ಕುಂಬ್ಲೆ ಸುಂದರ ರಾವ್

ಕುಂಬ್ಲೆ ಅವಿಭಜಿತ ಕರಾವಳಿಯ ಭಾಗವಾಗಿದ್ದು ಒಂದು ಕಾಲದಲ್ಲಿ ತುಳುವ ಸಾಮ್ರಾಜ್ಯದ ಕುಂಬಳ ರಾಜರ ಅಧೀನದಲ್ಲಿದ್ದ ಪ್ರದೇಶವಾಗಿದ್ದು, ಭಾಷಾವಾರು ಪ್ರಾಂತ್ಯ ವಿಭಜನೆಯಾದಾಗ ಕಾಸರಗೋಡಿನ ಜೊತೆಯಲ್ಲಿಯೇ ಕೇರಳಕ್ಕೆ ಸೇರಿಹೋಗಿದ್ದು ಬೇಸರದ ಸಂಗತಿಯಾಗಿದೆ. ಮಂಗಳೂರು ಮತ್ತು ಕಾಸರಗೋಡಿನ ಮಾರ್ಗದಲ್ಲಿ ಮಂಗಳೂರಿನಿಂದ 42 ಕಿಮೀ ದೂರದಲ್ಲಿರುವ ಕುಂಬ್ಲೆ ಕೋಟೆಯ ಹೊರತಾಗಿ ಆ ಊರಿನ ಹೆಸರನ್ನು ಪ್ರಖ್ಯಾತ ಗೊಳಿಸಿದ ಕೀರ್ತಿ ಇಬ್ಬರಿಗೆ ಸೇರಿದ್ದು, ಮೊದಲಿಗೆ ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಲೆ ಅವರದ್ದಾದರೆ ಮತ್ತೊಬ್ಬರು ಕುಂಬ್ಳೆ ಸುಂದರ ರಾವ್ ಅಥವಾ ಎಲ್ಲರ ಪ್ರೀತಿಯ ಕುಂಬ್ಳೆ ಸುಂದರ ರಾಯರು ಎಂದರೂ ತಪ್ಪಾಗದು. ತಮ್ಮ 88ನೇ ವಯಸ್ಸಿನಲ್ಲಿ ನವೆಂಬರ್ 30, 2022 ರಂದು ನಿಧನರಾದ ಯಕ್ಷಗಾನ ಮತ್ತು ತಾಳ-ಮದ್ದಳೆಯ ಖ್ಯಾತ ಕಲಾವಿದರೂ, ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಶ್ರೀ ಕುಂಬ್ಲೆ ಸುಂದರ್ ರಾವ್ ನಮ್ಮ ಇಂದಿನ ಕನ್ನಡ ಕಲಿಗಳು ಕಥಾ ನಾಯಕರು.

kumಕುಂಬಳೆಯಲ್ಲಿ ನೇಕಾರ ವೃತ್ತಿಯನ್ನು ಮಾಡುತ್ತಿದ್ದ ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಜನಿಸಿದ ಮಗು ನೋಡಲು ಅತ್ಯಂತ ಸುಂದರವಾಗಿದ್ದ ಕಾರಣ ಸುಂದರ ಎಂದು ನಾಮಕರಣ ಮಾಡುತ್ತಾರೆ. ಮನೆಯ ಮಾತೃ ಭಾಷೆ ಮಲಯಾಳಂ ಆಗಿದ್ದರೂ, ಸುತ್ತಮುತ್ತಲೂ ಕನ್ನಡಿಗರೇ ಹೆಚ್ಚಾಗಿದ್ದ ಕಾರಣ, ಅತ್ಯಂತ ಸುಸ್ಪಷ್ಟವಾಗಿ ತಮ್ಮ ಮಾತೃಭಾಷೆಯ ಜೊತೆಗೆ ಕನ್ನಡವನ್ನೂ ಕಲಿತಿದ್ದದ್ದಲ್ಲದೇ, ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆಯುತ್ತಾರೆ. ನಂತರ ಮನೆಯ ಜೀವನದ ದುಸ್ತರವಾಗಿ, ಕುಟುಂಬದ ನಿರ್ವಹಣೆಗಾಗಿ ಒಲ್ಲದ ಮನಸ್ಸಿನಿಂದಲೇ, ಶಿಕ್ಷಣವನ್ನು ಕೈಬಿಟ್ಟು ಕುಟುಂಬದ ಜೀವನಾಧಾರವಾಗಿದ್ದ ನೇಯ್ಗೆಯ ಸಾಂಪ್ರದಾಯಿಕ ಕೌಶಲಗಳನ್ನು ಆಸಕ್ತಿ ಇಲ್ಲದೇ ಇದ್ದರೂ ಕಲಿಯುತ್ತಲೇ ತಮ್ಮ ತಂದೆ ತಾಯಿಯರ ಕೆಲಸದಲ್ಲಿ ಸಹಾಯ ಮಾಡುತ್ತಿರುತ್ತಾರೆ.

