ಕಾಡಿನರಾಜ ಎಂ. ಪಿ. ಶಂಕರ್

ಎಂ. ಪಿ. ಶಂಕರ್ ಎಂದು ಹೆಸರು ಕೇಳಿದ ತಕ್ಷಣ ಕನ್ನಡಿಗರ ಮನದಲ್ಲಿ ಥಟ್ ಅಂತಾ ಮೂಡುವುದೇ ಸತ್ಯ ಹರಿಶ್ಚಂದ್ರ ಸಿನಿಮಾದ ವೀರಬಾಹು ಕುಣಿತ ಮತ್ತು ಗಂಧದ ಗುಡಿಯ ಸಿನಿಮಾದಲ್ಲಿನ ಅರಣ್ಯ ಇಲಾಖೆಯ ಅಗಾಧ ಮೈಕಟ್ಟಿನ ಅಜಾನುಬಾಹು ಹುಲಿಯ ಬಾಯಿಗೆ ಮಗು ಸಿಕ್ಕು ಸತ್ತು ಹೋದಾಗ, ಅವರು ದುಃಖವನ್ನು ವ್ಯಕ್ತಪಡಿಸುವ ಸಂಧರ್ಭ. ಎಂ.ಪಿ. ಶಂಕರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ನಿರ್ದೇಶಕ  ಮತ್ತು ನಿರ್ಮಾಪಕರೆಂದರೂ ಸರಿ. ಕನ್ನಡದಲ್ಲಿ ಕಾಡು ಮತ್ತು ಕಾಡು ಪ್ರಾಣಿಗಳ ಕುರಿತಾದ ಹಾಲಿವುಡ್ ರೀತಿಯಂತೆಹ ಅತ್ಯುತ್ತಮ ಸಿನಿಮಾಗಳನ್ನು ನೀಡಿದ ಖ್ಯಾತಿಯ ಎಂ. ಪಿ. ಶಂಕರ್ ಅವರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ.

ಮೈಸೂರಿನ ಸ್ಥಿತಿವಂತ ಕುಟುಂಬದವರಾದ ಶ್ರೀ ಪುಟ್ಟಲಿಂಗಪ್ಪ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಮೂರನೆಯ ಸಂತಾನವಾಗಿ ಆಗಸ್ಟ್ 20,1935 ರಂದು ಭರಣಿ ನಕ್ಷತ್ರದಲ್ಲಿ ಜನಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳುತ್ತಾರೆ ಎಂಬ ಮಾತು ಇರುವ ಕಾರಣ ತಮ್ಮ ಪುತ್ರ ಬಹಳ ಮಹತ್ತರವಾದ ಸ್ಥಾನವನ್ನು ಏರುತ್ತಾನೆ ಎಂಬ ನಂಬಿಕೆಯಿಂದ ಶಂಕರ್ ಅವರ ಮೇಲೆ ಉಳಿದ ಮಕ್ಕಳಿಗಿಂತಲೂ ತುಸು ಪ್ರೀತಿ ಹೆಚ್ಚಾಗಿರುತ್ತದೆ.

ಅಪ್ಪ ಅಮ್ಮಂದಿರ ಉತ್ಕಟವಾದ ಪ್ರೀತಿಯಿಂದಲಲೋ ಅಥವಾ ದೈವದತ್ತವಾಗಿಯೋ ಇಂತಿಪ್ಪ ಮೈಸೂರು ಪುಟ್ಟಲಿಂಗಪ್ಪ ಶಂಕರ್, ಬಾಲ್ಯದಿಂದಲೂ ಗುಂಡು ಗುಂಡಾಗಿಯೇ ಭಾರೀ ಶರೀರವನ್ನು ಹೊಂದಿರುತ್ತಾರೆ ಆದರೆ ತಮ್ಮ ದಢೂತಿತನವನ್ನು ಎಂದಿಗೂ ಕಷ್ಟ ಎಂದು ಭಾವಿಸದೇ ಅದನ್ನೇ ಇಷ್ಟ ಪಟ್ಟು ಗರಡಿ ಮನೆಯಲ್ಲಿ ಕಸರತ್ತು ಮಾಡಿ ಗಟ್ಟಿ ಮುಟ್ಟಾಗಿ ದೇಹವನ್ನು ಹುರಿಗೊಳಿಸುತ್ತಾರೆ. 1953-54ರಲ್ಲೇ ಮೈಸೂರಿನ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ತಮ್ಮ ದೇಹಕ್ಕೆ ಅನುಗುಣವಾಗಿ ಕಾಡು ಕುರುಬನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸುವ ಮೂಲಕ ರಂಗಭೂಮಿಯ ಕಡೆ ಆಕರ್ಷಿತರಾಗುತ್ತಾರೆ.

