ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

datta2ಸನಾತನ ಧರ್ಮದ ಪ್ರಕಾರ ಮಾರ್ಗಶೀರ ಮಾಸದ ಹುಣ್ಣಿಮೆಯಂದು ದತ್ತಾತ್ರೇಯ ಜಯಂತಿ ಅಥವಾ ದತ್ತ ಜಯಂತಿಯನ್ನು ಬಹಳ ಶ್ರದ್ಧಾ ಭಕ್ತಿಗಳಿಂದ ಮತ್ತು ಅಷ್ಟೇ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ನಮ್ಮ ಧರ್ಮದ ನಂಬಿಕೆಯ ಪ್ರಕಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಸೃಷ್ಟಿ, ಸ್ಥಿತಿ, ಲಯಕರ್ತರಾಗಿದ್ದುತ್ರಿಮೂರ್ತಿಗಳನ್ನು ಬಹಳವಾಗಿ ನಂಬುತ್ತಾರೆ. ಗುರು ದತ್ತಾತ್ರೇಯರು ಈ ಶಕ್ತಿಯುತ ತ್ರಿಮೂರ್ತಿಗಳಾದ ಸಂಯೋಜಿತ ರೂಪವಾಗಿರುವ ಕಾರಣ ಅವರ ಜಯಂತಿಯನ್ನು ಆಚರಿಸುವ ಮೂಲಕ ಅತ್ಯಂತ ಹೆಚ್ಚಿನ ಫಲವನ್ನು ಪಡೆಯಬಹುದು ಎಂಬುದು ಆಸ್ತಿಕರ ನಂಬಿಕೆಯಾಗಿದೆ.

ಹೀಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿಗಳು ಗುರು ದತ್ತಾತ್ರೇಯರಲ್ಲಿ ಸಮಾಗಮವಾಗುವುದರ ಹಿಂದಿಯೇ ಒಂದು ರೋಚಕವಾದ ಪೌರಾಣಿಕ ಹಿನ್ನಲೆಯಿದೆ. ಪ್ರಸ್ತುತ ಮನ್ವಂತರದ ಸಪ್ತಋಷಿಗಳಾದ ಅತ್ರಿ, ಭಾರದ್ವಾಜ, ಗೌತಮ ಮಹರ್ಷಿ, ಜಮದಗ್ನಿ, ಕಶ್ಯಪ, ವಸಿಷ್ಠ ಮತ್ತು ವಿಶ್ವಾಮಿತ್ರರಲ್ಲಿ, ಅತ್ರಿ ಮಹರ್ಷಿಗಳು ಮತ್ತು ಪರಮ ಪತಿವ್ರತೆಯಾದ ಅನುಸೂಯ ದೇವಿ ಅವರ ಪುತ್ರರೇ ಶ್ರೀ ದತ್ತಾತ್ರೇಯ ಎಲ್ಲರೂ ಆತನನ್ನು ಪ್ರೀತಿಯಿಂದ ದತ್ತ ಅಥವಾ ಶ್ರೀ ದತ್ತಾ ಎಂದು ಕರೆಯುತ್ತಾರೆ. ತ್ರಿಮೂರ್ತಿಯರ ಪತ್ನಿಯರಾದ ಸರಸ್ವತೀ, ಲಕ್ಷ್ಮೀ, ಪಾರ್ವತೀಯು, ಪರಮ ಸಾಧ್ವಿಯೂ, ದೈವಭಕ್ತಳಾದ ಅನುಸೂಯಾದೇವಿಯ ಭಕ್ತಿಯನ್ನು ಪರೀಕ್ಷಿಸಬೇಕೆಂದು ತ್ರಿಮೂರ್ತಿಗಳಲ್ಲಿ ಪ್ರಾರ್ಥಿಸುತ್ತಾರೆ. ಆರಂಭದಲ್ಲಿ ತ್ರಿಮೂರ್ತಿಗಳು ಅದಕ್ಕೆ ಒಪ್ಪದೇ ಹೋದರೂ ನಂತರ ತಮ್ಮ ಪತ್ನಿಯರ ಪ್ರೀತಿಪೂರ್ವಕ ಆಗ್ರಹ ಮತ್ತು ಅನುಸೂಯಾದೇವಿಯ ಅಚಲ ಭಕ್ತಿಯನ್ನು ಲೋಕಕ್ಕೆ ಪರಿಚಯಿಸುವ ಸಲುವಾಗಿ ತ್ರಿಮೂರ್ತಿಗಳೆಲ್ಲರೂ ಮಾರು ವೇಷದಲ್ಲಿ ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ.

datta3ಅತ್ರಿಮುನಿಗಳ ಆಶ್ರಮಕ್ಕೆ ಯಾರೇ ಬಂದರೂ ಅವರನ್ನು ಬರಿಗೈಯಲ್ಲಿ ಹಿಂದಿರುಗಿಸಬಾರದು ಎಂಬುದು ಅವರ ಆಶ್ರಮದ ನಿಯಮವಾಗಿರುತ್ತದೆ. ಹೀಗೆ ಮಾರು ವೇಷದಲ್ಲಿ ಬಂದ ತ್ರಿಮೂರ್ತಿಗಳು ತಮ್ಮ ಪಾಪ ಪರಿಹಾರಾರ್ಥವಾಗಿ ಪರಮ ಪತಿವ್ರತೆಯಾದ ಅನುಸೂಯಾದೇವಿಯರು ಅ ಮೂವರಿಗೂ ಸ್ಥನಪಾನ ಮಾಡಿಸಬೇಕೆಂದು ಕೋರಿಕೊಳ್ಳುತ್ತಾರೆ. ಬಹಳ ವಿಚಿತ್ರವಾದ ಕೋರಿಕೆಯನ್ನು ಕೇಳುತ್ತಲೇ ಒಂದು ಕ್ಷಣ ಅತ್ರಿ ದಂಪತಿಗಳು ಧಿಗ್ಭ್ರಾಂತರಾದರೂ, ನಂತರ ಸಾವರಿಸಿಕೊಂಡು ತಮ್ಮ ತಪೋಬಲದಿಂದ ಬಂದವರು ಸಾಮನ್ಯರಾಗಿರದೇ ತ್ರಿಮೂರ್ತಿಗಳೆಂದು ತಿಳಿದ ದಂಪತಿಗಳು ನಿಮ್ಮ ಅಭಿಪ್ಸೆಯಂತೆ ಆಗಲಿ ಎಂದಾಗ, ತಮ್ಮ ಕೋರಿಕೆಯನ್ನು ಅನುಸೂಯಾದೇವಿ ಹೇಗೆ ಪೂರೈಸಬಹುದೆಂಬ ಕುತೂಹಲ ತ್ರಿಮೂರ್ತಿಗಳಲ್ಲಿ ಮೂಡುತ್ತದೆ. ಕೂಡಲೇ ಅನುಸೂಯಾದೇವಿ ತನ್ನ ಪತಿವ್ರತಾ ಬಲದಿಂದ ಮಾರುವೇಷದಲ್ಲಿದ್ದ ತ್ರಿಮೂರ್ತಿಗಳ ಮೇಲೆ ಮಂತ್ರದ ನೀರನ್ನು ಪ್ರೋಕ್ಷಿಸಿದಾಗ ಅ ಮೂವರು ಕ್ಷಣಮಾತ್ರದಲ್ಲೇಎ ಸಣ್ಣ ಮಕ್ಕಳಾಗುತ್ತಾರೆ. ಆ ಹಸುಳೆಗಳಿಗೆ ತಾಯಿಯಂತೆ ಅನುಸೂಯದೇವಿಯು ತನ್ನ ಎದೆಹಾಲು ಉಣಿಸಿ ಸಂತೃಪ್ತ ಪಡಿಸುತ್ತಾಳೆ.

