ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

ಕೆಲ ದಿನಗಳ ಹಿಂದೆ ಪರಿಚಯವಿದ್ದ ಪತ್ರಿಕೆಯ ಸಂಪಾದಕರೊಬ್ಬರು ನಿಮಗೆ ಗೊತ್ತಿರುವ ಕೆಲವು ಹೊಸಾ ಲೇಖಕರುಗಳಿಂದ ನಮ್ಮ ಪತ್ರಿಕೆಗೆ ಕಥೆ, ಕವನ, ಲೇಖನಗಳನ್ನು ಬರೆಸಿ ಕೊಡಲು ಸಾಧ್ಯವೇ? ಎಂದು ಕೇಳಿದ್ದಕ್ಕೆ ಪರಿಚಯವಿದ್ದ ಕೆಲವರನ್ನು ವಿಚಾರಿಸಿದಾಗ, ಕೆಲವರು ಸಂತೋಷದಿಂದ ಒಪ್ಪಿಕೊಂಡರು. ಅದರಲ್ಲೊಬ್ಬರು ಸಂಭಾವನೆ ಎಷ್ಟು ಕೊಡುತ್ತಾರೆ? ಎಂದು ಕೇಳಿದಾಗ ಒಂದು ರೀತಿಯ ಕಸಿವಿಸಿ ಆದರೂ ಅವರು ಕೇಳಿದ್ದರಲ್ಲಿ ತಪ್ಪಿಲ್ಲ ಎಂದು ಅನಿಸಿದ್ದಂತೂ ಸುಳ್ಳಲ್ಲ. ಅದೊಂದು ಕಾಲದಲ್ಲಿ ಪತ್ರಿಕೆಗಳಿಗೆ ಬರೆಯುವವರಿಗೆ ಗೌರವ ಸಂಭಾವನೆ ಕೊಡುವ ಸಂಪ್ರದಾಯವಿತ್ತು. ಆದರೆ ಇಂದು ಅದೆಲ್ಲವೂ ಮರೆಯಾಗಿ ಪತ್ರಿಕೆಗಳಲ್ಲಿ ಅವಕಾಶ ಕೊಡುವುದೇ ಒಂದು ದೊಡ್ಡ ಘನಕಾರ್ಯ ಎಂದು ಭಾವಿಸುವವರೇ ಹೆಚ್ಚಾಗಿರುವಾಗ. ಕನ್ನಡದ ವರನಟ ಡಾ. ರಾಜಕುಮಾರ್ ಆವರು, ತಮ್ಮ ಚಿತ್ರಗಳ ನಿರ್ಮಾಪಕರನ್ನು ಅನ್ನದಾತರು ಮತ್ತು ತಮ್ಮ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುವ ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಎಂದೇ ಕರೆಯುತ್ತಿದ್ದದ್ದು ನೆನಪಾಯಿತು. ಅಭಿಮಾನಿಗಳು ತಮ್ಮ ಸಮಯವನ್ನು ನಮ್ಮಂತಹ ಕಲಾವಿದರುಗಳಿಗೆ ಮೀಸಲಿರಿಸಿ ದುಡ್ಡುಕೊಟ್ಟು ನಮ್ಮ ಸಿನಿಮಾಗಳನ್ನು ನೋಡುವುದಲ್ಲದೇ, ಗುರುತಿಸಿ ಮಾತನಾಡಿಸುವಾಗ ಆಗುವ ಅನುಭವ ನಿಜಕ್ಕೂ ಅವರ್ಣನೀಯ ಅದನ್ನು ಅನುಭವಿಸಿಯೇ ತೀರಬೇಕು. ಅದೇ ರೀತಿ ಆ ಸಿನಿಮಾದಲ್ಲಿ ದುಡಿದ ಪ್ರತಿಯೊಬ್ಬರಿಗೂ ಸಂಭಾವವನೆಯನ್ನೂ ನೀಡಬೇಕು ಎನ್ನುತ್ತಿದ್ದರು. ಮತ್ತೊಬ್ಬ ಹಿರಿಯ ನಟ ಡಾ. ವಿಷ್ಣುವರ್ಧನ್ ತಮ್ಮ ಚಿತ್ರದಲ್ಲಿ ನಟಿಸಿದ ಎಲ್ಲಾ ಸಹನಟರಿಗೂ ಸಂಭಾವನೆ ಕೊಡುವ ವರೆಗೂ ಸಿನಿಮಾಗೆ ಡಬಿಂಗ್ ಮಾಡಲು ಬರುತ್ತಿರಲಿಲ್ಲ ಎಂಬ ಸಂಗತಿಯೂ ನೆನಪಾಯಿತು.

ಇತ್ತೀಚಿನ ದಿನಗಳಲ್ಲಿ ಬಹುತೇಕ ಲೇಖಕರು ತಮ್ಮ ಆತ್ಮತೃಪ್ತಿಗಾಗಿ ಬರೆಯುವುದರಿಂದ ಹೆಚ್ಚಿನವರು ಯಾರಿಂದಲೂ ಪ್ರತಿಫಲಾಪೇಕ್ಷೆ ನೀರಿಕ್ಷಿಸುವುದಿಲ್ಲ. ಎಲೆ ಮರೆಕಾಯಿಯಂತ ತಮ್ಮ ಪಾದಿಗೆ ಸದ್ದಿಲ್ಲದೇ ಲೇಖನಗಳನ್ನು ಬರೆದು ತಮ್ಮದೇ ಆದ ಬ್ಲಾಗ್ ಇಲ್ಲವೇ ಅಂಕಣಗಳಲ್ಲಿ ಪ್ರಕಟಿಸುವವರಿಗೆ ಅಚಾನಕ್ಕಾಗಿ ಯಾರಾದರೂ ಗುರುತಿಸಿ ಮಾತನಾಡಿಸಿ ಬೆನ್ನು ತಟ್ಟಿದರೂ ಸಾಕು ಅದೇ ಸುಕೃತ. ಅಭಿಮಾನಿಗಳ ಅಭಿಮಾನವೇ ಪ್ರಶಸ್ತಿ ಪುರಸ್ಕಾರ ಎಂದು ಭಾವಿಸುವವರೇ ಹೆಚ್ಚು. ಅದೇ ರೀತಿ ಕಳೆದ ಒಂದೆರಡು ವಾರಗಳಲ್ಲಿ ಅದೇ ರೀತಿಯ ಕೆಲವು ಅನುಭವಗಳು ನನಗೂ ಆಗಿದ್ದು ಅಂತಹ ಕೆಲವು ರೋಚಕ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ.