ಹೇಳಿ ಕೇಳಿ ಕರಾವಳಿ ಪ್ರದೇಶ ಸಾಹಿತ್ಯ ಮತ್ತು ಕಲೆಗಳಿಗೆ ಪ್ರಸಿದ್ಧವಾಗಿದ್ದು, ಅದರಲ್ಲೂ ಕಥಕ್ಕಳಿ ಮತ್ತು ಯಕ್ಷಗಾನದ ಅಲ್ಲಿನ ಜನರ ಜೀವನಾಡಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯವಷ್ಟೇ. ಬೆಳಗಿನ ಹೊತ್ತು ತಂದೆಯ ಜೊತೆ ನೇಯ್ಗೆಯ ಕೆಲಸ ಮಾಡುತ್ತಲೇ ಸಂಜೆಯ ಹೊತ್ತು ತಮ್ಮೂರಿನ ಯಕ್ಷಗಾನ ಕಲಾವಿದರುಗಳು ಮಾಡುತ್ತಿದ್ದ ತಾಲೀಮನ್ನು ನೋಡುತ್ತಲೇ ತಮಗೇ ಅರಿವಿಲ್ಲದಂತೆ ಯಕ್ಷಗಾನದತ್ತ ಮನಸ್ಸು ಸೆಳೆಯುತ್ತದೆ.

ಪ್ರತೀದಿನವೂ ಅನೇಕ ಪಾತ್ರಧಾರಿಗಳ ತಾಲೀಮು ನೋಡುತ್ತಿದ್ದ ಯುವಕ ಸುಂದರರಿಗೆ ಆ ಪಾತ್ರಧಾರಿಗಳು ಸಂಭಾಷಣೆ, ಹಾವ ಭಾವ ಅಭಿನಯ ಎಲ್ಲವೂ ಒಂದು ರೀತಿ ಕಂಠಪಾಠವಾಗಿ ಮನೆಗೆ ಹಿಂದಿಗಿದ ನಂತರ ಅದನ್ನೇ ಏಕಲವ್ಯನಂತೆ ಅಭ್ಯಾಸ ಮಾಡುತ್ತಿರುತ್ತಾರೆ. ಅದೊಮ್ಮೆ ಯಕ್ಷಗಾನ ಪ್ರಸಂಗದ ದಿನ ಪಾತ್ರಧಾರಿಯೊಬ್ಬರು ಅಚಾನಕ್ಕಾಗಿ ಅನಾರೋಗ್ಯಕ್ಕೆ ಈಡಾದಾಗ, ಆ ಯಕ್ಷಗಾನದ ತಂಡ, ಪ್ರತಿದಿನವೂ ತಾಲೀಮು ಸಮಯದಲ್ಲಿರುತ್ತಿದ್ದ ಸುಂದರ್ ಅವರನ್ನು, ಆ ಪಾತ್ರವನ್ನು ನಿಭಾಯಿಸಲು ಸಾಧ್ಯವೇ?  ಎಂದು ಕೇಳುವ ಮೂಲಕ, ಸುಂದರ್ ರಾವ್ ಅವರ ಜೀವನದಲ್ಲಿ ಒಂದು ಮಹತ್ವದ ತಿರುವನ್ನು ಪಡೆಯಿತು ಎಂದರೂ ತಪ್ಪಾಗದು.

