ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

vaj3ನಮ್ಮ ದೇಶಕ್ಕೆ 1947ರಲ್ಲಿ ಬ್ರಿಟೀಷರಿಂದ ಸ್ವಾತ್ರಂತ್ರ ದೊರೆತ ನಂತರ ಗಾಂಧೀಜಿಯವರಿಂದ selected ಪ್ರಧಾನ ಮಂತ್ರಿಯಾದ ಪಂಡಿತ್ ಜವಹರ್ ಲಾಲ್ ನೆಹರು ಅವರಿಂದ ಹಿಡಿರು 2014ರಲ್ಲಿ ಪ್ರಜಾಪಭುತ್ವದ ಅಡಿಯಲ್ಲಿ ಜನರಿಂದಲೇ elected ಆಗಿ ಈ ದೇಶದ 14ನೇ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರ ಪೈಕಿ ಈ ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳು ಯಾರು? ಎಂದು ಯಾವುದೇ ಭಾರತೀಯರನ್ನು ಕೇಳಿದರೂ, ಥಟ್ ಅಂತಾ ಲಾಲ ಬಹದ್ದೂರ್ ಶಾಸ್ತ್ರಿಗಳು ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ಹೇಳುತ್ತಾರೆ ಎನ್ನುವುದು ಗಮನಾರ್ಹ. ಇಂದಿನ ಮಧ್ಯಪ್ರದೇಶಕ್ಕೆ ಸೇರಿರುವ ಗ್ವಾಲಿಯರಿನ ಅಸಾಧಾರಣ ಪ್ರತಿಭೆಯ ಸರಳ ಸಜ್ಜನ ಅಟಲ್ ಜೀ ನೋಡ ನೋಡುತ್ತಿದ್ದಂತೆಯೇ ದೇಶ ವಿದೇಶಗಳಲ್ಲಿ ಸ್ನೇಹತ್ವವನ್ನು ಸಂಪಾದಿಸಿ ಅಜಾತಶತ್ರು ಎನಿಸಿದ ಪರಿ ನಿಜಕ್ಕೂ ಅನನ್ಯ ಮತ್ತು ಅಧ್ಭುತವೇ ಆಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ

vaj11924ರ ಡಿಸೆಂಬರ್ 25ರಂದು ಇಂದಿನ ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದ ಸಂಪ್ರದಾಯಸ್ಥ ಕುಟುಂಬವಾದ ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾದೇವಿ ದಂಪತಿಗಳ ಮಗನಾಗಿ ಜನಿಸಿದ ಮಗು ನೋಡಲು ಶ್ರೀಕೃಷ್ಣನಂತ ಮುದ್ದು ಮುದ್ದಾಗಿದ್ದ ಕಾರಣ ಅಟಲ್ ಬಿಹಾರಿ ಎಂದು ನಾಮಕರಣ ಮಾಡುತ್ತಾರೆ. ಹಾಗೆ ನೋಡಿದರೆ, ಅಟಲ್ ಅವರು ಮೂಲತಃ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬಟೇಶ್ವರ ಎಂಬ ಗ್ರಾಮದವರಾಗಿದ್ದು ಅವರ ಅಜ್ಜ ಶ್ಯಾಮ್ ಲಾಲ್ ವಾಜಪೇಯಿ ತಮ್ಮ ಗ್ರಾಮದಿಂದ ಗ್ವಾಲಿಯರ್ ಬಳಿಯ ಮೊರೆನಾಗೆ ವಲಸೆ ಬಂದಿದ್ದರು. ಬಾಲ್ಯದಿಂದಲೂ ಓದು ಬರಹದ ಜೊತೆ ಆತ ಪಾಠಗಳಲ್ಲಿಯೂ ಚುರುಕಾಗಿದ್ದ ಬಾಲಕ ಅಟಲ್ ತಮ್ಮ ಶಾಲಾ ಶಿಕ್ಷಣವನ್ನು ಗ್ವಾಲಿಯರ್‌ನ ಸರಸ್ವತಿ ಶಿಶು ಮಂದಿರದಲ್ಲಿ ಮಾಡಿದ ನಂತರ 1934 ರಲ್ಲಿ, ಅವರ ತಂದೆಯವರು ಉಜ್ಜಯಿನಿ ಜಿಲ್ಲೆಯ ಬರ್ನಗದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇರಿದ ನಂತರ ಅಲ್ಲೇ ಇದ್ದ ಆಂಗ್ಲೋ-ವರ್ನಾಕ್ಯುಲರ್ ಮಿಡಲ್ (AVM) ಶಾಲೆಯಲ್ಲಿ ಶಿಕ್ಷಣ ಮುಂದಿವರೆಸಿ ಮೆಟ್ರಿಕ್ಯುಲೇಷನ್ ನಂತರ ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜ್ ಮತ್ತು ಆಗ್ರಾ ವಿಶ್ವವಿದ್ಯಾಲಯದಲ್ಲಿ (ಈಗ ಮಹಾರಾಣಿ ಲಕ್ಷ್ಮೀ ಬಾಯಿ ಸರ್ಕಾರಿ ಶ್ರೇಷ್ಠ ಕಾಲೇಜ್) ವ್ಯಾಸಂಗ ಮಾಡುತ್ತಾರೆ. ಹೀಗೆ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್‌ನೊಂದಿಗೆ ಪದವಿ ಪಡೆದದ್ದಲ್ಲದೇ, ಮುಂದೆ ಆಗ್ರಾ ವಿಶ್ವವಿದ್ಯಾನಿಲಯದ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಮಾಸ್ಟರ್ ಆಫ್ ಆರ್ಟ್ಸ್‌ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

