ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್

ಕಳೆದ ಎರಡು ವರ್ಷಗಳಂದ ಪ್ರಪಂಚಾದ್ಯಂತ ಕರೋನಾ ಎಂಬ ಮಹಾಮಾರಿ ವಕ್ಕರಿಸಿದ ನಂತರ ಜೀವನಾವಶ್ಯಕ ವಸ್ತುಗಳದ ರೋಟಿ ಮಕಾನ್ ಕಪಡ ಜೊತೆ ಮೊಬೈಲ್ ಮತ್ತು ಮಾಸ್ಕ್ ಎರಡೂ ಸೇರಿಕೊಂಡು ಜೀವನವನ್ನು ಹೈರಾಣಾಗಿಸಿದ್ದಂತೂ ಸುಳ್ಳಲ್ಲ. ಬಡವ ಬಲ್ಲಿದ ಹಿರಿಯ ಕಿರಿಯ ಎನ್ನವ ತಾರತಮ್ಯವೈಲ್ಲದೇ ಕರೋನ ಹೆಸರಿನಲ್ಲಿ ಜವರಾಯ ಎಲ್ಲರನ್ನೂ ಒಮ್ಮೆ ತಟ್ಟಿಕೊಂಡು ಹೋಗಿದ್ದ ಕಾರಣ, ಜಾತಸ್ಯ ಮರಣಂ ಧೃವಂ ಅರ್ಥಾತ್ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮ ಗೊತ್ತಿದ್ದರೂ, ಜನರಿಗೆ ಅಯ್ಯೋ ಮಕ್ಕಳ ಮದುವೆ ಮಾಡಿಲ್ಲಾ, ಅಯ್ಯೋ ಮಕ್ಕಳಿಗೆ ಇರಲು ಒಂದು ಸೂರು ಮಾಡಿಲ್ಲಾ ಎಂದಾದರೂ ಇನ್ನೂ ಸ್ವಲ್ಪ ದಿನಗಳು ಬದುಕಿರಬೇಕು ಎಂದು ಸರ್ಕಾರ ಲಸಿಕೆಗಳನ್ನು ಕೊಡಲು ಆರಂಭಿಸಿದ್ದೇ ತಡಾ, ಯಾರು ಏನೇ ಹೇಳಲಿ ಅದನ್ನು ಲೆಕ್ಕಿಸದೇ, ಜೀವ ಇದ್ದರೆ ಮಾತ್ರಾ ಜೀವನ ಎನ್ನುತ್ತಾ ತಾಮುಂದು ನಾಮುಂಂದು ಸರದಿಯ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡು ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂದು,ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಂತೂ ಸುಳ್ಳಲ್ಲ. ಆದದ ಕೆಲವೇ ತಿಂಗಳುಗಳ ನಂತರ ಮತ್ತೇ ವಿವಿಧ ರೀತಿಯ ಹೆಸರಿನಲ್ಲಿ ವೈರಾಣು ಹರಡುತ್ತಿರುವನ್ನು ಗಮನಿಸಿದ ಸರ್ಕಾರ, ಪ್ರಜೆಗಳ ಹಿತದೃಷ್ಟಿಯಿಂದ ಪ್ರಜೆಗಳಲ್ಲಿ ಅದರಲ್ಲೂ, ಹಿರಿಯ ನಾಗರೀಕರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಬೂಸ್ಟರ್ ಡೋಸ್ ಕೊಡಲು ನಿರ್ಧರಿಸಿದಾಗ ಮೇರಾ ನಂಬರ್ ಕಬ್ ಆಯೇಗಾ ಎಂದು ತಿಳಿದುಕೊಂಡು ಮತ್ತೆ ಅದೇ ಸರದಿಯ ಸಾಲಿನಲ್ಲಿ ನಿಂತು ಬೂಸ್ಟರ್ ಡೋಸ್ ಹಾಕಿಸಿಕೊಂದು ಮತ್ತೇ ಬದುಕಿದೆಯಾ ಬಡಜೀವ ಎಂದಿದ್ದೂ ಸುಳ್ಳಲ್ಲಾ.