ತಂದೆಯವರ ಅಕಾಲಿಕ ಮರಣದ ಸಮಯದಲ್ಲಿ ಅವರ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಸುದೀರ್ಘ ಲೇಖನ ಎಲ್ಲರ ಮೆಚ್ಚುಗೆ ಗಳಿಸಿದಾಗ, ಮಡದಿ, ಮಕ್ಕಳು ಮತ್ತು ಕೆಲವು ಹಿತೈಷಿಗಳ ಪ್ರೀತಿಪೂರ್ವಕ ಆಗ್ರಹದ ಮೇಲೆ ಧನಾತ್ಮಕ ವಿಷಯಗಳ ಕುರಿತಾಗಿ ಹವ್ಯಾಸಿ ಬರಹಗಾರನಾಗಿ ತೊಡಗಿಸಿಕೊಂಡು ನಾನು ನನಗೇ ಗೊತ್ತಿಲ್ಲದಂತೆಯೇ ಕಳೆದ ಐದು ವರ್ಷಗಳಲ್ಲಿ 1100ಕ್ಕೂ ಹೆಚ್ಚು ಲೇಖನಗಳು 350ಕ್ಕೂ ಹೆಚ್ಚು ವೀಡಿಯೋಗಳು, ಲೆಖ್ಖವಿಲ್ಲದಷ್ಟು ಭಾಷಣಗಳನ್ನು ಮಾಡುವ ಮೂಲಕ ಅನೇಕರಿಗೆ ಹತ್ತಿರವಾಗಿರುವುದಲ್ಲದೇ ತಾತ ಮತ್ತು ತಂದೆಯವರ ಸಾಹಿತ್ಯ ಕೃಷಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎನ್ನುವುದು ಹೆಮ್ಮೆ ಇದೆ. ಬೆಕ್ಕು ತಾನು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಕಾಣುವುದಿಲ್ಲ ಎಂದು ಭಾವಿಸಿರುವಂತೆ ನನ್ನ ಆತ್ಮ ತೃಪ್ತಿಗೆ ನನ್ನ ಅನುಭವಗಳನ್ನು ಬರೆದು ಸಾಮಾಜಿಕ ಜಾಲತಾಣ ಮತ್ತು ನನ್ನ https://enantheeri.com blog & enantheeri YouTube Channel ನಲ್ಲಿ ಹಾಕುತ್ತಿದ್ದನ್ನು ಗಮನಿಸಿದ ಅನೇಕರು ವಯಕ್ತಿವಾಗಿ ಸಂಪರ್ಕಿಸಿ ನನ್ನ ಲೇಖನಗಳನ್ನು ಅವರ ದಿನ ಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಲ್ಲದೇ, ಕೆಲವರು ನನಗಾಗಿಯೇ ಅಂಕಣವನ್ನು ಮೀಸಲಿಡಿಸಿ ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸಿದ ಕಾರಣ ಕಳೆದ ಐದಾರು ವರ್ಷಗಳಲ್ಲಿ ನೂರಾರು ಲೇಖನ ಮತ್ತು ಅಂಕಣಗಳನ್ನು ನಿರಂತರವಾಗಿ ಬರೆಯುತ್ತಿದ್ದರೂ, ವಯಕ್ತಿಕವಾಗಿ ಯಾವುದೇ ಸಂಪಾದಕರನ್ನೂ ವಯಕ್ತಿಕವಾಗಿ ಭೇಟಿಯಾಗಿರಲಿಲ್ಲ.

ಮೂರ್ನಾಲು ದಿನದ ಹಿಂದೆ ದೂರದ ಶಿವಮೊಗ್ಗ ಜಿಲ್ಲೆಯ ಸಾಗರದಿಂದ  ಕಳೆದ 16 ವರ್ಷಗಳಿಂದಲೂ ಸಂಪದಸಾಲು ಎಂಬ ಚಂದದ ಧನಾತ್ಮಕ ಮಾಸ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಸಂಪಾದಕರಾದ ಶ್ರೀ ವೆಂಕಟೇಶ್ ಸಂಪಾರವರು ಕರೆ ಮಾಡಿ ಗುರುಗಳೇ, ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. ನಿಮ್ಮನ್ನು ಭೇಟಿಯಾಗ ಬೇಕಿತ್ತು ಎಂದಾಗ, ಬಹಳ ಸಂತೋಷವಾಗಿ ಸರಿ, ಎಲ್ಲಿ ಮತ್ತು ಹೇಗೆ ಭೇಟಿಯಾಗೋಣ ಎಂದು ಕೇಳಿದಾಗ. ಸುಮ್ಮನೆ ಅರ್ಧ ಗಂಟೆ ಭೇಟಿ ಆದ್ರೇ ಸಾಲದು, ಒಂದೆರಡು ಗಂಟೆ ಸುದೀರ್ಘವಾಗಿ ಬೇಟಿಯಾಗೋಣ ಎಂದರು. ಸರಿ ಹಾಗಾದ್ರೇ, ಸಂಜೆ ನಮ್ಮ ಮನೆಗೇ ಬಂದು ಬಿಡಿ. ಒಟ್ಟಿಗೆ ಕುಳಿತು ಊಟ ಮಾಡುತ್ತಾ ಹರಟೋಣ ಎಂದು ಹೇಳಿ, ಸಂಜೆ ಕಛೇರಿಯಿಂದ ಬರುವಾಗ ಮಾರ್ಗದ ಮಧ್ಯೆ ಅವರನ್ನೂ ಕರೆದುಕೊಂಡು ಕಾರಿನಲ್ಲೇ ಅನೌಪಚಾರಿಕವಾಗಿ ಪತ್ರಿಕೆಯ ಬಗ್ಗೆಯೇ ಮಾತನಾಡುತ್ತಾ ಮನೆಗೆ ತಲುಪಿದ್ದೇ ಗೊತ್ತಾಗಲಿಲ್ಲ.

