ಡಿಸೆಂಬರ್ 6, ಶೌರ್ಯ ದಿವಸ

ಕಳೆದ 30 ವರ್ಷಗಳಿಂದ ಡಿಸೆಂಬರ್ 6 ಬಂದಿತು ಎಂದರೆ ದೇಶಾದ್ಯಂತ ಬಹುತೇಕರಿಗೆ ಒಂದು ರೀತಿಯ ಭಕ್ತಿ ಭಾವನೆಯ ದಿನ. ಅಯೋಧ್ಯಾಪತಿ ಪ್ರಭು ಶ್ರೀರಾಮನ ದಾಸ್ಯದ ಸಂಕೋಲೆಯನ್ನು ಕಳಚಿದ ದಿನ ಎಂದೇ ಎಲ್ಲರೂ ಭಕ್ತಿಯಿಂದ ನೆನೆಯುವ ದಿನ. ಸಾಮಾನ್ಯರಿಗೆ 1992 ಡಿಸೆಂಬರ್ 6 ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದದ್ದು ಒಂದು ಕಟ್ಟಡದ ಕುಸಿತ ಎನ್ನುವುದು ಮೇಲ್ನೋಟಕ್ಕೆ ಸತ್ಯ ಎನಿಸಬಹುದಾದರೂ, ವಾಸ್ತವವಾಗಿ ಹಿಂದೂಗಳು ಜಾಗೃತರಾದ ದಿನ. ಹಾಗಾಗಿಯೇ ಈ ದಿನವನ್ನು ವಿಶ್ವ ಹಿಂದೂ ಪರಿಷದ್ ಶೌರ್ಯ ದಿವಸವನ್ನಾಗಿ ಆಚರಿಸುತ್ತದೆ. ಅದುವರೆವಿಗೂ ಹಿಂದೂಗಳ ಒಂದು ಕೆನ್ನೆಗೆ ಹೊಡೆದರೆ, ಯಾವುದೇ ಪ್ರತಿಭಟನೆ ಇಲ್ಲದೇ ಮತ್ತೊಂದು ಕೆನ್ನೆಯನ್ನು ತೋರಿಸಿ ಹೊಡೆಸಿಕೊಳ್ಳಬೇಕು ಎಂಬುದನ್ನೇ ಗಿಳಿ ಪಾಠ ಮಾಡಿದ್ದರಿಗೆ ಅಚ್ಚರಿ ಎನ್ನುವಂತೆ, ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟ ದಿನ ಎಂದರೂ ತಪ್ಪಾಗದು. 1947ರಂದು ಧರ್ಮಾಧಾರಿತವಾಗಿ ಈ ದೇಶ ಎರಡು ಭಾಗಗಳಾಗಿ ತುಂಡಾದರೂ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ಒತ್ತಸೆಯಿಂದ ಸ್ವಾತಂತ್ರ್ಯಾ ನಂತರವು ಬಹುಸಂಖ್ಯಾತ ಹಿಂದೂ ಸಮಾಜವನ್ನು ತುಳಿಯುವ, ಅವರ ಹಕ್ಕನ್ನು ಕಸಿಯುವ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ,ಅವರ ಸ್ವಾಭಿಮಾನವನ್ನು ಕೊಲ್ಲುವ, ಜಾತ್ಯಾತೀತ ನೀತಿಯಿಂದಾಗಿ ಹಿಂದೂ ಸಮಾಜ ಸಮಾಧಿಯ ಕಡೆಗೆ ಹೊರಟಿದ್ದಂತಹಾ ಸಮಯದಲ್ಲಿ ಹಿಂದೂ ಎದ್ದರೆ ದೇಶ ಎದ್ದೀತು ಎಂಬಂತೆ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ವಾಕ್ಯದಂತೆ ಈ ನೆಲದ ಪ್ರತಿಯೊಬ್ಬ ಹಿಂದೂ ಸಹಾ ಇಡೀ ಜಗತ್ತಿಗೆ ತನ್ನ ವಿರಾಟ ರೂಪವನ್ನು ಪ್ರದರ್ಶಿಸಿದ ಐತಿಹಾಸಿಕ ದಿನ 1992 ಡಿಸೆಂಬರ್ 6 ಎಂದರೂ ತಪ್ಪಾಗದು.

