ಕಬ್ಬನ್ ಪಾರ್ಕ್

IMG_20190810_172756ನಮಗೆಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನ ಹೃದಯಭಾಗದಲ್ಲಿಯೇ ವಿಶ್ವವಿಖ್ಯಾತ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಎಂಬ ವಿಶಾಲವಾದ ಮತ್ತು ಅಷ್ಟೇ ಅದ್ಭುತವಾದ ಉದ್ಯಾನವನ ಇರುವ ಕಾರಣ ಬೆಂಗಳೂರು ನಗರ ಉದ್ಯಾನ ನಗರಿ ಎಂದೇ ಪ್ರಸಿದ್ದವಾಗಿದೆ. ನಮಗೆ ಕಬ್ಬನ್ ಪಾರ್ಕ್ ಗೊತ್ತು ಅದೇ ಮಿಡೋಸ್ ಪಾರ್ಕ್ ಮತ್ತು ಶ್ರೀ ಚಾಮರಾಜೇಂದ್ರ ಉದ್ಯಾನವನ ಎಲ್ಲಿದೆ ಅಂತಾ ಕೇಳಿದ್ರೇ ಅಪ್ಪಟ ಬೆಂಗಳೂರಿನವರೇ ತಲೆ ಕೆರೆದುಕೊಳ್ಳುತ್ತೇವೆ. ದೇವನೊಬ್ಬ ನಾಮ ಹಲವು ಎನ್ನುವಂತೆ, ಮೂರು ಹೆಸರುಳ್ಳ ಒಂದೇ ಉದ್ಯಾನವನವಾದ ಕಬ್ಬನ್ ಪಾರ್ಕ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯ 6ನೇ ಸಂಚಿಕೆಯಲ್ಲಿ ತಿಳಿಯೋಣ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

devaraj_wadiyar1701 ರಲ್ಲಿ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ದೇವರಾಜ ಒಡೆಯರ್ II ಅವರು ಬೆಂಗಳೂರಿನ ಹೃದಯಭಾಗದಲ್ಲಿ ಜನರಿಗೆ ಅನುಕೂಲವಾಗುವಂತೆ ಹದಿನೆಂಟು ಆಡಳಿತ ವಿಭಾಗಗಳ ಸಚಿವಾಲಯವನ್ನು ಒಂದೆಡೆಯಲ್ಲಿ ಸೇರಿಸಿ ಅಟ್ಟಾರ ಕಚೇರಿ ಯನ್ನು ಸ್ಥಾಪಿಸಿದರು. ಅದೇ ಕಛೇರಿ ಮುಂದೆ ಇದನ್ನು ಬೌರಿಂಗ್ಸ್ ಅಟ್ಟಾರ ಕಚೇರಿ ಅಥವಾ ಹಳೆಯ ಸಾರ್ವಜನಿಕ ಕಚೇರಿಗಳು ಎಂದೂ ಕರೆಯಲಾಗುತ್ತಿತ್ತು. ಶ್ರೀ ಲೆವಿನ್ ಬೆಂಥಮ್ ಬೌರಿಂಗ್ ಸರ್ ನಂತರ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮಾರ್ಕ್ ಕಬ್ಬನ್, ಅವರು ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಸೆಕ್ರೆಟರಿಯೇಟ್ ಕಟ್ಟಡವನ್ನು ಕಲ್ಪಿಸಿದರು. ನಂತರದ ದಿನಗಳಲ್ಲಿ ಅದೇ ಕಟ್ಟಡದಲ್ಲಿಯೇ ರಾಜ್ಯ ಹೈಕೋರ್ಟ್‌ ಇದೆ.

cubbon_oldಹೀಗೆ ಬೆಂಗಳೂರಿನ ಹೃದಯಭಾಗವಾಗಿದ್ದಂತಹ ಪ್ರದೇಶದಲ್ಲಿಯೇ 1870 ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಜನರಲ್ ರಿಚರ್ಡ್ ಸ್ಯಾಂಕಿ ಅವರ ನೇತೃತ್ವದಲ್ಲಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಇದೇ ಅಟ್ಟಾರ ಕಛೇರಿಯ ಹಿಂಭಾಗದಲ್ಲಿ ಉದ್ಯಾನವನ್ನು ಆರಂಭಿಸಿ ನಂತರದ ದಿನಗಳಲ್ಲಿ ಅದೇ ಉದ್ಯಾನವನ ಸುಮಾರು 300 ಎಕರೆಯಷ್ಟು ವಿಸ್ತರಣೆಗೊಂಡು ತೋಟಗಾರಿಕಾ ಇಲಾಖೆಯ ವತಿಯಿಂದ ಅದಾಗಲೇ ಇದ್ದ ಅನೇಕ ಮರಗಳ ಜೊತೆಯಲ್ಲೇ ಬೃಹತ್ ಬಿದಿರಿನ ಮೆಳೆಗಳು, ಹುಲ್ಲಿನ ಹರವು ಮತ್ತು ಹೂವಿನ ಗಿಡಗಳಲ್ಲದೇ ದೇಶ ವಿದೇಶಗಳಿಂದ ವಿವಿಧ ಬಗೆಯ ಅಪರೂಪದ ಗಿಡಗಮರಗಳನ್ನು ತರಿಸಿ ಅಲ್ಲಿ ನೆಡಿಸುವ ಮೂಲಕ ಅದಾಗಲೇ ಇದ್ದ ನೈಸರ್ಗಿಕ ಬಂಡೆಗಳೇ ಸೃಜನಾತ್ಮಕವಾಗಿ ಕಾಣುವಂತೆ ಸಂಯೋಜಿಸಿದರು. ಈ ಹಸಿರು ಉದ್ಯಾನವನದ ಮೂಲಕವೇ ವಾಹನಗಳು ಓಡಾಡುವಂತರ ಸುವ್ಯವಸ್ಥಿತ ರಸ್ತೆಗಳನ್ನು ಮಾಡಿದ್ದಲ್ಲದೇ, ಉದ್ಯಾನವನದ ಸುತ್ತಲೂ ಮುಂ‍ಜಾನೆ ಮತ್ತು ಸಂಜೆ ಸುಲಭವಾಗಿ ನಡೆದಾಡುವಂತಹ ಪಾದಚಾರಿರಸ್ತೆಗೆಳನ್ನು ಮಾಡಿಸಿದ ಕಾರಣ, ಇಂದಿಗೂ ಸಹಾ ಮುಂಜಾನೆ ಮತ್ತು ಸಂಜೆ ಸಾವಿರಾರು ಜನರು ಆ ಪ್ರಶಾಂತವಾದ ನೈಸರ್ಗಿಕ ಪರಿಸರದಲ್ಲಿ ಸುದೀರ್ಘವಾದ ನಡಿಗೆಯನ್ನು ಮಾಡುವುದನ್ನು ಕಾಣಬಹುದಾಗಿದೆ. ಈ ಉದ್ಯಾನವನದಲ್ಲಿರುವ ಅಪರುಪದ ಮರ ಗಿಡಗಳ ಕುರಿತಾಗಿ ಅಧ್ಯಯನ ಮಾಡಲು ಅನೇ ಸಸ್ಯ ಶಾಸ್ತ್ರಜ್ಞರು ಇದಂದಿಗೂ ಸಹಾ ಇಲ್ಲಿಗೆ ಭೇಟಿ ನೀಡುವುದು ಗಮನಾರ್ಹವಾಗಿದೆ.

