ನಾವು ಭಾರತ ಎಂದ ತಕ್ಷಣ ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಮತ್ತು ಅಟಕ್ ನಿಂದ ಕಟಕ್ ವರೆಗೆ ಇರುವ ಭೂಭಾಗ ಎಂದು ಮಾತ್ರ ತಿಳಿದಿದ್ದೇವೆ. ಆದರೆ 18ನೇ ಶತಮಾನದ ಮಧ್ಯದ ವರೆಗೂ ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ವಿಸ್ತರಿಸಿತ್ತು. 1857ರ ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮದ ವೇಳೆ ಭಾರತದ ವಿಸ್ತೀರ್ಣ ಸುಮಾರು 83 ಲಕ್ಷ ಚದರ ಕಿಲೋಮೀಟರ್ ಇತ್ತು. ದುರಾದೃಷ್ಟವಷಾತ್ ನಮ್ಮಲ್ಲಿ ಐಕ್ಯತೆ ಇಲ್ಲದೇ ಇದ್ದ ಕಾರಣ, ನಮ್ಮ ಒಳ ಜಗಳಗಳನ್ನೇ ಮೂಲ ಮಾಡಿಕೊಂಡು ವಿವಿಧ ಬಾಹ್ಯ ಒತ್ತಡಗಳಿಂದ ತುಂಡರಿಸುತ್ತಲೇ ಹೋದ ಭಾರತ ದೇಶ ಪ್ರಸ್ತುತ ಕೇವಲ 33 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣವಾಗಿದ್ದರೂ ಯಾರಿಗೂ ಬೇಸರವೇ ಇಲ್ಲದೇ, ಮತ್ತೇ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ತುಂಡರಿಸಲು ಮುಂದಾಗಿದ್ದರೂ ಯಾರಿಗೂ ಅದರ ಬಗ್ಗೆ ಚಕಾರವಿಲ್ಲಾ!
7ನೇ ಶತಮಾನದಿಂದಲೂ ಭಾರತದ ಮೇಲೆ ದಂಡೆತ್ತಿ ಬರುತ್ತಿದ್ದವರು ಅಂತಿಮವಾಗಿ 10-11ನೇ ಶತಮಾನದಲ್ಲಿ ತುರ್ಕಿಕ್ ಬುಡಕಟ್ಟಿನ ಘಜ್ನಾವಿಡ್ಸ್ ಎಂಬು ಅ ಅ ಈಗ ಪಂಜಾಬ್ ಎಂದು ಕರೆಯಲ್ಪಡುವ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಭಾರತಕ್ಕೆ ಇಸ್ಲಾಂ ಧರ್ಮವು ಬಂದು ನಂತರ ದಿನಗಳಲ್ಲಿ ಉತ್ತರ ಭಾರತದ ಬಹುಭಾಗ ಮೊಘಲರ ವಶವಾಗಿ ದೆಹಲಿಯನ್ನು ರಾಜಧಾನಿ ಮಾಡಿಕೊಂಡು ದೆಹಲಿ ಸುಲ್ತಾನರು ಆಳ್ವಿಕೆ ನಡೆಸತೊಡಗಿದ್ದಲ್ಲದೇ ನಮ್ಮ ಮಂದಿರಗಳನ್ನು ಒಡೆದು ಮಸೀದಿ ಕಟ್ಟಿ, ನಮ್ಮವರನ್ನು ಬಲವಂತದಿಂದ ಮತಾಂತರ ಮಾಡಿದ್ದಲ್ಲದೇ ನಮ್ಮ ಪ್ರದೇಶಗಳಿಗೆ ಅವರದ್ದೇ ಆದ ಹೆಸರನ್ನು ಇಟ್ಟುಕೊಂಡರೂ ನಮ್ಮವರಿಗೆ ತೊಂದರೆ ಇಲ್ಲಾ!
ಅದೇ ರೀತಿ 1498 CE, ಪೋರ್ಚುಗಲ್‌ನ ವಾಸ್ಕೋ ಡ ಗಾಮಾ ಯುರೋಪ್‌ನಿಂದ ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿದು ಕೇರಳದ ಕ್ಯಾಲಿಕಟ್ ಮೂಲಕ ಅಧಿಕೃತವಾಗಿ ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ನಂತರ ಕರಾವಳಿ ಸುತ್ತಮುತ್ತಲಿನ ಭೂಭಾಗ ಮತ್ತು ಗೋವಾವನ್ನು ವಶಪಡಿಸಿಕೊಂಡಿದ್ದಲ್ಲದೇ, ಭಾರತದಲ್ಲಿ ೧೯೫೦ರ ವರೆಗೂ ಇದ್ದೂ ಕಟ್ಟ ಕಡೆಯದಾಗಿ ಬಿಟ್ಟು ಹೋದರೂ ನಮ್ಮವರಿಗೆ ತೊಂದರೆ ಇಲ್ಲಾ!
ಆಗಸ್ಟ್ 24, 1608 ಗುಜರಾತಿನ ಸೂರತ್ ಬಂದರಿನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಬಂದಿಳಿದ ಬ್ರಿಟಿಷರು ನಂತರ ದಿನಗಳಲ್ಲಿ ಅಕ್ಷರಶಃ ಸಂಪೂರ್ಣ ಭಾರತವನ್ನು ತಮ್ಮ ಕೈವಶಪಡಿಸಿಕೊಂಡು ಇಲ್ಲಿನ ಸಿರಿಸಂಪತ್ತುಗಳನ್ನು ದೋಚಿಕೊಂಡು ಹೋಗಿದ್ದಲ್ಲದೇ ಇಲ್ಲದ ಶಿಕ್ಷಣ, ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹಾಡುಗೆಡವಿ ಹೋದರೂ ಪರವಾಗಿಲ್ಲಾ!
70ರ ದಶಕದಲ್ಲಿ ಭಾರತಕ್ಕೆ ಆಗಮಿಸಿದ್ದ ಕೋಕಾಕೋಲವನ್ನು ಮೊರಾರ್ಜಿದೇಸಾಯಿಯವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಜಾರ್ಜ್ ಫರ್ನಾಂಡೀಸ್ ಓಡಿಸಿದ್ದರೂ, 1980ರ ದಶಕದಲ್ಲಿ ಭಾರತವನ್ನು ಪ್ರವೇಶಿಸಿದ್ದಲ್ಲದೇ, ನಂತರ ದಿನಗಳಲ್ಲಿ ಟೋರೀನೋ, ಗೋಲ್ಡಸ್ಪಾಟ್ ಅಲ್ಲದೇ ಇತರೇ 11 ಭಾರತೀಯ ತಂಪು ಪಾನೀಯ ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡರೆ, ನಂತರ ಈ ದಿಲ್ ಮಾಂಗೇ ಮೋರ್ ಎಂದು ಹೇಳುತ್ತಾ ಭಾರತಕ್ಕೆ ಬಂದ ಪೆಪ್ಸಿ ಉಳಿದ ತಂಪುಪಾನೀಯಗಳನ್ನು ಸ್ವಾಧೀನಪಡಿಸಿಕೊಂಡರೂ ಕೊಂಚವೂ ಕೂಗಾಟ ಬಿಡಿ ಆಕ್ಷೇಪಣೆಯನ್ನೂ ಎತ್ತುವುದಿಲ್ಲ!
ಕಿರಾಣಿ ಅಂಗಡಿಗಳ ಪಾಲಿಗೆ ಮೃತ್ಯುಕೂಪವಾಗಿ ದೇಶಾದ್ಯಂತ ಸಣ್ಣ ಸಣ್ಣ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿರುವ ಅಮೆಜಾನ್ ಆನ್ ಲೈನ್ ಶಾಪಿಂಗ್ ಬಗ್ಗೆ ಯಾವುದೇ ಪ್ರತಿರೋಧವಿಲ್ಲ. ಅಮೇಜಾನ್ ಭಾರತಕ್ಕೆ ಬರುವ ಮೊದಲು ಭಾರತೀಯರೇ ಆರಂಭಿಸಿ ದೇಶದ ಉದ್ದಗಲಕ್ಕೂ ಹರಡಿಸಿದ್ದ (ವಯಕ್ತಿವಾಗಿ ನಾನೂ ಸಹಾ 7.5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಂತಹ) ಫ್ಲಿಫ್ಕಾರ್ಟ್ ಈಗ ಅಮೇರಿಕಾದ ವಾಲ್ಮಾರ್ಟ್ ಪಾಲಾಗಿದ್ದರ ಬಗ್ಗೆಯೂ ಕೂಗಿಲ್ಲ!
ನಮ್ಮ ಅಂಜೆ ಕಛೇರಿಗಳ ಜೊತೆ, ಡಿಟಿಡಿಸಿ, ಪ್ರೊಫೇಷನಲ್ ಮುಂತಾದ ಭಾರತೀಯ ಕಂಪನಿಗಳನ್ನು ಬ್ಲೂ ಡಾರ್ಟ್, DHL & FedEx ನಂತಹವರು ತಮ್ಮ ದೊಡ್ಡ ದೊಡ್ಡ ಕಾರ್ಗೋ ವಿಮಾನಗಳನ್ನು ತೋರಿಸಿ ಇಡೀ ಕೊರಿಯರ್ ಸೇವೆಗಳನ್ನು ನುಂಗಿ ನೀರು ಕುಡಿದಿದ್ದರೂ, ಯಾರದ್ದೇ ಪ್ರತಿರೋಧವಿಲ್ಲ ಮತ್ತು ಕೂಗಿಲ್ಲ!
ಹಮಾರ ಬಜಾಜ್, ಟಾಟಾ, ವಿಜಯ್, ಮಹೇಂದ್ರ ಮಾರುತಿ ಕಂಪನಿಗಳ ಕಾರುಗಳು ಎಷ್ಟೇ ಚೆನ್ನಾಗಿದ್ದರೂ, ನಮ್ಮವರಿಗೆ ಸುಜುಕಿ, MG, ಹ್ಯುಂಡೈ ಇತ್ಯಾದಿ ಹೋಂಡಾ ಮುಂತಾದ ಕಂಪನಿಗಳ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳೇ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದರೂ ಒಬ್ಬ ವ್ಯಕ್ತಿಯದ್ದೂ, ಪ್ರತಿರೋಧದ ಕೂಗಿಲ್ಲ!
ಸಣ್ಣ ಪುಟ್ಟ ಹೋಟೇಲ್ಲುಗಳ ಜೊತೆ ಕಾಮತ್, ಸರವಣಭವ, ಭೀಮಾಸ್, ನಾಗಾರ್ಜುನ, ನಂದಿನಿ ಆರೋಗ್ಯಕರವಾದ ರೀತಿಯಲ್ಲಿ ಆರೋಗ್ಯಕರವಾದ ದೇಸೀ ಆಹಾರಗಳನ್ನು ಉಣಬಡಿಸುತ್ತಿದ್ದ ಜಾಗದಲ್ಲಿ, McDonald’s, Subway, Starbucks, KFC, Burger King, Domino’s, Pizza Hut, Dunkin ಮುಂತಾದ ಕಂಪನಿಗಳು ಜಂಕ್ ಆಹಾರಗಳನ್ನು ಉಣಬಡಿಸಿ ದೇಹದ ಸ್ವಾಸ್ತ್ಯವನ್ನು ಕೆಡಿಸುತ್ತಿದ್ದರೂ, ಯಾರದ್ದೂ ಆಕ್ಷೇಪಣೆ ಇಲ್ಲಾ!
ಸಾವಯವ ಕೃಷಿ ಪದ್ದತಿಯ ಆಧಾರಿತವಾಗಿ ವಂಶ ಪಾರಂಪರ್ಯ ಕೃಷಿಪದ್ಧತಿಯಿಂದ ಉತ್ತಮ ಗುಣಮಟ್ಟದ ದವಸ ಧಾನ್ಯಗಳನ್ನು ಬೆಳೆಯುತ್ತಿದ್ದ ಈ ದೇಶದಲ್ಲಿ ೬೦ರ ದಶಕದಲ್ಲಿ ಹಸಿರು ಕ್ರಾಂತಿ ಎಂಬ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲೂ ಮೊನ್ಸಾಂಟೋ, ನೆಸ್ಲೆ, ಮ್ಯಾಗಿ, ಐಟಿಸಿ, ಎಚ್‌ಯುಎಲ್, ಪೆಪ್ಸಿ ಮುಂತಾದ ಕಂಪನಿಗಳು ಪ್ರವೇಶಿಸಿ, ಅಧಿಕ ಮಟ್ಟದ ಕೃತಕವಾದ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಆಹಾರವನ್ನು ವಿಷಯುಕ್ತವಾಗಿಯೂ ಮತ್ತು ಭೂಮಿಯನ್ನು ಬರದು ಮಾಡುತ್ತಿದ್ದರೂ, ಯಾರದ್ದೇ ಪ್ರತಿರೋಧದ ಶಬ್ದವಿಲ್ಲಾ!
micromax Karbonn, Xolo, Spice ಮುಂತಾದ ದೇಸೀ ಮೊಬೈಲ್ ತಯಾರಿಕಾ ಕಂಪನಿಗಳು ಇದ್ದರೂ, ಅಮೇರಿಕಾದ ಆಪಲ್, ಕೊರಿಯಾದ ಸ್ಯಾಂಮ್ಸಂಗ್ ಮತ್ತು ಶತ್ರುರಾಷ್ಟ್ರ ಚೀನಾದ ಒಪ್ಪೋ, ರಿಯಲ್ ಮೀ, ರೆಡ್ ಮೀ, ಒನ್ ಪ್ಲಸ್ ಮೊಬೈಲ್‌ಗಳದ್ದೇ ಪ್ರಾಬಲ್ಯವಿದ್ದರೂ, ಯಾರದ್ದೇ ಪ್ರತಿರೋಧದ ಶಬ್ದವಿಲ್ಲಾ!
ಅದೇ, ಭಾರತೀಯರಾದ ಅದಾನಿ, ಅಂಬಾನಿ, ರಾಮ್ ದೇವ್, ಮಹೇಂದ್ರ, ಟಿವಿಎಸ್ ಸುಂದರಂ ಅವರ ಕಂಪನಿಯ ಉತ್ಪನ್ನಗಳ ಹೆಸರನ್ನು ಕೇಳಿದ ಕೂಡಲೇ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮವರಿಗೇಕೋ ಎಲ್ಲಿಲ್ಲದ ಆಕ್ರೋಶ ಮತ್ತು ಪ್ರತಿರೋಧ. ಈ ಲೇಖನದ ಮೂಲಕ ಯಾರನ್ನೇ ಆಗಲಿ ಸಮರ್ಥನೆ ಮಾಡಿಕೊಳ್ಳದೇ ವಸ್ತುನಿಷ್ಟ ವಿಷಯವನ್ನು ಎಲ್ಲರೊಂದಿಗೆ ತೆರೆದಿಡಲು ಪ್ರಯತ್ನಿಸುತ್ತಿದ್ದೇನೆ.
ನಮ್ಮ ಋಷಿ ಮುನಿಗಳು ಮತ್ತು ಪೂರ್ವಜರು ದೇಹದ ಸ್ವಾಸ್ಥ್ಯ ಮತ್ತು ಆರೋಗ್ಯಕ್ಕಾಗಿ ಆಳವಡಿಸಿಕೊಂಡಿದ ಯೋಗ ಮತ್ತು ಆಯುರ್ವೇದದ ವೈದ್ಯಕೀಯ ಚಿಕಿತ್ಸಾ ಪದ್ದತಿಗಳನ್ನು ಬಹುರಾಷ್ಟ್ರೀಯ ಡ್ರಗ್ ಮಾಫಿಯಾಗಳ ವಿರುದ್ಧ ಬಾಬಾರಾಮ್ ದೇವ್ ತಮ್ಮ ಪತಂಜಲಿ ಸಂಸ್ಥೆಯ ಮೂಲಕ ಹೋರಾಡುವುದರಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ಆಗುವ ನಷ್ಟವೇನು? ಅದನ್ನೇಕೆ ವಿರೋಧಿಸಬೇಕು?
ಸ್ವಾತಂತ್ರ್ಯಾ ನಂತರ ದೇಶದ ಜನರಿಗೆ ಉದ್ಯೋಗವನ್ನು ಒದಗಿಸಲು ಆರಂಭವಾದ ಸರ್ಕಾರಿಸ್ವಾಮ್ಯತೆಯುಳ್ಳ ITI, HMT, BEL, HAL, BEML, BHEL, BSLN, Air India ಕಂಪನಿಗಳು ಆರಂಭದಲ್ಲಿ ಮೀಸಲಾತಿ ಆಧಾರದಲ್ಲಿ ಕೆಲಸಕ್ಕೆ ಸೇರಿಸಿ ಕೊಂಡರೂ, ನಂತರ ದಿನಗಳಲ್ಲಿ ಕೆಲಸದ ಬಗ್ಗೆ ಜ್ಞಾನವೇ ಇಲ್ಲದೇ ಇದ್ದರೂ ಜಾತಿಯ ಆಧಾರಿತವಾಗಿ ಭಡ್ತಿಯನ್ನು ಕೊಟ್ಟ ಕಾರಣ, ಬುದ್ದಿವಂತರು ಅಂತಹವರ ಅಡಿಯಲ್ಲಿ ಕೆಲದ ಮಾಡಲು ಇಚ್ಚಿಸದೇ, ವಿದೇಶಗಳಿಗೆ ಪ್ರತಿಭಾ ಪಲಾಯನವಾದ ಕಾರಣ ನಷ್ಟವನ್ನು ಅನುಭವಿಸರಾರಂಭಿಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ. BEL, HAL, BEML, BHEL ಹೊರತು ಪಡಿಸಿ ಉಳಿದ ಕಂಪನಿಗಳು ಉಳಿದ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದ್ದಾಗ ಅವುಗಳನ್ನು ಖಾಸಗೀಕರಣ (ನೆನಪಿರಲಿ ಮಾರಾಟವಲ್ಲ) ಮಾಡುವ ಸಲುವಾಗಿ ಹರಾಜು ಕರೆದು ಅವುಗಳಲ್ಲಿ ಅತ್ಯಂತ ಹೆಚ್ಚಿನ ಮೊತ್ತವನ್ನು ನಮೂದಿಸಿ ಭಾರತೀಯರೇ ಆದ ಟಾಟಾ, ಅಂಬಾನಿ, ಅದಾನಿಗಳು ಕೊಂಡು ಕೊಂಡರೆ ಆಗುವ ನಷ್ಟವೇನು? ಅದಕ್ಕೇಕೆ ವಿರೋಧಿಸಬೇಕು?
ಇಂತಹವರ ವಿರೋಧವನ್ನು ಗಮನಿಸಿದಾಗ ಇಂದೊಂದು ರೀತಿ ಕೆಲಸಕ್ಕೆ ಕರೀಬೇಡಿ, ಉಟಕ್ಕೆ ಮರೀಬೇಡಿ ಎನ್ನುವಂತೆ ಇವರೂ ಮಾಡುವುದಿಲ್ಲ. ಮಾಡಿದವರನ್ನೂ ಸಹಿಸುವುದಿಲ್ಲ. ಸುಮ್ಮನೇ ಏಕಾಏಕಿ ರಾಮದೇವ್, ಮುಖೇಶ್ ಅಂಬಾನಿ ಗೌತಮ್ ಅದಾನಿ, ಟಾಟಾ, ಬಿರ್ಲಾ ಎಲ್ಲರೂ ಕಳ್ಳರೇ ಎಂದು ಸಾರಾಸಗಟಾಗಿ ತಿಪ್ಪೇ ಸಾರಿಸುವುದು ಎಷ್ಟು ಸರಿ?
ಇದೇ ಕಂಪನಿಗಳನ್ನು ವಿದೇಶಿ ಕಂಪನಿಗಳು ಕೊಂಡುಕೊಂಡಲ್ಲಿ ಇದೇ ಬುದ್ದಿ ಜೀವಿಗಳು ಅಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸನ್ನು ಹಾಕಿ ಆದರಿಸಿ ಅವರನ್ನು ಇಂದ್ರ ಚಂದ್ರ ದೇವೇಂದ್ರ, ಅವರುಗಳು ಬಾರದೇ ಹೋದಲ್ಲಿ ನಮ್ಮ ದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲಾ ಎಂದು ಅವರ ಗುಲಾಮರಂತೆ ಹೊಗಳಿ ಅಟ್ಟಕ್ಕೇರಿಸುವುದು ಎಷ್ಟು ಸರಿ?
ಸ್ವಾಭಿಮಾನವಿಲ್ಲದೇ ದೇಶದ ಪ್ರತಿಯೊಂದು ಕೆಲಸಕ್ಕೂ ವಿದೇಶಿ ಕಂಪನಿಗಳನ್ನು ಆದರಿಸಿದ ಪರಿಣಾಮ ದಕ್ಷಿಣ ಆಫ್ರಿಕಾ, ಶ್ರೀಲಂಕ ಅಲ್ಲದೇ ಇನ್ನೂ ಹತ್ತಾರು ದೇಶಗಳ ಸಂಪೂರ್ಣ ಆರ್ಥಿಕ ನಿಯಂತ್ರಣ ವಿದೇಶಿ ಕಂಪನಿಗಳ ವಶವಾಗಿದ್ದು, ದೇಶದಲ್ಲಿ ಅವರ ಅನುಕೂಲಕ್ಕೆ ತಕ್ಕಂತೆಯೇ ಕಾನೂನು ಮಾಡುವ ಪರಿಸ್ಥಿತಿಯಾಗಿದೆ. ಅದಕ್ಕಾಗಿ ನಮ್ಮ ಕೇಂದ್ರ ಸರ್ಕಾರ Vocal for Local ಅರ್ಥಾತ್ ಸ್ಥಳೀಯರಿಗೆ ಮೊದಲ ಆದ್ಯತೆ ಕೊಡುತ್ತಿರುವುದಲ್ಲದೇ, made in Indiaಗೇ ಹೆಚ್ಚು ಪ್ರಾಧಾನ್ಯತೆ ನೀಡಿ ಸದ್ಯಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅದು ಸಾಧ್ಯವಾಗದೇ ಇರುವ ಕಾರಣ make in Indiaಗೆ ಒತ್ತು ನೀಡುತ್ತಿದ್ದಾರೆ.
ಇತ್ತೀಚಿನ ವರದಿಯ ಪ್ರಕಾರ ಇಡೀ ವಿಶ್ವದಲ್ಲಿ ಚೀನಾ ದೇಶವನ್ನೂ ಮೀರಿಸಿ ಭಾರತ ಜನಸಂಖ್ಯೆಯಲ್ಲಿ ಮುಂದಿದೆ. ಇದರ ಅರ್ಥ, ಇಡೀ ಪ್ರಪಂಚದಲ್ಲಿ ಸುಮಾರು 190+ ರಾಷ್ಟ್ರಗಳಿದ್ದು ಅವುಗಳು ತಯಾರಿಸುವ ಬಹುತೇಕ ಉತ್ಪನ್ನಗಳಿಗೆ ಭಾರತ ಮತ್ತು ಭಾರತೀಯರೇ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು customers are the king and they never bend to any one ಎಂಬ ತತ್ವದಡಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಯಾವುದೇ ರಾಷ್ಟ್ರಗಳನ್ನೂ ಅವಲಂಭಿಸಬೇಕಿಲ್ಲ. ನಮಗೆ ಬೇಕಾದ ಉತ್ಪನ್ನಗಳನ್ನು ಸ್ವದೇಶೀ ತಂತ್ರಜ್ಞಾನದ ಅಡಿಯಲ್ಲಿ ನಮ್ಮಲ್ಲೇ ತಯಾರಿಸಿಕೊಳ್ಳಬಹುದು ಇಲ್ಲದೇ ಹೋದಲ್ಲಿ ವಿದೇಶಿ ಕಂಪನಿಗಳು ನಮ್ಮ ದೇಶದ ಕಂಪನಿಗಳ ಸಹಯೋಗದೊಂದಿಗೆ ನಮ್ಮ ದೇಶದಲ್ಲೇ ತಯಾರಿಸುವಂತೆ ಮಾಡುವಷ್ಟು ತಾಕತ್ತು ಇಂದು ಭಾರತೀಯರಿಗಿದೆ ಎಂಬುದನ್ನು ಮರೆಯಬಾರದು.
