ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿರುವ ಕಾರಣದಿಂದಲೇ, ಮುಂದೆ ಗುರಿ ಹಿಂದೆ ಗುರು ಇದ್ದಲ್ಲಿ ಎಂತಹ ಕೆಲಸವನ್ನೂ ಸಹಾ ಮಾಡಬಹುದು ಎನ್ನುವುದೇ ಎಲ್ಲರ ನಂಬಿಕೆಯಾಗಿದೆ. ನಮ್ಮ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರನ್ನು ಸೂಚಿಸುತ್ತದೆ. ನಾನು ದೇವನು ಅಲ್ಲ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದೇ ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಕಡೂರು ತಾಲೂಕಿನ ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ಬಗ್ಗೆ ತಿಳಿದುಕೊಳ್ಳೋಣ
ತರೀಕೆರೆ ಬಳಿಯ ಕುಡ್ಲೂರಿನ ಸಂಪ್ರದಾಯ ಕುಟುಂಬವೊಂದು ವಿವಿಧ ಕಾರಣಳಿಂದಾಗಿಯೋ ಇಲ್ಲವೇ, ಹೊಟ್ಟೆಪಾಡಿಗಾಗಿ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಕಡೂರು ಬೀರೂರು ಮುಂತಾದ ಕಡೆಗೆ ವಲಸೆ ಬಂದು ಅಂತಿಮವಾಗಿ ಸಖರಾಯಪಟ್ಟಣದಲ್ಲಿ ನೆಲೆನಿಲ್ಲುವುದಲ್ಲದೇ ಅಲ್ಲೇ ಕೃಷಿಯನ್ನು ಮಾಡುತ್ತಾ ತಮ್ಮ ಜೀವನವನ್ನು ನಿರ್ವಹಿಸುತ್ತಿರುತ್ತಾರೆ. ಅದೇ ಕುಟುಂಬದ ಶ್ರೀನಿವಾಸಯ್ಯ ಮತ್ತು ಶಾರದಮ್ಮ ದಂಪತಿಗಳಿಗೆ ಸತತವಾಗಿ 3 ಹೆಣ್ಣುಮಕ್ಕಳಾದಾಗ, ತಮ್ಮ ಮನೆದೇವರು ತಿರುಪತಿ ವೆಂಕಟರಮಣಸ್ವಾಮಿಯನ್ನು ಗಂಡು ಸಂತಾನ ಕೊಡಬೇಕೆಂದು ಕೋರಿದ ಫಲವೋ ಎಂಬಂತೆ 1940ನೇ ಇಸವಿ ವಿಕ್ರಮಸಂವತ್ಸರ ಮಾರ್ಗಶಿರ ಮಾಸದ ಷಷ್ಠಿಯಂದು ಗಂಡು ಮಗು ಹುಟ್ಟಿದಾಗ, ಅದೇ ವೆಂಕಟೇಶ್ವರನ ಕೃಪೆಯಿಂದ ಜನಿಸಿದರು ಎಂಬ ನಂಬಿಕೆಯಿಂದ ವೆಂಕಟಾಚಲ ಎಂದು ನಾಮಕರಣ ಮಾಡಿದರು. ಹುಟ್ಟಿದ ಮಗನ ಜಾತಕ-ಕುಂಡಲಿಯನ್ನು ನೋಡಿದ ಅವರ ತಂದೆ ಶ್ರೀನಿವಾಸಯ್ಯನವರಿಗೆ ತಮ್ಮ ಮಗ ಮುಂದೆ ಪ್ರಖ್ಯಾತನಾಗುವ ವಿಚಾರ ತಿಳಿದು ಸಂತೋಷವಾಯಿತು.