flowersಪ್ರಸ್ತುತ ಈ ಉದ್ಯಾನವನದಲ್ಲಿ ಸ್ಥಳೀಯ ಮತ್ತು ವಿದೇಶೀಯ ವಿಲಕ್ಷಣ ಸಸ್ಯ ಶಾಸ್ತ್ರೀಯ ಪ್ರಭೇದಗಳೊಂದಿಗೆ ಸುಮಾರು 68 ಜಾತಿಗಳು ಮತ್ತು 96 ಜಾತಿಗಳು ಒಟ್ಟು ಸುಮಾರು 6000 ಸಸ್ಯಗಳು/ಮರಗಳನ್ನು ಕಾಣಬಹುದಾಗಿದೆ ಉದ್ಯಾನವನದ ರಸ್ತೆಗಳಲ್ಲಿ ಅಲಂಕಾರಿಕ ಮತ್ತು ಹೂಬಿಡುವ ಸಿಲ್ವರ್ ಓಕ್ ( ಇದು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಪರಿಚಯಿಸಲಾದ ಮೊದಲ ಓಕ್ ಮರವಾಗಿದೆ) ಜೊತೆಯಲ್ಲೇ ಕೆಂಪನೆಯ ಗುಲ್ಮೊಹರ್ ಮರಗಳಿಂದ ಆಕರ್ಷಣಿಯವಾಗಿ ಕಾಣುವಂತಾಗಿದೆ.

Cubbon_park_inaurationಹೀಗೆ 1870ರಲ್ಲಿ ಆರಂಭವಾದ ಉದ್ಯಾನವನಕ್ಕೆ ಮೈಸೂರಿನ ಅಂದಿನ ಕಮಿಷನರ್ ಆಗಿದ್ದ ಸರ್ ಜಾನ್ ಮೀಡೆ ಅವರ ನೆನಪಿನಲ್ಲಿ ಮೀಡೆಸ್ ಪಾರ್ಕ್ ಎಂದು ಹೆಸರಿಸಲಾಯಿತು. 1834ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸೇನಾ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್-ಜನರಲ್ ಸರ್ ಮಾರ್ಕ್ ಕಬ್ಬನ್ 1861ರಲ್ಲಿ ಮೈಸೂರಿನ ಮುಖ್ಯ ಆಯುಕ್ತರಾಗಿದ್ದಾಗ, ಮೈಸೂರು ಅರಸರಿಂದ ಬ್ರಿಟೀಷರು ಕಸಿದುಕೊಂಡಿದ್ದ ರಾಜ್ನವನ್ನು ಪುನಃ ಮಹಾರಾಜರರಿಗೆ ಹಿಂದಿರುಗಿಸುವಂತೆ ಅರಸರು 50 ವರ್ಷಗಳ ಕಾಲ ಸುದೀರ್ಘವಾದ ಪತ್ರ ಬರೆಯುತ್ತಿದ್ದನ್ನು ವಿಕ್ಟೋರಿಯಾ ರಾಣಿಯವರಿಗೆ ಸವಿವರವಾಗಿ ವಿವರಿಸಿ, ಅಂದಿಗೆ ಬ್ರಿಟಿಷರು ವಶಪಡಿಸಿಕೊಂಡಿದ್ದ ಸುಮಾರು 565 ಸಂಸ್ಥಾನಗಳ ಪೈಕಿ ಮೈಸೂರಿನ ರಾಜರಿಗೆ ಮಾತ್ರವೇ ಆಡಳಿತವನ್ನು ಮರಳಿ ಹಸ್ತಾಂತರ ಮಾಡುವುದರಲ್ಲಿ ಸಹಾಯ ಮಾಡಿದ ಆ ಮಹನೀಯರ ಸ್ಮರಣಾರ್ಥವಾಗಿಯೇ ಅದೇ ಮೀಡೋಸ್ ಪಾರ್ಕನ್ನು ಕಬ್ಬನ್ ಪಾರ್ಕ್ ಎಂದು ಮರುನಾಮಕರಣ ಮಾಡಿದ್ದಲ್ಲದೇ ಅದೇ ಪಾರ್ಕಿನ ಒಂದು ಭಾಗದ ರಸ್ತೆಗೆ ಕಬ್ಬನ್ ರಸ್ತೆ ಎಂದು ಹೆಸರಿಡಲಾಯಿತು. 1927 ರಲ್ಲಿ ಶ್ರೀ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ರಜತ ಮಹೋತ್ಸವದ ಸವಿನೆನಪಿಗಾಗಿ, ಮತ್ತೆ ಅದೇ ಉದ್ಯಾನವನವನ್ನು ಪುನಃ ಶ್ರೀ ಚಾಮರಾಜೇಂದ್ರ ಉದ್ಯಾನವನ ಎಂದು ಮರುನಾಮಕರಣ ಮಾಡಲಾಯಿತಾದರೂ, ಜನರ ನೆನಪಿನಲ್ಲಿ ಮೊದಲ ಹೆಸರಾದ ಮೀಡೋಸ್ ಮತ್ತು ಕೊನೆಯ ಹೆಸರಾದ ಚಾಮರಾಜೇಂದ್ರ ಮರೆತು ಹೋಗಿ ಇಂದಿಗೂ ಕಬ್ಬನ್ ಪಾರ್ಕ್ ಎಂದು ವಿಶ್ವವಿಖ್ಯಾತವಾಗಿದೆ.