ಅರೇ ಶೀರ್ಷಿಕೆ ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬುದಾಗಿದ್ದೂ ಇದೇನು ಕರೋನಾ ಬಗ್ಗೇಯೇ ಕೊರೀತಾ ಇದ್ದೀನೀ ಅಂತಾ ನಿಮಗ ಆಶ್ಚರ್ಯವಾಗಿದ್ದರೆ, ದಿನಾಂಕ 29.01.2023ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಮಲ್ಲೇಶ್ವರಂ ಶಿಶುವಿಹಾರದ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸಿದ ಕೂಟದ ಬಗ್ಗೆ ಪೀಠಿಕೆ ಅಷ್ಟೇ. ಸಾಧಾರಣವಾಗಿ alumni get together ಎಂದೇ ಎಲ್ಲರೂ ಹೇಳುತ್ತಾರೆ. ಕನ್ನಡದಲ್ಲಿ ಅದನ್ನು ಅನುವಾದಿಸಿದರೆ ಅದು ಹಳೆಯ ವಿದ್ಯಾರ್ಥಿಗಳ ಒಗ್ಗೂಡುವಿಕೆ ಎಂಬರ್ಥ ಬರುತ್ತದೆ. ಆದರೆ ನೆನ್ನೆ ಅಲ್ಲಿ ಸೇರಿದವರನ್ನು ನೋಡೀ ಅವರೊಂದಿಗೆ ಭೇಟಿಯಾದಾಗ ಅವರನ್ನು ಹಳೆಯ ವಿದ್ಯಾರ್ಥಿಗಳು ಎಂದು ಕರೆಯುವುದಕ್ಕಿಂತಲೂ ಹಿರಿಯ ವಿದ್ಯಾರ್ಥಿಗಳು ಎಂದೇ ಕರೆಯಬೇಕು ಎಂದೆನಿಸದ್ದಂತೂ ಸತ್ಯ.

ನಮಗೆ 50+ ವರ್ಷ ಆಯಿತು. ಜೀವನದಲ್ಲಿ ನಾವು ಏನೋ ಕಡೆದು ಕಟ್ಟೆಹಾಕಿ ದಬ್ಬಾಕಿ ಬಿಟ್ಟಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿದ್ದರಿಗೆ ಅಲ್ಲಿ ಬಂದಿದ್ದ ಬಹುತೇಕರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವಾಗ ನಾವು 62 ಬ್ಯಾಚ್, ನಾವು 65 ಬ್ಯಾಚ್ ಎಂದು ಹೇಳುತ್ತಿದ್ದರೆ, ಅಲ್ಲೊಬ್ಬ ಹಿರಿಯರು ನಾವು 59 ಬ್ಯಾಚ್ ಎಂದು ಪರಿಚಯಿಸಿಕೊಂಡಿದ್ದಲ್ಲದೇ ಅವರಲ್ಲಿ ಬಹುತೇಕರು ತಮ್ಮ ಹೈಸ್ಕೂಲ್, ಕಾಲೇಜ್ ಗಳಲ್ಲಿಯೂ ಸಹಪಾಠಿಗಳಾಗಿಯೇ ಮುಂದುವರೆದು, ಉನ್ನತ ಪದವಿಗಳನ್ನು ಪಡೆದು ದೇಶ ವಿದೇಶಗಳಲ್ಲಿ ಸರ್ಕಾರಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ವಿಷಯ ತಿಳಿದಾಗ, ನಾವುಗಳು ಹುಟ್ಟುವ ಮುನ್ನವೇ ಇಂತಹವರು ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಅಷ್ಟು ದೊಡ್ಡ ದೊಡ್ಡ ಹುದ್ದೆಗಳಲ್ಲಿ 3-4 ದಶಕಗಳ ಕಾಲ ಕೆಲಸ ಮಾಡಿ ಬಂದಿದ್ದರೂ, ಇಲ್ಲಿ ಅತ್ಯಂತ ಸೌಮ್ಯವಾಗಿ ಮತ್ತು ಸಜ್ಜನಿಕೆಯಿಂದ ನಮ್ಮೆಲ್ಲರನ್ನೂ ಆತ್ಮೀಯವಾಗಿ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕಿ ಏನು ಹೆಸರು? ಯಾವ ಬ್ಯಾಚ್? ಈಗ ಏನು ಮಾಡ್ತೀದ್ದೀರೀ? ಎಂದು ಅದೂ ಬಹುವಚನದಲ್ಲೇ ಮಾತಾನಾಡಿಸುತ್ತಿದ್ದಾಗ, 1953 ರಲ್ಲಿ B K ತಿರುಮಲಮ್ಮನವರು ಮಲ್ಲೇಶ್ವರದ ಸರ್ಕಲ್ಲಿನಲ್ಲಿದ್ದ (ಪ್ರಸ್ತುತ ಕೆನರಾ ಬ್ಯಾಂಕ್ ಹಿಂದೆ) ಜಟಕಾ ಸ್ಟಾಂಡಿನ ಎದುರು ಮಧ್ಯಮ ವರ್ಗದವರಿಗೆ ಕೈಗೆಟುಕುವ ಮತ್ತು ಭಾರತೀಯ ಸಂಸ್ಕಾರ ಮತ್ತು ಶಿಕ್ಷಣ ಪದ್ದತಿಯ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಶಿಶುವಿಹಾರದಿಂದ ಹಿಡಿದು ೭ನೇ ತರಗತಿಯವರೆಗೂ ಆರಂಭಿಸಿದ ಶಾಲೆಯ ಆದಾಗಲೇ70+ ವರ್ಷಗಳನ್ನು ದಾಟಿ 75ನೇ ವಜ್ರ ಮಹೋತ್ಸವತ್ತ ಧಾಪುಗಾಲು ಹಾಕುತ್ತಿರುವ ಮಲ್ಲೇಶ್ವರಂ ಶಿಶುವಿಹಾರದಲ್ಲಿ ತಿರುಮಲಮ್ಮನವರ ಗರಡಿಯಲ್ಲಿ ಚಿಕ್ಕವಯಸ್ಸಿನಲ್ಲಿ ಕಲಿಸಿತಂತಹ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹೇಗೆ ತಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡು ಇಂದಿಗೂ ಸಹಾ ಮಲ್ಲೇಶ್ವರಂ ಶಿಶುವಿಹಾರದ ರಾಯಭಾರಿಗಳಾಗಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದಿನಿಸಿದ್ದಲ್ಲದೇ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿಯೂ, ಸಮಾಜದಲ್ಲಿ ವಿವಿಧ ರೀತಿಯಾಗಿ ಉನ್ನತ ಮಟ್ಟಕ್ಕೇರಿ, ನೆಮ್ಮದಿಯಾದ ಜೀವನ ನಡೆಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ, ಇಂದಿನ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ ಎಂದೆನಿಸಿತು.

ನಮ್ಮ ಮನೆಯಲ್ಲಿ ಒಂದು ಸಣ್ಣ ಸಮಾರಂಭಕ್ಕೆ ಪರಿಚಿತ ಬಂಧು ಮಿತ್ರರನ್ನೇ ಒಟ್ಟಿಗೆ ಒಂದೆಡೆ ಸೇರಿಸುವುದೇ ಕಷ್ಟ ಎನಿಸಿರುವಾಗ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಇತ್ತೀಚಿನ ವಿವರಗಳನ್ನು ಹೆಕ್ಕಿ ಅವರನ್ನೆಲ್ಲಾ ಒಮ್ಮೆ ಮಾತನಾಡಿಸಿ ಕಳೆದ 15 ವರ್ಷಗಳಿಂದಲೂ ಪ್ರತೀವರ್ಷವೂ ಈ ರೀತಿಯಾಗಿ ಒಟ್ಟಿಗೆ ಸೇರಿಸುತ್ತಿರುವ ಆಯೋಜಕರ ಕೆಲಸ ನಿಜಕ್ಕೂ ಶ್ಲಾಘನೀಯವೇ ಸರಿ. ಸಾಧಾರಣವಾಗಿ ಪ್ರತೀ ವರ್ಷ ಜನವರಿ ತಿಂಗಳಿನ ಕೊನೆಯ ಭಾನುವಾರ MSV ವಿದ್ಯಾರ್ಥಿಗಳ ಸ್ನೇಹ ಮಿಲನ ಆಯೋಜಿಸಲಾಗುವ ಕಾರಣ, ಅದರ ಪೂರ್ವ ತಯಾರಿ ಸುಮಾರೂ ಮೂರ್ನಾಲ್ಕು ತಿಂಗಳುಗಳಿಂದಲೂ ಆರಂಭವಾಗುತ್ತದೆ. ಆಯೋಜಕರು ಮಿಲನದ ದಿನಾಂಕ ಘೋಷಿಸುತ್ತಿದ್ದಂತೆಯೇ ಹಿರಿಯ ವಿದ್ಯಾರ್ಥಿಗಳೆಲ್ಲರೂ, ತಮ್ಮ ಸಂಪರ್ಕದಲ್ಲಿರುವ ಅನೇಕರನ್ನು ಮಾತನಾಡಿಸಿ, ಇಂದೊಂದು ತಮ್ಮ ಮನೆಯ ಸಮಾರಂಭವೇನೋ ಎನ್ನುವಂತೆ ಆಮಂತ್ರಿಸಿ ಎಲ್ಲರನ್ನೂ ಒಂಡೆದೆಯಲ್ಲಿ ಈ ರೀತಿಯಾಗಿ ಸೇರಿಸುವುದು ನಿಜಕ್ಕೂ ಅನನ್ಯವೇ ಸರಿ.