shank4ತಮ್ಮ ಓದು ಮುಗಿದ ನಂತರ ಮತ್ತೆ ಗರಡಿ ಮನೆಯಲ್ಲಿ ಕಸರತ್ತು ಮಾಡಿ, ಮೈಸೂರಿನ ಹೆಸರಾಂತ ಪೈಲ್ವಾನರಾಗುತ್ತಾರೆ. ಅನೇಕರಿಗೆ ತಿಳಿಯದಿರುವ ವಿಷಯವೇನೆಂದರೆ, ಎಂ. ಪಿ. ಶಂಕರ್ ಅವರು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂದಿನ ಮೈಸೂರಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿಯವರ ಅಮೃತಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ಗರಡಿ ಮನೆಯಂತೆ ಅವರಿಗೆ ರಂಗಭೂಮಿಯ ಕಡೆಗೂ ಅಸಕ್ತಿ ಇದ್ದ ಕಾರಣ, ಭರಣಿ ಕಲಾತಂಡದ ಸದಸ್ಯರಾಗಿ ಗೌತಮ ಬುದ್ಧ, ಸೊಹ್ರಾಬ್ ರುಸ್ತುಂ, ಗದಾಯುದ್ಧ, ಕನಕದಾಸ ಮುಂತಾದ ನಾಟಕಗಳಲ್ಲಿ ನಟಿಸಿ ನಿರ್ದೇಶನ ಮಾಡುವುದದನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದರೆ, ವೃತ್ತಿಯಲ್ಲಿ ಮೈಸೂರಿನ ವಿದ್ಯುಚ್ಚಕ್ತಿ ಕಚೇರಿಯಲ್ಲಿ ಮತ್ತು ರೈಲ್ವೆ ಇಲಾಖೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸವನ್ನು ಮಾಡಿದ್ದರು.

