ಈ ಭೂಮಿಯಲ್ಲಿರುವ ಸಕಲ ಜೀವ ಜಂತುಗಳೆಲ್ಲವೂ ತಮ್ಮ ತಮ್ಮ ಜೀವನಕ್ಕಾಗಿ ಪ್ರಕೃತಿಯನ್ನೇ ಅವಲಂಭಿಸುವ ಕಾರಣ, ಪ್ರಕೃತಿಯೂ ಸಹಾ ಈ ಭೂಲೋಕದಲ್ಲಿರುವ ಪ್ರತಿಯೊಂದು ಜೀವರಾಶಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ತನ್ನದೇ ರೀತಿಯಲ್ಲಿ ಬದಲಾಗುವುದಕ್ಕಾಗಿಯೇ ಆರು ಋತುಗಳಿಳಿದ್ದು ಅವು ಕಾಲ ಕಾಲಕ್ಕೆ ನಿರಂತವಾಗಿ ಬದಲಾಗುತ್ತಲೇ ಇರುತ್ತದೆ.
- ವಸಂತ – ಚೈತ್ರ – ವೈಶಾಖ
- ಗ್ರೀಷ್ಮ – ಜ್ಯೇಷ್ಠ – ಆಷಾಢ
- ವರ್ಷ – ಶ್ರಾವಣ – ಭಾದ್ರಪದ
- ಶರತ್ – ಆಶ್ವಯುಜ – ಕಾರ್ತೀಕ
- ಹೇಮಂತ – ಮಾರ್ಗಶಿರ – ಪುಷ್ಯ
- ಶಿಶಿರ – ಮಾಘ – ಫಾಲ್ಗುಣ
ಹೀಗೆ ಮಾಗಿ ಚಳಿಯು ಮುಗಿಯುತ್ತಾ, ವಸಂತ ಮಾಸ ಶೃಂಗಾರ ಮಾಸ ಆರಂಭವಾಗುವ ವಸಂತೋತ್ಸವದ ಮಾಘ ಮಾಸದ ಶುಕ್ಲ ಪಂಚಮಿಯ ದಿನವನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಇಷ್ಟು ದಿನಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬರಡು ಬರಾಡಾಗಿ ಕಾಣಿಸುತ್ತಿದ್ದ ಗಿಡ ಮರಗಳು ಸಹಾ ತನ್ನಈ ವಸಂತ ಋತುವಿನಲ್ಲಿ ಮತ್ತೆ ಚಿಗುರಲು ಪ್ರಾರಂಭಿಸಿ ಮತ್ತೆ ಹಚ್ಚ ಹಸುರಿನ ಎಲೆಗಳು ಮತ್ತು ಬಣ್ಣಬಣ್ಣದ ಹೂವುಗಳಿಂದ ಪ್ರಕೃತಿಯನ್ನು ಮತ್ತಷ್ಟೂ ರಮಣೀಯವಾಗಿ ಕಾಣಿಸುವ ಕಾರಣ ಪುರಾಣದಲ್ಲಿ ಇದಕ್ಕೆ ಋತುನಾಂ ಕುಸುಮಾಕರ ಅರ್ಥಾತ್ ಋತುಗಳರಾಜ ಎಂದೇ ಕರೆಯಲಾಗುತ್ತದೆ. ಹಾಗಾಗಿ ಎಲ್ಲಾ ಋತುಗಳಿಗಿಂತಲೂ ಅತ್ಯಂತ ಮನೋಹರವಾಗಿರುವ ವಸಂತ ಋತುವು ಮನಸ್ಸಿಗೆ ಅತ್ಯಂತ ಮುದ ನೀಡುವುದಲ್ಲದೇ ಮನುಷ್ಯರನ್ನು ಹೆಚ್ಚು ಲವಲವಿಕೆಯಿಂದ ಇರಲು ಸಹಕರಿಸುತ್ತದೆ.