ಈ ಸ್ನೇಹ ಮಿಲನ್ನಕ್ಕಾಗಿಯೇ ರಾಜ್ಯದ ನಾನಾ ಕಡೆಯಿಂದ ಅಲ್ಲದೇ, ಹೊರರಾಜ್ಯ ಮತ್ತು ವಿದೇಶದಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳೂ ಸಹಾ ಕೇವಲ ತಮ್ಮ ಸಹಪಾಠಿಗಳನ್ನು ಭೇಟಿ ಮಾಡುವುದಕ್ಕಾಗಿಯೇ ಸಮಯ ಮಾಡಿಕೊಂಡು ಒಂದೆಡೆ ಸೇರಿ ತಮ್ಮೆಲ್ಲಾ ಬವಣೆಗಳನ್ನು ಮರೆತು ಬೆಳಿಗ್ಗೆಯಿಂದ ಸಂಜೆಯವರೆಗೂ ಬಾಯಿ ತುಂಬಾ ಮಾತಾನಾಡಿ (ಅದಕ್ಕೇ ಏನೋ ನೊಂದಾವಣಿ ಮಾಡಿಸಿಕೊಳ್ಳುವ ಸ್ಥಳದಲ್ಲೇ ಪ್ರತೀ ವರ್ಷವೂ ಸಂಕ್ರಾಂತಿಯ ಎಳ್ಳು ಬೆಲ್ಲ ಇಟ್ಟು ಎಳ್ಳು ಬೆಲ್ಲಾ ತಿಂದು ಒಳ್ಳೇ ಮಾತನಾಡೋಣ ಎಂದು ಹೇಳುವ ಸತ್ ಸಂಪ್ರದಾಯವನ್ನೂ ಪಾಲಿಸಿಕೊಂಡು ಬಂದಿದ್ದಾರೆ) ಅದರ ಜೊತೆಯಲ್ಲೇ ವಿವಿಧ ಸಾಂಸ್ಜೃತಿಕ ಕಾರ್ಯಕ್ರಮಗಳ ಮೂಲಕ ಮನೋರಂಜನೆ ಪಡೆಯುತ್ತಲೇ, ಹೊತ್ತು ಹೊತ್ತಿಗೆ ಸರಿಯಾಗಿ ತಂಪು ಪಾನೀಯವಲ್ಲದೇ, ರುಚಿಕರವಾದ ಸುಗ್ರಾಸ ವಾದ ಭೋಜನವನ್ನು (ಪ್ರತೀವರ್ಷವೂ ಬಗೆ ಬಗೆಯ ದೇಸೀ ಅಡುಗೆಗಳ ಭೋಜನದ ಬಗ್ಗೆಯೇ ಒಂದು ಲೇಖನ ಬರೆಯಬಹುದು. ಈ ಬಾರಿ ಬಾಳೇದಿಂಡಿನ ಕೋಸಂಬರಿ ಮತ್ತು ತರಕಾರಿಗಳ ಕೂಟು ವಿಶೇಷವಾಗಿತ್ತು) ನೆಚ್ಚಿನ ಗೆಳೆಯರೊಂದಿಗೆ ಮುಗಿಸಿ (ಮಧುಮೇಹ, ರಕ್ತದೊತ್ತಡ ಎಲ್ಲವನ್ನೂ ಮರೆತು ಸಿಹಿ ಪದಾರ್ಥಗಳ ರುಚಿಯನ್ನೂ ನೋಡಿ) ಭುಕ್ತಾಯಾಸದ ನಂತರ ಮತ್ತೆ ಕೆಲವು ಮನರಂಜನಾತ್ಮಕ ಚಟುವಟಿಕೆಗಳ ಜೊತೆ ಆಟ ಮತ್ತು ವಿನೋದಗಳ ನಂತರ ಸಂಜೆ ಕಾರ್ಯಕ್ರಮದ ಕೊನೆಯಲ್ಲಿ ವರ್ಷಾನು ವರ್ಷ ಅನೂಚಾನಾಗಿ ನಡೆಸಿಕೊಂಡು ಬರುತ್ತಿರುವ ಅವರೇಕಾಳು ಉಪ್ಪಿಟ್ಟು ಮತ್ತು ಬಿಸಿ ಬಿಸಿ ಕಾಫೀ/ಟೀ ಸಮಾರಾಧನೆಗಳ ಬಗ್ಗೆ ವರ್ಣಿಸುವುದಕ್ಕಿಂತಲೂ ಅನುಭವಿಸಿದವರಿಗೇ ಗೊತ್ತು ಅದರ ಮಜ.

ಮನೆಯಲ್ಲಿಯೇ ಪ್ರತಿದಿನವೂ ರುಚಿ ರುಚಿಯಾದ ತಿಂಡಿ ಊಟ ಮಾಡಬಹುದು. ಅದಕ್ಕಿಂತಲೂ ಹೆಚ್ಚಿನ ರುಚಿಗಾಗಿ ಹೋಟೆಲ್ಲಿಗೆ ಹೋಗಿಯೂ ತಿನ್ನಬಹುದು. ಹಾಗಾಗಿ ಈ ಸ್ನೇಹ ಕೂಟದಲ್ಲಿ ಊಟ ತಿಂಡಿ ತೀರ್ಥ ಎಲ್ಲವೂ ನಗಣ್ಯವಾಗಿ ಕೇವಲ ಪರಿಶುದ್ಧವಾದ ಸ್ನೇಹ ಮಾತ್ರವೇ ಗಣನೆಗೆ ಬರುವ ಕಾರಣ, ಈ ಕೂಟಕ್ಕೆ ಬರುವವರೆಲ್ಲರೂ ತಮ್ಮ ಬಾಲ್ಯದ ಗೆಳೆಯ/ಗೆಳತಿಯರನ್ನು ಭೇಟಿ ಮಾಡುವ ಸಲುವಾಗಿಯೇ ಮಾನಸಿಕವಾಗಿ ಸನ್ನದ್ದರಾಗಿಯೇ ಬಂದಿರುತ್ತಾರೆ. ಅಷ್ಟು ವಯಸ್ಸಿನವರಾಗಿ, ಅವರಿಗೆ ಮಕ್ಕಳು ಮೊಮ್ಮಕ್ಕಳು ಕೆಲವರಿಗೆ ಮರಿಮಕ್ಕಳು ಇದ್ದರೂ, ಪರಸ್ಪರ ಪರಿಚಯ ಇರುವವರೊಂದಿಗೆ ಏ ಏನೋ ಹೇಗಿದ್ದೀಯಾ? ಯಾಗೆ ಸಣ್ಣಗಾಗಿ ಹೋಗಿದ್ದೀದೀಯಾ? ಎನ್ನುತ್ತಲೋ? ಏನೇ? ಹೇಗಿದ್ದೀಯಾ? ಬರ್ತಾ ಬರ್ತಾ ದಪ್ಪಾ ಅಗ್ತಾ ಯಾಕೇ? ಎಂದು ಕಾಲು ಎಳೆಯುತ್ತಾ ಮಾತನಾಡಿಸುವುದನ್ನು ನಮ್ಮಂತಹ ನಡುವಯಸ್ಸಿನವರಿಗೆ ನೋಡುವುದಕ್ಕೇ ಬಲು ಮಜ ಕೊಡುತ್ತದೆ. ಅಂದು ಕರೆಯುತ್ತಿದ್ದ, ಅಡ್ಡ ಹೆಸರುಗಳಾಗಿದ್ದ ಮಡಿಕೆ, ಕುಳ್ಳಿ, ಕೋಳಿ, ಒಂಡ್ರಾ, ಲೊಡ್ಡೇ ಮುಂತಾದ ಹೆಸರುಗಳನ್ನು ನೆನಪಿಸಿಕೊಳ್ಳುತ್ತಾ ಆ ವಯಸ್ಸಿನಲ್ಲೂ ಬಾಲ್ಯಕ್ಕೆ ಜಾರುವ ಪರಿ ನಿಜಕ್ಕೂ ಪರಮಾನಂದವೇ ಸರಿ.

