ನಮಗೆಲ್ಲಾ ತಿಳಿದಿರುವಂತೆ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರ ನಂತರ ಬಹಳ ಪ್ರಮುಖ ಪಾತ್ರ ವಹಿಸುವುದೇ ಕರ್ಣ ಎಂದರೂ ತಪ್ಪಾಗದು. ಕುಂತೀ ಪುತ್ರನಾದರೂ, ವಿಧಿಯಾಟದಿಂದ ಸೂತಪುತ್ರನೆಂಬ ಹಣೆಪಟ್ಟಿಯನ್ನು ಹೊತ್ತು, ವಿದ್ಯಾ ಬುದ್ಧಿ ಇದ್ದರೂ ಸಾಕಷ್ಟು ಅವಮನ ಮತ್ತು ಅಪಮಾನಗಳನ್ನು ಸಹಿಸಿಕೊಂಡು ಕರೆಗೆ ಧುರ್ಯೋಧನನಂತಹ ಗೆಳೆಯನ ಸಹಾಯದಿಂದ ಅಂಗ ರಾಜ್ಯದ ರಾಜನಾದರೂ, ದಾನ ಎಂಬ ಮಾತು ಬಂದಾಕ್ಷಣ ಇಂದಿಗೂ ಸಹಾ ಎಲ್ಲರೂ ಕರ್ಣನನ್ನೇ ದಾನ ವೀರ ಶೂರ ಎಂದು ಹೋಗಳಲು ಕಾರಣ ಎನು? ಎಂಬ ಜಿಜ್ಞಾಸೆ ಬಹುತೇಕರಿಗೆ ಕಾಡುತ್ತಿರಬಹುದು. ಇಂತಹದ್ದೇ ಪ್ರಶ್ನೆ ಪದೇ ಪದೇ ಅರ್ಜನನಿಗೆ ಕಾಡುತ್ತಿದ್ದು ಅದಕ್ಕೆ ಶ್ರೀ ಕೃಷ್ಣ ಪರಿಹಾರ ನೀಡಿದ್ದ ಕಥೆಯನ್ನು ಈ ಹಿಂದೆ ಓದಿದ್ದೀರಿ (ಈ ಲಿಂಕ್ ಒತ್ತಿದಲ್ಲಿ ಆ ಕಥೆಯನ್ನು ಓದಬಹುದು) ಈಗ ಅಂತಹದ್ದೇ ಮತ್ತೊಂದು ದೃಷ್ಟಾಂತವನ್ನು ನೋಡೋಣ ಬನ್ನಿ
ಅದೊಮ್ಮೆ ಅರ್ಜುನನು ಶ್ರೀಕೃಷ್ಣನ ಬಳಿ ಬಂದು ಕರ್ಣನನ್ನು ಜನರು ಯುಧಿಷ್ಟರಿಗಿಂತ ಏಕೆ ಹೆಚ್ಚು ಉದಾರ ಎಂದು ಪರಿಗಣಿಸುತ್ತಾರೆ? ನನ್ನ ಅಣ್ಣ ಯಾರು ಕೇಳಿದರೂ, ಏನನ್ನು ಕೇಳಿದರೂ ನಿರಾಕರಿಸಿಲ್ಲವಾದರೂ, ಕರ್ಣನನ್ನೇ ಯುಧಿಷ್ಟಿರನಿಗಿಂತ ಏಕೆ? ಮತ್ತು ಹೇಗೆ ಶ್ರೇಷ್ಠ ಎಂದು ಪರಿಗಣಿಸುತ್ತಾರೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ಯಥಾ ಪ್ರಕಾರ ಭಗವಾನ್ ಶ್ರೀ ಕೃಷ್ಣ ಮುಗುಳ್ನಗುತ್ತಾ ಈ ಹಿಂದೆ ದಾನದ ವಿಷಯದಲ್ಲಿ ನಿನಗೂ ಮತ್ತು ಕರ್ಣನ ನಡುವಿನ ವೆತ್ಯಾಸ ತಿಳಿಸಿದ್ದೆ. ಈಗ ನಿಮ್ಮ ಅಣ್ಣನ ಸರದಿ. ಅದನ್ನು ಹೇಳಿವುದಿದಕ್ಕಿಂತಲೂ ನೋಡುವುದರಿಂದ ಹೆಚ್ಚು ಮನನವಾಗುತ್ತದೆ ಎಂದು ಶ್ರೀಕೃಷ್ಣ ಮತ್ತು ಅರ್ಜುನರು ಋಷಿಗಳ ಶಿಷ್ಯಂದಿರಂತೆ ಮಾರು ವೇಷ ಧರಿಸಿ, ಮೊದಲು ಯುಧಿಷ್ಟರ ಆಸ್ಥಾನಕ್ಕೆ ಹೋಗಿ, ಅಯ್ಯಾ ಧರ್ಮರಾಯ, ನಮ್ಮ ಗುರುಗಳು ಲೋಕ ಕಲ್ಯಾಣಕ್ಕಾಗಿ ಯಾಗವೊಂದನ್ನು ಮಾಡುತ್ತಿದ್ದು, ಅದರ ಪೂರ್ಣಾಹುತಿಗಾಗಿ ಶ್ರೀಗಂಧದ ಕೊರಡುಗಳು ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಶ್ರೀಗಂಧದ ಕೊರಡುಗಳನ್ನು ಕೊಡಲು ಸಾಧ್ಯವೇ? ಎಂದು ಕೇಳುತ್ತಾರೆ. ಋಷಿಗಳ ಶಿಷ್ಯಂದಿರ ಮಾತುಗಳನ್ನು ಬಹಳ ತಾಳ್ಮೆಯಿಂದ ಆಲಿಸಿದ ಧರ್ಮರಾಯ, ಕೂಡಲೇ, ತನ್ನ ಸೈನಿಕರನ್ನು ಕರೆದು ರಾಜ್ಯದ ಎಲ್ಲಾ ಭಾಗಗಳಿಂದಲೂ ಶ್ರೀಗಂಧದ ತುಂಡುಗಳನ್ನು ತರಲು ಆಜ್ಞಾಪಿಸುತ್ತಾನೆ. ದುರಾದೃಷ್ಟವಷಾತ್ ಅದು ಮುಂಗಾರು ಮಳೆಯ ಸಮಯವಾಗಿದ್ದು, ಕಾಡಿನಲ್ಲಿದ್ದ ಮರಗಳೆಲ್ಲವೂ ಮಳೆಯಿಂದ ತೋಯ್ದಿದ್ದರೂ, ರಾಜಾಜ್ಞೆಯಂತೆ, ಅದೇ ಹಸೀ ಮರದ ತುಂಡುಗಳನ್ನೇ ಹೊತ್ತು ತರುತ್ತಾರೆ. ಹಸೀ ಮರಗಳನ್ನು ಹೋಮಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಆ ಇಬ್ಬರೂ ಶಿಷ್ಯಂದಿರು ಅಲ್ಲಿಂದ ನೇರವಾಗಿ ಅಂಗ ರಾಜ ಕರ್ಣನ ಆಸ್ಥಾನಕ್ಕೆ ಹೋಗುತ್ತಾರೆ.