cubbonpark.Statue1866ರಲ್ಲಿ ಉಚ್ಚ ನ್ಯಾಯಾಲಯದ ಆವರಣದಲ್ಲಿ ಅಶ್ವಾರೋಹಿ ಮಾರ್ಕ್ ಕಬ್ಬನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರೆ, 1906ರಲ್ಲಿ ರಾಣಿ ವಿಕ್ಟೋರಿಯಾ, 1913ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್, 1919ರಲ್ಲಿ ಕಿಂಗ್ ಎಡ್ವರ್ಡ್ VII, 1927 ರಲ್ಲಿ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರ ಅಮೃತಶಿಲೆಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದು ಇಂದಿಗೂ ಸಹಾ ಅವುಗಳನ್ನು ಕಬ್ಬನ್ ಪಾರ್ಕಿನಲ್ಲಿ ನೋಡಬಹುದಾಗಿದೆ.

rose_gardenಕಬ್ಬನ್ ಪಾರ್ಕ್ ಕೇವಲ ಉದ್ಯಾನವನವಾಗಿಯಷ್ಟೇ ಅಲ್ಲದೇ ಅದರ ಅವರಣದೊಳಗೆ ಅನೇಕ ಕಟ್ಟಡಗಳಿದ್ದು ಅವುಗಳಲ್ಲಿ ಪ್ರಮುಖವಾಗಿ ಅತ್ಯಂತ ಕಲಾತ್ಮಕವಾಗಿರುವ ಅಯ್ಯರ್ ಹಾಲ್ ಮತ್ತು ಅದರ ಮುಂದೆ ನೂರಾರು ಪ್ರಬೇಧದ ಗುಲಾಬಿ ಹೂವಿನ ಉದ್ಯಾನವನವಿದ್ದು, ಪ್ರಸ್ತುತ ಈ ಕಟ್ಟಡವನ್ನು ಕೇಂದ್ರ ಗ್ರಂಥಾಲಯವವನ್ನಾಗಿ ಮಾರ್ಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಅತಿ ದೊಡ್ಡ ಸಾರ್ವಜನಿಕ ಗ್ರಂಥಾಲಯವಾಗಿದೆಯಲ್ಲದೇ ವಿಶ್ವದ ಅತ್ಯಂತ ವ್ಯಾಪಕವಾದ ಸುಮಾರು 2.65 ಲಕ್ಷ ಬ್ರೈಲ್ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ.

toy_Trainಕಬ್ಬನ್ ಪಾರ್ಕಿನ ಆವರಣದಲ್ಲಿಯೇ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯವಲ್ಲದೇ, ಜವಾಹರ್ ಬಾಲ ಭವನ ಮತ್ತು ಅದರ ಸುತ್ತಲೂ ಮಕ್ಕಳ ಆಟಿಕೆ ರೈಲಿನ ಮೂಲಕ 10-15 ನಿಮಿಷಗಳ ಸವಾರಿಯ ಜೊತೆಗೆ ಜಾರು ಬಂಡೆ, ಮಕ್ಕಳ ಆಕರ್ಷಣಿಯವಾದ ಕೇಂದ್ರವಾಗಿದೆ. ಅದರ ಪಕ್ಕದಲ್ಲೇ ವೆಂಕಟಪ್ಪ ಆರ್ಟ್ ಗ್ಯಾಲರಿ, ಭಾರತದಲ್ಲಿ ಎರಡನೇ ದೊಡ್ಡದು ಎನ್ನಲಾದ ಅಕ್ವೇರಿಯಂ ಇದ್ದರೆ ಪಾರ್ಕಿನ ಮತ್ತೊಂದು ಬದಿಯಲ್ಲಿ YMCA, ರಾಜ್ಯ ಯುವ ಕೇಂದ್ರವಾದ ಯುವನಿಕಾ, ರಿಸರ್ವ್ ಬ್ಯಾಂಕ್, ಸೆಂಚುರಿ ಕ್ಲಬ್, ಪ್ರೆಸ್ ಕ್ಲಬ್, ವಿಶ್ವ ವಿಖ್ಯಾತ ಟೆನ್ನಿಸ್ ಕ್ರೀಡಾಂಗಣವಿದೆ. ಕಬ್ಬನ್ ಪಾರ್ಕ್‌ನಲ್ಲಿ ರಾಜ್ಯ ಸರ್ಕಾರದ ವತಿಯಿಂದಲೇ ನಡೆಸುತ್ತಿರುವ ಮೀನಿನ ಭಕ್ಷ್ಯಗಳಿಗೆ ಸಂಬಂಧಿಸಿದೆ ಮತ್ಸ್ಯ ದರ್ಶಿನಿ ಅಥವಾ ಫಿಶ್ ಕ್ಯಾಂಟೀನ್ ಎಂದೇ ಪ್ರಸಿದ್ಧವಾಗಿರುವ ರೆಸ್ಟೋರೆಂಟ್ ಸಹಾ ಇದೆ. 1950ರಲ್ಲಿ ಸುಮಾರು 260 ಎಕರೆಗಳಷ್ಟು ವಿಸ್ತೀರ್ಣವಾಗಿದ್ದ ಕಬ್ಬನ್ ಪಾರ್ಕ್, ಮೇಲೆ ತಿಳಿಸಿದ ಎಲ್ಲಾ ಕಟ್ಟಡಗಳಿಂದ ಆವೃತಗೊಂಡ ನಂತರ ಪ್ರಸ್ತುತ ಸುಮಾರು 197 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ.

weekendಸಾಧಾರಣವಾಗಿ ಶರತ್ಕಾಲದ ತಿಂಗಳುಗಳು ಮತ್ತು ಚಳಿಗಾಲದ ಆರಂಭ ಅರ್ಥಾತ್ ಸೆಪ್ಟೆಂಬರ್ ನಿಂದ ಫೆಬ್ರವರಿವರೆಗೆ ಈ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದ್ದು ಈ ಅವಧಿಯಲ್ಲಿ ತಾಪಮಾನವು ಸೌಮ್ಯ ಮತ್ತು ತಂಗಾಳಿಯಿಂದ ಕೂಡಿರುತ್ತದೆ. ಇನ್ನು ಬೇಸಿಗೆಯ ಕಾಲ ಮಾರ್ಚ್ ನಿಂದ ಮೇ ವರೆಗೆ ವಸಂತಕಾಲದ ಹೂವುಗಳಿಂದ ಅಲಂಕರಿಸಲ್ಪಟ್ಟಿದ್ದು ಕಣ್ಗಳಿಗೆ ಆನಂದ ಜೊತೆಗೆ ಮನಕ್ಕೆ ಮುದ ನೀಡುವಂತಹ ಆಹ್ಲಾದಕರವಾದ ವಾತಾವರಣವನ್ನು ಈ ಉದ್ಯಾನವನದಲ್ಲಿ ಕಾಣಬಹುದಾಗಿದೆ.

