ಜನರು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವಾಗ ಮೊದಲು ಕೇಳುವುದೇ ಹೆಸರು, ಊರು ಮತ್ತು ಅವರ ಉದ್ಯೋಗ. ಈ ಮೂರು ವಿಷಯಗಳಿಂದ ಬಹಳ ಸುಲಭವಾಗಿ ಆ ಅಪರಿಚಿತ ವ್ಯಕ್ತಿಯ ಪರಿಚಯವವಾಗಿ ಬಿಡುತ್ತದೆ. ಇದೇ ಕಾರಣದಿಂದಲೇ ಕುಲ ನೋಡಿ ಹೆಣ್ಣು ಕೊಡು ಎನ್ನುತ್ತಿದ್ದರು. ಆತ ಉತ್ತಮ ಕುಲೀನನಾಗಿದ್ದಲ್ಲಿ, ಖಂಡಿತವಾಗಿಯೂ ಆತನಿಗೆ ಸಹಜವಾಗಿ ಉತ್ತಮ ಸಂಸ್ಕಾರವನ್ನು ಹೊಂದಿರುತ್ತಾನೆ ಎನ್ನುವುದೇ ಎಲ್ಲರ ಭಾವನೆ ಆಗಿರುತ್ತಿತ್ತು. ಇಡೀ ವಿಶ್ವವೇ ಜಾಗತಿಕವಾಗಿ ಬೆಳೆದು ವಸುದೈವ ಕುಟುಂಬಕಂ ಎನ್ನುವುದು ಅಕ್ಷರಶಃ ನಿಜವಾಗುತ್ತಿರುವ ಇಂದಿನ ಕಾಲದಲ್ಲಿ ಇಡೀ ವಿಶ್ವಕ್ಕೆಲ್ಲಾ ಭಾರತ, ಕರ್ನಾಟಕ, ಬೆಂಗಳೂರು, ಕನ್ನಡ ಮತ್ತು ಕನ್ನಡಿಗರು ಈಗ ಪರಿಚಿತವಾಗಿದ್ದಾರೆ. ಇಡೀ ವಿಶ್ವದಲ್ಲೆಲ್ಲಾ ನಾವು ಕನ್ನಡಿಗರು ಎಂದು ತಿಳಿದ ಕೂಡಲೇ ನಮ್ಮನ್ನು ನೋಡುವ ಭಾವನೆ ಮತ್ತು ಕೊಡುವ ಗೌರವ ನಿಜಕ್ಕೂ ಅಪಾರ. ಇದನ್ನು ಓದಿ/ಕೇಳಿ ತಿಳಿಯುವುದಕ್ಕಿಂತಲೂ ಅನುಭವಿಸುವ ಮಜವೇ ಬೇರೆ. (ವಯಕ್ತಿಕವಾಗಿ ಹತ್ತಾರು ರಾಜ್ಯ/ ದೇಶ, ವಿದೇಶಗಳನ್ನು ಸುತ್ತಿರುವಾಗ ಇದರ ಸುಂದರ ಅನುಭವವಾಗಿದೆ) ಹಾಗಾಗಿಯೇ ನಾನು ಹೆಮ್ಮೆಯ ಭಾರತೀಯ/ ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವಂತಹ ಸಮಯ ಆಗಿರುವಾಗ, ಬೆಂಗಳೂರು ಮೂಲದ ಮಹಾಶಯರೊಬ್ಬರು, ಹೊರ ದೇಶ ಬಿಡಿ, ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ತನಗೆ ಕನ್ನಡದಲ್ಲೇ ಮಾತಾಡುವಂತೆ ಕಿರುಕುಳ ನೀಡಿದರು ಎಂಬ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕರ್ನಾಟಕ ಮತ್ತು ಕನ್ನಡಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನ ತರಲು ಮುಂದಾಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಸಲ್ಮಾನ್ ಯುಸೂಫ್ ಖಾನ್ ಎಂಬ ಬೆಂಗಳೂರು ಮೂಲಕದ ನೃತ್ಯಗಾರ ರಾಷ್ಟ್ರೀಯ ಮಟ್ಟದ ಖಾಸಗೀ ಛಾನೆಲ್ ನಡೆಸುವ ‘Dance India Dance’ ಎನ್ನುವ ಪ್ರತಿಷ್ಠಿತ ಶೋನ ಮೊದಲ ಸೀಸನ್‌ನಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದದಾಗ ಅರೇ, ಏ ಕೈನ್ ಹೇ ರೇ? ಏ ಕನ್ನಡ್ ವಾಲೇ ಮದ್ರಾಸೀ ( ಇಂದಿಗೂ ದಕ್ಷಿಣ ಭಾರತೀಯರನ್ನು ಉತ್ತರ ಭಾರದವರು ಮದ್ರಾಸೀ ಎಂದು ಗುರುತಿಸುವುದು ವಿಪರ್ಯಾಸ) ಎಂದೇ ಏಕಾ ಏಕಿ ಕನ್ನಡಿಗ ಎಂದೇ ದೇಶಾದ್ಯಂತ ಹೆಸರು ಗಳಿಸಿದರು. ಆದ ನಂತರ ಅದಾದ ನಂತರ ಆತ ಶ್ರದ್ಧಾ ಕಪೂರ್, ವರುಣ್ ಧವನ್ ನಟನೆಯ ‘Street Dancer 3D’ ಸಿನಿಮಾ ಅಲ್ಲದೇ ಕೆಲವು ಸಿನಿಮಾಗಳಲ್ಲಿ ನಟನಾಗಿ ಆಭಿನಯಿಸಿದ್ದಲ್ಲದೇ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲೂ ಸಹಾ ಜಯಗಳಿಸಿದ್ದಾರೆ. ಹೆಣ್ಣು ಮಕ್ಕಳ ರೀತಿಯಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಸಲ್ಮಾನ್ ಮುಂದೆ ದೇಶಾದ್ಯಂತ ಹಲವಾರು ಛಾನೆಲ್ಲುಗಳ ನೃತ್ಯ ಕಾರ್ಯಕ್ರಮದಲ್ಲಿ ಜಡ್ಜ್ ಸ್ಥಾನ ಪಡೆಯುವಷ್ಟ್ರ ಮಟ್ಟಿಗೆ ಬೆಳೆದಿರುವ ಆತನ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ.
ಹೀಗೆ ತಮ್ಮ ಕೂಲ್ ಡ್ಯಾನ್ಸ್ ಸ್ಟೈಲ್ ನಿಂದಾಗಿ ಎಲ್ಲರ ಮನಗೆದ್ದಿರುವ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಸಲ್ಮಾನ್ ಯೂಸುಫ್ ಖಾನ್ 15,03.2023, ಬುಧವಾರ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಡಾಣದಿಂದ ದುಬೈಗೆ ಪ್ರಯಾಣಿಸುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಯೊಬ್ಬರು ಕನ್ನಡ ಮಾತನಾಡುವಂತೆ ಒತ್ತಾಯಿಸಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಇದ್ದಕ್ಕಿದ್ದಂತೆಯೇ ಬೆಳ್ಳಂಬೆಳಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬಹಿರಂಗ ಪಡಿಸಿರುವುದಲ್ಲದೇ, ಈ ಘಟನೆಯ ಕುರಿತಾಗಿ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತಿಳಿಸುವುದಕ್ಕಾಗಿಯೇ ವಿಡಿಯೋ ಒಂದನ್ನು ಮಾಡಿ ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿರುವುದಲ್ಲದೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಸಹಾ ಟ್ಯಾಗ್ ಮಾಡಿದ್ದಾರೆ.
ಆ ವೀಡೀಯೋದಲ್ಲಿ ಅವರು ಹೇಳಿರುವ ಪ್ರಕಾರ, ‘ನಾನು ದುಬೈಗೆ ಹೋಗುತ್ತಿರುವಾಗ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಡಾಣದಲ್ಲಿ ಭೇಟಿಯಾದ ಅಧಿಕಾರಿಯೊಬ್ಬರೊಂದಿಗೆ ತನ್ನ ಅರೆಬರೆ ಕನ್ನಡದಲ್ಲಿ ವ್ಯವಹರಿಸಿದೆ. ಆಗ ಅವರು ನನ್ನ ಪಾಸ್‌ಪೋರ್ಟ್ ನೋಡಿ ಅದರಲ್ಲಿ ನನ್ನ ಹೆಸರು, ಜನ್ಮಸ್ಥಳ ಹಾಗೂ ನನ್ನ ತಂದೆ ಹೆಸರು ನೋಡಿ, ನೀವು ನಿಮ್ಮ ತಂದೆ ಬೆಂಗಳೂರಿನಲ್ಲೇ ಹುಟ್ಟಿದ್ದೀರಿ ಆದರೆ ನಿಮಗೆ ಕನ್ನಡ ಮಾತನಾಡಲು ಬರುವುದಿಲ್ಲವೇ? ಎಂದು ಕೇಳಿದರು. ಆಗ ನಾನು ಬೆಂಗಳೂರಿನಲ್ಲಿ ಹುಟ್ಟಿದೆ ಎಂದ ಮಾತ್ರಕ್ಕೆ ನಾನು ಕನ್ನಡ ಭಾಷೆಯೊಂದಿಗೆ ಹುಟ್ಟಿದ್ದೇನೆ ಎಂದರ್ಥವಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿರಬಹುದು ಆದರೆ ನಾನು ಯಾವಾಗಲೂ ಸೌದಿ ಹುಡುಗ. ನಾನು ಓದಿ ಬೆಳೆದದ್ದು ಎಲ್ಲವೂ ಸೌದಿಯಲ್ಲೇ ಹಾಗಾಗಿ ನನಗೆ ಕನ್ನಡ ಎಂದಿಗೂ ನನ್ನ ಭಾಷೆಯಾಗಿಲ್ಲ. ನನ್ನ ಸ್ನೇಹಿತರಿಂದಾಗಿ ಅಲ್ಪಸ್ವಲ್ಪ ಕನ್ನಡ ಅರ್ಥವಾಗುತ್ತದೆ ಎಂದು ಹೇಳಿದಾಗ ಅವರು ಬೆಂಗಳೂರಿಗರಾಗಿ ನಿಮಗೆ ಕನ್ನಡ ಬರೋದಿಲ್ವಾ? ಎಂದಾಗ ನಿಮ್ಮ ಬಗ್ಗೆ ಅನುಮಾನ ಬರುತ್ತದೆ ಎಂದು ಹೇಳುವ ಮೂಲಕ ನನಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ. ಈ ಘಟನೆಯ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ವರದಿ ಮಾಡಲು ಬಯಸಿದಾಗ ಅಲ್ಲಿ ನನಗೆ ಯಾರಿಂದಲೂ ಯಾವುದೇ ರೀತಿಯ ಸಹಾಯ ಸಿಗಲಿಲ್ಲ ‘ಬೆಂಗಳೂರಿಗರು ಎಂದು ಹೆಮ್ಮೆ ಪಡುತ್ತಿರುವಾಗ, ಸ್ಥಳೀಯ ಭಾಷೆ ಸರಿಯಾಗಿ ತಿಳಿದಿಲ್ಲದ ಕಾರಣದಿಂದ ಅವಮಾನಿಸುವುದು ಸರಿಯಲ್ಲ’ ಎಂಬ ವಾದವನ್ನು ಮಂಡಿಸಿದ್ದಾರೆ.