ವಿದ್ಯಾರ್ಥಿ ದೆಸೆಯಿಂದಲೂ ಓದಿನ ಜೊತೆ ಸಾಮಾಜಿಕ ಚಟುವಟಿಕೆಗಳ ಸಕ್ರೀಯರಾಗಿದ ಅಟಲ್ ಜೀ ಆರಂಭದಲ್ಲಿ ಆರ್ಯ ಸಮಾಜದ ಯುವ ವಿಭಾಗವಾದ ಆರ್ಯ ಕುಮಾರ್ ಸಭಾದೊಂದಿಗೆ ಜೋಡಿಸಿಕೊಂಡಿದ್ದಲ್ಲದೇ, 1944ರಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾದರು. ಇಷ್ಟರ ಮಧ್ಯೆ 1939 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಾಬಾಸಾಹೇಬ್ ಆಪ್ಟೆ ಅವರಿಂದ ಪ್ರಭಾವಿತರಾಗಿ ಸಂಘದ ಸ್ವಯಂಸೇವಕರಾದ ಅಟಲ್ ಅವರು 16 ನೇ ವಯಸ್ಸಿನಲ್ಲಿ 1942ರ ಆಗಸ್ಟ್ ನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಾಜಪೇಯಿ ಮತ್ತು ಅವರ ಹಿರಿಯ ಸಹೋದರ ಪ್ರೇಮ್ ಅವರು ಭಾಗವಹಿಸಿದ್ದ ಕಾರಣ, 24 ದಿನಗಳ ಕಾಲ ಸೆರೆಮನೆಯಲ್ಲಿ ಬಂಧಿತರಾಗಿ, 27 ಆಗಸ್ಟ್ 1942ರಂದು ಬಟೇಶ್ವರದಲ್ಲಿ ನಡೆದ ಉಗ್ರಗಾಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ ಎಂದು ಲಿಖಿತ ಹೇಳಿಕೆಯನ್ನು ನೀಡಿದ ನಂತರ ಅವರು ಸೆರೆಮನೆಯಿಂದ ಬಿಡುಗಡೆ ಹೊಂದಿದ್ದರು. 1940 ರಿಂದ 1944 ರ ಅವಧಿಯಲ್ಲಿ ಸಂಘದ OTC ಮೂರನೇ ವರ್ಷದ ತರಭೇತಿಯನ್ನು ಮುಗಿಸುವ ಜೊತೆಗೆ ಕಾನೂನು ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಾರಾದರೂ, 1947 ದೇಶ ವಿಭಜನೆಯ ಗಲಭೆಯಿಂದಾಗಿ ಕಾನೂನು ಅಧ್ಯಯನವನ್ನು ತ್ಯಜಿಸಿ, ಉತ್ತರ ಪ್ರದೇಶಕ್ಕೆ ಸಂಘದ ವಿಸ್ತಾರಕ್ ಆಗಿ ನಿಯೋಜಿತರಾಗುತ್ತಾರೆ.ಉತ್ತರ ಪ್ರದೇಶದ ವಿಸ್ತಾರಕರಾಗಿ ಬಂದಾಗ, ಶ್ರೀ ದೀನದಯಾಳ್ ಉಪಾಧ್ಯಾಯ ರಾಷ್ಟ್ರಧರ್ಮ (ಹಿಂದಿ ಮಾಸಿಕ), ಪಾಂಚಜನ್ಯ (ಹಿಂದಿ ವಾರಪತ್ರಿಕೆ)ಗಳಲ್ಲದೇ, ದಿನಪತ್ರಿಕೆಗಳಾದ ಸ್ವದೇಶ್ ಮತ್ತು ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಕವಿಯಾಗಿ ಸೇವೆ ಸಲ್ಲಿಸುತ್ತಾರೆ.