ಸಹಜವಾದ ಸಂಪ್ರದಾಯದಂತೆ ಮೂರನೇ ವರ್ಷಕ್ಕೆ ಬಾಲಕ ವೆಂಕಟಾಚಲನಿಗೆ ಚೌಲ ಕಾರ್ಯವನ್ನು ಮಾಡಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ಮಗನನ್ನು ತಮ್ಮ ತೊಡೆಯಮೇಲೆ ಕುಳ್ಳಿರಿಸಿಕೊಂಡು ರಾಮಾಯಣ, ಮಹಾಭಾರತಗಳಲ್ಲದೇ, ಪುರಾಣ ಪುರುಷರ ಕಥೆಗಳನ್ನು ಹೇಳುತ್ತಿದ್ದರು. ಉಳಿದೆಲ್ಲಾ ಕಥೆಗಳಿಗಿಂತಲೂ ಬಾಲಕ ವೆಂಕಟಾಚಲರಿಗೆ ಧ್ರುವಕುಮಾರನ ಕತೆ ಅತ್ಯಂತ ಪ್ರಭಾವ ಬೀರಿ ಮತ್ತೆ ಮತ್ತೇ ಅದೇ ಕಥೆಯನ್ನು ಹೇಳಲು ತಮ್ಮ ತಂದೆಯವರಿಗೆ ದಂಬಾಲು ಬೀಳುತ್ತಿದ್ದಂತೆ. ಒಮ್ಮೆ ಅದೇ ಕೇಳುತ್ತಿರುವಾಗಲೇ, ನಾನೂ ಸಹಾ ಧ್ರುವನಂತೆ ನಕ್ಷತ್ರವಾಗಬಹುದೆ? ಎಂದು ಕುತೂಹಲದಿಂದ ತಂದೆಯನ್ನು ಕೇಳಿದ ಬಾಲಕನಿಗೆ, ಅವರ ತಂದೆಯವರು ಖಂಡಿತವಾಗಿಯೂ ನೀನು ಸಹಾ ಧ್ರುವನಂತೆ ಭಕ್ತಿಯನ್ನು ಬೆಳೆಸಿಕೊಂಡು, ಯಾರ ಮನಸ್ಸನ್ನೂ ಯಾವದೇ ಕಾರಣದಿಂದಲೂ ನೋಯಿಸದೇ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿದಲ್ಲಿ ನೀನೂ ಸಹಾ ಧ್ರುವನಂತೆ ಪ್ರಖ್ಯಾತವಾಗಬಹುದು ಎಂದು ಹೇಳಿದ್ದರಂತೆ ಅಂದು ತಂದೆಯವರು ಹೇಳಿದ ಮಾತು ಮುಂದೆ ನಿಜವಾಗಿ ವೆಂಕಟಾಚಲರನ್ನು ಕಾಣಲು ಪ್ರತಿ ದಿನವೂ ಸಹಸ್ರಾರು ಜನರು ಅವರ ಮನೆಗೆ ಬರುವಷ್ಟು ಪ್ರಖ್ಯಾತರಾದದ್ದು ಈಗ ಇತಿಹಾಸ.
ವಂಕಟಾಚಲರಿಗೆ ಎಂಟು ವರ್ಷದಲ್ಲಿದ್ದಾಗಲೇ ಉಪನಯನ ಮಾಡಿ, ಪ್ರತಿದಿನವೂ ಸಂಧ್ಯಾವಂದನೆ, ಅಗ್ನಿಕಾರ್ಯ ಮತ್ತು ದೇವರ ಪೂಜೆಗಳನ್ನು ಶ್ರದ್ಧೆಯಿಂದ ಮಾಡುವುದನ್ನು ಅವರ ತಂದೆಯವರು ಕಲಿಸಿಕೊಡುವ ಮೂಲಕ ಚಿಕ್ಕವಯಸ್ಸಿನಿಂದಲೇ ಆಧ್ಯಾತ್ಮದ ವಿಷಯಗಳ ಬಗ್ಗ ಆಸಕ್ತಿಯನ್ನು ಮೂಡಿಸುವುದರಲ್ಲಿ ಸಫಲರಾಗಿದ್ದರು. ಕೇವಲ ಆಧ್ಯಾತ್ಮಾದ ವಿಷಯವಲ್ಲದೇ ಆಟ ಪಾಟಗಳಲ್ಲಿಯೂ ಮುಂದಿದ್ದ ಬಾಲಕ ವೆಂಕಟಾಚಲರಿಗೆ ಕ್ರಿಕೆಟ್ ಆಟದ ಮೇಲೆ ವಿಶೇಷವಾದ ಆಸಕ್ತಿ ಇತ್ತು ಎನ್ನುವುದು ಕುತೂಹಲಕಾರಿಯಾದ ಸಂಗತಿಯಾಗಿತ್ತು.
