ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಕಳೆದ ವಾರ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ ಎಂದು  ಕೆಲವು ಸ್ವಘೋಷಿತ ಬುದ್ದೀಜೀವಿಗಳು ಆರೋಪಿಸಿ ಕಸಾಪ ಸಾಹಿತ್ಯ ಸಮ್ಮೆಳನಕ್ಕೆ ಪರ್ಯಾಯವಾಗಿ ಬಿಳೆಮಲೆ ಅವರ ನೇತೃತ್ವದಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಹೆಸರಿನಲ್ಲಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಸೇರಿಕೊಂಡು ಜ.8ರಂದು ಬೆಂಗಳೂರಿನ ಕೆ.ಆರ್‌.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್‌ ಆವರಣದಲ್ಲಿ ಪ್ರತಿರೋಧ ಸಮಾವೇಷ ಆಯೋಜಿಸಲಾಗಿತ್ತು.

ಸಂತ ಶಿಶುನಾಳ‌ ಷರೀಫರು ಹುಟ್ಟಿದಂತಹ, ಎಸ್. ಕೆ. ಕರೀಂ ಖಾನ್ ಮತ್ತು ನಿಸಾರ್ ಅಹಮದ್ ಅವರಂತಹ ಶ್ರೇಷ್ಠ ಕನ್ನಡ ಸಾಹಿತಿಗಳನ್ನು ತಲೆಯ ಮೇಲೆ ಹೊತ್ತು ಭಾವೈಕ್ಯತೆಯನ್ನು ಮೆರೆಸಿದಂತಹ  ನಾಡಿನಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗಿದೆ ಎಂದು ಬೊಬ್ಬಿಡುತ್ತಿರುವ ಸಂದರ್ಭದಲ್ಲಿಯೇ, ಇದು ಕನ್ನಡ ಸಾಹಿತ್ಯ ಸಮ್ಮೇಳನವೇ ಹೊರತು ಹೊರತು ಧರ್ಮ-ಜಾತಿ ಆಧಾರಿತ ಸಮ್ಮೇಳನವಲ್ಲ. ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗನೇ ಸಾರ್ವಭೌಮ. ಹಾಗಾಗಿ ಕನ್ನಡದವರಾಗಿ ಕನ್ನಡಿಗರಿಗಾಗಿಯೇ ಕನ್ನಡದ ಸಾಹಿತ್ಯ ಸಮ್ಮೇಳನ ಮಾಡಿದ್ದೇವೆ ಎಂದು ಕಸಾಪ ಅಧ್ಯಕ್ಷ ಶ್ರೀ ಜೋಶಿಯವರು ತಿರುಗೇಟು ನೀಡಿದ ಕೇವಲ ಎರಡೇ ದಿನಗಳಲ್ಲಿಯೇ. ಗಡಿನಾಡು ಕನ್ನಡಿಗರಿಗೆ ಸೇರಲ್ಪಡುವ ಕನ್ನಡದ ಖ್ಯಾತ ಮತ್ತು ಹಿರಿಯ ಲೇಖಕಿ ಮತ್ತು ಮುಸ್ಲಿಂ ಹೆಣ್ಣು ಮಕ್ಕಳ ವಿರುದ್ದ ಖಟ್ಟರ್ ಮುಸಲ್ಮಾನರ ಅಸಡ್ಡೆಯ ಕುರಿತಾಗಿ ಸುದೀರ್ಘಕಾಲ ಗಟ್ಟಿಯಾದ ಧನಿಯನ್ನು ಎತ್ತಿದ್ದ ಶ್ರೀಮತಿ ಸಾರಾ ಅಬೂಬಕ್ಕರ್‌ ತಮ್ಮ 86ನೇ ವಯಸ್ಸಿನಲ್ಲಿ ದಿನಾಂಕ 10.01.2023 ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾರಣಗಳಿಂದ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಬಡವಾಗಿದೆ ಎಂದರೂ ತಪ್ಪಾಗದು