ಇಂದೊಂದು ರೀತಿಯಲ್ಲಿ ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಬಯಸದೇ ಅಂದ ಭಾಗ್ಯವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡ 19ರ ತರುಣ ಸುಂದರ, ಅತ್ಯಂತ ಯಶಸ್ವಿಯಾಗಿ ಭಾಗವತವನ್ನು ನಿಭಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು. ನಂತರ ಸುಪ್ರಸಿದ್ಧ ವೇಷಧಾರಿ ಕುಂಬ್ಳೆ ಕುಟ್ಯಪ್ಪನವರಿಂದ ಶಾಸ್ತ್ರೀಯವಾಗಿ ಯಕ್ಷಗಾನದ ಪ್ರಾಥಮಿಕ ನಾಟ್ಯಾಭ್ಯಾಸ ಮಾಡಿ ಅತ್ಯಂತ ಚಿಕ್ಕವಯಸ್ಸಿನ ಭಾಗವತ ಎಂಬ ಕೀರ್ತಿಗೆ ಪಾತ್ರರಾಗಿ ಹತ್ತಾರು ಅವಕಾಶಗಳು ಹುಡುಕಿಕೊಂಡು ಬರತೊಡಗಿದಾಗ, ತಮ್ಮ ಕುಲವೃತ್ತಿಯನ್ನು ಬಿಟ್ಟು ಯಕ್ಷಗಾನದಲ್ಲೇ ತಮ್ಮ ಜೀವನವನ್ನು ಮುಂದುವರೆಸಲು ತೀರ್ಮಾನಿಸಿ, 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ತಮ್ಮ ಪ್ರಥಮ ತಿರುಗಾಟ ನಡೆಸಲು ಆರಂಭಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

sund4ನೋಡ ನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ ಅವರು ಕೇವಲ ಭಾಗವತಿಕೆಯಲ್ಲದೇ, ಯಕ್ಷಗಾನದ ಇತರೇ ಎಲ್ಲಾ ವೈಶಿಷ್ಟ್ಯಗಳ ಮೇಲೆ ಪಾಂಡಿತ್ಯವನ್ನು ಪಡೆಯಲಾರಂಭಿಸಿದ್ದಲ್ಲದೇ, ಸಾಂಪ್ರದಾಯಿಕ ಶೈಲಿಯಿಂದ ಹೊರತಾದ ತಮ್ಮದೇ ಶೈಲಿಯನ್ನು ರೂಢಿಸಿಕೊಂಡ ಕಾರಣ ಜನರಿಗೆ ಬಹಳ ಬೇಗ ಇಷ್ಟವಾಗ ತೊಡಗಿದರು. ಅವರ ಸಮಕಾಲೀನ ಕಲಾವಿದರಾಗಿದ್ದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಅವರು ಅತ್ಯಂತ ಸಾಂಪ್ರದಾಯಿಕ ಶೈಲಿಯಲ್ಲಿ, ಪುಸ್ತಕದಲ್ಲಿ ಇದ್ದಂತಹ ಸಂಭಾಷಣೆಗಳನ್ನೇ ಪ್ರಸಂಗಗಳಲ್ಲಿ ಪ್ರಸ್ತುತ ಪಡಿಸುತ್ತಿದ್ದರೆ, ಕುಂಬ್ಲೆ ಅವರ ಸಂಭಾಷಣೆಗಳು ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಸ್ವಯಂಪ್ರೇರಿತವಾಗಿರುತ್ತಿದ್ದ ಕಾರಣ, ಒಂದೇ ಪ್ರಸಂಗವಾದರೂ, ಹತ್ತು ಹಲವು ಕಡೆಗಳಲ್ಲಿ ವಿವಿಧ ರೀತಿಯ ಸಂಭಾಣೆಯಿಂದ ಕೂಡಿರುತ್ತಿದ್ದದ್ದಲ್ಲದೇ, ಹೆಚ್ಚು ತ್ವರಿತವಾಗಿ ಹಾಸ್ಯಮಯಗಿರುತ್ತಿದ್ದ ಕಾರಣ ಜನರನ್ನು ಮತ್ತೆ ಮತ್ತೆ ಅವರ ಯಕ್ಷಗಾನವನ್ನು ನೋಡಲು ಸೆಳೆಯುವಂತೆ ಮಾಡುತ್ತಿದ್ದದ್ದು ವಿಶೇಷವಾಗಿತ್ತು.

