ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ ಸ್ನೇಹಿತರ ಜೊತೆಯಲ್ಲಿ ಜಂಕ್ ಫುಡ್ ತಿನ್ನತ್ತಾರೆ ಮಕ್ಕಳು. ಕಳೆದ ತಿಂಗಳು ಮಗಳು ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ವಾರಗಳ ಕಾಲ ಉತ್ತರ ಭಾರತದ ಕೆಲವು ಪ್ರದೇಶಗಳಿಗೆ ಹೋಗುವಾಗ, ನಿಮ್ಮ ಊಟದ ತಿಂದು ಸಾಕು ಸಾಕಾಗಿ ಹೋಗಿದೆ. ಅಬ್ಬಾ! ಎರಡು ವಾರಗಳ ಕಾಲ ರುಚಿ ರುಚಿಯಾಗಿ ಉತ್ತರ ಭಾರತೀಯ ತಿನಿಸುಗಳನ್ನು ತಿನ್ನಬಹುದು ಎಂದು ಅಮ್ಮನೊಂದಿಗೆ ಕೊಚ್ಚಿಕೊಂಡು ಹೋಗಿದ್ದ ನಮ್ಮ ಮಗಳು ಅಲ್ಲಿಗೆ ಹೋದ ಎರಡೇ ದಿನಗಳಲ್ಲಿ, ಅಮ್ಮಾ ಇಲ್ಲಿಯ ಉಟವೇ ಸರಿ ಇಲ್ಲಾ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೂ ಚಪಾತಿ/ರೋಟಿ ತಿಂದು ತಿಂದು ಸಾಕಾಗಿದೆ. ಅದೂ ಅಲ್ದೇ, ಒಂದು ತಿಂಡಿಗೆ 100-150/- ಆದ್ರೇ ಇನ್ನು ಊಟ ಮಾಡಬೇಕಾದರೆ, 250-300/- ರೂಪಾಯಿ ಖರ್ಚಾಗುತ್ತದೆ ಎಂದು ಗೋಳಾಡಿದ್ದಳು. ಪ್ರವಾಸವೆಲ್ಲವೂ ಮುಗಿದು ದೆಹಲಿಯಿಂದ ಬೆಂಗಳೂರಿನ ರೈಲು ಹತ್ತಿದ ಕೂಡಲೇ ಅಮ್ಮಾ ನಾನು ಬಂದ ಕೂಡಲೇ ಅನ್ನಾ, ತಿಳಿ ಸಾರು ಮತ್ತು ಪಲ್ಯ ಮಾಡಿಡಿ. ನಾಲಿಗೆ ಎಲ್ಲಾ ಕೆಟ್ಟು ಹೋಗಿದೆ ಎಂದು ಹೇಳಿದ್ದಲ್ಲದೇ, ಮನೆಗೆ ಬಂದ ನಂತರ ಸ್ನಾನ ಮತ್ತು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಪಟ್ಟಾಗಿ ಒಂದು ಚೂರು ಚಕಾರ ಎತ್ತದೇ, ಅಮ್ಮಾ ಮಾಡಿದ್ದ ಅಡುಗೆಯನ್ಣೇ ಆಹಾ.. ಓಹೋ.. ಎಂದು ಸವಿಯುತ್ತಾ. ಹೊಟ್ಟೇ ಭರ್ತಿ ಗಡದ್ದಾಗಿ ತಿಂದು ಡರ್ ಎಂದು ತೇಗಿ ಗೊರ್ ಎಂದು ನಿದ್ದೆ ಮಾಡಿ ಎದ್ದಾಗಲೇ ನಮ್ಮ ಮಗಳಿಗೆ ಮನೆಯ ಊಟದ ಮತ್ತು ಅಮ್ಮನ ಕೈ ರುಚಿ ಮತ್ತು ಅದರ ಮೌಲ್ಯ ಗೊತ್ತಾದದ್ದು ಎಂಬ ವಿಷಯವನ್ನು ಕೆಲ ವಾರಗಳ ಹಿಂದೆಯೂ ನಿಮಗೆ ತಿಳಿಸಿದ್ದೆ.
ಈಗ ಅಂತಹದ್ದೇ ಅನುಭವ ನನಗೂ ಸಹಾ ಅಗಿದ್ದು ಅದರ ಸುಂದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಚೇರಿಯ ಕೆಲಸ ನಿಮಿತ್ತ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಬರಬೇಕಿತ್ತು. ವಿಮಾನ ಬೆಳಿಗೆ 6:10 ಕ್ಕೆ ಇದ್ದ ಕಾರಣ, ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯೂ ಇರದೇ, ಬೆಳ್ಳಬೆಳಿಗ್ಗೆ 3:30ಕ್ಕೆಲ್ಲಾ ಎದ್ದು ಸ್ನಾನಸಂಧ್ಯಾವಂದನೆಗಳನ್ನೆಲ್ಲಾ ಮುಗಿಸಿ, ವಿಮಾನ ನಿಲ್ಡಾಣಕ್ಕೆ ಬರುವಷ್ಟರಲ್ಲಿ 4:30 ಅಗಿತ್ತು. ನಂತರ ಅರ್ಧ ಮುಕ್ಕಾಲು ಗಂಟೆಗಳಲ್ಲಿ Baggage & Check-in ಎಲ್ಲಾ ಮುಗಿಸಿ, ಇನ್ನೂ ಸಮಯ ಇದ್ದ ಕಾರಣ, ಹಾಗೇ, ಸುಮ್ನೇ ತಮಾಷೆ ಮಾಡುವ ಸಲುವಾಗಿ ಶಿವಮೊಗ್ಗ ಟಿಕೆಟ್ ಗಾಗಿ ಹೈಕಮಾಂಡ್ ನಿಂದೆ ಕರೆ ಬಂದಿರುವ ಕಾರಣ, ದೆಹಲಿಗೆ ಹೋಗುತ್ತಿದೇನೆ ಎಂದು Boarding Pass ಜೊತೆ ನನ್ನದೊಂದು ಫೋಟೋ Statusನಲ್ಲಿ ಅದರ ಅಡಿಯಲ್ಲಿ ಸುಳ್ಸುದ್ದಿ ಎಂದು ಬರೆದಿದ್ದರೂ, ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಅನೇಕ ಹಿತೈಷಿಗಳು ಮೇಲಿಂದ ಮೇಲೆ ಶುಭ ಕೋರಲು ಆರಂಭಿಸಿದರೆ, ಇನ್ನು ವಿಮಾನದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಇನ್ನೂ ಅನೇಕರು, ನನ್ನ ಕುಟುಂಬದವರಿಗೂ ಕರೆ ಮಾಡಿ ಅಭಿನಂದನೆ ತಿಳಿಸಿದಾಗ, ಅಗಷ್ಟೇ ನಿದ್ದೆಯಿಂದ ಏಳುತ್ತಿದ್ದ ನನ್ನ ಕುಟುಂಬದವರಿಗೆ ಈ ಬಗ್ಗೆ ಏನೂ ತಿಳಿಯದೇ ಕಕ್ಕಾ ಬಿಕ್ಕಿಯಾಗಿ ನಂತರ ನನ್ನ Statusಅನ್ನು ನೋಡಿದ ಮಗಳು ನನ್ನ ಕುಚೇಷ್ಟೆಯನ್ನು ತಿಳಿಸಿದಾಗಲೇ ಮನೆಯವರಿಗೆ ಒಂದು ಕಡೆ ಹುಸಿ ಕೋಪ ಮತ್ತೊಂಡೆಡೆ ನಗುವೂ ಬಂದಿತ್ತಂತೆ. ಅಯ್ಯೋ ಈ ವಯಸ್ಸಿನಲ್ಲೇ ನಿಮ್ಮಪ್ಪ ಹೀಗೆ ಆಡ್ತಾರೆ. ಇನ್ನು ವಯಸ್ಸಾದ ಮೇಲೆ ಇವರೊಂದಿಗೆ ಹೇಗಪ್ಪಾ ಏಗೋದು? ಎಂದು ತನ್ನ ಮಕ್ಕಳೊಂದಿಗೆ ಅಳಲನ್ನು ತೋಡಿಕೊಂಡಳಂತೆ ನಮ್ಮಾಕಿ.
