ಜಿ. ಕೆ. ವೆಂಕಟೇಶ್

knಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು, ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು, ಹೀಗೆ ನಗುತಲಿರುವುದು. ರಾಜಕುಮಾರ್ ಅಭಿನಯದ, ಪಿ.ಬಿ.ಶ್ರೀನಿವಾಸ್ ಹಾಡಿರುವ ಈ ಹಾಡು ಖಂಡಿತವಾಗಿಯೂ ಕನ್ನಡದ ಅತ್ಯುತ್ತಮ 5 ಹಾಡುಗಳಲ್ಲಿ ಇದೂ ಸಹಾ ಒಂದು ಎಂದು ಹೇಳಿದರೆ ಉತ್ಪೇಕ್ಷವಾಗದು. ಈ ಕಸ್ತೂರಿ ನಿವಾಸ ಸಿನಿಮಾ ಅಲ್ಲದೇ, ಕನ್ನಡ ಇನ್ನೂ ಹತ್ತಾರು ಸಿನಿಮಾಗಳಲ್ಲಿ ತಮ್ಮ ಮಾಧುರ್ಯಪೂರ್ಣವಾದ ಸಂಗೀತದ ಮೂಲಕ ಸಿನಿಮಾವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಕೀರ್ತಿಯನ್ನು ಹೊಂದಿರುವ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಶ್ರೀ ಜಿ.ಕೆ.ವೆಂಕಟೇಶ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಗುರ್ಜದ ಕೃಷ್ಣದಾಸ್ ವೆಂಕಟೇಶ್ ಎಲ್ಲರ ಪ್ರೀತಿಯ ಜಿ.ಕೆ.ವೆಂಕಟೇಶ್ ಅವರು 1927 ಸೆಪ್ಟೆಂಬರ್ 21 ರಂದು ಹೈದರಾಬಾದಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ವೆಂಕಟೇಶ್ ಅವರಿಗೆ ಅವರ ಅಣ್ಣನೇ ಮೊದಲ ಗುರು. ಅಣ್ಣನಿಂದ ಚಿಕ್ಕವಯಸ್ಸಿನಲ್ಲೇ ವೀಣಾಭ್ಯಾಸದ ಜೊತೆ ಗಾಯನವನ್ನೂ ಆಭ್ಯಾಸ ಮಾಡಿ, ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾದರು. ಸಂಗೀತದಲ್ಲೇ ಹೆಚ್ಚಿನ ಆಸಕ್ತಿ ಇದ್ದ ಕಾರಣ ವಿದ್ಯೆಗಿಂತಲೂ ಸಂಗೀತದ ಕಡೆಯೇ ಒತ್ತು ಕೊಟ್ಟು, ಹಲವು ಸಂಗೀತ ದಿಗ್ಗಜರ ಜೊತೆಯಲ್ಲಿ ವೀಣಾವಾದನವನ್ನು ಮಾಡುತ್ತಾ, ಅದರಲ್ಲೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರುಗಳಾದ ಎಸ್.ವೆಂಕಟರಾಮನ್ ಮತ್ತು ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿ, ಚಲಚಿತ್ರ ಸಂಗಿತದ ಒಳ ಹೊರಹುಗಳನ್ನು ಕಲಿಯುವುದರ ಜೊತೆಯಲ್ಲೇ, ಬೆಂಗಳೂರಿನ ಆಕಾಶವಾಣಿಯಲ್ಲಿ “ಎ” ಗ್ರೇಡ್ ಗಾಯಕರಾಗಿ ಅಯ್ಕೆಯಾಗುವ ಮೂಲಕ ಬೆಂಗಳೂರಿಗೆ ಬರುತ್ತಾರೆ.