sara7ಗಡಿನಾಡು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ನ್ಯಾಯವಾದಿಗಳಾಗಿದ್ದ ಮಲೆಯಾಳಂ ಮಾತೃಭಾಷೆಯ ಶ್ರೀ ಪಿ. ಅಹಮದ್ ಮತ್ತು ಶ್ರೀಮತಿ ಜೈನಾಬಿ ದಂಪತಿಗಳಿಗೆ ಜೂನ್ 30, 1936 ರಂದು ಜನಿಸಿದ ಮಗುವಿಗೆ ಅರಬ್ಬಿ ಭಾಷೆಯಲ್ಲಿ ಸಂತೋಷದಾಯಕ ರಾಜಕುಮಾರಿ ಎಂಬರ್ಥ ಬರುವ ಸಾರಾ ಎಂದು ನಾಮಕರಣ ಮಾಡುತ್ತಾರೆ. ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗ ಬಾರದು ಎಂಬ ಅಲಿಖಿತ ನಿರ್ಭಂಧ ಇದ್ದಂತಹ ದಿನಗಳಲ್ಲಿಯೂ ಸಹಾ ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನಡೆದು, ನಂತರ ಕಾಸರಗೋಡಿನಲ್ಲಿ ಹೈಸ್ಕೂಲಿನವರೆಗೆ ಶಿಕ್ಷಣ ಮುಂದುವರೆಯುತ್ತದೆ.

sara6ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಹೊಂದಿದ್ದರೂ, ಮನೆಯವರ ಒತ್ತಾಯಕ್ಕೆ ಮಣಿದು ಬಾಲ್ಯದಲ್ಲೇ ಎಂಜಿನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಂದಿಗೆ ಸಾರಾ ಅವರ ವಿವಾಹವಾಗಿ ಸಂಸಾರದ ಸಾಗರದಲ್ಲಿ ಮುಳುಗಿದ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಮುಂದುರೆಸಲು ಸಾಧ್ಯವಾಗದೇ ಹೋದರೂ ಮನೆಯಲ್ಲೇ ಕುಳಿತು. ಶಿವರಾಮ ಕಾರಂತರು, ಇನಾಂದಾರ್, ಎಸ್ ಎಲ್ ಭೈರಪ್ಪ, ಅನಂತಮೂರ್ತಿ ಅವರುಗಳ ಕೃತಿಗಳ ಜೊತೆಗೆ ಮನೋವಿಜ್ಞಾನದ ಆಧರಿತ ತ್ರಿವೇಣಿಯವರ ಕಾದಂಬರಿಗಳು ಸಾರಾ ಅವರಲ್ಲಿನ ಬರಹಗಾರ್ತಿಯನ್ನು ಜಾಗೃತಗೊಳಿಸುತ್ತದೆ.

sara3ಹೀಗೆ ಜಾಗೃತ ಗೊಂಡ ಅವರೊಳಗಿನ ಬರಹಗಾರ್ತಿ ಮುಸ್ಲಿಂ ಧರ್ಮದಲ್ಲಿದ್ದ ಕಟ್ಟು ಪಾಡುಗಳಿಗೆ ಅನುಗುಣವಾಗಿ ತಮ್ಮ ಸುತ್ತಮುತ್ತಲಿನ ಬಡ ಕುಟುಂಬಗಳಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಹೆಣ್ಣು ಮಕ್ಕಳಿಗೆ ಪರದೆ ಹಾಕಿಸಿ, ಮನೆಯ ಹೊರಗೆ ಬಾರದಂತೆ ತಡೆದು ಬರೀ ಮಕ್ಕಳನ್ನು ಹೆರುವ ಯಂತ್ರಗಳಂತೆ ಹೆಣ್ಣುಮಕ್ಕಳ ಮೇಲೆ ಅವ್ಯಾಹತವಾಗಿ ಆಗುತ್ತಿದ್ದ ದಬ್ಬಾಳಿಕೆ, ಅದಕ್ಕೆ ಪ್ರತಿರೋಧಿಸಿದವರಿಗೆ ಗಂಡಸರು ನೀಡುತ್ತಿದ್ದ ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಇವೆಲ್ಲವೂ ಆವರಿಗೆ ಬೇಸರ ತರಿಸಿ, ಮುಸ್ಲಿಂ‌ ಹುಡುಗಿ ಶಾಲೆ‌ ಕಲಿತದ್ದು ಎಂಬ ಬರೆಹದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಸಾರಾ ಅಬೂಬ್ಕರ್ ಅವರು ನಂತರ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆಯನ್ನು ಹೊಂದಿದ್ದಂತಹ ಮುಸಲ್ಮಾನರ ಕೆಲವು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುವ ವಿಷಯದ ಆಧಾರಿತವಾದ ತಮ್ಮ ಚೊಚ್ಚಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಬಿಡುಗಡೆಯಾಗಿ ಅತ್ಯಂತ ಜನಪ್ರಿಯವಾಗಿ ನಾಡಿನ ಸಾಹಿತ್ಯಾಸಕ್ತರ ಗಮನವನ್ನು ಸೆಳೆಯುತ್ತದೆ. ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