ram5ಅದರೆ ಡಿಸೆಂಬರ್ 6 ಈ ದೇಶದ ಕರಾಳ ದಿನ ಎಂದು ಕರೆಯುವವರ ಸಂಖ್ಯೆಯೂ ಈ ದೇಶದಲ್ಲಿ ಕದಿಮೆ ಇಲ್ಲದ ಕಾರಣ, ಅಯೋಧ್ಯೆಯ ರಾಮ ಮಂದಿರದ ಇತಿಹಾಸವನ್ನು ಪ್ರಾಂಜಲ ಮನಸ್ಸಿನಿಂದ ಅವಲೋಕಿಸಿದಾಗಲೇ ಆ ದಿನದ ಮಹತ್ವ ತಿಳಿಯುತ್ತದೆ. ಸುಮಾರು 7ನೇ ಶತಮಾನದಿಂದಲೂ ನಮ್ಮ ದೇಶದ ಮೇಲೆ ಮೊಘಲರು ಸತತವಾಗಿ ಆಕ್ರಮಣ ನಡೆಸುತ್ತಿದ್ದರೂ, ನಮ್ಮ ಹಿಂದಿನವರ ಕ್ಷಾತ್ರ ತೇಜದ ಕಾರಣದಿಂದಾಗಿ ಮೊಘಲರು ಭಾರತದ ಮೇಲೆ ಪ್ರಾಭಲ್ಯವನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. 13ನೇ ಶತಮಾನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೇಲುಗೈ ಸಾಧಿಸಿದ ಮೊಘಲರು, ಇಂದಿನ ಉಜ್ಬೇಕಿಸ್ತಾನಕ್ಕೆ ಸೇರಿದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ ಎಂಬ ಮೊಘಲ್ ಆಕ್ರಮಣಕಾರ 1527ರಲ್ಲಿ ಭಾರತದ ಮೇಲೆ ದಾಳಿ ನಡೆಸಿ ಸಂಗ್ರಾಮ ಸಿಂಗರನ್ನು ಸೋಲಿಸಿದ ನಂತರ ಅವನ ಮತಾಂಧತೆಯ ಉನ್ಮಾದ ಮತ್ತು ದೇವಾಲಯಗಳಿದ್ದ ಅಪಾರವಾದ ಸಂಪತ್ತುಗಳನ್ನು ಲೂಟಿ ಮಾಡುವ ಏಕೈಕ ಉದ್ದೇಶದಿಂದ ಸಾವಿರಾರು ದೇವಾಲಯಗಳನ್ನು ನಾಶಪಡಿಸಿಕೊಂಡು ಬರುತ್ತಿರುವಾಗಲೇ ಅವನ ಕಣ್ಣು ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ಬಿದ್ದು ಬಾಬರನ ಸೇನಾಧಿಪತಿ ಮೀರ್ ಬಾಕಿ ಅನೇಕ ಹಿಂದೂಗಳ ತೀವ್ರ ಹೋರಾಟದ ನಡುವೆಯೂ 1528 ರಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಜನ್ಮಸ್ಥಳದಲ್ಲಿದ್ದ ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿ ಅಲ್ಲಿದ್ದ ಸಿರಿಸಂಪತ್ತುಗಳನ್ನೆಲ್ಲವನ್ನೂ ದೋಚಿದ್ದಲ್ಲದೇ, ತಮ್ಮ ವಿಜಯದ ಸಂಕೇತವಾಗಿ ದೇವಾಲಯದ ಶಿಖರವನ್ನು ಧ್ವಂಸಗೊಳಿಸಿ ಅದರ ಮೇಲೊಂದು ಮಸೀದಿಯನ್ನು ನಿರ್ಮಿಸಿ ತನ್ನ ಒಡೆಯನ್ನನ್ನು ಸಂಪ್ರೀತಗೊಳಿಸಲು ಅದಕ್ಕೆ ಬಾಬರ್ ಮಸೀದಿ ಎಂದು ಹೆಸರಿಟ್ಟ ನಂತರ ಜನರ ಆಡು ಭಾಷೆಯಲ್ಲಿ ಬಾಬ್ರಿ ಮಸ್ಜೀದ್ ಎಂದೇ ಕುಖ್ಯಾತಿಯನ್ನು ಪಡೆದುಕೊಂಡಿದ್ದು ಈಗ ಕರಾಳ ಇತಿಹಾಸ.

