ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬ ಅಲ್ಲಿನ ಧಾರ್ಮಿಕ ವಿಧಿವಿಧಾನಗಳನ್ನು ಸಂಸ್ಕೃತದ ಬದಲಾಗಿ ತಮಿಳು ಭಾಷೆಯಲ್ಲಿ ನಡೆಸಬೇಕೆಂದು ಕೂಗಾಡುತ್ತಿದ್ದ ವೀಡಿಯೋ ಹರಿದಾಡುತ್ತಿತ್ತು. ಅದೇ ರೀತಿಯಲ್ಲೇ, ವರ್ಷವಿಡೀ ಕುಂಬಕರ್ಣರಂತೆ ಮಲಗಿದ್ದು ನವೆಂಬರ್ ಮಾಸ ಬಂದಕೂಡಲೇ ಎಚ್ಚೆತ್ತು, ಕನ್ನಡದ ಅಸ್ತಿತ್ವ, ಅಸ್ಮಿತೆ ಎಂದು ಬೀದಿಗೆ ಬಂದು ಹೋರಾಟ ಮಾಡುವುದೇ ಕನ್ನಡದ ಸೇವೆ ಎಂದು ಬೊಬ್ಬಿರಿಯುವ ಕಾಲಘಟ್ಟದಲ್ಲೀ, ಈ ಎರಡೂ ಕಾರ್ಯಗಳನ್ನು ನಿಸ್ವಾರ್ಥವಾಗಿ, ಸದ್ದಿಲ್ಲದ್ದೇ ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಹಿರೇಮಗಳೂರಿನ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಕನ್ನಡವನ್ನು ಒಪ್ಪಿ ಕೊಂಡು, ಅಪ್ಪಿಕೊಂಡು, ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಕನ್ನಡದ ಪೂಜಾರಿ ಎಂದೇ ಪ್ರಖ್ಯಾತವಾಗಿರುವ ವಾಗ್ಮಿ, ಕವಿ, ಸಾಹಿತಿ, ಸಾಮಾಜಿಕ ಸುಧಾರಕರಾದ ಹಿರೇಮಗಳೂರು ಶ್ರೀ ಕಣ್ಣನ್, ಎಲ್ಲರ ಪ್ರೀತಿಯ ಕಣ್ಣನ್ ಮಾಮಾ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.
ತಮಿಳುನಾಡಿನ ಮೂಲದವರಾದ ಶ್ರೀ ಸವ್ಯಸಾಚಿ (ಪಾರ್ಥಸಾರಥಿ) ಮತ್ತು ಶ್ರೀಮತಿ ಶಕುಂತಲಾ ಬಾಯಿ ಅವರ ದ್ವಿತೀಯ ಪುತ್ರರಾಗಿ ಕಣ್ಣನ್ ಅವರ ಜನಿಸುತ್ತಾರೆ. ಸ್ವತಃ ಶ್ರೀ ಸವ್ಯಸಾಚಿಗಳು ವೇದ ಉಪನಿಷತ್ತು, ಸಂಸ್ಕೃತ, ತಮಿಳು ಮತ್ತು ಕನ್ನಡವನ್ನು ಬಲ್ಲ ವಿವ್ದಾಂಸರಾಗಿದ್ದು, ವೃತ್ತಿಯಲ್ಲಿ ದೇವಸ್ಥಾನದ ಅರ್ಚಕರಾಗಿದ್ದು ಪ್ರವೃತ್ತಿಯಲ್ಲಿ ಸಮಾಜ ಸುಧಾರಕರು ಮತ್ತು ಕವಿಹೃದಯದ ಸಾಹಿತಿಗಳಾಗಿದ್ದರು. ಪೌರೋಹಿತ್ಯ ಎನ್ನುವುದು ವಂಶಪಾರಂಪರ್ಯ ಮತ್ತು ಕೇವಲ ಜಾತಿಯಾಧಾರಿತವಾಗಿರದೇ, ಶ್ರದ್ಧಾ ಭಕ್ತಿಗಳಿಂದ ನಿಯಮಾನುಸಾರ ಯಾರು ಬೇಕಾದರೂ ದೇವರ ಪೂಜೆಯನ್ನು ಮಾಡಬಹುದು ಎಂಬುದನ್ನು ಪ್ರಭಲವಾಗಿ ಸಮರ್ಥನೆ ಮಾಡುತ್ತಿದ್ದದ್ದಲ್ಲದೇ ಕೆಲ ದಲಿತ ಹುಡುಗರಿಗೆ ವೇದಾಗಮವನ್ನು ಕಲಿಸಿಕೊಟ್ಟು ದೇವಸ್ಥಾನದ ಅರ್ಚಕರನ್ನಾಗಿ 60-70ರ ದಶಕದಲ್ಲೇ ಮಾಡಿದ ಕೀರ್ತಿಯೂ ಸಹಾ ಸವ್ಯಸಾಚಿಗಳಿಗೇ ಸಲ್ಲುತ್ತದೆ.
