ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಆಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ, ಎಂದು ಗೊಣಗುತ್ತಾ ಅಗ್ಗಾಗ್ಗೆ ಸ್ನೇಹಿತರ ಜೊತೆಯಲ್ಲಿ ಜಂಕ್ ಫುಡ್ ತಿನ್ನತ್ತಾರೆ. ಎರಡು ವಾರಗಳ ಹಿಂದೆ ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ವಾರಗಳ ಕಾಲ ಉತ್ತರ ಭಾರತದ ಕೆಲವು ಪ್ರದೇಶಗಳಿಗೆ ಹೋಗುವಾಗ ಅಬ್ಬಾ! ಎರಡು ವಾರಗಳ ಕಾಲ ರುಚಿರುಚಿಯಾಗಿ ಉತ್ತರ ಭಾರತೀಯ ತಿನುಸುಗಳನ್ನು ತಿನ್ನಬಹುದು ಎಂದು ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತಿದ್ದ ನಮ್ಮ ಮಗಳು ಅಲ್ಲಿಗೆ ಹೋದ ಎರಡೇ ದಿನಗಳಲ್ಲಿ, ಅಮ್ಮಾ ಇಲ್ಲಿಯ ಉಟವೇ ಸರಿ ಇಲ್ಲಾ. ಬೆಳಿಗೆ ತಿಂಡಿ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೂ ಚಪಾತಿ/ರೋಟಿ ತಿಂದು ತಿಂದು ಸಾಕಾಗಿದೆ ಎಂದು ಗೋಳಾಡ ತೊಡಗಿದಳು. ಪ್ರವಾಸವೆಲ್ಲವೂ ಮುಗಿದು ದೆಹಲಿಯಿಂದ ಬೆಂಗಳೂರಿನ ರೈಲು ಹತ್ತಿದ ಕೂಡಲೇ ಅಮ್ಮಾ ನಾನು ಬಂದ ಕೂಡಲೇ ಅನ್ನಾ, ತಿಳಿ ಸಾರು ಮತ್ತು ಪಲ್ಯ ಮಾಡಿಡಿ. ನಾಲಿಗೆ ಎಲ್ಲಾ ಕೆಟ್ಟು ಹೋಗಿದೆ ಎಂದು ಹೇಳಿದ್ದಲ್ಲದೇ, ಮನೆಗೆ ಬಂದ ನಂತರ ಸ್ನಾನ ಮತ್ತು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಪಟ್ಟಾಗಿ ಒಂದು ಚೂರು ಚಕಾರ ಎತ್ತದೇ, ಅಮ್ಮಾ ಮಾಡಿದ್ದ ಅಡುಗೆಯನ್ಣೇ ಆಹಾ.. ಓಹೋ.. ಎಂದು ಸವಿಯುತ್ತಾ. ಹೊಟ್ಟೇ ಭರ್ತಿ ಗಡದ್ದಾಗಿ ತಿಂದು ಡರ್ ಎಂದು ತೇಗಿ ಗೊರ್ ಎಂದು ನಿದ್ದೆ ಮಾಡಿ ಎದ್ದಾಗಲೇ ನಮ್ಮ ಮಗಳಿಗೆ ಮನೆಯ ಊಟದ ರುಚಿ ಮತ್ತು ಮೌಲ್ಯ ಗೊತ್ತಾಗಿದ್ದು
ಇತ್ತೀಚೆಗೆ ವಾಟ್ಸಾಪ್ ನಲ್ಲಿ ಓದಿದ ಇದೇ ರೀತಿಯ ಮತ್ತೊಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು
ತಮ್ಮ ಪೂರ್ವಜರಿಂದ ಕೊಡುಗೆಯಾಗಿ ಬಂದಿದ್ದ 10-12 ದೊಡ್ಡ ಕೋಣೆಗಳಿರುವ ಮನೆಯನ್ನು ಸುಮ್ಮನೇ ಇಟ್ಟುಕೊಳ್ಳಲು ಬಯಸದ ಮಹಿಳೆಯೊಬ್ಬಳು ಪ್ರತೀ ಕೊಠಡಿಯಲ್ಲೂ 3 ಹಾಸಿಗೆಗಳಿರುವಂತಹ ಪೇಯಿಂಗ್ ಗೆಸ್ಟ್ ಆಗಿ ಪರಿವರ್ತಿಸಿ ಅವುಗಳನ್ನು ಬಾಡಿಗೆ ಕೊಟ್ಟಿದ್ದಲ್ಲದೇ ಅದರ ಜೊತೆ ಅವಲ್ಲರಿಗೂ ರುಚಿಕರವಾದ ಆಹಾರವನ್ನೂ ಉಣ ಬಡಿಸುವ ವ್ಯವಸ್ಥೆ ಅಲ್ಲಿರುತ್ತದೆ ಪಾರಂಪರಿಕವಾದಂತಹ ಮನೆಯಲ್ಲಿ, ರುಚಿಕರವಾದ ಆಹಾರದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಉಳಿದುಕೊಳ್ಳುವ ಸೌಲಭ್ಯವಿರುವ ಕಾರಣ ದೂರದ ಊರಿನಿಂದ ಪಟ್ಟಣಕ್ಕೆ ಬಂದಿರುವ ಅನೇಕ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಆ ಪಿಜಿಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟವನ್ನು ಮಾಡುವುದಕ್ಕೆ ಅವಕಾಶ ಇರುವುದಲ್ಲದೇ, ಅಗತ್ಯವಿರುವವರಿಗೆ ಮಧ್ಯಾಹ್ನದ ಊಟವನ್ನೂ ಪ್ಯಾಕ್ ಮಾಡಿ ಕೊಡುವ ಸೌಲಭ್ಯವಿರುತ್ತದೆ
ಆದರೆ ಈ ಎಲ್ಲಾ ಸೇವೆಗಳು ತಿಂಗಳಿನಲ್ಲಿ ಕೇವಲ 28 ದಿನಗಳು ಮಾತ್ರಾ ಇದ್ದು ಉಳಿದ ಎರಡು ಮೂರು ದಿನಗಳ ಕಾಲ ಆ ಪಿಜಿಯ ಅಡುಗೆ ಮನೆ ಸಂಪೂರ್ಣವಾಗಿ ಮುಚ್ಚುವ ಕಾರಣ, ಅಲ್ಲಿರುವವರೆಲ್ಲರೂ ಖಡ್ಡಾಯವಾಗಿ ಹೊರಗಿನ ಆಹಾರವನ್ಣೇ ಸೇವಿಸುವಂತಹ ಕಠಿಣವಾದ ನಿಯವವು ಆ ಪಿಜೆಯಲ್ಲಿ ಇರುತ್ತದೆ. ಅರೇ ಇದೆಂತಹ ವಿಚಿತ್ರ ನಿಯಮ? ತಿಂಗಳ 28 ದಿನಗಳ ಕಾಲ ಆಡುಗೆ ಮಾಡುವವರಿಗೆ ಉಳಿದ 2-3 ದಿನಗಳ ಕಾಲ ಅಡುಗೆ ಮಾಡಲು ಏಕೆ ಸಾಧ್ಯವಿಲ್ಲಾ? ಎಂದು ಆ ಮಹಿಳೆಯನ್ನು ವಿಚಾರಿಸಿದಾಗ, ಹೌದು ನಾವು ಕೇವಲ 28 ಕಾಲ ಮಾತ್ರವೇ ಆಹಾರವನ್ನು ಬಡಿಸುತ್ತೇವೆ ಮತ್ತು ಅಷ್ಟೇ ದಿನಗಳಿಗೆ ಮಾತ್ರವೇ ಆಹಾರಕ್ಕಾಗಿ ಶುಲ್ಕ ವಿಧಿಸುತ್ತೇವೆ ಎಂದು ಹೇಳಿದಾಗ, ಈ ವಿಚಿತ್ರ ನಿಯಮವನ್ನು ಏಕೆ ಬದಲಾಯಿಸಬಾರದು? ಎಂದು ಕೇಳಿದಾಗ, ಆಕೆ ಕೊಟ್ಟ ಉತ್ತರ ನಿಜಕ್ಕೂ ಗಾಭರಿ/ ಮೆಚ್ಚುಗೆಯನ್ನು ಸೂಚಿಸುವಂತಿದ್ದವು.