vaj41951 ರಲ್ಲಿ, ದೇಶದಲ್ಲಿ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಅವರ ವಿರುದ್ಧ ಹಿಂದೂ ಬಲಪಂಥೀಯ ರಾಜಕೀಯ ಪಕ್ಷವೊಂದರ ಅವಶ್ಯಕತೆಯನ್ನು ಮನಗಂಡು ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಸಂಘದ ಬೆಂಬಲದೊಂದಿಗೆ ಭಾರತೀಯ ಜನಸಂಘ ಆರಂಭವಾಗುತ್ತದೆ. ಇಷ್ಟರಲ್ಲಿ ತಮ್ಮ ಅಮೋಘವಾದ ವಾಗ್ಝರಿ ಮತ್ತು ಲೇಖನಗಳಿಂದ ಅತೀ ಶೀಘ್ರದಲ್ಲೇ ಪ್ರಸಿದ್ದರಾಗಿದ್ದ ಅಟಲ್ ಅವರನ್ನು ಗುರುತಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಸಂಘದ ಅಂದಿನ ಸರಸಂಘಚಾಲಕರಾದ ಗುರೂಜಿಯವರನ್ನು ಸಂಪರ್ಕಿಸಿ ಅಟಲ್ ಅವರ ಸೇವೆ ಸಂಘಕ್ಕಿಂತಲೂ ರಾಜಕೀಯದಲ್ಲಿ ಹೆಚ್ಚಿನ ಅವಶ್ಯಕತೆ ಇದೆ ಎಂದು ತಿಳಿಸಿ ಅವರನ್ನು ಜನಸಂಘಕ್ಕೆ ಅಧಿಕೃತವಾಗಿ ಸೇರಿಸಿಕೊಂಡು ದೆಹಲಿ ಮೂಲದ ಉತ್ತರ ಪ್ರದೇಶದ ಉಸ್ತುವಾರಿಯ ಜೊತೆಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾರೆ. 1957ರ ಸಾರ್ವತ್ರಿಕ ಚುನಾವಣೆಯಲ್ಲಿ, ವಾಜಪೇಯಿ ಅವರು ಮಥುರಾದಲ್ಲಿ ರಾಜಾ ಮಹೇಂದ್ರ ಪ್ರತಾಪ್ ವಿರುದ್ಧ ಸೋಲನ್ನು ಅನುಭವಿಸಿದರೂ, ಬಲರಾಂಪುರದಿಂದ ಪ್ರಥಮಬಾರಿಗೆ ಸಾಂಸದರಾಗಿ ಆಯ್ಕೆಯಾಗುತ್ತಾರೆ. ಹೀಗೆ ಪ್ರಥಮಬಾರಿಗೆ ಸಂಸದರಾಗಿ ಆಯ್ಕೆಯಾದರೂ ಲೋಕಸಭೆಯಲ್ಲಿ ಅವರ ವಾಗ್ಮಿ ಕೌಶಲ್ಯವನ್ನು ಕಂಡ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಪ್ರಭಾವಿತರಾಗಿ ಮುಂದೊಮ್ಮೆ ಈತ ಈ ದೇಶದ ಪ್ರಧಾನಿಯಾದರೂ ಅಚ್ಚರಿಯಿಲ್ಲ ಎಂದು ನುಡಿದಿದ್ದದ್ದು ಅಟಲ್ ಅವರ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ.

