ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಹತ್ತಿರ ಇರುವ, ಮಲ್ಲೇಶ್ವರ, ಶೇಷಾದ್ರಿಪುರ, ರೇಸ್ ಕೋರ್ಸ್ ರಸ್ತೆ, ಅಣ್ಣಮ್ಮ ದೇವಸ್ಥಾನವನ್ನು ಒಗ್ಗೂಡಿಸುವ ಪ್ರಮುಖ ವೃತ್ತವೇ ಆನಂದ್ ರಾವ್ ಸರ್ಕಲ್. ಸದಾಕಾಲವೂ ಅತ್ಯಂತ ಜನನಿಭಿಡವಾಗಿರುವ ಈ ವೃತ್ತಕ್ಕೆ ಆನಂದ ರಾವ್ ವೃತ್ತ ಎಂಬ ಹೆಸರು ಏಕಿದೆ? ಆನಂದ್ ರಾವ್ ಅಂದರೆ ಯಾರು ಎಂಬ ಎಲ್ಲಾ ಕುತೂಹಲಗಳಿಗೆ ಇದೋ ಇಲ್ಲಿದೆ ಸಂಪೂರ್ಣ ಮಾಹಿತಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆನಂದ ರಾವ್ ಅವರ ಪೂರ್ಣ ಹೆಸರು ತಂಜಾವೂರು ಆನಂದ ರಾವ್ ಎಂಬುದಾಗಿದ್ದು ಅವರ ಸೇವೆಗಾಗಿ ಬ್ರಿಟಿಷ್ ಸರ್ ಪದವಿಯೂ ಸಹಾ ದೊರೆತಿತ್ತು. ಅವರನ್ನು ಸರ್ ಆನಂದ ರಾವ್ ತಂಜಾವರ್ಕರ್ ಎಂದೂ ಕರೆಯಲಾಗುತ್ತದೆ. ಆನಂದ ರಾವ್ ಅವರು 1852 ರ ಮೇ 15 ರಂದು ತಿರುವನಂತಪುರಂ ಕೋಟೆಯ ಪದ್ಮ ವಿಲಾಸ್‌ನಲ್ಲಿನ ದೇಶಸ್ಥ ಬ್ರಾಹ್ಮಣ ಸಮುದಾಯದವರಾದ ತಿರುವಾಂಕೂರ್ ಮತ್ತು ಬರೋಡ ರಾಜ್ಯಗಳ ದಿವಾನರಾಗಿ ನಂತರ ಭಾರತದ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾಗಿ ಕೆಲಸ ಮಾಡಿದ ಭಾರತದ ಪ್ರಮುಖ ರಾಜನೀತಿಜ್ಞರಾದ ಸರ್ ಟಿ. ಮಾಧವ ರಾವ್ ಅವರ ಹಿರಿಯ ಮಗನಾಗಿ ಜನಿಸುತ್ತಾರೆ.
ಆನಂದರಾಯರು ತಮ್ಮ ಶಾಲಾ ಶಿಕ್ಷಣವನ್ನು ಅಂದಿನ ಮದ್ರಾಸ್ ನಲ್ಲಿ ಮಾಡಿ 1867 ರಲ್ಲಿ ಪ್ರಥಮ ದರ್ಜೆಯಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ಪೂರ್ಣಗೊಳಿಸಿದ ನಂತರ 1869 ರಲ್ಲಿ ಅವರ ಎಫ್.ಎ. ಅನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಆದಾದ ನಂತರ ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ) ಮತ್ತು ತರ್ಕಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ ಪದವಿ ಪಡೆದರು.
ಹೀಗೆ ಶಿಕ್ಷಣವನ್ನು ಮುಗಿಸಿದ ರಾಯರು ಆರಂಭದಲ್ಲಿ ಮಹಾರಾಜ ತುಕಾಜಿರಾವ್ ಹೋಳ್ಕರ್ III ರವರಿಗೆ ಬೋಧಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದ ನಂತರ 14 ನವೆಂಬರ್ 1873 ರಂದು ಮೈಸೂರು ಆಯೋಗಕ್ಕೆ ಸೇರ್ಪಡೆಗೊಳ್ಳುತ್ತಾರೆ. 7 ಜುಲೈ 1876 ರಂದು ಬೆಂಗಳೂರಿನ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಲ್ಲದೇ, 1 ಡಿಸೆಂಬರ್ 1879 ರಿಂದ ಮೈಸೂರು ಅರಮನೆ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುತ್ತಾರೆ.