GKV61952 ರಲ್ಲಿ ಒಂದು ಮಲಯಾಳಂ ಚಿತ್ರಕ್ಕೆ ಸಂಗೀತ ಸಂಯೋಜಿಸುವುದರ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರೆ, ಕನ್ನಡ ಚಿತ್ರರಂಗ ಸಿಂಗ್ ಠಾಕೂರರ, ಡಾ.ರಾಜಕುಮಾರ್ ಅಭಿನಯದ ಸೋದರಿ ಚಿತ್ರಕ್ಕೆ ಪದ್ಮನಾಭಶಾಸ್ತ್ರಿ ಅವರೊಡನೆ ಸಂಗೀತ ನೀಡುವ ತಮ್ಮ ಎರಡನೇ ಚಿತ್ರದಲ್ಲೇ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಸಮ್ಮಿಶ್ರಣದ ಜೊತೆ ವಿದೇಶೀ ಸಂಗೀತವನ್ನು ಉಪಯೋಗ ಮಾಡುತ್ತಾ ತಮ್ಮದೇ, ವೈಶಿಷ್ಟ್ಯಪೂರ್ಣ ಸಂಗೀತದ ಮೂಲಕ ಕನ್ನಡದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಲ್ಲದೇ, ನಂತರ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕನ್ನಡದ ಸಂಗೀತ ನಿರ್ದೇಶಕರು ಎಂದೇ ಹೆಸರುವಾಸಿಯಾಗಿದ್ದರು.

GKV2ಸಾಧಾರಣವಾಗಿ ಚಿತ್ರದ ನಿರ್ದೇಶಕರು ತಮ್ಮ ಸಿನಿಮಾದ ಸನ್ನಿವೇಶಗಳನ್ನು ಸಂಗೀತ ನಿರ್ದೇಶಕರಿಗೆ ವಿವರಿಸಿ ಅದಕ್ಕೆ ಅನುಗುಣವಾದ ಟ್ಯೂನ್ ಗಳನ್ನು ಮಾಡಿಸಿ ಅದೇ ಟ್ಯೂನ್ ಮತ್ತು ಸನ್ನಿವೇಶಗಳನ್ನು ಹಾಡುಗಳನ್ನು ಬರೆಯುವ ಕವಿಗಳಿಗೆ ವಿವರಿಸಿ ಸನ್ನಿವೇಶ ಮತ್ತು ಸಿದ್ಧಪಡಿಸಿದ ಟ್ಯೂನ್ ಗಳಿಗೆ ಹಾಡುಗಳನ್ನು ಬರೆಸಿ ಅದನ್ನು ಹಾಡುಗಾರರಿಂದ ಹಾಡಿಸುವುದು ವಾಡಿಕೆ. ಹಾಗಾಗಿ  ಚಲನಚಿತ್ರಕ್ಕೆ ಹಾಡು ಬರೆಯುವವರನ್ನು ಕವಿಗಳು ಎಂದು ಯಾವ ಸಾಹಿತಿಗಳು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ವಿರುದ್ಧವಾಗಿ ಕವಿಗಳ ಜನಪ್ರಿಯ ಗೀತೆಗಳಿಗೆ ಚಂದದ ರಾಗವನ್ನು ಹಾಕಿ ಆ ಗೀತೆಗಳಿಗೆ ಮತ್ತಷ್ಟು ಮೆರೆಗು ಮತ್ತು ಕೀರ್ತಿಯನ್ನು ಕೊಟ್ಟ ಹೆಗ್ಗಳಿಗೆ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ. 1962ರಲ್ಲಿ ತೆರೆಕಂಡ ಎಸ್.ಕೆ.ಎ.ಚಾರಿ ನಿರ್ದೇಶನದ ಗೌರಿ ಚಿತ್ರದಲ್ಲಿ ಕುವೆಂಪು ಅವರ ಯಾವ ಜನ್ಮದ ಮೈತ್ರಿ ಮತ್ತು ಕೆ.ಎಸ್.