ಇಂತಹ ವಿಶಿಷ್ಠವಾದ ಮನೋಭಾವನೆಯನ್ನು ಹೊಂದಿದ್ದ ಸವ್ಯಸಾಚಿಗಳು ಚಿಕ್ಕಮಗಳೂರಿನ ಬಳಿಯ ಅದಾಗಲೇ ಪಾಳು ಬಿದ್ದಿದ್ದ ಹಿರೇಮಗಳೂರಿನ ಕೋಡಂಡರಾಮ ದೇವಾಲಯಕ್ಕೆ ಅರ್ಚಕರಾಗಿ ಕುಟುಂಬ ಸಮೇತರಾಗಿ ಬಂದು ಅಲ್ಲಿನ ಸ್ಥಳೀಯರ ಸಹಕಾರದಿಂದ ದೇವಾಲಯವನ್ನು ಜೀರ್ಣೊದ್ಧಾರ ಮಾಡಿಸುತ್ತಾರೆ. (ಕೆಲವರ್ಷಗಳ ಹಿಂದೆ ಅದೇ ದೇವಾಲಯದ ಒಳಗೂ ಮತ್ತು ಹೊರಗೂ ಕಣ್ಣನ್ ಅವರು ನಾಡಿನ ವಿವಿಧ ಕವಿಗಳು ಮತ್ತು ಸ್ವತಃ ತಮ್ಮದೇ ಚುಟುಕುಗಳನ್ನು ಬರೆಸಿರುವುದನ್ನು ಓದುವುದಕ್ಕೇ ಒಂದು ದಿನ ಸಾಲದು) ನಾಲ್ಕಾರು ಮಕ್ಕಳ ತುಂಬು ಕುಟುಂಬದಲ್ಲಿ ಅವರ ಹಿರಿಯ ಮಗ ಚಕ್ರವರ್ತಿ ಮತ್ತು ಎರಡನೆಯ ಮಗ ಕಣ್ಣನ್ ಅತ್ಯಂತ ಚುರುಕಾಗಿದ್ದು ಸಣ್ಣ ವಯಸ್ಸಿನಲ್ಲಿಯೇ, ಮಾತೃಭಾಷೆ ತಮಿಳು, ವ್ಯಾವಹಾರಿಕವಾಗಿ ಕನ್ನಡ, ಮತ್ತು ದೈನಂದಿನ ಪೂಜಾ ಕೈಂಕರ್ಯಕ್ಕಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿಕೊಂಡಿದ್ದಲ್ಲದೇ, ತಮ್ಮ ತಂದೆಯವರಂತೆಯೇ ವಿಚಾರವಾದಿಗಳಾಗಿರುತ್ತಾರೆ. ಸ್ವತಃ ಕವಿಗಳಾಗಿದ್ದರೂ ಅನೇಕ ಕನ್ನಡದ ಕವಿಗಳನ್ನು ಓದಿಕೊಂಡಿದ್ದ ಸವ್ಯಸಾಚಿಗಳು, ತಮ್ಮ ಮಕ್ಕಳೊಡನೆ ಕನ್ನಡ ಭಾಹೆಯ ಸೊಗಡು, ಕನ್ನಡದ ಸಾಹಿತ್ಯದ ಕುರಿತಾಗಿ ಚರ್ಚಿಸುತ್ತಿರುವಾಗಲೇ, ಶಾಲಾ ಶಿಕ್ಷಕರಾಗಿದ್ದುಕೊಂಡೇ ಕವಿಗಳಾಗಿದ್ದ ಶ್ರೀ ಈಶ್ವರ ಸಣಕಲ್ಲ ಅವರ
ಜಗವೆಲ್ಲ ನಗುತಿರಲಿ! ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ? ನಾ ನಕ್ಕು, ಜಗವಳಲು ನೋಡಬಹುದೇ?
ಎಂಬ ಪದ್ಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿ, ನಾವು ಪ್ರತಿನಿತ್ಯ ದೇವರ ಪೂಜೆ ಮಾಡುವಾಗ ಹೇಳುವ ಸಂಸ್ಕೃತದ ಮಂತ್ರಗಳು ಭಕ್ತಾದಿಗಳಿಗೆ ಅರ್ಥವಾಗದೇ ಸುಮ್ಮನೇ ಅರ್ಚಕರು ಹೇಳಿದ್ದಕ್ಕೆ ತಲೆಗೂಗುವ ಬದಲು ಈ ಸಂಸ್ಕೃತದ ಮಂತ್ರಗಳನ್ನೇಕೆ ಕನ್ನಡದಲ್ಲಿ ಸೂಕ್ತವಾಗಿ ಅನುವಾದಮಾಡಿ ಬಳಸಬಾರದು? ಎಂಬ ಯೋಚನೆ ಬಂದ ಕೂಡಲೇ, ಕನ್ನಡದಲಿ ಭಿನ್ನಹ ಗೈದೊಡೆ ಹರಿ ವರಗಳ ಮಳೆ ಕರೆಯುವನು ಎಂಬ ಕುವೆಂಪುರವರು ತಮ್ಮ ಪದ್ಯದಲ್ಲಿ ಬರೆದಿರುವಂತೆ, ಕಾರ್ಯಪ್ರವೃತ್ತರಾಗಿ ಸಣ್ಣ ಪ್ರಮಾಣದಲ್ಲಿ ನಿತ್ಯವೂ ಹನುಮ ಸಮೇತನಾದ, ಸೀತಾ ಮಾತೆ, ಲಕ್ಷ್ಮಣರಾದಿಯಾಗಿ ನಿಂತಿರುವ ಶ್ರೀ ಕೋದಂಡರಾಮರಿಗೆ ಕನ್ನಡದಲ್ಲಿ ಪೂಜೆ ಮಾಡಲು ಪ್ರಾರಂಭಿಸಿ ನಂತರದ ದಿನಗಳಲ್ಲಿ ಅಭಿಷೇಕ, ಅಲಂಕಾರ, ಮಂಗಳಾರತಿ ಹೀಗೆ ಎಲ್ಲಾ ಸೇವೆಗಳೂ ಅಚ್ಚ ಕನ್ನಡದಲ್ಲೇ ಸ್ವಚ್ಚವಾಗಿ ಎಲ್ಲರಿಗೂ ಸುಲಲಿತವಾಗಿ ಅರ್ಥವಾಗುವಂತಹ ಕನ್ನಡದ ಮಂತ್ರಗಳ ಕರ್ಣಾನಂದವನ್ನು ವರ್ಣಿಸುವುದಕ್ಕಿಂತಲೂ ಎಲ್ಲರೂ ಕೇಳಿ ಅನುಭವಿಸಲೇ ಬೇಕಾದಂತಹ ಸಂಗತಿಯಾಗಿದೆ.