ಆದಾದನಂತರ 1883 ರಿಂದ 1886 ರವರೆಗೆ ಹಾಸನ ಮತ್ತು ಕಡೂರು ಜಿಲ್ಲೆಯ ಸಹಾಯಕ ಆಯುಕ್ತರಾಗಿ ಮತ್ತು 1886 ರಿಂದ 1889 ರವರೆಗೆ ಹಾಸನ ಮತ್ತು ಮೈಸೂರಿನ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದನಂತರ ಅಂದಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಅಡಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಕಾಲ ಸೇವೆ ಸಲ್ಲಿಸಿದ ನಂತರ 1 ಏಪ್ರಿಲ್ 1909 ರಂದು ಮೈಸೂರಿನ 18ನೇ ದಿವಾನ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.
ರಾಯರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಇವರ ಕಾಲದಲ್ಲಿಯೇ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಮಂಜೂರು ಮಾಡಿದ್ದಲ್ಲದೇ, ಬೆಂಗಳೂರಿನಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯ ಆರಂಭಕ್ಕೆ ಕಾರಣೀಭೂತರಾದರು. ಮೈಸೂರು, ಬೆಂಗಳೂರು ಮತ್ತು ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ ಶಕ್ತಿಯನ್ನು ನೀಡುವ ಸಲುವಾಗಿ 1910ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸುವ ಸಲುವಾಗಿ ಅಲ್ಲಿ ಜಲಾಶಯವನ್ನು ನಿರ್ಮಿಸಲಾಯಿತು. ಅದೇ ವರ್ಷದಲ್ಲಿ, ಮೈಸೂರು-ಹಾಸನ ರೈಲುಮಾರ್ಗವನ್ನು ವಿಸ್ತರಿಸಲಾಯಿತು. ಅವರ ಕಾಲದಲ್ಲಿಯೇ ಮೊದಲ ಬಾರಿಗೆ ಮೈಸೂರು ಆರ್ಥಿಕ ಸಮ್ಮೇಳನವನ್ನು ಉದ್ಘಾಟಿಸಿ ನಂತರ ಪ್ರತಿ ವರ್ಷಕ್ಕೊಮ್ಮೆ ಆಂತಹ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಕೇವಲ ಮಳೆಗಾಲದಲ್ಲಿ ಮಾತ್ರವೇ ಶಿವನ ಸಮುದ್ರದಲ್ಲಿ ವಿದ್ಯುತ್ ಶಕ್ತಿಯನ್ನು ತಯಾರಿಸಲು ಆಗುತ್ತಿದ್ದ ಕಾರಣ, ವರ್ಷದ ಪೂರ್ತಿಯೂ ವಿದ್ಯುತಚ್ಛಕ್ತಿಯನ್ನು ತಯಾರಿಸಲು ಅನುವಾಗುವಂತೆ ಸರಾಗವಾಗಿ ನೀರು ಹರಿಯುವಂತೆ ಮಾಡುವ ಸಲುವಾಗಿ ಮತ್ತು ಮಂಡ್ಯಾ ಜನರಿಗೆ ವ್ಯವಸಾಯ ಮತ್ತು ಬೆಂಗಳೂರಿನ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ರಾಯರ ಕಾಲದಲ್ಲಿಯೇ 1911/1912 ರಲ್ಲಿ ಕನ್ನಂಬಾಡಿ ಗ್ರಾಮದಲ್ಲಿ ಕಾವೇರಿಗೆ ಅಡ್ಡಲಾಗಿ 91 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣವನ್ನು ಮಾಡಲು ನೀಲನಕ್ಷೆಯನ್ನು ತಯಾರಿಸಿದರು. ಇದೇ ಕೆ.ಆರ್.ಎಸ್ ಯೋಜನೆಗಾಗಿ 1909 ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಮುಖ್ಯ ಇಂಜಿನಿಯರ್ ಆಗಿ ಕರೆತಂದರು. 1912ರ ನವೆಂಬರ್ ನಲ್ಲಿ ಆನಂದರಾವ್ ಅವರು ನಿವೃತ್ತರಾದ ನಂತರ ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರಿನ 19ನೇ ದಿವಾನರಾಗಿ ನೇಮಕಕೊಂಡರು.