ನರಸಿಂಹಸ್ವಾಮಿ ಅವರ ಇವಳು ಯಾರು ಬಲ್ಲೆಯೇನು? ಕವಿತೆಗಳನ್ನು ಅಳವಡಿಸಿದ್ದರೆ, 1962 ರಲ್ಲೇ ಕರುಣೆಯೇ ಕುಟುಂಬದ ಕಣ್ಣು ಎಂಬ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರವನ್ನೂ ವೆಂಕಟೇಶ್ ಅವರೇ ನಿರ್ಮಾಣ ಮಾಡುವ ಮೂಲಕ ಸಾಹಿತಿಗಳಿಗೆ ಚಿತ್ರರಂಗದಲ್ಲಿ ಮನ್ನಣೆ ಸಿಗುವಂತೆ ಮಾಡಿದ್ದರು. ಇದೇ ಕರುಣೆಯೇ ಕುಟುಂಬದ ಕಣ್ಣು ಚಿತ್ರದ ನಿಜವೋ ಸುಳ್ಳೋ ನಿರ್ಧರಿಸಿ ಎಂಬ ಹಾಡಿಗೆ ಸುಮಾರು 80 ವಾದ್ಯಗಾರನ್ನು ಬಳಸಿಕೊಳ್ಳುವ ಮೂಲಕ ಆ ಕಾಲದಲ್ಲೇ ದಾಖಲೆಯನ್ನು ಬರೆದಿದ್ದರು.

ಜಿ.ಕೆ. ವೆಂಕಟೇಶ್ ಅವರು ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದದ್ದೂ ಸಹಾ ಸ್ವಲ್ಪ ವಿಚಿತ್ರ ಎನಿಸುತ್ತಿದ್ದದ್ದಂತೂ ಸುಳಲ್ಲಾ. ಚಿತ್ರದ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಹಾಡುಗಳ ಸನ್ನಿವೇಶವನ್ನು ವಿವರಿಸುತ್ತಿದ್ದಂತೆಯೇ, ವೆಂಕಟೇಶರು ಅಲ್ಲೇ ಇರುತ್ತಿದ್ದ ಒಂದು ಚಾಪೆಯನ್ನು ನೆಲದ ಮೇಲೆ ಹಾಸಿಕೊಂಡು ಕೆಲವೇ ನಿಮಿಷಗಳಲ್ಲೇ ಗಾಢ ನಿದ್ರೆಗೆ ಜಾರಿ, ನಂತರ ನಿದ್ದೆಯಿಂದ ಛಂಗನೆ ಎಚ್ಚರಗೊಂಡು ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆಯೇ ಚಿತ್ರದ ನಿರ್ದೇಶಕ ಮತ್ತು ನಿರ್ಮಾಕರು ಒಪ್ಪಿಕೊಳ್ಳುವಂತಹ ಟ್ಯೂನ್ ಗಳನ್ನು ಹಾಕುತ್ತಿದ್ದದ್ದು ವಿಚಿತ್ರ ಎನಿಸಿದರೂ ವಿಶೇಷವಾಗಿತ್ತು. ಪ್ರತೀ ಬಾರಿಯೂ ಈ ರೀತಿ ಏಕೆ ಮಾಡುತ್ತೀರಿ? ಎಂದು ವೆಂಟೇಶರನ್ನು ಕೇಳಿದರೆ, ಇದು ದೈವ ಪ್ರೇರಣೆ. ಸಿನಿಮಾದ ಸನ್ನಿವೇಶವನ್ಣೇ ತಲೆಯಲ್ಲಿಟ್ಟುಕೊಂಡು ನಿದ್ದೆಗೆ ಜಾರಿದಾಗ ನನಗೇ ತಿಳಿಯಂತೆ ಚಿತ್ರಕ್ಕೆ ಸೂಕ್ತವಾದ ಟ್ಯೂನ್ ನನ್ನ ತಲೆಯಲ್ಲಿ ಹೊಳೆಯುತ್ತಿದ್ದದ್ದಲ್ಲದೇ, ನಿದ್ದೆಯಿಂದ ಎಚ್ಚರಿಕೆಯಾಗುವುದರ ಹಿಂದೆ ಯಾವ ಶಕ್ತಿ ಇದೆ ಎಂದು ನನಗೆ ಖಂಡಿತವಾಗಿಯೂ ತಿಳಿದಿಲ್ಲ ಎಂದು ಮುಗ್ಛವಾಗಿ ಹೇಳುತ್ತಿದ್ದರಂತೆ.