cubbon_park_Romanceಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ವಿವಿಧ ಸಸ್ಯಗಳು ಚಿಗುರಿ ಎತ್ತರೆತ್ತರಕ್ಕೆ ಬೆಳೆಯುವ ಕಾರಣ, ಎತ್ತರೆತ್ತರದ ಮರಗಳು ಮತ್ತು ಬಂಡೆಗಳ ಹಿಂದೆ ಪ್ರೇಮಿಗಳು ಸರಸ ಸಲ್ಲಾಪದಲ್ಲಿ ತೊಡಗಿ ಕೊಳ್ಳುವ ದೃಶ್ಯಗಳಿಂದ ಮುಜುಗರಕ್ಕೊಳಗಾದ ಸಾರ್ವಜನಿಕರ ಅಹವಾಲನ್ನು ಗಮನಿಸಿ ಇತ್ತೀಚೆಗೆ ತೋಟಗಾರಿಕೆ ಇಲಾಖೆಯವರು ಕಬ್ಬನ್ ಪಾರ್ಕ್ ನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಸುಮಾರು 120 ಸಿಸಿಟಿವಿಯನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಸುಭಧ್ರತೆಗೆ ಮುಂದಾಗಿರುವುದು ಗಮನಾರ್ಹವಾಗಿದೆ.

ಕಬ್ಬನ್ ಪಾರ್ಕ್ ಸಂಪೂರ್ಣವಾಗಿ ಸಾರ್ವಜನಿಕ ಉದ್ಯಾನವನವಾಗಿದ್ದು ಬೆಳಿಗ್ಗೆ 06 ರಿಂದ ಸಂಜೆ 06:00 ರವರೆಗೆ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಉದ್ಯಾವನಕ್ಕೆ ಪ್ರವೇಶಿಸಬಹುದಾಗಿದೆ. ಸಾರ್ವಜನಿಕ ವಾಹನಗಳ ದಟ್ಟಣೆಯಿಂದಾಗಿ ಅಲ್ಲಿರುವ ಗಿಡ ಮರಗಳ ಮೇಲೆ ಪರಿಸರ ಮಾಲಿನ್ಯ ಉಂಟಾಗುವ ಪರಿಣಾಮ ಇತ್ತೀಚೆಗೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಭಂಧಿಸಲಾಗಿದೆ.

Band_Standಭಾನುವಾರಗಳಂದು ಕಬ್ಬನ್ ಪಾರ್ಕ್ ನಲ್ಲಿ ನಡೆಯುವ ವಿವಿಧ ಚಟುವಟಿಕೆಗಳು ಮತ್ತೊಂದು ಆಕರ್ಶಣೆಯನ್ನು ಹೆಚ್ಚಿಸುತ್ತದೆ, ಪ್ರತಿ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಿವಿಧ ಶ್ರೇಣಿಯ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲ್ಪಡುತ್ತದೆ. ಐಯ್ಯರ್ ಹಾಲ್ ನಿಂದ ಕೂಗಳತೆಯ ದೂರದಲ್ಲಿ ಒಂದು ಭವ್ಯವಾದ ಬ್ಯಾಂಡ್ ಸ್ಟ್ಯಾಂಡ್ ಇದ್ದು ಬ್ರಿಟೀಷರ ಕಾಲದ ಮಿಲಿಟರಿ ಸೈನಿಕರ ವಾದ್ಯಗೋಷ್ಟಿ ಇಲ್ಲಿ ಪ್ರತೀ ಭಾನುವಾರವೂ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದ ಕಾರಣ ಇದು ಬ್ಯಾಂಡ್‌ ಸ್ಟ್ಯಾಂಡ್ ಎಂದೇ ಪ್ರಸಿದ್ದವಾಗಿದೆ. ಆ ದಿನಗಳಲ್ಲಿ ಬ್ಯಾಂಡ್ ಸ್ಟ್ಯಾಂಡ್ ಸುತ್ತಲೂ ಪ್ರವಾಸಿಗರು ಅಲಂಕಾರಿಕ ಬೆಂಚುಗಳ ಮೇಲೆ ಕುಳಿತು ವಾದ್ಯಗಾರರು ನುಡಿಸುತ್ತಿದ್ದ ಸಂಗೀತವನ್ನು ಆನಂದಿಸುತ್ತಿದ್ದರು. ಸ್ವಾತಂತ್ರ ಬಂದ ನಂತರ ಎಂಭತ್ತು ಮತ್ತು ತೊಂಭತ್ತರ ದಶಕದ ವರೆಗೂ ಬೆಂಗಳೂರಿನ ಹೆಸರಾಂತ ಆರ್ಕೆಸ್ಟ್ರಾ ತಂಡಗಳು ಇಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುವುದು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿದ್ದವು. ನಂತರ ಕೆಲವು ವರ್ಷಗಳ ಕಾಲ ಅದು ನಿಂತು ಹೋಗಿದ್ದನ್ನು ಮನಗಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವಾರಾಂತ್ಯದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಹಿಂದಿನ ಕಾಲದ ಮೆರುಗನ್ನು ತಂದು ಕೊಟ್ಟಿದೆ ಕಾರ್ಯಕ್ರಮ ನಡೆಯುವ ಸಂಧರ್ಭದಲ್ಲಿ ಬ್ಯಾಂಡ್ ಸ್ಟಾಂಡಿನ ಸುತ್ತಲೂ ಇರುವ ಹಸಿರು ಹುಲ್ಲುಹಾಸುಗಳ ಮೇಲೆ ಕುಳಿತೋ ಇಲ್ಲವೇ ಅ ರಸ್ತೆ ಉದ್ದಕ್ಕೂ ಇರುವ ಸಿಮೆಂಟ್ ಬೆಂಚುಗಳ ಮೇಲೆ ಕುಳಿತು ಕಾರ್ಯಕ್ರಮವನ್ನು ಆನಂದಿಸುತ್ತಾರೆ. ಅದೇ ರೀತಿ ವಾರಾಂತ್ಯದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ವಿವಿಧ ತಂಡಗಳು ಮ್ಯಾರಥಾನ್ ಮತ್ತು ವಾಕಥಾನ್ ನಂತಹ ಸಾಂದರ್ಭಿಕ ಕಾರ್ಯಕ್ರಮಗಳಲ್ಲದೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಭಾನುವಾರದಂದು ಕಬ್ಬನ್ ಪಾರ್ಕ್‌ನಲ್ಲಿ ವಿಶೇಷ ಸಂದರ್ಭಗಳಲ್ಲಿ ಬಾಲ ಭವನದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ.