ತಮ್ಮ ಮಕ್ಕಳಿಗೆ ಕೇವಲ ಧಾರ್ಮಿಕ ಶಿಕ್ಷಣವಲ್ಲದೇ ವ್ಯಾವಹಾರಿಕವಾಗಿ ಲೌಕಿಕ ಶಿಕ್ಷಣದ ಮಹತ್ವವನ್ನು ಅರಿತಿದ್ದ ಸವ್ಯಸಾಚಿಗಳು ತಮ್ಮ ಮಕ್ಕಳಿಗೆ ಬೆಂಗಳೂರಿನಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡುತ್ತಾರೆ. ತಂದೆಯ ಇಚ್ಚೆಯಂತೆಯೇ, ಕಣ್ಣನ್ ಅವರು ಬಸವನಗುಡಿಯ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಬಿಎ ಪದವಿಗೆ ಸೇರಿಕೊಳ್ಳುತ್ತಾರೆ. ಅಲ್ಲೂ ಸಹಾ ತಮ್ಮ ಕನ್ನಡ ಪ್ರೀತಿಯನ್ನು ಮರೆಯದ, ಕಣ್ಣನ್ ಚರ್ಚಾಸ್ಪರ್ಧೆ, ಆಶುಭಾಷಣ, ಪ್ರಬಂಧ ಸ್ಪರ್ಥೆಗಳಲ್ಲಿ ಭಾಗವಹಿಸುವುದಲ್ಲದೇ, ತಮ್ಮದೇ ಆದ ಸಮಾನ ವಯಸ್ಕ ಮತ್ತು ಮನಸ್ಕರಾದ ಪುಂಡಲೀಕ್ ಹಾಲಂಬಿ, ಮಹೇಶ್ ಜೋಶಿ, ಸಂಜೀವ್ ಮುಂತಾದವರ ತಂಡವನ್ನು ಕಟ್ಟಿಕೊಂಡು ಕನ್ನಡ ಸಂಘವನ್ನು ಕಟ್ಟಿಕೊಂಡು ಕನ್ನಡದ ನಾಟಕಗಳನ್ನು ಆಡಿರುತ್ತಾರಲ್ಲದೇ ಬಿಸಿ ರಕ್ತದ ತರುಣರಾಗಿ ಕನ್ನಡದ ಮಾಧ್ಯಮದವರೇಕೆ ಇಂಗ್ಲೀಷ್ ಪರೀಕ್ಷೆ ಬರೆಯಬೇಕು? ಎಂಬ ಬಂಡಾಯದ ಕಹಳೆಯನ್ನೂ ಊದಿದ್ದದ್ದು ಈಗ ಇತಿಹಾಸ. ಪದವಿಯನ್ನು ಮುಗಿಸಿದ ಅವರ ಅಣ್ಣ ಚಕ್ರವರ್ತಿ ಆಜನ್ಮ ಬ್ರಹ್ಮಚಾರಿಯಾಗಿ ಸಮಾಜಸೇವೆ ಮಾಡುವ ಸಲುವಾಗಿ ಸಂಘದ ಪ್ರಚಾರಕರಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರೆ ಕಣ್ಣನ್ ಆವರು ಹೇಮಾವತಿ ಎಂಬುವವರನ್ನು ಕಲ್ಯಾಣವಾಗಿ ಮತ್ತೆ ಹಿರೇಮಗಳೂರಿಗೆ ಹಿಂದಿರುಗಿ ತಮ್ಮ ತಂದೆಯವರ ಜೊತೆ ಕನ್ನಡದ ಪೌರೋಹಿತ್ಯಕ್ಕೆ ಕೂಡಿಕೊಳ್ಳುತ್ತಾರೆ.
ಇವೆಲ್ಲದರ ನಡುವೆಯೇ ಕನ್ನಡದ ಬಹುತೇಕ ದೊಡ್ಡ ದೊಡ್ಡ ಸಾಹಿತಿಗಳ ಸಾಹಿತ್ಯವನ್ನು ಓದಿ ಅರಗಿಸಿಕೊಂಡಿದ್ದಲ್ಲದೇ, ಪತ್ರಿಕೆಗಳು ಮತ್ತು ಪುಸ್ತಕಗಳ ಮೂಲಕ ಸಣ್ಣ ಸಣ್ಣ ಸಾವಿರಾರು ಕವಿ ಮತ್ತು ಸಾಹಿತಿಗಳ ಲೇಖನಗಳು, ಕವನಗಳು, ಚುಟುಕುಗಳನ್ನು ಓದಿ ಮನನ ಮಾಡಿಕೊಳ್ಳುತ್ತಾರೆ. ಕಣ್ಣನ್ ಆವರ ನೆನಪಿನ ಶಕ್ತಿ ನಿಜಕ್ಕೂ ಅಗಾಧವಾದರು. ಒಮ್ಮೆ ಪುಸ್ತಕದಲ್ಲಿ ಓದಿದ್ದನ್ನು ಶಾಶ್ವತವಾಗಿ ತಮ್ಮ ಮಸ್ತಕದಲ್ಲಿ ಉಳಿಸಿಕೊಂಡಿರುವುದು ಕಣ್ಣನ್ ಅವರ ಹೆಗ್ಗಳಿಕೆಯಾಗಿದೆ. ಹಾಗಾಗಿಯೇ ಇಂದಿಗೂ ಸಹಾ ಕ್ಷಣ ಮಾತ್ರದಲ್ಲಿ ಸಮಯ ಮತ್ತು ಸಂಧರ್ಭೋಚಿತವಾಗಿ ನೂರಾರು ಕವಿಗಳ ಸಾವಿರಾರು ಪದ್ಯಗಳು, ಚುಟುಕುಗಳನ್ನು ಹೇಳುವುದು ನಿಜಕ್ಕೂ ಅದ್ಭುತವೇ ಸರಿ.