vaj9ದೀನ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರ ನಂತರ ಅಟಲ್ ಮತ್ತು ಲಾಲ ಕೃಷ್ಣ ಅಡ್ವಾನಿಯವರು ರಾಮ ಲಕ್ಷ್ಮಣರಂತೆ ಜನಸಂಘದವನ್ನು ಬೆಳಸಿಕೊಂಡು ಹೋಗಿ 1975-77ರ ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರಿನ ಕಾರಾಗೃಹದಲ್ಲಿ ಸೆರೆಮೆನೆಯ ಅನುಭವಿಸಿದ್ದಲ್ಲದೇ, ನಂತರ ಜಯಪ್ರಕಾಶ್ ನಾರಾಯಣರ ಆಶಯಂದ<ತೆ ದೇಶದ ಎಲ್ಲಾ ವಿರೋಧಪಕ್ಷಗಳೂ ಜನತಪಕ್ಷದಲ್ಲಿ ವಿಲೀನವಾಗಿ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಲಕ್ನೋದಿಂದ ಸಾಂಸದರಾಗಿ ಆಯ್ಕೆಯಾಗಿ ದೇಶದ ಪ್ರಥಮ ಕಾಂಗ್ರೇಸ್ಸೇತರ ಮೊರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ಅಪಾರವಾದ ಮನ್ನಣೆ ಗಳಿಸುತ್ತಾರಾದರೂ, ನಂತರ, ಜನತಾ ಪಕ್ಷದ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ನಿಯವನ್ನು ಧಿಕ್ಕರಿಸಿ ಪಕ್ಷದಿಂದ ಹೊರಬಂದು 1980ರಲ್ಲಿ ಭಾರತೀಯ ಜನತಾ ಪಕ್ಷವನ್ನು ಆರಂಭಿಸಿ ಸಂಸ್ಥಾಪಕ ಅಧ್ಯಕ್ಷರಾಗುತ್ತಾರೆ.

jav51984 ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷಕರಿಂದ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಅನುಕಂಪದ ಆಧಾರದಿಂದ ಕಾಂಗ್ರೇಸ್ ಪಕ್ಷದ ಅಭೂತಪೂರ್ವ ಗೆಲುವು ಕಂಡಾಗ, ಬಿಜೆಪಿಯ ಕೇವಲ ಇಬ್ಬರು ಸಂಸದರು ಆಯ್ಕೆಯಾದಾಗ, ಎಲ್ಲರೂ ಬಿಜೆಪಿಯ ಹೀನಾಯ ಪ್ರದರ್ಶನವನ್ನು ಅವಮಾನಿಸಿದಾಗ, ಇಂದು ಲೋಕಸಭೆಯಲ್ಲಿ ನಮ್ಮ ಪಕ್ಷದ ಕೇವಲ ಇಬ್ಬರು ಸದಸ್ಯರು ಇರಬಹುದು ಮುಂದೊಂದು ದಿನ ದೇಶದ ಹತ್ತು ಹಲವಾರು ರಾಜ್ಯಗಳಲ್ಲದೇ ದೆಹಲಿಯಲ್ಲಿಯೂ ನಮ್ಮದೇ ಆದ ಬಹುಮತದ ಸರ್ಕಾರವನ್ನು ರಚಿಸುತ್ತೇವೆ ಎಂದು ದಿಟ್ಟವಾಗಿ ಹೇಳಿದ್ದರು ವಾಜಪೇಯಿಯವರು. ನಂತರ 1986 ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.