ನಿಜ ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಆರಂಭದಲ್ಲಿ ಈ ರೀತಿಯ ಯಾವದೇ ನಿಯಮಗಳೂ ಇಲ್ಲದೇ, ಬಹಳ ಪ್ರೀತಿಯಿಂದ ತಿಂಗಳ ಪೂರ್ತಿ ನಾನೇ ಖುದ್ದಾಗಿ ಅಡುಗೆ ಮಾಡಿ ಬಡಿಸುತ್ತಿದೆ. ಆಗ ಅದು ಸರಿ ಇಲ್ಲಾ ಇದು ಸರಿ ಇಲ್ಲಾ ಎಂಬ ದೂರುಗಳು ಬರ ತೊಡಗಿದವು. ಆರಂಭದಲ್ಲಿ ನನ್ನದೇ ಸಮಸ್ಯೆ ಇರಬಹುದು ಎಂದು ಒಳ್ಳೊಳ್ಳೆಯ ಅಡುಗೆಯನ್ನು ಮಾಡಿ ಬಡಿಸಿದರೂ, ಆ ಕೊರತೆ ಈ ಕೊರತೆ ಎಂದು ಸದಾಕಾಲವೂ ಅತೃಪ್ತಿಯ ಕೊಂಕು ತೆಗೆಯುತ್ತಿದ್ದದ್ದನ್ನು ಗಮನಿಸಿದಾಗ, ಇವರಿಗೆ ನನ್ನ ಪರಿಶ್ರಮದ ಬೆಲೆ ತಿಳಿದಿಲ್ಲದ ಕಾರಣ ಹೀಗೆ ಮಾತನಾಡುತ್ತಿದ್ದಾರೆ ಎಂಬುದರ ಅರಿವಾಗಿ ಈ ರೀತಿಯ 28 ದಿನಗಳ ಈ ನಿಯಮವನ್ನು ಜಾರಿಗೆ ತಂದಿದ್ದೇನೆ, ಈಗ ತಿಂಗಳ 28 ದಿನ ಇಲ್ಲಿನ ಊಟ ತಿಂಡಿ ಮಾಡಿ, ಉಳಿದ 2-3 ದಿನಗಳ ಹೊರಗೆ ತಿಂದಾಗಲೇ ಅವರಿಗೆ ನನ್ನ ಊಟದ ಕೈ ರುಚಿ ಮತ್ತು ಬೆಲೆಯು ಗೊತ್ತಾಗುತ್ತದೆ. ಸೋಡಾ ಬೆರೆಸಿದ ಆ ಮೂರು ದಿನದ ಊಟ ತಿಂಡಿಗೆಂದೇ ಅವರು ಸಾವಿರಾರು ರೂಪಾಯಿಗಳನ್ನು ಕರ್ಚು ಮಾಡಿದಾಗ, ಅರೇ! ನಮ್ಮ ಪಿಜಿಯಲ್ಲಿ ಇದಕ್ಕಿಂದಲೂ ಕಡೆಮೆ ಬೆಲೆಯಲ್ಲಿ ಉತ್ತಮ ರುಚಿಯಾದ ಆಹಾರ ದೊರೆಯುತ್ತದೆ ಎಂಬ ಭಾವನೆ ಮೂಡುವ ಕಾರಣ, ಉಳಿದ 28 ದಿನಗಳು ಯಾವುದೇ ಸಮಸ್ಯೆಗಳಾಗಲೀ ಅತೃಪ್ತಿಯನ್ನಾಗಲೀ ಹೊರಹಾಕುವುದಿಲ್ಲ. ಅತಿಯಾದ ಸೌಕರ್ಯವನ್ನು ಕೊಟ್ಟಾಗಲೇ ವ್ಯಕ್ತಿಯಲ್ಲಿ ದುರಾಭ್ಯಾಸವು ಅಡಕವಾಗಿ ಸೋಮಾರಿಯನ್ನಾಗಿ ಮಾಡುವುದಲ್ಲದೇ, ಈ ರೀತಿಯ ಅತೃಪ್ತಿಗೆ ಕಾರಣವಾಗುತ್ತದೆ ಎಂದು ಹೇಳಿದಾಗ ಆಕೆಯ ಮಾತುಗಳಲ್ಲಿಯೂ ಸತ್ಯ ಇದೆ ಎನಿಸಿದ್ದಂತೂ ಸುಳ್ಳಲ್ಲ.
