ಅದು 90ರ ದಶಕ ಆಗ ತಾನೇ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಪಿಯೂಸಿ ಮುಗಿಸಿ ದೂರದ ಆರ್. ಟಿ ನಗರದ ಆದರ್ಶ ಪಾಲಿಟೆಕ್ನಿಕ್ಕಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲಮೋ ಸೇರಿದ್ದೆ. ಎಂದಿನಂತೆ ವಾರಾಂತ್ಯದ ರಜದ ದಿನ ಮನೆಯ ಹತ್ತಿರದ ಗೆಳೆಯರೊಡನೆ ಕ್ರಿಕೆಟ್ ಪಂದ್ಯಾ ಆಡಲು ಹೋದಾಗ, ನಮ್ಮ ಹಾಲಮ್ಮನ ಮಗ ಲೋಕಿ, ಮಗಾ ಹೋದ ವಾರ ನಿಮ್ಮಮ್ಮನ ಕೈಯಲ್ಲಿ ನಿನಗೆ ಚೆನ್ನಾಗಿ ಬಿತ್ತಾ ಕಜ್ಜಾಯಾ? ಎಂದು ಎಲ್ಲರ ಮುಂದೆ ಕೇಳಿದಾಗ ನನಗೆ ಕಸಿವಿಸಿ. ಅರೇ ಸುಮ್ನೇ ಏನೇನೋ ಹೇಳ್ಬೇಡ ಅಂತ ಗದುರಿದಾಗ, ಏ ಸುಳ್ಳು ಹೇಳ್ಬೇಡಾ, ಹೋದವಾರ ನಿಮ್ಮನೆಗೆ ಹಾಲು ಹಾಕುವಾಗ ನೀನು ಬಿಇಎಲ್ ಸ್ಕೂಲ್ ಹಿಂದೆ ಸಿಗರೇಟ್ ಸೇದುತ್ತಿದ್ದದ್ದನ್ನು ಹೇಳಿದ್ದೇ. ನಿಮ್ಮಮ್ಮ ಮೊದಲು ನಾನು ಹೇಳಿದ್ದು ನಂಬಲಿಲ್ಲ. ಆಮೇಲೆ ನಾನೇ ಕಣ್ಣಾರೆ ನೋಡಿದೆ ಎಂದು ಹೇಳಿದಾಗ, ಸರಿ ಬಿಡಪ್ಪಾ ಆವನು ಮನೆಗೆ ಬಂದ್ಮೇಲೆ ಬುದ್ಧಿ ಹೇಳ್ತೀನಿ ಅಂದ್ರು ಎಂದು ಹೇಳಿದ.
ನನಗೇ ಅರಿವಿಲ್ಲದಂತೆಯೇ ಇಷ್ಟೆಲ್ಲಾ ವಿಷಯಗಳು ಆಗಿದ್ರೂ ಅಮ್ಮಾ ನನಗೇನು ಹೇಳಲೇ ಇಲ್ಲವಲ್ಲಾ ಎಂದು ಮನೆಗೆ ಹೋಗಿ ನಡೆದದ್ದೆಲ್ಲವನ್ನೂ ಹೇಳಿದಾಗ, ಅಮ್ಮಾ ಸುಮ್ಮನೇ ನಕ್ಕು ನನಗೆ ನನ್ನ ಮಗನ ಬುದ್ಧಿ ಗೊತ್ತಿಲ್ಬಾ? ಯಾರೋ ಹೇಳಿದಾ ಅಂತಾ ನಾನು ನನ್ನ ಮಗನನ್ನು ದಂಡಿಸುವುದು ಸರಿಯಲ್ಲ. ನಿನ್ನ ಕಾಲೇಜು ಇರೋದು ಆರ್. ಟಿ. ನಗರದಲ್ಲಿ, ಬೆಳಿಗ್ಗೆ ಹೋದ್ರೇ ಸಂಜೆ ಬರ್ತೀಯ. ಲೋಕಿ ನಿನ್ನನ್ನು ಮಧ್ಯಾಹ್ನ ಬಿಇಎಲ್ ಸ್ಕೂಲ್ ಹತ್ರ ನೋಡಿರಲು ಹೇಗೆ ಸಾಧ್ಯ? ಅದೂ ಅಲ್ದೇ ಬಸ್ ಪಾಸ್, ಕಾಲೇಜ್ ಫೀ ಬಿಟ್ರೇ ನಿನಗೆ ಹೆಚ್ಚಿನ ದುಡ್ಡನ್ನೇನು ಕೊಡೋದಿಲ್ವಲ್ಲಾ ಎಂಬ ಲಾಜಿಕ್ ಹೇಳಿದಾಗ, ಮೊದಲು ಅಮ್ಮನಿಗೆ ನನ್ನ ಮೇಲಿರುವ ನಂಬಿಕೆಯ ಬಗ್ಗೆ ಗೌರವ ಮೂಡಿದ್ದಲ್ಲದೇ ನಮ್ಮಮ್ಮ ಬೇರೆಯವರ ಅಮ್ಮನಂತೆ ಸುಖಾಃ ಸುಮ್ಮನೆ ಮಗನನ್ನು ರೇಗದೇ ತಲೆ ಉಪಯೋಗಿಸಿದ್ದಾರಲ್ಲಾ ಅಂತ ಮೆಚ್ಚುಗೆಯೂ ಆಯ್ತು.