sund11953 ರಲ್ಲಿ ಇರಾ ಸೋಮನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳದಲ್ಲಿ ನಡೆದ ನಾಟಕ ಮೇಳಗಳಲ್ಲಿ ಭಾಗವಹಿಸಿ ಹೊಸ ಶಿಖರಗಳನ್ನು ತಲುಪಿದ ನಂತರ  ಪಯಣ ಸುಧೀರ್ಘವಾಗಿ ಆರಂಭವಾಗಿ, ಧರ್ಮಸ್ಥಳದಲ್ಲಿಯೇ ಸತತ 25 ವರ್ಷಗಳ ಕಾಲ ಪ್ರದರ್ಶನ ನೀಡಿದರು. ಅವರ ಮಾಡುತ್ತಿದ್ದ ರಾಮ, ಕೃಷ್ಣ, ಭರತ, ಪರೀಕ್ಷಿತ, ವಿಶ್ವಾಮಿತ್ರ ಮತ್ತು ರಾಮಚಾರ್ವಾಕ ಪಾತ್ರಗಳನ್ನು ಜನರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಭಿನಯಿಸುವಾಗಲೇ ತಮ್ಮ ಮುಂದಿದ್ದ ಪ್ರೇಕ್ಷಕರೊಂದಿಗೆ ಉತ್ತಮವಾದ ಅನುಬಂಧವನ್ನು ಬೆಳೆಸಿಕೊಳ್ಳುವ ಕಲೆಯನ್ನು ಚೆನ್ನಾಗಿ ರೂಢಿಸಿಕೊಂಡಿದ್ದ ಸುಂದರ ರಾಯರು ಪಾತ್ರ ಮಾಡುವಾಗ, ತಾವು ನಕ್ಕಾಗ, ಪ್ರೇಕ್ಷಕರೂ ಗಹಗಹಿಸಿ ನಗುವಂತೆ, ಅತ್ತಾಗ ಅಳುವಂತೆ, ನೃತ್ಯ ಮಾಡಿದಾಗ ಕುಳಿತಲ್ಲಿಯೇ ಪ್ರೇಕ್ಷಕರೂ ಹೆಚ್ಚು ಹಾಕುವಂತೆ ಮಾಡುತ್ತಿದ್ದದ್ದು ಬಹಳ ವಿಶೇಷವಾಗಿದ್ದ ಕಾರಣ ಅವರ ತಂಡ ಕೇವಲ ಕರ್ನಾಟಕ ಮತ್ತು ಕೇರಳವಲಲ್ದೇ, ಅಬುದಾಬಿ, ದುಬೈ, ಬಹ್ರೇನ್ ಅಲ್ಲದೇ ಇನ್ನೂ ಅನೇಕ ದೇಶಗಳಲ್ಲಿ ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿದ ಹೆಗ್ಗಳಿಕೆ ಪಾತ್ರರಾಗಿದ್ದರು.