WhatsApp Image 2023-01-19 at 22.37.04ಅದಾಗಲೇ ಮನೆಯರಿಗೆ ಸಂಪಾರವರ ಆಗಮನದ ವಿಷಯ ಮನೆಯವರಿಗೆ ತಿಳಿಸಿದ್ದ ಕಾರಣ, ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದು ವೆಂಕಟೇಶ್ ಬಂದ ಕೂಡಲೇ ಮಡದಿ, ಮಗಳು ಮತ್ತು ಮಗ ಎಲ್ಲರೊಡನೆಯೂ ಆತ್ಮೀಯವಾದ ಉಭಯ ಕುಶಲೋಪರಿಯನ್ನು ವಿಚಾರಿಸಿ, ಪತ್ರಿಕೆ 16ನೇ ವರ್ಷಕ್ಕೆ ಬಂದ ಸವಿನೆಪಿಗಾಗಿ ಹೊರತಂದಿದ್ದ ಚಂದನೆಯ ವಿಶೇಷ ಸಂಚಿಕೆಯನ್ನು ಕೊಟ್ಟಾಗ ಆದ ಆನಂದ ನಿಜಕ್ಕೂ ಅನನ್ಯವೇ ಸರಿ. ಮೈಸೂರು ಮುಮ್ಮಡಿ ಮತ್ತು ನಾಲ್ಚಡಿ ಕೃಷ್ಣರಾಜ ಒಡೆಯರ್ ಅವರ ಕುರಿತಾಗಿ ಪ್ರಕಟವಾಗಿದ್ದ ನನ್ನ ಲೇಖನ ಹೇಗೆ ಬಂದಿದೆ ಎಂದು ಕಣ್ಣಾಡಿಸುವಷ್ಟರಲ್ಲೇ ಮಡದಿ ತಟ್ಟೆ ಹಾಕಿ ಊಟವನ್ನು ಬಡಿಸಿದಾಗ, ಮರುಮಾತಿಲ್ಲದೇ ಇಬ್ಬರೂ ಸಹಾ ಕೈ ಕಾಲು ತೊಳೆದುಕೊಂಡು ಊಟಕ್ಕೆ ಕುಳಿತೆವು. ಮೊದಲ ಬಾರಿಗೆ ಇಬ್ಬರೂ ಭೇಟಿಯಾಗುತ್ತಿದ್ದೇವೆ ಎಂಬ ಕೊಂಚವೂ ಸಂಕೋಚವಿಲ್ಲದೇ, ಇಬ್ಬರೂ ಊಟಕ್ಕೆ ಮಾಡುವಾಗ ವೆಂಕಟೇಶರು ಅತ್ತಿಗೆಯಮ್ಮಾ ಉಪ್ಪಿನಕಾಯಿ ಇದೆಯೇ? ಎಂದಾಗ, ಒಂದು ಕ್ಷಣ ರೋಮಾಂಚನವಾಗಿದ್ದಂತೂ ಸುಳ್ಳಲ್ಲ. ಕೇವಲ ಫೋನ್ ಮತ್ತು ವಾಟ್ಸಾಪ್ ಮುಖಾಂತರ ಪರಿಚಯವಿದ್ದವರು ಮೊದಲ ಬಾರಿಗೆ ಮನೆಗೆ ಬಂದವರು ನಿಶ್ಕಲ್ಮಷವಾಗಿ ಅವರಿಗಿಂತಲೂ ಹಿರಿಯರಾದ ನಮ್ಮನ್ನು ಅಣ್ಣ ಅತ್ತಿಗೆಯ ಸಮಾನ ರೂಪದಲ್ಲಿ ಗೌರವ ಕೊಟ್ಟಿದ್ದನ್ನು ನೋಡಿದಾಗ ಇದಕ್ಕಿಂತಲೂ ಸನ್ಮಾನ ಸಂಭಾವನೆ ಬೇಕೆ? ಎಂದನಿಸಿದ್ದಂತೂ ಸುಳ್ಳಲ್ಲ. ಊಟ ಮುಗಿದ ನಂತತ ಪಟ್ಟಾಗಿ ಇಬ್ಬರೂ ಚಕ್ಕಂಬಕ್ಕಳ ಹಾಕಿಕೊಂಡು ಸೋಫಾ ಮೇಲೆ ಕುಳಿತು 16 ವರ್ಷಗಳ ಕಾಲ ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಹಿಂದಿರುವ ಕಷ್ಟ ಕಾರ್ಪಣ್ಯಗಳಲ್ಲದೇ, ಪತ್ರಿಕೆಯನ್ನು ಮುಂದಿನ ಹಂತಕ್ಕೆ ಹೇಗೆ ತೆಗೆದುಕೊಂಡು ಹೋಗಬಹುದು ಎಂಬುದರ ಕುರಿತಾಗಿ ಪರಸ್ಪರ ಸಮಾಲೋಚನೆ ನಡೆಸಿ ಕಡೇ ಬಸ್ಸಿಗೆ ಸಮಯವಾದ್ದರಿಂದ ಬಸ್ ಸ್ಟಾಂಡಿಗೆ ಹೋಗಿ ಬಸ್ ಹತ್ತಿಸಿ ಆವರು ತಾವು ಉಳಿದು ಕೊಂಡಿರುವ ಜಾಗವನ್ನು ತಲುಪಿ ಸಂದೇಶ ಕಳುಹಿಸಿದಾಗಲೇ ಮನಸ್ಸಿಗೊಂದು ಸಮಾಧಾನವಾಯಿತು.

