ಶ್ರೀ ಕ್ಷೇತ್ರ ಕಮಂಡಲ ಗಣಪತಿ

ನಮ್ಮ ದೇಶ ಭಾರತದಲ್ಲಿ ಅದರಲ್ಲೂ ಹಿಂದೂ ಧರ್ಮ ಜನಿಸುವುದಕ್ಕೆ ವಿಶೇಷವಾದ ಪುಣ್ಯವನ್ನು ಮಾಡಿರಬೇಕು ಎಂದೇ ಎಲ್ಲರೂ ಭಾವಿಸುತ್ತಾರೆ. ಈ ರೀತಿಯ ಪುಣ್ಯ ಭೂಮಿಯಾಗಿರುವುದರಿಂದಲೇ ದೇವಾನು ದೇವತೆಗಳಿಗೂ ಭಾರತವೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಿ ಇಲ್ಲಿಯೇ ಸಾಕಷ್ಟು ಸಮಯವನ್ನು ಕಳೆದಿದ್ದಾರೆ ಎನ್ನುವುದಕ್ಕೆ ಅನೇಕ ಪುರಾವೆಗಳಿದ್ದು ಅಂತಹ ಐತಿಹ್ಯವಿರುವ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಬಗ್ಗೆ ತಿಳಿದು ಆ ಕ್ಷೇತ್ರದ ಪೌರಾಣಿಕ ಹಿನ್ನಲೆಯನ್ನು ಕುಳಿತಲ್ಲಿಂದಲೇ ತಿಳಿಯೋಣ ಬನ್ನಿ.

ನಿತ್ಯಹರಿದ್ವರ್ಣ ಕಾಡುಗಳಿಂದ ಸಂವೃದ್ಧವಾದ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಕೇಂದ್ರದಿಂದ ಕೇವಲ 4 ಕಿಮಿ ದೂರದ ಕೆಸವೆ ಗ್ರಾಮದಲ್ಲಿ ಕಮಂಡಲ ಗಣಪತಿಯ ದೇವಾಲಯವಿದೆ. ಹಿಂದಿನ ಕಾಲದಲ್ಲಿ ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಗಾದೆ ಮಾತು ಇತ್ತು. ಅಂದರೆ ಕೊಪ್ಪಾ ಸುತ್ತಮುತ್ತಲೂ ದಟ್ಟವಾದ ಕಾಡಿನಿಂದ ಆವೃತ್ತವಾಗಿದ್ದು ಹೇರಳವಾದ ವನ್ಯಮೃಗಗಳಿಂದ ಕೂಡಿದ್ದ ಪ್ರದೇಶವಾಗಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆರ ರೂಪದಲ್ಲಿ ಇಲ್ಲಿಗೆ ಕಳುಹಿಸುತ್ತಿದ್ದರೆಂತೆ. ಅಂತಹ ದಟ್ಟ ಕಾಡುಗಳ ಮಧ್ಯೆ ಪುಟ್ಟದಾಗಿ ಕಮಂಡಲ ಗಣಪತಿ ದೇವಸ್ಥಾನವಿದ್ದರೂ, ಪೌರಾಣಿಕವಾಗಿ ಅತ್ಯಂತ ಮಹತ್ವವಾಗಿರುವುದರಿಂದ ಇದು ಸುತ್ತ ಮುತ್ತಲಿನ ಜನರಿಗೆ ಆರಾಧ್ಯ ದೈವವಾಗಿದ್ದು, ಈ ಶ್ರೀಕ್ಷೇತ್ರದ ದರ್ಶನವನ್ನು ಪಡೆಯಲು ಪ್ರತಿದಿನವೂ ನೂರಾರು ಭಕ್ತಾದಿಗಳು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ.

ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ಸಣ್ಣದಾದರೂ ಬಹಳ ಆಕರ್ಷಣೀಯವಾಗಿದೆ ಇಲ್ಲಿನ ದೇವಾಲಯ. ಸಾವಿರಾರು ವರ್ಷಗಳ ಐತಿಹ್ಯವಿರುವ ಈ ದೇವಾಲಯವನ್ನು ಇತ್ತೀಚೆಗೆ ಹೊಸದಾಗಿ ಕಟ್ಟಿದ್ದು ಉಳಿದ ದೇವಾಲಯಗಳಂತೆ ನಿಗಧಿತವಾದ ಗರ್ಭ ಗುಡಿ ಇಲ್ಲದಿರುವುದು ಗಮನಾರ್ಹವಾಗಿದೆ. ದೇವಾಲಯದ ಆವರಣದಲ್ಲಿರುವ ಸುಂದರವಾದ ಪ್ರಾಂಗಣದಲ್ಲಿ ಹತ್ತಾರು ಹೆಜ್ಜೆಗಳು ಮುಂದಕ್ಕೆ ಹೋದಲ್ಲಿ ಎರಡು ಮೂರು ಅಡಿ ತಗ್ಗಿನ ಪ್ರದೇಶದಲ್ಲಿ ಎತ್ತರದ ಪೀಠದ ಮೇಲೆ ಮೂರ್ನಾಲ್ಕು ಅಡಿ ಎತ್ತರದ ಯೋಗ ಮುದ್ರೆಯಲ್ಲಿ ಕುಳಿತಿರುವ ಗಣೇಶನ್ನು ಕಾಣಬಹುದಾಗಿದೆ. ಆದರೆ ಈ ಕ್ಷೇತ್ರ ಪ್ರಮುಖ ಆಕರ್ಷಣೆಯೇ ಅಲ್ಲಿನ ಗಣಪತಿ ವಿಗ್ರಹದ ಮುಂಭಾಗದಲ್ಲಿರುವ ಕಮಲದ ಹೂವಿನ ಆಕಾರದಲ್ಲಿ ಇರುವ ತೀರ್ಥಕುಂಡದಿಂದ ನೈಸರ್ಗಿಕವಾಗಿ ವರ್ಷದ 365 ದಿನಗಳೂ ನಿರಂತವಾಗಿ ಚಿಮ್ಮುತ್ತಿರುವ ತೀರ್ಥವಾಗಿದೆ. ಮಳೆಗಾಲದಲ್ಲಿ ಗಣೇಶನ ಪದಕಮಲದ ವರೆಗೂ ನೀರು ಚಿಮ್ಮುತ್ತದೆಯಂತೆ. ಈ ರೀತಿಯಾಗಿ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ತೀರ್ಥ ಗಣೇಶ ಎಂಬ ಹೆಸರು ಬಂದು ನಂತರ ಕಮಂಡಲ ಗಣಪತಿ ಎಂದೇ ಪ್ರಖ್ಯಾತವಾಗಿದೆ ಎಂದು ಹೇಳಲಾಗುತ್ತದೆ. ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ಅಲ್ಲಿನ ಅರ್ಚಕರು ದೇವರಿಗೆ ಅದೇ ನೀರಿನಿಂದಲೇ ಅಭಿಷೇಕವನ್ನು ಮಾಡಿ ಶೋಷಡೋಪಚಾರಗಳಿಂದ ಪೂಜೆ ಮಾಡಿ ಮಹಾಮಂಗಳಾರತಿಯನ್ನು ಮಾಡಿ, ಬಂದ ಭಕ್ತಾದಿಗಳಿಗೆ ಅದೇ ಕುಂಡದ ನೀರನ್ನೇ ತೀರ್ಥರೂಪದಲ್ಲಿ ಕೊಡುವುದು ಬಹಳ ವಿಶೇಷವಾಗಿದೆ.

ಹೀಗೆ ನಿರಂತವಾಗಿ ಚಿಮ್ಮುವ ನೀರು ಒಳ ಚರಂಡಿಯ ರೂಪದಲ್ಲಿ ಹರಿದು ದೇವಸ್ಥಾನದ ಮುಂದೆ ಇರುವ ಹೊಂಡದಲ್ಲಿ ಶೇಖರಣೆಯಾಗುತ್ತದೆ. ಈ ಮೊದಲು ಇಲ್ಲಿನ ಕೊಳದಲ್ಲಿ ಸ್ನಾನಕ್ಕೆ ಅನುವು ಮಾಡಿಕೊಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ನಿಶೇಧಿಸಲಾಗಿದೆ. ಇಲ್ಲಿಂದ ಭೂಮಿಗೆ ಸೇರಿಕೊಳ್ಳುವ ಆ ನೀರು ಅಲ್ಲಿಂದ ಮುಂದೆ ಗುಪ್ತಗಾಮಿನಿಯಾಗಿ ಹರಿದು ಮುಂದೆ ಸುಮಾರು ಎರಡು ಕಿಮೀ ದೂರದಲ್ಲಿ ಬ್ರಾಹ್ಮಿ ನದಿಯಾಗಿ ಕಾಣಿಸಿಕೊಳ್ಳುತ್ತದೆ. ಈ ನೈಸರ್ಗಿಕವಾದ ನೀರು ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದು ಅಲ್ಲಿನವರು ನಂಬುತ್ತಾರೆ.