ಕಾರ್ಯಕ್ರಮ ಆರಂಭದಲ್ಲಿ ಎಲ್ಲರನ್ನೂ ನೋಡಿ ಸಂಭ್ರಮಿಸಿ ಮನಸೋ ಇಚ್ಚೆ ಮಾತನಾಡಿಸಿ, ಒಟ್ಟಿಗೆ ಕುಳಿತು ಕಾರ್ಯಕ್ರಮಗಳನ್ನು ನೋಡಿ ಹೊಸಬರನ್ನು ಪರಿಚಯಿಸಿಕೊಂಡು ಅವರೊಂದಿಗೇ ಊಟ ತಿಂಡಿ ಮಾಡಿ ಇನ್ನೇನು ಸಂಜೆ ಸಮೀಪಿಸಿ ಕಾರ್ಯಕ್ರಮಕ್ಕೆ ವಿರಾಮ ಹಾಕಬೇಕು ಎನ್ನುವಾಗ ಪರಸ್ಪರ ಅಗಲುವಿಕೆಯ ತಳಮಳ ಮಗಳನ್ನು ಮದುವೆ ಮಾಡಿ ಅಳಿಯನ ಮನೆ ತುಂಬಿಸಿಕೊಡುವಾಗ ಪೋಷಕರಿಗೆ ಆಗುವಂತೆ ಇರುತ್ತದೇ ಎಂದರು ಅತಿಶಯವಲ್ಲ. ಇಂದಿನ ಆಧುನಿಕ ಯುಗದಲ್ಲಿ Mobile, Facebook, WhatsApp, Instagram ಮುಂತಾದವುಗಳ ಮೂಲಕ ಪರಸ್ಪರ ಸಂಪರ್ಕದಲ್ಲಿ ಇರಬಹುದಾದರೂ, ಪರಸ್ಪರ ಎದುರು ಬದುರು ಕೈ ಕೈ ಹಿಡಿದು ಕಣ್ಣಲ್ಲಿ ಕಣ್ಣನ್ನಿಟ್ಟು ನೋಡುತ್ತಾ ಸಂಭ್ರಮಿಸುವ ಪರಿಯೇ ಬೇರೆ. ಹಾಗಾಗಿ ಇಂತಹ ಸ್ನೇಹಮಿಲನ ಕೂಟಗಳು ವಿಶೇಷ ರೀತಿಯ ಆನಂದದ ಅನುಭವವನ್ನು ನೀಡುತ್ತದೆ.