vaj101986ರಲ್ಲಿ, ಅಡ್ವಾಣಿಯವರು ಬಿಜೆಪಿಯ ಅಧ್ಯಕ್ಷರಾದ ನಂತರ ರಾಮ ಮಂದಿರದ ಕುರಿತಾಗಿ ರಥಯಾತ್ರೆ ನಡೆಸಿದ ನಂತರ 1989 ರ ಸಾರ್ವತ್ರಿಕ ಚುನಾವಣೆಯಲ್ಲಿ 86 ಸ್ಥಾನಗಳನ್ನು ಗೆದ್ದ ನಂತರ ಬಿಜೆಪಿ ಹಿಂದಿರುಗಿ ನೋಡುವ ಪ್ರಮೇಯವೂ ಬರದೇ, ಅಂದಿನ V.P.ಸಿಂಗ್ ಅವರ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡಿದ್ದಲ್ಲದೇ, ನಂತರದ ಚುನಾವಣೆಗಳಲ್ಲಿ ಸಂಖ್ಯಾಬಲ ಹೆಚ್ಚುತ್ತಲೇ ಹೋಗಿ, ಮೇ16,1996 ರಂದು ದೇಶದ 11ನೇ ಪ್ರಧಾನಿ ಯಾಗಿ ಆಯ್ಕೆಯಾದ ವಾಜಪೇಯಿಯವರು ಜೂನ್ 1,1996ರಂದು ಕೇವಲ 13ದಿನಗಳ ಕಾಲ ಅಧಿಕಾರದಲ್ಲಿ ಇರುತ್ತಾರೆ. ಆನಂತರ ಬದಲಾದ ರಾಜಕೀಯ ವಿದ್ಯಮಾನದಲ್ಲಿ ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಅವರು ದೇಶದ ಪ್ರಧಾನಿಯಾಗಿ ಆ ಸ್ಥಾನವನ್ನು ನಿಭಾಯಿಸಲು ವಿಫಲರಾದ ಹಿನ್ನಲೆಯಲ್ಲಿ 1998ರಲ್ಲಿ ನಡೆದ ಚುನವಣೆಯಲ್ಲಿ NDA ಪರವಾಗಿ ಮತ್ತೆ 19/3/1998ರಂದು 2ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿ 13 ತಿಂಗಳುಗಳುಗಳ ಕಾಲ ಅತ್ಯಂತ ಜನಪ್ರಿಯರಾಗಿ ಆಡಳಿತ ನಡೆಸಿದರೂ ಅವರ NDAಪರವಾಗಿದ್ದ ಜಯಲಲಿತಾ ನೇತೃತ್ವದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ, ಲೋಕಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿಯಾಗಿದ್ದರೂ ಲೋಕಸಭೆಗೆ ರಾಜೀನಾಮೆ ನೀಡದಿದ್ದ ಗಿರಿಧರ್ ಗಮಾಂಗ್, ವಾಜಪೇಯಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ ಕಾರಣ, ಸರ್ಕಾರ ಕೇವಲ ಒಂದೇ ಒಂದು ಮತದಿಂದ ಸೋಲನ್ನು ಅನುಭವಿಸಿದಾಗ ಇಡೀ ದೇಶವೇ ಕಣ್ಣೀರಿಡುತ್ತದೆ,

ನಂತರ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಿಸಿದ ಬಿಜೆಪಿ, ಮತ್ತೆ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರದ ಗದ್ದುಗೆಗೆ ಏರಿ 1999ರಿಂದ ಮೇ22,2004ರ ವರೆಗೆ ಪ್ರಧಾನಿ ಯಾಗಿ ಸಂಪೂರ್ಣ 5 ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಯೇತರ ಮೊದಲ ಸರಕಾರ ವೆಂಬ ಪಾತ್ರಕ್ಕೂ ವಾಜಪೇಯಿ ಸರಕಾರ ಭಾಜನವಾಯಿತು. NDA ಭಾಗವಾಗಿ 30ಕ್ಕೂ ಅಧಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸರ್ಕಾರ ನಡೆಸಿದ ವಾಜಪೇಯಿಯವರ ಹಾದಿ ಸುಗಮವಾಗಿರದೇ ಕಲ್ಲು ಮುಳ್ಳುಗಳ ಹಾದಿಯಂತಿದ್ದರೂ ಅವರ ಆಳ್ವಿಕೆಯ ಕಾಲದ ಮುಖ್ಯಾಂಶಗಳು ಹೀಗಿವೆ.

vaj7ನಮ್ಮ ದೇಶದ ಭದ್ರತೆಗಾಗಿ ಮೇ 1998 ರಲ್ಲಿ, ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ರಾಜಸ್ಥಾನದ ಪೋಖ್ರಾನ್ ಮರುಭೂಮಿಯಲ್ಲಿ 1974ರ ನಂತರ ಎರಡನೇ ಬಾರಿಗೆ ಐದು ಭೂಗತ ಪರಮಾಣು ಪರೀಕ್ಷೆಗಳನ್ನು ನಡೆಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದಾಗ ಅಮೇರಿಕಾ, ಕೆನಡಾ, ಜಪಾನ್, ಬ್ರಿಟನ್ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ದೇಶಗಳ ಇದರ ವಿರುದ್ಧವಾಗಿ ಭಾರತಕ್ಕೆ ಮಾಹಿತಿ, ಸಂಪನ್ಮೂಲಗಳು ಮತ್ತು ತಂತ್ರಜ್ಞಾನದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಪರಿಣಾಮವಾಗಿ ತೀವ್ರವಾದ ಅಂತರಾಷ್ಟ್ರೀಯ ಟೀಕೆಗಳು ಮತ್ತು ವಿದೇಶಿ ಹೂಡಿಕೆ ಮತ್ತು ವ್ಯಾಪಾರದಲ್ಲಿ ಸ್ಥಿರವಾದ ಕುಸಿತ ಕಂಡರು ವಾಜಪೇಯವರು ಜಗ್ಗದ್ದನ್ನು ಕಂಡ ಈ ಎಲ್ಲಾ ದೇಶಗಳೂ ಭಾರತದ ವಿರುದ್ದ ಹೇರಿದ್ದ ನಿರ್ಬಂಧಗಳನ್ನು ಕೇವಲ ಆರು ತಿಂಗಳೊಳಗೇ ಹಿಂದೆಗೆದುಕೊಂಡಿತ್ತು.