ಇದಾವುದರ ಅರಿವಿಲ್ಲದ ನಾನು, ದೆಹಲಿ ತಲುಪಿದ್ದಕ್ಕಾಗಿ ಮನೆಗೆ ಕರೆ ಮಾಡಿದಾಗ, ಮಡದಿಯಿಂದ ಈ ಎಲ್ಲಾ ಅವಾಂತರಗಳನ್ನು ಕೇಳಿಸಿಕೊಂಡು ಅವಳಿಂದ ಫೋನಿನಲ್ಲೇ ಅಷ್ಟೋತ್ತರ ಶತನಾಮಾವಳಿಯನ್ನೂ ಮಾಡಿಸಿಕೊಂಡ ಪರಿಣಾಮ, ಬಡವಾ ನೀ ಮಡಗಿದಾಗಿ ಇರೂ ಎನ್ನುವ ಹಾಗೆ, ಹೊಟ್ಟೆ ಪಾಡಿಗೆ ಒಂದು ಕೆಲ್ಸ ಮಾಡಿಕೊಂಡು ಚಟಕ್ಕಾಗಿ ಏನೋ ಸಣ್ಣ ಪುಟ್ಟ ಲೇಖನಗಳನ್ನು ಬರೆದುಕೊಂಡು ಸಂಸಾರ ಸಾಗಿಸುತ್ತಿರುವ ನಮ್ಮಂತಹವರಿಗೆ ರಾಜಕೀಯ ಎಲ್ಲಾ ಬೇಡ. ರಾಜಕೀಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎನ್ನುತ್ತಿದ್ದರು ನಮ್ಮ ತಂದೆಯವರು. ಹಾಗಾಗಿ ನನಗೆ ಸಕ್ರೀಯ ರಾಜಕೀಯಕ್ಕೆ ಬರುವ ಯಾವುದೇ ಆಸೆ ಖಂಡಿತವಾಗಿಯೂ ಇಲ್ಲ. King maker is more powerful than a King ಎನ್ನುವಂತೆ, ನಾವೆಲ್ಲರೂ ಜನಪ್ರತಿನಿಧಿಗಳು ಆಗುವುದಕ್ಕಿಂತಲೂ, ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಮತದಾರ ಪ್ರಭು ಆಗುವುದು ಉತ್ತಮ ಅಲ್ವೇ? ಎಂಬ ಸಂದೇಶವನ್ನು ಮತ್ತೆ ಎಲ್ಲರಿಗೂ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಮಳೆ ನಿಂತರೂ ಮರದ ಅಡಿಯಲ್ಲಿ ನೀರು ತೊಟ್ಟಿಕ್ಕುವ ಹಾಗೆ ಒಂದೆರಡು ದಿನಾ ಅದೇ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಆಗುವಷ್ಟರಲ್ಲಿ ಮತ್ತೆ ಬಂದ ಹತ್ತಾರು ಕರೆಗಳನ್ನು ಸ್ವೀಕರಿಸಿ ಕಛೇರಿಯನ್ನು ತಲುವಷ್ಟರಲ್ಲಿ ಗಂಟೆ 10:40 ಆಗಿತ್ತಲ್ಲದೇ ಹೊಟ್ಟೆಯೂ ಸಹಾ ಕವ ಕವ ಗುಟ್ಟುತ್ತಿತ್ತು. ಕೂಡಲೇ ನನ್ನ ಸಹೋದ್ಯೋಗಿಯೊಂದಿಗೆ ಅಲ್ಲೇ ಹತ್ತಿರದ ರಸ್ತೆ ಬದಿಯ ಸಣ್ಣ ಅಂಗಡಿಗೆ ಹೋಗಿ ತಿಂಡಿ ಏನಿದೆ ಎಂದು ಕೇಳಿದರೆ, ಸಮೋಸ, ಕಛೋರಿ, ಬ್ರೆಡ್ ಪಕೋಡ, ಚೋಲೆ ಬಟೂರೇ ಎಂದಾಗ, ಅರೇ ನಮ್ಮ ಕಡೆ ಸಂಜೆ ಚಾಟ್ಸ್ ಎಂದು ತಿನ್ನುವುದು ಇಲ್ಲಿ ಬೆಳಿಗಿನ ತಿಂಡಿಯೇ ಎನಿಸಿದರೂ, ಚೋಲೆ ಬಟೂರೇ ತಿಂದೆವು. ಮಧ್ಯಾಹ್ನ ಊಟಕ್ಕೆ ಕಛೇರಿಯಲ್ಲಿ ತರಿಸಿದ್ದೂ ಅದೇ ರೋಟೀ ನಾನ್, ಕುಲ್ಚಾ, ಪರೋಟ, ದಾಲ್ ಮಖನೀ, ರಾಜ್ಮಾ ಛಾವೆಲ್ ಮತ್ತು ಜೀರಾ ರೈಸ್. ಹೀಗೆ ಎರಡು ದಿನ ಮೂರು ಹೊತ್ತು ಅದನ್ನೇ ತಿನ್ನುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು. ನಮ್ಮ ಅನ್ನಾ ಸಾರು ಹುಳಿ, ಪಲ್ಯ ಯಾವಾಗ ತಿನ್ನುತ್ತೇವೆಯೋ ಎನಿಸಿತ್ತು. ಇದೇ ಮಾತನ್ನು ಮಗಳಿಗೆ ಹೇಳಿದಾಗ, ಅರೇ ಅಪ್ಪಾ ನೀವೇ ನಮಗೆ ಅಂಧ್ರಭವನಕ್ಕೆ ಹೋಗಲು ಹೇಳಿದ್ರೀ. ಈಗ ನೀವೇ ಅಲ್ಲಿಗೆ ಹೋಗಬಹುದಲ್ಲಾ ಎಂದಳು.
ಹೀಗೆ ಕೆಲಸ ಮೇಲೆ ದೆಹಲಿಗೆ ಬಂದಾಗಲೆಲ್ಲಾ ನಮ್ಮ ಕಡೆಯ ಊಟ ಮಾಡಬೇಕು ಎನಿಸಿದಾಗಗೆಲ್ಲಾ ನನಗೆ ನೆನಪಾಗುವುದೇ #1, ಅಶೋಕ ರಸ್ತೆಯಲ್ಲಿರುವ ಆಂಧ್ರ ಪ್ರದೇಶ ಭವನದ ತೆಲಂಗಾಣ ಭವನ್ ಕ್ಯಾಂಟೀನ್. ಇಲ್ಲಿ ಬೆಳಿಗ್ಗೆ 8 ರಿಂದ ದಕ್ಷಿಣ ಭಾರತದ ತಿಂಡಿಗಳು ಲಭ್ಯವಾದರೆ ಮಧ್ಯಾಹ್ನ 12 ರಿಂದ 3 ರ ವರೆಗೆ ಊಟ ಮತ್ತು ಸಂಜೆ 7 ರ ನಂತರ ಊಟದ ವ್ಯವಸ್ಥೆ ಇದೆ. ಮೂರು ದಿನಗಳಿಂದಲೂ ಬಾಯಿ ಕೆಟ್ಟಿದ್ದ ನಾನು ಮತ್ತಿಬ್ಬರು ಬೆಂಗಳೂರಿನಿಂದ ಬಂದ ಸಹೋದ್ಯೋಗಿಗಳು ಮತ್ತು ದೆಹಲಿಯ ನನ್ನ ತಂಡದ ಸಹೋದ್ಯೋಗಿಯೊಂದಿಗೆ ಆಂಧ್ರಭವನದ ಕ್ಯಾಂಟೀನ್ ಒಳಗೆ ಕಾಲು ಇಡುತ್ತಿದ್ದಂತೆಯೇ ಕಾಲು ಇಡಲು ಅಸಾಧ್ಯವಾದಷ್ಟು ಜನಸಾಗರ. ಹಾಗೂ ಹೀಗೂ ನುಸುಳಿಕೊಂಡು ಟೋಕನ್ ತೆಗೆದುಕೊಂಡು ಅಲ್ಲಿ ಟೋಟನ್ ನಂಬರ್ ಕರೆಯುತ್ತಿದ್ದವರಿಗೆ ಏಮಂಡೀ ಬಾಗುನ್ನಾರ, ಮೇಮು ನಲಗು ಮಂದಿ ಉನ್ನಾಮಂಡಿ ಎಂದು ತೆಲುಗುಭಾಷೆಯಲ್ಲಿ ಹೇಳುತ್ತಿದ್ದಂತೆಯೇ ಹಸನ್ಮುಖರಾಗಿ, ರೆಂಡು ನಿಮಿಷಾಲು ಉಂಡಂಡಿ ಎಂದು ಹೇಳುತ್ತಲೇ, ಅಲ್ಲೊಂದು