ಸುಮಾರು 10-12 ಹಿಂದೆ ನಮ್ಮ ಪಕ್ಕದ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದಾಗ ಒಬ್ಬ ಕುಳ್ಳಗಿನ ಬೆಳ್ಳಗಿನ, ಬಿಳಿ ಪೈಜಾಮ ಮತ್ತು ಜುಬ್ಬಾ ಧರಿಸಿ, ಹೆಗಲ ಮೇಲೊಂದು ಹಡಪ (ಸಾಹಿತಿಗಳು ನೇತುಹಾಕಿಕೊಳ್ಳುವಂತಹ ಚೀಲ) ಹಾಕಿಕೊಂಡಿದ್ದಂತಹ ವ್ಯಕ್ತಿಯೊಬ್ಬರು ಆಟೋದಲ್ಲಿ ಬಂದು ಇಳಿದಾಗ, ಅರೇ ಈ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನಲ್ಲಾ ಎಂದೆನಿಸಿ, ಇವರು ಯಾರು ಇರಬಹುದು? ಎಂದು ಯೋಚಿಸುತ್ತಿರುವಾಗಲೇ ಸೀದ ಮನೆಯೊಳಗೆ ಹೋಗಿ ಮನೆಯಲ್ಲಿ ಎಲ್ಲರನ್ನೂ ಮಾತನಾಡಿಸಿ ತಮ್ಮ ಆಗಮನವನ್ನು ಎಲ್ಲರಿಗೂ ಸೂಚ್ಯವಾಗಿ ತಿಳಿಯಪಡಿಸಿ ಹೊರಗೆ ಹಾಕಿದ್ದ ಕುರ್ಚಿಯ ಮೇಲೆ ಸ್ವಲ್ಪ ಕಾಲ ಕುಳಿತು ಅಕ್ಕ ಪಕ್ಕದವನ್ನು ಮಾತನಾಡಿಸುತ್ತಿರುವಾಗ, ಅರೇ ಇವರು ಕನ್ನಡ ಪ್ರಭದ ಸತ್ಯಾ ಅಲ್ಬಾ? ಆಗಿನ್ನೂ ಕನ್ನಡದಲ್ಲಿ ಈ ಪರಿಯ 24×7 News Channels ಇಲ್ಲದೇ ಇದ್ದಾಗ, ಪ್ರಸ್ತುತ ರಾಜಕೀಯ ವಿಚಾರಗಳು, ವ್ಯಕ್ತಿ ವಿಶೇಷ, ನಗರ ಪ್ರದಕ್ಷಿಣೆಯಲ್ಲದೇ ವಾಣಿಜ್ಯ, ಆರ್ಥಿಕ ವಿಷಯಗಳ ಬಗ್ಗೆ ಬರೆಯುತ್ತಿದ್ದ ಅವರ ಅಂಕಣಗಳನ್ನು ಓದಿ ಬೆಳೆದಿದ್ದ ನನಗೆ ಅಂತಹ ಹಿರಿಯರು ಎದುಗಡೆಯಲ್ಲೇ ಸಿಕ್ಕಾಗ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿ ಸುಮಾರು ಎರಡು ಮೂರು ಘಂಟೆಗಳ ಕಾಲ ಅಂದಿನ ಕಾಲ ಘಟ್ಟದ ವಿದ್ಯಮಾನಗಳ ಕುರಿತಾಗಿ ನಿರರ್ಗಳವಾಗಿ ಚರ್ಚಿಸಿದ್ದೆವು.