shankar2ಅವರ ಪೂಜ್ಯ ತಂದೆಯವರ ಅಭಿಲಾಷೆಯಂತೆ, 1962ರಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಕರಾಗಿದ್ದ, ಶ್ರೀ ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿ ನಿರ್ಮಾಣ ಮಾಡಿದ ರತ್ನ ಮಂಜರಿ ಎಂಬ ಸಿನಿಮಾದಲ್ಲಿ ಖಳನಾಯಕನ ಪಾತ್ರವನ್ನು ಮಾಡುವ ಮೂಲಕ ಎಂ. ಪಿ. ಶಂಕರ್ ಅವರ ಚಲನಚಿತ್ರ ಜೀವನ ಆರಂಭವಾಗುತ್ತದೆ. ನಂತರ ಒಂದೆರಡು ‍ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರೂ, ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ಪ್ರಾಮುಖ್ಯತೆಯನ್ನು ಕೊಟ್ಟ ಚಿತ್ರ ಮತ್ತದೇ ಹುಣಸೂರು ಕೃಷ್ಣಮೂರ್ತಿಗಳ ನಿರ್ದೇಶನದ ಮತ್ತು ರಾಜಕುಮಾರ್ ಅಭಿನಯದ ಸತ್ಯಹರಿಶ್ಚಂದ್ರದ ಸ್ಮಶಾನದ ಮುಖ್ಯಸ್ಥ ವೀರಬಾಹು ಪಾತ್ರ. ಹರಿಶ್ಚಂದ್ರ ವಿಶ್ವಮಿತ್ರರ ಸಾಲವನ್ನು ತೀರಿಸುವ ಸಲುವಾಗಿ ತನ್ನನ್ನೇ ತಾನು ಹರಾಜಿಗೆ ಇಟ್ಟು ಕೊಂಡಾಗ ಆತನನ್ನು ಖರೀಧಿಸಿ ಆತನನ್ನು ಸ್ಮಶಾನ ಕಾಯುವ ಕೆಲಸಕ್ಕೆ ನಿಯೋಜಿಸಿ, ಅವರು ಕೊಡುವ ಅಕ್ಕಿ, ಬೇಳೆ ಎಲ್ಲವನ್ನೂ ಉಪಯೋಗಿಸಿ, ಹೆಣದ ಮೇಲಿನ ಬಟ್ಟೆ ಮತ್ತು ಹೆಣ ಸುಡಲು ಕೊಡುವ ಹಣ ತನಗೇ ಮೋಸ ಮಾಡದೇ ತಂದು ಕೊಡಬೇಕು ಎಂದು ಹೇಳುವಾಗಿನ ಗತ್ತು ನಂತರ ಅಂದು ಇಂದು ಮತ್ತು ಮುಂದಿಗೂ ಕನ್ನಡಿಗರ ನೆಚ್ಚಿನ ಹಾಡಾಗಿರುವ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ..  ಹಾಡಿನಲ್ಲಿ ಅತ್ಯಂತ ಮನೋಜ್ಞವಾಗಿ ಕುಣಿಯುತ್ತಾ ನಟಿಸುವ ಮೂಲಕ ಎಂ.ಪಿ.ಶಂಕರ್ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆ ಮಾಡಿದರು.

ನಂತರ ಎಪ್ಪತ್ತರ ದಶಕದಲ್ಲಿ ತೆರೆ ಕಂಡ ಪುಟ್ಟಣ್ಣ ಕಣಗಾಲರ ಸುಪ್ರಸಿದ್ಧ ನಾಗರ ಹಾವು ಚಿತ್ರದಲ್ಲಿನ ಗರಡಿ ಮನೆಯ ಉಸ್ತಾದ್ ಪಾತ್ರ ಶಂಕರ್ ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಎಂ.ಪಿ.ಶಂಕರ್ ಅವರ ಗರಡಿ ಮನೆಯ ಸಾಧನೆಯ ಬಗ್ಗೆ ಅರಿವಿದ್ದ ಪುಟ್ಟಣ್ಣ ತಮ್ಮ ಚಿತ್ರದಲ್ಲಿ ಗರಡಿ ಮನೆಯ ಮುಖ್ಯಸ್ಥ ಅರ್ಥಾತ್ ಉಸ್ತಾದ್ ಪಾತ್ರವನ್ನು ಕೊಟ್ಟಿದ್ದರು. ಬ್ರಾಹ್ಮಣರ ಮನೆಯ ರಾಮಾಚಾರಿ ಅವರ ಗರಡಿ ಮನೆಯಲ್ಲಿ ಕುಸ್ತಿಯ ಪಟ್ಟುಗಳನ್ನು ಕಲಿಯಲು ಬಂದಾಗ ಅಷ್ಟೇ ಅಪ್ಯಾಯಮಾನದಿಂದ ಶಿಷ್ಯನನ್ನಾಗಿ ಸ್ವೀಕರಿಸಿ ಅವರನ್ನು ಆದರಿಸಿದ ರೀತಿ ಇನ್ನೂ ಕಣ್ಣಿಗೆ ಕಟ್ಟುವಂತಿದೆ. ಅದರಲ್ಲೂ, ಆಹಹಾಹಾ.. ನಾಷ್ಟಾ ಮಾಡಿರುವ ಮುಖ ನೋಡೂ… ಎಂದು ರಾಮಾಚಾರಿಯನ್ನು ಪ್ರೀತಿಯಿಂದ ಗದರಿಸುತ್ತಾ, ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡಗಾತ್ರದ ಬೆಣ್ಣೆಯನ್ನು ಹಾಕಿ ಚೆನ್ನಾಗಿ ತಿನ್ನು, ಕುಸ್ತಿ ಮಾಡೋ ಪೈಲ್ವಾನ್ ಗಳು ಚೆನ್ನಾಗಿ ತಿಂದು ದೇಹವನ್ನು ಗಟ್ಟಿ ಗೊಳಿಸ ಬೇಕು ಎನ್ನುವ ಮಾತುಗಳು ಗುರು ಶಿಷ್ಯರ ಅನ್ಯೋನ್ಯತೆ ಮತ್ತು ಪ್ರೀತಿಯನ್ನು ಎತ್ತಿ ತೋರಿಸುತ್ತಿತ್ತು.