ಇಷ್ಟೆಲ್ಲಾ ಜ್ಞಾನ ಸಂಪತ್ತನ್ನು ಹೊಂದಿಯೂ ಎಲೆಮರೆ ಕಾಯಿಯಂತೆ ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿದ್ದ ಕಣ್ಣನ್ ಅವರ ಅಮೋಘ ಪ್ರತಿಭೆಯನ್ನು ಜಗಜ್ಜಾಹೀರಾತು ಮಾಡಿದ ಕೀರ್ತಿ ಅಂದಿನ ಉದಯ ಟಿವಿ ಛಾನೆಲ್ಲಿಗೆ ಸೇರುತ್ತದೆ. ಆರಂಭದಲ್ಲಿ ತಿಂಗಳಿಗೆ ಒಂದೆರಡು ದಿನ ಬೆಂಗಳೂರಿನ ಉದಯ ಟಿವಿ ಸ್ಟುಡಿಯೋಗೆ ಬಂದು, ಒಂದು ತಿಂಗಳಿಗೆ ಆಗವಷ್ಟು 4-5 ನಿಮಿಷಗಳ ನುಡಿಮುತ್ತುಗಳನ್ನು ರೆಕಾರ್ಡಿಂಗ್ ಮಾಡಿಕೊಡುತ್ತಿರುತ್ತಾರೆ. ಅವರ ಈ ವೀಡೀಯೋಗಳನ್ನು ಪ್ರತಿ ದಿನ ಮುಂಜಾನೆ ಕೇಳಲು ಕೋಟ್ಯಾಂತರ ಕನ್ನಡಿಗರು ಕಾಯುತ್ತಿದ್ದದ್ದು ವಿಶೇಷ. ಆನಂತರದ ದಿನಗಳಲ್ಲಿ ಸುಧಾ ಬರಗೂರು, ಕೃಷ್ಣೇಗೌಡ, ಪ್ರಾಣೇಶ್, ಚಕ್ರವರ್ತಿ ಸೂಲಿಬೆಲೆ ಇನ್ನು ಮುಂತಾದ ಹೆಸರಾಂತ ಭಾಷಣಕಾರರ ಜೊತೆ ಹಬ್ಬ ಹರಿದಿನಗಳ ಸಂದರ್ಭಕ್ಕೆ ಅನುಗುಣವಾಗಿ ನಡೆಸಿಕೊಡುತ್ತಿದ್ದ ಹರಟೆ ಕಾರ್ಯಕ್ರಮದಲ್ಲಿ ಅರಳು ಹುರಿದಂತೆ ಪಟ ಪಟನೆ ಪ್ರಾಸಬದ್ಧವಾಗಿ ಮಾತನಾಡುತ್ತಾ, ಸೂತ್ರಧಾರಿಯಾಗಿ ಒಬ್ಬರಿಗೆ ಮತ್ತೊಬ್ಬರು ಕೌಂಟರ್ ಕೊಡುತ್ತಾ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕಣ್ಣನ್ ಮಾಮಾ ಅವರನ್ನು ಇಡೀ ಜಗತ್ತಿಗೇ ಪರಿಚಯಿಸಿತು ಎಂದರೂ ತಪ್ಪಾಗದು.