1998 ರ ಕೊನೆಯಲ್ಲಿ ಮತ್ತು 1999 ರ ಆರಂಭದಲ್ಲಿ, ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಶಾಂತಿ ಪ್ರಕ್ರಿಯೆಗೆ ಒತ್ತು ನೀಡಿದ್ದಲ್ಲದೇ, ಫೆಬ್ರವರಿ 1999 ರಲ್ಲಿ ದೆಹಲಿ-ಲಾಹೋರ್ ಬಸ್ ಸೇವೆಯ ಐತಿಹಾಸಿಕ ಉದ್ಘಾಟನೆಯೊಂದಿಗೆ, ವಾಜಪೇಯಿ ಅವರು ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನದೊಂದಿಗಿನ ಇತರ ಸಂಘರ್ಷಗಳನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಹೊಸ ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ಮೇಲ್ನೋಟಕ್ಕೆ ಭಾರತದೊಂದಿಗೆ ಸ್ನೇಹಸೌಹಾರ್ಧತೆಯನ್ನು ತೋರುತ್ತಿದ್ದ ಪಾಕೀಸ್ಥಾನ 3 ಮೇ 1999ರಲ್ಲಿ ಪರ್ವೇಜ್ ಮುಶ್ರಾಫ್ ಅವರ ಸಾರರ್ಥದಲ್ಲಿ ಭಾರತಕ್ಕೆ ಸೇರಿದ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸಿಕೊಂಡಾಗ ವಾಜಪೇಯಿಯವರು ಅದಕ್ಕೆ ಜಗ್ಗದೇ, ತಮ್ಮ ಭೂ ಮತ್ತು ವಾಯು ಸೇನೆಯ ಮೂಲಕ ಸತವಾಗಿ ಯುದ್ದವನ್ನು ನಡೆಸಿ ಅಂತಿಮವಾಗಿ ಜುಲೈ 26 1999ರಂದು ಪಾಕೀಸ್ಥಾನ ತನ್ನ ಸೋಲನ್ನು ಒಪ್ಪಿಕೊಳ್ಳುವಂತೆ ಮಾಡಿತು.

13 ಡಿಸೆಂಬರ್ 2001 ರಂದು, ನಕಲಿ ಗುರುತಿನ ಚೀಟಿಗಳೊಂದಿಗೆ ಮುಸುಕುಧಾರಿ, ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದೆಹಲಿಯ ಸಂಸತ್ ಭವನಕ್ಕೆ ನುಗ್ಗಿದ ಭಯೋತ್ಪಾದಕರು ನಮ್ಮ ಕೆಲವು ಭದ್ರತಾ ಸಿಬ್ಬಂದಿಗಳನ್ನು ಕೊಲ್ಲುವಲ್ಲಿ ಯಶಸ್ವಿಯಾದರೂ, ಮತ್ತೆ ಅದರಿಂದ ಎದೆಗುಂದದ ವಾಜಪೇಯಿಯವರ ಸರ್ಕಾರ ಕೂಡಲೇ ಪಾಕಿಸ್ತಾನೀ ಪ್ರಚೋದಿತ ಭಯೋತ್ಪಾದಕರನ್ನು ಕೂಡಲೇ ಮಟ್ಟ ಹಾಕಿದ್ದಲ್ಲದೇ ಭಾರತದಲ್ಲಿ ಅವರಿಗೆ ಸಹಕರಿಸಿದವರೆಲ್ಲರನ್ನೂ ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಿತು.