GKV1ಸಾಧಾರಣವಾಗಿ ಸಿನಿಮಾರಂಗದಲ್ಲಿ ಒಬ್ಬರನ್ನು ಮತ್ತೊಬ್ಬರು ತುಳಿಯುತ್ತಲೇ ಮೇಲೆ ಬರುವವರೇ ಹೆಚ್ಚಾಗಿರುವಾಗ, ಜಿ.ಕೆ.ವೆಂಕಟೇಶ್ ಇದಕ್ಕೆ ಅಪವಾದ ಎಂಬಂತೆ, ಚಿತ್ರರಂಗಕ್ಕೆ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಪಿ. ಬಿ. ಶ್ರೀನಿವಾಸ್, ಮಲೆನಾಡಿನ ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಸಿ.ಅಶ್ವಥ್, ಸುಲೋಚನಾ ಮುಂತಾದ ಪ್ರತಿಭಗಳನ್ನು ಗುರುತಿಸಿ ತಮ್ಮ ಚಿತ್ರಗಳಲ್ಲಿ ಅವರಿಗೆ ಅವಕಾಶ ಕೊಟ್ಟು ಬೆಳಸಿದರೆ, ತಮ್ಮ ಸಂಗೀತ ನಿರ್ದೇಶನದಲ್ಲಿ ವಿವಿಧ ವಾದ್ಯಗಳನ್ನು ಹಿನ್ನಲೆ ವಾದ್ಯಗಾರರಾಗಿ ನುಡಿಸುತ್ತಿದ್ದಂತಹ ಇಳಯರಾಜ, ಎಲ್.ವೈದ್ಯನಾಥನ್, ಶಂಕರ್ ಗಣೇಶ್ ಮುಂತಾದವರುಗಳನ್ನು ಮುನ್ನಲೆಗೆ ತಂದಿದ್ದಲ್ಲದೇ, ಮುಂದೆ ಇವರೆಲ್ಲಾ, ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರುಗಳಾಗಿ ಬೆಳೆಯುವುದರಲ್ಲಿ ಜಿ.ಕೆ.ವೆಂಕಟೇಶ್ ಅವರ ಕಾಣಿಕೆ ಅಪಾರವಾಗಿದೆ.

yareತಮ್ಮ ಅದ್ಭುತವಾದ ನಟನೆ ಮತ್ತು ಸಂಭಾಷಣೆಯ ಮೂಲಕ ಅದಾಗಲೇ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸುಪ್ರಸಿದ್ಧರಾಗಿದ್ದ ರಾಜಕುಮಾರರಿಗೆ ಪಿ.ಬಿ.ಶ್ರೀನಿವಾಸ್ ಅವರೇ ಹಿನ್ನಲೆ ಗಾಯನ ಮಾಡುತ್ತಿದ್ದರು. ಆದರೆ ವೃತ್ತಿ ರಂಗಭೂಮಿಯಲ್ಲಿ ಸ್ವತಃ ರಾಜಕುಮಾರರೇ ಕಂದ ಪದ್ಯಗಳನ್ನು ಸುಶ್ರಾವ್ಯವಾಗಿ  ಹಾಡುತ್ತಿದ್ದದ್ದನ್ನು ಅರಿತಿದ್ದ ವೆಂಕಟೇಶ್ ಅವರು ರಾಜಕುಮಾರ್ ಅವರಿಂದ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಯುಗಳಗೀತೆಯನ್ನು ಹಾಡಿಸುವ ಮೂಲಕ ಅವರನ್ನು ಕನ್ನಡ ಚಿತ್ರರಂಗಕ್ಕೆ ಒಬ್ಬ ಅದ್ಭುತವಾದ ಗಾಯಕರನ್ನು ಪರಿಚಯಿಸಿದ್ದಲ್ಲದೇ, ಮತ್ತೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಯಾರೇ ಕೂಗಾಡಲಿ.. ಎಂಗ ಗೀತೆಯನ್ನು ಹಾಡಿಸುವ ಮೂಲಕ ರಾಜಕುಮಾರ್ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದ್ದಲ್ಲದೇ, ಅವರ ಶರೀರಕ್ಕೆ ಅವರೇ ಶಾರೀರವನ್ನು ಕೊಡುವಂತಾಗಲು ಜಿ.ಕೆ. ವೆಂಕಟೇಶ್ ಅವರೇ ಕಾರಣೀ ಭೂತರಾದರು. ಮುಂದೆ ಅದೇ ರಾಜಕುಮಾರ್ ಅವರು ನಾದಮಯ ಈ ಲೋಕವೆಲ್ಲಾ ಗೀತೆಗಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಗಾಯಕ ಎಂಬ ಪ್ರಶಸ್ತಿ ಪಡೆದ ಮೊತ್ತ ಮೊದಲ ನಾಯಕ ಮತ್ತು ಗಾಯಕ ಎಂಬ ಕೀರ್ತಿಗೆ ಪಾತ್ರರಾದದ್ದು ಈಗ ಇತಿಹಾಸ.