dogsಇದಲ್ಲದೇ ಪ್ರತೀ ಭಾನುವಾರ ಬೆಳಿಗ್ಗೆ 8 ರಿಂದ 11 ಗಂಟೆಯ ನಡುವೆ ಸುಮಾರು ಮೂರು ಗಂಟೆಗಳ ಕಾಲ ಕೇಂದ್ರ ಗ್ರಂಥಾಲಯದ ಮುಂಭಾಗದಲ್ಲಿರುವ ಆವರಣದ ಹಸಿರು ಹುಲ್ಲಿನ ಮೇಲೆ, ವಿವಿಧ ಎತ್ತರ ಮತ್ತು ಗಾತ್ರವನ್ನು ಹೊಂದಿರುವ, ವಿವಿಧ ಆಕಾರದ, ವಿವಿಧ ತಳಿಯ, ಬಗೆ ಬಗೆಯ ಬಣ್ಣದ ನೂರಾರು ನಾಯಿಗಳನ್ನು ಏಕ ಕಾಲದಲ್ಲಿ ಅಲ್ಲಿ ಕಾಣಬಹುದಾಗಿದೆ. ಈ ಸಾಕು ಪ್ರಾಣಿಗಳ ಮಾಲಿಕರು ಎಲ್ಲರೂ ಸೇರಿಕೊಂಡು ಡಾಗ್ ಕ್ಲಬ್ ಮಾಡಿಕೊಂಡಿದ್ದು ಪ್ರತೀ ಭಾನುವಾರದಂದು ತಮ್ಮ ತಮ್ಮ ಸಾಕು ಪ್ರಾಣಿಗಳನ್ನು ಈ ಜಾಗಕ್ಕೆ ಕರೆತಂದು ಬೆಳಗಿನ ವಾಯು ವಿಹಾರಕ್ಕೆಂದು ಬರುವವರ ಮನಸ್ಸನ್ನು ಸೂರೆಗೊಳ್ಳುತ್ತಿದೆ. ಇತ್ತೀಚೆಗೆ ಅನೇಕರು ಈ ನಾಯಿಗಳನ್ನು ತೋರಿಸಲೆಂದೇ ತಮ್ಮ ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಅವುಗಳ ಜೊತೆ ಕೆಲ ಕಾಲ ಕಳೆದು ಆನಂದ ಪಡುತ್ತಿರುವುದು ಆಸಕ್ತಿದಾಯಕ ವಿಷಯವಾಗಿದೆ.