ಟೇಬಲ್ ಖಾಲಿ ಅಗುತ್ತಿದ್ದಂತೆಯೇ, ಮೀರು ಇಕ್ಕಡ ರಾಂಡಿ ಎಂದಾಗ, ಉದ್ದದ ಸಾಲಿನಲ್ಲಿ ನಿಂತು ಕೈತೊಳೆದು ಕೊಂಡು ಬರುವಷ್ಟರಲ್ಲಿ ಟೇಬಲ್ ಸಿಕ್ಕಿದ್ದನ್ನು ಕಂಡು ನನ್ನ ಜೊತೆಯಲ್ಲಿ ಬಂದಿದ್ದವರಿಗೆ ಆಶ್ಚರ್ಯವೋ ಅಶ್ಚರ್ಯ. ಆಗ ಅವರಿಗೆ ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯನ್ನು ಹೇಳಿ ಎಲ್ಲಾ ನಮ್ಮ ಅಮ್ಮನ ಕೃಪೆ, ಸುಲಲಿತವಾಗಿ ಕನ್ನಡ, ತಮಿಳು, ತೆಲುಗು ಅಲ್ಲದೇ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯನ್ನೂ ಬಲ್ಲವರಾಗಿದ್ದ ಅಮ್ಮನಿಂದಾಗಿಯೇ ಆ ಎಲ್ಲಾ ಭಾಷೆಗಳನ್ನು ಕಲಿಯುವಂತಾಗಿದ್ದು ಕಾಲ ಕಾಲಕ್ಕೆ ಅದೇ ಭಾಷಾ ಪಾಂಡಿತ್ಯದಿಂದಾಗಿ ಈ ರೀತಿಯ ಕೆಲಸಗಳು ಸುಗಮವಾಗಿ ನಡೆದುಕೊಂಡು ಹೋಗುತ್ತದೆ.
ಆಂಧ್ರ ಭವನದಲ್ಲಿ ಈ ಹಿಂದೆ 80/- ರೂಪಾಯಿಗಳಿದ್ದ ಊಟ ಈಗ 190/- ರೂಗಳಾಗಿದೆ. ದೆಹಲಿಯಂತಹ ನಗರದಲ್ಲಿ ಕೇವಲ 190/- ರೂಗಳಿಗೆ ಆನಿಯಮಿತವಾದ ರುಚಿ ರುಚಿಯಾದ ದಕ್ಷಿಣಭಾರತದ ಊಟ ಯಾರೂ ಸಹಾ ಕೊಡುವುದಿಲ್ಲ. ಟೇಬಲ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ನಾಲ್ಕು ತಟ್ಟೆಗಳನ್ನು ತಂದಿರಿಸಿ ಅದಕ್ಕೆ ಬಿಸಿ ಬಿಸಿ ಪೂರಿಗಳನ್ನು ಬಡಿಸಿದರು. ತಟ್ಟೆಯಲ್ಲಿ ಕೇಸರಿಬಾತ್, ಮೊಸರು, ಹಪ್ಪಳ, ಉಪ್ಪಿನಕಾಯಿ, ಪಪ್ಪು, ಎರಡು ರೀತಿಯ ಪಲ್ಯಗಳ ಜೊತೆ ಸ್ವಲ್ಪ ರೈಸ್ ಬಾತ್ ಇತ್ತು. ಕಣ್ಣಿಗೆ ಒತ್ತಿಕೊಂಡು ಪೂರಿಯ ಜೊತೆಗೆ ಆಲೂಗೆಡ್ಡೆ ಪಲ್ಯವನ್ನು ಬಾಯಿಗೆ ಇಡುತ್ತಿದ್ದಂತೆಯೇ ಅಹಾ ಸ್ವರ್ಗಕ್ಕೆ ಮೂರೇ ಗೇಣು. ನಂತರ ಪೂರಿಯನ್ನು ಉಳಿದ ಎರಡು ಪಲ್ಯ, ಪಪ್ಪು (ತೊವ್ವೆ)ಯ ಜೊತೆಗೆ ತಿಂದು ಮುಗಿಸುತ್ತಿದ್ದಂತೆಯೇ ಸರ್ ಪೂರೀ ಬೇಕೆ ಎಂದು ಕೇಳಿದಾಗ ಬೇಡಾ ಅನ್ನಾ ಬಡಿಸಿ ಎಂದೆ.