ಇದಷ್ಟೇ ಅಲ್ಲದೇ ಸಲ್ಮಾನ್ ಯೂಸುಫ್ ಖಾನ್ ತಮ್ಮ ಮಾತನ್ನು ಮುಂದುವರೆಸುತ್ತಾ, ನನಗೆ ನನ್ನ ರಾಷ್ಟ್ರದ ಅಧಿಕೃತ ಭಾಷೆ ಹಿಂದಿ ಮತ್ತು ನನ್ನ ಮಾತೃಭಾಷೆ ಹಿಂದಿ (ಉರ್ದು ಎಂದಿರಬೇಕಿತ್ತಲ್ಲವೇ?) ನನಗೆ ತಿಳಿದಿರುವಾಗ, ನಾನು ಕನ್ನಡವನ್ನೇಕೆ ತಿಳಿದಿರಬೇಕು? ಎಂದು ಆಧಿಕಾರಿಯನ್ನು ಕೇಳಿದ್ದಲ್ಲದೇ ನನಗೆ ಕನ್ನಡ ಗೊತ್ತಿಲ್ಲಾ ಎಂದ ಮಾತ್ರಕ್ಕೇ ನನ್ನನ್ನು ಏಕೆ ಅನುಮಾನಿಸುತ್ತೀರಿ? ಎಂದು ಸ್ವಲ್ಪ ಗಟ್ಟಿಯಾಗಿ ಕೇಳಿದ್ದಲ್ಲದೇ ಅದನ್ನೇ ಮೂರು ಬಾರಿ ಪುನರಾವರ್ತಿಸಿದಾಗ ಆಧಿಕಾರಿ ಮೌನವಾಗಿದ್ದರು. ನಿಮ್ಮಂತಹ ಅವಿದ್ಯಾವಂತರು ಈ ದೇಶದಲ್ಲಿ ವಾಸಿಸುತ್ತಿದ್ದರೆ ಈ ದೇಶ ಎಂದಿಗೂ ಉದ್ಧಾರ ಆಗುವುದಿಲ್ಲಾ ಎಂದು ಹೇಳಿದಾಗ ಆಧಿಕಾರಿ ಸುಮ್ಮನೆ ತಲೆ ತಗ್ಗಿಸಿ ತಮ್ಮ ಪಾಡಿಗೆ ತಾವೂ ಎನೋ ಗೊಣಗುತ್ತಿದ್ದರು. ನಾನು ಹೆಮ್ಮೆಯ ಬೆಂಗಳೂರಿಗನಾಗಿದ್ದೇನೆ ಆದರೆ ಇಂದು ನಾನು ಈ ರೀತಿ ಮುಜುಗೊರಕ್ಕೆ ಒಳಗಾಗಿದ್ದು ಸ್ವೀಕಾರಾರ್ಹವಲ್ಲ. ಎಂಬ ಆಕ್ರೋಶವನ್ನು ತಮ್ಮ ವೀಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ
ಇಲ್ಲಿ ತುಂಬಾ ಆಸಕ್ತಿಕರವಾದ ವಿಷಯ ಏನೆಂದರೆ, 2017ರಲ್ಲೇ ಶ್ವೇತಾ ಚೆಂಗಪ್ಪ ಅವರು ನಿರೂಪಣೆ ಮಾಡಿದ್ದ, ಕನ್ನಡದ ಸ್ಟಾರ್ ಸುವರ್ಣ ವಾಹಿನಿಯ ‘Dance Dance Juniors’ ರಿಯಾಲಿಟಿ ಶೋನಲ್ಲಿ ಕನ್ನಡದ ಅಸ್ಮಿತೆ, ಅಸ್ತಿತ್ವದ ಪ್ರತೀಕವಾದ ಪ್ರಾದೇಶಿಕ ಪಕ್ಷ ಎಂದು ಕರೆದುಕೊಳ್ಳುವ ಜನತಾದಳದ ಮಾಜಿ ಮುಖ್ಯಮಂತ್ರಿಯಾದ ಶ್ರೀ ಕುಮಾರಸ್ವಾಮಿಯವರ ಉಪಪತ್ನಿಯಾದ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಜಡ್ಜ್ ಆಗಿದ್ದಲ್ಲದೇ ಇಡೀ ಕಾರ್ಯಕ್ರಮದಲ್ಲಿ ಅಚ್ಚು ಕಟ್ಟಾಗಿ ಕನ್ನಡ ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ನಟ ದಿ. ಪುನೀತ್ ರಾಜ್‌ಕುಮಾರ್ ಸಹಾ ಅತಿಥಿಯಾಗಿ ಆಗಮಿಸಿದ್ದಾಗಲೂ ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಆಗ ಮಾತನಾಡಲು ಬಂದಿದ್ದಂತಹ ಕನ್ನಡ, ಈಗೇಗೆ ಮರೆತು ಹೋಯಿತು ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಲಸೆ ಅಧಿಕಾರಿಗಳು ವಿಶ್ವದಲ್ಲೇ ಅತ್ಯುತ್ತಮರಾಗಿದ್ದು ಅದರಲ್ಲೂ ಕರ್ನಾಟಕದ ಅಧಿಕಾರಿಗಳು ಮತ್ತಷ್ಟು ಒಳ್ಳೆಯವರು, ಶಾಂತಿ ಪ್ರಿಯರು ಮತ್ತು ಪ್ರಯಾಣಿಕರೊಂದಿಗೆ ಬಹಳ ತಾಳ್ಮೆಯಿಂದ ವ್ಯವಹರಿಸಿ ಅವರ ಸಂಕಷ್ಟಗಳನ್ನು ಪರಿಹರಿಸಿಕೊಡುತ್ತಾರೆ. ನಾನು ಹೆಮ್ಮೆಯ ಬೆಂಗಳೂರಿಗನಾಗಿದ್ದೇನೆ ಎಂದು ಹೇಳಿಕೊಂಡಿರುವ ನೀವು ಮತ್ತು ನಿಮ್ಮ ಕುಟುಂಬ ಅನೇಕ ತಲೆಮಾರುಗಳಿಂದ ಕರ್ನಾಟಕದಲ್ಲೇ ಇದ್ದು ನಿಮ್ಮ ಅಚಾರ, ವಿಚಾರ ಮತ್ತು ವ್ಯವಹಾರ ಕನ್ನಡಿಗರಾಗಿದ್ದೀರಿ. ಹಾಗಾಗಿ ನಿಮಗೆ ಕನ್ನಡ ಭಾಷೆ ತಿಳಿದಿರಬೇಕೆಂದು ಅಲ್ಲಿನ ಅಧಿಕಾರಿಗಳು ನಿರೀಕ್ಷಿಸಿರುವುದು ತಪ್ಪಲ್ಲ. ಭಾಷೆ ಎನ್ನುವುದು ಕೇವಲ ಸಂವಹನ ವಿಧಾನವಷ್ಟೇ ಆಲ್ಲದೇ ಅದು ನಮ್ಮ ನಿಮ್ಮೆಲ್ಲರ ಗುರುತಾಗಿದೆ. ಇಂತಹ ಸಣ್ಣ ಪುಟ್ಟ ಅಹಿತಕರ ಘಟನೆಗಳು ಆದಾಗ ಬೆರಳಲ್ಲಿ ಆಗುವುದಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವಂತೆ ಅಲ್ಲಿಯೇ ಮುಗಿಸಿಕೊಳ್ಳಬಹುದಾದಂತಹ ಪ್ರಕರಣವನ್ನು ಈ ರೀತಿ ಜಗಜ್ಜಾಹೀರಾತು ಮಾಡುವ ಮೂಲಕ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರಿಗೆ ಅವಮಾನ ಮಾದಿದ್ದೀರೀ ಎಂದು ಅನಿಸುತ್ತಿಲ್ಲವೇ? ಇಡೀ ವಿಶ್ವಾದ್ಯಂತ ಪ್ರಯಾಣಿಸುವಾಗ ನಿಮ್ಮನ್ನು ನಿಮ್ಮ ಜಾತಿ, ಧರ್ಮ ದಿಂದ ಯಾರೂ ಗುರುತಿಸುವುದಿಲ್ಲ. ನೀವು ಭಾರತೀಯ. ಬೆಂಗಳೂರಿಗೆ ಎಂದೇ ಗುರುತಿಸುತ್ತಾರೆ ಅಲ್ಲವೇ? ಹಾಗಾಗಿ ನೀವು ಕೇವಲ ಒಬ್ಬ ವ್ಯಕ್ತಿಯಾಗಿರದೇ, ನಮ್ಮ ದೇಶ, ನಮ್ಮ ಪ್ರದೇಶವನ್ನು ಪ್ರತಿನಿಧಿಸುವ ಮತ್ತು ಸಂಸ್ಕಾರವನ್ನು ಎತ್ತಿಹಿಡಿಯುವ ರಾಜಭಾರಿ ಆಗಿರುತ್ತೀರೀ ಎಂಬದು ನಿಮ್ಮ ಗಮನಕ್ಕೆ ಬಾರದೇ ಹೋಗಿರುವುದು ನಿಜಕ್ಕೂ ವಿಪರ್ಯಾಸ.