sund3ಅದಾಗಲೇ ಯಕ್ಷಗಾನದ ಮೂಲಕ ಸುಪ್ರಸಿದ್ದರಾಗಿದ್ದ ಕಾರಣ, ಸಮಾಜಸೇವೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡರು. 90 ರ ದಶಕದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಲಾಲಕೃಷ್ಣ ಅಡ್ಬಾಣಿಯವರ ನೇತೃತ್ವದಲ್ಲಿ ರಥಯಾತ್ರೆಯ ಸಮದಲ್ಲಿ ಅದರೊಂದಿಗೆ ಜೋಡಿಸಿಕೊಂಡು ತಮ್ಮ ಅದ್ಭುತ ವಾಕ್ಚಾತುರ್ಯದಿಂದ ಎಲ್ಲರನ್ನೂ ಸೆಳೆಯುತ್ತಿದ್ದದ್ದರಿಂದ ಪ್ರಭಾವಿತರಾದ ಬಿಜೆಪಿ ಪಕ್ಷ ಅವರಿಗೆ 1994 ರ ವಿಧಾನ ಸಭಾ ಚುನಾವಣೆಯಲ್ಲಿ ಸುರತ್ಕಲ್ ನಿಂದ ಸ್ಪರ್ಥಿಸಲು ಅವಕಾಶ ನೀಡಿತು. ಅದಾಗಲೇ ಕಲಾವಿದರಾಗಿ ಸುಪ್ರಸಿದ್ಧರಾಗಿದ್ದ ಸುಂದರ್ ರಾವ್ ಸುಲಭವಾಗಿ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆಯಾದ ಮೊದಲ ವೃತ್ತಿಪರ ಯಕ್ಷಗಾನ ಕಲಾವಿದರು ಎನ್ನುವ ಹೆಗ್ಗಳಿಗೆ ಪಾತ್ರರಾದರು.

ಈ ಸಮಯದಲ್ಲಿ ಶಾಸಕರಾಗಿಯೂ, ರಂಗಭೂಮಿ ಮತ್ತು ಯಕ್ಷಗಾನ ಕಲೆ, ಎರಡನ್ನು ಸರಿಸಮನಾಗಿ ತೂಗಿಸಿಕೊಂಡು ಹೋಗಿದ್ದರು. ಆ ಸಮಯದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು ಕುಂಬ್ಳೆ ಅವರಿಂದ ಶುದ್ಧವಾಗಿ ಕನ್ನಡದಲ್ಲಿ ಮಾತನಾಡುವ ವಿಧಾನವನ್ನು ಕಲಿತು ಕೊಳ್ಳುವಂತೆ ಇತರೇ ಶಾಸಕರಿಗೆ ಕಿವಿಮಾತನ್ನು ಹೇಳಿದ್ದರು ಎಂದರೆ ಅವರ ಭಾಷಾ ಪ್ರಾವೀಣ್ಯತೆ ಮತ್ತು ಸಂವಹನಶೀಲತೆ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

sund7ಕೇವಲ ರಾಜಕೀಯ ಮತ್ತು ಯಕ್ಷಗಾನವಲ್ಲದೇ, ಅನೇಕ ಕವನಗಳು ಮತ್ತು ಲೇಖನಗಳ ಮೂಲಕ ಅವರೊಬ್ಬ ಉತ್ತಮ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಅವರ ಅನೇಕ ಲೇಖನಗಳು ಸ್ಥಳೀಯ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅದರಲ್ಲೂ ವಿಶೇಷವಾಗಿ ಹೊಸ ದಿಗಂತ ಪತ್ರಿಕೆಯಲ್ಲಿ ನಾರಾಯಣ ಗುರುಗಳ ನೆನಪುಗಳ ಬಗ್ಗೆ ಅವರ ಅಂಕಣ ಬಹಳ ಪ್ರಸಿದ್ಧವಾಗಿತ್ತು. ಕರಾವಳಿ ಭಾಗದ ಮತ್ತೊಂದು ಜನಪ್ರಿಯ ಪತ್ರಿಕೆಯಾದ ಉದಯವಾಣಿಯಲ್ಲಿಯೂ ಸಹಾ ಪ್ರಕಟಗೊಂಡಿದ್ದ ಅವರ ಅನೇಕ ಲೇಖನಗಳು ಪ್ರಸಿದ್ದಿಯನ್ನು ಪಡೆದಿದ್ದವು. ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ಅವರ ಆತ್ಮಕಥನ ಸುಂದರಕಾಂಡ ಪುಸ್ತಕ ಅವರ ಬರವಣಿಗೆಯ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಇನ್ನು ವಯಕ್ತಿಕವಾಗಿ ಶ್ರೀಮತಿ ಸುಶೀಲಾ ಅವರನ್ನು ವರಿಸಿದ್ದ ಸುಂದರರಾಯರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರು ಇದ್ದು ಮಂಗಳೂರಿನಲ್ಲಿ ನೆಲೆಸಿದ್ದರು.

