ದುಡುಕಿದರೇ ದತ್ತಾ ವೈ ಎಸ್ ವಿ

ಕರ್ನಾಟಕ ರಾಜ್ಯದ ವಿಧಾನಸಭೆಗೆ 2023ರ ಮಾರ್ಚ್ ನಿಂದ ಮೇ ವರೆಗೆ ಯಾವಾಗ ಬೇಕಾದರೂ ಚುನಾವಣೆ ನಡೆಯುವ ಸಾಧ್ಯತೆ ಇರುವ ಕಾರಣ, ಕಳೆದ ಐದಾರು ತಿಂಗಳುಗಳಿಂದಲೇ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಹುಟ್ಟು ಹಬ್ಬವನ್ನು ಆದ್ದೂರಿಯಾಗಿ ಆಚರಿಸಿಕೊಳ್ಳುವ ಮೂಲಕ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವವದ ಜೊತೆ ತಮ್ಮ ಜನ ಬೆಂಬಲವನ್ನು ತೋರಿಸಿಕೊಳ್ಳಲು ಹವಣಿಸುತ್ತಿದ್ದರೆ, ರಾಜ್ಯದ ಪ್ರಮುಖ ಪಕ್ಷಗಳು ವಿವಿಧ ಹೆಸರಿನಡಿಯಲ್ಲಿ ಪಾದಯಾತ್ರೆ, ರಥಯಾತ್ರೆಗಳನ್ನು ನಡೆಸುತ್ತಾ, ಮುಂದಿನ ಸರ್ಕಾರ ನಮ್ಮದೇ ಎಂದು ಹೇಳುತ್ತಿದ್ದಾರೆ. ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೇಸ್ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದರೆ ಕೇವಲ ಮೂರ್ನಾಲ್ಕು ಜೆಲ್ಲೆಗಳಲ್ಲಿ, ಜಾತಿ ಆಧಾರಿತವಾಗಿ ಬೆಂಬಲ ಹೊಂದಿರುವ ಜೆಡಿಎಸ್ ಕೂಡಾ 123 ಸ್ಥಾನಗಳನ್ನು ಗೆದ್ದು ತಾವೇ ಆಡಳಿತಕ್ಕೆ ಬರುತ್ತೇವೆ ಎನ್ನುತ್ತಿರುವುದಲ್ಲದೇ, ತಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಆಯ್ಕೆ ಆದಲ್ಲಿ ಒಮ್ಮೆ ದಲಿತರನ್ನು, ಮತ್ತೊಮ್ಮೆ ಅಲ್ಪಸಂಖ್ಯಾತರನ್ನು ಮಗದೊಮ್ಮೆ ಮಹಿಳೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಕೇವಲ ದೆಹಲಿ ಮತ್ತು ಪಂಜಾಬ್ ರಾಜ್ಯದಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷ ಮತ್ತು ಅತೀ ಬುದ್ಧಿವಂತರ ಪ್ರಜಾಕೀಯವೂ ಸಹಾ ಅದ್ಯಾವ ಲೆಖ್ಖದಲ್ಲಿ ಸರ್ಕಾರ ರಚಿಸುತ್ತೇವೆ ಎನ್ನುತ್ತಿವೆಯೋ ಆ ಭಗವಂತನೇ ಬಲ್ಲ.