WhatsApp Image 2023-01-23 at 14.53.19ಅದೇ ರೀತಿ ಕೆಲವು ದಿನಗಳ ಹಿಂದೆ ನಮ್ಮ ಸಂಬಂಧೀಕರ ಸಹಸ್ರಪೂರ್ಣ ಶಾಂತಿ ಹೋಗಿದ್ದಾಗ, ಶಾಂತಿ ಎಲ್ಲವೂ ಸುಸೂತ್ರವಾಗಿ ಮುಗಿದು ಮತ್ತೊಂದು ಕಡೆ ಸತ್ಯನಾರಾಯಣ ಪೂಜೆ ಆರಂಭವಾದಾಗ, ಹೋಮ ಪೂರ್ಣಾಹುತಿಯ ಹೊಗೆ ತಾಳಲಾರದೇ, ಹೋಮ ಮಾಡಿಸಿದ ಪ್ರಧಾನ ಆರ್ಚಕರಾದಿಯಾಗಿ ಬಹುತೇಕರು ಕಲ್ಯಾಣ ಮಂಟಪದ ಹೊರಗೆ ಬಂದಾಗ, ಅನೇಕರು ಅವರಿಗೆ ನಮಸ್ಕಾರ ಮಾಡುತ್ತಿದ್ದನ್ನು ನಾನೂ ಸಹಾ ಅನುಕರಿಸಿ, ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ, ಅವರು ತುರುವೇಕೆರೆಯವರು ಎಂದು ತಿಳಿದು ನಮ್ಮ ಅನೇಕ ಸಂಬಂಧಿಗಳು ತುರುವೇಕೆರೆಯಲ್ಲಿ ಇದ್ದಾರೆ ಎಂದು ಅವರ ಹೆಸರುಗಳನ್ನು ಹೇಳಿದಾಗ, ಹಾಂ! ಅವರುಗಳೆಲ್ಲರೂ ಗೊತ್ತು. ಅವರು ಮೂಲತಃ ಬಾಳಗಂಚಿಯವರಲ್ಲವೇ? ಎಂದು ಮರು ಪ್ರಶ್ನಿಸಿದರು. ಹೌದು. ನಾನೂ ಸಹಾ ಬಾಳಗಂಚಿಯವನೇ ಎಂದಾಗ, ನಿಮ್ಮೂರಿನ ಲಕ್ಷ್ಮೀ ನರಸಿಂಹ ಸ್ವಾಮಿ ಅದ್ಭುತವಾಗಿದೆ. ಕೆಲ ವರ್ಷಗಳ ಹಿಂದೆ ಆ ದೇವಸ್ಥಾನಕ್ಕೆ ಬಂದಿದ್ದೆ ಎಂದಾಗ, ಹೌದು ಬಹಳ ಮುದ್ದಾಗಿದೆ. ಎಂದು ಹೇಳುತ್ತಿದ್ದಾಗ, ಸರಿ ಬಾಳಗಂಚಿಯವರು ಎಂದ ಮೇಲೆ ನಿಮಗೆ ಉಮಾಸುತ ಅವರು ಗೊತ್ತೇ? ಎಂದಾಗ, ಮನಸ್ಸಿನಲ್ಳೇ ಮಂಡಿಗೆ ತಿನ್ನುತ್ತಾ, ಯಾಗೆ ಪುರೋಹಿತರೇ ಏನು ಸಮಾಚಾರ? ಎಂದಾಗ, ಹೇ! ಅಂತಹದ್ದೇನಿಲ್ಲಾ ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಬಹುತೇಕ ಬರಹಗಳನ್ನು ಬ್ರಾಹ್ಮಣರ ಗುಂಪಿನಲ್ಲಿ ನಾನು ಓದುತ್ತಿರುತ್ತೇನೆ ಎಂದಾಗ, ಹಾಗೇ ನಸುನಗುತ್ತಾ, ನಾನೇ ಉಮಾಸುತ ಎಂದಾಗ, ಅಷ್ಟು ದೊಡ್ಡ ಘನ ಪಂಡಿತರು ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿ, ನಿಮ್ಮನ್ನು ಮುಖತಃ ಭೇಟಿಯಾಗಿದ್ದಕ್ಕೆ ತುಂಬಾ ಸಂತೋಷ. ದೇವರು ನಿಮಗ ಆಯುರಾರೋಗ್ಯ ನೀಡಿ ಇನ್ನೂ ಹೆಚ್ಚಿಗೆ ಬರೆಯುವ ಶಕ್ತಿಯನ್ನು ನೀಡಲಿ ಎಂದು ತುಂಬು ಹೃದಯದಿಂದ ಹಾರೈಸಿದಾಗ, ಇದಕ್ಕಿಂತಲೂ ಬೇಕೆಯ ಬಿರುದು ಬಾವಲಿಗಳು ಬೇಕೆ ಎಂದೆನಿಸಿದ್ದು ಸುಳ್ಳಲ್ಲ.

swadeshi_melaಆದೇ ರೀತಿ 2023ರ ಜನವರಿ ಮೊದಲ ವಾರದಲ್ಲಿ ಸ್ವದೇಶೀ ಜಾಗರಣ ಮಂಚ್ ಆಶ್ರಯದಲ್ಲಿ ಬಗಲುಗುಂಟೆಯಲ್ಲಿ ಐದು ದಿನಗಳ ಕಾಲ ನಡೆದ ಸ್ವದೇಶೀ ಮೇಳಕ್ಕೆ ಹೋಗಿ ಮೇಳದ ಮುಂಭಾಗದಲ್ಲೇ ಇದ್ದ ಜಾಗರಣ ಮಂಚ್ ಕಛೇರಿಗೆ ಹೋಗಿ ಅತ್ಮೀಯರನ್ನೆಲ್ಲಾ ಮಾತಾನಾಡಿಸಿ ಕಾರಿನಲ್ಲೇ ಬಿಟ್ಟಿದ್ದ ಚೀಲವನ್ನು ತರಲು ಹೋಗಿದ್ದ ಪತ್ನಿ ಮತ್ತು ಆಕೆಯ ತಮ್ಮನ ಹೆಂಡತಿಯ ಬರುವಿಕೆಗಾಗಿಯೇ ಮೇಳದ ಮುಂಭಾಗದಲ್ಲೇ ಕಾಯುತ್ತಿದ್ದಾಗ, ನಡು ವಯಸ್ಸಿನ ದಂಪತಿಗಳೊಬ್ಬರು ತಮ್ಮ ಮಗನನ್ನು ವೀಲ್ಹ್ ಚೇರ್ ಮೇಲೆ ಕುಳ್ಳರಿಸಿಕೊಂಡು ನನ್ನ ಸಮೀಪಕ್ಕೆ ಬಂದು ನಮಸ್ಕಾರ. ನೀವು ತುಂಬಾ ಚನ್ನಾಗಿ ಬರೆಯುತ್ತೀರಿ ಎಂದಾಗ ಒಂದು ಕ್ಷಣ ತಬ್ಬಿಬ್ಬಾಗಿ, ಸಾವರಿಸಿಕೊಂಡು ನಮಸ್ಕಾರ ಚೆನ್ನಾಗಿದ್ದೀರಾ? ನನ್ನ ಪರಿಚಯ ನಿಮಗೆ ಇದೆಯೇ? ನನ್ನ ಲೇಖನಗಳನ್ನು ಎಲ್ಲಿ ಓದಿದ್ದೀರಿ? ಎಂದು ಕುತೂಹಲದಿಂದ ಕೇಳಿದ್ದೇ ತಡಾ. ಆಕೆ Facebookನಲ್ಲಿ ನನ್ನ ಎಲ್ಲಾ ಲೇಖನಗಳನ್ನೂ ಓದಿರುವುದಾಗಿ ತಿಳಿಸಿದ್ದಲ್ಲದೇ, ತಮ್ಮ ಪತಿಯವರನ್ನು ಮತ್ತು ಮಗಗನ್ನು ಅತ್ಮೀಯವಾಗಿ ಪರಿಚಯಿಸಿಕೊಟ್ಟರು. ನಾನು ಇಬ್ಬರಿಗೂ ಹಸ್ತಲಾಘಾವ ಮಾಡಿ, ನನ್ನ ಪರಿಚಯ ಮಾಡಿಕೊಡಲು ಮುಂದಾದಾಗ, ನಾನು ಹೇಳುವುದಕ್ಕಿಂತಲೂ ಮುಂಚೆಯೇ ಆಕೆಯೇ, ನನ್ನೆಲ್ಲಾ ವಿವರಗಳನ್ನೂ ಸವಿಸ್ತಾರವಾಗಿ ತಮ್ಮ ಪತಿಯವರಿಗೆ ಪರಿಚಯಿಸಿ ಅಂದು ಪ್ರಕಟಿಸಿದ್ದ ಮಾಘಸ್ನಾನದ ಕುರಿತಾದ ಲೇಖನದ ಬಗ್ಗೆಯೂ ಹೇಳಿದಾಗ, ಅರೇ, ತಮಗೆ ವಯಕ್ತಿಕವಾಗಿ ಪರಿಚಯ ಇಲ್ಲದವರೂ ಸಹಾ, ತಮ್ಮ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಸಂಗ್ರಹಿಸಿರುತ್ತಾರಾ? ಎಂದೆನಿಸಿದರೂ, ಬರೆಯುವ ಉಮ್ಮೇದಿನಲ್ಲಿ ನಮ್ಮ ವಯಕ್ತಿಕ ವಿಚಾರಗಳನ್ನು ಅಪರಿಯಾಗಿ ಎಲ್ಲರೊಡನೆ ಹಂಚಿಕೊಂಡಿದ್ದೀನಲ್ಲಾ ಎಂಬ ಅಚ್ಚರಿಯೂ ಮೂಡಿತು.