ಈ ಬ್ರಾಹ್ಮಿ ನದಿಯ ಉಗಮದ ಹಿಂದೆ ಒಂದು ರೋಚಕವಾದ ಪೌರಾಣಿಕ ಹಿನ್ನಲೆಯಿದೆ. ಅದೊಮ್ಮೆ ಶಿವ ಪಾರ್ವತಿಯರಿಬ್ಬರೂ ಏಕಾಂತದಲ್ಲಿ ಸಂಬೋಧಿಸುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಾರ್ವತಿಯು ತಾನು ಹೆಚ್ಚೋ ಇಲ್ಲವೇ ಸರಸ್ವತಿ ಹೆಚ್ಚೋ ಎಂದು ಶಿವನಲ್ಲಿ ಕೇಳಿದಾಗ, ಪರಶಿವನು ಥಟ್ ಎಂದು ಸಕಲ ವೇದಗಳು ಮತ್ತು ವಿದ್ಯೆಗೆ ಅಧಿದೇವತೆಯಾದ ವಾಣಿಯೇ ಶ್ರೇಷ್ಠ ಎಂದು ಹೇಳಿದ್ದನ್ನು ಕೇಳಿ ಬೇಸರಗೊಂಡ ಪಾರ್ವತಿಯು ಶನಿ ಬಳಿ ಹೋಗಿ ತನ್ನ ಗಂಡನಿಗೆ ಕಾಡಬೇಕೆಂದು ಕೋರಿಕೊಳ್ಳುತ್ತಾಳೆ. ಆರಂಭದಲ್ಲಿ ಶನಿಮಹಾತ್ಮನು ಶಿವನ ಮೂರನೇ ಕಣ್ಣಿನಿಂದ ಭಸ್ಮವಾಗಿ ಹೋದ ಮನ್ಮಥನ ಪ್ರಸಂಗವನ್ನು ನೆನೆದು ಹಿಂದೇಟು ಹಾಗಿದರೂ, ಪಾರ್ವತಿ ದೇವಿಯ ಒತ್ತಾಯದ ಮೇರೆಗೆ ಶನಿಯ ದೃಷ್ಟಿ ಶಿವನ ಮೇಲೆ ಬಿದ್ದು ಸಾಕ್ಷಾತ್ ಪರಶಿವನಿಗೂ ಶನಿಯ ಕಾಟ ಆರಂಭವಾಗುತ್ತದೆ.

