ಸಾಮಾನ್ಯವಾಗಿ ಮಣ್ಣಿನ ಋಣ ಮತ್ತು ಅನ್ನದ ಋಣ ನಮಗೆ ಇದ್ದರೆ ಮಾತ್ರಾ ಲಭಿಸೋದು. ಅವೆರಡೂ ನಮ್ಮ ಹಣೆಯಲ್ಲಿ ಬರೆಯದೇ ಇದ್ದದ್ದಲ್ಲಿ ಎಂತಹ ಹರ ಸಾಹಸ ಮಾಡಿದರೂ ಅದು ನಮಗೆ ಲಭ್ಯವಾಗೋದಿಲ್ಲ. ಅಷ್ಟೋಂದು ಕಷ್ಟ ಪಟ್ಟು ಬೆವರು ಸುರಿಸಿ ಆಹಾರ ಧಾನ್ಯಗಳನ್ನು ಬೆಳೆಯುವ ರೈತ, ತಾನು ಬೆಳೆಯುವ ದವಸ ಧಾನ್ಯ ಹಣ್ಞು ಮತ್ತು ತರಕಾರಿಗಳನ್ನು ತಾನು ತಿನ್ನದೇ ಮತ್ತೊಬ್ಬರಿಗೆ ಮಾರಿ ಬಿಡುತ್ತಾನೆ. ಹಾಗೆ ಕೊಂಡು ಕೊಳ್ಳುವ ವ್ಯಾಪಾರಿಗಳೂ ಸಹಾ ಅವುಗಳನ್ನು ತಿನ್ನಲು ಸಾಧ್ಯವಾಗದೇ, ಅಲ್ಪ ಸ್ವಲ್ಪ ಲಾಭಕ್ಕೆ ಬಿಡುತ್ತಾರೆ. ಹೀಗೆ ಐದಾರು ಕೈಗಳನ್ನು ದಾಟಿ ಅಂತಿಮವಾಗಿ ಆ ಆಹಾರ ಪದಾರ್ಥಗಳನ್ನು ತಿನ್ನುವವರು ಯಾರು ಎಂದು ಯಾರಿಗೂ ತಿಳಿದಿರುವುದಿಲ್ಲ. ಇದನ್ನೇ ಸಂತ ತುಳಸೀ ದಾಸರು, ದಾನೆ ದಾನೆ ಪೆ ಲಿಖಾ ಹೈ ಖಾನೆ ವಾಲೇ ಕಾ ನಾಮ್ ಎಂದು ಬಹಳ ಸುಂದರವಾಗಿ ಹೇಳಿದ್ದಾರೆ. ಅಂದರೆ ಆ ಭಗವಂತ ಪ್ರತಿಯೊಂದು ಕಾಳು ಕಾಳುಗಳ ಮೇಲೂ ತಿನ್ನುವವರ ಹೆಸರು ಬರೆದು ಕಳುಹಿಸುತ್ತಿರುತ್ತಾನೆ ಎಂಬರ್ಥ. ಅನೇಕ ಬಾರಿ ಇನ್ನೇನು ತಿನ್ನಬೇಕು ಎಂದು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವಷ್ಟರಲ್ಲಿ ಮತ್ತೇನೋ ಆಗಿ ತಿನ್ನಲು ಸಾಧ್ಯವಾಗದೇ ಹೋದಾಗ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಕನ್ನಡದ ಗಾದೆಯ ಮಾತನ್ನೂ ಸಹಾ ನಾವು ಕೇಳಿರುತ್ತೇವೆ. ನಾವಿಂದು ಹಾಗೆಯೇ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದ ಕೆಲವೊಂದು ರೋಚಕ ಪ್ರಸಂಗಗಳನ್ನು ತಿಳಿಯೋಣ ಬನ್ನಿ.
ಕಳೆದ ಮೂರು ವರ್ಷಗಳಿಂದಲೂ ಇಡೀ ಪ್ರಪಂಚಾದ್ಯಂತ ವಕ್ಕರಿಸಿಕೊಂಡಿದ್ದ ಕರೋನಾ ಮಹಾಮಾರಿಯಿಂದಾಗಿ, ವಿದೇಶದಲ್ಲಿದ್ದ ಶಂಕರನ ಭಾವಮೈದುನ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಎರಡು ಮೂರು ಬಾರಿ ಮುಂಗಡವಾಗಿ ಕಾಯ್ದಿರಿಸಿದ್ದ ವಿಮಾನವೂ ಸಾಂಕ್ರಾಮಿಕ ಮಹಾಮಾರಿಯ ಲಾಕ್ಡೌನಿಂದಾಗಿ ರದ್ದಾದ ಕಾರಣ, ಕಳೆದ ಡಿಸೆಂಬರ್ ತಿಂಗಳಿನ ಕ್ರಿಸ್ ಮಸ್ ಸಮಯದಲ್ಲಿ ಎರಡು ವಾರಗಳ ಮಟ್ಟಿಗೆ ಬಂದು ಹೋಗುವುದಾಗಿ ತಿಳಿಸಿದಾಗ, ಶಂಕರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಒಂದು ಕಡೆ ನಾಲ್ಕು ವರ್ಷಗಳ ಕಾಲದ ನಂತರ ಸಕುಟುಂಬ ಸಮೇತನಾಗಿ ಬರುತ್ತಿದ್ದಾರಲ್ಲಾ ಎಂಬ ಸಂತೋಷವಾದರೇ, ಛೇ!! ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿಕೊಂಡು ಕೇವಲ 2 ವಾರಗಳಿಗಷ್ಟೇ ಬಂದರೆ ಹೇಗೇ? ಅದರಲ್ಲಿ ಜಡರು (jetlag)ಗೆಂದೇ ಎರಡು ದಿನಗಳು ಹೋಗಿಬಿಡುತ್ತವೆ ಉಳಿದ 10-12 ದಿನಗಳಲ್ಲಿ ಏನು ಮಾಡುವುದು? ಎಂಬ ಅಸಮಧಾನ ಬೇರೆ.