ಅದಾಗಲೇ ಸಮಯವಾಗಿದ್ದರಿಂದ ಬೆಂಗಳೂರು ದಕ್ಷಿಣ ಭಾಗದಿಂದ ಅಷ್ಟು ದೂರ ಸ್ವದೇಶೀ ಮೇಳವನ್ನು ನೋಡಲು ಬಂದಿದ್ದ ಆವರ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಯೋಚಿಸಿ, ಹಾಗೇ ಅವರ ಊರು ಉದ್ಯೋಗ ಎಲ್ಲವನ್ನೂ ವಿಚಾರಿಸಿ ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಒಬ್ಬರನ್ನೊಬ್ಬರನ್ನು ಮನೆಗೆ ಆಹ್ವಾನಿಸಿಕೊಂಡು ಬೀಳ್ಕೊಟ್ಟಾಗ ಮನಸ್ಸಿಗೆ ಸಮಾಧಾನವಾಗಿ, ಅಣ್ಣಾವ್ರು ಅಭಿಮಾನಿ ದೇವರುಗಳು ಎಂದು ಏಕೆ ಕರೆಯುತ್ತಿದ್ದರು ಎಂಬುದು ಖುದ್ದಾಗಿ ಅನುಭವಕ್ಕೆ ಬಂದಿತು.

ಅಲ್ಲಿಂದ ಮುಂದೆ ಹೋಗುತ್ತಿದ್ದಂತೆ ಮತ್ತೊಬ್ಬರು ಪರಿಚಯಿಸ್ಥರು ಸಿಕ್ಕು ಅವರೊಡನೆಯೂ ಮಾತನಾಡುತ್ತಿದ್ದಾಗಲೇ ಮತ್ತೊಬ್ಬರು ನಮ್ಮನ್ನು ನೋಡಿಕೊಂಡೇ ಹಾದು ಹೋಗಿ ಸ್ವಲ್ಪ ಮುಂದೆ ಹೋಗಿ, ಮತ್ತೆ ಹಿಂದೆ ಬಂದು ಸರ್, ಮೊನ್ನೆ ಸಂವಾದದಲ್ಲಿ ಬೆಂಗಳೂರಿನ ರಸ್ತೆಗಳ ಬಗ್ಗೆ ಮಾತಾನಾಡಿರುವವರು ನೀವೇ ಅಲ್ವಾ? ಎಂದಾಗ ಹೌದು ಸರ್, ನಾನೇ ಅದು ಎಂದು ಹೇಳಿದೆ. ಸರ್, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಮಗೇ ಗೊತ್ತಿರದ ಅನೇಕ ವಿಷಯಗಳನ್ನು ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ. ಮುಂದೆ ನಿಮ್ಮ ಅಂತಹ ಕಾರ್ಯಕ್ರಮಗಳು ಇದ್ದರೆ ತಿಳಿಸಿ ಸಾರ್ ನಾವೂ ಬರ್ತೀವಿ ಎಂದು ನಂಬರ್ ತೆಗೆದುಕೊಂಡಾಗ, ನಮ್ಮಾಕಿ ನನ್ನ ಕೈ ಹಿಡಿದು ಜಗ್ಗಿ, ಅಭಿಮಾನಿಗಳ ಹೊಗಳಿಕೆಯಿಂದ ಆಕಾಶಲ್ಲಿ ಹಾರಾಡುತ್ತಿರುವವರೇ, ನಿಮಗೂ ಹೆಂಡ್ತಿ ಮಕ್ಕಳು, ಸಂಸಾರ ಇದೇ ಎನ್ನುವುದನ್ನು ಮರೀಬೇಡಿ ಎಂದು ಕಾಲೆದಾಗ ಎಲ್ಲರೂ ನಕ್ಕು ಸುಮ್ಮನಾದೆವು. ಇವೆಲ್ಲವೂ ನೋಡಿದಾಗ ಗಂಟೆಗಟ್ಟಲೇ ಕುಳಿತು ಮಾಹಿತಿಯನ್ನು ಸಂಗ್ರಹಿಸಿ ಲೇಖನವನ್ನೂ ಇಲ್ಲವೇ ವೀಡೀಯೋ ಮಾಡುವಾಗ ಇಲ್ಲವೇ ನಿರಂತರವಾಗಿ ಭಾಷಣ ಮಾಡುವಾಗ ಆಗುವ ಆಯಾಸಗಳೆಲ್ಲವೂ ಇಂತಹ ಅನುಭವದಿಂದ ಮಾಯವಾಗಿದ್ದಂತೂ ಸುಳ್ಳಲ್ಲ.