GKV3ಸಂಧ್ಯಾರಾಗ, ಭಕ್ತ ಕುಂಬಾರ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಸೇರಿದಂತೆ ಸುಮಾರು 120ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ 600 ಗೀತೆಗಳಿಗೆ ಸಂಗೀತ ನೀಡಿದ್ದ ಜಿ.ಕೆ.ವೆಂಕಟೇಶ್, ಭಕ್ತ ಕುಂಬಾರ ಮತ್ತು ಹೊಸ ನೀರು ಚಿತ್ರಗಳಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು. ಇನ್ನು ಆಗೊಮ್ಮೆ ಈಗೊಮ್ಮೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದ ಜಿ.ಕೆ.ವೆಂಕಟೇಶ್ ಕೆಲವೊಂದು ಅದ್ಭುತವಾದ ಹಾಡುಗಳನ್ನು ಹಾಡಿದ್ದು ಅವುಗಳಲ್ಲಿ ಕಣ್ತೆರೆದು ನೋಡು ಚಿತ್ರದ ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ, ಭೂತಯ್ಯನ ಮಗ ಅಯ್ಯು ಚಿತ್ರದ ವಿರಸವೆಂಬ ವಿಷಕೆ ಹಾಡುಗಳು ಒಂದಾದರೆ, ಕಸ್ತೂರಿ ನಿವಾಸ ಸಿನಿಮಾದ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ, ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ.. ಹಾಡು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.

ಚಿತ್ರರಂಗದಲ್ಲಿ ಕೇವಲ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿದ್ದಲ್ಲದೇ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದರು. 1964 ರಲ್ಲಿ ವೆಂಕಟೇಶ್ ತುಂಬಿದ ಕೊಡ ಚಿತ್ರವನ್ನು ನಿರ್ಮಾಣ ಮಾಡಿದ್ದಲ್ಲದೇ, ಈ ಚಿತ್ರದಲ್ಲಿ ಕಾದಂಬರಿಗೆಳ ಸಾರ್ವಭೌಮ ಅನಕೃ ಅವರನ್ನು ಬೆಳ್ಳಿತೆರೆಯ ಮೇಲೆ ಪರಿಚಯಿಸಿದ್ದಲ್ಲದೇ, ಅದಾಗಲೇ ಕನ್ನಡ ಜನಪದ ಮತ್ತು ಸುಗಮ ಸಂಗೀತದಲ್ಲಿ ಪ್ರಖ್ಯಾತರಾಗಿದ್ದ ಶ್ರೀ ಪಿ.ಕಾಳಿಂಗರಾಯರಿಂದ ಅಂತಿಂಥ ಹೆಣ್ಣು ನೀನಲ್ಲ ಎಂಬ ಗೀತೆಯನ್ನು ಹಾಡಿಸಿದ್ದಲ್ಲದೇ, ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ತೋರಿಸಿದ್ದದ್ದು ವಿಶೇಷವಾಗಿತ್ತು.

