ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಅಂಗಾಂಗ ಸಂಸ್ಥೆಗಳು ಮತ್ತು ಬೆಂಗಳೂರಿನ ಬಿ.ಎಮ್.ಟಿ.ಸಿ. ಸಂಸ್ಥೆಗಳು ಈ ಮೊದಲು ರಾಜ್ಯ ಸರ್ಕಾರದ ಅಡಿಯಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗಳಾಗಿದ್ದು, ಅದರ ಸೇವೆ ಮತ್ತು ಸೌಲಭ್ಯಗಳು ವಾಣಿಜ್ಯ ಲಾಭಕ್ಕಿಂತ ಜನರ ಅನುಕೂಲಕ್ಕಾಗಿ ಇದ್ದಂತಹ ಸಂಸ್ಥೆಗಳಾಗಿವೆ. ಈ ಹಿಂದೆ ಅಲ್ಲಿನ ನೌಕರರು ಸರ್ಕಾರೀ ನೌಕರಾಗಿದ್ದ ಕಾರಣ, ಬಹುತೇಕ ಸಿಬ್ಬಂಧಿಗಳ ಮನಸ್ಥಿತಿ ಸೇವಾ ಮನೋಭಾವಕ್ಕಿಂತಲೂ ಉದ್ದಟತನವಾಗಿದ್ದು, ಇವರಿಗಿಂತಲೂ ಖಾಸಗೀ ಸಾರಿಗೆ ವ್ಯವಸ್ಥೆಗಳ ಸಿಬ್ಬಂಧಿಗಳು ಪ್ರಯಾಣಿಕ ಸ್ನೇಹಿಯಾಗಿರುತ್ತಾರೆ ಎಂಬುದಾಗಿ ಪದೇ ಪದೇ ದೂರುಗಳು ಬರುತ್ತಿದ್ದ ಕಾರಣ, ಸರ್ಕಾರೀ ಸಾರಿಗೇ ವ್ಯವಸ್ಥೆಗಳನ್ನು ಸುಧಾರಿಸುವ ಮತ್ತು ಆಡಳಿತಾತ್ಮಕವಾಗಿ ಸುಧಾರಣೆ ತರುವ ಸಲುವಾಗಿ ಈ ಸಂಸ್ಥೆಯನ್ನು ಸರ್ಕಾರದ ಅಧೀನ ಸಂಸ್ಥೆಗಳೆಂದು ಪರಿವರ್ತಿಸಿದ್ದಕ್ಕೆ ಕಳೆದ ವರ್ಷ ತಿಂಗಳಾನುಗಟ್ಟಲೆ ಕೋಡಿ ಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹೋರಾಟ ನಡೆಸಿ ತಮಗೆ ಸರ್ಕಾರೀ ನೌಕರರ ಸೇವಾ ಸೌಲಭ್ಯಗಳನ್ನೇ ಕೊಡಬೇಕೆಂದು ಬಂದ್ ಮಾಡಿ ಜನರಿಗೆ ತೊಂದರೆ ನೀಡಿದ್ದದ್ದು ಇನ್ನೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ.