ysv2ಇಂತಹ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಬಹುತೇಕ ಎಲ್ಲಾ ರಾಜಕಾರಣಿಗಳು ಅಳೆದೂ ತೂಗಿ ತಮ್ಮ ತಮ್ಮ ರಾಜಕೀಯ ಅನುಭವದ ಲೆಖ್ಖಾಚಾರದಲ್ಲಿ ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬುದನ್ನು ಅಂದಾಜಿಸಿ ಗೆದ್ದೆತ್ತಿನ ಬಾಲ ಹಿಡಿಯಲು ಪಕ್ಷದಿಂದ ಪಕ್ಷಕ್ಕೆ ಹಾರಲು ಸಿದ್ಧರಾಗಿದ್ದು, ಪಕ್ಢ ಮಾಸ ಕಳೆದು ಸಂಕ್ರಾಂತಿ ಆದ ನಂತರ ರಾಜಕೀಯ ಮನ್ವಂತರ ಆಗಲಿದೆ ಎಂದೇ ನಿರೀಕ್ಶಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿಂದ್ದಂತಯೇ ಜನತಾದಳದ ವರಿಷ್ಟರಾದ ರೇವಣ್ಣ ಮತ್ತು ಕುಮಾರಸ್ವಾಮಿಯವರ ಹುಟ್ಟು ಹಬ್ಬದ (ಡಿಸೆಂಬರ್ 15) ಒಂದು ದಿನಕ್ಕೆ ಮುಂಚೆಯೇ ಜನತಾದಳದ ಹಿರಿಯ ನಿಷ್ಟಾವಂತ ನಾಯಕರು ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವಂತಹ ವೈ.ಎಸ್.ವಿ. ದತ್ತಾ, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಬಹಿರಂಗವಾಗಿ ಹೇಳಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅದು ಮುಂದಿನ ಚುನಾವಣೆಯ ಫಲಿತಾಂಶದ ದಿಕ್ಸೂಚಿಯಾಗಿದೆ ಎಂದರೂ ತಪ್ಪಾಗದು.

24 ಜೂನ್ 1954ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿಯ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ದತ್ತಾ ಅವರ ಪೂರ್ತಿ ಹೆಸರು ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿ ನಂತರ ಬೆಂಗಳೂರಿನಲ್ಲಿ ಬಿಎಸ್‍ಸಿ ಪದವೀಧರರಾದ ದತ್ತಾರವರು ಗಣಿತ ಮತ್ತು ಭೌತಶಾಸ್ತ್ರದ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಲ್ಲದೇ ಬೆಂಗಳೂರಿನ ರಾಜಾಜಿನಗರದಲ್ಲಿ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದ ಕಾರಣ ದತ್ತಾ ಮೇಷ್ಟ್ರು ಎಂದೇ ಚಿರಪರಿಚತರಾಗಿದ್ದಾರೆ.

ಕಾಲೇಜು ದಿನಗಳಿಂದಲೂ ಬುದ್ಧಿವಂತ ಮತ್ತು ಉತ್ತಮ ವಾಗ್ಮಿ ಎಂದೇ ಹೆಸರಾಗಿದ್ದ ದತ್ತಾ, ಬಡವವರು ರೈತರು ಮತ್ತು ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಹೆಸರಿಗಷ್ಟೇ ಸಮಾಜವಾದಿ ಎಂದು ಹೇಳಿಕೊಂಡು ಮಜಾವಾದಿಗಳಾಗಿರುವವರೇ ಹೆಚ್ಚಾಗಿರುವ ಇಂದಿನ ರಾಜಕೀಯದಲ್ಲಿ ಅಪರೂಪ ಎನ್ನುವಂತೆ ಸರಳ ಸಜ್ಜನ ಸಮಾಜಾವಾದಿ ರಾಜಕಾರಣಿಯಾಗಿಯೇ ಇಂದಿನವರೆಗೂ ಇರುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ದತ್ತಾ ಅವರೂ ಒಬ್ಬರು ಎಂಬುದನ್ನು ಅವರ ರಾಜಕೀಯ ಸೈದ್ಧಾಂತಿಕ ವಿರೋಧಿಗಳೂ ಒಪ್ಪುವಂತಹ ವ್ಯಕ್ತಿತ್ವವನ್ನು ಗಳಿಸಿ, ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ.