ತಮ್ಮ ಹುಟ್ಟೂರು ಸಖರಾಯಪಟ್ಟಣದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ವಿಜಯ ಕಾಲೇಜಿಗೆ ವೆಂಕಟಾಚಲರು ಸೇರಿಕೊಳ್ಳುತ್ತಾರೆ. ಊರಿನಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡಲು ಬಂದರೂ, ಅವರೆಂದೂ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಇಚ್ಚೆ ಪಡದೆ, ತನ್ನ ಸಹಪಾಠಿಗಳಂತೆ ವೇಷಭೂಷಣವನ್ನು ಧರಿಸದೇ ಸಾಂಪ್ರದಾಯಿಕವಗಿ ಶಿಖೆಯನ್ನು ಇಟ್ಟು ಕೊಂಡೇ ತರಗತಿಗಳಿಗೆ ಹೋಗುತ್ತಿದ್ದಾಗ, ಅವರ ಸಹಪಾಠಿಗಳು ಜುಟ್ಟೂ ಎಂದು ಆಡಿಕೊಂಡಾಗಲೂ ನಿರ್ಲಿಪ್ತತೆಯಿಂದ ಸುಮ್ಮನಾಗುತ್ತಿದ್ದರಂತೆ. ಹೀಗೆ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲೇ ಅವರ ತಂದೆಯವರು ಅನಾರೋಗ್ಯಕ್ಕೆ ತುತ್ತಾತ ವಿಚಾರ ತಿಳಿದು ತಮ್ಮ ವ್ಯಾಸಂಗವನ್ನು ಅರ್ಧಕ್ಕೇ ಮೊಟಕುಗೊಳಿಸಿ ಊರಿಗೆ ಹಿಂತಿರುಗಿ, ಕೃಷಿ ಚಟುವಟಿಕೆಗಳ ಜೊತೆ ತಂದೆಯವರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುವುದು ಅನಿವಾರ್ಯವಾಯಿತಾದರೂ, ಸಮಯ ಸಿಕ್ಕಾಗಲೆಲ್ಲಾ ಹತ್ತಿರದ ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದದ್ದಲ್ಲದೇ, ತಮ್ಮೂರು ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ಧರ್ಮ, ಜಾತಿ, ಮೇಲು ಕೀಳೂ ಎಂಬ ಬೇದ ಭಾವವಿಲ್ಲದೆ ಪಾಲ್ಗೊಳ್ಳುತ್ತಿದ್ದ ಕಾರಣ, ಅವರ ಕುಟುಂಬಸ್ಥರಿಂದ ಎಚ್ಚರಿಕೆಯ ಮಾತುಗಳನ್ನು ಕೇಳಬೇಕಾದ ಪ್ರಸಂಗ ಎದುರಾದರೂ. ಅದಾವುದಕ್ಕೂ ಲೆಕ್ಕಿಸದ ವೆಂಕಟಾಚಲರು ಎಲ್ಲಾರೊಳಗಾಗೋ ಮಂಕುತಿಮ್ಮ ಎನ್ನುವಂತೆ ಭಾಗವಹಿಸುತ್ತಿದ್ದಲ್ಲದೇ, ನಿತ್ಯವೂ ಮನೆ ದೇವರ ಪೂಜೆಯಲ್ಲದೆ, ಬಲ್ಲಾಳೇಶ್ವರ, ಈಶ್ವರ ಹಾಗೂ ಆಂಜನೇಯ ಗುಡಿಯ ಪೂಜೆಯನ್ನೂ ಮಾಡುತ್ತಿದ್ದದ್ದು ಗಮನಾರ್ಹವಾಗಿತ್ತು.