cubbonparkನಿಜ ಹೇಳ ಬೇಕೆಂದರೆ, ಇದು ವರೆವಿಗೂ ನೂರಾರು ಕಡೆ ವಿವಿಧ ವಿಷಯಗಳ ಕುರಿತು ಭಾಷಣ ಮಾಡಿದ್ದರೂ, ಅಷ್ಟು ಲೇಖನ ಮತ್ತು ವೀಡೀಯೋ ಮಾಡಿದ್ದರೂ, ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಹುಳಿಮಾವು ಮಂಥನದಲ್ಲಿ ಕರ್ನಾಟಕ್ಕೆ ಮೈಸೂರು ಅರಸರ ಕೊಡುಗೆಗಳು ಕುರಿತಾಗಿ ಮಾಡಿದ ಬೌದ್ಧಿಕ್ಕನ್ನು ಆಯೋಜಕರು ಕೋರಿಕೆಯ ಮೇರೆಗೆ ಸಂವಾದದವರು ರೆಕಾರ್ಡ್ ಮಾಡಿ ಅದನ್ನು ಬಹಳ ಅರ್ಥಪೂರ್ಣವಾಗಿ ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ತಮ್ಮ ಸಂವಾದ Facebook & YouTube ನಲ್ಲಿ ಹಾಕಿದ್ದೇ ತಡಾ, ಅದಕ್ಕೆ ಜನರಿಂದ ಸಿಕ್ಕ ಮನ್ನಣೆ ನಿಜಕ್ಕೂ ಅದ್ಭುತ ಮತ್ತು ಬೇರೆ ರೀತಿಯದ್ದೇ ಅನುಭವ. ಅದ್ಯಾರೋ ಪುಣ್ಯಾತ್ಮರು ಅದರಲ್ಲೊಂದು ವೀಡೀಯೋ ಒಂದನ್ನು ಡೌನ್ಲೋಡ್ ಮಾಡಿ ವಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದೇ ತಡಾ ಅದು ಕ್ಷಣ ಮಾತ್ರದಲ್ಲಿ ಪ್ರಪಂಚಾದ್ಯಂತ ಹರಡಿ, ಇಲ್ಲಿ ನೋಡಿ ಅದ್ಯಾರೋ ಬೆಂಗಳೂರಿನ ಇತಿಹಾಸವನ್ನು ಎಷ್ಟು ಚನ್ನಾಗಿ ಹೇಳಿದ್ದಾರೆ ಎಂದು ತಮ್ಮ ತಮ್ಮ ವಾಟ್ಸಾಪ್ ಗುಂಪುಗಳಲ್ಲಿ ಬಂದ ವಿಡೀಯೋ ನೋಡುತ್ತಿದ್ದಂತೆಯೇ ನನ್ನ ಅನೇಕ ಬಂಧು ಮಿತ್ರರು, ಅರೇ, ಇವನು ನಮ್ಮ ಶ್ರೀಕಂಠ. ನನ್ನ ತಮ್ಮ, ನನ್ನ ಅಣ್ಣ, ನನ್ನ ಅಕ್ಕನ ಮಗ, ನನ್ನ ಅಣ್ಣನ ಮಗ, ನನ್ನ ಭಾವ ಮೈದುನ, ನನ್ನ ಭಾವ, ನನ್ನ ಸ್ನೇಹಿತ, ನನ್ನ ಸಹಪಾಠಿ, ನನ್ನ ಸಹೋದ್ಯೋಗಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ಮತ್ತೆ ಹತ್ತಾರು ಟೆಲಿಗ್ರಾಂ ಮತ್ತು ವಾಟ್ಸಾಪ್ ಗುಂಪುಗಳಿಗೆ ಖುಷಿಯಿಂದ ಹಂಚಿಕೊಂಡಿದ್ದಲ್ಲದೇ ಸಮಯ ಮಾಡಿಕೊಂಡು ನನಗೆ ಕರೆ ಮಾಡಿ ಶುಭಾಶಯ ಕೋರಿದ್ದಂತೂ ಮರೆಯಲು ಸಾಧ್ಯವೇ ಇಲ್ಲ. ಇಂದೊಂದಿ ರೀತಿ ಸಿನಿಮಾ, ಧಾರವಾಹಿಯಲ್ಲಿ ಸಣ್ಣ ಕಲಾವಿದರಾಗಿ ರಾತ್ರಿ ಬೆಳಗಾಗುವುದರೊಳಗೆ, ಮುಂಗಾರು ಮಳೆ ಮತ್ತು ದುನಿಯಾ ಸಿನಿಮಾದಿಂದಾಗಿ ದೊಡ್ಡ ಹೀರೋಗಳಾಗಿ ಹೋದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವಿಜಯ್ ರೀತಿಯೇ ನನ್ನ ಪರಿಸ್ಥಿತಿ ಆಗಿತ್ತು ಎಂದರೂ ಅತಿಶಯೋಕ್ತಿಯಲ್ಲ.

WhatsApp Image 2023-01-23 at 14.53.51ಸುಮಾರು ಒಂದು ತಿಂಗಳುಗಳ ಕಾಲ, ದಿನಸಿ, ಹಾಲಂಗಡಿ, ಹೋಟೇಲ್, ತರಕಾರಿ ಅಂಗಡಿ ಎಲ್ಲೇ ಹೋದರೂ ಸಾರ್, ವೀಡೀಯೋದಲ್ಲಿ ಚೆನ್ನಾಗಿ ಮಾತನಾಡಿದ್ದೀರಿ. ನಿಮ್ಮನ್ನು ನೋಡಿ ತುಂಬಾ ಖುಷಿಯಾಯ್ತು ಎಂದು ಕೇಳಿ ಕೇಳಿ ಅವರ ಹೊಗಳುವಿಕೆ ನನಗೆ ಅತಿಯಾದ ಮುಜುಗೊರ ತರಿಸಿದರೆ, ಅನೇಕರು ನನ್ನ ಮಡದಿ ಮಕ್ಕಳಿಗೂ ಅದೇ ವೀಡೀಯೋ ಕಳುಹಿಸಿ ನೋಡಿ ನಿಮ್ಮೆಜ್ಮಾನ್ರ ವಿಡೀಯೋ, ನೋಡೀ ನಿಮ್ಮಪ್ಪನ ವೀಡಿಯೋ ಎಂದು ಅವರ ಡೇಟಾಪ್ಯಾಕ್ ಕಡಿಮೆ ಮಾಡಿ ರೀಚಾರ್ಜ್ ಮಾಡಿಸಲು ನನ್ನ ಜೋಬಿಗೆ ಕತ್ತರಿ ಹಾಕಿಸಿದ್ದೂ ಸುಳ್ಳಲ್ಲ. ಮಳೆ ನಿಂತು ಹೋದಮೇಲೂ ಮರದ ಕೆಳಗೆ ಎಲೆಗಳಿಂದ ನೀರು ತೊಟ್ಟಿಕ್ಕುವ ಹಾಗೇ ಇಂದೂ ಕೂಡಾ ಬೆಳ್ಳಂಬೆಳಿಗ್ಗೆ ಹಳೆಯ ಸ್ನೇಹಿತರೊಬ್ಬರು ಅದೇ ವೀಡೀಯೋ ನನಗೇ ಕಳುಹಿಸಿದಾಗ, ಸುಮ್ಮನೇ ನಕ್ಕು ಆವರಿಗೆ ಧನ್ಯವಾದಗಳನ್ನು ತಿಳಿಸಿ, ಅನ್ನದ ಕೈ, ಸೌಟುಗಳನ್ನು ತರಲು ಪರಿಚಯವೇ ಇಲ್ಲದಿದ್ದ ಸ್ಟೀಲ್ ಪಾತ್ರೆ ಅಂಗಡಿಯೊಂದಕ್ಕೆ ಹೋಗಿ, ಅನ್ನದ ಕೈ ಮತ್ತು ಸೌಟು ಕೊಡಿ ಎಂದು ಕೇಳಿದ ತಕ್ಷಣವೇ ಆ ಅಂಗಡಿಯ ಮಾಲಿಕರು ನಮಸ್ಕಾರ ಸಾರ್ ಎಂದು ಬಹಳ ಪರಿಚಯದವರಂತೆ ಮಾತನಾಡಿಸಿ ನಾನು ಸೌಟು ಮತ್ತು ಅನ್ನದ ಕೈ ನೋಡುತ್ತಿದ್ದಂತೆಯೇ ಮತ್ತೇ ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರೀ ಸರ್. ಎಂದು ನನ್ನ ನನ್ನ ವೀಡೀಯೋ ತೋರಿಸಿದಾಗ ನಿಜಕ್ಕೂ ಮನಸ್ಸು ತುಂಬಿ ಬಂದಿದ್ದಂತೂ ಸುಳ್ಳಲ್ಲ.