ಮಾತು ಮುಂದುವರೆಸಿದ ಅಮ್ಮಾ, ನಾನು ಬಿತ್ತಿದ ಕಬ್ಬಿನ ಗೆಣ್ಣುಗಳಿಂದ ಸಿಹಿಯಾದ ಕಬ್ಬನ್ನು ಪಡೆಯುತ್ತೇನೆಯೇ ವಿನಃ ಕಹಿಯಾದ ಬೇವಿನ ಬೀಜಗಳನ್ನಲ್ಲ. ನಾನು ಹೊತ್ತು ಹೆತ್ತು ಸಾಕಿ ಸಲಹಿ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹೇಳಿಕೊಟ್ಟು ಬೆಳಸಿದ ಮಗ ಈ ರೀತಿಯಾಗಿ ದಾರಿ ತಪ್ಪುವುದಿಲ್ಲ. ನಮ್ಮ ಮನೆಯ ಗೌರವವನ್ನು ಹಾಳು ಮಾಡಲು ಮುಂದಾಗುವ ಮುನಾ ಎರೆಡೆರಡು ಬಾರಿ ಯೋಚಿಸುತ್ತಾರೆ ನಮ್ಮ ಮಕ್ಕಳು ಎಂದು ಹೇಳಿದಾಗ ನನಗೇ ಅರಿವಿಲ್ಲದಂತೆಯೇ ಧಾರಾಕಾರವಾಗಿ ಕಣ್ಣಿರು ಸುರಿದು ಅಂತಹ ಸಂಸ್ಕಾರಗಳನ್ನು ಕಲಿಸಿದ ನಮ್ಮ ಅಮ್ಮನಿಗೆ ಸಾಷ್ಟಾಂಗ ಮಾಡಿದ ನೆನಪು ನನಗೆ ಬೆಂಗಳೂರಿನ ಶಾಲಾ ಮಕ್ಕಳ ಚೀಲದಲ್ಲಿ ವಯಸ್ಸಿಗೆ ಮೀರಿದ ವಸ್ತುಗಳಿದ್ದವು ಎಂಬ ವಿಷಯವನ್ನು ಓದಿದಾಗ ಕಣ್ಣ ಮುಂದೆ ಸರಿಯಿತು.
ನಾವು ಸಣ್ಣವರಿದ್ದಾಗ ಶಾಲೆಯಿಂದ ಬಂದ ತಕ್ಷಣ ಮನೆಯ ಹೊರಗಡೇಯೇ ಶೂ ಬಿಚ್ಚಿ ಅದನ್ನು ಸರಿಯಾಗಿ ಜೋಡಿಸಿ ಸಾಕ್ಸನ್ನು ಗಾಳಿಯಾಡುವಂತೆ ಮನೆಯ ಮಕ್ಕದಲ್ಲಿರುವ ಕಿಟಕಿ ಸರಳುಗಳಿಗೆ ನೇತು ಹಾಕಿ ಸೀದ ಬಚ್ಚಲು ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಶಾಲಾವಸ್ತ್ರವನ್ನು ನೀಟಾಗಿ ಬಿಚ್ಚಿಟ್ಟು ಬೇರೆ ಬಟ್ಟೆ ಹಾಕಿಕೊಂಡು ಬರುವಷ್ಟ್ರರಲ್ಲಿ ಅಮ್ಮಾ, ಶಾಲೆಗೆ ಕೊಟ್ಟು ಕಳುಹಿಸಿದ್ದ ಕ್ಯಾರಿಯರ್ ತಿಂದಿದ್ದೇವಾ ಇಲ್ಲವೇ ಎಂದು ಪರೀಕ್ಷಿಸಿ, ಅದನ್ನು ಹಾಗೇ ತಿನ್ನದೇ ತಂದಿದ್ದಿದ್ದರೆ ಅದನ್ನು ತಟ್ಟೆಗೆ ಹಾಕಿ, ತಿಂದು ಬಂದಿದ್ದರೆ ತಟ್ಟೆಯಲ್ಲಿ ಬೇರೆ ಏನನ್ನಾದರೂ ಹಾಕಿ ತಿನ್ನಲು ಕೊಟ್ಟು, ತಿಂಡಿ ತಿಂದು ತಟ್ಟೆ ತೊಳೆದು ಬೋರಲು ಹಾಕಿ ಸಾಯಂ ಶಾಖೆಗೆ ಹೋಗ ಬೇಕು. ಕೆಲವೊಂದು ಬಾರಿ ನನ್ನ ತಂಗಿಯರೂ ನನ್ನ ಜೊತೆಗೆ ಶಾಖೆಗೆ ಬಂದು ಅಲ್ಲೇ ಹೊರಗೆ ನಿಂತು ಆಟವಾಡುತ್ತಿದ್ದರೆ, ಇನ್ನೂ ಕೆಲವೊಮ್ಮೆ ಮನೆಯ ಹತ್ತಿರವೇ ಆಟ ಆಡುತ್ತಿದ್ದರು. ಒಟ್ಟಿನಲ್ಲಿ ಕಡ್ಡಾಯವಾಗಿ ಮಕ್ಕಳೆಲ್ಲರೂ ದೈಹಿಕ ಪರಿಶ್ರಮದ ಆಟವನ್ನು ಆಡಲೇ ಬೇಕಿತ್ತು.