ಆನಂದ ರಾವ್ ಅವರ ಸೇವೆಯನ್ನು ಗುರುತಿಸಿ ಮೈಸೂರು ಮಹಾರಾಜರು ಅವರಿಗೆ ಪ್ರಧಾನ ಶಿರೋಮಣಿ ಎಂಬ ಬಿರುದು ನೀಡಿ ಗೌರವಿಸಿದ್ದರೆ, ಬ್ರೀಟೀಷರು ಅವರಿಗೆ ಸರ್ ಎಂಬ ಪದವಿಯನ್ನು ನೀಡಿ ಗೌರವಿಸಿದ್ದರು. 1912 ರಲ್ಲಿ ನಿವೃತ್ತರಾದ ನಂತರವೂ ಮಹಾರಾಜರು ಅವರಿಗೆ ಅಸಾಧಾರಣ ಸವಲತ್ತುಗಳನ್ನು ನೀಡಿದರು. ಇದರ ಸವಲತ್ತಿನ ಪ್ರಯುಕ್ತವಾಗಿ ಅವರು ದೊಡ್ಡ ವಸತಿಯಲ್ಲಿ ವಾಸಿಸಲು ಅರ್ಹರಾಗಿದ್ದರೂ ಆನಂದ್ ರಾವ್ ಅವರು ಮಾತ್ರಾ ಶೇಷಾದ್ರಿ ರಸ್ತೆಯಲ್ಲಿದ್ದ ತಮ್ಮ ಸಾಧಾರಣ ಮನೆಯಲ್ಲಿಯೇ ಉಳಿಯಲು ತೀರ್ಮಾನಿಸಿದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಕಷ್ಟವಾಗುತ್ತದೆ ಎಂಬುದನ್ನು ಅರಿತ ಮಹಾರಾಜರು, ಅವರ ನಿವಾಸದಲ್ಲೇ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತಹ ವ್ವವಸ್ಥೆಯನ್ನು ಮಾಡಲಾಗಿತ್ತಾದರೂ, ದೀರ್ಘಕಾಲದ ಕಾಯಿಲೆಯಿಂದ ಬಳಲಿದ ದಿವಾನ್ ಆನಂದ ರಾವ್ ಅವರು 19 ಜುಲೈ 1919 ರಂದು ನಿಧನರಾದರು.
ಬೆಂಗಳೂರಿನ ಸಹಾಯಕ ಆಯುಕ್ತರಾಗಿದ್ದಲ್ಲದೇ, ಮೈಸೂರು ಸಂಸ್ಥಾನದ ದಿವಾನರಾಗಿಯೂ ಸಾಕಷ್ಟು ಕೊಡೆಗೆಗಳನ್ನು ನೀಡಿದ್ದ ಟಿ. ಆನಂದರಾಯರ ನೆನಪಿನಾರ್ಥವಾಗಿ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಪ್ರಾಂತ್ಯದ ವೃತ್ತಕ್ಕೆ ಆನಂದ್ ರಾವ್ ಅವರ ಹೆಸರನಿಟ್ಟು ಆಚಂದ್ರಾರ್ಕವಾಗಿ ಅವರ ಹೆಸರನ್ನು ಕನ್ನಡಿಗರು ನೆನೆಯುವಂತೆ ಮಾಡಿದ್ದಾರೆ. ಮುಂದಿನ ಬಾರಿ ಆನಂದ ರಾವ್ ವೃತ್ತವನ್ನು ಹಾದು ಹೋಗುವಾಗ, ಮಹಾರಾಷ್ಟ್ರದ ಮೂಲದವರಾಗಿದ್ದು, ತಮಿಳುನಾಡಿನಲ್ಲಿ ಹುಟ್ಟಿ ಬೆಳೆದು, ಹೋಳ್ಕರ್ ರಾಜ್ಯದಲ್ಲಿ ಕೆಲಸವನ್ನು ಆರಂಭಿಸಿ, ಅಂತಿಮವಾಗಿ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡು, ದಿವಾನರಾಗಿ ಅಷ್ಟೊಂದು ಕೊಡುಗೆಗಳನ್ನು ನೀಡಿ ಅಂತಿಮವಾಗಿ ಕನ್ನಡಿಗರೇ ಆಗಿ ಹೋದ ದಿವಾನ್ ಆನಂದ ರಾವ್ ಮತ್ತು ರಾಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ಧಾರಿಗಳನ್ನು ನೀಡಿ ಬೆಳೆಸಿದ ಮೈಸೂರು ಮಹಾರಾಜರುಗಳಿಗೆ ನಮ್ಮ ಒಂದುಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲೇ ಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಅವರ ಹಿರಿಯರು ತಮಿಳುನಾಡಿನ ತಂಜಾವೂರಿನಲ್ಲಿ ನೆಲೆಸಿದ್ದ ಮಹಾರಾಷ್ಟ್ರ ಮೂಲದವರು.
ತಿರುವನಂತಪುರದಲ್ಲಿ, ಅಂದರೆ ಕೇರಳದಲ್ಲಿ ಜನನ…
ಕರ್ನಾಟಕಕ್ಕೆ ಅಪಾರ ಸೇವೆಗೈದ ವ್ಯಕ್ತಿ…
ಒಳ್ಳೆಯ ಮಾಹಿತಿ🙏🙏🙏🙏
LikeLiked by 1 person
ತುಂಬ ಉಪಯುಕ್ತ ಮಾಹಿತಿ ಯನ್ನು ತಿಳಿಸಿದ್ದೀರಿ. ಈಗಿನ ಪೀಳಿಗೆಗೆ ಗೊತ್ತೇ ಇರದ ಮಾಹಿತಿ. ತುಂಬಾ ಧನ್ಯವಾದಗಳು
LikeLiked by 1 person