ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ

bks5ಸಾಧಾರಣವಾಗಿ ಚಿತ್ರಕಾರರು ತಮ್ಮ ಚಿತ್ರಗಳನ್ನು ಬಿಡಿಸಲು ಪ್ರಶಾಂತವಾದ ಅಷ್ಟೇ ನಿಶ್ಯಬ್ಧವಾದ ವಾತಾವರಣದಲ್ಲಿ ಚಾಕ್ ಪೀಸ್, ಪೆನ್ಸಿಲ್, ಇಲ್ಲವೇ ಕುಂಚಗಳನ್ನು ಬಳಸುವ ಮೂಲಕ ಅಧ್ಭುತವಾದ ಕೃತಿಗಳನ್ನು ರಚಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ಮಹಾತ್ಮರು ತಮ್ಮ ಚಿತ್ರಗಳನ್ನು ಬಿಡಿಸಲು ಈ ಎಲ್ಲಾ ಸಾಂಪ್ರದಾಯಿಕ ವಸ್ತುಗಳ ಬದಲಿಗೆ, ದಾರ, ಬ್ಲೇಡ್, ಬೆಂಕಿ ಕಡ್ಡಿ ಇಲ್ಲವೇ ಹಂಚೀಕಡ್ಡಿ ಅದೂ ಸಿಗದೇ ಹೋದಲ್ಲಿ ತಮ್ಮ ಬೆರಳುಗಳನ್ನೇ ಉಪಯೋಗಿಸಿ, ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೇ ಎನ್ನುವಂತೆ ಎಂತಹ ಗದ್ದಲಮಯ ಪ್ರದೇಶದಲ್ಲೂ ಆನಂದದಿಂದ ಕುಣಿಯುತ್ತಲೇ ಅದ್ಭುತವಾದ ಚಿತ್ರಗಳನ್ನೂ ಹೀಗೂ ಬಹುದೇ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ ತೋರಿಸಿದ ಕುಂಚ ಬ್ರಹ್ಮ ಎಂದರೂ ಅತಿಶೋಕ್ತಿ ಎನಿಸದ ನಮ್ಮ ಕಾಲದ ರವಿವರ್ಮರ ಅಪರಾವತಾರವೇ ಈ ಅದ್ಭುತ ಕಲಾವಿದ ಶ್ರೀ ಬಿ.ಕೆ.ಎಸ್. ವರ್ಮಾ ಎಂದರೂ ಅತಿಶಯವಾಗದು.

ಒಬ್ಬ ಕಲಾವಿದ ಮತ್ತೊಬ ಅಭಿಮಾನಿ ಅಥವಾ ಕಲಾವಿದರ ಮೇಲೆ ಹೇಗೆ ಪ್ರಭಾವ ಬೀರಿರುತ್ತಾರೆ ಎನ್ನುವುದಕ್ಕೆ ಬಿ.ಕೆ.ಎಸ್. ವರ್ಮಾ ಅವರೇ ಸಾಕ್ಷಿ. ಕಲಾವಿದರುಗಳ ಬಗ್ಗೆ ಅಭಿಮಾನಿಗಳ ಪರಾಕಾಷ್ಟೆ ಹೇಗೆ ಇರುತ್ತದೆ ಎಂದರೆ, ಅವರ ನೆಚ್ಚಿನ ಕಲಾವಿದರುಗಳು ಮಾಡುವ ಬಹುತೇಕ ಕ್ರಿಯೆಗಳನ್ನು ಇವರೂ ಸಹಾ ಅನುಸರಿಸುವುದೋ ಇಲ್ಲವೋ ಅನುಕರಣೆ ಮಾಡುವುದು ತಲೆ ತಲಾಂತರದಿಂದಲೂ ನೋಡಿರುವಂತಹ ವಿಷಯ. ಬುಕ್ಕಸಾಗರದ ಕೃಷ್ಣಮಾಚಾರ್ಯ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ ಬೆಂಗಳೂರಿನ ಅತ್ತಿಗುಪ್ಪೆ ಬಳಿಯಲ್ಲಿ 1949ರ ಸೆಪ್ಟೆಂಬರ್ 5ರಂದು (ಕಾಕತಾಳೀಯವೆಂದರೆ ಆ ದಿನವು ಸರ್ವಪಲ್ಲಿ ರಾಧಾಕೃಷ್ಣರ ಜನ್ಮದಿನವಾಗಿದ್ದು, ಆ ದಿನವನ್ನು ಶಿಕ್ಷಕರ ದಿನಾಚಾರಣೆ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ) ಜನಿಸಿದ ಪುಟ್ಟ ಕಂದನಿಗೆ ತಮ್ಮ ಮನೆದೇವರ ಹೆಸರಾದ ಶ್ರೀನಿವಾಸ ಎಂದು ನಾಮಕರಣ ಮಾಡಿದರು.