ಸಾಧಾರಣವಾಗಿ ವಿದೇಶದಿಂದ ಬಂದವರು, ಒಂದೆರಡು ದಿನ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಂಡ ನಂತರ ತಮ್ಮ ಆಪ್ತ ಬಂಧು-ಮಿತ್ರರನ್ನು ಭೇಟಿಯಾಗುವುದೋ ಇಲ್ಲವೇ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ ಮುಂತಾದ ತೀರ್ಥಕ್ಷೇತ್ರಗಳೋ ಇಲ್ಲವೇ ಯಾವುದಾದರೂ ಪ್ರವಾಸೀ ತಾಣಗಳಿಗೆ ಹೋಗಿಬರುವುದು ಸಹಜ ವಾಡಿಕೆ. ಈ ಬಾರಿ ಸಮಯ ಬಹಳ ಕಡಿಮೆ ಇದ್ದ ಕಾರಣ, ಆತ ಎಲ್ಲರ ಮನೆಗೂ ಹೋಗಲು ಸಾಧ್ಯವಾಗದಿರುವ ಕಾರಣ, ಜನವರಿ 1, 2023 ಭಾನುವಾರದಂದು ಆಪ್ತ ಬಂಧು ಮಿತ್ರರನ್ನು ಶಂಕರ ಮನೆಯಲ್ಲೇ ಸೇರಿಸಿ, ಇಡೀ ಒಂದು ದಿನ ಎಲ್ಲರೂ ಸಂಭ್ರಮಿಸಲು ನಿರ್ಧರಿಸಲಾಯಿತು. ಸರಿ ಎಲ್ಲರನ್ನೂ ಕರೆದರೆ ಅವರಿಗೆ ಊಟೋಪಚಾರ ಹೇಗೇ? 50-60 ಜನರಿಗೆ ಮನೆಯವರೇ ಮಾಡುತ್ತಾ ಕುಳಿದರೆ, ಮನೆಯವರು ಎಲ್ಲರೊಂದಿಗೆ ಮಾತನಾಡಿಸಲು ಸಾಧ್ಯವಿಲ್ಲ ಎಂದಾಗ, ಸರಿ ಹತ್ತಿರದ ಹೋಟೇಲ್ಲಿಗೆ ಹೇಳಿ ಅಲ್ಲಿಂದಲೇ ತರಿಸಿಬಿಡೋಣ ಎಂದು ಆಲೋಚಿಸಿದಾಗ, ಅರೇ ಹೋಟೇಲ್ ಬೇಡ. ಅಲ್ಲಿ ಸೋಡ ಎಲ್ಲಾ ಹಾಕಿಬಿಡುತ್ತಾರೆ. ರುಚಿ ಇದ್ದರೂ, ಶುಚಿ ಇಲ್ಲದಿರುವ ಕಾರಣ, ತಮ್ಮ ಮನೆಯ ಶುಭ ಸಮಾರಂಭಗಳಲ್ಲಿ ಶುಚಿ ರುಚಿಯಾಗಿ ಆಡುಗೆ ಮಾಡುವ ಬಾಣಸಿಗರಿಂಗೇ ಹೇಳಿಬಿಡೋಣ ಎಂದು ತೀರ್ಮಾನಿಸಿ, ಆ ಅಡುಗೆಯವರಿಗೂ ಕರೆ ಮಾಡಿ ಪಾಯಸದ ಹೊರತಾಗಿ ಎರಡು ಬಗೆಯ ಸಿಹಿ ತಿಂಡಿಯಲ್ಲದೇ, ಶಂಕರ ಭಾವಮೈದುನ ಮತ್ತು ಆತನ ಮಗನಿಗೆ ಇಷ್ಟವಾಗುವಂತಹ ಪದಾರ್ಥಗಳ ಪಟ್ಟಿಯನ್ನು ಕೊಟ್ಟು, ಶಂಕರನ ಭಾವಮೈದುನ ಅಮೇರಿಕಾದಿಂದ ವಿಮಾನ ಹತ್ತಿದ್ದನ್ನು ಖಚಿತ ಪಡಿಸಿಕೊಂಡು ಅಡುಗೆಯವರಿಗೆ ಮುಂಗಡವನ್ನು ಕೊಟ್ಟು ಶಂಕರ ಕೊಂಚ ನಿರಾಳನಾದ.