ram2ಹೀಗೆ ರಾಮ ಮಂದಿರ ನಾಶ ಆದ ದಿನದಿಂದಲೂ, ಮಂದಿರದ ಪುನರ್ನಿಮಾಣ ಮಾಡಲು ಅನೇಕ ಹಿಂದೂಗಳು ಪ್ರಯತ್ನಿಸಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರ ತ್ಯಾಗ ಬಲಿದಾನಗಳಾಗಿವೆ. ಅನೇಕರು ಅಲ್ಲಿನ ನವಾಬರಿಗೆ ಹಣವನ್ನು ಕೊಟ್ಟು ಆ ಪ್ರದೇಶವನ್ನು ಖರೀದಿಸಿ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರಯತ್ನಿಸಿದರಾದರೂ ಫಲಕಾರಿಯಾಗದೇ ಯಥಾ ಸ್ಥಿತಿಯೇ ಮುಂದುವರಿದುಕೊಂಡು ಹೋಗಿತ್ತು. 1857ರಲ್ಲಿ ಮುಸಲ್ಮಾನರು ಇಡೀ ರಾಮಮಂದಿರದ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟು ಕೊಡಲು ಮುಂದಾದರೂ ಬ್ರಿಟೀಷರ ವಿರುದ್ಧದ ಯುದ್ದದಲ್ಲಿ ಸೋಲುಂಟಾದ ಪರಿಣಾಮ ಆ ವಿಷಯ ನೆನೆಗುದಿಗೆ ಬೀಳುತ್ತದೆ. 1885ರಲ್ಲಿ ಪ್ರಪ್ರಥಮ ಬಾರಿಗೆ ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ. ಹೀಗೆ ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಮೂರು ಗುಮ್ಮಟಗಳು ಮತ್ತು ರಾಮ ಚಬೂತರ್ ಗಳ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಎರಡೂ ಧರ್ಮೀಯರಿಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಾರೆ.

ತೀವ್ರವಾಗುತ್ತಿದ್ದ ಸ್ವಾತಂತ್ತ್ಯ ಹೋರಾಟವನ್ನು ಹತ್ತಿಕ್ಕಲು ಹೈರಾಣಾಗಿದ್ದ ಬ್ರಿಟೀಷರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಂಘರ್ಷನ್ನು ತರಲು ಸ್ಥಳೀಯ ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ 1934ರಲ್ಲಿ ರಾಮಮಂದಿರದ ಸ್ಥಳದಲ್ಲಿ ಗೋಹತ್ಯೆ ಮಾಡಿಸುತ್ತಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಅಂದಿನ ಕಾಲದಲ್ಲಿಯೇ ವಿವಾಧಿತ ಪ್ರದೇಶಕ್ಕೆ ನುಗ್ಗಿ ಮೂರು ಗುಂಬಜ್ ಗಳ ಮೇಲೇರಿ ಬಹಳಷ್ಟು ಹಾನಿ ಮಾಡುತ್ತಿರುವಾಗ ಬ್ರಿಟೀಷರ ಬಲ ಪ್ರಯೋಗದಿಂದಾಗಿ ಅದನ್ನು ವಿಫಲಗೊಳಿಸಿದ ನಂತರ ಆ ಪ್ರದೇಶಕ್ಕೆ ಮತ್ತೆಂದೂ ಮುಸಲ್ಮಾನರು ಕಾಲು ಇಡಲೇ ಇಲ್ಲ. ಇಷ್ಟಾದರೂ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಅಂದಿನ ಕಲೆಕ್ಟರ್ ಹಿಂದುಗಳ ಮೇಲೆ ಪುಂಡಗಂದಾಯ ಹೇರಿ ಅದರಿಂದ ಬಂದ ಹಣದಲ್ಲಿ ಹಾನಿಯಾಗಿದ್ದ ಗುಂಬಜ್ ಗಳನ್ನು ಸರಿಪಡಿಸುವ ಮೂಲಕ ಮುಸಲ್ಮಾನರಿಗೆ ಬೆಣ್ಣೆ ಹಚ್ಚುವ ಕಾರ್ಯವನ್ನು ನಿರ್ವಹಿಸಿದರೂ, ಅಲ್ಲಿನ ಮಂದಿರದಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ.