ಹೀಗೆ ತಮ್ಮ ವಂಶಪಾರಂಪರ್ಯ ಕೃಷಿ ಚಟುವಟಿಕೆಗಳ ಜೊತೆ ಜೊತೆಯಲ್ಳೇ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾ, ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಪ್ರಭಾವಿತರಾಗಿ ಶೃಂಗೇರಿ ಪೀಠದೊಡನೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಲ್ಲದೇ, ಪ್ರತೀ ತಿಂಗಳು ಶೃಂಗೇರಿಮಠಕ್ಕೆ ಹೋಗಿ ಗುರುವಂದನೆ ಮಾಡಿ ಬರುವುದನ್ನು ಕಡ್ಡಾಯವಾಗಿ ರೂಢಿಯಲ್ಲಿಟ್ಟುಕೊಂಡಿದ್ದರು. ಮನೆಯವರ ಒತ್ತಾಯಕ್ಕೆ ಮಣಿದು ತಮ್ಮೂರಿನವರೇ ಆದ ರಂಗನಾಯಕಿ ಎಂಬವರನ್ನು ವರಿಸಿದ ನಂತರ ಆಕೆಯ ಹೆಸರನ್ನು ಪದ್ಮಾವತಿ ಎಂದು ಮರು ನಾಮಕರಣ ಮಾಡಿದ್ದಲ್ಲದೇ ಅವರಿಬ್ಬರ ಸುಖಃ ದಾಂಪತ್ಯದ ಫಲವಾಗಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನ ಜನನವಾಗಿ ಸಂಸಾರ ಸುಖದಿಂದ ಸಾಗುತ್ತಿರುವಾಗಲೇ, 1969ರಲ್ಲಿ ಅವರ ತಂದೆಯವರು ನಿಧನರಾದಾಗ, ಅವರ ತಮ್ಮ ವೆಂಕಟಾಚಲರೊಂದಿಗೆ ವ್ಯವಹಾರದ ಜವಾಬ್ಧಾರಿಯನ್ನು ತೆಗೆದುಕೊಂಡು ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ ಅಚಾನಕ್ಕಾಗಿ ತಂದೆ ಸತ್ತ ಕೆಲವೇ ದಿನಗಳಲ್ಲೇ ಪ್ರೀತಿಯ ಸೋದರನೂ ಇಹಲೋಕ ತ್ಯಜಿಸಿದ್ದು ವೆಂಕಟಾಚಲರ ಬದುಕಿನಲ್ಲಿ ತಿರುವನ್ನು ತಂದಿತು ಎಂದರು ತಪ್ಪಾಗದು.
ಜೀವನ ಎಂದರೆ ನಶ್ವರ, ಹಾಗಾಗಿ ಇರುವಷ್ಟು ಸಮಯದಲ್ಲೇ ಎಷ್ಟು ಸಾಧ್ಯವೋ ಅಷ್ಟು ಪರೋಪಕಾರವನ್ನು ಮಾಡಬೇಕು ಎಂದನಿಸಿದ್ದಲ್ಲದೇ, ಅವರ ಮನಸ್ಸು ವಿರಕ್ತಿಯೆಡೆಗೆ ಸೆಳೆಯತೊಡಗಿತು. ಅಂದಿನಿಂದ ನೀಳವಾದ ಗಡ್ಡ ಕತ್ತರಿದ ಕೂದಲು ಮತ್ತು ಉಡಲು ಒಂದು ಪಂಚೆ ಅಥವಾ ಟವೆಲ್ ಅಷ್ಟೇ ಅವರ ವೇಷಭೂಷಣವಾಯಿತು. ಇಷ್ಟರ ಮಧ್ಯದಲ್ಲೇ ಅವರು ಯಾರಿಗೆ ಏನೇ ಹೇಳಿದರೂ ಆವೆಲ್ಲವೂ ಅಕ್ಷರಶಃ ಸತ್ಯವಾಗುತ್ತಿದ್ದ ಕಾರಣ, ಅವರನ್ನು ಜನರು ಗುರುನಾಥ ಎಂದು ಕರೆಯಲಾರಂಭಿಸಿದ್ದಲ್ಲದೇ, ಅವರ ಬಳಿ ದುಃಖವನ್ನು ಹೇಳಿಕೊಂಡು ಪರಿಹಾರವನ್ನು ಬಯಸಿ ಬಂದವರ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಕೇಳಿ ಅವರಿಗೆ ಸಮಾಧಾನಕರ ರೀತಿಯಲ್ಲಿ ತಾಯಿಯಂತೆ ಪರಿಹಾರವನ್ನು ಸೂಚಿಸುತ್ತಿದ್ದದ್ದಲ್ಲದೆ, ಯಾವುದೇ ಕಾರಣಕ್ಕೂ ಆಡಂಬರ ಮತ್ತು ತೋರಿಕೆಯ ಪ್ರೀತಿಯನ್ನು ಸಹಿಸುತ್ತಿರಲಿಲ್ಲ. ಬದಲಾಗಿ ಪರಿಶುದ್ಧವಾದ ಭಕ್ತಿಯೊಂದೇ ದೇವರನ್ನು ಮುಟ್ಟುವ ದಾರಿ ಎಂದೇ ಎಲ್ಲರಿಗೂ ತಿಳಿ ಹೇಳುತ್ತಿದ್ದರು.