ಆನಂತರದ ದಿನಗಳಲ್ಲಿ ಶನಿ ಪ್ರಭಾವ, ಬಂಗಾರದ ಮನುಷ್ಯ, ಮುಂತಾದ ಚಿತ್ರಗಳಲ್ಲಿ ಖಳನಾಯಕ ಮತು ಪ್ರಮುಖ ಪೋಷಕ ನಟರಾಗಿ ನಟಿಸಿದರೂ ಅವರಿಗೆ ಕಾಡು, ಕಾಡು ಪ್ರಾಣಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಒಲವಿದ್ದ ಕಾರಣ, 1969ರಲ್ಲಿ ಕಾಡಿನ ರಹಸ್ಯ ಎಂಬ ಸಿನಿಮಾವನ್ನು ನಿರ್ಮಾಣ ಮಾಡುವ ಶಂಕರ್ ಪ್ರಥಮಬಾರಿಗೆ ನಿರ್ಮಾಪಕರಾದರು. ಆ ಚಿತ್ರ ತಕ್ಕ ಮಟ್ಟಿಗೆ ಹೆಸರು ಮಾಡಿದ ನಂತರ, ಕನ್ನಡ ಚಿತ್ರರಂಗದ ಖ್ಯಾತ ನಟರುಗಳಾದ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಏಕೈಕ ಬಾರಿಗೆ ಒಟ್ಟಿಗೆ ನಟಿಸಿದ ಗಂಧದಗುಡಿ ಎಂಬ ಚಿತ್ರವನ್ನು 1973 ರಲ್ಲಿ ವಿಜಯ್ ಅವರ ನಿರ್ದೇಶನದಲ್ಲಿ ಈ ಚಿತ್ರ ರಾಜಕುಮಾರ್ ಅವರ 150 ನೇ ಚಿತ್ರವಾಗಿದ್ದು ಅದರಲ್ಲಿ ಪ್ರಾಮಾಣಿಕ ಅರಣ್ಯ ಅಧಿಕಾರಿ ಕುಮಾರ್ ಪಾತ್ರದಲ್ಲಿ ಆಭಿನಯಿಸಿದರೆ, ಅವರ ವಿರುದ್ಧ ಆನಂದ್ ಎಂಬ ಪಾತ್ರಧಾರಿಯಾಗಿ ವಿಷ್ಣುವರ್ಧನ್ ಅವರು ನಟಿಸಿದ್ದರೆ ಕಲ್ಪನಾ, ಎಂ.ಪಿ.ಶಂಕರ್, ನರಸಿಂಹರಾಜು ಮತ್ತು ಬಾಲಕೃಷ್ಣ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