ಈ ರೀತಿ ತಮ್ಮ ಪತಿಯಂದಿರು ಮಕ್ಕಳಾಗಿ ಹೋಗಿದ್ದನ್ನು ಕಂಡು ತಮ್ಮ ತಪ್ಪಿನ ಅರಿವಾಗಿ ತ್ರಿಮೂರ್ತಿಯರ ಪತ್ನಿಯರು ಅನುಸೂಯಾದೇವಿಯವರ ಬಳಿ ಬಂದು ಕ್ಷಮೆಯಾಚಿಸಿದ್ದಲ್ಲದೇ, ತಮ್ಮ ಪತಿಯಂದಿರನ್ನು ಮತ್ತೆ ಸಹಜ ರೂಪಕ್ಕೆ ಮರಳಿಸಬೇಕೆಂದು ಕೋರಿಕೊಳ್ಳುತ್ತಾರೆ. ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿಯರ ಕೋರಿಕೆಯನ್ನು ಮನ್ನಿಸಿದ ಅನುಸೂಯದೇವಿ ಮತ್ತೆ ತ್ರಿಮೂರ್ತಿಗಳಿಗೆ ನಿಜಸ್ವರೂಪವನ್ನು ಕರುಣಿಸಿದಾಗ, ಅಕೆಯ ಭಕ್ತಿಯ ಪರಾಕಾಷ್ಠೆಯನ್ನು ಮೆಚ್ಚಿದ ತ್ರಿಮೂರ್ತಿಗಳು ತಮ್ಮ ಮಾತೃ ಸ್ವರೂಪಿಯಾದ ಅನುಸೂಯಾಳ ಹೊಟ್ಟೆಯಲ್ಲಿ ದತ್ತಾತ್ರೇಯನಾಗಿ ಜನಿಸುತ್ತೇವೆ ಎಂಬ ವಾಗ್ಧಾನವನ್ನು ನೀಡುತ್ತಾರೆ. ಹೀಗೆ ತ್ರಿಮೂರ್ತಿಗಳ ಸಮಾಗಮದ ಅಂಶವಾಗಿ ದತ್ತಾತ್ರೇಯರ ಅವತಾರ ಈ ಭೂಮಿಯ ಮೇಲೆ ಆಗುತ್ತದೆ.

ದತ್ತಾತ್ರೇಯರ ಹೆಸರಿನಲ್ಲೇ ದತ್ತ ಎಂಬ ಪದವೇ ಅತ್ಯಂತ ಮಹತ್ವದ್ದಾಗಿದ್ದು ದತ್ತಾ ಎಂದರೆ ಕೊಡುವುದು ಎಂಬರ್ಧವಿದೆ. ಹಾಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಶ್ರದ್ಧಾ ಭಕ್ತಿಗಳಿಂದ ಗುರು ದತ್ತಾತ್ರೇಯರನ್ನು ಪ್ರಾರ್ಥಿಸುವುದು ಮತ್ತು ಅಗತ್ಯವಿದ್ದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವುದರಿಂದ ಗುರು ದತ್ತಾತ್ರೇಯರು ಆವರ ಮನೋವಾಂಛನೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಗುರು ದತ್ತಾತ್ರೇಯರು ಜನಿಸಿದ ಮಾರ್ಗಶಿರ ಮಾಸದ ಪೌರ್ಣಿಮೆಯಂದು ದತ್ತ ಜಯಂತಿಯೆಂದು ಬಹಳ ಶ್ರದ್ಧಾ ಭಕ್ತಿಯಿಂದ ‌ಆಚರಿಸಲಾಗುತ್ತದೆ.

datta7ದತ್ತ ಜಯಂತಿಯ ಆಚರಣೆಗಳು ಈ ರೀತಿಯಾಗಿವೆ.

  • ಇತರೇ ಎಲ್ಲಾ ಹಬ್ಬಗಳಂತೆಯೇ ದತ್ತ ಜಯಂತಿಯಂದು ಬೆಳಿಗ್ಗೆಯೇ ಎದ್ದು ಮನೆಯನ್ನು ಸಾರಿಸಿ ಗುಡಿಸಿ ರಂಗೋಲಿ ಇಟ್ಟು ಶುಭ್ರಗೊಳಿಸಿ ಗೋಮೂತ್ರ ಇಲ್ಲವೇ ಪವಿತ್ರ ನೀರಿನಿಂದ ಪೂಜೆಯ ಸ್ಥಳಗಳನ್ನು ಸ್ವಚ್ಚಗೊಳಿಸಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಉಪವಾಸದಿಂದ ಗುರು ದತ್ತಾತ್ರೇಯರಿಗೆ ಪೂಜೆಯನ್ನು ಮಾಡುತ್ತಾರೆ.