ಕಾಲ ಕ್ರಮೇಣ ಅವರನ್ನು ಕಾಣಲು ಬರುವವರ ಸಂಖ್ಯೆ ಹೆಚ್ಚಾಗಿ ದಿನ ನಿತ್ಯವೂ ಅವರ ಮನೆ ಒಂದು ರೀತಿಯ ಜಾತ್ರೆಯಂತೆ ಆಗುತ್ತಿತ್ತು. ಬಂದವರೆಲ್ಲರಿಗೂ ಯಥೇಚ್ಚವಾದ ಊಟೋಪಚಾರಗಳನ್ನು ಅವರ ಭಕ್ತಾದಿಗಳೇ ನೋಡಿಕೊಂಡು ಹೋಗುತ್ತಿದ್ದರು. ವೆಂಕಟಾಚಲ ಗುರುಗಳು ಸ್ವಯಂಘೋಷಿತ ಅವಧೂತರಲ್ಲ. ಅವರ ಸಾಧನೆಯನ್ನು, ಆಧ್ಯಾತ್ಮಿಕ ಔನ್ನತ್ಯವನ್ನು ಕಂಡವರು ಅವರನ್ನು ಅವಧೂತ ಎಂದು ಸಂಬೋಧಿಸ ತೊಡಗಿದಾಗ, ಗುರುನಾಥರು ನಾನು ದೇವನು ಅಲ್ಲ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಹಾಗಾಗಿ ನನ್ನನ್ನು ಅವಧೂತ ಎಂದು ಕರೆಯಬೇಡಿ ಎನ್ನುತ್ತಿದ್ದರು.
ಸನ್ಯಾಸಕ್ಕಿಂತ ಗೃಹಸ್ಥಾಶ್ರಮವೇ ಶ್ರೇಷ್ಠ, ಪರಮಾರ್ಥದಲ್ಲಿ ಏನೂ ಇಲ, ಎಲ್ಲವೂ ಲೌಕಿಕದಲ್ಲಿದೆ. ಕುಟುಂಬ ಅಥವಾ ಸಂಸಾರವೆಂದರೆ ಕೇವಲ ಗಂಡ- ಹೆಂಡತಿ ಮಕ್ಕಳು ಮಾತ್ರವಲ್ಲಾ. ಸಂಸಾರ ಎಂದರೆ ಇಡೀ ಪ್ರಪಂಚ. ಹಾಗಾಗಿ ಹೇಗೆ ಸಮುದ್ರವು ತನ್ನಬಳಿ ಏನನ್ನೂ ಇಟ್ಟುಕೊಳ್ಳದೇ, ಎಲ್ಲವನ್ನೂ ಹೊರಗೆ ಹಾಕುತ್ತದೆಯೋ ಹಾಗೆಯೇ ಮನ್ನಸನ್ನು ಇಟ್ಟುಕೊಳ್ಳಬೇಕು ಎಂದು ಪದೇ ಪದೇ ಹೇಳುತ್ತಿದ್ದದ್ದಲ್ಲದೇ, ಕೊಟ್ಟವರನ್ನು ಮರೀಬೇಡ, ನಂದೇ ಹೆಚ್ಚು ಅಂತ ಮೆರೀಬೇಡ, ಯಾರ ಮನಸ್ಸನ್ನೂ ಮುರೀಬೇಡ ಎಂಬ ಮಾತುಗಳೂ ಸಹಾ ಅವರ ಎಲ್ಲರ ಉಪದೇಶಗಳಲ್ಲೂ ಅಡಕವಾಗಿರುತ್ತಿತ್ತು.