shankar7ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಪರಿಕಲ್ಪನೆಯ ಮೇಲೆ ತಯಾರಾದ ಮೊತ್ತ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ ಆ ಚಿತ್ರದ ಮನೋಜ್ಞವಾಗಿ ಆಭಿನಯಿಸಿದ್ದ ರಾಜ್‌ಕುಮಾರ್ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಪ್ರಖ್ಯಾತವಾಗಿ ಅಣೇಕ ಚಿತ್ರಮಂದಿರಗಳಲ್ಲಿ 25 ವಾರಗಳ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿ ನಂತರ ಭಾರತದ ಇತರೇ ಭಾಷೆಗಳಿಗೂ ಡಬ್ ಮತ್ತು ರೀಮೇಕ್ ಆಗಿತ್ತು. ಈ ಸಿನಿಮಾ ಮೂಲಕ ಅತ್ಯಂತ ಸಿರಿವಂತ ಕರ್ನಾಟಕದ ವನ್ಯಸಂಪತ್ತನ್ನು ಜನರಿಗೆ ಪರಿಚಯಿಸಿದ್ದಲ್ಲದೇ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಡು ಪ್ರಾಣಿ ಮತ್ತು ಸಸ್ಯಗಳನ್ನು ರಕ್ಷಿಸಲು ಅನೇಕರಿಗೆ ಪ್ರೇರಣೆಯಾಗಿತ್ತು. ಈ ಚಿತ್ರದಿಂದ ಸಾಕಷ್ಟು ಹಣವನ್ನುಗಳಿಸಿದ ನಂತರ ಕೆರೆಯ ನೀರನು ಕೆರೆಗೆ ಚಲ್ಲಿ ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿ ಗಳಿಸಿದ ಹಣವನ್ನು ಮತ್ತೆ ಕನ್ನಡ ಚಿತ್ರರಂಗದಲ್ಲೇ ವನ್ಯಜೀವಿಗಳಿಗೆ ಸಂಬಂಧಿಸಿದ ಕಾಡಿನರಾಜ, ಮೃಗಾಲಯ, ರಾಮಲಕ್ಷ್ಮಣ, ನಾನೇರಾಜ, ಕಾಡಿನ ರಹಸ್ಯ, ಬೆಟ್ಟದಹುಲಿ ಮುಂತಾದ ಹತ್ತು ಹಲವು ಚಿತ್ರಗಳ ನಿರ್ಮಾಣಕ್ಕೇ ವಿನಿಯೋಗಿಸಿ ಒಟ್ಟು 16 ಚಿತ್ರಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಮಿಶ್ರಫಲವನ್ನು ಅನುಭವಿಸಿದರು.