ಸಾರಿಗೆ ಸಿಬ್ಬಂಧಿಗಳು ಸರ್ಕಾರವನ್ನು ಒತ್ತಾಯಿಸುವುದರಲ್ಲಿ ತಪ್ಪೇನು ಇಲ್ಲ. ಆದರೆ ಆ ರೀತಿ ಒತ್ತಾಯಿಸುವುದಕ್ಕಿಂತಲೂ ಮುನ್ನಾ ತಮ್ಮ ಸೇವೆಗಳು ಜನರಿಗೆ ಹೇಗೆ ತಲುಪಿಸುತ್ತಿದ್ದೇವೆ ಎಂಬುದರ ಅರಿವಿರಬೇಕಲ್ಲವೇ? ಇತ್ತೀಚಿಗೆ ಸಾಮಾಜಿಕ ತಾಣದ ಪರಿಚಯಸ್ಥರೊಬ್ಬರು 20-11-2022 ರಂದು BMTC KA-57 F -5198 Route No: 210N ಬಸ್ಸಿನಲ್ಲಿ ಮೆಜೆಸ್ಟಿಕ್ ನಿಂದ ಪ್ರಯಾಣಿಸುತ್ತಿದ್ದಾಗ, ಬಸ್ಸು ವಿಪರೀತಗಾಗಿ ತುಂಬಿ ತುಳುಕಾಡುತ್ತಿದ್ದರೂ, ಆ ಬಸ್ಸಿನ ಕಂಡಕ್ಟರ್, ಹೆಂಗಸರು ಎಂದೂ ಸಹಾ ನೋಡದೇ, ಏಕವಚನದಲ್ಲೇ ದೊಡ್ಡ ಧ್ವನಿಯಲ್ಲಿ ಹಿಂದೆ ಹೋಗಮ್ಮಾ ಎಂದು 3-4 ಬಾರಿ ಅಂತ ಬೊಬ್ಬೆ ಹಾಕುತ್ತಿದ್ದಾಗ, ಆಕೆ ಸರ್ ಇಷ್ಟೋಂದು ರಷ್ಷಿನಲ್ಲಿ ಎಲ್ಲಿಗೆ ತಾನೇ ಹೊಗುವುದು ಎಂದು ಹೇಳಿದ್ದಲ್ಲದೇ, ದಯವಿಟ್ಟು ಮರ್ಯಾದೆ ಕೊಟ್ಟು, ಬಹುವಚನದಲ್ಲಿ ಮಾತನಾಡಿಸಿ ಎಂದು ವಿನಮ್ರವಾಗಿ ಕೋರಿದಾಗ, ಆತ ಮತ್ತಷ್ಟು ದೊಡ್ಡ ಧ್ವನಿಯಲ್ಲಿ ನಿನಗೆ ಇನ್ನು ಹೇಗೆ ಮರ್ಯಾದೆ ಕೊಡ ಬೇಕು? ಎಂದು ಎಲ್ಲರ ಮುಂದೆ ಅವಮಾನ ಮಾಡಿದ್ದಾಗಿ ಅಳಲನ್ನು ತೋಡಿಕೊಂಡಿದ್ದಾರೆ.
ಅದೇ ಬಸ್ಸಿನಲ್ಲಿದ್ದ ಇಬ್ಬರು ಮಹಿಳಾ ಪೋಲೀಸರೂ ಸಹಾ ಮೇಡಂ ಸುಮ್ಮನಿರಿ ಎಂದು ಆಕೆಯನ್ನು ಸಮಾಧಾನ ಪಡಿಸಿದರೇ ಹೊರತು ಅವರಿಬ್ಬರೂ ಆ ಕಂಡೆಕ್ಟರಿಗೆ ಮಹಿಳಾ ಪ್ರಯಾಣಿಕರೊಂದಿಗೆ ಸರಿಯಾಗಿ ಮಾತನಾಡಲು ತಾಕೀತು ಮಾಡದೇ ಹೋದದ್ದು ಮತ್ತಷ್ಟು ಅಚ್ಚರಿಯನ್ನು ಮೂಡಿಸಿದೆ. ಈ ಕಂಡಕ್ಟರ್ ವಿರುದ್ಧ ದೂರು ನೀಡುವ ಸಲುವಾಗಿ ಪೋಟೋ ತೆಗೆದುಕೊಳ್ಳಲು ಹೋದಾಗಾ, ಅದೇ ಬಸ್ಸಿನ ಚಾಲಕ, ನೀವು ಯಾರಿಗೆ ಬೇಕಾದರೂ ದೂರು ಕೊಡಿ ನಮಗೇನೂ ಆಗುವುದಿಲ್ಲ ಎಂಬ ಉದ್ಧಟತನವನ್ನು ತೋರಿಸಿದ್ದದ್ದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ. ಬಸ್ಸಿನಲ್ಲಿದ್ದ ಇತರೇ ಸಹ ಪ್ರಯಾಣಿಕರು ಸಹಾ ಸಹಾಯಕ್ಕೆ ಬಾರದೇ ಅವರಲ್ಲರೂ ಅಕೆಯದ್ದೇ ತಪ್ಪು ಎಂದು ಆ ಸಾರಿಗೆ ಸಿಬ್ಬಂಧಿಯವರೊಂದಿಗೆ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದ್ದದ್ದು ಮತ್ತಷ್ಟು ಆಶ್ವರ್ಯವನ್ನು ಉಂಟು ಮಾಡಿತು.
ಸಾರಿಗೆ ಸಿಬ್ಬಂಧಿಗಳು ತಮ್ಮ ಸಾರಿಗೆ ವ್ಯವಸ್ಥೆ ಇರುವುದೇ ಜನರಿಗಾಗಿ ಎಂಬುದರ ಪರಿವೇ ಇಲ್ಲದೇ ಹೀಗೇಕೆ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ? ಅವರ ವಿರುದ್ಧ ಸ್ವಲ್ಪ ಧನಿ ಎತ್ತಿದರೂ ಸಾಕು, ಆ ವಾಹನಗಳು ಅವರ ಸ್ವಂತದ್ದು ಎನ್ನುವಂತೆ ಅಷ್ಟು ಮಾತನಾಡುವವರು ಈ ಬಸ್ಸಿನಲ್ಲೇಕೆ ಬರಬೇಕಿತ್ತೋ? ಆಟೋ, ಟ್ಯಾಕ್ಸಿ ಇಲ್ಲವೇ ಕಾರಿನಲ್ಲಿ ಹೋಗಬೇಕಪ್ಪಾ ಎಂಬ ಪುಗಸಟ್ಟೆ ಪೊಗರಿನ ಮಾತಿಗೇನೂ ಕಡಿಮೆ ಇಲ್ಲ. ಬಹುತೇಕ ಬಸ್ಸುಗಳು ನಿಗಧಿತ ಸಮಯಕ್ಕೆ ಬರುವುದೇ ಇಲ್ಲಾ. ಹಾಗೆ ಬಂದರೂ ಅವುಗಳು ನಿಗಧಿತ ಸ್ಥಳದಲ್ಲಿ ನಿಲ್ಲದೇ ಬಸ್ ಸ್ಟಾಪಿನ ಹಿಂದೂ ಮುಂದು ನಿಂತು ಮಕ್ಕಳು ಮುದುಕರು, ಮುಂತಾದ ವಯಸ್ಸಾದ ಪ್ರಯಾಣಿಕರಾದಿಯಾಗಿ ಓಡೋಡಿ ಬಸ್ ಹತ್ತುವಷ್ಟರಲ್ಲಿ ಭರ್ ಎಂದು ಬಸ್ ಮುಂದು ಹೋಗಿರುವ ಉದಾಹಣೆಗೆ ಲೆಖ್ಖವಿಲ್ಲ.
ಅದೇ ರೀತಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಚಿಲ್ಲರೆ ಸಮಸ್ಯೆಯೂ ಇನ್ನೂ ಬಗೆ ಹರಿಯದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಕಂಡೆಕ್ಟರ್ ಬಳಿ ಚಿಲ್ಲರೆ ಇದ್ದರೂ ಸಹಾ ಅದೇಕೋ ಏನೋ? Ticket ಹಿಂಬಾಗದಲ್ಲಿ ಕೊಡಬೇಕಾಗಿರುವ ಚಿಲ್ಲರೆಯನ್ನು ಬರೆದುಕೊಡುವುದು ಮತ್ತು ಅವರು ಇಳಿಯುವಾಗ ಚಿಲ್ಲರೆ ತೆಗೆದುಕೊಳ್ಳಲು ಹೋದಾಗಾ ಅವರ ಕೈಗೆ ಸಿಕ್ಕಿಕೊಳ್ಳದೇ ಬಸ್ಸಿನಲ್ಲಿ ತೂರಿಕೊಳ್ಳುವ ಚಿಲ್ಲರೆ ಬುದ್ದಿ ನಿಜಕ್ಕೂ ಅಸಹನೀಯವಾಗಿದೆ. ತಿಂಗಳಿಗೊಮ್ಮೆ ಮುಂಗಡವಾಗಿ ಹಣ ಕೊಟ್ಟು ಪಾಸ್ ತೆಗೆದುಕೊಂಡ ಪ್ರಯಾಣಿಕರನ್ನು ಕಂಡರೆ ಅದೇಕೋ ನಿರ್ವಾಹಕರಿಗೆ ಅಷ್ಟಕಷ್ಟೇ. ಅನಗತ್ಯವಾಗಿ ಆ ಪಾಸ್ ಇರುವ ಪ್ರಯಾಣಿಕರಿಗೆ ಮುಜುಗರ ಮಾಡುವುದು ಅವರ ಅ ಜನ್ಮ ಹಕ್ಕು ಎಂದು ಭಾವಿಸಿರುವುದು ನಿಜಕ್ಕೂ ದಃಖಕರವಾಗಿದೆ. ಅದೆಷ್ಟೋ ಪ್ರಯಾಣಿಕರು ಸರಿಯಾಗಿ ಕೊಟ್ಟ ಚಿಲ್ಲರೆಗಳು ಎಲ್ಲಿಗೆ ಹೋಗುತ್ತದೆ? ನಿಜವಾಗಿಯೂ ಚಿಲ್ಲರೆ ಸಮಸ್ಯೆ ಆಗಿದ್ದರೆ, ನಿರ್ವಾಹಕರಿಗೆ ತಮ್ಮ Dutyಯನ್ನು ಆರಂಭಿಸುವ ಮೊದಲು ಸಾರಿಗೆ ಸಂಸ್ಥೆಯೇ ಸಾಕಷ್ಟು ಚಿಲ್ಲರೆ ಕೊಡುವಂತಹ ವ್ಯವಸ್ಥೆ ಮಾಡುವುದು ಉತ್ತಮವಲ್ಲವೇ? ಮೊನ್ನೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೋಟೆಲ್ಲಿಗೆ ಹೋಗಿದ್ದಾಗ, ಬಹುತೇಕ ಬಸ್ ಕಂಡಕ್ಟರ್ಗಳು 100 ಕ್ಕೆ 5 ರೂಪಾಯಿಗಳಂತೆ ಕಮಿಷನ್ ರೂಪದಲ್ಲಿ ಆ ಹೋಟೆಲ್ಲಿನವರಿಗೆ ಚಿಲ್ಲರೆ ಕೊಡುತ್ತಿದ್ದದ್ದನ್ನು ನೋಡಿದಾಗ ನಿಜಕ್ಕೂ ಇದೊಂದು ದುಡ್ಡು ಮಾಡುವ ದಂಧೆಯಂತೆ ಭಾಸವಾಗಿದ್ದು ಸುಳ್ಳಲ್ಲ.
ಅದೊಮ್ಮೆ ಪರಿಚಯವಿದ್ದ ನಿರ್ವಾಹಕರೊಬ್ಬರ ಬಳಿ ತಿಂಗಳು ತಿಂಗಳು ಸರಿಯಾಗಿ ನಿಮಗೆ ಸಂಬಳ ಬರುವಾಗ ಅದೇಕೆ ಹೀಗೆ ಚಿಲ್ಲರೆ ಕೊಡಲು ಸತಾಯಿತ್ತೀರಿ? ಎಂದು ಕೇಳಿದಾಗ ಅವರು ಹೇಳಿದ ಸಂಗತಿ ಮತ್ತಷ್ಟೂ ಗಾಭರಿಯನ್ನು ಹುಟ್ಟಿಸುವಂತಿತ್ತು. ಬೆಳ್ಳಂಬೆಳಿಗ್ಗೆ ಡಿಪೋದಿಂದ ಬಸ್ ಹೊರಗೆ ತರುವಾಗ ಡಿಪೋ ಮ್ಯಾನೇಜರಿಗೆ ಇಷ್ಟು ಎಂದು ಹಣ ಕೊಡಬೇಕು. ಅದೇ ರೀತಿ ನಿತ್ಯವೂ ಬಸ್ ಶುದ್ಧೀಕರಿಸುವ ಸಿಬ್ಬಂಧಿಗಳಿಗೆ ಟಿಪ್ಸ್ ಕೊಡಬೇಕು. ನಂತರ ಪ್ರತೀ ಬಾರಿ ಟ್ರಿಪ್ ಶೀಟ್ ಎಂಟರಿ ಮಾಡಿಸಿಕೊಳ್ಳುವಾಗ ಅಲ್ಲಿನ ಇನ್ಸೆಪೆಕ್ಟರ್ ಅವರಿಗೆ 5-10 ರೂಪಾಯಿ ಕೊಡಬೇಕು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಅವರೊಂದಿಗೆ ಬಸ್ ಚಾಲನೆ ಮಾಡುವ ಚಾಲಕನ ಇಡೀ ದಿನದ ಊಟ, ತಿಂಡಿ, ಕಾಫೀ, ಟೀ, ಬೀಡಿ ಸಿಗರೇಟುಗಳ ವೆಚ್ಚವನ್ನೂ ನಿರ್ವಾಹಕರೇ ಬರಿಸಬೇಕೆಂಬ ಅಲಿಖಿತ ನಿಯಮವಿದೆಯಂತೆ. ಹೀಗೆ ಮಾಡಬೇಕಾದರೇ ಪ್ರಯಾಣಿಕರಿಗೆ ಮೋಸ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದಾಗ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ ಎಂಬ ಗಾದೆ ಮಾತು ನೆನಪಾದದ್ದು ಸುಳ್ಳಲ್ಲ. ಇದೇ ಕಾರಣಕ್ಕಾಗಿಯೇ ದೂರ ಪ್ರಯಾಣದ ಸಮಯದಲ್ಲಿ ಯಾವ ಹೋಟೆಲ್ ಚಾಲಕರು ಮತ್ತು ನಿರ್ವಾಹಕರಿಗೆ ಉಚಿತ ಊಟ, ತಿಂಡಿ ಮತ್ತು ಕಮಿಷನ್ ಕೊಡುತ್ತಾರೆಯೋ ಅಂತಹದ್ದೇ ಹೋಟೆಲ್ ಮುಂದೆ ಬಸ್ ನಿಲ್ಲಿಸುತ್ತಾರೆ.
ಈ ಎಲ್ಲಾ ಕಾರಣಗಳಿಂದಾಗಿ ಪ್ರಯಾಣಿಕರೊಂದಿಗೆ ಸಾರಿಗೆ ಸಿಬ್ಬಂಧಿಗಳು ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಅತ್ಯಗತ್ಯವಾಗಿ ಕಲಿಸಿಕೊಡಲೇ ಬೇಕಾಗಿದೆ. ನಿಜ ಅವರು ಬೆಳ್ಳಂಬೆಳಿಗ್ಗೆ ಇಂದ ತಡ ರಾತ್ರಿಯ ವರೆಗೂ ನಿರಂತರವಾಗಿ ಕೆಲಸ ಮಾಡುವಾಗ, ಪ್ರತೀ ಟ್ರಿಪ್ಪಿನಲ್ಲಿಯೂ ನೂರಾರು ವಿಭಿನ್ನ ಮನಸ್ಥಿತಿಯ ಜನರೊಂದಿಗೆ ವ್ಯವಹರಿಸುವಾಗ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವುದು ಸಹಜವಾದರೂ, ಇಂದಿಗೂ ಅನೇಕ ನಿರ್ವಾಹಕರು ಮತ್ತು ಚಾಲಕರು ಸುಸಂಸ್ಕೃತರಾಗಿ ತಮ್ಮ ಉತ್ತಮ ನಡೆವಳಿಕೆಯಿಂದಾಗಿ ಪ್ರಯಾಣಿಕರ ಮನಗೆದ್ದಿರುವ ಅನೇಕರು ಇದ್ದಾರೆ.
