ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

FB5ಪುಟ್ಬಾಲ್ ಅಥವಾ ಸಾಕರ್ ಎಂದು ಕರೆಯಲ್ಪಡುವ ಕಾಲಿನಿಂದ ಚಂಡನ್ನು ಪರಸ್ಪರ ವಿರುದ್ಧ ದಿಕ್ಕಿನ ಗೋಲ್ ಪೋಸ್ಟಿನೊಳಗೆ ಒದೆಯುವ ಆಟವು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಇತಿಹಾಸದ ಪ್ರಕಾರ ಯೂರೋಪಿನ ರೈತರುಗಳು ತಮ್ಮ ಬಿಡುವಿನ ಸಮಯದಲ್ಲಿ ಮನರಂಜನೆ ಮತ್ತು ದೈಹಿಕ ಪರಿಶ್ರಮಕ್ಕಾಗಿ ಈ ಆಟಗಳು ಕಂಡುಹಿಡಿದರು ಎನ್ನಲಾಗಿದೆ. 18ನೇ ಮತ್ತು 19ನೇ ಶತಮಾನದಲ್ಲಿ ಇಂಗ್ಲೀಷ್ ಪಬ್ಲಿಕ್ ಶಾಲೆಗಳಲ್ಲಿ ಈ ಆಟಗಳು ಹೆಚ್ಚು ಪ್ರಚಲಿತವಾಗಿ ನಂತರ ಬ್ರಿಟಿಷ್ ಸಾಮ್ರಾಜ್ಯದ ಪ್ರಭಾವದಿಂದಾಗಿ ಪ್ರಪಂಚಾದ್ಯಂತ ಹಬ್ಬಿಕೊಂಡು ಈಗ ಅತ್ಯಂತ ಪ್ರಖ್ಯಾತವಾಗಿದೆ.

FIFA1888 ರಲ್ಲಿ ಇಂಗ್ಲೆಂಡಿನಲ್ಲಿ ಫುಟ್ಬಾಲ್ ಲೀಗ್ ಆರಂಭವಾಗುವ ಮೂಲಕ ಅದುವರೆವಿಗೂ ಕೇವಲ ಮನೋರಂಜನೆಯಾಗಿದ್ದ ಆಟ ವೃತ್ತಿಪರ ಆಟವಾಗಿ ಪರಿವರ್ತನೆಗೊಂಡು ಹೆಚ್ಚು ಸ್ಪರ್ಧಾತ್ಮಕವಾಯಿತು. 1930 ರಲ್ಲಿ FIFA ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಫುಟ್‌ಬಾಲ್ ವಿಶ್ವ ಕಪ್ ಪಂದ್ಯಾವಳಿಯನ್ನು FIFA ಅಧ್ಯಕ್ಷರಾದ ಶ್ರೀ ಜೂಲ್ಸ್ ರಿಮೆಟ್ ಅವರು ಆರಂಭಿಸಿದರು.

FB61930 ರಲ್ಲಿ ಆರಂಭವಾದ FIFA ವಿಶ್ವಕಪ್ ಪ್ರತೀ 4 ವರ್ಷಗಳಿಗೊಮ್ಮೆ ಬೇರೆ ಬೇರೆ ದೇಶಗಳಲ್ಲಿ ಆಯೋಜನೆಯಾಗುತ್ತಿದ್ದು, ಪ್ರಸ್ತುತ 2022ರಲ್ಲಿ 22 ನೇ FIFA ವಿಶ್ವಕಪ್ ಅರಬ್ ದೇಶದ ಕತಾರ್‌ನಲ್ಲಿ ನವೆಂಬರ್‌ 20ರಿಂದ ಡಿಸೆಂಬರ್ 18ರ ವರೆಗೆ ಬಹಳ ಅದ್ದೂರಿಯಿಂದ ನಡೆಯುತ್ತಲಿದೆ. ಇದು ಮುಸ್ಲಿಂ ಜಗತ್ತಿನಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಪಂದ್ಯಾವಳಿಯಾಗಿರುವುದು ಮತ್ತಷ್ಟು ವಿಶೇಷವಾಗಿದೆ. ಬಹಳ ವೇಗವಾಗಿ ಅತ್ತಿಂದಿತ್ತ ಕ್ರೀಡಾಳುಗಳ ಕಾಲ್ಚಳಕದ ಅನುಗುಣವಾಗಿ ಆಡಲ್ಪಡುವ ಈ ಆಟದಲ್ಲಿ ಆಟಗಾರಷ್ಟೇ ವೇಗವಾಗಿ ತೀರ್ಪುಗಾರರು ಸಹ ಓಡಾಡುತ್ತಾ, ಚಂಡು ಗೆರೆ ದಾಟಿದೆಯೇ?, ಚಂಡು ಆಟಗಾರನ ಕೈ ತಾಕಿಕೆಯೇ?, ಆಟಗಾರ ಗೋಲ್ ಹೊಡೆದ ಸಂದರ್ಭದಲ್ಲಿ ಆತ ಆಫ್ ಸೈಡ್ ಆಗಿದ್ದಾನೆಯೇ? ಇಲ್ಲವೇ?  ಎಂಬುದೆಲ್ಲವನ್ನೂ ಅವರೇ ತೀರ್ಮಾನಿಸುವ ಕಾರಣ ಅನೇಕ ಬಾರಿ ತಪ್ಪು ನಿರ್ಣಯಗಳು ಬರುವುದು ಸಹಜವಾದ ಪ್ರಕ್ರಿಯೆಯಾಗಿದೆ. ಈ ರೀತಿಯ ತಪ್ಪು ನಿರ್ಣಯಗಳು ಅನೇಕ ಬಾರಿ ಪಂದ್ಯಾವಳಿಯ ಗತಿಯನ್ನೇ ಬದಲಿಸುವ ಕಾರಣ, ಅಂತಹ ತಪ್ಪು ನಿರ್ಣಯಗಳನ್ನು ಕಡಿಮೆ ಮಾಡುವ ಇಲ್ಲವೇ ಸಂಪೂರ್ಣವಾಗಿ ತಡೆಯುವ ನಿಲುವಿನಿಂದಾಗಿ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷವಾದ ಹೈಟೆಕ್ ಚಂಡುಗಳನ್ನು ಆವಿಷ್ಕರಿಸಿ ಬಳಸುತ್ತಿರುವುದು ವಿಶೇಷವಾಗಿದೆ.