shank51974ರಲ್ಲಿ ಗೊರೂರು ರಾಮಸ್ವಾಮಿ ಐಯ್ಯಂಗಾರರ ಕಥಾ ಸಂಕಲನದ ಭೂತಯ್ಯನ ಮಗ ಅಯ್ಯು ಎಂಬ ಸಣ್ಣ ಕಥೆಯನ್ನು ನಿರ್ದೇಶಕ ಸಿದ್ದಲಿಂಗಯ್ಯನವರು ಅತ್ಯಂತ ಮನೋಜ್ಞವಾಗಿ ಚಿತ್ರಕಥೆಯನ್ನು ಸಿದ್ಧಪಡಿಸಿ, ವಿಷ್ಣುವರ್ಧನ್ ಮತ್ತು ಲೋಕೇಶ್ ಮತ್ತು ಅಂಕಲ್ ಲೋಕನಾಥ್ ಅವರ ಆಭಿನಯ ತಕ್ಕಡಿಯಲ್ಲಿ ಒಂದು ಕಡೆಯಾದರೆ ಆ ಮೂರೂ ದಿಗ್ಗಜರಿಗೆ ಸರಿಸಾಟಿಯಾಗುವಂತೆ ಮತ್ತೊಂದು ತಕ್ಕಡಿಯಲ್ಲಿ ಎಂ. ಪಿ. ಶಂಕರ್ ಅವರು ಭೂತಯ್ಯನ ಪಾತ್ರದಲ್ಲಿ ಉತ್ಕೃಷ್ಟವಾಗಿ ನಟಿಸಿದ್ದರು. ಆ ಚಿತ್ರವನ್ನು ವೀಕ್ಷಿಸಲು ಕನ್ನಡದ ಆಸ್ತಿ, ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೊತೆ ಆಗಮಿಸಿದ್ದ ಚಿತ್ರದ ಮೂಲ ಲೇಖಕರಾದ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, ಆ ಚಿತ್ರದಲ್ಲಿ ಭೂತಯ್ಯನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಎಂ. ಪಿ. ಶಂಕರ್ ಅವರ ಅಭಿನಯವನ್ನು ಮೆಚ್ಚಿ, ಇದುವರೆಗೆ ಭೂತಯ್ಯ ನನ್ನವನಾಗಿದ್ದ ಇನ್ನು ಮುಂದೆ ಆತ ನಿನಗೆ ಸೇರಿದವನು ಎಂದು ಶಂಕರ್ ಅವರ ಬೆನ್ನು ತಟ್ಟಿದ್ದರು ಎಂದರೆ ಅವರ ಅಭಿನಯ ಎಷ್ಟರ ಮಟ್ಟಿಗೆ ಇತ್ತು ಎಂಬುದರ ಅರಿವಾಗುತ್ತದೆ. ಕೇವಲ ಖಳ ನಾಯಕ ಮತ್ತು ಪೋಷಕ ಪಾತ್ರವಲ್ಲದೇ ನಾರದವಿಜಯ ಹಾಗೂ ಗಿಡ್ಡೂ ದಾದ ಚಿತ್ರಗಳಲ್ಲಿ ಹಾಸ್ಯ ಪಾತ್ರದಲ್ಲೂ ಅಭಿನಯಿಸುವ ಮೂಲಕ ತಾವೊಬ್ಬ ನವರಸ ನಟ ಎಂಬುದನ್ನು ಜಗಜ್ಜಾಹೀರತು ಪಡಿಸಿದ್ದರು.

shankar3ಇನ್ನು ವಯಕ್ತಿಕವಾಗಿ ಶ್ರೀಮತಿ ಮಂಜುಳ ಅವರನ್ನು ವರಿಸಿದ್ದ ಶಂಕರ್ ಅವರಿಬ್ಬರ ಅನ್ಯೋನ್ಯ ದಾಂಪತ್ಯದ ಕುರುಹಾಗಿ ಪುತ್ರಿ ಶೋಭಾ ಮತ್ತು ತಿಲಕ್, ಹಾಗೂ ವಿರೂಪಾಕ್ಷ ಎಂಬ ಗಂಡು ಮಕ್ಕಳ ತಂದೆಯಾಗಿದ್ದರು. ಎಂ. ಪಿ. ಶಂಕರ್ ಅವರ ಚಿತ್ರರಂಗದ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ನಟ ಶಾರ್ದೂಲ, ಕಲಾಶಾರ್ದೂಲ, ಮೈಸೂರು ಹುಲಿ, ಕಲಾಸೇವಾಧುರೀಣ, ಕನ್ನಡ ಭೂಷಣ, ಸಾಹಸೀ ಚಿತ್ರರತ್ನ, ಕರುಣಾ ರತ್ನ ಇನ್ನು ಮುಂತಾದ  ವಿವಿಧ ರೀತಿಯ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿದ್ದವು.