ಅದಾದ ನಂತರ ಕೆಲಸದ ಬಾಹುಳ್ಯ ಮತ್ತು ಬೆರಳತುದಿಯಲ್ಲೇ ಮೊಬೈಲ್ ನಲ್ಲೇ ಎಲ್ಲಾ ಸುದ್ದಿಗಳು ವಿಚಾರಗಳು ಸಿಗುವ ಕಾಲ ಬಂದಾಗ, ಎಲ್ಲರೂ Online ಆಗಿಹೋಗಿ ದೈನದಿಂದ ವೃತ್ತಪತ್ರಿಕೆಗಳನ್ನೇ ಓದುವುದು ಕಡಿಮೆ ಆಗಿ, ಆಗೊಮ್ಮೆ ಈಗೊಮ್ಮೆ ಸತ್ಯಾ ಆವರ ಅಂಕಣ ಓದುತ್ತಾ, ಇತ್ತೀಚೆಗೆಂತೂ ಇಲ್ಲವೇ ಇಲ್ಲಾ ಎನಿಸುವಷ್ಟರ ಮಟ್ಟಿಗೆ ಹೋಗಿದ್ದಾಗ, ನೆನ್ನೆ ಮಧ್ಯಾಹ್ನ ಹಿರಿಯ ಪತ್ರಕರ್ತ, ಕೆ.ಸತ್ಯನಾರಾಯಣ ಎಲ್ಲರ ನೆಚ್ಚಿನ ಕನ್ನಡಪ್ರಭ ಸತ್ಯ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದಾಗ ನಿಜಕ್ಕೂ ಒಂದು ರೀತಿಯ ಮಾನಸ ಗುರುಗಳನ್ನು ಕಳೆದುಕೊಂಡ ಭಾವನೆ ಮೂಡಿದ್ದಂತೂ ಸುಳ್ಳಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ನೋಡಲು ಲಾಲ ಬಹದ್ದೂರ್ ಶಾಸ್ತ್ರಿಗಳಂತೆ ಕುಳ್ಳಗಿದ್ದ ಸತ್ಯರವರು ವಿಚಾರ ಮಂಡಣೆಯಲ್ಲಿ ಮಾತ್ರಾ ತ್ರಿವಿಕ್ರಮನಂತಿರುತ್ತಿದ್ದರು. ಕಂಚಿನ ಕಂಠದ, ನೇರ ದಿಟ್ಟ ನಿರಂತರ ಎನ್ನುವಂತೆ, ತಮಗೆ ಅನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಮತ್ತು ಅದನ್ನೇ ಯಾರದ್ದೇ ಹಂಗಿಗೆ ಒಳಗಾಗದಂತೆ ಹೇಗೆ ಪ್ರಖರವಾಗಿ ಲೇಖನ ಬರೆದು ಸಮಾಜಕ್ಕೆ ಅದನ್ನು ವಸ್ತುನಿಷ್ಟವಾಗಿ ತೋರಿಸಬಹುದು ಎಂಬುದನ್ನು ತಮ್ಮ ಸಹೋದ್ಯೋಗಿ ಯುವ ಪತ್ರಕರ್ತರಿಗೆ ಮತ್ತು ನಮ್ಮಂತಹ ಅಸಂಖ್ಯಾತ ಹವ್ಯಾಸಿ ಬರಹಗಾರರಿಗೆ ತೋರಿಸಿಕೊಡುವ ಮೂಲಕ ಒಂದು ರೀತಿಯಾದ ಏಕಲವ್ಯ ಮತ್ತು ದ್ರೋಣಾಚಾರ್ಯರ ಗುರು ಶಿಷ್ಯ ಪರಂಪರೆಗೆ ಕಾರಣೀಭೂತರಾಗಿದ್ದರೂ ಎಂದರೂ ತಪ್ಪಾಗದು.