ram7ಸ್ವಾತಂತ್ರ್ಯಾ ನಂತರ ಮೊಘಲರ ಸತತ ಧಾಳಿಯಂದ ಧ್ವಂಸಗೊಂಡಿದ್ದ ಗುಜರಾತಿನ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಅಂದಿನ ಗೃಹಮಂತ್ರಿಗಳಾದ ಶ್ರೀ ಸರ್ದಾರ್ ಪಟೇಲ್ ಅವರು ಮುಂದಾದಾಗ ಅನೇಕ ಸಾಧು ಸಂತರು ಅದರ ಜೊತೆಯಲ್ಲಿಯೇ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನೂ ಭವ್ಯವಾಗಿ ನಿರ್ಮಿಸಲು ಅಂದಿನ ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತಾರೆ. ಅದೇ ಸಮಯದಲ್ಲೇ 1949ರ ಡಿಸೆಂಬರ್ 23ರಂದು ಗುಂಬಜ್ ಇದ್ದ ಅದೇ ಮಸೀದಿಯ ಒಳಗೆ ಇದ್ದಕ್ಕಿದ್ದಂತೆಯೇ ಪುಟ್ಟ ಶ್ರೀರಾಮ ಲಲ್ಲಾನ ವಿಗ್ರಹ ಪ್ರತ್ಯಕ್ಷವಾದ್ದರಿಂದ ಸಂತಸಗೊಂಡ ಹಿಂದೂಗಳು ಉತ್ಸಾಹದಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಲು ಧಾವಿಸುತ್ತಿದ್ದಂತೆಯೇ ಅಂದಿನ ನೆಹರೂ ಸರ್ಕಾರ ಸ್ಥಳೀಯ ಉತ್ತರ ಪ್ರದೇಶದ ಸರ್ಕಾರದ ಮೇಲೆ ಒತ್ತಡ ಹೇರಿ ರಾಮನ ವಿಗ್ರಹವನ್ನು ತೆಗೆಸಲು ಪ್ರಯತ್ನಿಸಿತಾದರೂ ವಿಫಲವಾದ ಪರಿಣಾಮ ಕೇವಲ ಪೂಜೆಗೆ ಮಾತ್ರವೇ ಅವಕಾಶ ನೀಡಿ, ದೇವಾಲಯಕ್ಕೆ ಬೀಗವನ್ನು ಜಡಿದು, ಭಕ್ತಾದಿಗಳಿಗೆ ಬಾಗಿಲಿನ ಹೊರಗಿನಿಂದಲೇ ಸರಳುಗಳ ಮೂಲಕ ದೇವರ ದರ್ಶನ ಮಾಡಲು ಅನುವು ಮಾಡಿಕೊಡುತ್ತದೆ. ಈ ವಿಷಯದಲ್ಲಿ ಸ್ಥಳೀಯ ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ ಅವರಿಂದ ಒಂದು ಸಿವಿಲ್ ಕೇಸ್ ದಾಖಲಿಸಿ ಅದನ್ನೇ ನೆಪ ಮಾಡಿಕೊಂಡು ಆ ಪ್ರದೇಶವನ್ನು ವಿವಾದಿತ ಸ್ಥಳ ಎಂದು ಘೋಷಿಸುವ ಮೂಲಕ, ಬೆರಳಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರಂತೆ ಎನ್ನುವಂತೆ ಸುಲಭವಾಗಿ ಪರಿಹರಿಸ ಬಹುದಾಗಿದ್ದ ಸಮಸ್ಯೆಯನ್ನು ಮತ್ತೊಮ್ಮೆ ಜಟಿಲ ಗೊಳಿಸಿದ ಕೀರ್ತಿ ಅಂದಿನ ಪ್ರಧಾನಿ ನೆಹರು ಅವರಿಗೇ ಸಲ್ಲುತ್ತದೆ.

ಇದಕ್ಕೆ ಪ್ರತಿಯಾಗಿ 1950ರಲ್ಲಿ ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಫೈಜಾಬಾದಿನಲ್ಲಿ ಪ್ರಕರಣ ದಾಖಲಿಸುತ್ತಾರೆ, ಮುಂದೆ 1959ರಲ್ಲಿ ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮತ್ತೊಂದು ದಾವೆ ಹೂಡುತ್ತದೆ. 1961 ರಲ್ಲಿ ಆ ಜಾಗದ ಒಡೆತನಕ್ಕಾಗಿ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯೂ ಪ್ರಕರಣ ದಾಖಲಿಸುವ ಮೂಲಕ ಮೂರು ವಿವಿಧ ಸಂಘಟನೆಗಳು ಆ ಪ್ರದೇಶದ ಮೇಲೆ ಹಕ್ಕೊತ್ತಾಯವನ್ನು ಮಂಡಿಸುತ್ತದೆ.

1984ರಲ್ಲಿ ಅಶೋಕ್ ಸಿಂಘಾಲ್ ಮತ್ತು ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷದ್ ಮುಂದಾಳತ್ವದಲ್ಲಿ ಶ್ರೀ ರಾಮ ರಾಮ ಮಂದಿರ ನಿರ್ಮಾಣ ಸಮಿತಿಯ ರಚನೆ ಮಾಡಿ ದೇಶಾದ್ಯಂತ ನಡೆಸಿದ ಭಾರೀ ಆಂದೋಳಕ್ಕೆ ಮಣಿದು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ರಾಜೀವ್ ಗಾಂಧಿಯವರು 1985 ರಲ್ಲಿ ವಿವಾದಿತ ಮಸೀದಿಗೆ ಜಡಿದಿದ್ದ ಬೀಗವನ್ನು ತೆಗೆಸುವುದರ ಮೂಲಕ ರಾಮಜನ್ಮ ಭೂಮಿಯ ಗೆಲುವಿಗೆ ಮೊದಲ ಮೆಟ್ಟಲಾಗುತ್ತದೆ. ಹರಿಶಂಕರ್ ದುಬೆಯವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು 1986ರ ಫೆಬ್ರವರಿ 1ರಂದು ಮಸೀದಿಯ ಬಾಗಿಲುಗಳನ್ನು ತೆರೆದು ಹಿಂದೂಗಳಿಗೆ ರಾಮಲಲ್ಲಾನ ದರ್ಶನ ಮತ್ತು ಪೂಜೆಗೆ ಅವಕಾಶ ಕೊಡುತ್ತದೆ. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ರಾಮ ಜನ್ಮಭೂಮಿ ನ್ಯಾಸವನ್ನು ಸ್ಥಾಪಿಸಿದರ ಪ್ರತಿಯಾಗಿ ಅದೇ ಸಮಯದಲ್ಲಿ ಮುಸಲ್ಮಾನರು ಸೈಯ್ಯದ್ ಶಹಾಬುದ್ದೀನ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಿಕೊಳ್ಳುತ್ತಾರೆ.

1989 ಆಗಸ್ಟ್ 25 ವಿವಾದಿತ ಕಟ್ಟಡದ 2.77 ಎಕರೆ ಪ್ರದೇಶವನ್ನು ಹೊರತುಪಡಿಸಿ 42.09 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಅನುಮತಿ ನೀಡಿದ ಆದೇಶದ ಮೇರೆಗೆ, 25 ನವೆಂಬರ್ 1989 ರಲ್ಲಿ ವಿವಾದಿತ ಪ್ರದೇಶದ ಹೊರಗಡೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಸಲು ಅಂದಿನ ರಾಜೀವ್ ಗಾಂಧಿ ಸರ್ಕಾರ ವಿಶ್ವಹಿಂದೂ ಪರಿಷತ್ತಿಗೆ ಒಪ್ಪಿಗೆ ಕೊಡುತ್ತದೆ.

ram41990ರ ಸೆಪ್ಟೆಂಬರ್ 25ರಂದು ಅಯೋಧ್ಯೆಯ ರಾಮ ಮಂದಿರದ ಕುರಿಂತೆ ಭಾರತದಾದ್ಯಂತ ಜಾಗೃತಿ ಮೂಡಿಸಲು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಅವರು ಗುಜರಾತಿನ ಸೋಮನಾಥ ಮಂದಿರದಿಂದ ರಥಯಾತ್ರೆ ಆರಂಭಿಸಿ ಸುಮಾರು 10,000 ಕಿಲೋ ಮೀಟರ್ ದೇಶದಾದ್ಯಂತ ಸಂಚಾರ ಮಾಡಬೇಕಿತ್ತಾದರೂ, ನವೆಂಬರ್ ತಿಂಗಳ ಹೊತ್ತಿಗೆ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಸರ್ಕಾರ ಅಡ್ವಾಣಿಯವರನ್ನು ಬಂಧಿಸಿದಾಗ ರಥಯಾತ್ರೆಗೂ ಸ್ವಲ್ಪ ತೊಡಕಾಯಿತಾದರೂ, ಅದನ್ನು ನಿಗ್ರಹಿಸಿಕೊಂಡು ಅಯೋಧ್ಯೆಯಲ್ಲಿ ತಮ್ಮ ಯಾತ್ರೆಯನ್ನು ಸಮಾಪ್ತಿಗೊಳಿಸುವ ಮೂಲಕ ರಾಮ ಮಂದಿರದ ಕುರಿತು ಇಡೀ ದೇಶದ ಹಿಂದೂಗಳಲ್ಲಿ ಭಾರೀ ಸಂಚಲದ ಅಲೆಯನ್ನೇ ಎಬ್ಬಿಸಲು ಸಫಲರಾಗುತ್ತಾರೆ.

kothari_brothersವಿಶ್ವಹಿಂದೂ ಪರಿಷದ್ ವಿವಾದಿತ ಪ್ರದೇಶದಲ್ಲಿ ಶಿಲಾನ್ಯಾಸ ನಡೆಸುವ ಸಲುವಾಗಿ 1990ರಲ್ಲಿ ಕರಸೇವೆಗೆ ಕರೆ ನೀಡಿದಾಗ, ಅಂತಹ ಪವಿತ್ರವಾದ ಕರಸೇವೆಯಲ್ಲಿ ತಮ್ಮದೂ ಅಳಿಲು ಸೇವೆ ಇರಲಿ ದೇಶದ ನಾನಾ ಕಡೆಗಳಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸಿದ್ದನ್ನು ಸಹಿಸದ ಅಂದಿನ ಮುಖ್ಯಮಂತ್ರಿ ಮುಲಯಂ ಸಿಂಗ್ ಯಾದವ್ ಆ ಕರಸೇವರುಗಳನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಂತೆಯೇ ಕೆರಳಿದ ಯುವಕರ ಗುಂಪೊಂದು ಅದರಲ್ಲೂ ಕೊಠಾರೀ ಸಹೋದದರು ವಿವಾಧಿತ ಗುಂಬಜ್ ಮೇಲೆಯೇ ಪ್ರಥಮಬಾರಿಗೆ ಭಗವಾದ್ವಜವನ್ನು ಹಾರಿಸುವ ಮೂಲಕ ವಿಜಯದ ಕಹಳೆಯನ್ನೂದುತ್ತಾರೆ.