ಶನಿಪ್ರಭಾವದಿಂದಾಗಿ ಶಿವನು ಬಹ್ಮ ಕಪಾಲವನ್ನು ಹಿಡಿದುಕೊಂಡು ತ್ರಿಲೋಕಸಂಚಾರಿಯಾಗಿ ಭಿಕ್ಷಾಟನ ಮಾಡುತ್ತಾ ಎಷ್ಟು ದಿನಗಳಾದರೂ ಕೈಲಾಸಕ್ಕೆ ಹಿಂದಿರುಗದೇ ಹೋದಾಗ, ಪತಿಿ ಇಲ್ಲದೇ ದುಃಖಿತಳಾದ ಪಾರ್ವತಿಯು ಮತ್ತೆ ಶನಿಯ ಬಳಿಗೆ ಹೋಗಿ ತನ್ನ ಪತಿಯ ಮೇಲಿನ ಪ್ರಭಾವವನ್ನು ಹಿಂದೆ ತೆಗೆದುಕೊಳ್ಳಲು ಕೋರಿದಾಗ ಶನಿ ಮಹಾತ್ಮ ಅದಕ್ಕೆ ಒಪ್ಪದೇ ಹೋದಾಗ, ತನ್ನ ಪತಿಯಿಂದ ಶನಿಪ್ರಭಾವವನ್ನು ಹೊರದೋಡಿಸುವ ಸಲುವಾಗಿ ಪಾವರ್ತಿ ದೇವಿಯು ಭೂಲೋಕಕ್ಕೆ ಬಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಚರಿಸುತ್ತಾ ಅಂತಿಮವಾಗಿ ಮೃಗವಧೆ (ರಾಮಾಯಣ ಕಾಲದಲ್ಲಿ ಪ್ರಭು ಶ್ರೀರಾಮ ಮಾಯಾ ಜಿಂಕೆಯ ರೂಪದಲ್ಲಿದ್ದ ಮಾರೀಚನನ್ನು ವಧಿಸಿದ ಪ್ರದೇಶ) ಕ್ಷೇತ್ರದಲ್ಲಿ ಹೋಮ ಮಾಡಿ ಭಕ್ತಿಯಿಂದ ಪೂಜಿಸಿ ಶನಿಯು ಪರಶಿವನಿಗೆ ಮುಕ್ತಿ ಕೊಡದೇ ಹೋದಲ್ಲಿ ತಾನು ಹೋಮಕುಂಡಕ್ಕೆ ಬಿದ್ದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಘೋಷಿಸಿ ಹೋಮವನ್ನು ಆರಂಭಿಸುವ ಮುನ್ನಾ ವಿಘ್ನವಿನಾಶಕನಿಗೆ ಈ ಸ್ಥಳದಲ್ಲಿ ಪೂಜೆ ಮಾಡಲು ಸಿದ್ಧಳಾದಾಗ, ಆಕೆಗೆ ನೀರು ಸಿಗದೇ ಹೋದಾಗಾ, ನೀರಿಗಾಗಿ ಬ್ರಹ್ಮ ದೇವನನ್ನು ಕೋರಿಕೊಳ್ಳುತ್ತಾಳೆ. ಆಗ ಬ್ರಹ್ಮ ದೇವನು ತನ್ನ ಬಾಣದಿಂದ ಭೂಮಿಗೆ ಹೊಡೆದು ನೀರನ್ನು ಚಿಮ್ಮಿಸಿದನಂತೆ. ಅಂದು ಹಾಗೆ ಚಿಮ್ಮಿದ ನೀರೇ ಈ ಕಮಂಡಲ ತೀರ್ಧವಾಗಿದ್ದು. ಹೀಗೆ ಬ್ರಹ್ಮದೇವನ ಕೃಪೆಯಿಂದ ಉಗಮವಾದ ಕಾರಣ ಇದಕ್ಕೆ ಬ್ರಾಹ್ಮಿ ನದಿ ಎಂದು ಕರೆಯಲಾಗುತ್ತದೆ. ಇದೇ ಬ್ರಾಹ್ಮಿ ನದಿಯ ಪಾತ್ರವನ್ನು ಮೃಗವಧೆಯಲ್ಲಿ ಕಾಣಬಹುದಾಗಿದೆ. ತೀರ್ಥದಲ್ಲಿ ಸ್ನಾನ ಮಾಡಿದರೆ ಶನಿದೋಷ ಪರಿಹಾರವಾಗುತ್ತದೆ ಮತ್ತು ಮಕ್ಕಳಿಗೆ ಈ ತೀರ್ಥವನ್ನು ಕುಡಿಸಿದರೆ ಒಳಿತಾಗುತ್ತದೆ ಎಂಬುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.

ಪ್ರತಿ ನಿತ್ಯವೂ ಬೆಳಗ್ಗೆ 7.30 ರಿಂದ 8.30 ರವರೆಗೆ ದೈನಂದಿನ ಅಭಿಷೇಕ ಮತ್ತು ಪೂಜೆ ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿಯ ನಂತರ ಯಾವುದೇ ಪೂಜೆಗೆ ಅವಕಾಶವಿರುವುದಿಲ್ಲ. ಹಬ್ಬ ಹರಿದಿನಗಳು, ಅಮಾವಾಸ್ಯೆ, ಪೌರ್ಣಮಿ ಮತ್ತು ಸಂಕಷ್ಟಹರ ಚತುರ್ಥಿಯಂದು ವಿಶೇಷವಾದ ಪೂಜೆಗಳು ನಡೆಯಲ್ಪಡುತ್ತದೆ.

ಅಂದು ಪಾರ್ವತಿ ದೇವಿಯು ಗಣೇಶನನ್ನು ಪೂಚಿಸಿದ ದಿನವು ಮಾರ್ಗಶಿರ ಮಾಸದ (ನವೆಂಬರ್-ಡಿಸೆಂಬರ್) ಅಮಾವಾಸ್ಯೆಯಾಗಿದ್ದು ಅದನ್ನು ಎಳ್ಳು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ವಿಶೇಷ ದಿನವು ಮಹಿಳೆಯರಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿರುವ ಕಾರಣ ಮಹಿಳಾ ಭಕ್ತಾದಿಗಳು ಎಳ್ಳಮಾವಾಸ್ಯೆಯ ದಿನ ವಿಶೇಷವಾಗಿ ಇಲ್ಲಿಗೆ ಬಂದು ಗಣೇಶನಿಗೆ ಪೂಜೆ ಸಲ್ಲಿಸಿಹೋಗುತ್ತಾರೆ.