ಸತ್ಯಾರವರ ಕುಟುಂಬ ಮೂಲತಃ ಅಂದಿನ ಕೋಲಾರ ಮತ್ತು ಇಂದಿನ ಚಿಕ್ಕಬಳ್ಳಾಪುರದ ಜೆಲ್ಲೆಗೆ ಸೇರಿರುರುವ ಕೈವಾರದ ಸಂಪ್ರದಾಯ ಕುಟುಂಬದವರಾಗಿದ್ದು ಬಹಳ ಹಿಂದೆಯೇ ಅವರ ಕುಟುಂಬ ಹಿರಿಯರು ಬೆಂಗಳೂರಿನ ವಿ.ವಿ.ಪುರ ಮತ್ತು ಜಯನಗರದಲ್ಲೇ ನೆಲೆಸಿದ್ದರು. ತಮ್ಮ ವಿದ್ಯಾಭ್ಯಾಸ ಅದ ನಂತರ ಸುಮಾರು 6 ದಶಕಗಳಿಗೂ ಮುನ್ನವೇ ಪತ್ರಕರ್ತರಾಗಿ ತಮ್ಮ ಬದುಕನ್ನು ತಾಯ್ನಾಡು ಪತ್ರಿಕೆಯ ಮೂಲಕ ಆರಂಭಿಸಿ ತಮ್ಮ ನಿರ್ಭಿಡೆಯ ಬರಹ, ಸರಳತೆ ಮತ್ತು ವೃತ್ತಿಯಲ್ಲಿನ ಶುದ್ಧತೆಯಿಂದಾಗಿ ಬಲು ಬೇಗನೇ ನಾಡಿನ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ನಾಡಿನ ಪ್ರಖ್ಯಾತ ಪತ್ರಿಕೆಯದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರಿಕೊಂಡರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯ ಬಲ್ಲವರಾಗಿದ್ದ ಸತ್ಯಾ ಅವರು ಅದೇ ಸಮಯದಲ್ಲಿ 1967ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯ ಶ್ರೀ ಗೋಯಂಕಾರವರು ಕನ್ನಡದಲ್ಲಿ ಪತ್ರಿಕೆಯನ್ನು ಆರಂಭಿಸಿಸಲು ನಿರ್ಧರಿಸಿದಾಗ, ವೈ.ಎನ್.ಕೆ ಖಾದ್ರಿ ಶಾಮಣ್ಣ, ವಿ.ಎನ್. ಸುಬ್ಬರಾವ್, ಎಂಸಿವಿ ಮೂರ್ತಿ ಜಯಶೀಲರಾವ್ ಮೈಸೂರುಮಠ, ಸಿ.ಎಂ. ರಾಮಚಂದ್ರರಾವ್) ಅವರ ಸಮಕಾಲೀನರಾಗಿ ಆ ಹೊಸಾ ಪತ್ರಿಕೆಗೆ ಸೇರಿಕೊಂಡರು. ಕುತೂಹಲಕಾರಿಯಾದ ವಿಷಯವೆಂದರೆ, ದೆಹಲಿಯಲ್ಲಿ ಪತ್ರಿಕೆಯ ಹೆಸರನ್ನು ನೊಂದಾಯಿಸಿಕೊಳ್ಳಲು ಮೂರ್ನಾಲ್ಕು ಹೆಸರುಗಳನ್ನು ಕಳುಹಿಸಬೇಕಾಗಿದ್ದ ಸಂದರ್ಭದಲ್ಲಿ ಸತ್ಯಾರವರು ಸೂಚಿಸಿದ್ದ ಕನ್ನಡಪ್ರಭ ಎಂಬ ಹೆಸರೇ ಅಂತಿಮವಾಗಿ ಒಪ್ಪಿಗೆಯಾಗಿ ಬಂದಿತ್ತು ಎಂದು ಸ್ವತಃ ಕೆ. ಸತ್ಯನಾರಾಯಣ ಅವರೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದರು.
ಹೀಗೆ 60ರ ದಶಕದಲ್ಲಿ ಇಂಡಿಯನ್ ಎಕ್ಸಪ್ರೆಸ್ ಬಳಗ ಸೇರಿದ ಸತ್ಯಾರವರು ಅದೇ ಸಂಸ್ಥೆಯ ಕನ್ನಡಪ್ರಭ ಪತ್ರಿಕೆಯಲ್ಲಿ ಸುದೀರ್ಘ ಕಾಲ ಸೇವೆ ವರದಿಗಾರರಾಗಿ ಮುಖ್ಯವರದಿಗಾರ, ಸಹ ಸಂಪಾದಕರಾಗಿ ನಂತರ ಸಂಪಾದಕರಾಗಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸುವುದರ ಜೊತೆಜೊತೆಯಲ್ಲೇ ಕೆಲಕಾಲ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಪಾದಕರಾಗಿಯೂ ಜವಾಬ್ದಾರಿ ನಿಭಾಯಿಸಿದ್ದದ್ದು ಗಮನಾರ್ಹವಾಗಿತ್ತು. ಯಾವುದೇ ವಿಷಯದ ಕುರಿತು ಲೇಖನ ಬರೆಯುವ ಮೊದಲು ಅದರ ಕುರಿತಾಗಿ ಸಂಪೂರ್ಣವಾದ ಮತ್ತು ಅಧಿಕೃತವಾಗಿ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ಅವರು ಲೇಖನ ಬರೆಯುತ್ತಿದ್ದ ಕಾರಣ, ಅವರ ಬರಹಗಳು ಅತ್ಯಂತ ಸತ್ವಪೂರ್ಣ ವಿಚಾರಗಳನ್ನು ಒಳಗೊಂಡ ಮತ್ತು ಎಲ್ಲರೂ ಅದನ್ನು ನಂಬಬಹುದಾಗಿದ್ದಂತಹ ಲೇಖಕರು ಎಂದೇ ಪ್ರಖ್ಯಾತಿಯನ್ನು ಪಡೆದಿದ್ದರು.