bks6ಹೀಗೆ ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ಎಂಬ ಪುಟ್ಟ ಹುಡುಗ ಮುಂದೆ ಬಿ.ಕೆ.ಎಸ್. ವರ್ಮಾ ಎಂಬ ಹೆಸರಿನಲ್ಲಿ ದೇಶವಿದೇಶಗಳ ಕಲಾ ಲೋಕದಲ್ಲಿ ಪ್ರಖ್ಯಾತವಾದ ಪ್ರಸಂಗ ಬಲು ರೋಚಕವಾಗಿದೆ. ಚಿಕ್ಕವಯಸ್ಸಿನಲ್ಲೇ ಬಲು ಚುರುಕಾಗಿದ್ದ ಶ್ರೀನಿವಾಸರನ್ನು ಇಂಜಿನಿಯರ್ ಇಲ್ಲವೇ ಡಾಕ್ಟರ್ ಆಗಿ ಮಾಡಬೇಕೆಂಬ ಹಂಬಲ ಅವರ ತಂದೆ ತಾಯಿಯರದ್ದಾಗಿದ್ದರೇ, ತಾನೊಂದು ಬಗೆದರೇ, ದೈವವೊಂದ ಬಗೆದೀತು ಎನ್ನುವಂತೆ, ಬಾಲಕ ಶ್ರೀನಿವಾಸನಿಗೆ ಓದಿಗಿಂತಲೂ ಚಿತ್ರ ಬಿಡಿಸುವುದರಲ್ಲಿ ಬಲು ಆಸಕ್ತಿ. ಹಾಗಾಗಿ ಕೈಗೆ ಒಂದು ಸೀಮೇ ಸುಣ್ಣವೋ ಇಲ್ಲವೇ ಇದ್ದಿಲು ಸಿಕ್ಕರೆ ಸಾಕು, ಹುಲಿಗೆ ತನ್ನ ಕಾಡಾದರೇನು? ಪರರ ಕಾಡಾದರೇನು? ಎನ್ನುವಂತೆ ತಮ್ಮ ಮನೆ, ಅಕ್ಕ ಪಕ್ಕದವರ ಮನೆ, ಕಡೆಗೆ ಶಾಲೆಗಳ ಗೋಡೆ ಹೀಗೆ ಎಲ್ಲಿ ಬಿಳಿ ಗೋಡೆ ಹೀಗೆ ಏನೇ ಕಂಡರೂ ಅಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸುವ ಮೂಲಕ ತಂದೆ ತಾಯಿಯರಿಗೆ ತಲೆ ನೋವಾಗಿದ್ದ. ಈ ಕಾರಣದಿಂದಾಗಿ ಶಾಲೆಯ ಶಿಕ್ಷಕರು ಮತ್ತು ನೆರೆಹೊರೆಯವರ ಬೈಗುಳ ಯಧೇಚ್ಚವಾಗಿ ತಿನ್ನುತ್ತಿದ್ದ. ಇನ್ನು ಹೊರಗೆ ಹೋಗಿ ಜಗಳ ತರುತ್ತಾನೆ ಎಂದು ಮನೆಯಲ್ಲಿ ಕೂಡಿಹಾಕಿದರೆ ಮನೆಯ ಎಲ್ಲಾ ಕೋಣೆಯ ಎಲ್ಲಾ ಕಡೆಯಲ್ಲೂ ತನ್ನ ಕೈ ಎಟುಕುವಷ್ಟೂ ಕಡೆ ಚಿತ್ರಗಳನ್ನು ಬಿಡಿಸಿಬಿಡುತ್ತಿದ್ದ ಶ್ರೀನಿವಾಸ ಇಂತಹ ಶ್ರೀನಿವಾಸನಿಗೆ ಅದೊಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮರ ಕಲಾಕೃತಿಗಳನ್ನು ನೋಡುವ ಅವಕಾಶ ದೊರೆಯಿತು. ಬಹಳ ಆಸಕ್ತಿಯಿಂದ ಎಲ್ಲಾ ಚಿತ್ರಗಳನ್ನೂ ಗಮನಿಸಿದ ನಂತರ ಈ ಜೀವಂತ ಚಿತ್ರಗಳನ್ನು ರಚಿಸಿದ ಕಲಾವಿದ ಯಾರು? ಎಂದು ಕುತೂಹಲದಿಂದ ವಿಚಾರಿಸಿ ಆ ಎಲ್ಲಾ ಚಿತ್ರಗಳನ್ನೂ ಪ್ರಖ್ಯಾತ ಚಿತ್ರಕಲಾವಿದ ರವಿವರ್ಮಾ ಮೈಸೂರು ಒಡೆಯರ ರಾಜಾಶ್ರಯದಲ್ಲಿ ಬಿಡಿಸಿದ ಎಂಬುದನ್ನು ತಿಳಿದು, ಆ ಕ್ಷಣದಿಂದಲೇ ಏಲಕವ್ಯ ದ್ರೋಣಾಚಾರ್ಯರನ್ನು ಮಾನಸಿಕ ಗುರುವಾಗಿ ಸ್ವೀಕರಿಸಿದಂತೆ ರವಿವರ್ಮನನ್ನು ತನ್ನ ಮಾನಸಿಕ ಗುರುವಾಗಿ ಸ್ವೀಕರಿಸಿದ ಶ್ರೀನಿವಾಸ ಅವಂತೆಯೇ ಕಲಾವಿನಾಗುವ ಉತ್ಸಾಹದಲ್ಲಿ ತಮ್ಮ ಹೆಸರಿನ ಜೊತೆ ವರ್ಮಾ ಎಂಬ ಹೆಸರಿನ್ನೂ ಸೇರಿಸಿಕೊಂಡು ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ವರ್ಮಾನಾದ. ನಂತರ ದಿನಗಳಲ್ಲಿ ಎಲ್ಲರ ಪ್ರೀತಿಯ ಬಿ.ಕೆ.ಎಸ್. ವರ್ಮಾ ಎಂಬ ಹೆಸರಿನಿಂದ ದೇಶ ವಿದೇಶಗಳ ಸಾರಸ್ವತಲೋಕದಲ್ಲಿ ವಿಖ್ಯಾತಿ ಪಡೆದದ್ದು ಈಗ ಇತಿಹಾಸ.