ysv4ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿಯೇ ಸಮಾಜವಾದಿ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಹೋರಾಟ ನಡೆಸಿ ನಂತರ ಎಲ್ಲಾ ವಿರೋಧ ಪಕ್ಷಗಳೂ ಸೇರಿಕೊಂಡು ಸ್ಥಾಪಿತವಾದ ಜನತಾ ಪಕ್ಷದ ಸಕ್ರೀಯ ಸದಸ್ಯರಾಗಿದ್ದಲ್ಲದೇ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಅಪ್ತರಾಗಿದ್ದರು. ನಂತರದ ದಿನಗಳಲ್ಲಿ ಹೆಗಡೆ ಮತ್ತು ಮತ್ತೊಬ್ಬ ಪ್ರಬಲ ನಾಯಕ ದೇವೇಗೌಡ ಅವರ ಮಧ್ಯೆ ಅಸಮಾಧಾನ ಬಂದಾಗ ಸ್ವಜಾತಿ ಪಕ್ಷಪಾತ ಮಾಡದೇ ದೇವೇಗೌಡರ ಪರ ನಿಲ್ಲುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದು ವಿಶೇಷ. ಅಂದಿನಿಂದ ಇಂದಿನವರೆಗೂ ದೇವೇಗೌದರ ಏಳು ಬೀಳುಗಳ ಸಮಯದಲ್ಲಿ ದೊಡ್ಡ ಗೌಡರ ಜೊತೆಯಲ್ಲೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೆರಳಾಗಿ ನಿಂತು ಪಕ್ಷವನ್ನು ಸಂಘಟಿಸಿ ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಾದ ಹಿಂದೆ ದತ್ತಾರವರ ಕೊಡುಗೆ ಇರುವುದನ್ನು ಯಾರೂ ಸಹಾ ಅಲ್ಲಗಳೆಯಲಾರರು.

ಅಧಿಕಾರದ ಆಸೆಗಾಗಿ ದೇವೇಗೌಡರ ಮಾತನ್ನು ಧಿಕ್ಕರಿಸಿದ ಕುಮಾರಸ್ವಾಮಿ ಬಿಜೆಪಿಯೊಂದಿಗೆ 20-20 ಸರ್ಕಾರ ನಡೆಸಿದಾಗಲೂ ಗೌಡರ ಪರವಾಗಿಯೇ ದತ್ತಾ ಅವರು ಇದ್ದ ಕಾರಣ ಜನರು ಅವರನ್ನು ದೇವೇಗೌಡ್ರ ಮಾನಸಪುತ್ರ ಎಂದೇ ಕರೆಯುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು. ಇದೇ ಸ್ವಾಮಿ ನಿಷ್ಠೆಯ ಫಲವಾಗಿ ದತ್ತಾ, ಜಾತ್ಯಾತೀತ ಜನತಾದಳ ಪಕ್ಷದ ವಕ್ತಾರ, ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಜವಾಬ್ಧಾರಿಯಲ್ಲದೇ, ಪಕ್ಷದಿಂದ 2006 ರಿಂದ 2012ರ ವರೆಗೂ ವಿಧಾನ ಪರಿಷತ್ ಸದಸ್ಯರಾಗಿದ್ದಲ್ಲದೇ, 2013ರ ಚುನಾವಣೆಯಲ್ಲಿ ಕಡೂರಿನಲ್ಲಿ ಜನತಾದಳದಿಂದ ಶಾಸಕರಾಗಿ ಆಯ್ಕೆಯಾಗಿ, ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನವನ್ನೂ ಸಹಾ ಪಡೆದಿದ್ದರು. ಹೀಗೆ ಗೌಡರ ಪಕ್ಷದಲ್ಲಿ ಬ್ರಾಹ್ಮಣರಾಗಿಯೂ ಸ್ಥಾನ ಮಾನಗಳಿಸಿದ್ದು ಅವರ ಜನಪ್ರಿಯತೆ ಮತ್ತು ಪಕ್ಷನಿಷ್ಟೆಯನ್ನು ತೋರಿಸುತ್ತಿತ್ತು.