ಮಗ ಸೊಸೆ ಮೊಮ್ಮಗ ಬರುವ ಸಂಭ್ರಮವನ್ನು ಶಂಕರನ ಮಾವ ಅತ್ತೆ ಎಲ್ಲರಿಗೂ ತಿಳಿಸಿ, ಜನವರಿ 1ನೇ ತಾರೀಖು ಮಧ್ಯಾಹ್ನ 11 ಘಂಟೆಯಿಂದ ಸಂಜೆ 4-5 ಗಂಟೆಯವರೆಗೂ ಪುರುಸೊತ್ತು ಮಾಡಿಕೊಂಡು ಎಲ್ಲರಿಗೂ ತಮ್ಮ ಮನೆಗೆ ಬರಲು ಆಹ್ವಾನಿಸಿದಾಗ, ಎಲ್ಲರೂ ಸಂತೋಷದಿಂದ ಒಪ್ಪಿಕೊಂಡರು. ಹಾಗೆ ಕರೆದ ಜನರ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಮತ್ತೆ ಅಡುಗೆಯವರಿಗೆ ಕರೆ ಮಾಡಿ ಹೆಚ್ಚಿನ ಜನರಿಗೆ ಅಡುಗೆ ಮಾಡಿಕೊಂಡು ಬರಲು ತಿಳಿಸಿದ್ದಲ್ಲದೇ, ಅಂದು ಬರುವ ಮಕ್ಕಳಿಗೆ ಕೊಡಲು ಚಾಕ್ಲೇಟ್, ಆಟದ ಸಾಮಾನು, ಹೆಣ್ಣುಮಕ್ಕಳಿಗೆ ವಿವಿಧ ರೀತಿಯ ಉಡುಗೊರೆ ಎಲ್ಲವನ್ನೂ ಸಿದ್ಧ ಪಡಿಸಿಕೊಂಡರು.
ಡಿಸೆಂಬರ್ 26ರ ಮಧ್ಯಾಹ್ನ ಅಮೇರಿಕಾದಿದ ಬಂದು ಇಳಿಯುತ್ತಿದ್ದಂತೆ ಶಂಕರ ಮತ್ತು ಅವನ ಮಾವನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಬಹಳ ದಿನಗಳ ನಂತರ ಮಗ ಬಂದಾ ಅಮ್ಮಾ ವಿಶೇಷವಾದ ಅಡುಗೆ ಮಾಡಿದರೆ, ತಮ್ಮಾ ಬಂದಾ ಎಂದು ಶಂಕರ ಮಡದಿಯೂ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿಕೊಂಡು ಮಕ್ಕಳೊಂದಿಗೆ ಅಮ್ಮನ ಮನೆಗೆ ಹೋಗಿ ಸಂಭ್ರಮ ಪಟ್ಟಿದ್ದಲ್ಲದೇ, 1ನೇ ತಾರೀಖಿನ ಕಾರ್ಯಕ್ರಮದ ಬಗ್ಗೆ ವಿವರಿಸಿ, ಹೀಗೆ ಮಾಡ ಬೇಕು, ಮಕ್ಕಳಿಗೆ ಇಂತಹ ಆಟಗಳನ್ನು ಆಡಿಸಬೇಕು ಎಂದು ಲೆಖ್ಖಾ ಹಾಕಿದ್ದರೆ, ಘಂಟಸಾಲ ರೀತಿಯಲ್ಲೇ ಹಾಡುವ ಶಂಕರನ ಮಾವನವರು, ಬಂದವರ ಮನರಂಜಿಸಲು ಆ ಹಾಡು, ಈ ಹಾಡು ಎಂದು ಮೊಮ್ಮಕ್ಕಳೊಂದಿಗೆ ಚರ್ಚೆಯಲ್ಲಿ ನಿರತರಾಗಿ 31ನೇ ತಾರೀಖು ಬಂದದ್ದೇ ಗೊತ್ತಾಗಲಿಲ್ಲ.
ಭಾನುವಾರದ ಕಾರ್ಯಕ್ರಮದ ಬಗ್ಗೆ ಒಂದು ಬಾರಿ ನೆನಪಿಸಲೆಂದು ಶನಿವಾರ ಮಧ್ಯಾಹ್ನದಿಂದಲೂ ಶಂಕರ ಆಡುಗೆಯವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ, ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರೆಗೆ ಇದ್ದಾರೆ ಎಂಬ ಸಂದೇಶ ಕೇಳಿ ಬರುತ್ತಿದ್ದ ಕಾರಣ, ಹೇಗೂ ಪರಿಚಯದ ಅಡುಗೆಯವರಾದ್ದರಿಂದ ಎಲ್ಲೋ ಹೊರೆಗೆ ಕೆಲಸಕ್ಕೆ ಹೋಗಿರಬೇಕು. ಬಂದೇ ಬರುತ್ತಾರೆ ಎಂದು ಸುಮ್ಮನಾಗಿದ್ದ. ಸಂಜೆ ಮತ್ತೆ ಕರೆ ಮಾಡಿದಾಗ ಸ್ವಿಜ್ ಆಫ್ ಆಗಿದೆ ಎಂಬ ಸಂದೇಶ ಕೇಳಿದ ನಂತರ ಸ್ವಲ್ಪ ಆತಂಕವಾದರೂ ಮತ್ತೆ ಭಾನುವಾರ ಬೆಳಿಗ್ಗೆ ಕರೆ ಮಾಡಿದಾಗಲೂ ಅದೇ ಸ್ವಿಚ್ ಆಫ್ ಎಂಬ ಸಂದೇಶ ಕೇಳಿದಾಗ. ಇಲ್ಲೇನೋ ಸಮಸ್ಯೆ ಇದೆ. ಎಂಬ ಅನುಮಾನದ ಹುತ್ತ ಶಂಕರನಿಗೆ ಕಾಡತೊಡಗಿ ಕೂಡಲೇ ತನ್ನ ಮಡದಿ ಮತ್ತು ತನ್ನ ಮಾವನವರಿಗೆ ಅಡುಗೆಯವರು ಕೈಕೊಡುವ ಹಾಗಿದೆ ಎಂದಾಗ ಯಾರೂ ಸಹಾ ನಂಬಲಿಲ್ಲ. ಸ್ವಲ್ಪ ಹೊತ್ತು ಕಾಯೋಣ ಎಂದು ಮಾತನಾಡಿಕೊಳ್ಳುತ್ತಿರುವಾಗಲೇ, ಒಬ್ಬೊಬ್ಬರೇ ಬಂಧುಗಳು ಮನೆಗೆ ಬರತೊಡಗಿದಾಗ ಮನೆಯಲ್ಲಿನ ಕಲರವ ಎಲ್ಲರಿಗೂ ಅಪ್ಯಾಯಮಾನವಾಗಿದ್ದರೂ ಶಂಕರ ಮತ್ತು ಅವರ ಮಾವನವರಿಗೆ ಮಾತ್ರಾ ಅಸಹನೀಯ ಎನಿಸಿದ್ದಂತೂ ಸುಳ್ಳಲ್ಲ.
ಮತ್ತೆ 11:45ಕ್ಕೆ ಮತ್ತೊಮ್ಮೆ ಅಡುಗೆಯವರಿಗೆ ಕರೆ ಮಾಡಿ ಯಥಾಪ್ರಕಾರ ಸ್ವಿಚ್ ಆಫ್ ಬಂದಾಗ, ಶಂಕರನ ಮಾವನವರು 12:30ರ ವರೆಗೆ ಕಾಯೋಣ ಎಂದರೂ, ಕೊನೆಯ ಕ್ಷಣದವರೆಗೂ ಕಾಯುವುದು ಬೇಡ ಎಂದು ಶಂಕರ, ಹಳೆಯ ಗಂಡನ ಪಾದವೇ ಗತಿ ಎಂದು ಮತ್ತೆ ತನ್ನ ಮಾವನವರೊಂದಿಗೆ ಪರಿಚಯವಿದ್ದ ಹೋಟೆಲ್ಲಿಗೇ ಹೋಗಿ ಈಗಲೇ 60 ಊಟ ಬೇಕಿತ್ತು ಎಂದಾಗ, ಹೋಟೇಲ್ ಮಾಲಿಕರು ಸರ್ ಇದೇನು ಇಷ್ಟು ತಡವಾಗಿ ಹೇಳುತ್ತಿದ್ದೀರಾ? ಎಂದಾಗ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಗದೇ, ಹೇಗೋ ಏನೋ ವಿಷಯವನ್ನು ತೇಲಿಸಿಕೊಂಡು, ಪಾಯಸ, ಒಬ್ಬಟ್ಟು, ಪೂರಿ ಸಾಗು, ಪಲಾವ್ ಮೊಸರು ಬಜ್ಜಿ, ಅನ್ನಾ ಸಾರು ಮೊಸರನ್ನದ ಜೊತೆ ಪಲ್ಯ ಮತ್ತು ಕಾಳಿನ ಕೋಸಂಬರಿಯ ಊಟದ ವ್ಯವಸ್ಥೆ ಮಾಡಿ1:15 – 1:30ರ ಸಮಯಕ್ಕೆ ಮನೆಗೆ ತಂದುಕೊಡಲು ತಿಳಿಸಿದಾಗ ಶಂಕರಿಗೆ ತುಸು ನೆಮ್ಮದಿಯಾದರೂ, ಶಂಕರನ ಮಾವನವರಿಗೆ ಅಡುಗೆಯವನೂ ತಂದು ಕೊಟ್ಟರೆ ಅಷ್ಟೊಂದು ಅಡುಗೆಯನ್ನು ಏನು ಮಾಡುವುದು ಎಂಬ ಆತಂಕ ಏನೂ ಕಡಿಮೆಯಾಗಿರಲಿಲ್ಲ.