ಕಾರ್ಯಕ್ರಮದ ಆರಂಭದಲ್ಲಿ ದೀಪಪ್ರಜ್ವಲನೆಯಾದ ನಂತರ ಆ ವರ್ಷದಲ್ಲಿ ನಮ್ಮೆಲ್ಲರನ್ನೂ ಆಗಲಿದ ಮಲ್ಲೇಶ್ವರಂ ಶಿಶುವಿಹಾರದ ಶಿಕ್ಷಕ/ಶಿಕ್ಷಕಿಯರು, ಆಡಳಿತ ವರ್ಗದವರು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಒಂದು ನಿಮಿಷ ಮೌನಾಚರಣೆ ಅರ್ಪಿಸುವುದು ವಾಡಿಕೆಯಾಗಿ, ಹೀಗೆ ವಯಸ್ಸಾದವರು ಒಂದಲ್ಲಾ ಒಂದು ದಿನ ಅಗಲಲೇ ಬೇಕು ಎಂಬ ಜಗದ ನಿಯಮ ಅರಿತಿದ್ದರೂ, ಈ ರೀತಿಯ ಬಾಲ್ಯದ ಗೆಳೆಯ/ಗೆಳತಿಯರ ಸ್ನೇಹ ಮಿಲನಗಳು ಅಮೃತ ಬಿಂದುವಿನಂತೆ, ಮೊದಲೇ ತಿಳಿಸಿದ ಬೂಸ್ಟರ್ ಡೋಸ್ ನಂತೆ ಕೆಲಸ ಮಾಡಿ ಜೀವದಲ್ಲಿ ಹೆಚ್ಚು ದಿನಗಳ ಕಾಲ ಬದುಕುವಂತೆ, ಮತ್ತೆ ಮುಂದಿನ ವರ್ಷ ಇದೇ ಸಮಯದಲ್ಲಿ ಮತ್ತಷ್ಟೂ ಹಳೆಯವರನ್ನು ಭೇಟಿ ಮಾಡಲು ಉತ್ಸಾಹ ನೀಡುತ್ತದೆ ಎನ್ನುವುದಂತೂ ಪರಮ ಸತ್ಯ. ಕಾರ್ಯಕ್ರಮ ಮುಗಿದ ಒಂದೆರಡು ದಿನಗಳ ನಂತರ ಆಯೋಕಕರು ಹಂಚಿಕೊಳ್ಳುವ ಗ್ರೂಪ್ ಫೋಟೋದಲ್ಲಿ ತಾನೆಲ್ಲಿದ್ದೇನೆ? ತನ್ನ ಅಕ್ಕ ಪಕ್ಕದಲ್ಲಿ ಯಾರಿದ್ದಾರೆ? ಎಂದು ನೋಡಿ ಅದನ್ನು ತಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳುವ ಮಜದ ಮುಂದೇ ಬೇರೇ ಮಜವೇ ಇಲ್ಲಾ ಬಿಡಿ.

ಈ ವರ್ಷ ವಿವಿಧ ಕಾರಣಗಳಿಂದ ಬರಲಾಗದವರು, ಈ ಲೇಖನ ಓದಿದ ನಂತರ ಖಂಡಿತವಾಗಿಯೂ ಇಂತಹ ಸುಂದರ ಕಾರ್ಯಕ್ರಮದಲ್ಲಿ ತಾವೂ ಸಹಾ ಭಾಗಿಗಳಾಗಲೇ ಬೇಕು ಎಂದು ಈ ಕೂಡಲೇ ನಿರ್ಧಾರ ಮಾಡುತ್ತೀರೀ ಮತ್ತು ಅದೇ ರೀತಿ ಈ ವರ್ಷ ಈ ಕಾರ್ಯಕಮದಲ್ಲಿ ಭಾಗವಹಿಸಿದ್ದವರು ಈ ಲೇಖನದ ಮೂಲಕ ಕಾರ್ಯಕ್ರಮದಲ್ಲಿ ಮಾಡಿದ ಮಜವನ್ನು ಮೆಲುಕು ಹಾಕಿ ಮುಂದಿನ ಬಾರಿ ಮತ್ತಷ್ಟು ಮಗದಷ್ಟು ಮಲ್ಲೇಶ್ವರಂ ಶಿಶುವಿಹಾರದ ಹಿರಿಯ ಗೆಳೆಯರೊಂದಿಗೆ ಭಾಗವಹಿಸುತ್ತೀರಿ ಎನ್ನುವ ಆಶಯ ನನ್ನದು.

ಮುಂದಿನ ವರ್ಷ ಒಂದೇ ಉಸಿರಿನಲ್ಲಿ ಒಡಲಾಳದಿಂದ ಬೋಲೋ…… ಭಾರತ್…. ಮಾತಾ…. ಕೀ….. ಜೈ…… ಘೋಷಣೆ ಕೂಗಲು ನಾನು ಸಿದ್ದವಾಗಿ ಬರ್ತೀನಿ. ನೀವೂ ನನ್ನೊಂದಿಗೆ ಒಕ್ಕೊರಲಿನಿಂದ ಹೃದಯಾಂತರಾಳದಿಂದ ನನಗಿಂತಲೂ ಎತ್ತರದ ಧ್ವನಿಯಲ್ಲಿ ಭಾರತ ಮಾತೆಗೆ ಜೈಕಾರ ಹಾಕಲು ಬಂದೇ ಬರ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s