ತಕ್ಷಣವೇ ಅಗಲದ ಪಾತ್ರೆಯಲ್ಲಿ ಅನ್ನವನ್ನು ತಂದು ನಮ್ಮ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ, ಹೊರನಾಡುವಿನಲ್ಲಿ ಬಡಿಸುವ ರೀತಿಯಲ್ಲಿ ಅನ್ನದ ಕೈನಲ್ಲಿ ತಳ್ಳಿ ತಳ್ಳಿ ಬಡಿಸಲು ಮುಂದಾದಾಗ, ಕೊಂಚಂ ಒಡ್ಡೀಯಂಡೀ ಎಂದೆ. ಆಗ ಆತ ಸ್ವಲ್ಪ ಅನ್ನವನ್ನು ಬಡಿಸಿದ. ಆ ಅನ್ನದಲ್ಲಿ ಸ್ವಲ್ಪ ಹುಳಿಯನ್ನು ಕಲಸಿಕೊಂಡು ಬಾಯಿಗೆ ಇಡುತ್ತಿದ್ದಂತೆಯೇ, ಅದರ ರುಚಿಗೆ ಕಳೆದು ಹೋಗುವಷ್ಟು ಚನ್ನಾಗಿತ್ತು. ನಂತರ ಮತ್ತೆ ಸ್ವಲ್ಪ ಅನ್ನಕ್ಕೆ ಸಾರು, ನಂತರ ಪಪ್ಪು, ಅದಾದ ನಂತರ ಅಲ್ಲಿದ್ದ ಪುಡಿಯೊಂದಿಗೆ ತುಪ್ಪವನ್ನು ಬೆರೆಸಿಕೊಂಡು ಜೊತೆ ಜೊತೆಯಲ್ಲೇ ಪಲ್ಯವನ್ನು ನೆಂಚಿಕೊಂಡು ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿ ಗಂಟಲಿನವರೆಗೂ ಬಂದಿತ್ತು. ಮತ್ತೆ ಸ್ವಲ್ಪವೇ ಅನ್ನವನ್ನು ಹಾಕಿಸಿಕೊಂಡು, ಅದಕ್ಕೆ ಮೊಸರು ಬೆರೆಸಿಕೊಂಡು ಜೊತೆಗೆ ಅವುಗಾಯಿ (ಮಾವಿನಕಾಯಿ ಉಪ್ಪಿನಕಾಯಿ) ನೆಂಚಿಕೊಂಡು ತಿಂದಿದ್ದಲ್ಲದೇ, ಕಡೆಗೆ ಅನ್ನಾ ಕಂಡು ಎಷ್ಟು ದಿನವಾಯಿತೋ ಎನ್ನುವಂತೆ ಎಲ್ಲಾ ಬೆರಳುಗಳನ್ನೂ ಚೀಪಿ ಸಣ್ಣಗೆ ಡರ್ ಎಂದು ತೇಗಿ ಕೈತೊಳೆದು ಕೊಂಡು ಮತ್ತೆ ಅಲ್ಲಿಯೇ ರೂ 20/-ಕ್ಕೆ ಒಂದರಂತೆ ಸಿಗುವ ಸ್ವೀಟ್ ಬೀಡಾ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಾಗ ಅಗುವ ಸುಖಃದ ಮುಂದೆ ಯಾವುದೇ ರೋಟೀ ನಾನ್, ಪನ್ನೀರ್ ಬಟರ್/ಮಟರ್ ಮಸಾಲಾ ಆಗಲೀ ಪರೊಟ ಇಲ್ಲವೇ ಸಮೋಸ ತಿನ್ನವಾಗ ಆಗುವುದಿಲ್ಲ ಎನ್ನುವುದರ ಅರಿವಾಯಿತು.