ಬದಲಿ ಊಟದ ವ್ಯವಸ್ಥೆ ಮಾಡಿ ಮನೆಗೆ ಬರುವಷ್ಟರಲ್ಲಿ ಬಂಧು ಮಿತ್ರರಿಂದ ಮನೆ ತುಂಬಿ ತುಳುಕಾಡುತ್ತಿದ್ದದ್ದನ್ನು ನೋಡಿದ ಶಂಕರ ಕೂಡಲೇ ಎಲ್ಲರನ್ನೂ ಒಂದೆಡೆ ಸೇರಿಸಿ, ತನ್ನ ಮಾವನವರ ಆತಂಕವನ್ನು ಕಡಿಮೆ ಮಾಡಿಸಲೆಂದೇ ಅವರಿಂದಲೇ ಹಾಡನ್ನು ಹಾಡಿಸಿ, ಬಂದಿದ್ದ ಪುಟ್ಟ ಪುಟ್ಟ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿಸಿ ಅವರಿಗೂ ಕಥೆ ಹೇಳುತ್ತಾ ಅವರಿಂದಲೂ ಮುದ್ದು ಮುದ್ದಾಗಿ ಹಾಡುಗಳನ್ನು ಹಾಡಿಸುತ್ತಿದ್ದರೆ, ಬಂದವೆರೆಲ್ಲರೂ, ಆಹಾ ಎಷ್ಟು ಚೆನ್ನಾಗಿ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ ಎಂದು ಪಡುತ್ತಿದ್ದರೆ, , ಶಂಕರ ಮತ್ತು ಅವನ ಮಾವನವರಿಗೆ ಮಾತ್ರಾ ಊಟ ಬರುವವರೆಗೂ ಎಲ್ಲರನ್ನೂ ಒಂದೆಡೆ ಸೇರಿಸಿ ಸಮಯ ಕಳೆಯಲು ಮಾಡುತ್ತಿರುವ ತಂತ್ರ ಎಂದು ಗೊತ್ತಿತ್ತು.
ಸಮಯಕ್ಕೆ ಸರಿಯಾಗಿ ಸುಮಾರು 1:30೦ರ ಆಸುಪಾಸಿಗೆ ಹೋಟೆಲ್ಲಿನವರು ಊಟ ತಂದು ಕೊಡಲು, ಅರೇ ಇದೇನು ಅಡಿಗೆಯವರು ಬಾರದೇ ಹೋಟಲ್ಲಿನವರು ಬಂದರಲ್ಲಾ? ಎಂದು ಶಂಕರನ ಅತ್ತೆಯವರು ಆಚ್ಚರಿ ಪಡುತ್ತಿರುವುದನ್ನು ಕಂಡ ಶಂಕರ ತಾನು ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮಕ್ಕೆ ಊಟದ ವಿರಾಮ ನೀಡಿ, ನಡೆದ ವಿಷಯವನ್ನು ಆಮೇಲೆ ತಿಳಿಸುತ್ತೇವೆ. ಈಗ ಬಂದವರಿಗೆಲ್ಲರಿಗೂ ಹೊಟ್ಟೆ ತುಂಬುವಷ್ಟು ಊಟ ಬಡಿಸಿ ಎಂದು ಹೇಳಿ ಎಲ್ಲರು ಸಮಾಧಾನ ಪಟ್ಟು ಕೊಟ್ಟುವಳ್ಳುವಂತೆ ಆದರಾತಿಥ್ಯವನ್ನು ಮಾಡಿ, ಊಟದ ನಂತರ ಎಲ್ಲರಿಗೂ ಬಗೆ ಬಗೆಯ ಆಟಗಳನ್ನು ಆಡಿಸಿ ಸಂಜೆ ಮತ್ತೆ ಕಾಫೀ ಟೀ ಸಮಾರಾಧನೆ ಎಲ್ಲವೂ ಮುಗಿದು ಎಲ್ಲರಿಗೂ ತಂದಿದ್ದ ಉಡುಗೊರೆಗಳನ್ನು ನೀಡಿ ಬೀಳ್ಕೊಟ್ಟ ನಂತರ ಮನೆಯವರು ಮಾತ್ರವೇ ಕುಳಿತುಕೊಂಡು ಅಡುಗೆಯವರ ಕೈಕೊಟ್ಟ ವಿಷಯ ತಿಳಿಸಿ, ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ, ಹೋಟೆಲ್ ಊಟ ಬೇಡ ಎಂದು ಅಡುಗೆಯವರಿಗೆ ಹೇಳೀದರೂ, ಕಡೆಗೆ ಅದೇ ಹೋಟೆಲ್ಲಿನ ಊಟ ಮಾಡಬೇಕಾಯಿತು ಎಂದಾಗ, ಸದ್ಯಾ ಯಾವುದೇ ಸಮಸ್ಯೆಯಾಗದೇ ಎಲ್ಲವೂ ಸುಸೂತ್ರವಾಗಿ ನಡೆಯಿತಲ್ಲಾ ಎಂದು ಶಂಕರನ ಅತ್ತೆಯವರು ಕೈಕಾಲು ತೊಳೆದುಕೊಂಡು ದೇವರಿಗೆ ತುಪ್ಪದ ದೀಪ ಹತ್ತಿಸಿ ನಿಟ್ಟಿಸಿರು ಬಿಟ್ಟು ಅದಕ್ಕೇ ಹೇಳೋದು ಅನ್ನದ ಋಣ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕಿ ಸುಮ್ಮನಾದರು.