ysv6ಮುಂದಿನ ದಿನಗಳಲ್ಲಿ ದೇವೇಗೌಡರ ವಯೋಸಜ ಖಾಯಿಲೆಗಳಿಂದಾಗಿ ರಾಜಕೀಯದಲ್ಲಿ ಸಕ್ರೀಯವಾಗಿ ಭಾಗವಹಿಸಲು ಆಗದೇ ಇದ್ದ ಕಾರಣ, ರೇವಣ್ಣ, ಕುಮಾರ ಸ್ವಾಮಿ ಮತ್ತು ಅವರ ಮಕ್ಕಳು ಪ್ರಾಭಲ್ಯಕ್ಕೆ ಬರುತ್ತಿದ್ದಂತೆಯೇ ಪಕ್ಷಕ್ಕಾಗಿ ದತ್ತಾ ಅವರು ಮಾಡಿದ ತ್ಯಾಗವನ್ನು ಪರಿಗಣಿಸದೇ, ಅವರನ್ನು ಯಾವ ಪ್ರಮಾಣದಲ್ಲಿ ಮೂಲೆ ಗುಂಪು ಮಾಡಲಾಯಿತೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರಿನಿಂದ ದತ್ತ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದಾಗ, ಖುದ್ದು ದೇವೇಗೌಡರೇ, ನಮ್ಮ ಪಕ್ಷದಲ್ಲಿರುವ ಒಬ್ಬನೇ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ? ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರಿಗೆ ಟಿಕೆಟ್ ಕೊಡಿಸಿದರೂ, ಬಿಜೆಪಿಯ ಬೆಳ್ಳಿ ಪ್ರಕಾಶ್ ಅಬ್ಬರದಿಂದಾಗಿ ಸೋಲನ್ನು ಅನುಭವಿಸಿದರು. ಇದೇ ಸಮಯದಲ್ಲೇ ಅವರ ನೆಚ್ಚಿನ ಮಡದಿಯಾದ ಶ್ರೀಮತಿ ಆರ್. ನಿರ್ಮಲಾ ಅವರ ಅಕಾಲಿಕವಾಗಿ ನಿಧನರಾದ ಕಾರಣ ದತ್ತಾ ಬಹುದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ysv5ಸೆಪ್ಟಂಬರ್ 2020ರ ವೇಳೆ ಆಮ್ ಆದ್ಮಿ ಪಕ್ಷದ ರೋಮಿ ಭಾಟಿ, ಪೃಥ್ವಿ ರೆಡ್ಡಿ ಹಾಗೂ ಸಂಚಿತ್ ಸಹಾನಿ ಅವರು ದತ್ತಾ ಅವರ ನಿವಾಸದಲ್ಲಿ ಭೇಟಿಯಾಗಿ, ಅಧಿಕೃತವಾಗಿ ಆಮ್ ಆದ್ಮಿ ಪಕ್ಷ ಸೇರಲು ಆಹ್ವಾನಿಸಿದಾಗ, ದತ್ತ ಅವರು ಜೆಡಿಎಸ್ ಬಿಡುತ್ತಾರೆ ಎಂಬ ಸುದ್ದಿ ಗುಲ್ಲೆಬ್ಬಿದ್ದಾಗ, ದೇವೇಗೌಡರ ಋಣ ನನ್ನ ಮೇಲಿದೆ. ಅದಕ್ಕಾಗಿ ನಾನು ತಳಮಟ್ಟದಿಂದ ಅವರೊಂದಿಗೆ ಸೇರಿಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಹಾಗಾಗಿ ದೇವೇಗೌಡರರು ಇರುವ ತನಕ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ, ಆಮ್ ಆದ್ಮಿ ಪಾರ್ಟಿ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು. ಇದಾದ ನಂತರ ಜೆಡಿಎಸ್ ನಲ್ಲಿ ಅಷ್ಟೇನೂ ಸಕ್ರಿಯರಾಗಿರದ ದತ್ತ, ಕೊರೊನಾ ವೇಳೆ ವಿಡಿಯೋ ಮೂಲಕ ಹತ್ತನೇ ತರಗತಿಯ ಗಣಿತದ ಪಾಠವನ್ನು ಫೇಸ್ ಬುಕ್ ಮೂಲಕ ಲೈವ್ ಮಾಡಿ ಅಪಾರವಾದ ಜನಮನ್ನಣೆ ಗಳಿಸುವ ಮೂಲಕ ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬ ಮಾತನ್ನು ಪುಷ್ಟೀಕರಿಸಿದ್ದರು.