ನಮ್ಮ ಜೊತೆ ಬಂದಿದ್ದ ದೆಹಲಿಯ ಹುಡುಗನಿಗಂತೂ ಇದೊಂದು ದೊಡ್ಡ ಅಚ್ಚರಿ. ಸರ್ ನನ್ನ ಜೀವಮಾನದಲ್ಲಿ ಎಂದೂ ಇಷ್ಟೊಂದು ಅನ್ನಾ ತಿಂದಿರಲೇ ಇಲ್ಲಾ. ಊಟ ತುಂಬಾ ಚನ್ನಾಗಿ ಇತ್ತು ಎಂದ. ಇನ್ನು ಕಛೇರಿಯ ಕೆಲಸ ಮುಗಿಸಿಕೊಂಡು ಹೊರಗೆ ಬರುವಷ್ಟರಲ್ಲಿ ದೆಹಲಿಯ ಸುಡು ಬೇಸಿಗೆಯಿಂದ ಬಳಲಿದ್ದವರಿಗೆ ತಂಪನ್ನು ಎರಚಲು ಸಣ್ಣದಾಗಿ ಮಳೆಯು ಬರುತ್ತಿತ್ತು. ಹಾಗೇ ಮೆಟ್ರೋ ಏರಿಕೊಂಡು ಹೋಟೇಲ್ ರೂಮಿಗೆ ಹೋಗಿ ಬಟ್ಟೇ ಬದಲಿಸಿ, ಕೈ ಕಾಲು ತೊಳೆದುಕೊಳ್ಳುವಷ್ಟರಲ್ಲಿ ನನ್ನ ಪಕ್ಕದ ರೂಮಿನಲ್ಲೇ ಇದ್ದ ನನ್ನ ಬೆಂಗಳೂರು ಸಹೋದ್ಯೋಗಿ ಸರ್ ಊಟಕ್ಕೆ ಹೋಗೋಣವೇ? ಎಂದು ಕೇಳಿದಾಗ, ಅಯ್ಯೋ ರಾಮಾ. ನನ್ನ ಎರಡು ವಾರದ ಅನ್ನದ ಕೋಟಾವನ್ನು ಇವತ್ತು ಒಂದೇ ದಿನ ತಿಂದು ಮುಗಿಸಿದ್ದೇನೆ. ನಾನು ಮನೆಯಲ್ಲಿ ಇದ್ದರೆ ಅನ್ನಾನೇ ಮುಟ್ಟೋದಿಲ್ಲ ಎಂದು ಜೋರಾಗಿ ನಗುತ್ತಾ, ನಾನು ಈ ಪರಿಯಾಗಿ ಅನ್ನ ತಿಂದದ್ದು ನನ್ನ ಹೆಂಡತಿಗೆ ಗೊತ್ತಾದ್ರೇ, ಆಹಾಹಾಹಾ ಈ ಗಂಡಸರೇ ಇಷ್ಟು. ಮನೆಯಲ್ಲಿ ಮಾತ್ರಾ ಅನ್ನಾ ತಿನ್ನೋದಿಲ್ಲಾ ಅದೇ ಬೇರೇ ಊರಿಗೆ ಹೋದ್ರೇ ಒಳ್ಳೇ ಬಕಾಸುರನ ತರಹ ತಿಂತಾರೆ ನೋಡಿ ಎಂದು ಹೇಳುತ್ತಿದ್ದದ್ದಂತೂ ಖಂಡಿತ ಎಂದೆ. ಅದಕ್ಕವರು ಹೌದೌದು ಅದಕ್ಕೇ ಅಲ್ವೇ, ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು ಎಂದಿದ್ದು ಎಷ್ಟು ಸತ್ಯ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಮಧ್ಯಾನ. ಪದ ತಪ್ಪಾಗಿದೆ. ಲೇಖನ ಸೊಗಸಾಗಿದೆ
LikeLike
ಎಷ್ಟೇ ಗಮನಿಸಿದರೂ ಅಲ್ಲೊಂದು ಇಲ್ಲೊಂದು ಈರೀತಿಯಲ್ಲಿ ತಪ್ಪಾಗಿ ಹೋಗುತ್ತದೆ. ಈಗ ಸರಿ ಪಡಿಸಿದ್ದೇನೆ.
ಧನ್ಯೋಸ್ಮಿ
LikeLike
ಧನ್ಯವಾದ
LikeLiked by 1 person