ಇನ್ನು ಸಂಘದ ಶಾಖೆ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆದು ಕೊಂಡು ವೀಭೂತಿ ಇಟ್ಟುಕೊಂಡು ದೇವರಿಗೆ ನಮಸ್ಕರಿಸಿ, ಮಕ್ಕಳೆಲ್ಲರೂ ಒಟ್ಟಾಗಿ ಬಾಯಿ ಪಾಠದಲ್ಲಿ ವಾರ, ತಿಥಿ, ತಿಂಗಳುಗಳು, ನಕ್ಷತ್ರಗಳು, ಸಣ್ಣ ಸಣ್ಣ ಶ್ಲೋಕಗಳು, ಭಗವದ್ಗೀತೆಯ ಧ್ಯಾನ ಶ್ಲೋಕ ಎಲ್ಲವನ್ನೂ ಪಟ ಪಟನೆ 10-15 ನಿಮಿಶಗಳಲ್ಲಿ ಹೇಳಿ ಮುಗಿಸುತ್ತಿದ್ದಂತೆಯೇ ಅಂದಿನ ದಿನದ ಶಾಲೆಯಲ್ಲಿ ಕೊಟ್ಟ ಮನೆ ಪಾಠವನ್ನು ಮುಗಿಸಿ ಅರ್ಥವಾಗದೇ ಹೋದದ್ದನ್ನು ಅಪ್ಪನ ಬಳಿ ಹೇಳಿಕೊಳ್ಳುವಷ್ಟರಲ್ಲಿ ಗಂಟೆ 8:30 ಆಗುವಷ್ಟರಲ್ಲಿಯೇ ಅಡುಗೆ ಮನೆಯಲ್ಲಿ ಊಟಕ್ಕೆ ತಟ್ಟೆಗಳನ್ನು ಸಿದ್ಧ ಪಡಿಸುವ ಸದ್ದು ಕೇಳಿಸುತ್ತಿದ್ದಂತೆಯೇ ಅಂದಿನ ದಿನದ ಓದನ್ನು ಮುಗಿಸಿ, ಮತ್ತೆ ಕೈ ತೊಳೆದುಕೊಂಡು ಮನೆಯವರೆಲ್ಲರೂ ಒಟ್ಟಿಗೆ ಮಾತನಾಡುತ್ತಾ ಊಟ ಮುಗಿಸಿ, ಮಾರನೇ ದಿನದ ಶಾಲೆಗೆ ತೆಗೆದುಕೊಂಡು ಹೋಗಬೇಕಾದ ಪುಸ್ತಕಗಳನ್ನೆಲ್ಲಾ ಜೋದಿಸುಕೊಳ್ಳುವಷ್ಟರಲ್ಲಿ ಅಪ್ಪಾ ಎಲ್ಲರಿಗೂ ಹಾಸಿಗೆಯನ್ನು ಸಿದ್ದ ಪಡಿಸುತ್ತಿದ್ದರು. ಆಗ ಅಮ್ಮ ನಮ್ಮ ಬಳಿ ಬಂದು ಒಮ್ಮೆ ಮನೆ ಪಾಠವನ್ನೆಲ್ಲಾ ಸರಿಯಾಗಿ ಮಾಡಿದ್ದೇವೆಯೇ? ಇಲ್ಲಾ ಯಾವುದಾದರನ್ನೂ ಉಳಿಸಿದ್ದೇವೆಯೇ ಎಂದು ಪರೀಕ್ಷಿಸಿ ಜೋಡಿಸಿಟ್ಟು ಕೊಂಡಿದ್ದ ಪುಸ್ತಕಗಳನ್ನೊಮ್ಮೆ ಪರೀಕ್ಷಿಸಿ ಎಲ್ಲವೂ ಸರಿ ಇದೆ ಎಂದಾದಲ್ಲಿ ಮಾತ್ರಾವೇ ಮಲಗಲು ಅನುಮತಿ ದೊರಕುತ್ತಿತ್ತು.