December61991ರಲ್ಲಿ ರಾಮ ಮಂದಿರ ಪರ ಚಳವಳಿ ಮತ್ತಷ್ಟು ತೀವ್ರ ಗೊಂಡಿದ್ದಲ್ಲದೇ, ಸಂಘ ಪರಿವಾರ, ಬಜರಂಗ ದಳದವರ ಜೊತೆ ಕೋಟ್ಯಾಂತರ ಕರಸೇವಕರು ಚಳವಳಿಯನ್ನು ತೀವ್ರಗೊಳಿಸಿ ಅಯೋಧ್ಯೆ ಪ್ರವೇಶಿಸಲು ಯತ್ನಿಸಿದ್ದಲ್ಲದೇ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಶ್ರೀರಾಮ ಹ್ಯೋತಿ ಯಾತ್ರೆ ನಡೆಸಿ ದೇಶದ ಎಲ್ಲಾ ಭಾಗಗಳಿಂದಲೂ ರಾಮ ಮಂದಿರಕ್ಕಾಗಿ ಇಟ್ಟಿಗೆಗಳನ್ನು ಸಂಗ್ರಹಿಸುವ ಅಭಿಯಾನ ನಡೆಸುತ್ತದೆ. ಸುಮಾರು ಆರು ಲಕ್ಷ ಹಳ್ಳಿಗಳು ಇರುವ ನಮ್ಮ ದೇಶದ ಅರ್ಧಕ್ಕಿಂತಲೂ ಹೆಚ್ಚು ಅಂದರೆ ಮೂರೂವರೆ ಲಕ್ಷ ಹಳ್ಳಿಗಳಿಂದ ಲಕ್ಷಾಂತರ ಇಟ್ಟಿಗೆಗಳು ಸಂಗ್ರಹವಾದರೆ, ದೂರದ ಅಮೇರಿಕ, ಕೆನಡಾ, ಇಂಗ್ಲೇಂಡಿನಲ್ಲಿರುವ ಭಾರತೀಯರು ಚಿನ್ನದ ಮತ್ತು ಬೆಳ್ಳಿಯ ಇಟ್ಟಿಗೆಗಳನ್ನು ಕಳುಹಿಸಿಕೊಡುವ ಮೂಲಕ ರಾಮ ಮಂದಿರಕ್ಕೆ ತಮ್ಮ ಸಮರ್ಥನೆ ಮತ್ತು ಸಹಕಾರವನ್ನು ನೀಡಿದ್ದು ಗಮನಾರ್ಹವಾಗಿದೆ.

ಹೀಗೆ ಅನಾವಶ್ಯಕವಾಗಿ ಕರಸೇವಕರ ಮೈಲೆ ಕೈ ಮಾಡಿದ್ದಲ್ಲದೇ, ಗೋಲೀಬಾರ್ ಸಹ ನಡೆಸಿದ ಪರಿಣಾಮ ನಂತರ ನಡೆದ ಚುನಾವಣೆಯಲ್ಲಿ ಮುಲಯಂ ಸರ್ಕಾರವನ್ನು ಸೋಲಿಸುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡ ಉತ್ತರ ಪ್ರದೇಶಿಗರು, ಅಲ್ಲಿ ಪ್ರಥಮ ಬಾರಿಗೆ ಶ್ರೀ ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರುತ್ತಿದ್ದಂತೆಯೇ, ವಿವಾದಿತ 2.77 ಎಕರೆ ಸಮೀಪದಲ್ಲಿಯೇ 67 ಎಕರೆ ಭೂಮಿಯಲ್ಲಿ ರಾಮಕಥಾ ಪಾರ್ಕ್ ನಿರ್ಮಾಣ ಮಾಡುವ ಸಲುವಾಗಿ ರಾಮಜನ್ಮ ಭೂಮಿ ನ್ಯಾಸಕ್ಕೆ ಹಸ್ತಾಂತರಿಸಲಾಗುತ್ತದೆ.

hinu_leadersನವೆಂಬರ್ 27, 1992 ರಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರಕಾರ ಭರವಸೆಯ ಅನುಗುಣವಾಗಿ, ಸಾಂಕೇತಿಕ ಕರಸೇವೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು. ಇದರಿಂದ ಉತ್ಸಾಹಿತರಾದ ವಿಶ್ವ ಹಿಂದೂ ಪರಿಷತ್ 1992ರ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ಕರಸೇವೆಗೆ ಕರೆನೀಡುತ್ತದೆ. ಈ ಬಾರಿ ಉತ್ಸಾಹಿತರಾಗಿ ದೇಶದ ನಾನಾ ಕಡೆಯಿಂದಲೂ ಬಂದ ಕರಸೇವಕರು ಡಿಸೆಂಬರ್ 6 ನೇ ತಾರೀಖಿನಂದು ಬೆಳಿಗ್ಗೆ 10:30ಕ್ಕೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು ಸಾಂಕೇತಿಕ ಕರಸೇವೆ ನಡೆಸಿದರು.

ram3ಸುಮಾರು 12.15ಕ್ಕೆ ಕರಸೇವಕನೊಬ್ಬ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿದ್ದದ್ದನೇ ಗಮನಿಸಿ ಅವನ ಹಿಂದೆ ನೂರಾರು ಕರಸೇವಕರು ಅವನನ್ನೇ ಹಿಂಬಾಲಿ ನೋಡ ನೋಡುತ್ತಿದ್ದಂತೆಯೇ ತಮ್ಮ ಬಳಿ ಆಯುಧಗಳಿಂದಲೇ, ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದ ಆ ಮೂರೂ ಗುಮ್ಮಟಗಳನ್ನು ಕ್ಷಣ ಮಾತ್ರದಲ್ಲಿಯೇ ಕುಟ್ಟಿ ಕುಟ್ಟಿ ಪುಡಿಮಾಡಿದ್ದಲ್ಲದೇ ಇಡೀ ಮಸೀದಿಯನ್ನು ಮಧ್ಯಾಹ್ನ 3 ಗಂಟೆಯಷ್ಟರೊಳಗೆ ಧ್ವಂಸಗೊಳಿಸಿ ಅಲ್ಲಿದ್ದ ರಾಮಲಲ್ಲನ ವಿಗ್ರಹದ ಮೇಲೆ ತಾತ್ಕಾಲಿಕ ಮಂದಿರವನ್ನು ನಿರ್ಮಿಸಿ ಪೂಜೆ ಮಾಡುತ್ತಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಿಗಾದ ಸಂತೋಷ ಅವರ್ಣನೀಯ.

karseveಯಾವುದೇ ಸೂಚನೆ ಇಲ್ಲದೇ ಏಕಾಏಕಿ ಸಂಘಟಿತ ಹಿಂದೂಗಳು ಬಾಬರಿ ಮಸೀದಿಯನ್ನು ಧ್ವಂಸ ಗೊಳಿಸಿದ ಕೂಡಲೇ ಅಂದಿನ ಸರ್ಕಾರ ಬಿಜೆಪಿ ಆಡಳಿತವಿದ್ದ ಎಲ್ಲಾ ರಾಜ್ಯ ಸರ್ಕಾರಗಳನ್ನೂ ವಚಾಗೊಳಿಸುವ ಮೂಲಕ ಮುಸಲ್ಮಾನರಿಗೆ ಸಮಾಧಾನ ಪಡಿಸಿದ್ದಲ್ಲದೇ, ಅದಾದ ಹತ್ತು ದಿನಗಳ ನಂತರ ಡಿಸೆಂಬರ್ 16ರಂದು,ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಆವರ ಕಾಂಗ್ರೆಸ್ ಸರಕಾರ ಘಟನೆಯ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಲಿಬರ್ಹಾನ್ ನೇತೃತ್ವದ ಆಯೋಗವನ್ನು ನೇಮಿಸಿದ್ದಲ್ಲದೇ ಆ ವಿವಾಧಿತ ಸ್ಥಳದಲ್ಲಿ ಮಂದಿರವಿತ್ತು ಎಂಬುದನ್ನು ಸಾಭೀತು ಪಡಿಸಿದಲ್ಲಿ ಆ ಜಾಗವನ್ನು ಹಿಂದೂಗಳಿಗೆ ನೀಡುವುದಾಗಿ ವಾಗ್ದಾನ ಮಾಡಿದ ಆಫಿಡೆವಿಟ್ ಸಹಾ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