ಇನ್ನು ವಯಕ್ತಿಯವಾಗಿ ಹೇಳಬೇಕೆಂದರೆ, ಕಣ್ಣನ್ ಮಾಮ ಅವರ ತಂದೆ ಸವ್ಯಸಾಚಿಗಳು ಮತ್ತು ನನ್ನ ತಾತ ಗಮಕಿ ನಂಜುಂಡಯ್ಯನವರದ್ದು ಗಳಸ್ಯ ಕಂಠಸ್ಯ ಗೆಳೆತನವಿದ್ದು, ಅವರಿಬ್ಬರೂ ತಮ್ಮ ತಮ್ಮ ಲೇಖನಗಳನ್ನು ಪರಸ್ಪರ ವಿಮರ್ಶೆ ಮಾಡಿಕೊಳ್ಳುತ್ತಿದ್ದರಿಂದ ಕಣ್ಣನ್ ಮಾಮನವರಿಗೂ ನಮ್ಮ ತಾತ, ತಂದೆ ಯವರ ಪರಿಚಯವಿದ್ದು, ನಮ್ಮ ತಾತನವರ ಅನೇಕ ಕೃತಿಗಳು ಕಣ್ಣನ್ ಅವರ ನಾಲಿಗೆ ತುದಿಯಲ್ಲಿದ್ದು, ಪ್ರತಿಬಾರಿ ಅವರನ್ನು ಭೇಟಿಯಾದಾಗ, ಏನು ಬಾಳಗಂಚಿಯವರೇ ಎಂದು ಸಂಬೋಧಿಸುತ್ತಲೇ ನಮ್ಮ ತಾತನವರ ಕೃತಿಗಳನ್ನು ಹೇಳಿಯೇ ಮಾತನಾಡಲು ಆರಂಭಿಸುವುದು ವಿಶೇಷವಾಗಿದೆ. ನಮ್ಮ ಬ್ಲಾಗ್ ಮತ್ತು ಯೂಟ್ಯೂಬ್ ಛಾನೆಲ್ಲಿನ ಹೆಸರಾದ “ಏನಂತೀರಿ?” ಎಂಬ ಟ್ಯಾಗ್ ಲೈನ್ ಕೂಡಾ ಕಣ್ಣನ್ ಮಾಮಾ ಪ್ರತೀದಿನ ಉದಯ ಟಿವಿಯಲ್ಲಿ ಕಾರ್ಯಕ್ರಮ ಮುಗಿಸಿ ನಾಳೇ ಭೇಟೀಯಾಗೋಣವೇ? ಏನಂತೀರೀ? ಎಂದು ಹೇಳುತ್ತಿದ್ದದ್ದರಿಂದ ಪಡೆದ ಸ್ಪೂರ್ತಿಯಾಗಿದೆ.
ಕನ್ನಡದ ಅಗ್ರಪೂಜೆಯ ಎಲ್ಲಾ ಮಂತ್ರಗಳನ್ನು ಒಟ್ಟು ಮಾಡಿ ನುಡಿಪೂಜೆ ಎಂಬ ಪುಸ್ತಕವಲ್ಲದೇ, ನಾನಾಪತ್ರಿಕೆಗಳಲ್ಲಿ ಬರೆದ ವಿವಿಧ ಲೇಖನಗಳು ಮತ್ತು ಅಂಕಣಗಳನ್ನು ಒಟ್ಟುಗೂಡಿಸಿದ ಕಣ್ಣನ್ ನೋಟ ಎಂಬ ಪುಸ್ತಕವನ್ನು ಹೊರತಂದಿದ್ದಲ್ಲದೇ, ನಮ್ ರೇಡಿಯೋ’ ಎನ್ನುವ ಎಫ್.ಎಮ್ ರೇಡಿಯೋ ಸ್ಟೇಷನ್ ನಲ್ಲಿ ಕಾಫಿ ವಿತ್ ಕಣ್ಣನ್ ಎನ್ನುವ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದರು.