ಹೇಗೆ ಒಂದು ನಾಣ್ಯಕ್ಕೆ ಎರಡು ಮುಖಗಳು ಇರುತ್ತವೆಯೋ ಅದೇ ರೀತಿ ನಿಮ್ಮೀ ಘಟನೆಗೂ ಸಹಾ ಎರದು ವಿಭಿನ್ನವಾದ ಆಯಾಮಗಳು ಇರುತ್ತವೆ. ನ್ಯೂಟನ್ನಿನ ಮೂರನೇ ನಿಯಮದಲ್ಲಿ ಹೇಳಿರುವಂತೆ ಪ್ರಕೃತಿಯಲ್ಲಿನ ಪ್ರತಿಯೊಂದು ಕ್ರಿಯೆಗೆ (ಶಕ್ತಿ) ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎನ್ನುವಂತೆ ಈ ಘಟನೆಯ ಕುರಿತಾಗಿ ಆ ಅಧಿಕಾರಿಗಳ ಹೇಳಿಕೆಗಳೂ ಸಹಾ ಪ್ರಮುಖವಾಗುತ್ತದೆ ಅಲ್ವವೇ?
ಇನ್ನು ನಿಮ್ಮ ಹೇಳಿಕೆಯಲ್ಲಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದಿದ್ದೀರಿ. ನಿಜ ಹೇಳಬೇಕೆಂದರೆ ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿರದೇ, ಅದು ಕೇವಲ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ ಅಷ್ಟೇ. ನಿಮ್ಮ ಇಡೀ ವಿಡೀಯೋವನ್ನು ನೋಡಿದಾಗ ನನಗೆ ಅನ್ನಿಸಿದ್ದೇನೆಂದರೆ, ನಾನೊಬ್ಬ ಸೆಲೆಬ್ರಿಟಿ. ಆನೆ ನಡೆದದ್ದೇ ದಾರಿ ಎಂದು ನಾನು ಮಾಡಿದೇ ಸರಿ ಎಂಬ ಅಹಂಕಾರ ನಿಮ್ಮ ತಲೆಯಲ್ಲಿ ಹೊಕ್ಕಿದೆ ಎಂದೆನಿಸಿದ್ದು ಸುಳ್ಳಲ್ಲ. ಹಿಂದೆ ಮಲೇಷ್ಯಾ ಮತ್ತು ಅಮೇರೀಕಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ಸೊಂಟಕ್ಕೆ ಕಟ್ಟಿದ್ದ ಬೆಳ್ಳಿ ಉಡುದಾರದ ಕುರಿತಾಗಿ ಅಲ್ಲಿ ಅಧಿಕಾರಿಗಳು ನನ್ನನ್ನು ಸುದೀರ್ಘವಾದ ತಪಾಸಣೆ ಮಾಡಿದ್ದರು. ಉಡುದಾರ ಧರಿಸುವುದು ನನ್ನ ಧರ್ಮ ಅದನ್ನು ಪರೀಕ್ಷಿಸುವುದು ಅವರ ಕರ್ಮ ಅರ್ಥಾತ್ ಕರ್ತವ್ಯ ಎಂದು ತಿಳಿದು ಅವರ ಇಡೀ ತಪಾಸಣೆಗೆ ತಾಳ್ಮೆಯಿಂದ ಸಹಕರಿಸಿದ್ದೇ. ಹಿಂದೊಮ್ಮೆ ತನ್ನ ಹೆಸರು ಕಾರೂಖ್ ಖಾನ್ ಎಂಬುದಾಗಿ ಇದ್ದದ್ದಕ್ಕೆ ಅಮೇರಿಕಾದಲ್ಲಿ ತನ್ನ ಬಟ್ಟೆಯನ್ನು ಬಿಚ್ಚಿಸಿ ತನಿಖೆ ನಡೆಸಿದ್ದರು ಎಂದು ಹಿಂದೀ ಚಿತ್ರನಟ ಶಾರೂಖ್ ಸಹಾ ಅಕ್ಷೇಪ ಎತ್ತಿ ಜನರಿಂದ ಮಂಗಳಾರತಿ ಮಾಡಿಸಿಕೊಂಡಿದ್ದು ನಿಮಗೆ ನೆನಪಿರಬಹುದು ಎಂದು ಭಾವಿಸುತ್ತೇನೆ.