ಅದೊಮ್ಮೆ ದೂರದ ಊರಿನಿಂದ ಸುಂದರವಾದ ಮನೆಯನ್ನು ಕಟ್ಟಿ ಆದರ ಗೃಹಪ್ರೇವೇಶದ ಪತ್ರಿಕೆಯನ್ನು ಮೊದಲು ಗುರುನಾಥರಿಗೆ ಕೊಟ್ಟು ಅವರಿಂದ ಆಶೀರ್ವಚನ ಪಡೆಯಲು ಬಂದಿದ್ದ ದಂಪತಿಗಳಿಗೆ, ಮನೆಯ ದೇವರನ್ನೇ ಆಚೆಗಟ್ಟಿ ಇಷ್ಟು ಚಂದದ ಮನೆಯನ್ನು ಕಟ್ಟಿ ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಹಾಕಿಸಿದರೆ ಏನು ಫಲವಿಲ್ಲ. ಎಂದಾಗ ಆ ದಂಪತಿಗಳಿಗೆ ಅರ್ಥವಾಗದೇ ತಬ್ಬಿಬ್ಬಾದಾಗ, ನಿಮ್ಮ ತಾಯಿಯವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದೀರಿ. ಆಕೆಯ ಮನೆಯ ದೇವತೆ. ಆಕೆಯನ್ನು ಮನೆಗೆ ಕರೆತಂದು ಪಾದ ಪೂಜೆ ಮಾಡಿ ಚೆನ್ನಾಗಿ ನೋಡಿಕೊಂಡಾಗಲೇ ನಿಮ್ಮ ಮನೆಯಲ್ಲಿ ಸುಃಖ ಸಂಪತ್ತುಗಳು ನೆಲೆಸುವವು ಎಂಬ ಕಿವಿ ಮಾತನ್ನು ಹೇಳಿ ಕಳುಹಿಸಿದರು.
ಅದೇ ರೀತಿ ಮತ್ತೊಬ್ಬ ಶಿಷ್ಯನಿಗೆ ಅದಾವುದೋ ವಿಚಾರವಾಗಿ ಕರೆ ಮಾಡಿ ಎಲ್ಲಿದ್ದೀಯಪ್ಪಾ? ಎಂದು ಕೇಳಿದಾಗ, ಆತ ಗುರುಗಳೇ ಇಂತಹ ಪ್ರದೇಶದಲ್ಲಿ ಇದ್ದೀನಿ ಎಂದಾಗ, ಅರೇ! ಗುರುಗಳ ಬಗ್ಗೆ ಈ ರೀತಿಯಾಗಿ ಸುಳ್ಳು ಮಾತುಗಳನ್ನು ಆಡುವುದು ಮಹಾ ಅಪರಾಧ ಎಂದು ಹೇಳುತ್ತಲೇ, ನೀನೀಗ ಇಂತಹ ಕಂಡೆಯಿಂದ ಇಂತಹ ಕಡೆಗೆ ಹೋಗುತ್ತಿದ್ದೀಯಾ. ಈ ಕ್ಷಣದಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಂಪು ಬಣ್ಣ ಬಂದ ಕಾರಣದಿಂದಾಗಿ ನಿಂತಿದ್ದೀಯಾ. ಇನ್ನೂ 15 ಸೆಕೆಂಡುಗಳಲ್ಲಿ ಅದು ಹಸಿರು ಬಣ್ಣಕ್ಕೆ ತಿರುಗಿದಾಗ ಹುಶಾರಾಗಿ ಹೋಗಿ ಬಾ. ಪುರುಸೊತ್ತಾದಾಗ ನನ್ನನ್ನು ಬಂದು ಕಾಣು ಎಂದು ಸಖರಾಯ ಪಟ್ಟಣದ ತಮ್ಮ ಮನೆಯಲ್ಲೇ ಕುಳಿತುಕೊಂಡು ಗುರುನಾಥರು ಅತನ ಪಕ್ಕದಲ್ಲೇ ಕುಳಿತಂತೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ಆ ಶಿಷ್ಯ, ಮಾರನೇಯ ದಿನವೇ ಎದ್ದೆನೋ ಬಿದ್ದನೋ ಎನ್ನುವಂತೆ ಗುರುಗಳ ಬಳಿ ಬಂದು ತಪ್ಪು ಒಪ್ಪಿಕೊಂಡಿದ್ದರಂತೆ. ಗುರುನಾಥರನ್ನು ನಂಬಿದವರಿಗೆ ಈ ರೀತಿ ನೂರಾರು ಪ್ರಸಂಗಗಳ ಅನುಭವವಾಗಿದೆ.