  • ದೇವರ ಮನೆಯಲ್ಲಿ ಕಲಶವನ್ನು ಸ್ಥಾಪಿಸಿ ಅದರ ಮುಂದೆ ಗುರುಗಳ ಭಾವಚಿತ್ರವಾಗಲೀ ಇಲ್ಲವೇ ಪ್ರತಿಮೆಯನ್ನು ಸ್ಥಾಪಿಸಿ ಪೂಜೆಯನ್ನು ಆರಂಭಿಸುತ್ತಾರೆ.
    ಹೀಗೆ ಪೂಜೆ ಮಾಡುವಾಗ ಹೀಗೆಯೇ ಇಂತಹದ್ದೇ ನಿರ್ಧಿಷ್ಟ ಹೂವುಗಳಿಂದ ಪೂಜಿಸಬೇಕು ಎಂಬ ನಿಯಮವಿರದೇ, ಸ್ಥಳೀಯವಾಗಿ ಲಭ್ಯವಿರುವ ಹೂವುಗಳಿಂದಲೇ ದತ್ತಾತ್ರೇಯರ ಭಾವಚಿತ್ರವಾಗಲೀ ಅಥವಾ ಮೂರ್ತಿಯನ್ನು ಅಲಂಕರಿಸಿ, ಧೂಪ ದೀಪಗಳಿಂದ ಪೂಜಿಸಿ ಮನೆಯಲ್ಲಿ ಮಾಡಿದ ನೈವೇದ್ಯವನ್ನು ಅರ್ಪಿಸಿದ ನಂತರ ಗುರು ದತ್ತಾತ್ರೇಯರ ಭಕ್ತಿ ಗೀತೆಗಳನ್ನು ಹಾಡುವುದು ಕೆಲವರ ಸಂಪ್ರದಾಯವಾದರೆ, ಮತ್ತೆ ಕೆಲವರು ಗುರು ಚರಿತ್ರೆಯ ಸಾರಾಂಶವನ್ನು ಮಾಡುತ್ತಾರೆ.
  • ಇನ್ನೂ ಕೆಲವರು ಒಂದು ವಾರದ ಮುಂಚೆಯೇ ಗುರು ಚರಿತ್ರೆಯ ಸಪ್ತಾಹವನ್ನು ಆರಂಭಿಸಿ ದತ್ತ ಜಯಂತಿಗೆ ಸರಿಯಾಗಿ ಪೂರ್ಣಗೊಳಿಸುವುದನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ.
  • ಪೂಜೆ ಎಲ್ಲವೂ ಮುಗಿದು ಮಹಾಮಂಗಳಾರತಿ ಆದ ನಂತರ ಮನೆಯವರೆಲ್ಲರೂ ದತ್ತ ದೇವರ ವಿಗ್ರಹದ ಸುತ್ತಲೂ ಏಳು ಸುತ್ತುಗಳ ಪ್ರದಕ್ಷಿಣೆಯನ್ನು ಹಾಕಿ ಭಕ್ತಿಯಿಂದ ದತ್ತಾತ್ರೇಯರಿಗೆ ನಮಿಸಿದ ನಂತರ ಕೇಸರಿ ಬಣ್ಣದ ದಾರವನ್ನು ಮನೆಯವರು ಮತ್ತು ಬಂಧು ಮಿತ್ರರಿಗೆ ಪರಸ್ಪರ ಅನ್ಯೋನ್ಯತೆಯಿಂದ ಕಟ್ಟಿಕೊಂಡು ತೀರ್ಥ ಪ್ರಸಾದಗಳನ್ನು ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ.
  • ಈ ರೀತಿಯಾಗಿ ವಿವಿಧ ಕಾರಣಗಳಿಂದ ಶೋಡಶೋಪಚಾರಗಳಿಂದ ಪೂಜಿಸಲು ಸಾಧ್ಯವಾಗದೇ ಹೋದಲ್ಲಿ, ಶ್ರೀ ಗುರು ದತ್ತಾತ್ರೇಯಾಯ ನಮಃ ಇಲ್ಲವೇ, ಓಂ ಶ್ರೀ ಗುರುದೇವ ದತ್ತ ಎನ್ನುವ ಮಂತ್ರಗಳನ್ನು ಪಠಿಸುವುದರಿಂದಲೂ ಮನಸ್ಸು ಮತ್ತು ಆತ್ಮದಲ್ಲಿ ಶುದ್ಧತೆಯಾಗಿ ದತ್ತ ಜಯಂತಿಯ ಫಲ ಲಭಿಸುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
  • datta5ಇನ್ನೂ ಕೆಲವರು ದತ್ತ ಜಯಂತಿಯಂದು ಸ್ಥಳೀಯ ದತ್ತಾತ್ರೇಯ ದೇವಸ್ಥಾಕ್ಕಾಗಲೀ ಇಲ್ಲವೇ ತೀರ್ಥಕ್ಷೇತ್ರಗಳಾದ ಗಾಣಗಾಪುರ, ಸಾಗರದ ವರದಹಳ್ಳಿಗಳಿಗೆ ಹೋಗುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ.