ಹಳೇ ಮೈಸೂರಿನ ಭಾಗದಲ್ಲಿ ನವರಾತ್ರಿಯ ೯ನೇ ದಿನ ಆಯುಧ ಪೂಜೆಯ ಸಂದರ್ಭದಲ್ಲಿ ವಾಹನಗಳ ಪೂಜೆ ಮಾಡಿದರೆ ಕರಾವಳಿ ಮತ್ತು ಮಲೆನಾಡಿನ ಕಡೆಯಲ್ಲಿ ದೀಪಾವಳಿಯ ಅಮಾವಾಸ್ಯೆ ಮತ್ತು ಬಲಿಪಾಡ್ಯಮಿಯಂದು ವಾಹನಗಳ ಪೂಜೆ ಮಾಡಿಸುವ ಪದ್ದತಿ ಇದ್ದು ಅಂತಹ ದಿನಗಳಲ್ಲಿಯೂ ಸಹಾ ಇಲ್ಲಿ ಹೆಚ್ಚಿನ ವಾಹನಗಳ ಪೂಜೆ ಮಾಡಿಸುವುದನ್ನು ಕಾಣಬಹುದಾಗಿದೆ.

ದೇವಾಲಯ ಪಕ್ಕದಲ್ಲೇ ಹೋಮ ಹವನ, ಪೂಜೆ ಪುನಸ್ಕಾರಗಳು ಮತ್ತು ಪ್ರವಚನ ನೀಡಲು ಯೋಗ್ಯವಾದಂತಹ ಸಭಾಂಗಣವಿದ್ದು ಅಲ್ಲಿ ನಿರಂತರವಾಗಿ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. . ಜೀವನದಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ, ಒಟ್ಟಾರೆ ಲೋಕದ ಯೋಗಕ್ಷೇಮಕ್ಕಾಗಿ ಈ ವಿಘ್ನವಿನಾಶಕನ ದರ್ಶನ ಮಾಡಿ ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗುವ ಸಲುವಾಗಿ ವಾರಾಂತ್ಯದಲ್ಲಿ ನೂರಾರು ಭಕ್ತಾದಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ದಟ್ಟವಾದ ಕಾಡಿನ ಮಧ್ಯೆ ಸಣ್ಣದಾದ ಪ್ರದೇಶದಲ್ಲಿ ಇರುವ ಈ ದೇವಸ್ಥಾನಕ್ಕೆ ವಿಶೇಷವಾದ ವಾಹನ ಸೌಲಭ್ಯ ಇಲ್ಲದ ಕಾರಣ, ಬಸ್ಸಿನ ಮೂಲಕ ಚಿಕ್ಕಮಗಳೂರಿನ ಕೊಪ್ಪ ಇಲ್ಲವೇ ಶೃಂಗೇರಿ ಅಥವಾ ಹರಿಹರಪುರಕ್ಕೆ ಬಂದು ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಕಮಂಡಲ ಗಣಪತಿ ಶ್ರೀ ಕ್ಷೇತ್ರಕ್ಕೆ ಬರಬಹುದಾದರೂ, ಖಾಸಗೀ ವಾಹನಗಳ ಮೂಲಕ ಬರುವುದು ಉತ್ತಮವಾಗಿದೆ. ಈ ಸ್ಥಳದಲ್ಲಿ ಕೋತಿಗಳು ಹೆಚ್ಚಾಗಿದ್ದು ಭಕ್ತಾದಿಗಳು ತಮ್ಮ ವಸ್ತುಗಳ ಬಗ್ಗೆ ವಿಶೇಷಾದ ಗಮನವಹಿಸುವುದು ಅಗತ್ಯವಾಗಿದೆ

ಇಷ್ಟೆಲ್ಲಾ ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನೇರವಾಗಿ ಶೃಂಗೇರಿಗೆ ಬಂದು ತಾಯಿ ಶಾರದೆಯ ದರ್ಶನ ಪಡೆದು ಅಲ್ಲಿಂದ ಹರಿಹರಪುರಕ್ಕೆ ಬಂದು ಅಲ್ಲಿ ನೂತನವಾಗಿ ಭವ್ಯವಾಗಿ ನಿರ್ಮಾಣವಾಗಿರುವ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದು ಅಲ್ಲಿಂದ ಕಮಂಡಲ ಗಣಪತಿ ಮತ್ತು ಮೃಗವಧೆಯ ಶನಿ ಮಹಾತ್ಮ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಎಲ್ಲಾ ದೇವರುಗಳು ಕೃಪಾಶೀರ್ವಾದಕ್ಕೆ ಪಾತ್ರರಾಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s