bks2ಹೀಗೆ ಬಾಲಕ ಶ್ರೀನಿವಾಸ ಚಿತ್ರ ಕಲಾವಿದ ಆಗಬೇಕೆಂದು ನಿರ್ಧರಿಸಿದಾಗ ಆತನ ವಯಸ್ಸು ಕೇವಲ ಎಂಟು ವರ್ಷ ಎನ್ನುವುದು ಗಮನಾರ್ಹ. ಕಲಾವಿದನಾಗುವ ಹಂಬಲದಿಂದ ಮೂರನೆಯ ತರಗತಿಗೇ ಓದಿಗೆ ಶರಣು ಹೇಳಿ ಸೂಕ್ತ ಗುರುವನ್ನು ಹುಡುಕುತ್ತಾ ಎಂಟನೇ ವಯಸ್ಸಿಗೆಲ್ಲಾ ಮನೆಯನ್ನು ಬಿಟ್ಟು ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತು ಅ.ನ..ಸುಬ್ಬರಾಯರ ಗರಡಿಯಲ್ಲಿ ಪಳಗಿದ್ದಲ್ಲದೇ, ಅವರ ಪ್ರೋತ್ಸಾಹ ಮತ್ತು ಪ್ರಭಾವದಿಂದಾಗಿ ಕಲೆಯಲ್ಲಿ ಡಿಪ್ಲೊಮಾ ಮಾಡುತ್ತಲೇ, ಅಂದಿನ ಅನೇಕ ಪತ್ರಿಕೆಗಳಿಗೆ ತಮ್ಮ ಚಿತ್ರಗಳನ್ನು ಕಳುಹಿಸುತ್ತಾ, ನಂತರ ಕೆಲವು ವರ್ಷಗಳ ಕಾಲ ಪ್ರಜಾಮತ ವಾರಪತ್ರಿಕೆಯಲ್ಲಿ ಚಿತ್ರಕಲಾವಿದನಾಗಿ ಕೆಲಸ ಮಾಡಿದ್ದರು. ಇದೇ ಸಮಯದಲ್ಲಿಯೇ ಚಿತ್ರರಂಗದ ಕಲಾನಿರ್ದೇಶಕರುಗಳ ಪರಿಚಯವಾಗಿ ತಮ್ಮ 15ನೇ ವಯಸ್ಸಿನಲ್ಲಿಯೇ ಹಿಂದಿಯ ಆದ್ಮಿ ಚಲನಚಿತ್ರದಲ್ಲಿ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದ ಹೆಗ್ಗಳಿಯೂ ಶ್ರೀನಿವಾಸ ವರ್ಮರದ್ದು. ಬಂಗಾರದ ಜಿಂಕೆ ಚಿತ್ರಕ್ಕಾಗಿ ರೂಪಿಸಿದ್ದ ಬಂಗಾರದ ಜಿಂಕೆ ಬಹಲ ವಿಶಿಷ್ಟವಾಗಿತ್ತು. ಮುಂದೆ ದೀಪ ಚಿತ್ರಕ್ಕಾಗಿ ಇಡೀ ಹನುಮಂತ ನಗರದ ಗುಡ್ಡವನ್ನು ತಮ್ಮ ಚಿತ್ರಗಳಿಂದ ಸಿಂಗರಿಸಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ದಾಖಲೆ ಎನಿಸಿತ್ತು. ಕಸದಿಂದ ರಸವನ್ನು ಮಾಡುವಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂತಹ ಹಲವು ಅಪರೂಪದ ಪ್ರಯೋಗಗಳ ಕಾರಣೀಭೂತರಾಗಿದ್ದರು.