1962ರಲ್ಲಿ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಇಮ್ಮಡಿ ಪುಲಿಕೇಶಿ ಐತಿಹಾಸಿಕ ಚಿತ್ರವನ್ನು ನಿರ್ಮಿಸಿದ್ದಲ್ಲದೇ, ಕನ್ನಡದ ಅಂದಿನ ಅನೇಕ ಕಲಾವಿದರುಗಳೇ ಸೇರಿಕೊಂಡು ಸೇರಿಕೊಂಡು ನಿರ್ಮಿಸಿದ ರಣಧೀರ ಕಂಠೀರವ ಸಿನಿಮಾದಲ್ಲೂ ಪಾಲುದಾರರಾಗಿದ್ದರು. 1970ರಲ್ಲಿ ಅವರೇ ನಿರ್ಮಿಸಿದ್ದ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿತ್ತು. ಇದೇ ಸಿನಿಮಾದಲ್ಲಿ ಅದುವರೆವಿಗೂ ಕೇವಲ ನಟರಾಗಿ ಪರಿಚಿತವಾಗಿದ್ದ ಆರ್. ಎನ್. ಸುದರ್ಶನ್ ಅವರ ಕೈಯಲ್ಲಿ ಇರಬೇಕು ಇರಬೇಕು ಅರಿಯದ ಕಂದನ ತರಹ ಎಂಬ ಹಾಡನ್ನು ಹಾಡಿಸುವ ಮೂಲಕ ಸುದರ್ಶನ್ ಅವರನ್ನು ಗಾಯಕರನ್ನಾಗಿಸಿದ ಕೀರ್ತಿಯೂ ಜೆ.ಕೆ.ವೆಂಕಟೇಶ್ ಅವರಿಗೇ ಸಲ್ಲುತ್ತದೆ.

GKV4ಖ್ಯಾತ ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ನಟ ಮತ್ತು ನಿರ್ಮಾಪಕರಾಗಿ 60 ರ ದಶಕದಿಂದ ಸುಮಾರು 90 ರ ದಶಕದವರೆಗೆ ಕನ್ನಡ, ತಮಿಳು ,ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಜಿ.ಕೆ.ವೆಂಕಟೇಶ್ ಹಲವಾರು ಪ್ರಥಮಗಳಿಗೆ ಕಾರಣವಾಗಿದ್ದರು. ಕನ್ನಡ ಚಿತ್ರಗಳಲ್ಲಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಹಿನ್ನಲೆ ಸಂಗೀತವನ್ನೂ ಪರಿಚಯಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ.  ಖ್ಯಾತ ಹಿಂದೂಸ್ಥಾನಿ ಗಾಯಕರಾಗಿದ್ದ ಶ್ರೀ ಬೀಮಸೇನ ಜೋಷಿಯವರಿಂದ ಗಾಯನ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ರಿಂದ ಶೆಹನಾಯಿ ನುಡಿಸಿದ ಶ್ರೇಯಯೂ ಸಹಾ ಇವರಿಗೇ ಸಲ್ಲುತ್ತದೆ. ಡಾ.ರಾಜಕುಮಾರ್ ಅವರು ನಟಿಸಿದ 200 ಚಿತ್ರಗಳ ಪೈಕಿ 50ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನೀಡಿರುವ ಹೆಗ್ಗಳಿಕೆಯೂ ಜಿ.ಕೆ.ವೆಂಕಟೇಶ್ ಅವರಿಗೇ ಸಲ್ಲುತ್ತದೆ.