ಧಾರ್ಮಿಕವಾಗಿಯೂ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅವರ ಅಪಾರವಾದ ಸೇವೆಯನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಕಣ್ಣನ್ ಅವರಿಗೆ ಪ್ರೀತಿಯಿಂದ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲು ಮುಂದಾದರೆ, ಪರಮ ಸ್ವಾಭಿಮಾನಿಯಾದ ಕಣ್ಣನ್ ಅವರು, ಈ ಪ್ರಶಸ್ತಿ ಪುರಸ್ಕಾರಗಳಿಗೆ ಅರ್ಹರಾದವರು ನನಗಿಂತಲೂ ಅನೇಕರು ಇದ್ದಾರೆ ಎಂದು ನಯವಾಗಿ ನಿರಾಕರಿಸಿದ ಅನೇಕ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ. ಕಣ್ಣನ್ ಕನ್ನಡದ ಕಣ್ಣು ಎಂದು ಪ್ರಶಸ್ತಿಯನ್ನೂ ಸಹಾ ಇದೇ ರೀತಿಯಾಗಿ ನಿರಾಕರಿಸಿದ್ದರೆ, ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮುಂದಾದಾಗ ಅದನ್ನು ಬಾರಿ ಬಾರಿ ನಿರಾಕರಿಸಿದಾಗ, ಚಿಕ್ಕಮಗಳೂರಿನವರೇ ಸಚಿವರಾಗಿದ್ದ ಸಿ.ಟಿ.ರವಿಯವರ ಒತ್ತಾಯಕ್ಕೆ ಮಣಿದು ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಮೂರ್ನಾಲ್ಕು ದಶಕಗಳ ದಾಂಪತ್ಯದ ನಂತರ ಅಕಾಲಿಕವಾಗಿ ಅವರ ಪತ್ನಿ ಹೇಮಾರವರು ನಿಧನರಾದಾಗ ಕೆಲ ಕಾಲ ಅನ್ಯಮನಸ್ಕರಾಗಿ ತಟಸ್ಥರಾಗಿದ್ದ ಕಣ್ಣನ್ ಮಾಮಾ, ತಮಗೆ ಮಕ್ಕಳಿರದ ಕಾರಣ, ಅವರ ತಮ್ಮನ ಮಗ ಮತ್ತು ಮೊಮ್ಮಕ್ಕಳಿಗೆ ತಮ್ಮ ಕನ್ನಡದ ಪೌರೋಹಿತ್ಯವನ್ನೆಲ್ಲಾ ಧಾರೆ ಎರೆದು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪಾದರಸದಂತೆ ರಾಜ್ಯಾದ್ಯಂತ ನಡೆಯುವ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಅಪಾರವಾದ ಜ್ಞಾನ ಸಂಪತ್ತನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಇಂದಿನ ಅಧುನಿಕ ಕಾಲದಲ್ಲೂ ಸಂಪರ್ಕಕ್ಕಾಗಿ ಅವರು ತಮ್ಮ ಬಳಿ ಮೊಬೈಲ್ ಇಟ್ಟುಕೊಳ್ಳದೇ ಇರುವುದು ಸಹಾ ಗಮನಾರ್ಹವಾಗಿದೆ. ಇಂದಿಗೂ ಸಹಾ ಅವರ ಎಲ್ಲಾ ವ್ಯವಹಾರವೆಲ್ಲವೂ ಸಹಾ ಪತ್ರಮುಖೇನವಾಗಿಯೇ ನಡೆಯುತ್ತಿರುವುದು ವಿಶೇಷವಾಗಿದೆ. ಹೀಗೆ ಎನ್ನಡ ಎನ್ನುವ ಭಾಷೆಯವರಾಗಿದ್ದು ಕನ್ನಡ ಎನ್ನುತ್ತಾ, ಧಾರ್ಮಿಕ ಮತ್ತು ಸಾರಸ್ವತ ಲೋಕದಲ್ಲಿ ಸದ್ದಿಲ್ಲದೇ ನಿರಂತರವಾಗಿ ಕನ್ನಡ ಸೇವೆಯನ್ನು ಮಾಡುತ್ತಿರುವ ಕನ್ನಡದ ಕಟ್ಟಾಳು, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರು ನಮ್ಮ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
ಹಿರೇಮಗಳೂರು ಕಣ್ಣನ್ ಅವರ ಬಗ್ಗೆ ಅನೇಕ ಕುತೂಹಲಕಾರಿ ವಿಶಯಗಳನ್ನು ತಿಳಿಸಿದ ಅವರ ಕಾಲೇಜು ಸಹಪಾಠಿಗಳಾದ ಆತ್ಮೀಯರಾದ ಶ್ರೀ ದ್ವಾರಕಾನಾಥ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಶ್ರೀ ಹಿರೇಮಗಳೂರು ಕಣ್ಣನ್ ಅವರ ಬಗ್ಗೆ ತಾವು ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ. ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿ ಒಳ್ಳೆಯ ಲೇಖನ ಸಿದ್ದಪಡಿಸಿದ್ದೀರಿ. ಅಭಿನಂದನೆಗಳು.
LikeLiked by 1 person
ಎಲ್ಲಾ ನಿಮ್ಮ ಸಹಕಾರವಷ್ಟೇ.
LikeLike
ಪರಿಚಯಾತ್ಮಕ ಲೇಖನ ಮನೋಜ್ಞವಾಗಿದೆ
LikeLiked by 1 person
ಧನ್ಯೋಸ್ಮಿ
LikeLike