ಅಲ್ಲಿಯೂ ಸಹಾ ಯಥಾ ಪ್ರಕಾರ ಕರ್ಣನಿಗೆ ವಂದಿಸಿ, ನಮ್ಮ ಗುರುಗಳು ಲೋಕ ಕಲ್ಯಾಣಕ್ಕಾಗಿ ಯಾಗವೊಂದನ್ನು ಮಾಡುತ್ತಿದ್ದು, ಅದರ ಪೂರ್ಣಾಹುತಿಗಾಗಿ ಶ್ರೀಗಂಧದ ಕೊರಡುಗಳು ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಶ್ರೀಗಂಧದ ಕೊರಡುಗಳನ್ನು ನಿಮ್ಮಿಂದ ಕೊಡಲು ಸಾಧ್ಯವೇ? ಎಂದು ಕೇಳುತ್ತಾರೆ. ಕರ್ಣನೂ ಸಹಾ ಶಿಷ್ಯಂದಿರ ಮಾತುಗಳನ್ನು ಬಹಳ ತಾಳ್ಮೆಯಿಂದ ಆಲಿಸಿದ ನಂತರ ಕೆಲ ಕಾಲ ಯೋಚನಾಮಜ್ಞನಾಗಿ, ಆಚಾರ್ಯರೇ, ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಡಿನಲ್ಲಿ ಇರುವ ಶ್ರೀಗಂಧದ ಮರಗಳೆಲ್ಲವೂ ಒದ್ದೆ ಮುದ್ದೆಯಾಗಿರುವ ಕಾರಣ, ಹೋಮಕ್ಕೆ ಅಗತ್ಯವಿರುವ ಒಣಗಿದ ಶ್ರೀಗಂಧದ ಕೊರಡುಗಳು ಸಿಗುವುದು ಬಹಳ ಕಷ್ಟ. ಆದರೂ ಅದಕ್ಕೊಂದು ಪರಿಹಾರವಿದೆ. ದಯವಿಟ್ಟು ಸ್ವಲ್ಪ ಹೊತ್ತು ಇಲ್ಲೇ ಕಾಯುತ್ತಿರೀ ಎಂದು ವಿನಮ್ರನಾಗಿ ಅವರನ್ನು ಸತ್ಕರಿಸಲು ತನ್ನ ಭಟರಿಗೆ ಹೇಳಿ ಹೊರಗೆ ಹೋಗುತ್ತಾನೆ.
ಹೀಗೆ ಶಿಷ್ಯಂದಿರನ್ನು ಕೂರಲು ಹೇಳಿ ಹೋದ ಕರ್ಣ, ನೇರವಾಗಿ ತನ್ನ ಅರಮನೆಯ ದೇವರ ಕೋಣೆಗೆ ಹೋಗಿ ಅಲ್ಲಿ ಶ್ರೀಗಂಧದ ಮರದಿಂದ ಮಾಡಿದ ಬಾಗಿಲು ಮತ್ತು ಕಿಟಕಿಗಳನ್ನು ಕತ್ತರಿಸಿ ಅವುಗಳನ್ನು ತುಂಡುಗಳಾಗಿ ಮಾಡಿ ಅವುಗಳನ್ನು ತಂದು ಶಿಷ್ಯಂದಿರಿಗೆ ನೀಡೀ, ನಿಮ್ಮ ಯಜ್ಞಗಳು ಸುಸೂತ್ರವಾಗಿ ನಡೆಯಲು ಇನ್ನೂ ಯಾವುದೇ ರೀತಿಯ ಸಹಾಯ ಬೇಕಾಗಿದ್ದಲ್ಲಿ ನಿಸ್ಸಂಕೋಚವಾಗಿ ಕೇಳಿ. ನನ್ನಿಂದ ಅದು ಸಾಧ್ಯವಾದಲ್ಲಿ ಖಂಡಿತವಾಗಿಯೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ವಿನಮ್ರದಿಂದ ಕೈ ಮುಗಿದು ಹೇಳುತ್ತಾನೆ. ಕರ್ಣನು ನೀಡಿದ ಶ್ರೀಗಂಧದ ತುಂಡುಗಳನ್ನು ಸ್ವೀಕರಿಸಿ ಅತನಿಗೆ ಮನಃಪೂರ್ವಕವಾಗಿ ಆಶೀರ್ವಾದ ಮಾಡಿ ಶಿಷ್ಯಂದಿರಿಬ್ಬರೂ ಅಲ್ಲಿಂದ ಹೊರಡುತ್ತಾರೆ.