bks3ಕಲಾವಿದನಾಗುವ ಜ್ಞಾನಾರ್ಜನೆಯ ಬಯಕೆಯಿಂದ ಪರಿವ್ರಾಜಕರಾಗಿ ದೇಶಾದ್ಯಂತ ಅಲೆಯುತ್ತಿದ್ದಾಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಇಲ್ಲವೇ ವಿದ್ವಾನ್ ಸರ್ವತ್ರ ಪೂಜ್ಯತೇ ಎನ್ನುವಂತೆ ಹೋದೆಡೆಯಲ್ಲೆಲ್ಲ ತಮ್ಮ ಚಿತ್ರಕಲೆಯಿಂದ ಜನರನ್ನು ಆಕರ್ಷಿಸಿಸುತ್ತಿದ್ದಲ್ಲದೇ, ಅವರಿಂದ ಆಶ್ರಯ ಪಡೆಯುವುದರ ಜೊತೆಗೆ ಅಂತಹ ವ್ಯಕ್ತಿಗಳ ಪ್ರಭಾವ ವರ್ಮಾರವರ ಬದುಕಿನಲ್ಲಿ ಅಪಾರವಾಗಿತ್ತು. ಹೀಗೆ ಅವರ ಬದುಕಿನ ಮೇಲೆ ಪ್ರಭಾವ ಬೀರಿದ ನಾಡಿನ ಪ್ರಖ್ಯಾತ ರಾಜರುಗಳು, ರಾಜಕಾರಣಿಗಳು, ಕಲಾವಿದರು, ಸಾಹಿತಿಗಳಲ್ಲಿ, ಮೈಸೂರಿನ ಒಡೆಯರಾಗಿದ್ದ ಜಯಚಾಮರಾಜೇಂದ್ರ ಒಡೆಯರ್, ನಾಡಿನ ಹೆಸರಾಂತ ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತರು, ರಾಜಕಾರಣಿಗಳಾದ ಸರ್ವೇಪಳ್ಳಿ ರಾಧಾಕೃಷ್ಣನ್ ಮತ್ತು ವಿಜಯಲಕ್ಷ್ಮೀ ಪಂಡಿತ್ ಅಲ್ಲದೇ ರಷ್ಯಾ ಮೂಲದ ಹಿರಿಯ ಚಿತ್ರಕಲಾವಿದರಾಗಿದ ರೋರಿಚ್ ಮತ್ತು ಅವರ ಧರ್ಮಪತ್ನಿ ದೇವಿಕಾರಾಣಿ ವರ್ಮಾ ಅವರ ಕಲೆಯನ್ನು ಯಥಾಶಕ್ತಿ ಪ್ರೋತ್ಸಾಹಿಸಿದರು.

WhatsApp Image 2023-02-06 at 12.20.26ತಮ್ಮ ಮಾನಸ ಗುರುಗಳಾದ ರವಿವರ್ಮರಂತೆಯೇ ಪೌರಾಣಿಕ ಚಿತ್ರಗಳು ಅದರಲ್ಲೂ ದೇವರ ಚಿತ್ರಗಳನ್ನು ಬಿಡಿಸುವುದರಲ್ಲಿ ಪ್ರಾವೀಣ್ಯತೆಯನ್ನು ಗಳಿಸಿದ ವರ್ಮರು ಚಿತ್ರಗಾರುಡಿಗ ಎನಿಸಿಕೊಂಡಿದ್ದಲ್ಲದೇ, ನಾಡಿನ ಹಿರಿಯ ಚಿಂತಕರಗಳ ಒಡನಾಟದಿಂದ ಅವರ ಕೃತಿಗಳಲ್ಲಿದ್ದ ಅಕ್ಷರದ ಭಾವನೆಗಳಿಗೆ ತಮ್ಮ ಕುಂಚದ ಮೂಲಕ ಜೀವವನ್ನು ತುಂಬುವ ಕಾಯಕದಲ್ಲಿ ತೊಡಗಿಸಿಕೊಂಡರು. ಇದರ ಪ್ರತೀಕವಾಗಿ ನಾಡಿನ ಹೆಸರಾಂತ ಪತ್ರಿಕೆಯಾದ ತರಂಗದಲ್ಲಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಮಾಲಿಕೆಗೆ ವರ್ಮಾರ ಕುಂಚ ಕಟ್ಟಿಕೊಟ್ಟ ಸುಂದರ ಚಿತ್ರಮಂಟಪ ಮತ್ತು ವಿನ್ಯಾಸಗಳು ಕನ್ನಡಿಗರ ಸ್ಮೃತಪಟಲದ ಮೇಲೆ ಶಾಶ್ವತವಾಗಿ ಮೂಡುವಂತಾಯಿತು.