ram6ಅಂದಿನಿಂದ ಸುಮಾರು ವರ್ಷಗಳ ಕಾಲ ಸುದೀರ್ಘವಾದ ವಿಚಾರಣೆ ನಡೆದು ನವೆಂಬರ್ 9 2019 ರಂದು ಆ ಸ್ಥಳದಲ್ಲಿ ಈ ಹಿಂದೆ ರಾಮ ಮಂದಿರವಿತ್ತು ಎಂಬ ಐತಿಹಾಸಿಕ ನಿರ್ಣಯವನ್ನು ಘತವೆತ್ತ ಉಚ್ಚ ನ್ಯಾಯಾಲಯ ಘೋಷಿಸುತ್ತಿದ್ದಂತೆಯೇ ಇದೀ ಡೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿತ್ತು. ನಂತರ ಆಗಸ್ಟ್ 5, 2020ರಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ಭವ್ಯವಾದ ಪ್ರಭು ಶ್ರೀರಾಮ ಚಂದ್ರನ ಮಂದಿರಕ್ಕೆ ಅಡಿಗಲ್ಲನ್ನು ಹಾಕುತ್ತಾರೆ. ನಂತರ ದಿನಗಳಲ್ಲಿ ಮಂದಿರವನ್ನು ಭವ್ಯವಾಗಿ ನಿರ್ಮಿಸಲು ದೇಶಾದ್ಯಂತ ಅಭಿಯಾನ ಶುರುವಾಗಿ ದೇಶ ವಿದೇಶಗಳಿಂದ ಕೋಟ್ಯಾಂತರ ಹಿಂದೂಗಳಲ್ಲದೇ ಅನ್ಯ ಧರ್ಮೀಯರೂ ಸಹಾ ಯಥೇಚ್ಚವಾಗಿ ಧನ ಸಹಾಯ ಮಾಡಿದ ಪರಿಣಾಮ ಅಯೋದ್ಯೆಯಲ್ಲಿ ಶ್ರೀ ರಾಮ ಹುಟ್ಟಿದ ಸ್ಥಳದಲ್ಲೇ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದ್ದು ಎಲ್ಲರೂ ನಿಗಧಿಯಂತೆ ನಡೆದಲ್ಲಿ 2023ರ ಡಿಸೆಂಬರ್ ಹೊತ್ತಿಗೆ ಮಂದಿರ ಉದ್ಘಾಟನೆ ಗೊಳ್ಳಲಿದೆ.

ram1ಹೀಗೆ 1527ರಲ್ಲಿ ಧಾಳಿಕೋರ ಬಾಬರ್ ಅಯೋಧ್ಯೆಯಲ್ಲಿದ್ದ ರಾಮ ಮಂದಿರವನ್ನು ಧ್ವಂಸ ಮಾಡಿದ್ದಕ್ಕೆ ಪ್ರತಿಯಾಗಿ ಅಲ್ಲಿ ಮತ್ತೆ ರಾಮ ಮಂದಿರವನ್ನು ಕಟ್ಟುವ ಪ್ರಯತ್ನ 72 ಬಾರಿ ನಡೆದಿದ್ದು ಅದಕ್ಕೆ ಲಕ್ಷಾಂತರ ಮಂದಿಯ ಪ್ರಾಣಾರ್ಪಣೆಯೂ ನಡೆದಿತ್ತು. ಇಂದಿಗೆ ಸರಿಯಾಗಿ 30 ವರ್ಷಗಳ ಹಿಂದೆ ಇದೇ ದಿನ, ಯಾವುದೇ ಸೂಚನೆ ಇಲ್ಲದೇ, ಯಾರದ್ದೇ ಪ್ರೇರಣೆ ಇಲ್ಲದೇ ಯಾವುದೇ ಶಸ್ತ್ರಾಸ್ತ್ರವನ್ನೂ ಬಳಸದೇ, ನೂರಾರು ವರ್ಷಗಳಿಂದಲೂ ಅದುಮಿಟ್ಟುಕೊಂಡಿದ್ದ ಸಿಟ್ಟು, ಸೆವಡುಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಕೇವಲ 4 ಗಂಟೆಗಳಲ್ಲಿ ದಾಸ್ಯದ ಪ್ರತೀಕವಾಗಿದ್ದ, ಯಾರೂ ಬಳಸದೇ ಇದ್ದ ಆ ಮಸೀದಿಯನ್ನು ಪುಡಿ ಪುಡಿ ಮಾಡಿದ ಶೌರ್ಯದ ದಿನವನ್ನು ಪ್ರತಿಯೊಬ್ಬ ಹಿಂದೂಗಳು ಸಹಾ ನೆನಪಿನಲ್ಲಿ ಇಟ್ಟು ಕೊಳ್ಳ ಬೇಕಾದ ದಿನವಾಗಿರುವುದಲ್ಲದೇ, ಇಂತಹ ಮಹತ್ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಲಕ್ಷಾಂತರ ರಾಮ ಭಕ್ತರಿಗೆ ಅಶ್ರುತರ್ಪಣವನ್ನು ನೀಡುವುದು ಪ್ರತಿಯೊಬ್ಬ ಹಿಂದೂವಿನ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಜೈ ಶ್ರೀರಾಮ, ಜೈ ಜೈ ಶ್ರೀರಾಮ

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಡಿಸೆಂಬರ್ 6, ಶೌರ್ಯ ದಿವಸ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s