ಕಳೆದ ವಾರ ಶಂಕರನ ಸಹಪಾಠಿಯೊಬ್ಬರು ಕರೆ ಮಾಡಿ ತಮ್ಮ ಮಗಳ ಮದುವೆ 9, 10 ಗುರುವಾರ ಶುಕ್ರವಾರ ಇದ್ದು, ಖುದ್ದಾಗಿ ಬರಲು ಸಾಧ್ಯವಾಗದಿರುವ ಕಾರಣ, ವಾಟ್ಸಾಪ್ಪಿನಲ್ಲಿ ಕಳುಹಿಸಿದ ಆಹ್ವಾನ ಪತ್ರಿಕೆಯನ್ನೇ ಮನ್ನಿಸಿ ಮದುವೆಗೆ ಬಂದು ವಧು ವರರನ್ನು ಆಶೀರ್ವದಿಸಬೇಕಾಗಿ ಕೋರಿಕೊಂಡಾಗ, ಶಂಕರನೂ ಸಹಾ ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿ ಮನೆಗೆ ಬಂದು ತನ್ನ ಮಡದಿಗೂ ವಿಷಯ ತಿಳಿಸಿ ಒಟ್ಟಿಗೆ ಹೋಗೋಣ ಎಂದು ಹೇಳಿದ. ಮದುವೆಯಾಗುತ್ತಿದ್ದ ಹುಡುಗಿ ತನ್ನ ಮಗಳ ಶಾಲೆಯಲ್ಲಿ ಒಂದೆರಡು ವರ್ಷ ಹಿರಿಯವಳಾಗಿದ್ದೂ ಆಕೆಗೂ ತಿಳಿದಿದ್ದ ಕಾರಣ, ಮಗಳನ್ನೂ ಮದುವೆಗೆ ಬರಲು ಕೇಳಿದಾಗ, ಮಗಳು ಕಾಲೇಜು ಇರುವ ಕಾರಣ ಬರಲು ಸಾಧ್ಯವಿಲ್ಲಾ ಎಂದಿದ್ದಳು.
ಅದೇ ಗುರುವಾರ ಮತ್ತು ಶುಕ್ರವಾರ ಶಂಕರನ ಮತ್ತೊಬ್ಬ ಸ್ನೇಹಿತರ ಮಗನ ಮದುವೆ ಇದ್ದ ಕಾರಣ, ಶಂಕರ ಗುರುವಾರ ಸಂಜೆ ಅವರ ಸ್ನೇಹಿತರ ಮಗನ ಆರತಕ್ಷತೆಗೆ ಹೋಗಿ ಬಂದು ಮಾರನೇ ದಿನ ಶುಕ್ರವಾರ ಮನೆಯಿಂದಲೇ ಕೆಲಸ ಮಾಡಲು ಅನುಮತಿ ಪಡೆದುಕೊಂಡು ಬೇಗನೆ ತನ್ನ ಕೆಲಸವನ್ನು ಆರಂಭಿಸಿ, ಮಧ್ಯೆ ಎರಡು ಗಂಟೆಗಳ ಸಮಯವನ್ನು ತೆಗೆದುಕೊಂಡು ತನ್ನ ಮಡದಿಯ ಜೊತೆಗೆ ಮದುವೆಗೆ ಹೊರಡಲು ಸಿದ್ಧನಾದಾಗ, ಕಾಲೇಜಿಗೆ ಹೋಗಿದ್ದ ಮಗಳು, ಅಪ್ಪಾ ಇವತ್ತು ವಸುಧಾ ಮದುವೆ ಅಲ್ಲಾ. ಬಹುಶಃ ಅವಳ ಅಕ್ಕಳ ಮದುವೆ ಅನ್ಸತ್ತೇ ಅಂತಾ ಸಂದೇಶ ಕಳುಹಿಸಿದಾಗ, ಇಲ್ಲಾ ವಸುಧಾಳಿಗೆ ಅಕ್ಕ ಇಲ್ಲ. ಕೇವಲ ತಮ್ಮ ಮಾತ್ರಾ ಇರೋದು. ಶುಕ್ರವಾರ 10ನೇ ತಾರೀಖು ಆವಳ ಮದುವೆ ಅಂತಾ ಶಂಕರ ಮದುವೆಯ ಆಹ್ವಾನ ಪತ್ರಿಕೆಯನ್ನು ಮಗಳಿಗೆ ಕಳುಹಿಸಿ, ಮಡದಿಯೊಂದಿಗೆ ಮದುವೆ ಹೋರಟೇ ಬಿಟ್ಟ. ಮತ್ತೀಕೆರೆ ದಾಟಿ ಯಶವಂತಪುರದ ಹತ್ತಿರ ಹೋಗುತ್ತಿರುವಾಗಲೇ ಶಂಕರನ ಮಡದಿಗೆ ಕರೆಮಾಡಿದ ಮಗಳು, ಅಮ್ಮಾ ಎಲ್ಲಿದ್ದೀರೀ? ಎಂದು ಕೇಳಿದಳು. ಅಪ್ಪನ ಜೊತೆಗೆ ಮದುವೆಗೆ ಹೋಗ್ತಾ ಇದ್ದೀವಿ. ಇನ್ನೇನು 15-20 ನಿಮಿಷಯಗಳಲ್ಲಿ ಮದುವೆ ಮನೆಯಲ್ಲಿ ಇರ್ತೀವಿ ಎಂದಾಗ, ಅವಳು ಜೋರಾಗಿ ನಗುತ್ತಾ, ಅಮ್ಮಾ ಸ್ವಲ್ಪ ಮದುವೆಯ ದಿನಾಂಕ ನೋಡಿ. ಮದುವೆ ಇರೋದು ಈ ತಿಂಗಳು ಅಲ್ಲಾ ಮುಂದಿನ ತಿಂಗಳು ಎಂದಾಗ, ಶಂಕರ ಢಕಡ್ ಎಂದು ಕಾರನ್ನು ನಿಲ್ಲಿಸಿ ಮತ್ತೊಮ್ಮೆ ಮದುವೆಯ ಆಹ್ವಾನ ಪತ್ರಿಕೆಯನ್ನು ನೋಡಿದರೆ ದಿನಾಂಕ. 10-03-23 ಶುಕ್ರವಾರ ಎಂದಿತ್ತು. 2023ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಒಂದೇ ಈ ರೀತಿಯಾಗಿರುವ ಕಾರಣ, ಶಂಕರಿಗೆ ಗೊಂದಲ ಉಂಟಾಗಿದ್ದ ಕಾರಣ ಈ ರೀತಿಯ ಪಜೀತಿಯಾಗಿತ್ತು.