ಇಂತಹ ವಸಂತ ಪಂಚಮಿಯಂದು ಸೃಷ್ಟಿಕರ್ತ ಬ್ರಹ್ಮನ ರಾಣಿ ಸಕಲ ವಿದ್ಯೆಯ ಅಧಿದೇವತೆ ಸರಸ್ವತಿ ದೇವಿಯು ಹುಟ್ಟಿದ ದಿನವಾದ್ದರಿಂದ ಈ ದಿನವು ಸರಸ್ವತಿ ಆರಾಧನೆಯ ದಿನವಾಗಿದ್ದು, ಈ ದಿನ ವಿದ್ಯಾರ್ಜನೆಯನ್ನು ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಜ್ಞಾನ ಸಾಧನೆಯಲ್ಲಿ ಉನ್ನತಿಯನ್ನು ಪಡೆಯುವ ಸಲುವಾಗಿ ತಾಯಿ ಸರಸ್ವತೀ ದೇವಿಯ ಉಪಾಸನೆಯನ್ನು ಮಾಡುವುದು ರೂಢಿಯಲ್ಲಿದೆ. ಅದೇ ರೀತಿಯಲ್ಲಿ ಈ ದಿನದಂದು ಮಾಡುವ ಎಲ್ಲಾ ಶುಭಕಾರ್ಯಗಳು ಫಲಪ್ರದವಾಗುವುದೆಂಬ ನಂಬಿಕೆ ಇರುವ ಕಾರಣ, ಇಂದು ಬಹೇತೇಕ ಮದುವೆ ಮತ್ತು ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದನ್ನು ಕಾಣ ಬಹುದಾಗಿದೆ.
ವಸಂತ ಪಂಚಮಿಯ ದಿನದಂದೇ ಬ್ರಹ್ಮ ದೇವರ ಮುಖದಿಂದ ಸರಸ್ವತೀದೇವಿಯು ಅವತರಿಸಿದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ರೀತಿ ಜಡ ಮತ್ತು ಚೇತನಕ್ಕೆ ವಾಣಿಯ ಸಾಮರ್ಥ್ಯ ದೊರೆತದ್ದರಿಂದ ಈ ವಸಂತ ಪಂಚಮಿಯನ್ನು ವಿದ್ಯಾ ಜಯಂತಿ ಎಂದೂ ಸಹಾ ಕರೆಯಲಾಗುತ್ತದೆ. ಈ ದಿನದಂದು ಶ್ರೀ ಸರಸ್ವತೀ ದೇವಿಯ ಉಪಾಸನೆಯನ್ನು ಮಾಡುವ ಸಂಪ್ರದಾಯವಿದ್ದು ಉಳಿದ ಹಬ್ಬ ಹರಿದಿನಗಳಂತೆ ವಿಶೇಷವಾದ ಮಡಿ ಮೈಲಿಗೆ ಇಲ್ಲದೇ ಅತ್ಯಂತ ಅತ್ಯಂತ ಸರಳವಾಗಿ ಆಚರಿಸುವುದು ರೂಢಿಯಲ್ಲಿದೆ.
ವಸಂತ ಪಂಚಮಿಯಂದು ಉಳಿದ ಹಬ್ಬ ಹರಿದಿನಗಳಂತೆ, ಮುಂಜಾನೆ ಎದ್ದು ಸ್ನಾನ ಸಂಧ್ಯಾವಂಧನೆಯನ್ನು ಮುಗಿಸಿ ಪೂಜೆ ಮಾಡುವ ಜಾಗವನ್ನು ಶುಚಿರ್ಭೂತಗೊಳಿಸಿ, ಸಾಧ್ಯವಾದಷ್ಟೂ ಶುಭ್ರ ವಸ್ತ್ರಧಾರಿಗಳಾಗಿ, ಅಲ್ಲೊಂದು ತಾಯಿ ಸರಸ್ವತಿ ದೇವಿಯ ವಿಗ್ರಹವನ್ನೋ ಇಲ್ಲವೇ ಪೋಟೋವನ್ನು ಇಟ್ಟು ಅದರ ಮುಂದೆ ನವರಾತ್ರಿಯ ಸರಸ್ವತಿ ಪೂಜೆಯಂದು ಇಡುವಂತೆ ಪುರಾಣ ಗ್ರಂಥಗಳು, ಮಕ್ಕಳ ಪುಸ್ತಕಗಳನ್ನು ಇಟ್ಟು ಅಕ್ಕ ಪಕ್ಕದಲ್ಲಿ ದೀಪಗಳನ್ನು ಹಚ್ಚಿಸಿ ಇಡಬೇಕು. ಇನ್ನು ದೇವರಿಗೆ ಅರ್ಚನೆ ಮಾಡಲು ಲಭ್ಯವಿರುವ ಬಿಡಿ ಹೂ, ಅರಿಶಿನ ಕುಂಕುಮ ಮತ್ತು ಮಂತ್ರಾಕ್ಷತೆಯ ಜೊತೆಗೆ ಹಾಲು, ಮೊಸರು ಬೆಣ್ಣೆ, ಅಕ್ಕಿ, ಬಿಳಿ ಎಳ್ಳಿನ ಲಡ್ಡುಗಳನ್ನು, ಕಬ್ಬು ಮತ್ತು ಕಬ್ಬಿನ ರಸ, ಮಾಗಿದ ಬೆಲ್ಲ, ಜೇನುತುಪ್ಪ, ಬಿಳಿ ಶ್ರೀಗಂಧದ ಮರ, ಬಿಳಿ ಹೂವುಗಳು, ಬಿಳಿ ಉಡುಗೆ, ಬಿಳಿ ಅಲಂಕಾರ, ಖೋವಾ, ಶುಂಠಿ, ಮೂಲಂಗಿ, ಸಕ್ಕರೆ, ಅಕ್ಷತೆ, ಮೋದಕ, ಧೃತ, ಮಾಗಿದ ಬಾಳೆಹಣ್ಣು, ದ್ವಿದಳ ಧಾನ್ಯ, ತೆಂಗಿನಕಾಯಿ, ಎಳನೀರು, ಶ್ರೀಫಲ, ಬದರಿಫಲ ಇತ್ಯಾದಿ ವಸ್ತುಗಳನ್ನು ಪೂಜೆಗೆ ಬಳಸಬಹುದಾಗಿದೆ.
ಎಲ್ಲಾ ಪೂಜೆಗಳನ್ನು ಆರಂಭಿಸುವಂತೆಯೇ, ಮೊದಲು ಅಪವಿತ್ರ ಪವಿತ್ರೋವ ಮಂತ್ರದೊಂದಿಗೆ ಬಾಹ್ಯ ಪಾವಿತ್ರ್ಯವನ್ನು ಮಾಡಿದ ನಂತರ, ಆಚಮ್ಯ ಮುಗಿಸಿ, ಅಂದಿನ ದಿನ ಪಂಚಾಗದೊಂದಿಗೆ ವಿಶೇಷೇಣಾ, ವಸಂತ ಪಂಚಮಿ ಪೂಜಾಂ ಕರಿಶ್ಯೇ ಎಂಬ ಸಂಕಲ್ಪದೊಂದಿಗೆ ದೂಪ ದೀಪವನ್ನು ಹಚ್ಚಿಸಿ, ಯಥೋಪಲಬ್ಧ ಪೂಜನ ಸಾಮಾಗ್ರೀಭಿಃ ಭಗವತ್ಯಾಃ ಸರಸ್ವತ್ಯಾಃ ಪೂಜನಮಹಂ ಕರಿಶ್ಯೆ ಎಂಬ ಮಂತ್ರವನ್ನು ಹೇಳಿ ಭಕ್ತಿಯಿಂದ ಯಥಾ ಶಕ್ತಿ ಪುಷ್ಪಗಳಿಂದ ಸರಸ್ವತಿಗೆ ಮತ್ತು ಪುಸ್ತಕಗಳಿಗೆ ಪೂಜೆ ಸಲ್ಲಿಸಿ ಫಲ ತಾಂಬೂಲಗಳ ನೈವೇದ್ಯದೊಂದಿಗೆ ಶ್ರೀ ಹೃರೀಂ ಸರಸ್ವತ್ಯೈ ಸ್ವಾಹಾ ಎನ್ನುವ ಅಷ್ಟಾಕ್ಷರ ಮಂತ್ರದೊಂದಿಗೆ ಎಲ್ಲವನ್ನೂ ಶ್ರೀಸರಸ್ವತಿಗೆ ಅರ್ಪಿಸಿ ಮಹಾಮಂಗಳಾರತಿ ಮಾಡಿ, ಅಂತಿಮವಾಗಿ, ಸರಸ್ವತಿ ದೇವಿಗೆ ಆರತಿ ಮಾಡುವ ಮೂಲಕ ಪೂಜೆ ಸಂಪನ್ನವಾಗುತ್ತದೆ
ಪೂಜೆಯ ನಂತರ ಸಾಧ್ಯವಾದರೆ, ಓದುವ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ಕೊಡಬಹುದು ಇಲ್ಲವೇ ದೊಡ್ದವರಿಗೆ. ಭಗವದ್ಗೀತೆಯ ಪುಸ್ತಕವೋ ಇಲ್ಲವೇ, ಯಾವುದೇ ಪೌರಾಣಿಕ ಗ್ರಂಥಗಳನ್ನು ಕೊಟ್ಟಲ್ಲಿ ವಸಂತ ಪಂಚಮಿ ಹಬ್ಬವನ್ನು ಮಾಡಿದ ಫಲ ಮತ್ತಷ್ಟು ಹೆಚ್ಚುತ್ತದೆ. ಅದೇ ರೀತಿಯಲ್ಲಿ ಪೂಜೆಯ ನಂತರ ವೇದ ಮಂತ್ರಗಳ ಪಠಣ, ಪುರಾಣಗಳು, ರಾಮಾಯಣ, ಭಗವದ್ಗೀತೆ ಇತ್ಯಾದಿಗಳಲ್ಲದೇ ಭಕ್ತಿಯಿಂದ ಸರಸ್ವತೀ ದೇವಿಯ ಕುರಿತಾದ ಹಾಡುಗಳನ್ನು ಹಾಡುವ ಮೂಲಕ ಸಾರಸ್ವತ ಲೋಕದ ಅದಿದೇವತೆ ಸರಸ್ವತಿ ದೇವಿಯನ್ನು ಸಂಪ್ರೀತ ಗೊಳಿಸಬಹುದಾಗಿದೆ.
ಪೌರಾಣಿಕ ಗ್ರಂಥಗಳ ಪ್ರಕಾರ, ವಸಂತ ಪಂಚಮಿ ಪ್ರಾಮುಖ್ಯತೆ ಏನೆಂದರೆ, ಭಗವಾನ್ ಶ್ರೀಮನ್ನಾರಾಯಣನು ವಾಲ್ಮೀಕಿ ಋಷಿಗಳಿಗೆ ಶ್ರೀ ಸರಸ್ವತಿಯ ಮಂತ್ರವನ್ನು ಬೋಧನೆ ಮಾಡಿದ ನಂತರ ಮಹರ್ಷಿ ವಾಲ್ಮೀಕಿಗಳು ಆ ಮಂತ್ರವನ್ನು ಉಳಿದ ಮಹರ್ಷಿಗಳಾದ, ವ್ಯಾಸ, ವಸಿಷ್ಠ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳಿಗೆ ಆ ಮಂತ್ರವನ್ನು ತಿಳಿಸಿಕೊಟ್ಟಿದ್ದಲ್ಲದೇ, ಇಂತಹ ಮಹಾ ಮಂತ್ರವನ್ನು ತಿಳಿಸಿಕೊಟ್ಟ ಭಗವಾನ್ ವಿಷ್ಣುವಿಗೆ ಅವರೆಲ್ಲರೂ ಕೃತಜ್ಞತೆ ಸಲ್ಲಿಸುತ್ತಾರೆ. ನಂತರ ವಾಲ್ಮೀಕಿಗಳು ತಾಯಿ ಸರಸ್ವತಿಯನ್ನು ಆಹ್ಲಾದಕರಗೊಳಿಸಿ, ವಿಶ್ವವಿಜಯ ಎಂಬ ಸರಸ್ವತಿ ರಕ್ಷಾಕವಚದ ರಕ್ಷಣೆಯ ವರವನ್ನು ಪಡೆದುಕೊಂಡರು. ತಾಯಿ ಸರಸ್ವತಿಯ ಅನುಗ್ರಹದಿಂದ ಪಡೆದುಕೊಂಡ ಆ ಅದ್ಭುತ ವಿಶ್ವವಿಜಯ ರಕ್ಷಾಕವಚವನ್ನು ಧರಿಸಿಯೇ ವಾಲ್ಮೀಕಿ ಮುನಿಗಳು ನಂತರ ಅಪಾರವಾದ ಸಾಧನೆಯನ್ನು ಮಾಡಿದ್ದು ಈಗ ಎಲ್ಲರಿಗೂ ತಿಳಿದ ವಿಷಯವಾಗಿದೆ, ಹಾಗಾಗಿ ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವಂತೆ ಸಕಲ ಸಂಪತ್ತಿನ ಮೂಲವೇ ವಿದ್ಯೆ ಆಗಿರುವ ಕಾರಣ ವಿದ್ಯಾ ದೇವತೆ ಶ್ರೀ ಸರಸ್ವತಿ ದೇವಿಯ ಅನುಗ್ರ ಸದಾಕಾಲವೂ ಎಲ್ಲರ ಮೇಲೆ ಇರಲಿ ಎಂದು ಆಕೆಯ ವರ್ಧಂತಿಯಂದು ಭಕ್ತಿಯಿಂದ ಎಲ್ಲರೂ ಪೂಜಿಸುತ್ತಾರೆ.
ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ, ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿದ ನಂತರ ತಮ್ಮ ತಮ್ಮ ತರಗತಿಗೆಳಿಗೆ ಹೋಗಿ ಪಾಠ ಪ್ರವಚನಗಳು ಆರಂಭಗಾಗುವ ಮುನ್ನಾ
ಸರಸ್ವತಿ ನಮಸ್ತುಭ್ಯಂ, ವರದೇ ಕಾಮರೂಪಿಣಿ,
ವಿದ್ಯಾರಂಭಂ ಕರಿಷ್ಯಾಮಿ, ಸಿದ್ಧಿರ್ಭವತು ಮೇ ಸದಾ
ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |
ಎಂದು ವಿದ್ಯಾಧಿದೇವತೆಯಾದ ಸರಸ್ವತಿ ಮಾತೆಯನ್ನು, ಹೇ ತಾಯಿ ಸರಸ್ವತಿಯೇ ನಿನಗೆ ನನ್ನ ನಮಸ್ಕಾರಗಳು, ನಾನು ವಿದ್ಯಾಭ್ಯಾಸ ಆರಂಭಿಸುತ್ತಿದ್ದೇನೆ, ಅದು ಸದಾಕಾಲ ನನಗೆ ಸಿದ್ಧಿಸುವಂತೆ ವರವ ನೀಡು ಎಂದು ಬೇಡುತ್ತಾ ಅಂದಿನ ಪಾಠ ಪ್ರವಚನಗಳನ್ನು ಆರಂಭಿಸುವ ಪರಿಪಾಠವಿತ್ತು.
ತಾಯಿ ಸರಸ್ವತೀ ದೇವಿಯು ವಿದ್ಯೆ, ಬುದ್ಧಿ, ಜ್ಞಾನ ಮತ್ತು ವಿವೇಕದ ಅಧಿದೇವತೆ ಆಗಿರುವ ಕಾರಣ ಇಂದಿಗೂ ದೇಶಾದ್ಯಂತ ಅನೇಕ ಶಾಲಾ, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಸಂತ ಪಂಚಮಿಯಂದು ಸರಸ್ವತಿ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಸಂಪ್ರದಾಯವಿದೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಪ್ರದಾಯಗಳ ಅಂಧಾನುಕರಣೆ ಮತ್ತು ಹೆಚ್ಚುತ್ತಿರುವ ಇಂಟರ್ನ್ಯಾಷಿನಲ್ ಶಿಕ್ಷಣ ಪದ್ಧತಿಯಿಂದಾಗಿ ಇಂತಹ ಸತ್ ಸಂಪ್ರದಾಯಗಳೆಲ್ಲವೂ ಬಹುತೇಕ ಮೂಲೆ ಗುಂಪಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಸಂಕ್ರಾಂತಿ ಹಬ್ಬದಂದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಗಾಳಿಪಟವನ್ನು ಹಾರಿಸಿದರೆ, ಇನ್ನು ಉತ್ತರ ಭಾರತದ ಹಲವೆಡೆ ವಸಂತ ಪಂಚಮಿಯಂದು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸುತ್ತಾರೆ. ಇನ್ನು ಪಂಜಾಬಿನಲ್ಲಿ ನಡೆಯುವ ವಿಶ್ವ ವಿಖ್ಯಾತವಾದ ಗಾಳಿಪಟದ ಉತ್ಸವಕ್ಕೆ ಹಿರಿಯರು, ಕಿರಿಯರು ಎನ್ನುವ ಬೇಧಭಾವ ಇಲ್ಲದೇ ಎಲ್ಲರೂ ಸೇರಿ ಗಾಳಿಪಟಗಳನ್ನು ಹಾರಿಸುವ ಮೂಲಕ ವಸಂತ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ.
ವಿದ್ಯಾದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತ್ವಂ,
ಪಾತ್ರತ್ವಾ ಧನಮಾಪ್ನೋತಿ, ಧನಾಧರ್ಮ ಮಹತಹ ಸುಖಂ!!
ಎಂಬ ಸುಭಾಷಿತವು ಅತ್ಯಂತ ಸಂಧರ್ಭೋಚಿತವಾಗಿದ್ದು, ವಿದ್ಯೆಯನ್ನು ಕಲಿಯುವುದರಿಂದ, ವಿದ್ಯೆ ವಿನಯವನ್ನು ಕೊಡುತ್ತದೆ, ಹಾಗೆ ಗಳಿಸಿದ ವಿನಯದಿಂದ ಸಮಾಜದಲ್ಲಿ ಸ್ಥಾನವು ಸಿಗುತ್ತದೆ, ಆ ರೀತಿಯಾಗಿ ಪಡೆದ ಸ್ಥಾನದಿಂದ ಧನ ಪ್ರಾಪ್ತಿಯಾಗುತ್ತದೆ. ಆ ರೀತಿಯಾಗಿ ದೊರೆತ ಧನವನ್ನು ಸ್ವಾರ್ಥಕ್ಕಾಗಿಯೇ ಬಳಸಿಕೊಳ್ಳದೇ ಹತ್ತಾರು ಜನರಿಗೆ ದಾನ ಧರ್ಮ ಮಾಡುವುದರಿಂದ ಸುಖವು ಲಭಿಸುತ್ತದೆ ಎನ್ನುವುದು ಈ ಮೇಲಿನ ಸುಭಾಷಿತದ ಅರ್ಥವಾಗಿದೆ.
ಎಷ್ಟೆಲ್ಲಾ ಕಷ್ಠ ಪಟ್ಟು ತಾಯಿ ಸರಸ್ವತಿ ದೇವಿಯನ್ನು ಒಲಿಸಿಕೊಂಡು ವಿದ್ಯೆಯನ್ನು ಕಲಿತು ಅದು ನಾಲ್ಕು ಜನರಿಗೆ ಉಪಯೋಗವಾಗುವಂತಾದಲ್ಲಿ ಮಾತ್ರವೇ ಕಲಿತ ವಿದ್ಯೆಗೂ ಒಂದು ರೀತಿಯ ಸಾರ್ಥಕತೆ ದೊರೆಯುತ್ತದೆ. ಪ್ರಪಂಚದಲ್ಲಿ ವಿದ್ಯೆಯ ಹೊರತಾಗಿ ಮಿಕ್ಕೆಲ್ಲಾ ವಸ್ತುಗಳು ದಾನ ಮಾಡುತ್ತಾ ಹೋದಂತೆಲ್ಲಾ ಕಡಿಮೆ ಆದಲ್ಲಿ ತಾವು ಕಲಿತ ವಿದ್ಯೆಯನ್ನು ಹತ್ತಾರು ಜನರಿಗೆ ಕಲಿಸಿ ಕೊಡುತ್ತಾ ಹೋದಲ್ಲಿ ತಮಗೇ ಅರಿವಿಲ್ಲದಂತೆ ಜ್ಞಾನಾರ್ಜನೆ ಅಗುತ್ತಾ ಹೊಗುತ್ತದೆ. ಹಾಗಾಗಿ ಎಲ್ಲರೂ ಈ ವಸಂತ ಪಂಚಮಿಯಂದು ತಾಯಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸಿ ಆಕೆಯನ್ನು ಒಲಿಸಿಕೊಂಡು ತನ್ಮೂಲಕ ಸಂಪತ್ತನ್ನು ಗಳಿಸಿ, ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಅಗತ್ಯ ಇರುವವರಿಗೆ ಹಂಚೋಣ ಅಲ್ವೇ? ಇದಕ್ಕೇ ಅಲ್ವೇ ನಮ್ಮ ಹಿರಿಯರು ಹೇಳಿರೋದು ಸರಸ್ವತಿಯನ್ನು ಒಲಿಸಿಕೊಂಡಲ್ಲಿ. ಅವಳ ಜೊತೆ ಲಕ್ಷ್ಮಿಯೂ ಸಹಾ ತಂತಾನೇ ಓಡಿ ಬರುತ್ತಾಳೆ ಎಂದು?
ಏನಂತೀರೀ?
ನಿಮ್ಮವನೇ ಉಮಾಸುತ