ಸುಮಾರು 30 ವರ್ಷಗಳ ಕಾಲ ಇಂಡಿಯನ್ ಎಕ್ಸೆಪ್ರೆಸ್ ಸಂಸ್ಥೆಯಲ್ಲಿ ವರದಿಗಾರಿಂದ ಸಂಪಾದಕರ ಹುದ್ದೆಯ ವರೆಗೂ ಏರಿದ ನಂತರ ವಯೋಸಹಜವಾಗಿ ನಿವೃತ್ತರಾದ ನಂತರದ ಅವರ ಎರಡನೇ ಇನ್ನಿಂಗ್ಸ್ ಅತ್ಯಂತ ಪ್ರಮುಖವಾದ ಘಟ್ಟ ಎಂದರೂ ತಪ್ಪಾಗದು. ಕನ್ನಡಪ್ರಭ ಸಂಪಾದಕ ಹುದ್ದೆಯಿಂದ ನಿವೃತ್ತರಾದ ಬಳಿಕ ತಮ್ಮ ಇಳೀ ವಯಸ್ಸಿನಲ್ಲಿ ಇತರರಂತೆ ರಾಮಕೃಷ್ಣಾ ಗೋವಿಂದಾ ಎಂದು ಭಜನೆ ಮಾಡುತ್ತಾ ಮನೆಯಲ್ಲಿ ಕೂರದೇ, ಅದೇ ಪತ್ರಿಕೆಯಲ್ಲಿ ವಿವಿಧ ಅಂಕಣಗಳನ್ನು ಬರೆಯುವ ಮೂಲಕ ಮತ್ತಷ್ಟೂ ಜನಪ್ರಿಯರಾಗಿಹೋದರು. ಅದರಲ್ಲೂ ವಿಶೇಷವಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಅದರಲ್ಲೂ ವಿಶೇಷವಾಗಿ ವಿಧಾನ ಸಭೆಯ ಅಧಿವೇಶನದಲ್ಲಿ ಖುದ್ದಾಗಿ ಹಾಜರಿದ್ದು ಅಲ್ಲಿನ ಕಲಾಪಗಳ ವರದಿಯಲ್ಲಿ ಅವರದ್ದು ಎತ್ತಿದ ಕೈ. ಆವರ ವ್ಯಕ್ತಿ ವಿಶೇಷ, ಸಮಕಾಲೀನ, ನಗರ ಪ್ರದಕ್ಷಿಣೆಗಳು ಮುಂದಾದವುಗಳು ಅವರ ಖ್ಯಾತ ಅಂಕಣಗಳಾಗಿದ್ದವು. ಇವಿಷ್ಟೇ ಅಲ್ಲದೇ ಕಾಲ ಕಾಲಕ್ಕೆ ಅನುಗುಣವಾಗಿ ವಾಣಿಜ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ಆಗುತ್ತಿದ್ದ ಬದಲಾವಣೆಗಳಗಳ ಬಗ್ಗೆ ಬರೆಯುತ್ತಿದ್ದಲ್ಲದೇ, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪ್ರತೀವರ್ಷವೂ ಮಂಡಿಸುತ್ತಿದ್ದ ಬಜೆಟ್ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸತ್ಯಾರವರ ಆಯವ್ಯಯದ ವರದಿಗಾಗಿ ಜನ ಕಾಯುತ್ತಿದ್ದದ್ದಂತೂ ಸುಳ್ಳಲ್ಲ. ಇನ್ನು ಅವರು ಸಂಪಾದಕೀಯದಲ್ಲಿ ಬರೆಯುತ್ತಿದ್ದಂತಹ ವಿಷಯಗಳು ಸಮಾಜದ ಓರೇ ಕೋರೆಗಳನ್ನು ತಿದ್ದುವಂತಹ ಮೌಲ್ಯಯುತವಾಗಿರುತ್ತಿತ್ತು. ತಮ್ಮ ಬರವಣಿಗೆಯಲ್ಲಿ ಆರೋಗ್ಯವಾದ ನಿಷ್ಪಕ್ಷವದ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿದ್ದರೆ ಹೊರತು ಎಂದಿಗೂ ಅನಗತ್ಯವಾದ ಟೀಕೆ ಅಥವಾ ವಿತಂಡವಾದ ಇರುತ್ತಿರದಿದ್ದ ಕಾರಣ ಅವರ ಬರಹಗಳು ಜನರಿಗೆ ಇಷ್ಟವಾಗುತ್ತಿದ್ದವು.