ಹೀಗೆ ಅಮ್ಮನ ಅಪ್ಪಣೆಯ ಮೇರೆಗೆ ಮಲಗಲು ಬರುವಷ್ಟರಲ್ಲಿ ಅಪ್ಪಾ ಪ್ರತೀ ನಿತ್ಯವೂ ರಾಮಾಯಣ, ಮಹಾಭಾರತ, ಸಮಯೋಚಿವಾಗಿ ದೇಶಭಕ್ತರ ಕತೆಗಳು, ಪ್ರಸ್ತುತ ವಿಚಾರಗಳ ಬಗ್ಗೆ ಅರ್ಧ ಮುಕ್ಕಾಲು ಗಂಟೆ ಹೇಳುವಷ್ಟರಲ್ಲಿ ಯಾರಾದರೂ ತೂಕಡಿಸುತ್ತಿದ್ದನ್ನು ನೋಡಿದ ಕೂಡಲೇ ಸರಿ ಇವತ್ತಿಗೆ ಸಾಕು ನಾಳೆ ಕತೆಯನ್ನು ಮುಂದುವರೆಸುತ್ತೇನೆ ಎಂದು ಎಲ್ಲರಿಗೂ ರಾಮಸ್ಕದಂ ಹೇಳಿಸಿ ಹೊದ್ದಿಗೆ ಹೊದ್ದಿಸಿ ಮಲಗಿಸುತ್ತಿದ್ದರು. ಒಮ್ಮೆ ರಾಮಾಯಣ ಹೇಳಲು ಆರಂಭಿಸಿದರೆ ಅದು ಸುಮಾರು 6-7 ತಿಂಗಳ ವರೆಗೆ ಮುಂದುವರೆಯುತ್ತಿದ್ದರೆ, ಇನ್ನು ಹೆಚ್ಚಾಗಿ ಉಪಕಥೆಗಳಿಂದ ಕೂಡಿರುವ ಮಹಾಭಾರತ ಒಮ್ಮೆ 10-12 ತಿಂಗಳುಗಳ ಕಾಲ ಹೇಳಿದ್ದಾರೆ. ರಾಮಾಯಣ ಮುಗಿದ ನಂತರ ಮಹಾಭಾರತ, ಮಹಾಭಾರತ ಮುಗಿದ ನಂತರ ಮತ್ತೆ ಮಹಾಭಾರತ ಹೀಗೆ ಅದೆಷ್ಟು ಬಾರಿ ಹೇಳಿದ್ದಾರೆ ಎಂಬ ಲೆಖ್ಖವೇ ಇಲ್ಲ. ಪ್ರತಿಯೊಂದು ಬಾರಿ ಹೇಳುವಾಗಲೂ ವಿವಿಧ ರೀತಿಯಾಗಿ ಹೇಳುತ್ತಿದ್ದರಿಂದ ನಮಗೆ ಎಷ್ಟು ಬಾರಿ ಕೇಳಿದರೂ ಮತ್ತಷ್ಟು ಮಗದಷ್ಟು ಕೇಳ ಬೇಕು ಎನಿಸುತ್ತಿತ್ತು.
ಇನ್ನು ಬೆಳಿಗ್ಗೆ ಎದ್ದ ತಕ್ಶಣ, ಕರಾಗ್ರೇ ವಸತೇ ಹೇಳಿಕೊಂಡು ಹಲ್ಲುಜ್ಜಿ ನಿತ್ಯಕರ್ಮಗಳನ್ನು ಮುಸಿಸಿಕೊಂಡು ಗಂಗೇಚ ಯಮುನೇ ಚೈವ ಹೇಳಿಕೊಂದು ಸ್ನಾನ ಮುಗಿಸಿ ಹಸೀ ಬಟ್ಟೆಯಲ್ಲಿಯೇ ವೀಭೂತಿ ಹಚ್ಚಿಕೊಂಡು ದೇವರಿಗೆ ನಮಸ್ಕಾರ ಮಾಡಿ ಶಾಲೆಯ ಸಮವಸ್ತ್ರ ಧರಿಸಿಕೊಂಡು ಸಿದ್ದವಾಗುವಷ್ಟರಲ್ಲಿ ತಿನ್ನಲು ತಿಂಡಿ ಮತ್ತು ಮಧ್ಯಾಹ್ನ ಶಾಲೆಯಲ್ಲಿ ತಿನ್ನಲು ಕ್ಯಾರಿಯರ್ ಸಿದ್ಧವಾಗಿರುತ್ತಿತ್ತು. ಅಮ್ಮಾ ಏನೂ ಮಾಡಿದ್ದರೂ, ಹೇಗೆ ಮಾಡಿದ್ದರೂ ಕಮಿಕ್ ಕಿಮಿಕ್ ಎನ್ನದೇ ಅದನ್ನು ತಿಂದು ಪ್ರತೀ ದಿನವೂ ಅಪ್ಪಾ ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ಶಾಲೆಗೆ ಹೊರಡಲು ಸಿದ್ದವಾಗುತ್ತಿದ್ದಂತೆಯೇ ಅಮ್ಮಾ ತಿನ್ನಲು ಬಿಸ್ಕತ್ತು, ಚಕ್ಕುಲಿ ಕೊಡುಬಳೆ, ಇಲ್ಲವೇ ಬಗೆ ಬಗೆಯ ಸಿಹಿ ತಿಂಡಿಗಳನ್ನು ಕೊಟ್ಟು ಜೋಪಾನವಾಗಿ ಹೋಗಿ ಬನ್ನಿ ಎಂದು ಅಪ್ಪಾ ಮಕ್ಕಳನ್ನು ಬೀಳ್ಕೊಡುತ್ತಿದ್ದರು.
