗಾಯಣದ ಕುಸುಮಬಾಲೆ, ಒಂದು ಅನುಭವ, ಯಾರ ತಲೆದಂಡ?, ಯಾತಕ್ಕೆ ಮಳೆ ಹೋದವೋ ಮುಂತಾದವು ಪ್ರಕಾಶ್ ಅವರ ಸಾಂಸ್ಕೃತಿಕ ಬರಹಗಳಾಗಿವೆ. ಒಂದು ಕೋಟಿ ರುಪಾಯಿ ಹಗರಣ, ಕೊರಳಿಗೆ ಉರುಳಾಡುತ್ತಿರುವ ಡನ್ಕೆಲ್ ಪ್ರಸ್ತಾಪ, ಮೂಲೆಗುಂಪಾದ ರೋಜಗಾರ್ ಮುಂತಾದವು ಅವರ ರಾಜಕೀಯ ಬರಹಗಳಾಗಿದ್ದು ತಮ್ಮ ಬಿಡುವಿಲ್ಲದ ರಾಜಕೀಯದ ಮಧ್ಯೆಯೂ ಸಮಯ ಮಾಡಿಕೊಂಡು ತಮ್ಮ ಹವ್ಯಾಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದದ್ದು ನಿಜಕ್ಕೂ ಶ್ಲಾಘನೀಯವಾಗಿತ್ತು.

mpp8ಇವೆಲ್ಲದರ ನಡುವೆ ದೇವೇಗೌಡರು ಮತ್ತು ಜೆ.ಹೆಚ್. ಪಟೇಲರ ನಡುವೆ ಜನತಾದಳ ಇಬ್ಬಾಗವಾಗಿ ಪಟೇಲರು ಬಿಜೆಪಿ ಕಡೆ ಹೋದಾಗ, ಪ್ರಕಾಶರು ದೇವೆಗೌಡರ ಜಾತ್ಯಾತೀತ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದಲ್ಲದೇ, 2000ದ ವಿಧಾನಪರಿಷತ್ತಿಗೆ ಅವಿರೋಧವಾಗಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿ 2004ರವರೆಗೆ ಕಾರ್ಯನಿರ್ವಹಿಸುತ್ತಾರೆ. 2004ರ ವಿಧಾನಸಭಾ ಚುನಾವಣೆಯಲ್ಲಿ ಹಡಗಲಿ ಕ್ಷೇತ್ರದಿಂದ 33 ಸಾವಿರ ಮತಗಳ ಭಾರೀ ಅಂತರದಿಂದ ಗೆಲುವನ್ನು ಸಾಧಿಸಿ ಅತಂತ್ರ ಪರಿಸ್ಥಿತಿ ಉಂಟಾಗಿ ನಂತರ ಜನತಾದಳ ಮತ್ತು ಕ್ರಾಂಗ್ರೇಸ್ ಸಮ್ಮಿಶ್ರವಾಗಿ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವ ಸ್ಥಾನಗಳಿಸುತ್ತಾರೆ. 2005ರಲ್ಲಿ ದೇವೇಗೌಡರ ಜೊತೆಗಿನ ವೈಮನಸ್ಸಿನಿಂದಾಗಿ ಉಪಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ತಮ್ಮದೇ ಆದ ಅಹಿಂದ ಸಂಘಟನೆಯನ್ನು ಕಟ್ಟಿಕೊಂದು ಜಾತ್ಯಾತೀತ ಜನತಾದಳವನ್ನು ತೊರೆದಾಗ ಬದಲಾದ ರಾಜಕೀಯ ಸನ್ನಿವೇಶಕ್ಕೆ ಬಲಿಯಾಗಿ ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಲ್ಲದೇ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ನೇಮಕವಾಗಿ ಒಂದು ರೀತಿಯ ಹರಕೆಯ ಕುರಿಯಾದರೂ ಎಂದರೂ ತಪ್ಪಾಗದು.

MPP6ಮತ್ತೆ 2006ರಲ್ಲಿ ಅಧಿಕಾರದ ಆಸೆಯಿಂದಾಗಿ ಕುಮಾರಸ್ವಾಮಿ, ಜನತಾದಳದಲ್ಲೇ ಬಂಡಾಯ ಎಬ್ಬಿಸಿ, ಧರ್ಮಸಿಂಗ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಜೊತೆ ಸೇರಿಕೊಂಡು 20-20 ಸರ್ಕಾರ ರಚಿಸಿದಾಗಲೂ ಕುಮಾರ ಸ್ವಾಮಿಯ ಸರ್ಕಾರದಲ್ಲಿ ಗೃಹ ಸಚಿವರಾಗಿ ಅಧಿಕಾರ ನಿರ್ವಹಿಸಿದರೂ, 20ತಿಂಗಳುಗಳ ಕಾಲ ಅಧಿಕಾರ ಅನುಭವಿಸಿ ಕೊಟ್ಟ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ, ವಚನಭ್ರಷ್ಟರಾದ ಅಪ್ಪಾಮಕ್ಕಳ ಪಕ್ಷ ಅವಸಾನದತ್ತ ಸಾಗುತ್ತಿದ್ದದ್ದನ್ನು ಮನಗಂಡ ಪ್ರಕಾಶ್, ಜೀವಮಾನವಿಡೀ ಧಿಕ್ಕರಿಸಿಕೊಂಡು ಬಂದಿದ್ದ ಕ್ರಾಂಗ್ರೇಸ್ ಪಕ್ಷವನ್ನು 2007ರಲ್ಲಿ ಸೇರ್ಪಡೆಯಾಗುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಬಹು ದೊಡ್ಡ ತಪ್ಪನ್ನು ಮಾಡುತ್ತಾರೆ. 2008ರಲ್ಲಿ ಕ್ರಾಂಗ್ರೇಸ್ ಅಭ್ಯರ್ಥಿಯಾಗಿ ಹರಪನಹಳ್ಳಿಯಿಂದ ಸ್ಪರ್ಧಿಸಿ ಸೋಲು ಕಾಣುವ ಮೂಲಕ ತಮ್ಮ ರಾಜಕೀಯ ಬದುಕಿಗೆ ತಾವೇ ಚರಮ ಹಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