ಸಾರಿಗೆ ಸಂಸ್ಥೆಯ ನಿರ್ವಹಣೆ, ಸಮಯ ಪಾಲನೆ ಮತ್ತು ಪ್ರಯಾಣಿಕರೊಂದಿಗೆ ಸಂಬಂಧ ಹೇಗಿರಬೇಕೆಂದು ನೋಡಬೇಕೆಂದರೆ ಖಂಡಿತವಾಗಿಯೂ ಅವಿಭಜಿತ ದಕ್ಷಿಣ ಕನ್ನಡಕ್ಕೆ ಹೋಗಲೇ ಬೇಕು. ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಈ ಎಲ್ಲಾ ಕಡೆಯಲ್ಲಿ ಇಂದಿಗೂ ಖಾಸಗೀ ಸಾರಿಗೆ ಸಂಸ್ಥೆಗಳದ್ದೇ ಕಾರುಬಾರು. ಇಂತಹ ಬಸ್ 8:30ಕ್ಕೆ ಇಂತಹ ನಿಲ್ದಾಣಕ್ಕೆ ಬರುತ್ತದೆ ಎಂದರೆ ಒಂದೆರಡು ನಿಮಿಷಗಳ ಆಚೀಚೆಯಲ್ಲಿ ನಿಶ್ಚಿತವಾಗಿ ಆ ಬಸ್ ಅ ನಿಲ್ದಾಣಕ್ಕೆ ಬಂದೇ ಬರುತ್ತದೆ. ಅಕಸ್ಕಾತ್ ಐದಾರು ನಿಮಿಷಗಳು ತಡವಾದಲ್ಲಿ ಆಂತಹ ಬಸ್ಸುಗಳನ್ನು ಸ್ಥಳೀಯರು ನಿಲ್ದಾಣದೊಳಗೇ ಬಿಟ್ಟುಕೊಳ್ಳುವುದಿಲ್ಲ ಎಂಬ ಅಲಿಖಿತ ನಿಯಮವೂ ಇದೆ. ಅದಲ್ಲದೇ ನಿರ್ವಾಹಕರು ಸಹ ಅಕ್ಕಾ, ಅಣ್ಣ, ಮಾಣಿ, ಮಾರಾರ್ರೇ.. ಎಂದು ಪ್ರಯಾಣಿಕರೊಂದಿಗೆ ಉತ್ತಮವಾಗಿ ಸಂಬೋಧಿಸುವುದು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.
KSRTC, BMTC, BSNL, Nationalised Banks ಇವುಗಳನ್ನು ಕೇವಲ ಸರ್ಕಾರೇತರ ಸಂಸ್ಥೆಗಳನ್ನಾಗಿ ಮಾಡಿದರೆ ಇವರ ಸೇವೆಗಳು ಸುಧಾರಿಸುವುದಿಲ್ಲ. ಸರ್ಕಾರೀ ಅಧೀನದ ಸಂಸ್ಥೆಗಳು ಎಂದ ಮೇಲೆ ಮೀಸಲಾತಿ ಆಧಾರಿತವಾಗಿ ಆಯ್ಕೆಯಾದ ಸಿಬ್ಬಂಧಿಗಳೇ ಹೆಚ್ಚಾಗಿ ಆಯ್ಕೆಯಾಗಿರುವಾಗ ಅಂತಹವರಿಂದ ಜೋರು ಮಾಡಿ ಕೆಲಸ ತೆಗೆದುಕೊಳ್ಳುದೂ ಸಹಾ ಮೇಲಧಿಕಾರಿಗಳಿಗೆ ಬಹಳ ಕಷ್ಟಕರ. ಚೂರು ಜೋರು ಮಾಡಿದರೂ, ಮೇಲಧಿಕಾರಿಗಳ ಮೇಲೆ ಜಾತಿ ನಿಂದನೆಯ (atrocity case) ಕೇಸ್ ಹಾಕಿ, ದಲಿತ ಸಂಘರ್ಷಸಮಿತಿಗಳಿಂದ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದಲ್ಲಿ ಆ ಮೇಲಧಿಕಾರಿಯ ಪಾಡು ನಾಯಿ ಪಾಡಾಗುವ ಭಯದಿಂದ ದೂರು ಕೊಟ್ಟರೂ, ದೂರು ನೀಡಿದವರಿಗೇ ಸಮಜಾಯಿಷಿ ಕೊಟ್ಟು ಕಳುಹಿಸುವುದು ನಿಜಕ್ಕೂ ವಿಪರ್ಯಾಸ. ಈ ರೀತಿಯಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು? ಈ ಪರಿಸ್ಥಿತಿಯನ್ನು ಸುಧಾರಿಸಬೇಕೆಂದರೆ ಒಂದೂ ಎಲ್ಲಾ ಸಿಬ್ಬಂಧಿಗಳಿಗೂ ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ತರಬೇತಿಯನ್ನು ನಿರಂತರವಾಗಿ ನೀಡುವುದಲ್ಲದೇ, ಆಗ್ಗಾಗ್ಗೆ ಟಿಕೆಟ್ ಚೆಕ್ ಮಾಡಲು ಚಕ್ಕರ್ ಬರುವಂತೆ ಪ್ರಯಾಣಿಕರೊಂದಿಗೆ ವ್ಯವಹಾರವನ್ನು ಪರೀಕ್ಷಿಸಲು ಮಾರು ವೇಷದಲ್ಲಿ ಬರಬೇಕು. ಚಿಲ್ಲರೆ ಸಮಸ್ಯೆಯನ್ನು ನಿವಾರಿಸಲು ಸೂಕ್ತವಾದ ಚಿಲ್ಲರೆಯನ್ನು ಸಾರಿಗೇ ಸಂಸ್ಥೆಯೇ ಟ್ರಿಪ್ ಮುನ್ನಾ ಒದಗಿಸಬೇಕು ಇಲ್ಲವೇ ಕೂಡಲೇ ಡಿಜಿಟಲ್ ಪೇಮೆಂಟ್ ಜಾರಿಗೆ ತರಬೇಕು. ಇವುಗಳನ್ನು ಮಾಡಲು ಸಾಧ್ಯವಿಲ್ಲವಾದರೆ, ಸುಮ್ಮನೇ, ಈ ಎಲ್ಲಾ ಸಂಸ್ಥೆಗಳಲ್ಲಿನ ಸರ್ಕಾರೀ ಪಾಲನ್ನು ಹೊರತೆಗೆದು, ನೇರವಾಗಿ ಖಾಸಗೀಕರಣ ಮಾಡಿದಾಗಲೇ ಪರಿಸ್ಥಿತಿ ಸುಧಾರಣೆ ಕಾಣಬಹುದೇನೋ?
ಏನಂತೀರಿ?
ನಿಮ್ಮವನೇ ಉಮಾಸುತ
Nice and true
Change problem only in Karnataka. In Maharashtra conductors change to passanger.
LikeLiked by 1 person
ಹೌದು ಇದು ನೂರಕ್ಕೆ ನೂರು ಸತ್ಯ. ನಾನೂ ಕಳೆದ 35 ವರ್ಷದಿಂದ ಬಸ್ನಲ್ಲಿ ಓಡಾಡುತ್ತಿದ್ದೇನೆ. ಕಂಡಕ್ಟರ್ರವರು ಡ್ರೈವರ್ ಹಾಗೂ T C ಗಳಿಗೆ ಹಣ ಕೊಡುವುದನ್ನು ಕೇಳಿದ್ದೇನೆ. ಕಂಡಿದ್ದೇನೆ. ನಾನು ಪ್ರತಿ ತಿಂಗಳೂ ಪಾಸ್ ಪಡೆಯುತ್ತಿದ್ದ ಕಾರಣ ಚಿಲ್ಲರೆಯ ಸಮಸ್ಯೆಯಿಂದ ಪಾರಾಗಿದ್ದೆ. ಹಾಗೆಯೇ ಬನಶಂಕರಿಯಿಂದ ಜಯನಗರಕ್ಕೆ ಹೋಗಲು ಕೇವಲ 5 ರೂ ಟಿಕೆಟ್ಟಿನ ದರ ಅದರಲ್ಲೂ 3 ರೂಕೊಟ್ಟು, ಟಿಕೇಟ್ ಪಡೆಯದೆ ಸಂಚರಿಸುವ ಹಲವಾರು ಮಂದಿಗೆ ಏನಂತೀರಿ?
LikeLiked by 1 person