ಇತ್ತೀಚೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮನೆದುಂಬಿ ಕಾರ್ಯಕ್ರಮದಲ್ಲಿ ಕೆ. ಸತ್ಯನಾರಾಯಣ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡುತ್ತಾ, ಪತ್ರಕರ್ತ ಎಂದ ಮೇಲೆ ಅಲ್ಲಿ ಕಿರಿಯ, ಹಿರಿಯ ಎಂಬ ಬೇಧ ಭಾವ ಸಲ್ಲದು. ಪತ್ರಕರ್ತರಾದವರು ಎಂದಿಗೂ ಸಹ ಅಧಿಕಾರಸ್ಥರು ಮತ್ತು ರಾಜಕಾರಣಿಗಳ ಮನೆಯನ್ನು ಎಡತಾಕ ಕೂಡದು. ಬದಲಾಗಿ ಆವರೇ ನಮ್ಮನ್ನು ಹುಡುಕಿಕೊಂಡು ವಿಷಯವನ್ನು ತಿಳಿಸುವಂತಹ ಸ್ವಂತಿಕೆ ಮತ್ತು ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂಬ ಕಿವಿ ಮಾತನ್ನು ಹೇಳಿದ್ದರು. ಸತ್ಯಾರವರು ಇದೇ ರೀತಿಯಾದ ವೃತ್ತಿಪರತೆಯನ್ನು ತಮ್ಮ ಜೀವಮಾನವಿಡೀ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದದ್ದು ವಿಶೇಷ. ಅಂದಿನ ಕಾಲದ ಪತ್ರಕರ್ತರಿಗೆ ಇಂದಿನಷ್ಟು ಅನುಕೂಲ ಇರಲಿಲ್ಲ. ಮಾಹಿತಿಗಾಗಿ ಮತ್ತು ವರದಿಗಾರಿಕೆಗಾಗಿ ಬಹಳಷ್ಟು ಕಷ್ಟ ಪಡಬೇಕಿತ್ತು. ಅಂದಿನ ಪತ್ರಕರ್ತರಿಗೆ ಸಂಬಳವೂ ಸಹಾ ಕಡಿಮೆ ಇತ್ತು ಅದರೆ ಇಂದು ಪತ್ರಿಕೋದ್ಯಮ ಸಂಪೂರ್ಣವಾಗಿ ಬದಲಾಗಿದ್ದು ಕುಳಿತಲ್ಲಿಯೇ ಬೆರಳ ತುದಿಯಲ್ಲೇ ಮಾಹಿತಿಗಳು ಲಭ್ಯವಾಗಿ ಹವಾನಿಯಂತ್ರಿತ ಕೊಠಡಿಯಲ್ಲೇ ಕುಳಿತು ವರದಿ ಮಾಡುವ ಸೌಲಭ್ಯ ಇರುವುದಲ್ಲದೇ, ಇಂದಿನ ಪತ್ರಕರ್ತರಿಗೆ ಯೋಗ್ಯ ಸಂಬಳ, ವಿಮೆ ಎಲ್ಲವೂ ಸಿಗುತ್ತಿದ್ದು, ಇಂದು ಪತ್ರಕರ್ತರ ಪಾಲಿಗೆ ಸುದಿನ ಎಂದರೂ ತಪ್ಪಾಗದು. ಹಾಗಾಗಿ ಇಂದಿನ ಪೈಪೋಟಿಯ ಯುಗದಲ್ಲಿ ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ವಸ್ತು ನಿಷ್ಟವರದಿಗಳ ಮೂಲಕ ಹೆಚ್ಚಿನ ಮಟ್ಟಕ್ಕೆ ಬೆಳೆಯಲು ಅವಕಾಶವಿದೆ ಎಂದಿದ್ದರು.