ಇನ್ನು ಶಾಲೆಯ ಗಂಟೆ ಹೊಡೆಯುವುದಕ್ಕೆ ಮುಂಚೆಯೇ ಶಾಲೆಗೆ ಬಂದು ನಮ್ಮ ನಮ್ಮ ಸ್ಥಳಗಳಲ್ಲಿ ಚೀಲವನ್ನು ಇಟ್ಟು, ಗಂಟೆ ಹೊಡೆದ ಕೂಡಲೇ ಶಾಲೆಯ ಹೊರೆಗೆ ಪ್ರಾರ್ಥನೆ ಮತ್ತು ರಾಷ್ಟ್ರಗೀತೆಗಳನ್ನು ಹೇಳಿ ನಮ್ಮ ನಮ್ಮ ತರಗತಿಗಳಿಗೆ ಬಂದು ಮತ್ತೆ ಗಣಪತಿ, ಸರಸ್ವತಿಯ ಶ್ಲೋಕಗಳನ್ನು ಹೇಳಿದ ನಂತರ 2ರಿಂದ 20ರ ವರೆಗೆ ಮಗ್ಗಿಯನ್ನು ಸಾಮೂಹಿಕವಾಗಿ ಹೇಳುವ ಮೂಲಕ ತರಗತಿಗಳು ಆರಂಭವಗುತ್ತಿತ್ತು, ತರಗತಿಯಲ್ಲಿ ಎಷ್ಟೇ ತಲೆಹರಟೆ ಮಾಡುತ್ತಿದ್ದರೂ, ಶಿಕ್ಷಕರು ತರಗತಿಗೆ ಪ್ರವೇಶಿಸುತ್ತಿದ್ದಂತೆಯೇ, ಎಲ್ಲರೂ ಎದ್ದು ನಿಂತು ಒಕ್ಕೊರಲಿನಿಂದ ನಮಸ್ತೇ ಟೀಚರ್, ನಮಸ್ತೇ ಸಾರ್ ಎಂದು ಹೇಳಿ ಶಿಕ್ಷಕ ಶಿಕ್ಷಕಿಯರು ನಮಗೆ ನಮಸ್ತೇ ಮಕ್ಕಳೇ ಕುಳಿತುಕೊಳ್ಳಿ ಎಂದು ಹೇಳಿದ ನಂತರವಷ್ಟೇ ಕುಳಿತುಕೊಳ್ಳುತ್ತಿದ್ದೆವು
ಇನ್ನು ನಮ್ಮ ಕಾಲದ ಶಿಕ್ಷಕ ಶಿಕ್ಷಕಿಯರನ್ನು ಕೇವಲ ವಿದ್ಯೆಯನ್ನು ಕಲಿಸುವುದಷ್ಟೇ ಅಲ್ಲದೇ ತಂದೆ ಇಲ್ಲವೇ ತಾಯಿಯರಂತೆ ತಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ವಿಶೇಷತೆಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಿ, ಪ್ರಬಂಧ, ಆಶುಭಾಷಣ, ನಾಟಕ,ಏಕಪಾತ್ರಾಭಿನಯ, ಹಾಡು ಹಸೆಗಳು, ರಸಪ್ರಶ್ನೆಗಳು, ರೇಡಿಯೋ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ಮೂಲಕ ಕೇವಲ ವಿದ್ಯೆಯಲ್ಲದೇ ಬೌದ್ಧಿಕ ವಿಕಸನಕ್ಕೂ ಒತ್ತು ನೀಡುತ್ತಿದ್ದರು. ಇನ್ನು ಪಿಟಿ ಮಾಸ್ತರ್ ಅವರು ಹಿಂದಿನ ಬೆಂಚಿನ ಎತ್ತರದ ಹುಡುಗ ಹುಡುಗಿಯರನ್ನು ಕಬ್ಬಡ್ಡಿ ವಾಲಿಬಾಲ್, ಟೆನಿಕಾಯ್ಟ್, ಖೋಖೋ ಆಟಗಳಿಗೆ ಸೇರಿಸಿಕೊಂಡು ಸೂಕ್ತ ತರಭೇತಿ ನೀಡಿ ಅಂತರ ಶಾಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ಕೊಡುತ್ತಿದ್ದರು.
ಹೀಗೆ ಅಪ್ಪಾ, ಅಮ್ಮಾ , ಶಿಕ್ಷಕ ಶಿಕ್ಷಕಿಯರು ಎಲ್ಲರೂ ಸೇರಿಕೊಂಡು ಮಕ್ಕಳ ಬೆಳವಣಿಗೆಗೆ ಪೋತ್ಸಾಹಿಸುತ್ತಿದ್ದದ್ದಲ್ಲದೇ ತಪ್ಪು ಮಾಡಿದಾಗ ಸರಿಯಾದ ಶಿಕ್ಷೆಯೂ ದೊರೆಯುತ್ತಿತ್ತು. ಅಮ್ಮನ ಕಣ್ಣು ನೋಟವೇ ನಮಗೆ ಬೆಚ್ಚಿ ಬೀಳಿಸುತ್ತಿದ್ದರೆ, ಅದಕ್ಕೂ ಮೀರಿ ತಪ್ಪು ಮಾಡಿ ಉಪವಾಸದಿಂದ ಮಲಗಿದ ಉದಾಹರಣೆಗಳೂ ಉಂಟು. ಇನ್ನು ಅಪ್ಪಾ ಬರ್ಲಾ, ಎದ್ದು ಬರ್ಲಾ, ಬಂದ್ರೆ ಅಷ್ಟೇ ನೋಡು ಎಂಬ ಗದುರುವಿಕೆಯ ಭಯಕ್ಕೇ ಸುಳ್ಳು ಹೇಳುವುದಾಗಲೀ, ಕಳ್ಳತನ ಮಾಡುವುದಾಗಲೀ, ಇತರೇ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದಕ್ಕೆ ಹೆದರುತ್ತಿದ್ದೆವು. ಇನ್ನು ಶಾಲೆಯಲ್ಲಿಯೂ ಸಹಾ ಅದೆಷ್ಟೋ ಶಿಕ್ಷಕ ಶಿಕ್ಷಕಿಯರು ರೂಲು ದೊಣ್ಣೆ, ನಾಗರ ಬೆತ್ತಗಳನ್ನು ತೋರಿಸಿಯೇ ಭಯವನ್ನು ಹುಟ್ಟಿಸಿ ಅಗೊಮ್ಮೆ ಈಗೊಮ್ಮೆ ಮಿತಿ ಮೀರಿದಾಗ ಮಾತ್ರ ಅವುಗಳ ರುಚಿಯನ್ನು ತೋರಿಸುವ ಮೂಲಕ ವಿದ್ಯೆ, ವಿನಯ,ವಿವೇಕದ ಜೊತೆ ಶಿಸ್ತು ಮತ್ತು ಸಂಯಮಗಳನ್ನು ಕಲಿಸಿಕೊಡುವುದರ ಜೊತೆ ಎಂತಹ ಕಠಿಣ ಸಂಧರ್ಭದಲ್ಲಿಯೂ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳ ಬಹುದು ಎಂಬ ಮಾನಸಿಕ ಸ್ಥೈರ್ಯವನ್ನು ಕಲಿಸಿಕೊಡುತ್ತಿದ್ದರು. ಆದರೆ ಇಂದು ಅವೆಲ್ಲವೂ ಸಂಪೂರ್ಣವಾಗಿ ಬದಲಾಗಿಹೋಗಿದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳು ತಪ್ಪು ಮಾಡಿದರೆ ಶಿಕ್ಷೆ ನೀಡುವಂತಿಲ್ಲ, ಗದರುವಂತಿಲ್ಲ. ಶಾಲೆ ಬಿಡಿ ಮನೆಯಲ್ಲೇ ಮಕ್ಕಳಿಗೆ ತಂದೆ ತಾಯಿಯರು ಕೈ ಎತ್ತುವಂತಿಲ್ಲ, ಜೋರಾಗಿ ಬೈಯ್ದರೆ ಸಾಕು, ಅಷ್ಟಕ್ಕೇ ಕೋಪದಿಂದಲೋ ಭಯದಿಂದಲೋ ಅತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನ ಮಕ್ಕಳನ್ನು ಬೆಳಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಇನ್ನು ನಾವು ಒಂಬತ್ತು, ಹತ್ತನೇ ತರಗತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಒಟ್ಟಿಗೆ ಓದುತ್ತಿದ್ದರೂ ಶಾಲೆಯಲ್ಲಿ ಇದ್ದಕ್ಕಿದ್ದಂತೆಯೇ ನಮ್ಮ ಸಹಪಾಟಿ ಹುಡುಗಿಯರು ತರಗತಿಯ ಮಧ್ಯದಲ್ಲೇ ಮೇಡಂ ಎಂದು ಎದ್ದು ನಿಂತು ಮೇಡಂ ಕಿವಿಯಲ್ಲಿ ಹೇಳಿದಾಗ ಸರಿ ಸರಿ ಅವಳ ಪಕ್ಕದಲ್ಲಿದ್ದವಳ ಜೊತೆಗೆ ಮನೆಗೆ ಕಳುಹಿಸಿದ ನಂತರ ಆ ಹುಡುಗಿ ಒಂದು ವಾರ ಅಥವಾ ಹತ್ತು ದಿನಗಳ ಕಾಲ ಶಾಲೆಗ ಬರುತ್ತಿರಲಿಲ್ಲ. ಪದೇ ಪದೇ ಈ ರೀತಿಯ ಪ್ರಸಂಗಗಳು ನಮ್ಮ ತರಗತಿಯಲ್ಲಿ ಆಗುತ್ತಿದ್ದಾಗ ಹೀಗೇಕೆ ಎಂಬ ಕುತೂಹಲ ಮೂಡುತ್ತಿದ್ದಾದರೂ, ಯಾರ ಬಳಿ ಕೇಳುವುದು ಎಂದು ಗೊತ್ತಾಗದೇ ಸುಮ್ಮನಾಗುತ್ತಿದ್ದವು. ನಂತರ ದಿನಗಳಲ್ಲಿ ಆ ಹುಡುಗಿಯರಿಗೆ ಆರತಿ ಶಾಸ್ತ್ರ ಮಾಡಿ ಅಪರೂಪಕ್ಕೆ ಯಾರಾದರೂ ನಮ್ಮ ಹುಡುಗರು ಅಲ್ಲಿಗೆ ಹೋಗಿ ಅದೇನೋ ದೊಡ್ಡವಳಾದಳಂತೆ ಅದಕ್ಕೆ ಆರತಿ ಮಾಡಿದ್ರು ಎನ್ನುವುದಷ್ಟೇ ನಮಗೆ ಗೊತ್ತಾಗಿ ಸರಿ ಬಿಡು ನಮಗೇಕೆ ಹೆಣ್ಣು ಮಕ್ಕಳ ಉಸಾಬರಿ ಎಂದು ಸುಮ್ಮನಾಗುತ್ತಿದ್ದವು.