ಅಬ್ಬಾ ಮದುವೆ ಮಂಟಪಕ್ಕೆ ಹೋಗಿ ಮುಜುಗರ ಪಟ್ಟು ಕೊಳ್ಳುವ ಬದಲು ಇಲ್ಲಿಯೇ ತಿಳಿಯತಲ್ಲ ಎಂದು ತಿಳಿದು, ಹಾಗೇ ಕಾರನ್ನು ಪಕ್ಕಕ್ಕೆ ಮನೆಯ ಕಡೆ ತಿರುಗಿಸಿದ. ಮಕ್ಕಳ ಕಾಲೇಜಿಗೆ ಕ್ಯಾರಿಯರ್ ಕಟ್ಟಿ ಹೇಗೂ ಮದುವೆ ಮನೆಗೆ ಊಟಕ್ಕೆ ಹೋಗುತ್ತೇವಲ್ಲಾ ಎಂದು ಮನೆಯಲ್ಲಿ ಅಡುಗೆಯೂ ಮಾಡಿರಲಿಲ್ಲ. ಹೇಗೂ ಮಧ್ಯಾಹ್ನ ಮದುವೆಗೆ ಊಟಕ್ಕೆ ಹೋಗುತ್ತಿದ್ದ ಕಾರಣ, ಬೆಳಿಗ್ಗೆಯೂ ಕೂಡ ಸ್ವಲ್ಪವೇ ತಿಂಡಿ ತಿಂದ್ದಿದ್ದರಿಂದ ಹೊಟ್ಟೇ ಕೂಡಾ ಕವ ಕವ ಎನ್ನುತ್ತಿತ್ತು. ಸರಿ ಜೋಳದ ರೊಟ್ಟಿ ಊಟ ಕೊಡಿಸುತ್ತೇನೆ ಎಂದು ಶಂಕರ ತಮ್ಮ ನೆಚ್ಚಿನ ಜೋಳದ ಊಟದ ಮನೆಗೆ ಹೋದರೆ ಅವರ ಮನೆಯ ಮುಂದೆಯೂ ಶಾಮಿಯಾನ ಹಾಕಿತ್ತು. ಅರೇ ಏನಪ್ಪಾ ವಿಶೇಷ ಎಂದು ಕೇಳಿದರೆ, ಸರ್ ಇವತ್ತು ನಮ್ಮ ಮೊಮ್ಮಗಳ ನಾಮಕರಣ ಹಾಗಾಗಿ ಅಂಗಡಿಗೆ ರಜಾ ಮಾಡಿದ್ದೇವೆ. ಬನ್ನಿ ಮೊಮ್ಮಗುವಿಗೆ ಆಶೀರ್ವಾದ ಮಾಡಿ ಸ್ವಲ್ಪ ಹೊತ್ತಿನ ನಂತರ ಹೋಳಿಗೆ ಊಟ ಮಾಡುವಿರಂತೆ ಎಂದು ಕರೆದರು. ಕರೆಯದೆ ಬರುವವನ ಕರೆದು ಕೆರದಲ್ಲಿ ಹೊಡೆ ಎಂದ ಸರ್ವಜ್ಞ.! ಎಂಬ ಮಾತು ನೆನಪಾಗಿ, ಇಲ್ಲಾ ಸ್ವಲ್ಪ ತುರ್ತಾಗಿ ಹೋಗಬೇಕಿದೆ. ಇನ್ನೊಮ್ಮೆ ಬರ್ತೀವಿ ಎಂದು ಹೇಳಿ ಸುಮ್ಮನೆ ಮನೆಗೆ ಬಂದು, ಮದುವೆ ಮನೆಗೆ ಮಾಡಿಕೊಂಡು ಹೋಗಿದ್ದ ಅಲಂಕಾರವನ್ನೆಲ್ಲಾ ಬಿಚ್ಚಿಟ್ಟ ಶಂಕರ ಮಡದಿ, ಲಗು ಬಗನೇ ಟೋಮೇಟೋ ಬಾತ್ ಮಾಡಿದರೆ, ಶಂಕರ ಮೊಸರ ಬಜ್ಜಿಯನ್ನು ಮಾಡಿ ಇನ್ನೇನು ಊಟಕ್ಕೆ ಕೂರಬೇಕು ಎನ್ನುವಷ್ಟರಲ್ಲಿ ಶಂಕರನ ಮಗ ಮನೆಗೆ ಬಂದು ಅರೇ! ಇದೇನಿದು? ಮದುವೆಗೆ ಹೋಗ್ಲೀಲ್ವಾ? ಎಂದು ಕೇಳಿದ್ದೇ ತಡಾ!!