  • ಇತ್ತೀಚಿನ ವರ್ಷಗಳಲ್ಲಿ ಮೂರ್ನಾಲ್ಕು ವಾರಗಳ ಹಿಂದೆಯೇ ದತ್ತಮಾಲೆಯನ್ನು ಧರಿಸಿ ನಿತ್ಯವೂ ಶ್ರದ್ಧಾಭಕ್ತಿಗಳಿಂದ ದತ್ತಾತ್ರೇಯರನ್ನು ಪೂಜಿಸಿ ದತ್ತ ಜಯಂತಿಯಂದು ಚಿಕ್ಕಮಗಳೂರಿನ ಪವಿತ್ರ ದತ್ತಪೀಠಕ್ಕೆ ಹೋಗಿ ಗುರು ಪೀಠದ ದರ್ಶನ ಪಡೆಯುವ ಆಚರಣೆಯೂ ರೂಢಿಯಲ್ಲಿದೆ.

ಹೀಗೆ ಭಕ್ತಿಯಿಂದ ದತ್ತಾರಾಧನೆ ಮಾಡುವುದರಿಂದ ಗುರು ದತ್ತಾತ್ರೇರ ಅನುಗ್ರಹದಿಂದ ಸಂತಾನಪ್ರಾಪ್ತಿ, ಪಿತೃಕೋಪ, ಮನೋರೋಗ, ವಿವಾಹ ಸಂಬಂಧಿತ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತದೆ ಎಂಬ ನಂಬಿಕೆಯಾಗಿದೆ.

datta4ಇನ್ನು ಕರ್ನಾಟಕದವರಿಗೆ ಗುರು ದತ್ತಾತ್ರೇಯರ ಅನುಗ್ರಹ ಉಳಿದವರಿಗಿಂತಲೂ ತುಸು ಹೆಚ್ಚಾಗಿಯೇ ಇದೆ ಎಂದರೂ ತಪ್ಪಾಗದು. ದತ್ತಾತ್ರೇಯರಿಗೆ ಸಂಬಧಿಸಿದ ಮೂರು ಪುಣ್ಯಕ್ಷೇತ್ರಗಳಿವೆ. ಗುಲ್ಬರ್ಗಾ ಬಳಿಯ ಗಾಣಗಾಪುರ, ಸಾಗರದ ವರದಹಳ್ಳಿ ಮತ್ತು ಚಿಕ್ಕಮಗಳೂರಿನ ಪವಿತ್ರ ದತ್ತಪೀಠವಿದೆ. ಭೀಮಾ ಮತ್ತು ಅಮರಜ ನದಿಗಳ ಸಂಗಮದ ಹತ್ತಿರ ಇರುವ ಗಾಣಗಾಪುರದ ಉಲ್ಲೇಖ ಶ್ರೀ ಗುರುಚರಿತ್ರೆಯಲ್ಲಿ ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಇದ್ದು, ದತ್ತಾವತಾರಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ ಬಂದು ಸುಮಾರು 23 ವರ್ಷ ನೆಲೆಸಿದ್ದ ಕಾರಣ, ಇಲ್ಲಿ ದತ್ತ ಸಂಪ್ರದಾಯವನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾದರು. ಶ್ರೀ ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿದ್ದು ಕೆಲ ಕಾಲ ನೆಲಸಿ ಅಂತಿಮ ದಿನಗಳಲ್ಲಿ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವರಣದಲ್ಲಿ ಶಿವ ಪಾರ್ವತಿಯರ ಮೂರ್ತಿ, ಔಂದುಬರ ವೃಕ್ಷ ಮತ್ತು ಅಶ್ವತ್ಥ ವೃಕ್ಷದ ಕೆಳಗೆ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಳಸೀ ಬೃಂದಾವನವಿದೆ. ಈ ಮಠದಲ್ಲಿರುವ ಶ್ರೀಗುರುಗಳ ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ. ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ. ಗಾಣಗಾಪುರದಲ್ಲಿ ರೂಢಿಯಲ್ಲಿರುವ ಮಧುಕರವೃತ್ತಿ ಎಂಬ ಸೇವೆಯು ಅತ್ಯಂತ ಅವಿತ್ರವಾಗಿದೆ. ಈ ಸೇವೆಮಾಡುವ ಭಕ್ತಾದಿಗಳು ದೇವಾಲಯದ ಸುತ್ತಮುತ್ತಲಿರುವ ಮನೆಗಳಿಂದ ಯಾಚಿಸಿ (ಭಿಕ್ಷೆ ಬೇಡಿ) ಅದನ್ನೇ ಪ್ರಸಾದ ರೂಪದಲ್ಲಿ ಸೇವಿಸುತ್ತಾರ. ಈ ರೀತಿಯಾಗಿ ಬೇಡುವುದರಿಂದ ಅವರಲ್ಲಿದ್ದಿರಬಹುದಾದ ಅಹಂಕಾರಗಳು ನಾಶವಾಗುತ್ತದೆ. ಮನುಷ್ಯನಲ್ಲಿ ಈ ರೀತಿಯಾಗಿ ಅಹಂಕಾರ ನಾಶವಾದಲ್ಲಿ ಅದುವೇ ಎಲ್ಲಾ ಸಾಧನೆಗೂ ನಾಂದಿ ಎನ್ನಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಹಿಂದಿನ ಕಾಲದ ಗುರುಕುಲದಲ್ಲಿ ರಾಜರ ಮಕ್ಕಳಾಗಿರಲೀ ಸಾಮಾನ್ಯರ ಮಕ್ಕಳಾಗಿರಲೀ ಎಲ್ಲರೂ ಭಿಕ್ಷಾಟನೆ ಮಾಡಿ ತಂದದ್ದನ್ನು ಗುರುಗಳೊಂದಿಗೆ ಹಂಚಿ ತಿನ್ನುವುರು ರೂಢಿಯಲ್ಲಿತ್ತು.

datta6ನಾಮಾನ್ಯವಾಗಿ ಯಾವುದೇ ಒಳ್ಳೆಯ ಕೆಲಸವನ್ನು ಮಾಡಬೇಕಾದರೆ, ಮುಂದೆ ಸಷ್ಟವಾದ ಗುರಿ ಇರಬೇಕು ಮತ್ತು ಹಿಂದೆ ದಿಟ್ಟ ಗುರು ಇರಬೇಕು ಎಂಬ ಮಾತಿದೆ. ಹಾಗಾಗಿ ಗುರು ದತ್ತಾತ್ರೇಯರನ್ನು ಭಕ್ತಿಯಿಂದ ನಂಬಿದಲ್ಲಿ ಎಲ್ಲರಿಗೂ ಉತ್ತಮವಾದ ರೀತಿಯಲ್ಲಿ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತಾರೆ. ಅವರ ಜಯಂತಿಯಂದು ಭಕ್ತಿಯಿಂದ ಪೂಜಿಸುವುದರಿಂದ ಇಲ್ಲವೇ ಸಾವಿರ ಬಾರಿ ಅವರ ನಾಮಜಪ ಮಾಡುವುದರಿಂದ ಸಮೃದ್ಧ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಹಾಗಾದೇ ಇನ್ನೇಕೆ ತಡಾ, ಇಂದಿನ ದತ್ತಾತ್ರೇಯ ಜಯಂತಿಯಂದು ಶ್ರೀ ಗುರು ದತ್ತಾತ್ರೇಯಾಯ ನಮಃ ಇಲ್ಲವೇ, ಓಂ ಶ್ರೀ ಗುರುದೇವ ದತ್ತ ಎನ್ನುವ ಮಂತ್ರಗಳನ್ನು ಭಕ್ತಿಯಿಂದ ಜಪಿಸುವ ಮೂಲಕ ಗುರುದತ್ತಾತ್ರೇಯರ ಕೃಪೆಗೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s