90ರ ದಶಕದಲ್ಲಿ ನರಸಿಂಹರಾಯರು ಮತ್ತು ಮನಮೋಹನ ಸಿಂಗ್ ಅವರು ಜಾಗತೀಕರಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಕೆಂಪು ಹಾಸಿನ ಮೂಲಕ ಭಾರತಕ್ಕೆ ಮತ್ತೆ ಕರೆ ತರುತ್ತಿದ್ದಂತೆಯೇ, ಎಲ್ಲರ ಕೈಯ್ಯಲ್ಲಿ ಹೇರಳವಾದ ಹಣ ಓಡಾಡತೊಡಗಿದಂತೆಯೇ, ಈ ದೇಶದ ಸಂಸ್ಕಾರ, ಸಂಸ್ಕೃತಿ ಎಲ್ಲದಕ್ಕೂ ಎಳ್ಳು ನೀರು ಬಿಡುವಂತಾಗಿದ್ದಲ್ಲದೇ, ಅದೇ ಸಮಯದಲ್ಳೇ ದೂರದರ್ಶನದಲ್ಲಿ ನಾನಾ ರೀತಿಯ ಖಾಸಗೀ ಛಾನೆಲ್ಲುಗಳು ಆರಂಭವಾಗಿ ಅದರಲ್ಲಿ ಗೊತ್ತು ಗುರಿಯಿಲ್ಲದೇ ಸೆನ್ಸಾರ್ ಇಲ್ಲದೆಯೇ ಅಸಹ್ಯಕರ ಮತ್ತು ಅಶ್ಲೀಲಕರ ಧಾರವಾಹಿಗಳು, ಸಿನಿಮಾಗಳು ಬರತೊಡಗಿದವೂ ಮೇಲೆ ತಿಳಿಸಿದ ಎಲ್ಲವು ಏಕಾಏಕಿ ಬದಲಾಗಿ ಹೋಯಿತು. ಇನ್ನೂ 2000ದ ನಂತರ ಇಂಟರ್ನೆಟ್ ಮತ್ತು 2015ರ ನಂತರ ಸ್ಮಾರ್ಟ್ ಪೋನುಗಳು ಎಲ್ಲರ ಕೈಗಳಲ್ಲಿ ಬಂದ ನಂತರ ಏನು ಬೇಕಾದರೂ Google, YouTube, Torrentಗಳ ಮೂಲಕ ಮಕ್ಕಳಿಗೆ ಬೆರಳ ತುದಿಗೇ ಲಭಿಸತೊಡಗಿದ್ದು ಮಾರಕವಾಯಿತು.
ವಿದೇಶಿಗರಂತೆ ವಾರದ ಐದು ದಿನಗಳು ದುಡಿದು ವಾರಾಂತ್ಯದಲ್ಲಿ ಪಬ್ಬು, ಬಾರು, ಮಾಲುಗಳಲ್ಲಿ ಮೋಜು ಮಸ್ತಿ ಮಾಡುವ ಸಂಸ್ಕೃತಿ ಆರಂಭವಾಗುತ್ತಿದ್ದಂತೆಯೇ ಒಬ್ಬರ ದುಡಿಮೆಯಲ್ಲಿ ಸಂಸಾರ ನಡೆಸಲು ಸಾಧ್ಯವಿಲ್ಲದೇ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಲಾರಂಭಿಸಿ, ನೋಡಿಕೊಳ್ಳಲಾಗದೇ ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಕ್ಕಳನ್ನು ಡೇಕೇರಿನಲ್ಲಿ ಸೇರಿಸುತ್ತಿದ್ದಂತೆಯೇ ಹಿರಿಯರು-ಕಿರಿಯರು, ತಂದೆ-ತಾಯಿ, ಗುರು-ಶಿಷ್ಯರು, ಗಂಡು-ಹೆಣ್ಣು ಎಲ್ಲವೂ ಮಾಯವಾಗಿ, ಆಹಾರ ಪದ್ದತಿಯಲ್ಲಿಯೂ ಸಂಪೂರ್ಣ ಬದಲಾಗಿ ಅನಾರೋಗ್ಯಕರ ಜಂಕ್ ಫುಡ್ ತಿನ್ನುವಂತಹ ಅಂಧ ಪಾಶ್ಚಾತ್ಯೀಕರಣಕ್ಕೆ ಇಡೀ ದೇಶ ಕ್ರಮೇಣ ಒಗ್ಗಿ ಹೋದ ಪರಿಣಾಮವಾಗಿಯೇ, ಇಂದು ಪ್ರೈಮರಿ ಶಾಲೆಯ 4-5 ನೇ ತರಗತಿಯ ಹೆಣ್ಣು ಮಕ್ಕಳು ಋತಿಮತಿಗಳಾಗಿ, ಶಾಲೆಯ ಚೀಲದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಇಟ್ಟುಕೊಳ್ಳುವಂತಾದರೇ, ಇನ್ನೂ ಹೈಸ್ಕೂಲ್ ದಾಟದ ಸರಿಯಾಗಿ ಮೀಸೆಯೂ ಬಾರದ ಹುಡುಗರ ಜೋಬಿನಲ್ಲಿ ಸಿಗರೇಟು, ಮಾದಕ ದ್ರವ್ಯಗಳುಲ್ಲದೇ ಕಾಂಡೋಮ್ ದೊರೆತರೆ, ಕೆಲವು ಹೆಣ್ಣು ಮಕ್ಕಳ ಪರ್ಸುಗಳಲ್ಲಿ ಐ ಪೀಲ್ ಮಾತ್ರೆಗಳು ದೊರೆಯುವಂತಾಗಿರುವುದು ನಿಜಕ್ಕೂ ದುಸ್ತರದ ಸಂಗತಿಯಾಗಿದೆ. ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ.
