ಕರ್ನಾಟಕದ ರಾಜ್ಯದಲ್ಲಿ ಇನ್ನೇನು ಮೂರ್ನಾಲ್ಕು ತಿಂಗಳಿನಲ್ಲಿಯೇ ವಿಧಾನಸಭಾ ಚುನಾವಣೆ ಇರುವುದರಿಂದ ಎಲ್ಲೆಡೆಯೂ ರಾಜಕಾರಣಿಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ಹಳ್ಳ ಕೊಳ್ಳಗಳ ರಸ್ತೆಗಳೂ ರಾತ್ರೋ ರಾತ್ರಿ ಡಾಂಬರ್ ಹಾಕಿಸಿಕೊಂಡು ಮದುವೆಗೆ ಸಿಂಗಾರಗೊಂಡ ಮಧುವಣಗಿತ್ತಿಯಂತೆ ಅಲಂಕರಿಸಿಕೊಂಡಿವೆ. ಇನ್ನು ದೇವರನ್ನೇ ನಂಬದ, ಅಲ್ಪಸಂಖ್ಯಾತರ ಓಲೈಕೆಗಾಗಿ ರಾಮನ ಅಸ್ಥಿತ್ವವನ್ನು ಪ್ರಶ್ನಿಸಿದ್ದವರೂ, ಇದ್ದಕ್ಕಿದ್ದಂತೆಯೇ ತಮ್ಮ ಖರ್ಚಿನಲ್ಲೇ ಸಂಪೂರ್ಣ ರಾಮಾಯಣ ನಾಟಕವಾಡಿಸಿ ನಾವೂ ಸಹಾ ಹಿಂದೂಗಳೇ ಎಂದು ಹೇಳಿಕೊಳ್ಳುತ್ತಿರುವುದೂ ಸಹಾ ಅಚ್ಚೇ ದಿನ್ ಆಗಯೇ ಹೈ ಎನ್ನುವುದಕ್ಕೆ ಪುರಾವೆಯಾಗುತ್ತಲಿದೆ.
ಇವೆಲ್ಲದರ ಮಧ್ಯೆ ಎಲ್ಲರ ಗಮನ ಈ ರಾಜ್ಯ ಕಂಡ ಅತ್ಯಂತ ದುರಹಂಕಾರಿ ರಾಜಕಾರಣಿ ಎಂದರೂ ತಪ್ಪಾಗದ, ಸಮಾಜವಾದಿ ಎಂದು ಹೇಳಿಕೊಳ್ಳುತ್ತಲೇ, ಹುಬ್ಲೋಟ್ ವಾಚ್ ಧರಿಸುವಂತಹ ಮಜಾವಾದಿ ಮತ್ತು ತನ್ನ ಸ್ವಾರ್ಥಕ್ಕೆ, ಅಧಿಕಾರಕ್ಕಾಗಿ ಎಂತಹ ಹೀನ ಕೆಲಸ ಮಾಡಲೂ ಹಿಂದೂ ಮುಂದೂ ನೋಡದ, ರಾಜ್ಯ ಕಂಡ ಅತ್ಯಂತ ಹುಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದಾಗಿತ್ತು. ಅಧಿಕೃತವಾಗಿ 74 ವರ್ಷವಾಗಿದ್ದರೂ, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಲಕ್ಷಾಂತರ ಜನರಿಗೆ ಹೆಂಡ ಹಣ ನೀಡಿ ವಾಹನಗಳಲ್ಲಿ ದಾವಣಗೆರೆಗೆ ಕರೆತಂದು ತನ್ನ 75ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ತಾನು ಇನ್ನೂ ಪ್ರಭಲವಾದ ಅಹಿಂದ ನಾಯಕ ಎಂದು ಕಾಂಗ್ರೇಸ್ ಪಕ್ಷಕ್ಕೆ ತೋರಿಸುತ್ತಾ, ಅಧಿಕೃತವಾಗಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಎನ್ನುವಂತೆ ಮತ್ತೊಮ್ಮೆ ಮುಖ್ಯಮಂತ್ರಿಯ ಗಾದಿಯ ಮೇಲೆ ಟವಲ್ ಹಾಕಿದ್ದ ಸಿದ್ದರಾಮಯ್ಯನವರಿಗೆ, ನಿಜ ಹೇಳಬೇಕೆಂದರೆ ಧೈರ್ಯದಿಂದ ಸ್ಪರ್ಧೆ ಮಾಡಿ ಗೆಲ್ಲಬಹುದಾಗಿದ್ದ ಒಂದು ಸುರಕ್ಷಿತ ಕ್ಷೇತ್ರವೇ ಇಲ್ಲವಾಗಿರುವುದು ರಾಜಕೀಯ ಅಚ್ಚರಿಗೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಿದ್ದಾಗ, ಅಕ್ಕಿ ಕೊಟ್ಟೇ, ಬೇಳೆ ಕೊಟ್ಟೇ, ಶಾದಿ ಭಾಗ್ಯ ಕೊಟ್ಟೇ.. ಆ ಭಾಗ್ಯ,ಈ ಭಾಗ್ಯದ ಮೂಲಕ ಇಡೀ ಕರ್ನಾಟಕಕ್ಕೆ ಸೌಭಾಗ್ಯವನ್ನು ಕೊಟ್ಟೇ ಎಂದು ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾವನ್ನು ಮಗ ಯತೀಂದ್ರನಿಗೆ ಬಿಟ್ಟು ಕೊಟ್ಟು ಪಕ್ಕದ ಕ್ಷೇತ್ರವೇ ಆಗಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿ ಗೆದ್ದೇ ಗೆಲ್ಲುವೆನೆಂಬ ಅತಿಯಾದ ಆತ್ಮವಿಶ್ವಾಸದಿಂದ ರಾಜ್ಯ ಪ್ರವಾಸ ಮಾಡಲು ಆರಂಭಿಸಿದರೂ, ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಸೋಲುವ ವಾಸನೆ ಬಡಿದ ಕಾರಣ, ತಮ್ಮ ಸ್ವಜಾತಿಯವರೇ ಹೆಚ್ಚಾಗಿದ್ದ ಬದಾಮಿಯಲ್ಲೂ ಸ್ಪರ್ಧೆ ಮಾಡಿ, ಅಂತಿಮವಾಗಿ ಫಲಿತಾಂಶ ಹೊರಬಿದ್ದಾಗ, ಚಾಮುಂಡೇಶ್ವರಿಯಲ್ಲಿ ಮಖಾಡೆ ಬಿದ್ದು, ಬದಾಮಿಯಲ್ಲೂ ಕೇವಲ 1000+ ಓಟುಗಳಿಂದ ಗೆದ್ದರೂ ಸೋತಂತಾಗಿ ಹೋಗಿದ್ದಂತೂ ಸುಳ್ಳಲ್ಲ.
ಮುಖ್ಯಮಂತ್ರಿಯಾಗಿದ್ದು ಕೊಂಡೇ, ತಮ್ಮೂರು ಮೈಸೂರಿನಲ್ಲೇ ಹೇಳ ಹೆಸರಿಲ್ಲದೇ ಸೋತಿದ್ದಲ್ಲದೇ ಅಧಿಕಾರವನ್ನು ಮರಳಿ ಪಡೆಯಲಾಗದೇ, ಹಳೇ ಗಂಡನ ಪಾದವೇ ಗತಿ ಎಂದು ಅವಕಾಶವಾದಿ ಜೆಡಿಎಸ್ ಪಕ್ಷದ ಜೊತೆ ಅಪವಿತ್ರಮೈತ್ರಿಯನ್ನು ಮಾಡಿಕೊಂಡು ಕುಮಾರಸ್ವಾಮೀ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತಂದರೂ, ದೇವೇಗೌಡರು ಧರ್ಮಸಿಂಗ್ ಅವರನ್ನು ಕಾಡಿದಂತೆ ತನ್ನ ಹಿಂಬಾಲಕರ ಮೂಲಕ ಪ್ರತಿ ದಿನವೂ ಒಂದಲ್ಲಾ ಒಂದು ರೀತಿಯಲ್ಲಿ ಕುಮಾರಸ್ವಾಮಿಯನ್ನು ನೆಮ್ಮದಿಯಾಗಿ ಆಡಳಿತ ಮಾಡಲು ಬಿಡದೇ ಹೋದದ್ದು ಜನಸಾಮಾನ್ಯರಿಗೆ ಗೊತ್ತಿಲ್ಲದೇ ಇರುವ ವಿಷಯವೇನಲ್ಲ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯಾದಿಂದ ಸ್ಪರ್ಧೆ ಮಾಡಿದ್ದ ಕುಮಾರ ಸ್ವಾಮಿ ಮಗ ನಿಖಿಲ್ ಸೋಲಿಸಿದ್ದಲ್ಲದೇ, ಪರೋಕ್ಷವಾಗಿ ತಮ್ಮ ಶಿಷ್ಯರಲ್ಲಿ ಒಬ್ಬರಾದ ರಮೇಶ್ ಕುಮಾರ್ ಮುಖಾಂತರ ಕೋಲಾರದಲ್ಲಿ ಮುನಿಯಪ್ಪನವರ ಸೋಲಿಗೂ ಕಾರಣೀಭೂತರಾಗಿದ್ದು ಈಗ ಇತಿಹಾಸ. ನಂತರ ಮತ್ತೆ ತಮ್ಮ ಶಿಷ್ಯಂದಿರನ್ನೇ ಬಿಜೆಪಿಗೆ ಕಳುಹಿಸಿ, ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದು, ಜಟ್ಟಿ ಬಿದ್ದರೂ ಮೀಸೇ ಮಣ್ಣಾಗಲಿಲ್ಲಾ ಎನ್ನುವಂತೆ ದುರ್ಬಲ ಕಾಂಗ್ರೇಸ್ ಹೈಕಮಾಂಡನ್ನು ಹೆಸರಿಸಿ, ಬೆದರಿಸಿ ಬ್ಲಾಕ್ ಮೇಲ್ ಮುಖಾಂತರ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದುಕೊಂಡಿದ್ದು ಈಗ ಇತಿಹಾಸ.
ಇಷ್ಟೆಲ್ಲಾ ಕರಾಳ ಇತಿಹಾಸ ಇರುವ ಸಿದ್ದರಾಮಯ್ಯರಿಗೆ 2023ರ ಚುನಾವಣೆಗೆ ಒಂದುವರೇ ವರ್ಷ ಇರುವಾಗಲೇ ಅಭಿವೃದ್ಧಿಯನ್ನೇ ಮಾಡದ ಬದಾಮಿಯಲ್ಲಿ ಮತ್ತೆ ನಿಂತರೆ ಗೆಲ್ಲಲು ಅಸಾಧ್ಯ ಎಂಬುದನ್ನು ಅರಿತು, ಸುರಕ್ಷಿತವಾದ ಕ್ಶೇತ್ರವನ್ನು ಅರೆಸುತ್ತಾ ಅಂಡು ಸುಟ್ಟ ಬೆಕ್ಕಿನಂತೆ ರಾಜ್ಯಾದ್ಯಂತ ಆಡ್ಡಾಡುತ್ತಾ ಅಂತಿಮವಾಗಿ ಅಹಿಂದ ಮತಗಳ ಆಧಾರದ ಮೇಲೆ ಸುರಕ್ಷಿತ ಎಂದು ಭಾವಿಸಿ, ತಮ್ಮ ಕ್ಷೇತ್ರ ಹುಡುಕಾಟಕ್ಕೆ ಕೊನೆಯನ್ನು ಮಾಡಿ ಕಳೆದ ವಾರ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾದ ಘೋಷಣೆ ಮಾಡುವ ಮೂಲಕ ತಮ್ಮ ಘೋರಿಯನ್ನು ತಾವೇ ತೋಡಿಕೊಂಡರಾ? ಎಂಬ ಅನುಮಾನ ಮೂಡುತ್ತಿದೆ.