mpp7ಇಷ್ಟೆಲ್ಲಾ ರಾಜಕೀಯ ಹಗ್ಗ ಜಗ್ಗಾಟಗಳ ಮಧ್ಯದಲ್ಲಿಯೂ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದ ಪ್ರಕಾಶ್, ತಮ್ಮ ಕನಸಿನ ಕೂಸಾದ ಸಿಂಗಟಾಲೂರು ಏತ ನೀರಾವರಿ ಯೋಜನೆ, ಹಡಗಲಿಯಲ್ಲಿ ಬಸ್ ನಿಲ್ದಾಣ, ಸಾರಿಗೆ ಘಟಕ, ಸಬ್ಜೈಲ್ ಲೋಕೋಪಯೋಗಿ ಇಲಾಖೆಯ ವಿಭಾಗ ಕಛೇರಿ, ಪೊಲೀಸ್ ಇಲಾಖೆಯ ಡಿವೈಎಸ್ಪಿ ಕಛೇರಿ, ಮಿನಿ ವಿಧಾನಸೌಧ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಗದಗ-ಹಾಗೂ ಹಡಗಲಿ ಜಿಲ್ಲೆಯ ಜನತೆಗೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಮೊದಲಗಟ್ಟೆ ಮುಂದೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯೊಳಗೊಂಡಂತೆ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳನ್ನು ಹಡಗಲಿಯಲ್ಲಿ ಕೈಗೊಳ್ಳುವ ಮೂಲಕ ತಮ್ಮನ್ನು ಬೆಂಬಲಿಸಿ ಆರಿಸಿ ಕಳುಹಿಸಿದ್ದ ಜನರಿಗೆ ಪ್ರತ್ಯುಪಕಾರವನ್ನು ಮಾಡುವುದರಲ್ಲಿ ಸಫಲರಾಗಿದ್ದರು.

ಇಷ್ಟೆಲ್ಲಾ ರಾಜಕೀಯ ಏಳು ಬೀಳುಗಳ ನಡುವೆ ಮಡದಿ ರುದ್ರಾಂಬ, ಮಗ ರವೀಂದ್ರ ಮತ್ತು ಮೂವರು ಹೆಣ್ಣುಮಕ್ಕಳ ಸುಂದರ ಸಂಸಾರವನ್ನು ಹೊಂದಿದ್ದ ಪ್ರಕಾಶ್ ತಮ್ಮ ಅಂತಿಮ ದಿನಗಳಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಹಳವಾಗಿ ನರಳಿ ಫೆಬ್ರವರಿ 8 2011ರ ಬುಧವಾರ ಬೆಂಗಳೂರಿನಲ್ಲಿ ನಿಧನರಾಗುವ ಮೂಲಕ ಈ ರಾಜ್ಯ ಒಬ್ಬ ಸಹೃದಯೀ ಲೇಖಕ, ರಂಗಕರ್ಮಿ, ಪ್ರಾಮಾಣಿಕ ರಾಜಕಾರಣಿಯನ್ನು ಕಳೆದುಕೊಂಡಿತು.

MPP#ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ, ಎಚ್. ಡಿ. ದೇವೇಗೌಡ, ಜೆ. ಹೆಚ್. ಪಟೇಲ್, ಧರಮ್ ಸಿಂಗ್ ಮತ್ತು ಕುಮಾರಸ್ವಾಮಿ ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರೂ, ರಾಜಕೀಯ ಸೋಲು ಗೆಲುವುಗಳನ್ನು ಸಮ ಪ್ರಮಾಣದಲ್ಲಿ ಅನುಭವಿಸಿದ್ದ ಪ್ರಕಾಶ್, ಸಿಕ್ಕ ಅವಕಾಶಗಳಲ್ಲೇ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಸರಳ ಸಜ್ಜನರೆಂದೇ ಪ್ರಖ್ಯಾತರಾಗಿದ್ದ ಶ್ರೀ ಎಂ. ಪಿ. ಪ್ರಕಾಶ್ ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s