ವಯಸ್ಸಾದಂತೆ ಚಿತ್ರರಂಗದಲ್ಲಿ ಪಾತ್ರಗಉ ಕಡಿಮೆಯಾಗಿದ್ದಲ್ಲದೇ ಅವರು ನಿರ್ಮಿಸಿದ ಕೆಲವು ಚಿತ್ರಗಳು ಯಶಸ್ವಿಯಾಗದೇ ಅಪಾರವಾದ ಹಣವು ನಷ್ಟವಾದಾಗ, ಬಹಳ ಪ್ರೀತಿಯಿಂದ ಶಂಕರ್ ಮತ್ತು ದ್ವಾರಕೀಶ್ ಜೋಡಿಯಾಗಿ ನಟಿಸಿದ ಹಾಸ್ಯ ಚಿತ್ರ ಗಿಡ್ಡುದಾದಾ ಕೂಡ ಅಂತಹ ಹೆಸರು ಮಾಡದೇ ಹೋದಾಗ ಬಹಳವಾಗಿ ನೊಂದುಕೊಳ್ಳುತ್ತಾರೆ. ಅದೇ ಸಮಯದಲ್ಲಿ ತಮ್ಮ ಉಳಿತಾಯದ ಹಣವನ್ನು ವಿನಿವಿಂಕ್ ಶಾಸ್ತ್ರಿಗಳ ಜೊತೆಯಲ್ಲಿ ವ್ಯವಹಾರ ಸಂಬಂಧ ಬೆಳೆಸಿ, ಅಂದಿನ ಕಾಲಕ್ಕೇ ಸುಮಾರು 15 ಲಕ್ಷ ರೂಪಾಯಿಗಳಷ್ಟು ಹಣವನ್ನು ನಷ್ಟ ಮಾಡಿಕೊಂಡ ನಂತರವಂತೂ ದೇಹದ ಆರೋಗ್ಯ ತೀವ್ರತರವಾಗಿ ಹದಗೆಟ್ಟು ಅಗ್ಗಾಗ್ಗೆ ಆಸ್ಪತ್ರೆಗೆ ಸೇರಿಕೊಳ್ಳಬೇಕಾಗುತ್ತದೆ.

ಆ ಇಳೀ ವಯಸ್ಸಿನಲ್ಲಿ ಅದೊಮ್ಮೆ ತಮ್ಮ ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾದ ಕಾರಣ ಹತ್ತಿರದ ವಿಕ್ರಮ್ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖರಾಗಿ ಮನೆಗೆ ವಾಪಸ್ ಬಂದರೂ, ಬಹಳ ಸಮಯದಿಂದಲೂ ಕಾಡುತ್ತಿದ್ದ ಪಿತ್ತಕೋಶದ ಕ್ಯಾನ್ಸರ್ ನಿಂದಾಗಿ, ದಿನಾಂಕ 17, ಜುಲೈ 2008 ರಂದು ತಮ್ಮ 73 ನೇ ವಯಸ್ಸಿನಲ್ಲಿ ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ ಕಾಳಿದಾಸ ರಸ್ತೆಯಲ್ಲಿದ್ದ ತಮ್ಮ ಸ್ವಗೃಹವಾದ ಮಂಜುನಾಥ ನಿಲಯದಲ್ಲಿ ದೈವಾಧೀನರಾಗುವ ಮೂಲಕ ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ನಟ ನಿರ್ದೇಶಕ ಮತ್ತು ಹೃದಯವಂತ ಧೈರ್ಯವಂತ ನಿರ್ಮಾಪಕನನ್ನು ಕಳೆದುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

shank6ಹಲವಾರು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ್ದಲ್ಲದೇ ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಯ ಕುರಿತಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರಗಳ ಮೂಲಕ ಕನ್ನಡಿಗರ ಜೊತೆಯಲ್ಲೇ ಇದ್ದು, ವ್ಯಕ್ತಿಯಾಗಿ ಎಂ.ಪಿ. ಶಂಕರ್ ಸತ್ತಿದ್ದರೂ, ಕಲಾವಿದರುಗಳಿಗೆ ಸಾವಿಲ್ಲ. ಅವರು ತಮ್ಮ ಚಿತ್ರಗಳ ಮೂಲಕ ಆಚಂದ್ರಾರ್ಕವಾಗಿ ಜೀವಂತವಾಗಿರುತ್ತಾರೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ. ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅವಿಸ್ಮರಣೀಯರಾಗಿದ್ದ ಸರಳ, ಸಜ್ಜನ ಪರಿಸರ ಪ್ರೇಮಿಯಾಗಿದ್ದ ಶ್ರೀ ಎಂ. ಪಿ. ಶಂಕರ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s