bks1ಸಾಮಾನ್ಯವಾಗಿ ಚಿತ್ರಗಳನ್ನು ಬಿಡಿಸುವುದಕ್ಕೆ ಕಲಾವಿದರುಗಳು ಗಂಟೆಗಟ್ಟಲೇ, ದಿನಗಟ್ಟಲೇ ಒಂದು ರೀತಿಯ ತಪಸ್ಸಿನಂತೆ ಸಮಯವನ್ನು ತೆಗೆದುಕೊಂಡರೆ ವರ್ಮಾರವರದ್ದು ಒಂದು ರೀತಿಯಾಗಿ 2 min instant food Maggi ರೀತಿಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ವೇದಿಕೆಯ ಮೇಲೆ ಸಭಿಕರ ಸಮ್ಮುಖದಲ್ಲಿ ಚಿತ್ರಗಳನ್ನು ಅದರಲ್ಲೂ ಎಲ್ಲಾ ತರಹದ ದೇವತೆಗಳು, ಕನ್ನಡಾಂಬೆ ಜೊತೆಗೆ ವೇದಿಕೆಯ ಮೇಲೆ ಕಲಾವಿದರುಗಳು ಹಾಡುತ್ತಿರುವ ಇಲ್ಲವೇ ಮಾಡುತ್ತಿದ್ದ ವಿಷಯಗಳ ಕುರಿತಾಗಿ ಅವರ ಜೊತೆಯಲ್ಲಿಯೇ ಭರತನಾಟ್ಯದ ರೀತಿಯಲ್ಲಿ ಸಂತಸದಿಂದ ಕುಣಿಕುಣಿದಾಡುತ್ತಲೇ ಚಿತ್ರಗಳನ್ನು ಬಿಡಿಸಿದ ನಂತರ ಅವರ ಚಿತ್ರಗಳು ಕುಣಿಯುತ್ತಿದ್ದದ್ದಲ್ಲದೇ ಆ ಚಿತ್ರವನ್ನು ನೋಡಿದ ಪ್ರೇಕ್ಷಕರರನ್ನೂ ಸಹ ಹುಚ್ಚೆದ್ದು ಕುಣಿಯುವಂತೆ ಮಾಡುವ ಅಮೂರ್ತರೂಪದ ಕಲೆಯನ್ನು ರೂಢಿಸಿಕೊಂಡ ನಂತರ ಅವರು ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

WhatsApp Image 2023-02-06 at 12.29.07ಅಶ್ವಥ್ ಅವರ ಕನ್ನಡವೇ ಸತ್ಯ ಕಾರ್ಯಕ್ರಮ, ಚಕ್ರವರ್ತಿ ಸೂಲಿಬೆಲೆಯವರ ಜಾಗೋಭಾರತ್, ಶತಾವಧಾನಿ ಆರ್ ಗಣೇಶ್ ಅವರ ಅವಧಾನ ಕಾರ್ಯಕ್ರಮಗಳು, ಪ್ರಾಣೇಶ್ ಮತ್ತು ಸಂಗಡಿಗರ ಹಾಸ್ಯೋತ್ಸವ ಕಾರ್ಯಕ್ರಮಗಳಲ್ಲದೇ ನಾಡಿನ ಪ್ರಖ್ಯಾತ ಕವಿ ಮತ್ತು ಸಾಹಿತಿಗಳ ಕಾವ್ಯಗೋಷ್ಠಿಗಳಲ್ಲೆಲ್ಲಾ ಬಿ.ಕೆ.ಎಸ್. ವರ್ಮಾರ ಜುಗಲ್ ಬಂದಿ ಹೆಸರನ್ನು ಗಳಿಸತೊಡಗಿತು. ಕೇವಲ ಕುಂಚವಲ್ಲದೇ, ಅಲ್ಲೇ ದೊರೆಯುತ್ತಿದ್ದ ದಾರ, ಕಡ್ಡಿ ಕಡೆಗೆ ತಮ್ಮ ಬೆರಳುಗಳನ್ನೇ ಸಿಕ್ಕ ಸಿಕ್ಕ ಬಣ್ಣ ಇಲ್ಲವೇ ಶಾಹಿಗಳಲ್ಲಿ ಅದ್ದಿ ಮಿಂಚಿನ ರೀತಿಯಲ್ಲಿ ರಚಿಸುತ್ತಿದ್ದ ಕಲಾಕೃತಿಗಳಿಗೆ ಮಾರು ಹೋಗದ ರಸಿಕರೇ ಇಲ್ಲ ಎಂದರೂ ಅಚ್ಚರಿಯ ಸಂಗತಿಯಲ್ಲ.

