ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದಲ್ಲಿ ಅಂತಿಮವಾದ ಫಲಿತಾಂಶ ಖಂಡಿತವಾಗಿಯೂ ಫಲಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕ ಜ್ವಲಂತ ಉದಾಹರಣೆಯಾಗಿ ಸದ್ಯದಲ್ಲಿ ರಾಜಾಸ್ಥಾನ್ ರಾಯಲ್ಸ್ ಪರವಾಗಿ ಐಪಿಲ್ ಪಂದ್ಯಾವಳಿಯನ್ನು ಆಡುತ್ತಿರುವ ಕೇವಲ 21 ವರ್ಷ ವಯಸ್ಸಿನ ಉತ್ತರ ಪ್ರದೇಶದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ನಮ್ಮ ಮುಂದೆ ಇದ್ದು ಖಂಡಿತವಾಗಿಯೂ ಈ ಪ್ರತಿಭಾವಂತ ಕ್ರಿಕೆಟಿಗ ಭವಿಷ್ಯದಲ್ಲಿ ಭಾರತ ಕ್ತಿಕೆಟ್ ತಂಡದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಾನೆ ಎಂಬುದೇ ಎಲ್ಲರ ನಂಬಿಕೆಯಾಗಿದೆ.

jaiswal2ಏಪ್ರಿಲ್ 30, 2023ರ ಭಾನುವಾರದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ, ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಎಡಗೈ ಆರಂಭಿಕನಾಗಿ ಮೈದಾನಕ್ಕೆ ಇಳಿದ ಯಶಸ್ವಿ ಜೈಸ್ವಾಲ್ ಮತ್ತೊಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಕೆಚ್ಚದೆಯಿಂದ ಆಟವಾಡಿ ಕೇವಲ 62 ಎಸೆತಗಳಲ್ಲಿ 16 ಬೌಂಡರಿ ಮತ್ತು 8 ಸಿಕ್ಸರ್ ಗಳ ನೆರವಿನಿಂದ 200ರ ಸರಾಸರಿಯಲ್ಲಿ ಚೊಚ್ಚಲ ಐಪಿಲ್ ಶತಕವಾಗಿ 124 ರನ್ನುಗಳನ್ನು ಕಲೆಹಾಕಿ ತಂಡದ ಮೊತ್ತ 20 ಓವರುಗಳಲ್ಲಿ 212-7 ರನ್ನುಗಳನ್ನು ಗಳಿಸಿರುವುದು ನಿಜಕ್ಕೂ ಅದ್ಭುತವಾದ ಸಾಧನೆಯೇ ಸರಿ. ಕೇವಲ ಇದೊಂದೇ ಆಟಕ್ಕಾಗಿ ಆತನನ್ನು ಈ ಪರಿಯಾಗಿ ಹೊಗಳುವ ಅವಶ್ಯಕತೆ ಇರಲಿಲ್ಲ.

jaiswal_ipl

ಇದುವರೆವಿಗೂ 32 ಪಂದ್ಯಗಳಲ್ಲಿ 30.47 ಸರಾಸರಿಯಲ್ಲಿ 975 ರನ್ನುಗಳನ್ನು ಗಳಿಸಿದ್ದು ಅದರಲ್ಲಿ 1 ಶತಕ ಮತ್ತು 6 ಅರ್ಧಶಕಗಳು ಸೇರಿವೆ. ಆತ 144.66 ಸ್ಟ್ರೈಕ್ ರೇಟಿನಲ್ಲಿ ನಿರಂತವಾಗಿ ಸ್ಥಿರವಾಗಿ ಇಷ್ಟು ರನ್ನುಗಳನ್ನು ಗಳಿಸುವ ಮೂಲಕ ಭವಿಷ್ಯದ ತಾರೆ ಎನಿಸಿದ್ದರೂ, ಇಷ್ಟು ಎತ್ತರಕ್ಕೆ ಏರಲು ಆತ ಪಟ್ಟ ಪರಿಶ್ರಮ ನಿಜಕ್ಕೂ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದರೂ ಆತಿಶಯವಾಗದು. ಮೈದಾನದಲ್ಲಿ ಇಳಿದ ಕೂಡಲೇ ಟನ್ ಗಟ್ಟಲೇ ರನ್ನುಗಳನ್ನು ಹೊಡೆದು ರನ್ ಮೆಷೀನ್ ಎನಿಸಿಕೊಂಡಿರುವ ಯಶಸ್ವೀ ಜೈಸ್ವಾಲ್ ಖಾಸಗಿ ಬದುಕು ನಿಜಕ್ಕೂ ಯಾತನಮಯವಾಗಿದ್ದು. ಒಂದೊಂದು ತುತ್ತಿನ ಊಟಕ್ಕೂ ಕಷ್ಟಪಡಬೇಕಾಗಿತ್ತಲ್ಲದೇ, ಆತ ವಿರಮಿಸಿಕೊಳ್ಳುವುದಕ್ಕೂ ಸೂಕ್ತವಾದ ಸ್ಥಳವಿರದೇ, ಹಸುಗಳ ಕೊಟ್ಟಿಗೆಯಲ್ಲಿ ಮಲಗ ಬೇಕಾಗಿದ್ದ ಸಂಗತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ.

jaiswal2_u19ಉತ್ತರ ಪ್ರದೇಶದ ಸುರಿಯಾ ಎಂಬ ಪ್ರದೇಶದಲ್ಲಿ Dec 28, 2001ರಂದು ಕಡು ಬಡತನದ ಕುಟುಂಬವೊಂದರಲ್ಲಿ ಜನಿಸಿದ ಯಶಸ್ವಿ ಜೈಸ್ವಾಲ್ ಬೆಳೆಯುವ ಸಿರಿ ಮೊಳಕೆಯಲ್ಲೇ, ಎನ್ನುವಂತೆ ಕೇವಲ 13 ವರ್ಷದವರಾಗಿದ್ದಾಗಲೇ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಸ್ಥಳೀಯರ ಮನಗೆದ್ದಿದ್ದಲ್ಲದೇ, ಭಾರತೀಯ ಕ್ರಿಕೆಟ್ ತಂಡದ ನೀಲಿ ಬಟ್ಟೆಯನ್ನು ಧರಿಸಿ, ವಿಶ್ವ ದರ್ಜೆಯ ಬ್ಯಾಟ್ಸ್‌ಮನ್ ಆಗುವ ಕನಸನ್ನು ಹೊತ್ತು ಮುಂಬೈನಲ್ಲಿ ಇದ್ದ ತನ್ನ ಚಿಕ್ಕಪ್ಪನ ಸಣ್ಣದಾದ ಮನೆಗೆ ತಂದೆಯೊಂದಿಗೆ ಮನೆಗೆ ಬರುತ್ತಾರೆ. ಮನೆ ಅತ್ಯಂತ ಸಣ್ಣದಾಗಿದ್ದ ಕಾರಣ, ಇವರಿಗೆ ