ನಾವೆಲ್ಲಾ ಚಿಕ್ಕವಯಸ್ಸಿನಲ್ಲಿ ಶಾಲೆಯ ಪಠ್ಯಪುಸ್ತಕಗಳಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಎಂದರೆ ಬಹಳ ವೀರರು ಶೂರರು. ಈ ದೇಶದ ಸ್ವಾತ್ರಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು. ಟಿಪ್ಪು ಬಹಳ ವೀರ ಶೂರ ನಾಗಿದ್ದಲ್ಲದೇ ಆತ ಹುಲಿಯೊಂದನ್ನು ಕೊಂದಿದ್ದ ಕಾರಣ ಆತನನ್ನು ಮೈಸೂರಿನ ಹುಲಿ ಎಂದೇ ಕರೆಯಲಾಗುತ್ತಿತ್ತು. ಟಿಪ್ಪು ಪರಮ ಧರ್ಮಸಹಿಷ್ಣುವಾಗಿದ್ದ ಕಾರಣ ಆತ ನಂಜನಗೂಡಿನ ನಂಜುಂಡೇಶ್ವರನಿಗೆ ಪಚ್ಚೆಯ ಹಾರವನ್ನು ಮಾಡಿಸಿಕೊಟ್ಟಿದ್ದಲ್ಲದೇ, ಶೃಂಗೇರಿಯ ಮಠಕ್ಕೆ ಅನೇಕ ದಾನಗಳನ್ನು ನೀಡಿದ್ದಾನೆ ಎಂಬೆಲ್ಲಾ ವಿಷಯಗಳನ್ನು ಓದಿದ್ದಲ್ಲದೇ ಅದನ್ನೇ ಪರೀಕ್ಷೆಗಳಲ್ಲಿ ಬರೆದು ಉತ್ತಮ ಅಂಕಗಳನ್ನೂ ಪಡೆದಿದ್ದವು.
ಸ್ವಲ್ಪ ಬುದ್ಧಿ ತಿಳಿದ ನಂತರ ತಂದೆಯವರ ಜೊತೆ ಮೈಸೂರಿನ ಅರಮನೆ ನೋಡಲು ಹೋಗಿದ್ದಾಗ ಮೊತ್ತ ಮೊದಲಿಗೆ ನನಗೆ ಕಾಡಿದ ಪ್ರಶ್ನೆ ಎಂದರೆ, ಮೈಸೂರು 1399 ರಿಂದ1947 ರವರೆಗೆ ಸುಮಾರು ಐದು ಶತಮಾನಗಳಲ್ಲಿ, ಒಡೆಯರ್ ರಾಜವಂಶದ 25 ರಾಜರು ಆಳಿರುವಾಗ ಈ ಹೈದರ್ ಮತ್ತು ಟಿಪ್ಪು ಮೈಸೂರನ್ನು ಎಲ್ಲಿಂದ ಬಂದರು? ಅದು ಹೇಗೆ 1761- 1782 ಹೈದರ್ ಅಲಿ ಮತ್ತು 1782-1799ರ ವರೆಗೆ ಸರಿ ಸುಮಾರು 29 ವರ್ಷಗಳ ಕಾಲ ಹೇಗೆ ಮೈಸೂರಿಗೆ ರಾಜರಾದರು? ಎಂಬ ಕುತೂಹಲದಿಂದ ಪ್ರಶ್ನೆ ಕೇಳಿದಾಗ ತಂದೆಯವರು ಒಡೆಯರ್‌ಗಳ ಸೈನ್ಯದಲ್ಲಿ ಸಾಮಾನ್ಯ ಸೈನಿಕನಾಗಿ ನೇಮಕಗೊಂಡ ಹೈದರ್ ಅಲಿ ಕೆಲವೇ ವರ್ಷಗಳಲ್ಲಿ ತನ್ನ ಶಕ್ತಿ ಮತ್ತು ದಬ್ಬಾಳಿಕೆಯಿಂದ ತನಗೆ ಆಶ್ರಯ ನೀಡಿದ ಮೈಸೂರು ಅರಸುಗಳಿಗೆ ವಿಷವುಣಿಸಿ ತಾನು ಅವರ ಪರವಾಗಿ ರಾಜ್ಯಭಾರ ಮಾಡಿದ್ದಲ್ಲದೇ ತನ್ನ ಮಗನಾದ ಟಿಪ್ಪುವಿಗೆ ಪಟ್ಟಾಭಿಷೇಕವನ್ನು ಮಾಡಿದ್ದ ಘನ ಘೋರ ಕರಾಳ ವಿಷಯವನ್ನು ತಿಳಿಸಿದಾಗ ಅರೇ ಮೊದಲ ಬಾರಿಗೆ ನಾವು ಓದಿದ ಇತಿಹಾಸಕ್ಕಿಂತಲೂ ನಿಜವಾದ ಇತಿಹಾಸವೇ ಬೇರೆ ಇದೆ ಎಂದೇ ತಿಳಿದು ಅಚ್ಚರಿಯಾಯಿತು.
ದುರಾದೃಷ್ಟವಷಾತ್ ಸ್ವಾತ್ರಂತ್ರ್ಯ ಬಂದ ನಂತರ ಆಳಿದ ಪಕ್ಷಗಳೆಲ್ಲವೂ ಅಲ್ಪಸಂಖ್ಯಾತರ ತುಷ್ಟೀಕರಣವನ್ನೇ ಮಾಡಿಕೊಂಡು ಬಂದಿದ್ದಲ್ಲದೇ ಸ್ವಾತಂತ್ರ್ಯಾನಂತರ ಈ ದೇಶದ ಐದು ಶಿಕ್ಷಣ ಮಂತ್ರಿಗಳು ಒಂದೇ ಕೋಮಿಗೆ ಸೇರಿದ್ದ ಕಾರಣ, ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಂದ ಘಸ್ನಿ, ಘೋರಿ, ಬಾಬರ್, ಹುಮಾಯುನ್, ಅಕ್ಬರ್, ಬಹದ್ದೂರ್ ಜಫರ್ ಖಾನ್ ಗಳೇ ಈ ದೇಶದ ಅಗ್ರ ನಾಯಕರುಗಳಾಗಿ ಹಿಂದೂ ರಾಜರುಗಳು ಪರಮ ಪುಕ್ಕಲರು ಎಂಬ ಭಾವನೆ ಮೂಡಿಸಿದ್ದ ವಿಷಯ ತಿಳಿದು ಬೇಸರವಾಯಿತು. ನಂತರದ ದಿನಗಳಲ್ಲಿ ಈ ವಿಚಾರ ಕುರಿತಾಗಿ ಸಾರ್ವಜನಿಕವಾಗಿ ಮಾತನಾಡಿದರೆ ಸಾಕು ಇವನೊಬ್ಬ ಸಂಘಿ, ಇವನೊಬ್ಬ ಕೋಮುವಾದಿ. ಇವನಿಗೆ ಅನ್ಯ ಧರ್ಮದ ಬಗ್ಗೆ ಅಸಡ್ಡೆ ಎಂಬೆಲ್ಲಾ ಮೂದಲಿಕೆಗಳು ಕೇಳುವಂತಾಯಿತು.
ದೇಶದಲ್ಲೇ ಅಂತಹ ವಾತಾವರಣ ಇದ್ದಾಗ ಇನ್ನು ಕರ್ನಾಟಕ ರಾಜ್ಯವೂ ಇದಕ್ಕೆ ಹೊರತಾಗದೇ, ಮತಾಂಧ ಟಿಪ್ಪುನನ್ನು ಮೆರೆಸುವುದೇ ಜಾತ್ಯಾತೀತತೆ ಎಂಬ ಮನಸ್ಥಿತಿಯನ್ನು ರಾಜಕೀಯ ನಾಯಕರುಗಳು ಬೆಳಸಿಕೊಂಡಿದ್ದಲ್ಲದೇ ಅವರವರ ಅವಶ್ಯಕತೆಗೆ ತಕ್ಕಂತೆ ಟಿಪ್ಪೂನನ್ನು ಬಳಸಿಕೊಳ್ಳುತ್ತಾ ತಮ್ಮ ರಾಜಕೀಯ ಬೇಳೇ ಬೇಯಿಸಿಕೊಂಡಿದ್ದು ನಿಜಕ್ಕೂ ದುರಾದೃಷ್ಟಕರ.
ಇಂತಹ ಸಮಯದಲ್ಲೇ ಸದಾಕಾಲವೂ ಎಡ ಪಂಕ್ತೀಯರ ಆಡ್ಡವಾಗಿ ಹೋಗಿದ್ದ ಮೈಸೂರು ರಂಗಾಯಣಕ್ಕೆ 2019ರಲ್ಲಿ ನಿರ್ದೇಶಕರಾಗಿ ಬಂದ ಅಡ್ಡಂಡ ಸಿ ಕಾರ್ಯಪ್ಪನವರು ಬಲ ಪಂತೀಯರಿಗೂ ರಂಗಾಯಣದಲ್ಲಿ ಅವಕಾಶ ನೀಡಿದ್ದಲ್ಲದೇ ಕೆಲ ತಿಂಗಳುಗಳ ಹಿಂದೆ ಮೂರ್ನಾಲ್ಕು ತಲೆಮಾರುಗಳ ಹಿಂದೆ ಕೊಡಗಿನಲ್ಲಿ ಟಿಪ್ಪು ಸುಲ್ತಾನನಿಂದ ಶೋಷಣೆಗೆ ಒಳಪಟ್ಟ ತಮ್ಮ ಕುಟುಂಬದ ಅನುಭವವನ್ನು ಆಧಾರವಾಗಿ ಇಟ್ಟುಕೊಂಡ ರಚಿಸಿದ ನಾಟಕ ಟಿಪ್ಪು ನಿಜ ಕನಸುಗಳು ಕೇವಲ ರಾಜ್ಯದಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಕಿಚ್ಚನ್ನು ಹಬ್ಬಿಸಿದ್ದಲ್ಲದೇ, ಮೈಸೂರು ಹುಲಿ ಎಂದೇ ನಂಬಿದ್ದ ವೀರ ಶೂರ ಟಿಪ್ಪು ಈ ರೀತಿಯಾಗಿಯೂ ಇದ್ದನೇ? ಎಂಬ ನಿಜಸಂಗತಿ ತಿಳಿಯುತ್ತಿದ್ದಂತೆಯೇ ಆ ಪುಸ್ತಕ ಮಾರಾಟಕ್ಕೆ ಮತ್ತು ನಾಟಕ ಪ್ರದರ್ಶನದ ವಿರುದ್ಧ, ಪುಸ್ತಕದಲ್ಲಿ ಹಿಂದಿನ ಮೈಸೂರು ಸಾಮ್ರಾಜ್ಯದ ಆಡಳಿತದ ಬಗ್ಗೆ ತಪ್ಪು ಮಾಹಿತಿ ಇದೆ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಿದೆ ಬೆಂಗಳೂರು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಬಿ. ಎಸ್ ರಫಿವುಲ್ಲಾ ನ್ಯಾಯಾಲಯದಲ್ಲಿ ದಾವೆ ಹಾಕಿ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಯಿತಾದರೂ, ಪುಸ್ತಕದ ಕತೃ ಮತ್ತು ಪ್ರಕಾಶಕರು ಸೂಕ್ತವಾದ ದಾಖಲೆಗಳನ್ನು ಒದಗಿಸಿದ ನಂತರ ನ್ಯಾಯಾಲಯದಲ್ಲಿ ಕೇಸ್ ಬಿದ್ದು ಹೋಗಿ, ಕೇವಲ ಒಂದೇ ತಿಂಗಳಿನಲ್ಲಿ 14 ಮುದ್ರಣವನ್ನು ಕಾಣುವ ಮೂಲಕ ಆಭೂತಪೂರ್ವ ಧಾಖಲೆ ನಿರ್ಮಾಣ ಮಾಡಿದ್ದಲ್ಲದೇ, ಕಾರ್ಯಪ್ಪನವರ ನಿರ್ದೇಶನದಲ್ಲಿ ಸುಮಾರು 20-25 ರಂಗಾಯಣದ ವಿದ್ಯಾರ್ಥಿಗಳು ಅದ್ಭುತವಾಗಿ ರಾಜ್ಯಾದ್ಯಂತ ಸುಮಾರು 50ಕ್ಕೂ ಅಧಿಕ ಯಶಸ್ವೀ ಪ್ರದರ್ಶನಗಳನ್ನು ನೀಡಿ ಅಮೋಘವಾಗಿ ಮುನ್ನೆಡೆಯುತ್ತಿದ್ದಾರೆ.
ಕಳೆದ ವಾರಾತ್ಯ 2023ರ ಮಾರ್ಚ್ 4 ಮತ್ತು 5 ಸಂಜೆ 6 ಘಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಶನಿವಾರ ಸಂಜೆ ನಾಟಕ ನೋಡುವ ಅವಕಾಶ ಸಿಕ್ಕಿತ್ತು. ನಾಟಕ 6 ಘಂಟೆಗೆ ಎಂದಿದ್ದರೂ ಸಂಜೆ 5 ಕ್ಕೆಲ್ಲಾ ನಾಟಕ ಪ್ರೇಮಿಗಳು 100 ರೂಗಳ ಟಿಕೇಟ್ ಕೊಂಡು ರವೀಂದ್ರ ಕಲಾಕ್ಷೇತ್ರದಲ್ಲಿ ತುಂಬಿ ತುಳುಕುತ್ತಿದ್ದು ಇಂತಹ ಆಧುನಿಕ ಯುಗದಲ್ಲೂ ಉತ್ತಮವಾದ ನಾಟಕಗಳಿಗೆ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿದ್ದ ಆಸನಗಳು ಸಾಲದು ಎಂಬಂತೆ ಹೆಚ್ಚುವರೆ ಕುರ್ಚಿಗಳನ್ನು ಹೊರಗಿನಿಂದ ತಂದು ಹಾಕಿದ್ದಲ್ಲದೇ ಅನೇಕರು ಮೂರುವರೆ ಘಂಟೆಗಳ ಕಾಲದ ಆ ಸುಧೀರ್ಘವಾದ ನಾಟಕವನ್ನು ನಿಂತು ನೋಡಿದರು ಎಂದರೆ ಆ ನಾಟಕದ ಸತ್ವ ಹೇಗಿತ್ತು? ಎಂಬುದರ ಅರಿವಾಗುತ್ತದೆ.
ಸಮಯಕ್ಕೆ ಸರಿಯಾಗಿ ಬೆಲ್ ಹೊಡೆದು ಕಾರ್ಯಪ್ಪನವರ ಪೀಠಿಕೆಯೊಂದಿಗೆ ಕೆಲವು ಸೂಚೆನೆಗಳೊಂದಿಗೆ ಆರಂಭವಾದ ನಾಟಕ ನಿಜಕ್ಕೂ 200-300 ವರ್ಷಗಳ ಹಿಂದಿನ ಶ್ರೀರಂಗಪಟ್ಟಣಕ್ಕೆ ಅಕ್ಷರಶಃ ಕೊಂಡ್ಯೊಯ್ದಿತು ಎಂದರೂ ತಪ್ಪಾಗದು.
ಗಿರಿಜಾ ಮೀಸೆಯ ಸುರಸುಂದರಾಂಗದ ಎತ್ತರದ ನಿಲುವಿನ ಟಿಪ್ಪುವನ್ನೇ ಪಠ್ಯಪುಸ್ತಕಗಳಲ್ಲಿ ಓದಿದ್ದ ನಮಗೆ, ನಾಟಕ ಆರಂಭವಾಗುವುದೇ 4ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಟಿಪು ಹತನಾಗಿ ಶವಗಳ ರಾಶಿಯಲ್ಲಿ ಬಿದ್ದಿದ್ದ ಟಿಪ್ಪುವಿನನ್ನು ಹುಡುಕಲು ಬರುವ ಬ್ರಿಟಿಷ್ ಅಧಿಕಾರಿ ಮತ್ತು ಸೈನಿಕರ ತಂಡದವರಿಂದ. ಮೀರ್ ಸಾಧಿಕ್ ಕೊಡೆ ಹಿಡಿದು ಬ್ರಿಟೀಷ್ ಸೈನಿಕರು ಟಿಪ್ಪುನನ್ನು ಸುಲಭವಾಗಿ ಗುರುತಿಸಿ ಕೊಂದರು ಎಂದು ತಿಳಿದಿದ್ದ ನಮಗೆ ಇಲ್ಲಿ ನೋಡಿದರೆ ಬ್ರಿಟೀಷರಿಗೇ ಗೊತ್ತಿಲ್ಲದಂತೆ ಸಾಮಾನ್ಯ ಸೈನಿಕರ ವೇಷದಲ್ಲಿದ್ದ ಟಿಪ್ಪು ಮೃತನಾಗಿದ್ದದ್ದೇ ಮೊದಲ ಅಚ್ಚರಿ.
ಅಲ್ಲಿಂದ ಫ್ಲಾಶ್ ಬ್ಯಾಕ್ ನಲ್ಲಿಯೇ ಇಡೀ ನಾಟಕ ಮುಂದುವರೆಯುತ್ತದೆ. ಟಿಪ್ಪು ಎಂದರೆ ವೀರ ಶೂರ ಧೈರ್ಯವಂತೆ ಎಂದು ಓದಿದ್ದವರಿಗೆ ವಾಸ್ತವದಲ್ಲಿ ಟಿಪ್ಪು ಒಬ್ಬ ಮಹಾನ್ ಪುಕ್ಕಲ. ತನ್ನ ಜೀವಮಾನವಿಡೀ ಹತಾಶೆ, ಅಸಹನೆ, ಅನಿರ್ಬಂಧಿತ ಭಾವನೆಗಳಿಂದಲೇ ಸಹಾಕಾಲವೂ ಅಭದ್ರತೆಯಿಂದಲೇ ಕಳೆದ ಎನ್ನುವುದು ತಿಳಿಯುತ್ತದೆ. ಅದೇ ರೀತಿಯಲ್ಲಿ ಇಡೀ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವುದು ಮತ್ತು ತಾನು ಅದಕ್ಕೆ ಬಾದ್ ಷಹಾ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮತ್ತು ನೆರೆ ಹೊರೆ ರಾಜ್ಯಗಳೊಂದಿಗೆ ಯುದ್ದದಲ್ಲಿ ಸೋತು ನೀಡಬೇಕಾದ ಕಪ್ಪದ ಹಣವನ್ನು ಹೊಂಚಲಾಗದೇ ಬರಿದಾಗುತ್ತಿದ್ದ ಖಜಾನೆಯನ್ನು ತುಂಬುವ ಸಲುವಾಗಿ, ಅವರೊಂಡನೆ ಮಾಡಿದ ಎಲ್ಲಾ ಒಪ್ಪಂದಗಳನ್ನು ಮುರಿದು ಗೆರಿಲ್ಲಾ ಮಾದರಿಯಲ್ಲಿ ಏಕಾಏಕಿ ಅಕ್ಕ ಪಕ್ಕದ ರಾಜ್ಯದ ಮೇಲೆ ಧಾಳಿ ನಡೆಸಿ ಸಿಕ್ಕ ಪಕ್ಕವರನ್ನು ಕೊಂದು ದೇವಾಲಯಗಳನ್ನು ನಾಶ ಪಡಿಸಿ ಹಣ ಲೂಟಿ ಮಾಡುತ್ತಿದ್ದದ್ದಲ್ಲದೇ ತನ್ನ ಮತಾಂಧತೆಯಿಂದಾಗಿ ನಿರಪರಾಧಿ ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಪುಸ್ತಕಗಳಲ್ಲಿ ಓದಿದಂತೆ ಆತ ಪ್ರಜೆಗಳನ್ನೆಲ್ಲ ಮಕ್ಕಳಂತೆ ನೋಡಿಕೊಳ್ಳುವ ಉದಾರಿಯಲ್ಲ ಮತ್ತು ಕನ್ನಡ ಪ್ರೇಮಿಯಂತೂ ಅಲ್ಲವೇ ಅಲ್ಲ. ಪರ್ಷಿಯನ್ ಭಾಷೆಯೇ ಮೇಲಿದ್ದ ಪ್ರೇಮಕ್ಕಾಗಿ ಆತ ಆಡಳಿತದಲ್ಲಿ ಪರ್ಷಿಯನ್ ಭಾಷೆಯನ್ನು ಅಳವಡಿಸಿಕೊಂಡಿದ್ದಲ್ಲದೇ, ಹಿಂದೂ ಅಧಿಕಾರಿಗಳನ್ನು ತನ್ನ ಜೊತೆ ಇಟ್ಟುಕೊಂಡೇ ಇಸ್ಲಾಂಗೆ ನಿಷ್ಠೆ ತೋರಿಸುತ್ತಿದ್ದದ್ದನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 17 ಬಾರಿ ಕೊಡವರ ಮೇಲೆ ಧಾಳಿ ನಡೆಸಿದರೂ, ಅವರನ್ನು ಸೋಲಿಸಲು ಸಾಧ್ಯವಾಗದೇ ಹೋದಾಗ, ಮೋಸದಿಂದ ಸಾವಿರಾರು ಕೊಡವರನ್ನು ಕೊಲ್ಲಿಸಿದ ಕ್ರೂರಿ ಟಿಪ್ಪು. ಅದೇ ರೀತಿಯಲ್ಲಿ ಮೈಸೂರು ಮಹಾರಾಣಿಯವರಿಗೆ ಬ್ರಿಟಿಷರೊಂದಿಗೆ ಪತ್ರವ್ಯವಹಾರ ನಡೆಸಲು ಸಹಾಯ ಮಾಡುತ್ತಿದ್ದಾರೆ ಎಂಬ ಕ್ಷುಲ್ಲುಕ ಕಾರಣಕ್ಕೆ ನರಕ ಚತುರ್ದಶಿಯಂದು ಮೇಲುಕೋಟೆಯ ಸುಮಾರು 700 ಮಂಡ್ಯಂ ಶ್ರೀವೈಶ್ಣವರನ್ನು ಬರ್ಬರವಾಗಿ ಕೊಂದು ಮರಕ್ಕೆ ನೇತು ಹಾಕಿದ ದೇಶದ ಪ್ರಪ್ರಥಮ ಭಯೋತ್ಪಾದಕ ಎಂದರೂ ತಪ್ಪಾಗದು.
ಊರಿಗೆ ಅರಸನಾದರೂ ತಾಯಿಗೆ ಮಗ ಮತ್ತು ಹೆಂಡತಿಯ ಗುಲಾಮ ಎನ್ನುವ ಗಾದೆ ಮಾತಿದೆ. ಆಚ್ಚರಿಯ ವಿಷಯ ಎಂದರೆ, ನಾಟಕದಲ್ಲಿ ತೋರಿಸಿದಂತೆ ಟಿಪ್ಪು ತನ್ನ ತಾಯಿ ಮತ್ತು ಹೆಂಡತಿಯ ಮಾತುಗಳಿಗೆ ಎಂದೂ ಬೆಲೆ ಕೊಡಲೇ ಇಲ್ಲ. ಸಾಮಾನ್ಯವಾಗಿ ಕ್ರೂರ ಮತಾಂಧತೆಯ ರಾಜರುಗಳ ಮಡದಿಯರೂ ಅದೇ ಮನಸ್ಥಿತಿಯಲ್ಲಿ ಇರುತ್ತಾರೆ ಎಂಭ ಭಾವನೆ ಉಳ್ಳವರಿಗೆ ಅಚ್ಚರಿಯಂತೆ ಟಿಪ್ಪು ತಾಯಿ ಮತ್ತು ಆತನ ಮಡದಿ ಅನಾವಶ್ಯಕವಾಗಿ ಹಿಂದೂಗಳ ಮೇಲೆ ಧಾಳಿ ಮಾಡದಿರಿ ಬಲವಂತದಿಂದ ಆವರನ್ನು ಮತಾಂತರ ಮಾಡದಿರಿ. ಯಾರದ್ದೋ ಮಾತುಗಳನ್ನು ಕೇಳಿ ಆಸ್ಥಾನದ ಹಿರಿಯ ಹಿಂದೂ ಮಂತ್ರಿಗಳನ್ನು ಕೊಲ್ಲದಿರಿ ಎಂದು ಪರಿ ಪರಿಯಾಗಿ ಕೇಳಿಕೊಂಡರೂ, ದೀಪ ಆರುವ ಮುನ್ನಾ ಜೋರಾಗಿ ಪ್ರಜ್ವಲಿಸುತ್ತದೆ ಎಂಬಂತೆ ಉತ್ತರನ ಪೌರುಷ ಹೆಂಗಸರ ಮುಂದೆ ಎನ್ನುವಂತೆ ತನ್ನ ಅಬ್ಬರಗಳಿಂದ ತಾಯಿ ಮತ್ತು ಅನಾರೋಗ್ಯಪೀಡಿತ ಪತ್ನಿಯ ಮೇಲೆ ದಬ್ಬಾಳಿಕೆ ನಡೆಸಿ ಹತ್ತಿಕ್ಕುವ ಮೂಲಕ ಟಿಪ್ಪು ಹೆಣ್ಣು ಮಕ್ಕಳ ದ್ವೇಷಿ ಎಂಬುದನ್ನು ಎತ್ತಿ ತೋರಿಸುತ್ತಾನೆ.
ಫ್ರೆಂಚರು ಮತ್ತು ಯುರೋಪಿಯನ್ನರ ಜೊತೆ ಸಮುದ್ರದ ಮೂಲಕ ಪ್ಯಾಪಾರ ಮಾಡಲು ದಾರಿ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಹತ್ತು ಹಲವು ಬಾರಿ ಕೇರಳದ ನಾಯರ್ ಗಳ ಮೇಲೆ ಧಾಳಿ ನಡೆಸಿ ಅವರ ಅಪಾರವಾದ ಆಸ್ತಿ ಪಾಸ್ತಿಗಳನ್ನು ಲೂಟಿ ಮಾಡುವುದಲ್ಲದೇ, ಸಿಕ್ಕ ಸಿಕ್ಕವರನ್ನು ಬಲವಂತದಿಂದ ಮತಾಂತರ ಮಾಡಿರುವುದನ್ನೂ ನಾಟಕದಲ್ಲಿ ಸೂಕ್ಷ್ಮವಾಗಿ ತೋರಿಸಿದ್ದಾರೆ. ಕಡೆಯದಾಗಿ ಟಿಪ್ಪು ಬ್ರಿಟೀಷರ ಗುಂಡೇಟಿನಿಂದ ಸಾಯದೇ, ಮೈಸೂರಿನ ಮಹಾರಾಣಿಯವರ ಅನುಯಾಯಿಗಳಾದ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ ಕೋವಿಗೆ ಬಲಿಯಾದ ಎಂಬ ಸಂಗತಿ ಕೂತೂಹಲವನ್ನು ಹುಟ್ಟಿಸುತ್ತದೆಯಲ್ಲದೇ, ಈ ಕುರಿತಾಗಿ ಮುಂದೆ ಸೂಕ್ತವಾದ ದಾಖಲೆಗಳು ಹೊರಬಂದು ಇದರ ಸತ್ಯಾಸತ್ಯಗಳು ಜನರ ಮುಂದೆ ತೆರೆದುಕೊಂಡಲ್ಲಿ ಕಾರ್ಯಪ್ಪನವರ ಈ ಸಾಧನೆಗೆ ಒಂದು ಮೆರುಗು ತಂದು ಕೊಡುವುದಲ್ಲದೇ ಇದು ಕೇವಲ ಅವರ ಕಾಲ್ಪನಿಕ ಕಥೆಯಾಗದೇ ಐತಿಹಾಸಿಕವಾದ ದಾಖಲೆಯಾಗಿ ಉಳಿಯಲಿದೆ.
ಎಲ್ಲರ ಮುಂದೆ ಅಬ್ಬರಿಸಿ ಬೊಬ್ಬಿರಿದರೂ, ಒಂಟಿಯಾಗಿದ್ದಾಗ ಟಿಪ್ಪು ಪರಮ ಪುಕ್ಕಲ ಮನುಷ್ಯ ಎಂಬುದನ್ನು ಟಿಪ್ಪು ಪಾತ್ರ ಮಾಡುತ್ತಿರುವ ಸಚಿನ್ ಅತ್ಯದ್ಭುತವಾಗಿ ತೋರಿಸಿದ್ದಾರೆ. ಕೇವಲ ಟಿಪ್ಪು ಪಾತ್ರಧಾರಿಯಲ್ಲದೇ ಇಡೀ ರಂಗಾಯಣದ ಪ್ರತಿಭೆಗಳು ಈ ಐತಿಹಾಸಿಕ ನಾಟಕದಲ್ಲಿ ತಮ್ಮನ್ನು ತಾವು ಅತ್ಯದ್ಭುತವಾಗಿ ತೊಡಗಿಸಿಕೊಂಡಿರುವುದು ರಂಗಸ್ಥಳದ ಮೇಲೆ ಎದ್ದು ಕಾಣುತ್ತದೆ. ಮೂರೂವರೆ ಘಂಟೆಗಳ ನಾಟಕವಿಡೀ ಎಲ್ಲಿಯೂ ಸಂಭಾಷಣೆಯಲ್ಲಾಗಲೀ ಭಾಷೆಯ ಮೇಲಿನ ಹಿಡಿತದಿಂದಾಗಲೀ ತಪ್ಪದ ರಂಗಾಯಣದ ಆ 20ಕ್ಕೂ ಹೆಚ್ಚಿನ ತಂಡಕ್ಕೆ ನಿಜಕ್ಕೂ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಸಾಲದು.
ನಾಟಕದ ರಚನೆ ನಿರ್ದೇಶನ ಮತ್ತು ಅಭಿನಯಕ್ಕೆ ಪೂರಕವಾಗಿ ನಾಟಕ ಮತ್ತೊಂದು ಹಂತಕ್ಕೆ ತಲುಪಲು ರಂಗವಿನ್ಯಾಸ ಶ್ರೀ ಶಶಿಧರ ಅಡಪ, ವಸ್ತ್ರ ಪರಿಕರ ವಿನ್ಯಾಸ : ಶ್ರೀ ಪ್ರಮೋದ್ ಶಿಗ್ಗಾಂವ್, ಸಂಗೀತ ವಿನ್ಯಾಸ : ಧನುಂಜಯ ಮತ್ತು ಮೈಸೂರು ಆರ್. ಸಿ ಸುಬ್ರಹ್ಮಣ್ಯ ಮತ್ತು ಬೆಳಕು : ಮಹೇಶ್ ಕಲ್ಲತ್ತಿ ಅವರ ಸಾಧ್ ನಿಜಕ್ಕೂ ಅದ್ಭುತವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ತೆರೆಯ ಜಾಗದಲ್ಲಿ ಡಿಜಿಟಲ್ ಫೋಟೋಗಳನ್ನು ಬಳಸಿಕೊಂಡು ಅತ್ಯಂತ ಸರಳವಾದ ಮೂರ್ನಾಲ್ಕು ಕಂಬಗಳು, ಕಮಾನುಗಳು, ಮತ್ತು ಕೆಲ ಆಸನಗಳನ್ನು ಬಳಸಿಕೊಂಡು ಕ್ಷಣಮಾತ್ರದಲ್ಲಿಯೇ ಸ್ವತಃ ಕಲಾವಿದರೇ ಸಮಯ ಸ್ವಲ್ಪವೂ ವ್ಯರ್ಧವಾಗದಂತೆ ಸಜ್ಜು ಮಾಡುತ್ತಿದ್ದದ್ದಕ್ಕೆ ಬೆಳಕಿನ ತಂಡವೂ ಸಹಾ ಅತ್ಯುತ್ತಮವಾಗಿ ಕೈ ಜೋಡಿಸಿರುವುದು ನಾಟಕದ ಓಘವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂದಿನ ಕಾಲದ ವೇಷ ಭೂಷಣಗಳು ಅದಕ್ಕೊಪ್ಪುವಂತಹ ಪಾದರಕ್ಷೆಗಳು ಮತ್ತು ಅದೇ ಪಾತ್ರಧಾರಿಗಳು ಬಗೆ ಬಗೆಯ ಪೋಷಾಕಿನಲ್ಲಿ ವಿವಿಧ ಪಾತ್ರಗಳನ್ನು ಮಾಡಲು ಅನುವು ಮಾಡಿಕೊಡುವುದರ ಜೊತೆಗೆ ಹಿನ್ನೆಲೆಯ ಸಂಗೀತವೂ ನಾಟಕಕ್ಕೆ ಪೂರಕವಾಗಿ ಕಿವಿಗಳಿಗೆ ಇಂಪಾಗಿದೆ.
ಇಡೀ ನಾಟಕದ ತಂಡವೆಲ್ಲಾ ಸೇರಿ ಕಡೆಯದಾಗಿ ಹಾಡುವ ದೇಶ ಭಕ್ತಿಯ ಹಾಡಂತೂ ಮೈಮನಗಳನ್ನು ರೋಮಾಂಚನಗೊಳಿಸುತ್ತದೆ.
ಸಿನಿಮಾಗಳಿಗೇ ಜನರು ಬಾರದಂತಹ ಇಂದಿನ ಕಾಲದಲ್ಲೂ ಸುಮಾರು ಮೂರೂವರೆ ಘಂಟೆಗಳ ನಾಟಕವನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರೂ, ಟಿಪ್ಪು ನಿಜ ಕನಸುಗಳು ಪುಸ್ತಕದಲ್ಲಿ ಇದ್ದಷ್ಟೇ ಸಂಭಾಷಣೆಗಳೊಂದಿಗೆ ಕೆಲವು ಸ್ವಗತ ಮತ್ತು ಪುನರಾವರ್ತಿತ ಸಂಭಾಷೆಣೆಗಳನ್ನು ಕತ್ತರಿಸಿ ನಾಟಕವನ್ನು ಸುಮಾರು ಎರಡರಿಂದ ಎರಡೂವರೆ ಘಂಟೆಗಳ ಕಾಲಕ್ಕೆ ಸೀಮಿತಗೊಳಿಸಿದಲ್ಲಿ ಮತ್ತಷ್ಟು ಪರಿಣಾಕಾರಿಯಾಗೆ ಹೆಚ್ಚಿನ ಜನರಿಗೆ ತಲುಪುವಂತಾಗ ಬಹುದು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.