FB4ಸಾಧಾರಣವಾಗಿ ಫುಟ್ ಬಾಲ್ ಆಟಕ್ಕೆ ಬಳಸಲಾಗುವ ಚಂಡುಗಳ ಹೊರಭಾಗವನ್ನು ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ಚರ್ಮದಿಂದ ತಯಾರಿಸಿ ಅದರ ಒಳಗೆ ರಬ್ಬರ್ ಬ್ಲಾಡರ್ಗಳನ್ನಿಟ್ಟು ಹೊಲಿದು ಅದಕ್ಕೆ ಸರಿಯಾದ ಪ್ರಮಾಣದ ಗಾಳಿಯನ್ನು ತುಂಬಿ ಆಡಲು ಬಳಸಲಾಗುತ್ತದೆ. ಆದರೆ, ಈ ಬಾರಿಯ 2022ರ ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಗಳಲ್ಲಿ ಬಳಸಲಾಗುತ್ತಿರುವ ಅಲ್ ರಿಹ್ಲಾ ಚಂಡುಗಳು ವಿಶ್ವಕಪ್‌ನಲ್ಲಿ ಇದುವರೆಗೆ ಬಳಸಲಾದ ಚಂಡುಗಳಿಗಿಂತಲೂ ಅತ್ಯಂತ ವಿಶೇಷವಾಗಿದ್ದು ಅವುಗಳು ಹೈಟೆಕ್ ಆಗಿವೆ. ಈ ಚಂಡುಗಳಿಗೆ ಇತರೇ ಚಂಡುಗಳಂತೆ ಗಾಳಿಯನ್ನು ತುಂಬದೇ, ಮೊಬೈಲ್, ಟ್ಯಾಬ್, ಮುಂತಾದ ಎಲೆಕ್ಟ್ರಾನಿಕ್ಸ್ ಸ್ಮಾರ್ಟ್ ಉಪಕರಣಗಳಿಗೆ ವಿದ್ಯುತ್ ಚಾರ್ಜ್ ಮಾಡುವಂತೆ ಈ ಚಂಡುಗಳನ್ನೂ ಸಹಾ ಪಂದ್ಯದ ಮುನ್ನಾ ಚಾರ್ಜ್ ಮಾಡ ಬೇಕಾಗಿರುವುದೇ ವಿಶೇಷವಾಗಿದೆ.

fb1ಕತಾರ್‌ನಲ್ಲಿ ನಡೆಯುತ್ತಿರುವ 2022 ರ ವಿಶ್ವಕಪ್‌ಗಾಗಿ ಬಳಸಲಾಗುತ್ತಿರುವ ಅಧಿಕೃತ ಚಂಡುಗಳಿಗೆ ಅಲ್ ರಿಹ್ಲಾ ಎಂದು ಹೆಸರಿಸಲಾಗಿದ್ದು, ಅಲ್ ರಿಹ್ಲಾ ಎಂದರೆ ಅರೇಬಿಕ್ ಭಾಷೆಯಲ್ಲಿ ಪ್ರಯಾಣ ಎಂಬ ಅರ್ಥವಿದ್ದು, ಇದು ಕತಾರ್‌ನ ಸಂಸ್ಕೃತಿ, ವಾಸ್ತುಶಿಲ್ಪ, ಸಾಂಪ್ರದಾಯಿಕ ದೋಣಿಗಳು ಮತ್ತು ಧ್ವಜದಿಂದ ಪ್ರೇರಿತವಾಗಿದೆ. ಖ್ಯಾತ ಕ್ರೀಡಾ ಉಪಕರಣಗಳ ತಯಾರಕರಾದ ಮತ್ತು 1974ರ ವಿಶ್ವಕಪ್ ಪಂದ್ಯಾವಳಿಗಳಿಂದಲೂ ಅಧಿಕೃತವಾದ ಚಂಡುಗಳ ತಯಾರಕರಾದ ಅಡೀಡಾಸ್‌ ಕಂಪನಿ ಆವಿಷ್ಕರಿಸಿ ತಯಾರಿಸಿದೆ.

ಈ ಚಂಡಿನೊಳಗೆ ಕೇವಲ 14 ಗ್ರಾಂ ತೂಗುವ ಮೈಕ್ರೋ ಚಿಪ್ ಒಂದನ್ನು ಅಳವಡಿಸಲಾಗಿದ್ದು ಅದು ಸಣ್ಣ ಬ್ಯಾಟರಿಯಿಂದ ಚಾಲಿತವಾಗಿರುವ ಕಾರಣ ಅದನ್ನು ಪಂದ್ಯದ ಮುನ್ನಾ ಚಾರ್ಚ್ ಮಾಡಬೇಕಾಗುತ್ತದೆ. ಹೀಗೆ ಒಮ್ಮೆ ಸಂಪೂರ್ಣವಾಗಿ ಚಾರ್ಚ್ ಆದ ಚಂಡನ್ನು ಸುಮಾರು 6  ಗಂಟೆಗಳ ಕಾಲ ಸಕ್ರಿಯವಾಗಿ ಬಳಸಬಹುದಾಗಿದ್ದು, ಈ ಚಂಡುಗಳನ್ನು ಬಳಸದೇ ಇಟ್ಟಲ್ಲಿ ಸುಮಾರು 18 ದಿನಗಳವರೆಗೆ ಅವರ ಚಾರ್ಚ್ ಇರುತ್ತದೆ ಎಂದು ಚಂಡು ತಯಾರಿಕಾ ಸಂಸ್ಥೆಯಾದ ಅಡೀಡಾಸ್ ತಿಳಿಸಿದೆ.

ಮೈಕ್ರೋ ಚಿಪ್ ಪಂದ್ಯದ ಸಮಯದಲ್ಲಿ ಈ ಚಂಡಿನಲ್ಲಿರುವ ಚಿಪ್ ಬಾಲ್-ಟ್ರ್ಯಾಕಿಂಗ್ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೈದಾನದ ಸುತ್ತಲೂ ಅಳವಡಿಸಲಾಗಿರುವ ಕ್ಯಾಮೆರಾಗಳೊಂದಿಗೆ ಆಫ್‌ಸೈಡ್ ಮತ್ತು ಇತರೇ ಪ್ರಶ್ನಾರ್ಹ ನಿರ್ಧಾರಗಳನ್ನು ನಿರ್ಧರಿಸಲು ರೆಫರಿಗಳಿಗೆ ಈ ಚಂಡು ಸುಲಭವಾಗಿ ಸಹಾಯ ಮಾಡುತ್ತದೆ. ಚೆಂಡನ್ನು ಒದ್ದಾಗ ಅಥವಾ ತಲೆಯಿಂದ ತಳ್ಳಿದಾಗ, ಎಲ್ಲವೇ ಕೈಯಿಂದ ಎಸೆಯಲ್ಪಟ್ಟಾಗ, ಇಲ್ಲವೇ ಟ್ಯಾಪ್ ಮಾಡಿದ ಯಾವುದೇ ಸಮಯದಲ್ಲಿ, ಚಂಡಿನೊಳಗಿರುವ ಮೈಕ್ರೋಚಿಪ್ ಕಳುಹಿಸುವ ಸಂದೇಶಗಳನ್ನು ಪ್ರತೀ ಸೆಕೆಂಡಿಗೆ 500 ಫ್ರೇಮ್‌ಗಳಲ್ಲಿ ಹಿಡಿದಿಟ್ಟು ಕೊಳ್ಳಬಹುದಾಗಿದೆ ಎಂದು ಈ ಚಿಪ್ ತಯಾರಿಸಿದ KINEXON ಕಂಪನಿಯವರು ತಿಳಿಸಿದ್ದಾರೆ. ಆಟದ ಸಮಯದಲ್ಲಿ ಚೆಂಡು ಗಡಿಯಿಂದ ಹೊರಗೆ ಹಾರಿಹೋದಾಗ ಮತ್ತು ಹೊಸ ಚೆಂಡನ್ನು ಎಸೆದಾಗ ಅಥವಾ ಅದನ್ನು ಬದಲಿಸಿದಾಗ, KINEXON ನ ಬ್ಯಾಕೆಂಡ್ ಸಿಸ್ಟಮ್ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲದೇ ಸ್ವಯಂಚಾಲಿತವಾಗಿ ಹೊಸ ಚೆಂಡಿನ ಡೇಟಾ ಇನ್‌ಪುಟ್‌ಗೆ ಬದಲಾಗುವುದು ಸಹಾ ವಿಶೇಷವಾಗಿದೆ.

ಅಲ್ ರಿಹ್ಲಾ  ಚೆಂಡಿನ ವೈಶಿಷ್ಟ್ಯಗಳು:

fb3CRT-CORE – ಚೆಂಡಿನ ಹೃದಯ, ವೇಗದ ಗತಿಯ ಕ್ರಿಯೆ ಮತ್ತು ನಿಖರತೆಗಾಗಿ ವೇಗ, ನಿಖರತೆ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ, ಗರಿಷ್ಠ ಆಕಾರ ಮತ್ತು ಗಾಳಿಯ ಧಾರಣ, ಜೊತೆಗೆ ಮರುಕಳಿಸುವ ನಿಖರತೆಯನ್ನು ಹೊಂದಿದೆ.
ಸ್ಪೀಡ್‌ಶೆಲ್ – ಹೊಸ 20-ಪೀಸ್ ಪ್ಯಾನೆಲ್ ಆಕಾರವನ್ನು ಹೊಂದಿರುವ ಟೆಕ್ಸ್ಚರ್ಡ್ ಪಿಯು ಸ್ಕಿನ್, ನಿಖರತೆ, ಹಾರಾಟದ ಸ್ಥಿರತೆಯನ್ನು ಸುಧಾರಿಸುತ್ತದೆ. ಆಟವು ವೇಗವಾಗುತ್ತಿದ್ದಂತೆ, ಚಂಡಿನ ಚಲನವಲನಗಳ ನಿಖರತೆಯನ್ನು ಈ ಚಿಪ್ ಮುಖಾಂತರ ಸುಲಭವಾಗಿ ಕಂಡು ಕೊಳ್ಳಬಹುದಾಗಿದೆ.

FB8ವಿಶ್ವಕಪ್ ಪಂದ್ಯಗಳ ಆಯೋಜಕರಿಗೆ ಬಹಳ ಒತ್ತಡವಿದ್ದು ಪಂದ್ಯಗಳ ಫಲಿತಾಂಶಗಳು ಅತ್ಯಂತ ನಿಖರತೆಯಿಂದ ಇರಬೇಕಾಗುತ್ತದೆ. ಪಂದ್ಯಗಳ ಫಲಿತಾಂಶದಲ್ಲಿ ಸ್ವಲ್ಪ ಏರುಪೇರಾದರೂ, ವಿವಿಧ ದೇಶಗಳ ನಡುವೆ ರಾಜತಾಂತ್ರಿಕ ವೈಮನಸ್ಯ/ವೈಷಮ್ಯಗಳು ಆರಂಭವಾಗುವ ಸಂಭವ ಇರುವ ಕಾರಣ, FIFA ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ಹೆಚ್ಚು ನಿಖರವಾದ ಪಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ಈ ರೀತಿಯಾಗಿ ಚಂಡಿನಲ್ಲಿ ಮೈಕ್ರೋ ಚಿಪ್ ಅಳವಡಿಸುವುದರ ಜೊತೆಗೆ ವಿಡಿಯೋ-ಅಸಿಸ್ಟೆಡ್ ರೆಫರೀಯಿಂಗ್ (VAR) ಎಂಬ ನಾವೀನ್ಯತೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದ ಅಂಶವಾಗಿದೆ.

ನಿರಂತರವಾದ ಬದಲಾವಣೆ ಎಂಬುದು ಜಗದ ನಿಯಮವಾಗಿದ್ದು, ಅದರಂತೆ ಆಟಗಳಲ್ಲಿಯೂ ಸಹಾ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಆಟವನ್ನು ಅತ್ಯಂತ ನಿಖರತೆ ಮತ್ತು ರೋಜಕತೆಗೆ ತೆಗೆದುಕೊಂಡು ಹೋಗುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s