ಜಿ.ಎಸ್. ಶಿವರುದ್ರಪ್ಪನವರು ಎದೆ ತುಂಬಿ ಹಾಡುವೆನು ಅಂದು ನಾನು ಎಂಬ ಹಾಡಿನಲ್ಲಿ,

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ
ಅದರಿಂದ ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ಎಂದು ಬರೆದಿದ್ದಾರೆ.

ಅದೇ ರೀತಿ ಭಗವಾನ್ ಶ್ರೀ ಕೃಷ್ಣನೂ ಸಹಾ ಭಗವದ್ಗೀತೆಯಲ್ಲಿ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||

ಅಂದರೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿನ್ನ ಕರ್ತವ್ಯವನ್ನು ನೀನು ಮಾಡು ಫಲಾಫಲವನ್ನು ನನಗೆ ಬಿಡು ಎಂದಿದ್ದಾರೆ. ಅಂದರೆ ಮಾಡುವ ಕೆಲಸದಲ್ಲಿ ಪ್ರತಿಯೊಬ್ಬರೂ ಪ್ರತಿಫಲವನ್ನು ಬಹಸುವುದು ಸಹಜ. ಆದರೇ ಪ್ತತಿಫಲವನ್ಣೇ ಮನಸ್ಸಿನಲ್ಲಿ ಇಟ್ಟುಕೊಂಡು ಮಾಡುವ ಕೆಲಸ ಹೆಚ್ಚಿನ ಫಲವನ್ನು ನೀಡುವುದಿಲ್ಲ. ಅದರ ಬದಲಾಗಿ ನಿರ್ಮಲ ಮನಸ್ಸಿನಿಮ್ದ ವಹಿಸಿದ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಿದಾಗ ಅದು ಹೆಚ್ಚಿನ ರೂಪದಲ್ಲಿ ಫಲವನ್ನು ನೀಡುತ್ತದೆ ಎನ್ನುವುದಕ್ಕೆ ಈ ಮೇಲಿನ ಪ್ರಸಂಗಗಳೇ ಸಾಕ್ಷಿ ಎನಿಸಿದ್ದಂತು ಸುಳ್ಳಲ್ಲ.

ಕೆಲ ವರ್ಷಗಳ ಹಿಂದೆ, ನನ್ನ ಮೇಲಧಿಕಾರಿಯೊಬ್ಬರು ನನಗೆ ಭಡ್ತಿಯನ್ನು ನೀಡದೇ ಮತ್ತೊಬ್ಬನಿಗೆ ಭಡ್ತಿಯನ್ನು ನೀಡಿ ಅದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ನೀನು ಪತ್ರಿಕೆಗಳಿಗೆ ಅಂಕಣ ಬರೆಯುತ್ತೀಯಂತೇ, ನಿನ್ನದೇ Blog & YouTube Channel ಮೂಲಕ ಹೆಚ್ಚಿನ ಹಣ ಗಳಿಸುತ್ತಿರುವ ವಿಷಯ ತಿಳಿಯಿತು. ಅಲ್ಲಿ ಸಿಗುವ ಹಣದ ಮುಂದೆ ಈ ಭಡ್ತಿ ಏನೂ ಅಲ್ಲಾ ಬಿಡು ಎಂದು ಹೇಳಿದಾಗ, ಅವರೊಂದಿಗೆ ವಿನಾ ಕಾರಣ ವಿತಂಡ ಮಾಡುವುದೂ, ತಲೆ ಗಟ್ಟಿಗಿದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಒಂದೇ ಎಂದು ಸುಮ್ಮನಾಗಿ, ಕಡೆಗೆ ಮರ್ಯಾದೆ ಇಲ್ಲದ ಕಡೆ ಕೆಲಸ ಮಾಡುವುದು ವ್ಯರ್ಥ ಎಂದು ಕೆಲಸವೇ ಬದಲಿಸಿದದ್ದೂ ನೆನಪಾಗಿದ್ದಂತೂ ಸುಳ್ಳಲ್ಲ.,