ಅದೇ ರೀತಿ ಟಿಪ್ಪು ಸಾಯುವ ಮುನ್ನಾ ಭಯಭೀತನಾಗಿ ಕಂಡ ಕಂಡ ದೇವರು ದಿಂಡರಿಗೆ ಕೈಮುಗಿಯುವುದು ಮತ್ತು ದಾನ ಧರ್ಮಗಳನ್ನು ಮಾಡುವುದು ಅದರಲ್ಲೂ ಶೃಂಗೇರಿ ಮಠಕ್ಕೆ ಹೆಚ್ಚಿನ ಅನುದಾನವನ್ನು ನೀಡಿದಾಗ ಅಂತಹ ಮತಾಂಧನಿಗೂ ಶೃಂಗೇರಿ ಮಠದ ಪ್ರತಿನಿಧಿ ಆಶೀರ್ವಾದ ಮಾಡುವುದನ್ನು ನೋಡಿದಾಗ, ಅಂದಿಗೂ ಇಂದಿಗೂ ಶ್ರೀ ಮಠಗಳು ಸ್ವಲ್ಪವೂ ಬದಲಾಗಿಯೇ ಇಲ್ಲವಲ್ಲಾ. ಸಾರ್ವಜನಿಕವಾಗಿ ಬಾಯಿಗೆ ಬಂದಂತೆ ಬ್ರಾಹ್ಮಣರನ್ನು ಬೈಯ್ಯುವ ಮತ್ತು ಹಿಂದೂ ದೇವಾಲಯಗಳನ್ನು ನಾಶ ಪಡಿಸುವವರ ಶ್ರೇಯೋಭಿಲಾಷೆಗಾಗಿ ಹೋಮ ಹವನಾದಿಗಳನ್ನು ಮಾಡಲು ಮುಂದಾಗುವುದು ಅಸಹನೀಯ ಎನಿಸಿತು.
ನಾಟಕದಲ್ಲಿ ಬರುವ ಅನೇಕ ಸಂಭಾಷಣೆಗಳು ಪ್ರಸ್ತೃತ ಸನ್ನಿವೇಷಕ್ಕೂ ಅನುಗುಣವಾಗಿ ಇರುವಂತಿದ್ದ ಕಾರಣ ನಾಟಕವಿಡೀ ಜೋರಾದ ಚಪ್ಪಾಳೆ ಮತ್ತು ಸಿಳ್ಳುಗಳ ಅಬ್ಬರ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ನೋಡುತ್ತಿದ್ದ ಪೌರಾಣಿಕ ನಾಟಕಗಳನ್ನು ನೆನಪಿಸುವಂತಾಯಿತು. ಅದೇ ರೀತಿ ನಾಟಕದ ಕಡೆಯಲ್ಲಿ ಟಿಪ್ಪು ಕಾಲದ ಇತಿಹಾಸಕಾರ ಕಿರ್ಮಾನಿ ಮತ್ತು ದಿವಾನ್ ಪೂರ್ಣಯ್ಯನವರು ಸಂಭಾಷಣೆ ಭಾರತದ ನೈಜ ಇತಿಹಾಸವನ್ನು ಹೇಗೆ ಎಡ ಬಲ ಎಂದು ತಿರುಚಿದ್ದಾರೆ ಎಂಬುದಕ್ಕೆ ಸಾಕ್ಷಿಯಾದಂತಿತ್ತು. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ನಿಜವಾದ ಇತಿಹಾಸವನ್ನು ತಿಳಿದುಕೊಳ್ಳುವ ಮನಸ್ಥಿತಿಯುಳ್ಳವರು ಖಂಡಿತವಾಗಿಯೂ ಈ ನಾಟಕವನ್ನು ಇಡೀ ಕುಟುಂಬದ ಸಮೇತ ನೋಡಲೇ ಬೇಕು. ಅದರಲ್ಲೂ ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ಯುವಕರಿಗೆ ನಮ್ಮ ದೇಶದ ನಿಜವಾದ ಇತಿಹಾಸದ ಅರಿವಿರಬೇಕು. ಇತಿಹಾಸವನ್ನು ಅರಿಯದವ ಇತಿಹಾಸವನ್ನು ಸೃಷ್ಟಿಸಲಾರ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನಿಮ್ಮ ವಿಮರ್ಶೆ ಅತ್ಯದ್ಭುತ. ಮುಂದೆ ಬೆಂಗಳೂರಿನಲ್ಲಿ ಈ ನಾಟಕ ಪ್ರದರ್ಶನವಾದಾಗ ಖಂಡಿತ ನೋಡುತ್ತೇನೆ. ಆ ಕೃತಿಯನ್ನು ಈ ವರೆಗೂ ಓದದಿರುವುದು ನನಗೆ ಮುಜುಗರವೆನಿಸಿದೆ.
LikeLiked by 1 person
ಧನ್ಯೋಸ್ಮಿ
LikeLike