ಪ್ರಸ್ತುತವಾಗಿ ನಮ್ಮ ದೇಶದಲ್ಲಿರುವ ಕೆಲವು ಎಡಬಿಡಂಗಿಗಳ ಪರಿಸ್ಥಿತಿಯೂ ಇದೇ ರೀತಿಯಾಗಿದೆ ಎಂದರೂ ತಪ್ಪಾಗದು. ಅದರಲ್ಲೂ ಸ್ವಘೋಷಿತ ಬುದ್ದಿ ಜೀವಿಗಳು ಎಂದೆನಿಸಿಕೊಂಡಿರುವವರಿಗೆ ಈ ದೇಶದಲ್ಲಿ ಯಾವಾಗಲೂ ಒಂದಲ್ಲಾ ಒಂದು ನ್ಯೂನತೆಗಳು ಕಾಣಿಸುತ್ತಲೇ ಇರುತ್ತದೆ. ಅದನ್ನು ಬಗೆ ಹರಿಸಲು ಕೈ ಜೋಡಿಸುವ ಬದಲು ವಿದೇಶಗಳಿಗೆ ಹೋಗಿ ನಮ್ಮ ದೇಶವ ವಿರುದ್ಧವೇ ಮಾತನಾಡಿ ತಮ್ಮ ಬಾಯಿ ಚಪಲವನ್ನು ತೀರಿಸಿಕೊಳ್ಳುವುದು ನಿಜಕ್ಕೂ ಖಂಡನೀಯವಾಗಿದೆ.
ಅದೇ ರೀತಿ ಇತ್ತೀಚಿನ ಬೆಂಗಳೂರು ಮತ್ತು ಮೈಸೂರಿನ ಎಕ್ಸ್ ಪ್ರೆಸ್ ವೇ ಕೂಡಾ ಇದೇ ರೀತಿಯದ್ದಾಗಿದೆ. ಇಷ್ಟು ವರ್ಷಗಳ ಕಾಲ ಯಾವುದೇ ರೀತಿಯ ಅಭಿವೃದ್ಧಿಯನ್ನು ಮಾಡದೇ ಹೋದವರು ಈಗ ಅಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿ ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯ ಸುಮಾರು ಅರ್ಧದಷ್ಟಾದದ್ದನ್ನು ಕಂಡ ಕೂಡಲೇ, ಇದು ನಮ್ಮ ಕಾಲದಲ್ಲಿ ಅದದ್ದು, ಇದು ನಮ್ಮ ಹೋರಾಟದ ಫಲ, ಇದು ನಮ್ಮ ಕನಸಿನ ಫಲ ಎಂದು ಹೋದ ಬಂದ ಕಡೆಯಲ್ಲೆಲ್ಲಾ ಹೇಳಿದರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದಿನಪತ್ರಿಕೆಗಳಲ್ಲಿ ನಾಚಿಕೆ ಇಲ್ಲದೇ ಪುಟಗಟ್ಟಲೇ ಜಾಹೀರಾತು ನೀಡುತ್ತಿರುವುದು ಹಾಸ್ಯಾಸ್ಪದ ಎನಿಸುತ್ತದೆ.