ನಾಡಿನ ಅನೇಕ ಆಗು-ಹೋಗುಗಳಿಗೆ ಸಾಕ್ಷಿಯಾಗಿದ್ದ ಸತ್ಯ ಅವರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಎಲ್ಲಿಯೇ ಹೋಗಲಿ ಪೈಜಾಮ, ಉದ್ದನೆಯ ಜುಬ್ಬಾ, ಹೆಗಲ ಮೇಲೊಂದು ಉದ್ದನೆಯ ಚೀಲ ಧರಿಸುತ್ತಾ, ಆತ್ಮೀಯರು ಕಂಡ ಕೂಡಲೇ, ಹಿರಿಯರು ಕಿರಿಯರು ಎನ್ನದೇ ಕಕ್ಕುಲತೆಯಿಂದ ಮಾತನಾಡಿಸುತ್ತಿದ್ದರು. ಪತ್ರಿಕಾಗೋಷ್ಠಿಗಳಿಗೆ ಹೋಗುವ ಮುನ್ನಾ ಪೂರ್ಣ ತಯಾರಿ ಮಾಡಿಕೊಂಡು ಎಲ್ಲರಿಗಿಂತಲೂ ಹಿಂದೆ ಕುಳಿತು ಮಾಹಿತಿಗಳನ್ನು ಬರೆದುಕೊಂಡು ಪ್ರಶ್ನೋತ್ತರ ವೇಳೆಯಲ್ಲಿ ಸರಿಯಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಅನೇಕ ರಾಜಕಾರಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾರಣ, ಅನೇಕ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸತ್ಯಾರವರು ಅಂದಿನ ಪತ್ರಿಕಾಗೋಷ್ಟಿಯಲ್ಲಿ ಇದ್ದಾರೆ ಎಂದು ತಿಳಿದ ಕೂಡಲೇ ಎಚ್ಚರಿಕೆಯಿಂದ ವಿಷಯ ಮಂಡಿಸುತ್ತಿದ್ದದ್ದಲ್ಲದೇ, ಅನಗತ್ಯವಾಗಿ ವಾದ ವಿವಾದಗಳಿಗೆ ಇಳಿಯದೇ ಅವರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದರು.
ನಾಡಿನ ಹಿರಿಯ ಪತ್ರಕರ್ತರಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟಛಾಪು ಮೂಡಿಸಿ, ತಮ್ಮ ನಿವೃತ್ತಿಯ ನಂತರವೂ ಅಂಕಣಕಾರರಾಗಿ ಹಲವಾರು ಜನರಿಗೆ ಪ್ರೇರಣೆಯಾಗಿದ್ದ ಶ್ರೀಯುತ ಸತ್ಯಾರವರು ವಯೋಸಹಜವಾಗಿ ತಮ್ಮ 82ನೇ ವಯಸ್ಸಿನಲ್ಲಿ 08.01.2023 ಭಾನುವಾರದಂದು ತಮ್ಮ ಜಯನಗರದ ಎಲ್ ಐಸಿ ಕಾಲೋನಿ ನಿವಾಸದಲ್ಲಿ ನಿಧನರಾಗಿರುವುದು ನಿಜಕ್ಕೂ ರಾಜ್ಯಕ್ಕೂ ಮತ್ತು ರಾಜ್ಯದ ಪತ್ರಿಕೋದ್ಯಮಕ್ಕೂ ತುಂಬಲಾರದ ನಷ್ಟವೇ ಸರಿ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ. ಅವರ ಕುಟುಂಬ ಹಾಗೂ ಅವರ ಬಂಧು ಮಿತ್ರರಿಗೆ ಅವರ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