ಆ ರೀತಿಯಾಗಿ ವಿದೇಶಿ ಸಹಕಾರದೊಂದಿಗೆ ಸ್ಥಳೀಯವಾಗಿ ಕಂಪನಿಗಳನ್ನು ಆರಂಭಿಸಲು, ಸುಖಾಃ ಸುಮ್ಮನೇ ಯಾರದ್ದೋ ಮಾತುಗಳನ್ನು ಕೇಳಿ ಮತ್ತೆ ಪರೋಕ್ಷವಾಗಿ ವಿದೇಶಿಗರನ್ನು ಕರೆತಂದು ಅವರಿಗೆ ಗುಲಾಮರಾಗುವ ಬದಲು ಈಗಾಗಲೇ ಆ ಕ್ಷೇತ್ರಗಳಲ್ಲಿ ಅನುಭವವ ಇರುವ ಅಂಬಾನಿ, ಅದಾನಿ, ಮಹೇಂದ್ರ, ಬಜಾಜ್, ಟಿವಿಎಸ್, ಟಾಟಾ ದಂತಹ ಭಾರತೀಯರನ್ನೇ ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದರೂ ತಪ್ಪಾಗದು. ಹೀಗೆ ಅವರನ್ನು ಬೆಂಬಲಿಸುವ ಮೂಲಕ ಪ್ರತಿಭಾವಂತರಿಗೆ ಇಲ್ಲೇ ಉದ್ಯೋಗ ದೊರೆತು ಪ್ರತಿಭಾಪಲಾಯನವಾಗುವುದು ತಪ್ಪುತ್ತದೆ ಮತ್ತು ಆತ್ಮನಿರ್ಭರ್ ಎಂಬ ಭಾರತದ ಕನಸೂ ನನಸಾಗುತ್ತದೆ. ಕರೋನಾ ಮಹಾಮಾರಿಗೆ ಲಸಿಕೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು ಸ್ವದೇಶದಲ್ಲೇ ತಯಾರಿಸಿ ಅದನ್ನು ಪ್ರಪಂಚದಲ್ಲೇ ಅತೀ ಹೆಚ್ಚು ಜನರಿಗೆ ತಲುಪಿಸಿದ ಕೀರ್ತಿಯೂ ನಮ್ಮವರದ್ದೇ ಆಲ್ಲವೇ? ಇನ್ನು ಮೇಲಾದರೂ ವಿದೇಶೀ ವ್ಯಾಮೋಹ ಬಿಡೋಣ. ಸ್ವದೇಶಿ ವ್ಯಾಮೋಹ ಬೆಳಸಿಕೊಳ್ಳೋಣ.
ಏನಂತೀರೀ?
ನಿಮ್ಮವನೇ ಉಮಾಸುತ
ತುಂಬಾ ಮನವರಿಕೆ ಆಗುವಂತ ಉತ್ತಮ ಲೇಖನ ಮತ್ತು ನಿರೂಪಣೆ
LikeLiked by 1 person