ಹೇಳೀ ಕೇಳಿ ತಮ್ಮ ಸೋಲಿಗೆ ಕಾರಣೀಭೂತರಾದ ರಮೇಶ್ ಕುಮಾರ್ ಮೇಲೆ ಮುನಿಯಪ್ಪನವರಿಗೆ ಸಿಟ್ಟಿದ್ದರೂ ಸಿದ್ದರಾಮಯ್ಯನವರ ಸಂಧಾನ ಫಲವಾಗಿ ಅವರಿಬ್ಬರೂ ಸಿದ್ದುವಿನ ಜೊತೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡರೂ ಒಬ್ಬರ ಮುಖ ಒಬ್ಬರು ನೋಡದೇ ಹೋಗಿರುವುದನ್ನು ಜನರು ಗಮನಿಸಿದ್ದಾರೆ. ಈ ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅವರಿಬ್ಬರ ನಡುವಿನ ವೈಮನಸ್ಯ ಯಾವಾಗ ಬೇಕಾದರೂ ಜ್ವಾಲಾಮುಖಿಯಂತೆ ಸ್ಪೋಟಗೊಂಡರೆ, ತಮ್ಮ ಬುಡಕ್ಕೇ ಬೆಂಕಿ ಬೀಳಬಹುದು ಎಂದು ಭಾವಿಸಿದ ಸಿದ್ದು ಮತ್ತೆ ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ನಿರ್ಧರಕ್ಕೆ ಬಂದಂತಿದೆ.
ಸಾಮಾನ್ಯವಾಗಿ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಿ ಅಧಿಕಾರಕ್ಕೆ ತಂದವರೇ ಮುಖ್ಯಮಂತ್ರಿಯನ್ನಾಗಿಸುವ ಸಂಪ್ರದಾಯವನ್ನು ಹೊಂದಿರುವ ಕಾಂಗ್ರೇಸ್ ಪಕ್ಷಕ್ಕೆ 2013ರಲ್ಲಿ ಕಾಂಗ್ರೇಸ್ ರಾಜ್ಯಾಧ್ಯಕ್ಷರಾಗಿದ್ದ ಪರಮೇಶ್ವರ್ ಅವರನ್ನು ಸದ್ದಿಲ್ಲದೇ ಸೋಲಿಸಿ ಅಧಿಕಾರಕ್ಕೆ ಏರಿದ್ದ ಸಿದ್ದುವಿನ ಬುದ್ದಿಯನ್ನು ಅರಿತ ಪ್ರಸಕ್ತ ರಾಜ್ಯದ ಕಾಂಗ್ರೇಸ್ ಪಕ್ಢಾಧ್ಯಕ್ಷ ಡಿ. ಕೆ. ಶಿವಕುಮಾರ್, ಪದೇ ಪದೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿರುವ ಸಿದ್ದುವಿಗೆ ಗುದ್ದು ನೀಡಲು ಸಜ್ಜಾಗಿದ್ದು ಅದಕ್ಕೆ ಮುಂಜಾಗೃತೆಯ ಕ್ರಮ ಎಂಬಂತೆ ಈ ಬಾರಿ ಎಷ್ಟೇ ದೊಡ್ಡ ನಾಯಕರಾದರೂ, ಒಬ್ಬರಿಗೆ ಒಂದೇ ಟಿಕೆಟ್ ಎಂದು ಕೆಲವು ತಿಂಗಳುಗಳ ಹಿಂದೆಯೇ ಘೋಷಣೆ ಮಾಡಿರುವುದರಿಂದ, ಅಪ್ಪಾ ಅಮ್ಮಾ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಮುನಿಯಪ್ಪಾ ಮತ್ತು ರಮೇಶ್ ಕುಮಾರ್ ಪರಸ್ಪರ ಕಿತ್ತಾಟದಿಂದಾಗಿ, ಕೋಲಾರದಲ್ಲಿ ಅಕಸ್ಮಾತ್ ತನಗೆ ಸೋಲಾದರೆ ಪರಿಸ್ಥಿತಿ ಚೆನ್ನಾಗಿ ಇರುವುದುದಿಲ್ಲಾ ಎಂಬುದನ್ನು ತಿಳಿದು ಮತ್ತೆ ಎರಡನೇ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು ತನ್ನ ಹುಟ್ಟೂರಿನ ದೈವವನ್ನು ಸಿದ್ದು ಬಳಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ವಿಷಾಧ ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದೆನಿಸುತ್ತಿದೆ.