ಇಂತಹಹವರ ಸೋಗಲಾಡಿತನ ಹೇಗಿದೆ ಎಂದರೆ, ಒಂದು ಕಡೆ ಈ ರಸ್ತೆಯ ಸಂಪೂರ್ಣ ಶ್ರೇಯ ನಮಗೇ ಸಲ್ಲಬೇಕು ಎಂದು ಹೇಳಿದರೆ ಮತ್ತೊಂದೆಡೆ ಅದೇ ರಸ್ತೆ ಮತ್ತು ರಸ್ತೆಯ ಗುಣಮಟ್ಟದ ಕುರಿತಾಗಿ ಕೊಂಕು ತೆಗೆಯುತ್ತಾರೆ. ಇಂತಹ ರಸ್ತೆಯಲ್ಲಿ ಅಜಾಗರೂಕತೆಯಿಂದ ವೇಗವಾಗಿ ವಾಹನಗಳನ್ನು ಚಲಾಯಿಸಿ ರಸ್ತೆಯ ವಿಭಜಕಗಳಿಗೆ ಗುದ್ದಿಕೊಂಡು ಅಪಘಾತಗಳಾಗಿ ಮೃತಪಟ್ಟಾಗ ಅದರ ಶ್ರೇಯವನ್ನು ಇವರು ಹೊರಲು ಸಿದ್ದರಿರದೇ ಇರುವುದು ಒಂದು ರೀತಿಯಲ್ಲಿ ಕೆಲಸಕ್ಕೆ ಕರೀ ಬೇಡೀ ಊಟಕ್ಕೆ ಮರೀ ಬೇಡಿ ಎನ್ನುವಂತಿದೆ.
ಈ ದೇಶ ಸರಿ ಇಲ್ಲಾ. ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಇಲ್ಲಿ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಬೆಲೆ ಇಲ್ಲಾ ಎನ್ನುವವರನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ಅಥವಾ ಶ್ರೀಲಂಕಾದಲ್ಲಿ ಕೆಲವು ದಿನಗಳ ಕಾಲ ಕಳುಹಿಸಿಕೊಟ್ಟಲ್ಲಿ ಅವರಿಗೆ ನಮ್ಮ ದೇಶದ ಬಗ್ಗೆ ಗೌರವ ಮೂಡುವುದಲ್ಲದೇ, ಈ ದೇಶದ ಮಹತ್ವ ತಿಳಿಯುವಂತಾಗುತ್ತದೆ. ಯದ್ಭಾವಂ ತದ್ಭವತಿ ಎಂದು ಆದಿ ಗುರು ಶ್ರೀ ಶಂಕರಾಚಾರ್ಯರು ಹೇಳಿರುವಂತೆ ನಾವು ಯಾವ ರೀತಿಯಲ್ಲಿ ಯೋಚಿಸುತ್ತೇವೆಯೋ ನಮ್ಮ ಕಾರ್ಯ ಅದೇ ರೀತಿಯಲ್ಲಿ ಆಗುತ್ತದೆ. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ ಎನ್ನುವಂತೆ ಋಣಾತ್ಮಕವಾಗಿ ಯೋಚಿಸುವವರಿಗೆ ಎಲ್ಲಾ ಕಡೆಯಲ್ಲೂ ತಪ್ಪಾಗಿಯೇ ಕಟ್ಟದಾಗಿ ಕಂಡರೇ ಅದೇ ಧನಾತ್ಮಕವಾದ ಮನಸ್ಥಿತಿಯನ್ನು ಹೊಂದಿರುವವರಿಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ,
ಅಮೇರಿಕಾದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು, ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದೆಂದು ಕೇಳಬೇಡಿ, ಬದಲಾಗಿ ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದೆಂದು ಕೇಳಿ, ಎಂದು ತಮ್ಮ ದೇಶದ ಜನರಿಗೆ ಕೇಳಿದ್ದದ್ದು ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