ಹೀಗಾಗಲೂ ನಮ್ಮ ಕಾಲದಲ್ಲಿ ಇಲ್ಲದಿದ್ದ ಸೌಕರ್ಯಗಳನ್ನು ತಮ್ಮ ಮಕ್ಕಳಿಗೆ ಕೊಡೋಣ ಎನ್ನುವ ಮನೋಭಾವನೆಯಲ್ಲಿ, ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಡುವ ಪೋಷಕರ ಔದಾರ್ಯತೆ, ಕಲಬೆರಕೆ ಎಣ್ಣೆ ಮತ್ತು ಜಂಕ್ ಆಹಾರ ಪದಾರ್ಥಗಳಿಂದ ದೇಹದ ಮೇಲಾಗುವ ದುಶ್ಪಾರಿಣಾಮಗಳು ಮನೆ ಮತ್ತು ಶಾಲೆಗಳಲ್ಲಿನ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಇವೆಲ್ಲವೂ ಮಕ್ಕಳನ್ನು ಅತಿಯಾದ ಸ್ವೇಚ್ಛಾರದ ಕಡೆಗೆ ದೂಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ
ಇನ್ನು ಕಾನೂನನ್ನು ಪಾಲನೆ ಮಾಡುವ ಹೊಡೆಯನ್ನು ಹೊತ್ತಿರುವ ಬಹುತೇಕ ಪೋಲಿಸರು ಮತ್ತು ವಕೀಲರು ಹಣದ ಆಸೆಗಾಗಿ ಎಂತಹ ಕಾನೂನು ಬಾಹಿರ ಅಕ್ರಮ ಕೆಲಸವನ್ನೂ ಸಕ್ರಮ ಮಾಡಲು ನಿಂತಿರುವಾಗ, ಸೂಕ್ತವಾದ ನ್ಯಾಯಾಂಗ ತನಿಖೆಗಳನ್ನು ನಡೆಸಿ ಅಪರಾಧಿ ಮತ್ತು ಅದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಬೇರೆಯವರು ಅಂತಹ ತಪ್ಪಿಗೆ ಮುಂದಾಗದಂತೆ ಕಠಿಣ ಶಿಕ್ಷೆಯನ್ನು ಕೊಡುವಂತಹ ನ್ಯಾಯಾಧೀಶರುಗಳೇ ನಾನಾರೀತಿಯ ಸೈದ್ಧಾಂತಿಕ ನಿಲುವುಗಳಿಂದಾಗಿ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ, ದೇಶದ್ರೋಹ ಮಾಡಿರುವಂತಹ ಅಪರಾಧಿಗಳನ್ನು ಬಿಡುಗಡೆ ಮಾಡುವಂತಹ ಪರಿಸ್ಥಿತಿಯಲ್ಲಿ ಸದ್ಯಕ್ಕೆ ದೇಶದಲ್ಲಿ ಇರುವಾಗ ಮಕ್ಕಳು ಹಾಳಾಗದೇ ಇನ್ನೇನಾಗುತ್ತಾರೆ? ದಂಡಂ ದಶಗುಣಂ ಭವೇತ್ ಎಂದು ಮಾಡಿದ ತಪ್ಪಿಗೆ ಆಗಾಗ್ಗೇ ಚಿಕ್ಕಂದಿನಿಂದಲೂ ಅಪ್ಪ, ಅಮ್ಮಾ ಶಿಕ್ಷಕರು ಶಿಕ್ಷೆಯನ್ನು ಕೊಡದೇ ಹೋದರೆ ಮಕ್ಕಳು ಹಾಳಾಗದೇ ಇನ್ನೇನಾಗುತ್ತಾರೆ? ಅದಕ್ಕೆ ಪೂರಕವಾಗಿ ಕಾನೂನು ರಕ್ಷಕರೇ, ಕಾನೂನು ಭಕ್ಷಕರಾದಾಗ, ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು? ಎನ್ನುವ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