ಸಿದ್ದರಾಮಣ್ಣ ನನ್ನನ್ನ ಕಾಂಗ್ರೆಸ್ ಗೆ ಬಾ ಮಂತ್ರಿ ಮಾಡುತ್ತೇನೆ, ಎಲ್ಲಾ ರೀತಿಯಲ್ಲೂ ನಿನಗೆ ಕಾಂಗ್ರೆಸ್ ಪಕ್ಷದಲ್ಲಿ ಅನುವು ಮಾಡಿಕೊಡುತ್ತೇನೆ ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದು ದತ್ತ ಹೇಳಿರುವ ಆಡಿಯೋ ಸಂಭಾಷಣೆ 2022ರ ಮೇ ತಿಂಗಳಲ್ಲಿ ವೈರಲ್ ಆಗಿದ್ದರೂ, ಮುಂದೆ ಯಾವುದೇ ಅಂತಹ ಬೆಳವಣಿಗೆ ಆಗಿರಲಿಲ್ಲ. ಈಗ ಇದ್ದಕ್ಕಿದ್ದಂತೆಯೇ, ಡಿಸೆಂಬರ್ 14 2022ರಂದು ಬಹಿರಂಗವಾಗಿ ಜೆಡಿಎಸ್ ಪಕ್ಷವನ್ನು ಶೀಘ್ರವಾಗಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಸ್ವತಃ ದತ್ತ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಖಚಿತಪಡಿಸಿದ್ದಾರೆ.

ನನಗೆ ಈಗ 70 ವರ್ಷವಾಗಿದೆ. 2023 ನನ್ನ ಕೊನೆಯ ಚುನಾವಣೆ. ಕಡೂರು ಕ್ಷೇತ್ರದ ಜನತೆಯ ನಿರ್ಧಾರಕ್ಕೆ ನನ್ನ ರಾಜಕೀಯ ನಿವೃತ್ತಿ ವಿಚಾರವನ್ನು ಬಿಟ್ಟಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಭವಿಷ್ಯ ಮಂಕಾಗಿದೆ. ಕಾರ್ಯಕರ್ತರಿಗೆ ಬೇರೆ ಕಡೆ ವ್ಯವಸ್ಥೆ ಆಗಬೇಕು, ನನ್ನ ನಂಬಿಕೊಂಡ ಬೆಂಬಲಿಗರು, ಕಾರ್ಯಕರ್ತರ ಭವಿಷ್ಯ ವಿಚಾರ ಮಾಡಬೇಕು ಎಂದ್ದಿದ್ದಲ್ಲದೇ, ನನ್ನ ನಂಬಿ ಬಂದವರು ಅತಂತ್ರ ಆಗಬಾರದು. ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಮತ್ತು ದೇವೇಗೌಡರ ರಾಜಕೀಯ 50 ವರ್ಷ ಸುದೀರ್ಘವಾದುದ್ದು. ದೇವೇಗೌಡರ ಜೊತೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿರೂ ತಂದೆ ಮಗನ ಸಂಬಂಧವಿದೆ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣಸಬೇಕಾದಲ್ಲಿ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯಿಸಿದ ಕಾರಣ, ಯಾವುದೇ ಷರತ್ತಿಲ್ಲದೇ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದಿದ್ದಾರೆ. ಅವರ ಕಾಂಗ್ರೆಸ್ ಪಕ್ಷದ ಸೇರ್ಪಡೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲವದರೂ, ಒಂದು ಮೂಲದ ಪ್ರಕಾರ ಅವರು ಇದೇ ಡಿಸೆಂಬರ್ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ವಸಂತ್ ಬಂಗೇರ ಅವರ ಆತ್ಮಕಥನದ ಪುಸ್ತಕವನ್ನು ಸಿದ್ದರಾಮಯ್ಯನವರು ಬಿಡುಗಡೆ ಮಾಡತ್ತಿರುವ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

yasv2ದತ್ತಾರವರ ಈ ರಾಜಕೀಯ ನಡೆ ನಿಜಕ್ಕೂ ಕರ್ನಾಟಕದ ಜನತೆ ಮತ್ತು ರಾಜಕೀಯ ವಿಶ್ಲೇಷಕರಿಗೆ ಅಚ್ಚರಿಯನ್ನು ಮೂಡಿಸುವಂತಿಗೆ. ಒಬ್ಬ ಮಾಜೀ ಮುಖ್ಯಮಂತ್ರಿಯಾಗಿ, ಮತ್ತೆ ಮುಖ್ಯ ಮಂತ್ರಿ ಆಗುವ ಉಮೇದಿನಿಂದ ಸ್ವಘೋಷಿತ ಮಾಸ್ ಲೀಡರ್, ಸಿದ್ದರಾಮಯ್ಯರೇ, ಖಚಿತವಾಗಿ ಗೆಲ್ಲುವ ಭರವಸೆ ಇಲ್ಲದೇ ಸುರಕ್ಷಿತ ಕ್ಷೇತ್ರಕ್ಕಾಗಿ ಅಂಡು ಸುಟ್ಟ ಬೆಕ್ಕಿನಂತೆ ಅಲೆದಾಡುತ್ತಿರುವಾಗ, ಅವರ ಮಾತನ್ನು ನಂಬಿಕೊಂಡು ದತ್ತಾ ದುಡುಕುತ್ತಿದ್ದಾರಾ? ಎಂಬುದೇ ಎಲ್ಲರ ಅಳಲಾಗಿದೆ. ಈಗಾಗಲೇ ಕಡೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಮೂರ್ನಾಲ್ಕು ನಿಷ್ಟಾವಂತ ಕಾಂಗ್ರೇಸ್ಸಿಗರು ಅರ್ಜಿ ಸಲ್ಲಿಸಿದ್ದು, ಗೆಲ್ಲುವ ಖಚಿತವಾದ ಭರವಸೆ ಇಲ್ಲದೇ ಇದ್ದರೂ ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿರುವಾಗ, ಸಿದ್ದರಾಮಯ್ಯನವರ ಮಾತು ಕೇಳಿಕೊಂಡು ಕಾಂಗ್ರೇಸ್ ಪಕ್ಷ ಬರೀಗೈ ದಾಸ ದತ್ತಾರವರಿಗೆ ಟಿಕೆಟ್ ನೀಡುತ್ತದೆಯೇ? ಒಂದು ಪಕ್ಷ ಟಿಕೆಟ್ ಪಡೆದುಕೊಂಡರೂ ಜನರು ಗೆಲ್ಲಿಸುತ್ತಾರೆಯೇ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.

ysv3ಸ್ವಭಾವದಲ್ಲಿ ಸ್ವಲ್ಪ ಹುಂಬ, ತಾನು ಹೇಳಿದ್ದೇ ಸರಿ ಎಂದು ವಾದಿಸುವವ ಎಂಬ ಮಾತಿದ್ದರೂ ರಾಜಕೀಯ ಹೊರತುಪಡಿಸಿ ಇಂದಿಗೂ ಮಕ್ಕಳ ಅಚ್ಚು ಮೆಚ್ಚಿನ ಮೇಷ್ಟ್ರು ಎಂದೇ ಪ್ರಖ್ಯಾತವಾಗಿರುವ, ಬಿಡುವ ಸಿಕ್ಕಾಗಲೆಲ್ಲಾ ಸಾಹಿತ್ಯವನ್ನು ಓದುತ್ತಾ, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ, ಟಿವಿ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುತ್ತಾ, ಉತ್ತಮ ವಾಕ್ಪಟು ಎಂದೇ ಜನಪ್ರಿಯರಾಗಿರುವ ಮತ್ತು ಶಾಸಕರಾಗಿದ್ದಾಗಲೂ ಆಟೋದಲ್ಲಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತಹ ಸರಳ ಸಜ್ಜನ ರಾಜಕಾರಣಿಯಾಗಿರುವ ದತ್ತಾರವರು ಸಿದ್ದರಾಮಯ್ಯನ ಮಾತು ಕೇಳಿಕೊಂಡು ಜೆಡಿಎಸ್ ಪಕ್ಷ ತೊರೆದು ಕಾಂಗ್ರೇಸ್ ಸೇರಿಕೊಳ್ಳುತ್ತಿರುವುದು ಒಂದು ರೀತಿಯ ರಾಜಕೀಯ ಆತ್ಮಹತ್ಯೆ ಎಂದೇ ಜನರು ಮತ್ತು ರಾಜಕೀಯ ವಿಶ್ಲೇಶಕರು ಆಬಿಪ್ರಾಯ ಪಡುತ್ತಿದ್ದಾರೆ. ದೇಶದಲ್ಲಿ ಬಹುತೇಕ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೇಸ್ಸಿಗೆ ಸೇರುವ ಬದಲು ಜೆಡಿಎಸ್ ಪಕ್ಷದಲ್ಲೇ ಉಳಿದು, ತಮ್ಮ ರಾಜಕೀಯ ಅನುಭವವನ್ನು ಬಳಸಿ 20-30 ಸ್ಥಾನಗಳನ್ನು ಗಳಿಸಿ ಈ ಇಳೀ ವಯಸ್ಸಿನಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದುಕೊಂಡು ನೆಮ್ಮದಿಯಾಗಿ ರಾಜಕೀಯ ನಿವೃತ್ತಿಯಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಸುಮಾರು 50 ವರ್ಷಗಳಷ್ಟು ರಾಜಕೀಯ ಅನುಭವ ಇರುವ ದತ್ತಾರವರು ಜೆಡಿಎಸ್ ತೊರೆದು, ಆಮ್ ಆದ್ಮಿ ಅಥವಾ ಪ್ರಜಾಕೀಯ ಪಕ್ಷವನ್ನು ಸೇರಿಕೊಳ್ಳದೇ ಕಾಂಗ್ರೇಸ್ ಪಕ್ಷವನ್ನು ಸೇರಿಕೊಳ್ಳುತ್ತಿದ್ದಾರೆ ಎಂದರೆ ನಿಶ್ಚಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಆ ಮೂರು ಪಕ್ಷಗಳ ಸ್ಥಿತಿಗತಿಗಳ ಬಗ್ಗೆ ಚನ್ನಾಗಿಯೇ ಅರಿತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಅಲ್ಪಮಟ್ಟಿಗೆ ಪ್ರತಿರೋಧವನ್ನು ನೀಡಲು ಕಾಂಗ್ರೇಸ್ ಪಕ್ಷವೊಂದೇ ಸಮರ್ಥವಾಗಿದೆ ಎನ್ನಿಸಿರಬಹುದಾದ ಕಾರಣ ಅಂತಿಮವಾಗಿ ಕ್ರಾಂಗೇಸ್ ಪಕ್ಷದೊಂದಿಗೆ ಜೂಜಾಟ ಆಡಲು ಧುಮುಕುತ್ತಿರುವುದು ಒಂದು ರೀತಿಯಲ್ಲಿ ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳುತ್ತಿದ್ದಾರಲ್ಲಾ ಎಂದೆನಿದರೂ, ಅವರ ರಾಜಕೀಯ ನಿರ್ಧಾರದ ಹಿಂದೆ ನಾನಾ ಕಾರಣಗಳು ಇರಬಹುದಾದ ಕಾರಣದಿಂದಾಗಿ, ನಾವು ನೀವೆಲ್ಲರೂ ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಬಹುದಷ್ಟೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ದುಡುಕಿದರೇ ದತ್ತಾ ವೈ ಎಸ್ ವಿ