sara1ಮಹಿಳಾ ಸಂವೇದನೆಯ ಪ್ರಖರ ಬರಹಗಳ ಮೂಲಕ ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸೌದಿಯ ವಹಾಬಿಸಂ ವಿರುದ್ಧ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಾರೆ. ತಮ್ಮ ಕಥೆ, ಕಾದಂಬರಿ, ನಾಟಕ ಸೇರಿದಂತೆ ಹತ್ತು ಹಲವಾರು ಕೃತಿಗಳು ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಪಠ್ಯಗಳೂ ಆಗಿರುವುದಲ್ಲದೇ, ಅನೇಕ ಕೃತಿಗಳು ಸಿನಿಮಾಗಳಾಗಿ ಬೆಳ್ಳಿ ಪರದೆಯ ಮೇಲೆ ಹೆಸರು ಮಾಡಿವೆ. ಚೊಚ್ಚಲು ಕಾದಂಬರಿ ಚಂದ್ರಗಿರಿ ತೀರದಲ್ಲಿ ಸಾಕಷ್ಟು ಜನಪ್ರಿಯತೆಯ ನಂತರ ಸಹನಾ, ವಜ್ರಗಳು, ಸುಳಿಯಲಿ ಸಿಕ್ಕವರು, ಇಳಿಜಾರು, ಚಪ್ಪಲಿಗಳು, ಖೆಡ್ಡ, ಗಗನ ಸಖಿ ಹೀಗೆ ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ‌ ನಾಟಕ, ಲೇಖನ, ಪ್ರವಾಸ ಕಥನಗಳಲ್ಲದೇ, ಮಲೆಯಾಳಂ ನಿಂದ ಕನ್ನಡಕ್ಕೆ ಅನೇಕ ಅನುವಾದಗಳನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಾರೆ.