ಇತ್ತೀಚೆಗೆ ಎಲ್ಲರೂ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಪ್ರಚಾರ, ಪ್ರಶಂಸೆ, ಪ್ರಶಸ್ತಿ ಮತ್ತು ಪುರಸ್ಕಾರಗಳನ್ಣೇ ಬಯಸುವುದು ತಪ್ಪಲ್ಲವೇ? ಜೀವನದಲ್ಲಿ ಹಣದ ಹೊರತಾಗಿಯೂ ಖುಷಿಯಾಗಿರಲು ನೂರಾರು ದಾರಿಗಳಿವೆ ಅಲ್ಲವೇ? ಎಂದೆನಿಸಿದರೂ, ಅಂತಿಮವಾಗಿ ನನ್ನ ಕೆಲಸ ನಿಷ್ಠೆಯಿಂದ ಮಾಡಿದಲ್ಲಿ ಭಗವಂತನ ಅನುಗ್ರಹದಿಂದ, ನನ್ನ ಹಳೆಯ ಮೇಲಧಿಕಾರಿಗಳು ತಿಳಿಸಿದಂತೆ ಪ್ರವೃತ್ತಿಯಿಂದಲೂ ವೃತ್ತಿಗಿಂತ ಹೆಚ್ಚಿನ ಪ್ರಶಸ್ತಿ ಮತ್ತು ಪುರಸ್ಕಾರಗಳು ಬರುವ ಸಂಭವವೂ ಇದೆಯಲ್ಲವೇ? ನನಗೆ ಅಂತಹ ಸಮಯ ಬರಲು ನಾನಿನ್ನೂ ಸಾಧಿಸುವುದು ಬಹಳಷ್ಟಿದೆ  ಎಂದೆನಿದ್ದೂ ಸುಳ್ಳಲ್ಲ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

 1. ಕಳೆದ 5 ವರ್ಷಗಳಿಂದಲೂ ಬರವಣಿಗೆಯನ್ನು ಮುಂದುವರಿಸಿಕೊಂದು ಹೋಗುತ್ತಿರುವ ನಿಮಗೆ ಮೊದಲನೆಯದಾಗಿ ಅಭಿನಂದನೆಗಳು 👏👏

  ನೀವು ನಿರಂತರವಾಗಿ ಬರೆದದ್ದನ್ನು ಓದುತ್ತಾ ಹೋದ ನಮಗೆ, ನಿಮ್ಮ ಐದು ವರ್ಷಗಳ ಬರವಣಿಗೆಯ ಸಮಯ ಕಳೆದದ್ದು ಖಂಡಿತವಾಗಿ ಗೊತ್ತಗಲೇ ಇಲ್ಲ.

  ನಾನು ನಿಮ್ಮ ಬಹುತೇಕ ಲೇಖನಗಳನ್ನು ಓದಿದ್ದು, ಅವುಗಳು ಅತ್ಯುತ್ತಮವಾಗಿ ಮೂಡಿಬಂದಿದೆ, ಅದು ಪ್ರವಾಸ ಇರಬಹುದು, ರಾಜಕೀಯ ಇಲ್ಲವೇ ಪ್ರಸ್ತುತ ವರದಿಯ, ಇನ್ನೂ ಮುಂತಾದ ಹತ್ತು ಹಲವಾರು ವಿಚಾರಗಳು, ಸರಳ ಹಾಗೂ ಸಂಕ್ಷಿಪ್ತವಾಗಿ ಮತ್ತು ಉತ್ತಮವಾಗಿ ತಿಳಿಸುತ್ತಾ,
  ಒಬ್ಬ ಲೇಖಕ ಹೇಗೆ ನವಿರಾದ ತಿಳಿ ಹಾಸ್ಯದ ಮೂಲಕ ಸಾಗುತ್ತಾ, ಮುಂದೋನೋ ಆಗಬಹುದು ಎಂಬ ಕುತೂಹಲವನ್ನು ಓದುಗರಿಗೆ ಮೂಡಿಸುತ್ತಾ, ಗಟ್ಟಿಯಾಗಿ ಓದಿಸಿಕೊಂಡು ಹೋಗಿ, ಮುಂದೆ ಸುಖಾಂತ್ಯವಾಗಿ, ಅಂತಿಮವಾಗಿ ನಗೆ ಚೆಲ್ಲುತ್ತಾ, ಇಡೇ ರೀತಿಯಾದ ಘಟನೆಗಳು ನಮ್ಮ ಜೀವನದಲ್ಲೂ ನಡೆದಿದ್ದಲ್ಲವೇ? ಎಂದು ನಮ್ಮನ್ನು ಆ ಘಟನೆಗಳೊಂದಿಗೆ ಸಮೀಕರಿಕೊಂಡು ಹೋಗುವಂತಹ ಪ್ರಸಂಗಗಳು ನಿರೂಪಿಸುವ ನಿಮ್ಮ ಲೇಖನಗಳು ಅತ್ಯಂತ ಅಪ್ಯಾಯಮಾನ ಎನಿಸುತ್ತದೆ.

  ಕಲ ದಿನಗಳ ಹಿಂದೆ ಹುಳಿಮಾವಿನಲ್ಲಿ ನಡೆದ ಮಂಥನ ಕಾರ್ಯಕ್ರಮದಲ್ಲಿ ಕರ್ನಾಟಕ್ಕೆ ಮೈಸೂರು ಅರಸರ ಕೊಡುಗೆಗಳು ಕುರಿತಾಗಿ ಮಂಡಿಸಿದ ವಿಷಯದ ವೀಡಿಯೋ, ನನಗೆ ನನ್ನ ಅನೇಕ ಸ್ನೇಹಿತರು ಕಳುಹಿಸಿದ್ದಲ್ಲದೇ, ಅದು ಇತರೇ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು ನೋಡಿ ಬಹಳ ಸಂತೋಷವಾಯಿತು. ಆ ವೀಡಿಯೋಗಳ ಮೂಲಕ ಖಂಡಿತವಾಗಿ ಉತ್ತಮವಾದ ಅನೇಕ ವಿಷಯಗಳನ್ನು ನಿಮ್ಮಿಂದ ತಿಳಿಯಲು ಸಾಧ್ಯವಾಯಿತು.

  ಕಡೆಯದಾಗಿ ಭಗವಂತನ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ಜಯ, ಕೀರ್ತಿ, ಯಶಸ್ಸು ದೊರೆಯಲಿ. ನಿಮ್ಮ ಬರವಣಿಗೆಯು ಸಿಂಹದ ಹೆಜ್ಜೆ ಗುರುತಿಸಲ್ಪಡುವ ದಾರಿಯಲ್ಲಿ ಸಾಗಲಿ ಎಂದು ಬಯಸುತ್ತೇನೆ.

  ಇಂತಿ
  ಆರ್. ಸುದರ್ಶನ

  Liked by 1 person

  1. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಮಯ ಮಾಡಿಕೊಂಡು ಇಷ್ಟು ಸುದೀರ್ಘವಾದ ಅಭಿನಂದನೆಗಳನ್ನು ಸಲ್ಲಿಸಿದ್ದಕ್ಕಾಗಿ, ಸುದರ್ಶನರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹಾರೈಕೆಗಳು ಸದಾಕಾಲವೂ ಹೀಗೆ ಇರಲಿ.

   ನಿಮ್ಮವ ಉಮಾಸುತ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s