ಇನ್ನು ಕಬ್ಬನ್ ಪಾರ್ಕ್ ಹತ್ತಿರದಲ್ಲೇ ಇರುವ ಶಿವಾಜಿನಗರದ ಮುಸಲ್ಮಾನರು ತಮ್ಮ ಈದ್-ಉಲ್-ಫಿತರ್, ರಂಜಾನ್, ಬಕ್ರೀದ್ ಮೊಹರಂ ಮುಂತಾದ ಹಬ್ಬಗಳಲ್ಲಿ ಮಾಡಿದಂತಹ ಬಗೆ ಬಗೆಯ ಭಕ್ಷ ಭೋಜನಗಳನ್ನು ಹಬ್ಬದ ಮಾರನೆಯ ದಿನ, ಕುಟುಂಬದ ಸಮೇತ ಕಬ್ಬನ್ ಪಾರ್ಕಿಗೆ ಬಂದು ಅಲ್ಲಿ ಎಲ್ಲರೊಡನೆ ಕುಳಿತು ಸಂತೋಷದಿಂದ ಸವಿಯುವುದು ಮತ್ತೊಂದು ಕುತೂಹಲ ಕಾರಿಯಾದ ಆಂಶವಾಗಿದೆ.

biryaniಸ್ವಂತ ವಾಹನವಲ್ಲದೇ, ನಗರದ ಬಹುತೇಕ ಕಡೆಯಿಂದ ಶಿವಾಜಿ ನಗರಕ್ಕೆ ಬರುವ ಬಸ್ ಮುಖಾಂತರ ಕಬ್ಬನ್ ಪಾರ್ಕಿಗ ಸುಲಭವಾಗಿ ತಲುಪಬಹುದಾಗಿದ್ದು, ಇತ್ತೀಚೆಗೆ ಬೆಂಗಳೂರು ನಮ್ಮ ಮೆಟ್ರೋ ಮೂಲಕವೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿಯೇ ಇಳಿದು ಇಡೀ ದಿನವನ್ನು ಕಬ್ಬನ್ ಪಾರ್ಕಿನಲ್ಲಿ ಆನಂದದಾಯಕವಾಗಿ ಕುಟುಂಬದೊಂದಿಗೆ ಕಳೆಯಬಹುದಾಗಿದೆ. ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕಬ್ಬನ್ ಪಾರ್ಕಿಗೆ ಕುಟುಂಬದೊಡನೆ ಹೋಗಿ ಅದರ ಅನುಭವವನ್ನು ನಮ್ಮೊಂದಿಗೆ ಹಂಚ್ಕೋತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಕಬ್ಬನ್ ಪಾರ್ಕ್

  1. ವಿಶ್ವೇಶ್ವರಯ್ಯ ತಾಂತ್ರಿಕ ಮ್ಯೂಸಿಯಂ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿ ನಡುವೆ ಇರುವ ಇತಿಹಾಸದ ಮ್ಯೂಸಿಯಂ ಮರೆತಿರಲ್ಲಾ ಜೀ. ಇಲ್ಲಿ ಕನ್ನಡದ ಹೆಮ್ಮೆಯ ಹಲ್ಮಿಡಿ ಶಾಸನ ಮತ್ತು ಹಲವಾರು ಪ್ರಸಿದ್ಧಶಾಸನಗಳು, ಪ್ರಮುಖ ಶಿಲ್ಪಗಳು , ತಾಮ್ರಪಟಗಳು ಇತ್ಯಾದಿ ಇತ್ಯಾದಿಗಳ ಪ್ರದರ್ಶನವನ್ನು ಕಾಣಬಹುದಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s