ಹೀಗೆ ಕರ್ಣನ ಆಸ್ಥಾನದಿಂದ ಹಿಂದಿರುಗುವಾಗ ಶ್ರೀ ಕೃಷ್ಣನು, ನೋಡಿದೆಯಾ ಅರ್ಜುನ, ಇದೇ ನಿಮ್ಮ ಅಣ್ಣ ಧರ್ಮರಾಯ ಮತ್ತು ಕರ್ಣನ ನಡುವಿನ ವೆತ್ಯಾಸವನ್ನು. ನಾವು ಯಜ್ಞವನ್ನು ಮಾಡುವ ಸಲುವಾಗಿ ಇಬ್ಬರ ಬಳಿಯೂ ಒಂದೇ ಕೋರಿಕೆಯನ್ನು ಇಟ್ಟೆವು. ನಮ್ಮ ಕೋರಿಕೆಗೆ ಇಬ್ಬರೂ ಸಹಾ ಸ್ಪಂದಿಸಿ ನಾವು ಕೇಳಿದ ಗಂಧದ ಕೊರಡುಗಳನ್ನೇನೋ ಕೊಟ್ಟರು. ಆದರೆ ಯುಧಿಷ್ಠರ ಕೊಟ್ಟ ಗಂಧದ ಕೊರಡುಗಳು ಒದ್ದೆಯಾಗಿದ್ದು ಅವುಗಳನ್ನು ಕೂಡಲೇ ಹೋಮಕ್ಕೆ ಬಳಸಲು ಆಗುತ್ತಿರಲಿಲ್ಲ. ಆದರೆ ಕರ್ಣನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ದೇವರಮನೆಯ ಬಾಗಿಲು ಮತ್ತು ಕಿಟಕಿಗಳನ್ನೇ ದಾನವಾಗಿ ನೀಡಿದ. ಬಹುಶಃ ನಾವು ಹಸೀ ತುಂಡುಗಳ ಬದಲಾಗಿ ನಿಮ್ಮ ದೇವರು ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ನಮಗೆ ಕೊಡಲು ಸಾಧ್ಯವೇ? ಎಂದು ಧರ್ಮರಾಯನನ್ನು ಕೇಳಿದ್ದಲ್ಲಿ, ಆತ ಖಂಡಿತವಾಗಿಯೂ ಎರಡನೇ ಆಲೋಚನೆಯಿಲ್ಲದೆ ಕೊಡುತ್ತಿದ್ದ ಎನ್ನುವುದರದಲ್ಲಿ ಯಾವುದೇ ಅನುಮಾನವಿಲ್ಲದೇ ಇದ್ದರೂ, ಆತ ಅದರ ಬಗ್ಗೆ ಸ್ವತಃ ಯೋಚಿಸಲಿಲ್ಲ ಎಂಬುದು ಸತ್ಯ. ಅದೇ ಕರ್ಣ ನಾವು ಕೇಳದೇ ಹೋದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೊಡುವ ವಸ್ತು ಬಳಕೆಗೆ ಬರಲೇ ಬೇಕೆಂಬ ಉತ್ಕಟ ಆಸೆಯಿಂದಾಗಿ ಹಿಂದೂ ಮುಂದೂ ಯೋಚಿಸದೇ ತನ್ನ ದೇವರ ಮನೆಯ ಬಾಗಿಲು ಮತ್ತು ಕಿಟಕಿಗಳನ್ನೇ ದಾನವಾಗಿ ನೀಡಿದ. ನಿಮ್ಮ ಅಣ್ಣ ಯುಧಿಷ್ಠರು ಕೊಟ್ಟದ್ದು ಅವನ ಧರ್ಮ ಅದರೆ ಅದೇ ಕರ್ಣ ಕೊಟ್ಟದ್ದು ಪ್ರೀತಿ ಮತ್ತು ಬಯಕೆಯಿಂದ ಇದೇ ಅವರಿಬ್ಬರ ನಡುವಿನ ವೆತ್ಯಾಸ. ಹಾಗಾಗಿಯೇ ದಾನದ ವಿಷಯದಲ್ಲಿ ಕರ್ಣನೇ ಜಗತ್ತಿನಲ್ಲಿ ಅತೀ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ನಾವು ಯಾವುದೇ ಕೆಲಸ ಮಾಡಿದರೂ ಅದು ಉದಾತ್ತವಾಗುತ್ತದೆ ಎಂದು ಭಾವಿಸಿ ಪ್ರೀತಿಯಿಂದ ಮಾಡಬೇಕು ಎಂದು ಶ್ರೀಕೃಷ್ಣ ಅರ್ಜುನನಗೆ ತಿಳಿ ಹೇಳುತ್ತಾನೆ.