ಕೇವಲ ಹೆಮ್ಮೆಯ ಬೆಂಗಳೂರಿನವರು ಅಂತ ಬಾಯಿ ಮಾತಿನಲ್ಲಿ ಹೇಳಿಕೊಳ್ಳದೇ, ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ? ಎಂದು ಸುಮ್ಮನಾಗದೇ ಈ ಘಟನೆಯ ನಂತರವಾದರೂ, ಬೆಂಗಳೂರಿಗನಾಗಿ ಕನ್ನಡವನ್ನು ಸರಿಯಾಗಿ ಕಲಿತು ಮಾತನಾಡುವ ಮೂಲಕ ನೀವು ಕನ್ನಡಿಗರು ಎಂದು ಅಧಿಕೃತವಾಗಿ ಸಾಭೀತು ಮಾಡಿಕೊಳ್ಳುತ್ತೀರಿ ಎಂಬ ಆಶಾಭಾವನೆ ನಮ್ಮದು. ಇನ್ನು ತಮ್ಮಿಂದ ತಿಳಿದೋ ಇಲ್ಲವೇ ತಿಳಿಯದೇ ಆದ ತಪ್ಪಿಗೆ ಕ್ಷಮೆ ಕೇಳುವುದು ಭಾರತೀಯರ ಸಂಪ್ರದಾಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರನ್ನು ಈ ಪರಿಯಾಗಿ ಅವಮಾನ ಮಾಡಿಡಿರುವ ನೀವೂ ಸಹಾ ಸಾರ್ವಜನಿಕವಾಗಿ ಭಾರತೀಯ ಸಂಪ್ರದಾಯವನ್ನು ಪಾಲಿಸುತ್ತೀರೀ ಎಂದು ಭಾವಿಸುತ್ತೇನೆ.
ಅದೇ ರೀತಿ ಇಂದೀ ಏರಿಕೆ ಹೆಂದು ಹಬ್ಬರಿಸುವ ಉಟ್ಟು ಖನ್ನಡ ಓಲಾಟಗಾರರು ಮತ್ತು ‘ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ, ನಿಂತು ಹೋರಾಡುತ್ತೇನೆ.’- ಎಂದು ಬೊಬ್ಬಿರಿವ Just As(s)king ನಟ ಪ್ರಕಾಶ್ ರೈ (ರಾಜ್) ಆವರಿಗೆ ಬೆಂಗಳೂರಿನ ಮೂಲದವರೊಬ್ಬರು ಈ ಪರಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರನ್ನು ಅವಮಾನ ಮಾಡಿರುವಂತಹ ವಿಷಯ ಇನ್ನೂ ತಲುಪಿರದೇ ಹೋಗಿರುವುದು ನಿಜಕ್ಕೂ ದುರಾದೃಷ್ಟಕರ.
ಬೆಂಗಳೂರಿಗನಾಗಿದ್ದರೂ ಕನ್ನಡಿಗರಿಗೆ ಪರಿಚಯವೇ ಇಲ್ಲದಿದ್ದ ಇಂತಹ ಹುಂಬನೊಬ್ಬನಿಗೆ ಈ ರೀತಿ ನಾವೇ ಪ್ರಚಾರ ಕೊಡುತ್ತಿದ್ದೇವೆಯಾ? ಎಂದೆನಿಸಿದರೂ, ನಾಡು ಮತ್ತು ನುಡಿಯ ಕುರಿತಾದ ವಿಷಯದ ಕುರಿತಾಗಿ ಕನ್ನಡಿಗರಾಗಿ ಎಚ್ಚರಿಕೆ ಎನ್ನುವುದಕ್ಕಿಂತಲೂ ಕನ್ನಡಿಗರ ಸ್ವಾಭಿಮಾನ ಮತ್ತು ಸಾತ್ವಿಕ ಆಕ್ರೋಶವನ್ನು ತೋರಿಸಲೇ ಬೇಕಾದದ್ದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಹೌದು. ಇಂತಹ ಘಟನೆಗಳಿಂದಾದರೂ ಕನ್ನಡಿಗ ಜಾಗೃತನಾಗಿ ಕನಿಷ್ಟ ಪಕ್ಷ ಕರ್ನಾಟಕದಲ್ಲಾದರೂ ಕನ್ನಡಲ್ಲೇ ವ್ಯವಹಿಸುವಂತಾದಲ್ಲಿ ಮಾತ್ರವೇ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