ಜನ್ಮತಃ ಹಿಂದುವಾಗಿಯೂ, ಸದಾ ಕಾಲವೂ ಜಮೀರ್ ಅಹ್ಮದ್ ಅವರನ್ನು ಬೆನ್ನಿಗೆ ನೇತು ಹಾಕಿಕೊಂಡು, ತಲೆಯ ಮೇಲೆ ಮುಸಲ್ಮಾನರ ಟೋಪಿಯನ್ನು ಹಾಕಿಕೊಂಡು ಮಸೀದಿಯನ್ನು ಸುತ್ತುತ್ತಾ, ಹಿಂದೂ ವಿರೊಧೀ ಟಿಪ್ಪು ತನ್ನ ಸೋದರ ಮಾವ ಎನ್ನುವ ರೀತಿಯಲ್ಲಿ ಅಸಹ್ಯಕರವಾಗಿ ಹೊಗಳುತ್ತಾ, ಮುಸಲ್ಮಾನರ ಓಲೈಕೆಯನ್ನೇ ಮಾಡುತ್ತಾ, ಹಿಂದೂ ದೇವರನ್ನು ನಂಬದ, ಹಣೆಯ ಮೇಲೆ ಕುಂಕುಮ ಇಟ್ಟುಕೊಂಡವರು ಭಯೋತ್ಪಾದಕರಂತೆ ಕಾಣುತ್ತಾರೆ ಎನ್ನುವ, ಕೇಸರಿ ಪೇಟ ತೊಡಿಸಲು ಬಂದರೆ ಹಾವು ತುಳಿದಂತೆ ಬೆಚ್ಚಿ ಬೀಳುವ, ತಮ್ಮ ಅಧಿಕಾರಾವಧಿಯಲ್ಲಿ ಹಿಂದೂಗಳ ಮೌಡ್ಯ ಆಚರಣೆಯ ವಿರುದ್ಧ ಕಾನೂನನ್ನು ತರಲು ಹೊರಟ್ಟಿದ್ದ ಇದೇ ಸಿದ್ದು ಈಗ ತಮ್ಮ ಊರಿನ ಕುಲದೇವತೆಯ ಮೂಲಕ ಎರಡೂ ಕ್ಷೇತ್ರಗಳಲ್ಲಿ ನಿಲ್ಲಲು ಟಿಕೆಟ್ ನೀಡುವಂತೆ ಹೈಕಮ್ಯಾಂಡಿಗೆ ಮಹತ್ವದ ಸೂಚನೆಯೊಂದನ್ನು ರವಾನಿಸಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸಿದೆ.
ಮಂಡ್ಯದ ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಚೊಟ್ಟನಹಳ್ಳಿ ಗ್ರಾಮದಲ್ಲಿರುವ ತಮ್ಮ ಮನೆದೇವರು ಆದಿನಾಡು ಚಿಕ್ಕಮ್ಮದೇವಿ ದೇವಾಲಯಕ್ಕೆ ಮಾಜಿಸಚಿವ ನರೇಂದ್ರ ಸ್ವಾಮಿ ಜೊತೆಗೆ ತಮ್ಮ ಪುತ್ರ ಡಾ ಯತೀಂದ್ರ ಅವರನ್ನು ಕಳುಹಿಸಿ ಅಲ್ಲಿ ಪೂಜೆ ಸಲ್ಲಿಸುವ ವೇಳೆಯಲ್ಲಿ ದೇವಾಲಯದ ಅರ್ಚಕ ಡಾ. ಲಿಂಗಣ್ಣನವರ ಮೈ ಮೇಲೆ ಬಂದ ದೇವತೆ, ನಿಮ್ಮ ತಂದೆಯವರಿಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಹಾಗಾಗಿ ಒಂದು ಕಡೆ ಬಾಹುಬಲ ಚಾಚಿದ್ರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದ್ರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರ್ತಿನಿ ಎಂದು ನುಡಿದ ದೇವರು. ನಾನು ನಿಮ್ಮ ಮನೆ ದೇವತೆ ಗೊತ್ತಾ. ನಾನು ಮೂಲದೇವರು. ಬೇಕಾದ್ರೆ ಅವಕಾಶ ಸಿಕ್ಕಿದ್ರೆ ಯಾವಾಗಾದ್ರು ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ನಿಮ್ಮ ತಂದೆಯವರಿಗೆ ಹೇಳು ಎಂದು ಯತೀಂದ್ರ ಅವರಿಗೆ ಮೈಮೇಲೆ ಬಂದ ದೇವಿಯು ಹೇಳುವ ಮೂಲಕ ಸಿದ್ದುರವರಿಗೆ ಕೋಲಾರ ಕ್ಷೇತ್ರದ ಸೋಲಾಗುವ ಸಾಧ್ಯತೆ ಇರುವ ಕಾರಣ, ಮತ್ತೊಂದು ಸುರಕ್ಷಿತ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿಸುವಂತೆ ಸೂಚಿಸಲಾಗಿದೆ.