ಅಯ್ಯೋ ನಿಮ್ಮಪ್ಪನನ್ನು ಕಟ್ಟಿಕೊಂಡ್ರೇ ಇದೇನಪ್ಪಾ ನಮ್ಮ ಗತಿ. ನಮಗೆಲ್ಲಿ ಬರಬೇಕು ಮದುವೆ ಊಟದ ಋಣಾ, ಎಂದು ಆರಂಭಿಸಿದ ಶಂಕರ ಮಡದಿ, ಅದುವರೆವಿಗೂ ನಡೆದದ್ದಲ್ಲೆದಕ್ಕೂ ಸ್ವಲ್ಪ ಮಸಾಲೇ ಸೇರಿಸಿ ಮಗನೊಂದಿಗೆ ದುಃಖವನ್ನು ಹಂಚಿಕೊಳ್ಳುತ್ತಿದ್ದರೆ, ಮಡದಿ ಹೇಳ್ತಾ ಇರೋದಿಕ್ಕೂ ತನಗೂ ಯಾವುದೇ ಸಂಬಂಧವೇ ಇಲ್ಲವೆಂದು, ತಟ್ಟೇ ಬರ್ತಿ ಟೋಮೇಟೋ ಬಾತ್ ಹಾಕಿಕೊಂಡು ಅದಕ್ಕೆ ಸ್ವಲ್ಪ ಕಾಂಗ್ರೇಸ್ ಕಡಲೇ ಕಾಯಿ ಬೀಜವನ್ನು ಬೆರೆಸಿಕೊಂಡು ಅದರ ಜೊತೆಗೆ ಮೊಸರು ಬಜ್ಜಿಯನ್ನು ನೆಂಚಿಕೊಂಡು, ಗಡದ್ದಾಗಿ ನುಂಗಿದ ಶಂಕರ, ಡರ್ ಎಂದು ತೇಗಿ, ಅಯ್ಯೋ Work From Home ಮಾಡ್ತಾ ಇದ್ದೀನಿ. Call ಇದೆ ಎಂದು ಸದ್ದಿಲ್ಲದೇ ಅಲ್ಲಿಂದ ತನ್ನ ರೂಮ್ ಸೇರಿಕೊಂಡ. ಹಾಗೆ ಹೋಗೋ ಮುಂಚೆ ಆ ಮದುವೆ ಊಟ ಮುಂದಿನ ತಿಂಗಳು ಮಾಡಬಹುದು. ಆದರೆ ಆತುರಾತುರದಲ್ಲೂ ಇಷ್ಟು ಚನ್ನಾಗಿ ಮಾಡಿದ ಟೋಮೇಟೋ ಬಾತ್ ತಿನ್ನಲು ಪುಣ್ಯ ಮಾಡಿರಬೇಕು ಎಂದು ಹೆಂಡತಿಯನ್ನು ಹೊಗಳಿದ ಹಾಗೆ ಮಾಡಿ ಕಳೆದು ಹೋದ ಮಾನವನ್ನು ಕಡಿಮೆ ಮಾಡಿಕೊಳ್ಳಲು ಶಂಕರ ಪ್ರಯತ್ನಿಸಿದ್ದಂತೂ ಸತ್ಯ.
ಮಧ್ಯಾಹ್ನ ಶಂಕರನ ಮಾವನವರು ತಮ್ಮ ಮಗಳಿಗೆ ಕರೆ ಮಾಡಿ, ಹೇಗಿತ್ತಮ್ಮಾ ಮದ್ವೇ? ಊಟ ಚನ್ನಾಗಿತ್ತಾ? ಎಂದು ಕೇಳಿದ್ದೇ ತಡಾ, ಕನ್ನಡದ ಧಾರಾವಾಹಿಯಂತೆ ಮತ್ತದೇ ಸಂಗತಿ ಪುನರಾವರ್ತಿಸಿ, ನಂತರ ಸಂಜೆ ಶಂಕರನ ಮಗಳು ಕಾಲೇಜಿನಿಂದ ಮನಗೆ ಬಂದಾಗಲೂ ಅದೇ ರಾಗ ಅದೇ ಹಾಡಾಗಿ ಒಟ್ಟಿನಲ್ಲಿ, ಇಡೀ ದಿನ ಮನೆಗೆ ಬಂದವರು ಮತ್ತು ಕರೆ ಮಾಡಿದವರಿಗೆಲ್ಲಾ, ತನ್ನ ಪತಿಯ ಗುಣ ಗಾನ ಮಾಡಿದ್ದೇ ಮಾಡಿದ್ದು. ಆದಕ್ಕೇ ಅಲ್ವೇ? ದೊಡ್ಡವರು ಹೇಳಿರೋದು. ತೇನ ವಿನಾ ತೃಣಮಪಿ ನಚಲತಿ ಎಂದು. ಭಗವಂತ ಅನುಗ್ರಹವಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಎನ್ನುವಂತೆ ಭಗವಂತ ಅನ್ನದ ಋಣ ಬರೆಯದೇ ಹೋದಲ್ಲಿ, ಮನುಷ್ಯ ಏನನ್ನೂ ಮಾಡಲು ಸಾಧ್ಯವಿಲ್ಲ ಅಂತಾ?
ಏನಂತೀರೀ?
ನಿಮ್ಮವನೇ ಉಮಾಸುತ