ತಮ್ಮ ಇಳೀ ವಯಸ್ಸಿನಲ್ಲಿ ನಿರ್ಮಾಣ ಮಾಡಿದ ಚಿತ್ರಗಳು ಯಶಸ್ವಿಯಾಗದೇ ಅಪಾರವಾದ ಆರ್ಥಿಕ ನಷ್ಟವನ್ನು ಅನುಭವಿಸಿದ್ದಲ್ಲದೇ ಹೊಸ ಹೊಸ ಸಂಗೀತ ನಿರ್ದೇಶಕರು ಆಧುನಿಕ ಶೈಲಿಯಲ್ಲಿ ಸಂಗೀತ ನಿರ್ದೇಶನ ಮಾಡಲು ಮುಂದಾದಾಗ ಜಿ.ಕೆ.ವೆಂಕಟೇಶ್ ರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಾಗದೇ ಕೆಲ ಕಾಲ ಖಿನ್ನತೆಗೂ ಒಳಗಾಗುತ್ತಾರೆ. ಹೀಗೆ ಅವರು ಅನಾರೋಗ್ಯಕ್ಕೆ ತುತ್ತಾದಾಗ, ಅವರ ಪಟ್ಟ ಶಿಷ್ಯರಾದ ಇಳಿಯರಾಜ, ವೆಂಕಟೇಶ್ ಅವರನ್ನು ಮದರಾಸಿಗೆ ಕರೆದುಕೊಂಡು ತಮ್ಮ ಬಳಿಯಲ್ಲೇ ಇಟ್ಟು ಕೊಂಡು ತಮ್ಮ ಗುರುವಿನ ಋಣವನ್ನು ಸ್ವಲ್ಪ ಮಟ್ಟಿಗೆ ತೀರಿಸಿಕೊಂಡಿದ್ದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯವೇ ಸರಿ. ಶಿಷ್ಯ ಇಳೆಯರಾಜ ಎಷ್ಟೇ ಅದ್ಭುತವಾಗಿ ಆರೈಕೆ ಮಾಡಿದ್ದರೂ, ಶಿಷ್ಯ ಇಳೆಯರಾಜ ಎಷ್ಟೇ ಅದ್ಭುತವಾಗಿ ಆರೈಕೆ ಮಾಡಿದ್ದರೂ, ಕಸ್ತೂರಿ ನಿವಾಸದಲ್ಲೇ ಅವರೇ ಹಾಡಿದ್ದ ಜನಪ್ರಿಯ ಗೀತೆಯಾದ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ.. ಎಂಬುವಂತೆ 1993 ನವೆಂಬರ್ 13 ರಂದು ಚೆನ್ನೈನಲ್ಲಿ ವಿಧಿವಶರಾದರು.

ಹೀಗೆ ಹೈದರಾಬಾದಿನಲ್ಲಿ ಹುಟ್ಟಿ, ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ದಕ್ಷಿಣ ಭಾರತದ ಅಷ್ಟೂ ಚಿತ್ರರಂಗದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಪ್ರಖ್ಯಾತರಾಗಿದ್ದಲ್ಲದೇ, ಅಂತಿಮವಾಗಿ ಚನ್ನೈನಲ್ಲಿ ತಮ್ಮ ಅಂತಿಮ ಪಯಣವನ್ನು ಮುಗಿಸಿದರೂ, ಎಲ್ಲಾ ಕಡೆಯಲ್ಲೂ ಕನ್ನಡದ ಸಂಗೀತ ನಿರ್ದೇಶಕರೆಂದೇ ಹೆಸರಾಗಿದ್ದಲ್ಲದೇ, ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದ ಶ್ರೀ ಜಿ.ಕೆ. ವೆಂಕಟೇಶ್ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s