kannadambeಸದಾ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದ ಅವರು ಕಳೆದ ಕೆಲವು ದಿನಗಳ ಹಿಂದೆ ಅವರು ರಚಿಸಿ ಕೊಡುಗೆಯಾಗಿ ನೀಡಿದ ಕನ್ನಡ ತಾಯಿ ಭುವನೇಶ್ವರಿ ಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಬಳಸಿಕೊಳ್ಳಲು ತಮ್ಮ ಅಧಿಕೃತ ಒಪ್ಪಿಗೆಯನ್ನು ನೀಡುವ ಮೂಲಕ ತನ್ನ ಚಿತ್ರವನ್ನು ಕನ್ನಡಿಗರ ಅಸ್ಮಿತೆಗೆ ಕಾರಣರಾಗಿದ್ದರು. ಪರಿಷತ್ತಿನೊಂದಿಗೆ ಸದಾ ಒಡನಾಡದಲ್ಲಿ ಇದ್ದ ಬಿ.ಕೆ.ಎಸ್.ವರ್ಮ ಅವರ ಸಾವಿನಿಂದ ಉಂಟಾದ ನಿರ್ವಾತವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭಾವಪೂರ್ಣವಾಗಿ ನೆನಪಿಸಿಕೊಂಡಿದ್ದಾರೆ. .

ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯದ ಅಲ್ಲದೇ ಅನೇಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇ ನೀಡಿದ್ದರೆ, ಪರಿಸರ ಪ್ರೇಮದ ಕುರಿತಾಗಿ ಅವರು ರಚಿಸಿದ್ದ ಅತ್ಯಂತ ಪ್ರಭಾವಿ ವರ್ಣಚಿತ್ರ ವೃಕ್ಷಮಾಲಿನಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ ದೊರೆತಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಪ್ರಶಸ್ತಿಯ ಜೊತೆಗೆ ನಾಡಿನ ನೂರಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿದ್ದವು.

WhatsApp Image 2023-02-06 at 19.56.41ಇದ್ದುದನ್ನು ಇರುವ ಹಾಗೇ ಬರೆಯುವುದು ಚಾರ್ಟ್, ಅದನ್ನು ಅನುಭವಿಸಿ ಬರೆಯುವುದು ಆರ್ಟ್ ಎಂದು ಹೇಳುತ್ತಲೇ, ನಮ್ಮ ಕಾಲದ ಮಹಾನ್ ಕಲಾವಿದರಾಗಿ ಪ್ರಸಿದ್ದರಾಗಿದ್ದ ಬಿ.ಕೆ.ಎಸ್. ವರ್ಮ ರವರು ದಿನಾಂಕ 06.02.23 ಸೋಮವಾರ ತಮ್ಮ 75ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗುವ ಮೂಲಕ ಸಮಸ್ತ ಕಲಾ ಪ್ರಪಂಚವನ್ನು ಶೋಕದ ಕಡಲಿನಲ್ಲಿ ಮುಳುಗಿಸಿ ಹೋಗಿದ್ದಾರೆ. ಬಿ.ಕೆ.ಎಸ್. ವರ್ಮ ಅವರು ನಮ್ಮೊಂದಿಗೆ ಬೌತಿಕವಾಗಿ ಇನ್ನು ಮುಂದೆ ಇರದೇ ಹೋದರೂ, ತಮ್ಮ ಕಲಾಕೃತಿಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಭೂಲೋಕದ ಪಯಣವನ್ನು ಮುಗಿಸಿ, ಬಾರದ ಲೋಕಕ್ಕೆ ಪಯಣಿಸಿದ ಬಿ.ಕೆ.ಎಸ್. ವರ್ಮರವರು ಅಲ್ಲಿ ತಮ್ಮ ಮಾನಸಗುರುಗಳಾದ ರವಿವರ್ಮರೊಂದಿಗೆ ತಮ್ಮ ಸಾಧನೆಯನ್ನು ಮುಂದುವರೆಸಬಹುದೋ ಏನೋ? ಆ ಭಗವಂತ ಅವರ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಅವರ ಅಕಾಲಿಕ ಮರಣದ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಆವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s