  1. ಶ್ರೀ ವೈ.ಎಸ್.ವಿ.ದತ್ತಾ ಅವರ ರಾಜಕೀಯ ನಿರ್ಧಾರದ ಬಗ್ಗೆ ಹಲವಾರು ವಿಶ್ಲೇಷಣೆಗಳಿರುವುದು ನಿಜ. ನಾನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಅವರ ಭಾಷಣಗಳನ್ನು ಕೇಳಿದ್ದೇನೆ ಮತ್ತು ವರದಿಗಾರನಾಗಿ ಬರೆದಿದ್ದೇನೆ. ಚರ್ಚೆಗಳ ಸಂಪಾದಕನಾಗಿ ಮತ್ತು ಮುಖ್ಯ ಸಂಪಾದಕನಾಗಿ ಅವರ ಮಾತುಗಳನ್ನು ಎಡಿಟ್ ಮಾಡಿದ್ದೇನೆ. ಅವರು ಬಹಳ ಉತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ವಾಗ್ಮಿ ಎಂಬುದರಲ್ಲಿ ಎರಡು ಮಾತಿಲ್ಲ. ಬುದ್ದಿವಂತರು ಎಂಬುದರಲ್ಲೂ ಅನುಮಾನವಿಲ್ಲ. ಕುಮಾರವ್ಯಾಸ ಭಾರತವನ್ನು ಬರೆದ ಕುಮಾರವ್ಯಾಸನ ವಂಶಸ್ಥರೂ ಎಂದೂ ಹೇಳುತ್ತಾರೆ. ಒಟ್ಟಿನಲ್ಲಿ ಸಂಭಾವಿತ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಬ್ರಾಹ್ಮಣರಾಗಿದ್ದೂ ಒಕ್ಕಲಿಗರ ಪಕ್ಷ ಎಂದೆನಿಸಿದ್ದ ಜಾತ್ಯಾತೀತ ಜನತಾದಳದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವಾಗ ಇತ್ತೀಚೆಗೆ ಅವರನ್ನು ಕಡೆಗಣಿಸಿರುವುದಕ್ಕೆ ಬೇಸರಗೊಂಡಿರುವುದು ಸಹಜ. ಅವರು ರಾಮಕೃಷ್ಣ ಹೆಗಡೆಯವರ ಜೊತೆ ಇದ್ದಿದ್ದರೆ ಮಂತ್ರಿಗಳಾಗುತ್ತಿದ್ದರೇನೊ. ಆದರೂ ಅಧಿಕಾರವನ್ದೇ ಬಯಸದೆ ದೇವೇಗೌಡರ ಪರ ನಿಂತಿದ್ದನ್ನು ಪಕ್ಷ ಗಮನಿಸಬೇಕಾಗಿತ್ತಲ್ಲವೆ? ಹಾಗಾಗಿ ಅವರಿಗೆ ಬೇಸರವಾಗಿ ಪಕ್ಷ ಬಿಡುವ ನಿರ್ಧಾರ ಮಾಡಿರುವುದರಲ್ಲಿ ಆಶ್ಚರ್ಯವೇನಲ್ಲ. ಮುಂದೆ ರಾಜಕೀಯದಲ್ಲಿ ಇಂಥ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಯಾರೂ ಹೇಳುವ ಸ್ಥಿತಿಯಲ್ಲಿಲ್ಲ. ಅವರ ಅದೃಷ್ಟ ಹೇಗಿದೆಯೋ ನೋಡೋಣ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸೋಣ ಅಷ್ಟೆ.

    Liked by 1 person

    1. ಅಪ್ಪಾ ಮಕ್ಕಳು ದತ್ತಾರನ್ನು ಜೀತದಾಳುವಿನಂತೆ ಉಪಯೋಗಿಸಿ ಈಗ ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿಯೇ ಅವರ ಮುಂದಿನ ರಾಜಕೀಯ ಭವಿಷ್ಯವಾದರೂ ಉತ್ತಮವಾಗಿರಲಿ ಎಂದು ಬಯಸಿದರೆ, ಬಾಣಲೆಯಿಂದ ನೇರವಾಗಿ ಬೆಂಕಿಗೆ ಬೀಳುತ್ತಿರುವುದು ವಿಪರ್ಯಾಸವೇ ಸರಿ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s