ಫೆಬ್ರವರಿ 2002 ರಲ್ಲಿ, ಅಯೋಧ್ಯೆಯಿಂದ ಗುಜರಾತ್‌ಗೆ ರೈಲಿನಲ್ಲಿ ಹಿಂದಿರುಗುತ್ತಿದ್ದ ಹಿಂದೂ ಯಾತ್ರಿಕರ ಮೇಲೆ ಗೋಧ್ರಾ ಬಳಿ ಮುಸ್ಲಿಂ ಧಾಳಿಕೋರರು ಬೆಂಕಿ ಹಚ್ಚಿದ ಪರಿಣಾಮ ಇಡೀ ಭೋಗಿಯಲ್ಲಿದ್ದ ಸುಮಾರು 59 ಜನರು ಸುಟ್ಟು ಕರಕಲಾದಾಗ, ಮುಸಲ್ಮಾನರ ವಿರುದ್ಧ ರಾಷ್ಟ್ರವ್ಯಾಪೀ ಮುಷ್ಕರವಾಗಿ ಗುಜರಾತಿನಲ್ಲಿ ಸಾವಿರಾರು ಮುಸ್ಲಿಮರ ಮುಸ್ಲಿಂ ಮನೆಗಳು ಮತ್ತು ಪೂಜಾ ಸ್ಥಳಗಳನ್ನು ನಾಶವಾಗಿದ್ದಲ್ಲದೇ, ಸುಮಾರು 1,000 ಕ್ಕಿಂತ ಅಧಿಕ ಹಿಂದೂ ಮತ್ತು ಮುಸಲ್ಮಾನರು ಕೋಮು ಗಲಭೆಯಲ್ಲಿ ಅಸುನೀಗಿದಾಗ, ಗುಜರಾತಿನಲ್ಲಿ ತಮ್ಮದೇ ಬಿಜೆಪಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸರಿಯಾದ ರಾಜಧರ್ಮವನ್ನು ಪಾಲಿಸ ಬೇಕೆಂದು ಎಚ್ಚರಿಕೆಯ ಮಾತನ್ನು ವಾಜಪೇಯಿವರು ನೀಡಿದ್ದರು.

 • ವಾಜಪೇಯಿಯವರ ಸರ್ಕಾರವು ಅನೇಕ ದೇಶೀಯ ಆರ್ಥಿಕ ಮತ್ತು ಮೂಲಸೌಕರ್ಯ ಸುಧಾರಣೆಗಳನ್ನು ಪರಿಚಯಿಸಿತು
 • ಖಾಸಗಿ ವಲಯ ಮತ್ತು ವಿದೇಶಿ ಹೂಡಿಕೆಗಳನ್ನು ಉತ್ತೇಜಿಸುವುದು
 • ಸರ್ಕಾರಿ ತ್ಯಾಜ್ಯವನ್ನು ಕಡಿಮೆ ಮಾಡುವುದು
 • ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು
 • ಕೆಲವು ಸರ್ಕಾರಿ ಸ್ವಾಮ್ಯದ ನಿಗಮಗಳ ಖಾಸಗೀಕರಣವನ್ನು ಉತ್ತೇಜಿಸುವುದು
 • ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ.
 • 2001 ರಲ್ಲಿ, ವಾಜಪೇಯಿ ಸರ್ಕಾರವು ಸರ್ವ ಶಿಕ್ಷಾ ಅಭಿಯಾನವನ್ನು ಪ್ರಾರಂಭಿಸಿ, ಅದರ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿತು.

ಇಷ್ಟೆಲ್ಲಾ ಅಭಿವೃದ್ಧಿಯನ್ನು ಸಾಧಿಸಿದ್ದರೂ 2004ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ವಿಫಲವಾದ ಹಿನ್ನಲೆಯಲ್ಲಿ ಡಿಸೆಂಬರ್ 2005 ರಲ್ಲಿ, ವಾಜಪೇಯಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಲ್ಲದೇ ಮುಂದೆಂದೂ ತಾವು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ನಂತರ ದಿನಗಳಲ್ಲಿ ದೀರ್ಘಮರವಿನ ಖಾಯಿಲೆಗೆ ತುತ್ತಾಗುವ ಮೂಲಕ ಅವರಿಗೆ ಪ್ರಸಕ್ತವಿದ್ಯಮಾನಗಳು ತಿಳಿಯದಂತಾಗಿ ಮನೆಯಲ್ಲಿಯೇ ವೈದ್ಯರ ನಿಗದಲ್ಲಿ ಜೀವಿಸುವಂತಾಗಿ, 16 ಆಗಸ್ಟ್ 2018 ರಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ವಯೋಸಹಜವಾಗಿ ವಿಧಿವಶರಾಗುವ ಮೂಲಕ ಭಾರತ ಧೃವನಕ್ಷತ್ರವೊಂದನ್ನು ಕಳೆದುಕೊಳ್ಳುವಂತಾಯಿತು.