ದೇವರನ್ನೇ ನಂಬದ ಹುಂಬ ಸಿದ್ದರಾಮಯ್ಯನವರ ಈ ನಡೆ ನಿಜಕ್ಕೂ ರಾಜ್ಯದ ಜನರಿಗೆ ಹಾಸ್ಯಾಸ್ಪದ ಎನಿಸಿದ್ದು, ಪದೆ ಪದೇ ತನಗೇ ಎಲ್ಲಾ ಗೊತ್ತು. ತಾನೊಬ್ಬ ಮಾಸ್ ಲೀಡರ್, ತಾನೋಬ್ಬ ಮಹಾನ್ ಅಹಿಂದ ನಾಯಕ, ತಾನಿಲ್ಲದೇ ಕಾಂಗ್ರೇಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಬೊಬ್ಬಿರಿಯುವ ಮಾಜಿ ಮುಖ್ಯಮಂತ್ರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಆ ದೇವರು ಅಷ್ಟು ಶಕ್ತಿಶಾಲಿಯಾಗಿದ್ದಲ್ಲಿ ಕೋಲಾರದಲ್ಲೇ ಗೆಲ್ಲಿಸಲು ಸಾಧ್ಯವಿಲ್ಲವೇ? ಎಂದು ಸಹಾ ಆಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದು ಹೋಗಿ, ದೇವರನ್ನೇ ನಂಬದ, ಮಾಂಸ ಸೇವಿಸಿ ಶ್ರೀಕ್ಷೇತ್ರಗಳಿಗೆ ಭೇಟಿ ನೀಡಿ ಅದನ್ನು ಸಮರ್ಥನೆ ಮಾಡಿಕೊಳ್ಳುವ ಸಿದ್ದುವಿಗೆ ತಮ್ಮೂರಿನ ದೇವತೆಯು ಈ ರೀತಿ ಹೇಳಿರುವುದು ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎಂದೂ ಹೇಳುತ್ತಿರುವುದರಲ್ಲಿ ಸತ್ಯ ಇರಬಹುದು ಎಂದೆನಿಸುತ್ತಿರುವುದಂತೂ ಸುಳ್ಳಲ್ಲ.
ಒಟ್ಟಿನಲ್ಲಿ ಪದೇ ಪದೇ ತೊಡೆ ತಟ್ಟುತ್ತಾ, ದೊಡ್ದವರು ಚಿಕ್ಕವರು ಎನ್ನುವುದನ್ನೂ ನೋಡದೇ, ತನಗೇ ಎಲ್ಲಾ ಗೊತ್ತು ಎಂಬ ಹುಂಬತನದಲ್ಲಿ ಎಲ್ಲರನ್ನೂ ಏಕವಚನದಲ್ಲಿ ಸಂಬೋಧಿಸುತ್ತಾ, ಅನವಶ್ಯಕವಾಗಿ ಮತ್ತು ಅಷ್ಟೇ ಅಸಹ್ಯಕರವಾಗಿ ಸಮಾಜದ ಸೌಹಾರ್ಧತೆಯನ್ನು ಹಾಳು ಮಾಡುತ್ತಿರುವ ಮಾಜೀ ಮುಖ್ಯಮಂತ್ರಿಯವರು ಯಾವುದೇ ಕ್ಷೇತ್ರದಿಂದ ಮತ್ತು ಎಷ್ಟೇ ಕ್ಷೇತ್ರದಿಂದ ನಿಂತರೂ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸಿದ್ದುರವರ ರಾಜಕೀಯ ವಿರೋಧಿಗಳಿಗೆ ರಣವೀಳ್ಯವನ್ನು ಈಗಾಗಲೇ ಕೊಟ್ಟಿರುವುದಲ್ಲದೇ, ಸಿದ್ದುವಿನ ಅಕ್ಕ ಪಕ್ಕದಲ್ಲೇ ಇದ್ದು ಕೊಂಡೇ ಅವರ ಅರಿವಿಗೇ ಬಾರದಂತೆ ಅವರನ್ನು ಶತಾಯಗತಾಯ ಸೋಲಿಸುವ ಮೂಲಕ ಅವರ ರಾಜಕೀಯ ಅಂತ್ಯವನ್ನು ಹಾಡಲು ಸಜ್ಜಾಗಿರುವುದು ಸ್ಪಷ್ಟವಾಗಿದೆ.
ಇಷ್ಟು ವರ್ಷ ಇಂತಹದ್ದೇ ಮೀರ್ ಸಾದಿಕ್ ರಾಜಕೀಯವನ್ನೇ ಮಾಡಿಕೊಂಡೇ ಈ ಹಂತವನ್ನು ತಲುಪಿರುವ ಸಿದ್ದರಾಮಯ್ಯರಿಗೂ ಇವೆಲ್ಲಾ ವಿಷಯಗಳ ಅರಿವಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಸ್ವಯಂಕೃತಪರಾಧವಾಗಿ ಏನೂ ಮಾಡಲಾಗದಂತಹ ದೈನೇಸಿ ಸ್ಥಿತಿ ತಲುಪಿದ್ದಾರೆ. ಇವೆಲ್ಲದವರ ಜೊತೆಯಲ್ಲೇ ಪಾಪಿ ಸಾಯಲು ಸಮುದ್ರಕ್ಕೆ ಹೋದರೆ ಮೊಣಕಾಲುದ್ದ ನೀರು ಎನ್ನುವಂತೆ, ಕಳೆದ ಐದು ವರ್ಷಗಳಲ್ಲಿ ಎಲ್ಲಾ ಪಕ್ಷಗಳಿಗೂ ಹೋಗಿ, ಹೋದಡೆಯಲ್ಲೆಲ್ಲಾ ಪಕ್ಷದ ಅವನತಿಗೆ ಕಾರಣಿಭೂತರಾಗಿ ಐರನ್ ಲೆಗ್ ಎಂದೇ ಪ್ರಸಿದ್ಧಿಯಾಗಿರುವ ಹಳ್ಳಿ ಹಕ್ಕಿ ಎಂದು ಊರೂರು ಅಂಡೆಲೆಯುವ ಅಡಗೂರು ವಿಶ್ವನಾಥ್ ಸಹಾ ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರಿಕೊಂಡು ಕೋಲಾರದಲ್ಲಿ ಸಿದ್ದುನನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಸಿದ್ದು ಬೆನ್ನಿಗೆ ಬೇತಾಳದಂತೆ ಬಿದ್ದಿರುವುದು ಸಹಾ ಸಿದ್ದೂವಿನ ಅವನತಿಗೆ ಮುನ್ಸೂಚನೆಯಾಗಿದೆ ಎಂದೇ ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದಲೂ ಇದೇ ನನ್ನ ಕಡೇ ಚುನಾವಣೆ ಇದೇ ನನ್ನ ಕಡೇ ಚುನಾವಣೆ ಎನ್ನುತ್ತಲೇ ಬಾರಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಕಾಣುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇವೆಲ್ಲಕ್ಕೂ ಸಡ್ಡು ಹೊಡೆದು ಸಂಕಟ ಬಂದಾಗ ವೆಂಕಟರಮಣ ಎಂದು ತಮ್ಮ ದೈವವನ್ನು ನಂಬಿಕೊಂಡು ಮತ್ತೆ ತ್ರಿವಿಕ್ರಮನಂತೆ ಮೆಟ್ಟಿ ನಿಲ್ಲಬಲ್ಲರೇ ? ಎಂಬುದೇ ಈಗ ಕುತೂಹಲದ ಸಂಗತಿಯಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