sara5ಮುಸಲ್ಮಾನ ಕುಟುಂಬದಲ್ಲಿ ಜನಿಸಿಯೂ ಪ್ರಗತಿಪರ ಮಹಿಳಾ ಹೋರಾಟಗಾರ್ತಿಯಾಗಲೂ ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದಾಗ, ನನ್ನ ಅಜ್ಜ ಪುಡಿಯಾಪುರ ಮಹಮದ್ ಅವರು ಕೇರಳದ ಕಾಸರಗೋಡಿನಲ್ಲಿ ಕೃಷಿಕರಾಗಿದ್ದರು. ಹಳೆಯ ಕಾಲದವರಾಗಿದ್ದರೂ ಪ್ರಗತಿಪರ ಧೋರಣೆ ಹೊಂದಿದ್ದರು. ಅವರ ಕಾಲದಲ್ಲೇ ಮಹಿಳಾ ಸ್ವಾತಂತ್ರ್ಯದ ಕನಸು ಕಂಡಿದ್ದರು. ನನ್ನ ತಂದೆ ಪುಡಿಯಾಪುರ ಅಹಮದ್ ವಕೀಲರಾಗಿದ್ದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಏನನ್ನೇ ಆದರೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬ ಪಾಠ ನನಗೆ ಹೇಳಿಕೊಟ್ಟರು. ಹಾಗಾಗಿಯೇ ನನ್ನನ್ನು ಎಲ್ಲಾ ಪ್ರತಿರೋಧದ ನಡುವೆಯೂ ಶಾಲೆಗೆ ಸೇರಿಸಿ ಓದಿಸಿದರು. ಇದರಿಂದಾಗಿ ನಾನು ಪ್ರತಿಯೊಂದನ್ನೂ ಪ್ರಶ್ನಿಸಲು ಆರಂಭಿಸಿದೆ. ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್‌ವರೆಗೆ ಮಾತ್ರ (11ನೇ ತರಗತಿ) ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತಾದರೂ, ಮದುವೆ ಆದ ನಂತರ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಅಂದಿನ ಸಮಾಜ ಸಹಿಸುತ್ತಿರಲಿಲ್ಲವಾದ್ದರಿಂದ ನಾನು ಓದನ್ನು ಮುಂದುವರೆಸಲು ಆಗಲಿಲ್ಲ. ನನಗೆ ಆದ ತೊಂದರೆ ಬೇರೇ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆಗಕೂಡದು, ಮುಸ್ಲಿಂ ಹೆಣ್ಣು ಮಕ್ಕಳಿಎ ಶಿಕ್ಷಣ ಕೊಡಿಸಲೇ ಬೇಕಾದರೆ, ನಾವು ಬೀದಿಗಿಳಿದು ಹೋರಾಡಲೂ ಸಹಾ ಸಿದ್ಧವಾಗಿರಬೇಕು ಎಂದು ನಿರ್ಧರಿಸಿಯೇ ಅದರ ಕುರಿತಾಗಿ ಲೇಖನಗಳನ್ನು ಬರೆಯುವ ಮೂಲಕ ಜನ ಜಾಗೃತಿ ಮೂಡಿಸಿದೆ ಎಂದು ಹೇಳಿಕೊಂಡಿದ್ದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯ ಬೇಕೆಂದು ನಿರಂತರವಾಗಿ ಪ್ರತಿಪಾದಿಸುತ್ತಿದ್ದ ಸಾರಾ ಅಬೂಬಕ್ಕರ್, ಕೆಲವು ಮುಸ್ಲಿಂ ಮುಲ್ಲಾಗಳು ಹೆಣ್ಣು ಮಕ್ಕಳು ಪ್ರಾಣಿಗಳು, ಮತ್ತು ಅವರು ಕೇವಲ ಮಕ್ಕಲನ್ನು ಹೆರಲು ಇರುವ ಯಂತ್ರಗಳು ಎಂದೇ ಅಪಾರ್ಥ ಮಾಡಿಕೊಂಡಿದ್ದಾರೆ ನಿಜವಾಗಿಯೂ ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ ವಹಾಬಿಸಂ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಸಂಸಾರದ ನಿರ್ವಹಣೆಗಾಗಿ ದೂರದ ದುಬೈನಲ್ಲೋ ಅಥವಾ ಮತ್ತೊಂದೆಡೆಯೋ ಕೆಲಸ ಮಾಡುತ್ತಾ, ತನ್ನ ಸಂಸಾರಕ್ಕೆ ಪತಿ ಹಣ ಕಳುಹಿಸುತ್ತಾನೆ. ಆದರೆ ಶಿಕ್ಷಣದ ಅರಿವಿಲ್ಲದ ಹೆಣ್ಣು ಮಕ್ಕಳು ಆ ಹಣವನ್ನು ಸರಿಯಾಗಿ ನಿರ್ವಹಿಸಲೂ ಪರದಾಡುವಾಗ ಮಕ್ಕಳು ಅದರ ದುರ್ಬಳಕೆ ಮಾಡಿಕೊಂಡು ಮಜಾ ಮಾಡುತ್ತಾ ಹಾಳಾಗಿ ಹೋಗಿರುವ ಅನೇಕ ಉದಾಹರಣೆಗಳನ್ನು ನೀಡುತ್ತಾ, ಈ ಸಮಸ್ಯೆ ಪರಿಹಾರವಾಗಲು ಎಲ್ಲಾ ಮಹಿಳೆಯರಿಗೂ ಶಿಕ್ಷಣವನ್ನು ಕೊಡಲೇ ಬೇಕು. ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣದ ಅತ್ಯಗತ್ಯ ಎಂದೇ ಪ್ರತಿಭಾರಿಯೂ ಪ್ರತಿಪಾದಿಸುತ್ತಿದ್ದರು.