ಅಜಾತಶತ್ರು ಅಟಲ್ ಜಿಯ ಕುರಿತು ಕೆಲ ಅಪರೂಪದ ಮಾಹಿತಿಗಳು ಹೀಗಿವೆ.

 • ಅಟಲ್ ಜಿ ಮತ್ತು ಅವರ ತಂದೆ ಇಬ್ಬರೂ ಕಾನ್ ಪುರದ ವಿದ್ಯಾರ್ಥಿನಿಲಯದ ಒಂದೇ ಕೊಠಡಿಯಲ್ಲಿ ಇದ್ದು ಕೊಂಡು ಒಂದೇ ಕಾಲೇಜಿನಲ್ಲಿ ಒಟ್ಟಿಗೆ ಕಾನೂನು ಪದವಿ ಓದಿದ್ದರಂತೆ
 • ವಾಜಪೇಯಿಯವರು 1957 ರಿಂದ 2004 ರವರೆಗೆ 11 ಭಾರಿ ಸಂಸತ್ತಿಗೆ ಆಯ್ಕೆಯಾಗಿ, ಅತ್ಯಂತ ಹೆಚ್ಚು ವರ್ಷಗಳ ಕಾಲ ಸಂಸತ್ತಿನ ಸಕ್ರಿಯ ಸದಸ್ಯರಾಗಿದ್ದವರಲ್ಲಿ ವಾಜಪೇಯವರೂ ಒಬ್ಬರು.
 • ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ದೆಹಲಿ ಹೀಗೆ ಬೇರೆ ಬೇರೆ ಅವಧಿಯಲ್ಲಿ ನಾಲ್ಕು ವಿವಿಧ ರಾಜ್ಯಗಳಿಂದ ಸಾಂಸದರಾಗಿ ಚುನಾಯಿತರಾದ ಹೆಗ್ಗಳಿಕೆಯೂ ವಾಜಪೇಯಿಯವರದ್ದಾಗಿದೆ.
 • ಕಾಂಗ್ರೇಸ್ಸೆತರ ಪ್ರಧಾನಿಯಾಗಿ ಸಂಪೂರ್ಣ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ ಮೊದಲ ಪ್ರಧಾನಿ ವಾಜಪೇಯಿಯವರು
 • ಪ್ರಧಾನಿಗಳಾಗಿದ್ದರೂ ಸ್ವಂತ ಮನೆಯನ್ನು ಹೊಂದಿರದಿದ್ದ ಹೆಗ್ಗಳಿಗೆ ಇಬ್ಬರು ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ವಾಜಪೇಯಿಯವರಿಗೆ ಸೇರುತ್ತದೆ.
 • ವಾಜಪೇಯಿಯವರು ಆಜನ್ಮ ಅವಿವಾಹಿತರಾಗಿದ್ದರು
 • ಭಾರತ ರತ್ನ ವಾಜಪೇಯಿಯವರ ಹುಟ್ಟುಹಬ್ಬವಾದ ಡಿಸೆಂಬರ್ 25ರನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗತ್ತದೆ

WhatsApp Image 2022-12-25 at 10.45.07ಹೀಗೆ ಪತ್ರಿಕೋದ್ಯಮದಲ್ಲಿ ಆಸ್ತಕ್ತಿಹೊಂದಿದ್ದಂತಹ ಅಟಲ್ ಬಿಹಾರಿ ವಾಜಪೇಯಿಯವರು ಅಚಾನಕ್ ಆಗಿ ರಾಜಕೀಯ ಪ್ರವೇಶಿಸಿಸಿ, ದೇಶದ ಜನರ ಅತ್ಯಂತ ಪ್ರೀತಿಗೆ ಪಾತ್ರರಾಗಿದ್ದಲ್ಲದೇ, ದೇಶ ಕಂಡ ಅಪರೂಪದ ರಾಜಕಾರಣಿ ಎನಿಸಿಕೊಂಡಿದ್ದು ಅವರ ಹೆಗ್ಗಳಿಕೆ, ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ. ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s