ಜನ್ಮತಃ ಯಾರೂ ಸಹಾ ಬ್ರಾಹ್ಮಣರಾಗುವುದಿಲ್ಲ. ಕೇವಲ ಸಂಸ್ಕಾರ ಮತ್ತು ಆಚರಣೆಯಿಂದ ಮಾತ್ರವೇ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ ಎಂದು ಹೇಳುತ್ತಿದ್ದದ್ದಲ್ಲದೇ, ನಿರಂತರತೆ. ನಿರುಪಮಭಾವನೆ. ನಿರಾತಂಕತೆ ಇವುಗಳಿದ್ದವನೇ ಬ್ರಾಹ್ಮಣ ಎಂದು ಹೇಳುತ್ತಿದ್ದರು. ಮನಸ್ಸು ಮಾಗಬೇಕು, ಬಾಳು ಹಣ್ಣಾಗಬೇಕು ಎಂದು ಹೇಳುತ್ತಲೇ, 2010ರಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿ ವಿಶ್ವವ್ಯಾಪಿಯಾದರು. ಗುರುಗಳ ಅಂತಿಮ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಸಖರಾಯಪಟ್ಟಣಕ್ಕೆ ಬಂದಿದ್ದು ಇಂದಿಗೂ ಸಹಾ ದಾಖಲೆಯಾಗಿದೆ. ಅಯ್ಯನಕೆರೆಗೆ ಹೋಗುವ ರಸ್ತೆಯಲ್ಲಿ ಇರುವ ಅವರ ತೋಟದಲ್ಲಿಯೇ ಗುರುನಾಥರ ಬೃಂದಾವನವನ್ನು ನಿರ್ಮಿಸಿದ್ದು ಇಂದಿಗೂ ಸಹಾ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅವರ ಬೃಂದಾವನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗದಿರುವುದು ಅವರ ಪ್ರಖ್ಯಾತಿಯನ್ನು ತೋರಿಸುತ್ತದೆ. ಗುರುನಾಥರು ಭೌತಿಕವಾಗಿ ಎಲ್ಲರನ್ನು ಅಗಲಿದ್ದರೂ, ಬೃಂದಾವನದಲ್ಲಿ ಕುಳಿತು ಸದಾಕಾಲವೂ ಅವರ ಕಾಪಾಡುತ್ತಾರೆ ಎನ್ನುವುದೇ ಅವರ ಭಕ್ತರ ಆಶಯವಾಗಿದೆ. ಅದಕ್ಕೇ ಅಲ್ವೇ ಹೇಳೋದು ಸ್ಪಷ್ಟಗುರಿ, ದಿಟ್ಟಗುರು ಇದ್ದಲ್ಲಿ ಅಸಾಧ್ಯ ಎನ್ನುವುದೇ ಇಲ್ಲಾ ಎಂದು
ಏನಂತೀರೀ?
ನಿಮ್ಮವನೇ ಉಮಾಸುತ