sara2ಬೆಂಗಳೂರಿನಲ್ಲಿ ನಡೆದ 7ನೇ ಲೇಖಕಿಯರ ಸಮ್ಮೇಳನದ ಅಧ್ಯಕ್ಷೆಯಾಗಿದ್ದಾಗ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳಾ ಸಾಹಿತ್ಯ ಅನ್ನೊ ವಿಭಜನೆ ತರವಲ್ಲ ಅಂತ ಹೇಳಿದ್ದಕ್ಕೆ, ಹಾಗಾದರೆ ಲೇಖಕಿಯರ ಸಮ್ಮೇಳನ ಅಂತ ಪ್ರತ್ಯೇಕವಾಗಿ ನಡೆಸೋದು ಸಹಾ ವಿಭಜಿಸುವ ಪ್ರಕ್ರಿಯೆಯೇ ಅಲ್ಲವೆ? ಎಂದು ಪ್ರಶ್ನಿಸಿದಾಗ, ಇದು ಖಂಡಿತವಾಗಿಯೂ ವಿಭಜನೆಯಾಗಿರದೇ, ಎಲ್ಲಾ ಲೇಖಕಿಯರೂ ಒಂದೆಡೆ ಕಲೆತು ಒಟ್ಟಿಗೆ ಬೆರೆಯುವ ಸಂದರ್ಭವಷ್ಟೇ. ಹೀಗೆ ಒಗ್ಗಟ್ಟಾಗಿ ಕುಳಿತು ನಮ್ಮ ಬರಹಗಳನ್ನು ಚರ್ಚೆ ಮಾಡದೇ ಹೋದಲ್ಲಿ ನಮ್ಮ ಲೇಖಕಿಯರ ಅಸ್ತಿತ್ವವೇ ಅಳಿಸಿ ಹೋಗಿ ದೂರ ಸರಿದು ಹೋಗುವ ಕಾರಣ, ಇದು ನಮ್ಮ ಅಸ್ಮಿತೆಯ ಪ್ರಶ್ನೆ ಎಂದು ಮುಗ್ಧವಾಗಿ ಹೇಳಿದ್ದದಲ್ಲದೇ ಮತ್ತೊಮ್ಮೆ, ಮಹಿಳಾ ಸಾಹಿತ್ಯದ ಕುರಿತು ಪುರುಷರು ತೋರುವ ಅಸಡ್ಡೆಯ ಬಗ್ಗೆಯ ಕೋಪದಿಂದ ಮಂಡ್ಯದಲ್ಲಿ ಒಮ್ಮೆ ಭಾಷಣ ಮಾಡುತ್ತಾ, ಎಲ್ಲಿಯವರೆಗೂ ಪುರುಷರು ಮಹಿಳೆಯರ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೋ ಅಲ್ಲಿಯವರೆಗೂ ಮಹಿಳೆಯರು ಭೈರಪ್ಪನಂತಹ ಪುರುಷರ ಸಾಹಿತ್ಯಗಳನ್ನು ಓದುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆ ನೀಡುವ ಮೂಲಕ ವಿವಾದಕ್ಕೂ ಕಾರಣವಾಗಿದ್ದರು. ಈ ರೀತಿಯಾದ ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಾಗೋದು ಸಾರಾ ಸರ್ವೇ ಸಾಮಾನ್ಯ ನಡೆ ಎಂದೂ ಆ ಹೇಳಿಕೆ ಹೆಚ್ಚಿನ ವಿವಾದವಾಗಿರಲಿಲ್ಲ ಎನ್ನುವುದು ಈಗ ಇತಿಹಾಸ.

sara4ಸಾರಾ ಅಬೂಬಕ್ಕರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹತ್ತು ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ.

ಈ ರೀತಿ ಖಟ್ಟರ್ ಮುಸಲ್ಮಾನರ ನಡೆಗಳನ್ನು ದಿಟ್ಟವಾಗಿ ಎದುರಿಸಿದ್ದ ಮಹಿಳಾ ಲೇಖಕಿ, ದೀರ್ಘ ಕಾಲದ ಅನಾರೋಗ್ಯದಿಂದ ಬಳಲಿದ ನಂತರ ದಿನಾಂಕ 10.01.2023 ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾಗುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಪರವಾಗಿ ಪ್ರಗತಿ ಪರ ಧೋರಣೆಯ ಧನಿಯೊಂದು ಅಸ್ತಂಗತವಾಗಿ ಹೋದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೆಣ್ಣು ಸಂಸಾರದ ಕಣ್ಣು ಅದರಲ್ಲೂ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದಕ್ಕೆ ಅಕ್ಷರಶಃ ಪ್ರತಿರೂಪವಾಗಿ ಹೆಣ್ಣು ವಿದ್ಯಾವಂತೆಯಾದಾಗ ಕುಟುಂಬವು ಹೇಗೆ ಸಂಸ್ಕಾರಯುತವಾಗಬಲ್ಲದು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದ್ದ ಶ್ರೀಮತಿ ಸಾರಾ ಅಬೂಬ್ಕರ್ ಅವರಂತಹ ಪ್ರಗತಿ ಪರ ಮುಸಲ್ಮಾನ ಹೆಣ್ಣುಮಕ್ಕಳ ಸಂತತಿ ಅಗಣಿತವಾಗಲಿ ಎನ್ನುವುದೇೆ ಎಲ್ಲರ ಬಯಕೆಯಾಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

One thought on “ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

  1. ಅತ್ತ್ಯುತ್ತಮ ಲೇಖನ, ಸಾಹಿತ್ಯ ಎನ್ನುವುದು ಯಾರ ಸ್ವಂತ ಅಸ್ತಿಯಲ್ಲ. ನಮ್ಮ ಸಮಾಜದ ನಿಯಮದೊಳಗೆ ಓದುಗರನ್ನು ಚಿಂತನೆ ಗೇ ಹಚ್ಚಿದ ಹಿರಿಮೆ ಸಾರ ಅವರದ್ದು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s