sund5ಸಾರಸ್ವತ ಲೋಕದಲ್ಲಿನ ಸುಂದರರಾಯರ ಸೇವೆಯನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಅವರಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದವು. ಅವುಗಳಲ್ಲಿ ಪ್ರಮುಖವಾಗಿ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಬಹ್ರೇನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ನವದೆಹಲಿ ಮೂಲದ ಅಕಾಡೆಮಿ ತೆಂಕು ತಿಟ್ಟು ಯಕ್ಷಗಾನದಿಂದ ಯಕ್ಷ ನಿಧಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ, ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಂದ ವಿಜಯ ವಿಠಲ ಪ್ರಶಸ್ತಿಯಲ್ಲದೇ, 2008 ರಿಂದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಯಕ್ಷಾನುಗ್ರಹಿ ಎಂಬ ಬಿರುದಿಗೂ ಪಾತ್ರರಾಗಿದ್ದರು.

sund2ಯಕ್ಷಗಾನ ಕಲೆಯು ಕೇವಲ ಕೆಲವು ವರ್ಗದ ಜನರಿಗೆ ಮಾತ್ರ ಮೀಸಲಾದದ್ದಲ್ಲ. ಇದು ಎಲ್ಲರಿಗೂ ಸೇರಿದ ಕಲೆಯಗಿದ್ದು ಅದು ನಮ್ಮ ಹಿರಿಯರಿಂದ ಆಸ್ತಿಯ ರೂಪದಲ್ಲಿ ಬಂದ ಬಳುವಳಿಯಾಗಿದ್ದು ಅದನ್ನು ಮುಂದಿನ ಪೀಳಿಗೆಗೂ ಕಲಿಸಿಕೊಡುವ ಮೂಲಕ ಈ ಕಲೆಯನ್ನು ಕಣ್ಮರೆಯಾಗದಂತೆ ನೋಡಿಕೊಳ್ಳುವ ಜವಬ್ಧಾರಿ ಎಲ್ಲರ ಮೇಲಿದೆ ಎಂದು ಸದಾ ಕಾಲವೂ ಹೇಳುತ್ತಿದ್ದದ್ದಲ್ಲದೇ, 50 ವರ್ಷಗಳ ಹಿಂದೆಯೇ ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಕಥಕ್ಕಳಿಗೆ ಶಾಸ್ತ್ರಿಯ ಸ್ಥಾನಮಾನ ಸಿಕ್ಕಿರುವಾಗ, ಯಕ್ಷಗಾನವೂ ಸಹಾ ಕಥಕ್ಕಳಿಯಷ್ಟೇ ಸಮಾನವಾಗಿರುವ ಕಾರಣ, ಕಥಕ್ಕಳಿಯಂತೆ ಯಕ್ಷಗಾನಕ್ಕೂ ಶಾಸ್ತ್ರೀಯ ಕಲೆಯ ಸ್ಥಾನಮಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಸುಂದರರಾಯರು, ತಮ್ಮೆಲ್ಲಾ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆಯೂ ಹಾಡುಗಾರಿಕೆ ಮತ್ತು ಯಕ್ಷಗಾನ ತರಬೇತಿ ಕಮ್ಮಟಗಳನ್ನು ನಡೆಸುತ್ತಿದ್ದದ್ದಲ್ಲದೇ ಈ ಕುರಿತಾಗಿ ಪುಸ್ತಕ ಮತ್ತು ಸಿಡಿಗಳನ್ನೂ ಹೊರತಂದಿದ್ದರು.

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ, ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಶ್ರೀಯುತರು, ಸಂಘ ಪರಿವಾರದ ಚಟುವಟಿಕೆಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದಲ್ಲಿಯೂ ಗುರುತಿಸಿಕೊಂಡಿದ್ದಲ್ಲದೇ, ಸರಳತೆ ಮತ್ತು ಸಜ್ಜನಿಕೆಯಿಂದ ಎಲ್ಲರ ಪ್ರೀತಿಯ ಗಳಿಸಿದ್ದ ಕುಂಬ್ಲೆ ಶ್ರೀ ಸುಂದರ್ ರಾವ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s