ದಾನ/ಸಹಾಯ ಎನ್ನುವುದನ್ನು ಮತ್ತೊಬ್ಬರಿಂದ ಕೇಳಿಸಿಕೊಂಡು ಮಾಡುವುದಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೊಟ್ಟಾಗಲೇ ಅದಕ್ಕೊಂದು ಬೆಲೆ ಇರುತ್ತದೆ. ಅದೇ ರೀತಿಯಲ್ಲಿ ಮಾಡಿದ ಸಹಾಯ ಅಥವಾ ದಾನದಿಂದ ಪ್ರತಿಫಲಾಪೇಕ್ಷೆಯನ್ನು ಪಡಬಾರದು ಮತ್ತು ಒಮ್ಮೆ ಕೊಟ್ಟ ನಂತರ ಅದರ ಬಗ್ಗೆ ಪರಿತಪಿಸಲೂ ಬಾರದು. ಇದನ್ನೇ ಅಲ್ವೇ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ. ಅರ್ಥಾತ್, ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿಂದ ಮಾಡಿದಲ್ಲಿ ಅದಕ್ಕೆ ಖಂಡಿತವಾಗಿಯೂ ಫಲ ಸಿಕ್ಕೇ ಸಿಗುತ್ತದೆ ಎಂದ್ದಿದ್ದಾರೆ. ಅದೇ ರೀತಿ ತುಳಸೀ ದಾಸರು ಹೇಳಿರುವಂತೆ, ದಾನೇ ದಾನೆ ಪರ್ ಲಿಖಾ ರಹೆತಾ ಹೈ ಖಾನೇ ವಾಲೋಂಕ ನಾಮ್ ಅಂದರೆ ಪ್ರತಿಯೊಂದು ದಾನದ ಮೇಲೂ ಅದರ ಫಲಾನುಭವಿಯ ಹೆಸರು ಇದ್ದೇ ಇರುತ್ತದೆ. ಹಾಗಾಗಿ ನಾವು ದಾನ ಮಾಡಿದೆವು ಎನ್ನುವುದಕ್ಕಿಂತಲೂ ಅದು ಭಗವಂತಹ ಸಂಕಲ್ಪ ಎನ್ನುವುದು ಸತ್ಯ.
ಅದೇ ರೀತಿ ಅಪಾತ್ರರಿಗೆ ದಾನವನ್ನು ಮಾಡಬಾರದು ಎಂಬುದಾಗಿಯೂ ನಮ್ಮ ಹಿರಿಯರು ಎಚ್ಚರಿಸಿದ್ದಾರೆ. ಹಾಗಾಗಿ ಯಾರಿಗೇ ಆಗಲಿ, ಏನನ್ನೇ ಆಗಲೀ ಕೊಡುವಾಗ ಪ್ರತ್ಯಕ್ಶಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಒಮ್ಮೆ ಯಾಚಿಗಳ ಪೂರ್ವಪರ ವಿಚಾರಿಸಿ ನಾವು ಕೊಡುವ ದಾನ ಅಥವಾ ಮಾಡುವ ಸಹಾಯ ಅವರ ತತ್ ಕ್ಷಣ ಅಗತ್ಯತೆಗಳನ್ನು ಪೂರೈಸುವುದಕ್ಕಿಂತಲೂ ಅವರು ಸಮಸ್ಯೆಗಳಿಂದ ಶಾಶ್ವತವಾಗಿ ಹೊರಬರುವಂತಾದಲ್ಲಿ ಉತ್ತಮ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ವಾಟ್ಸಾಪ್ ನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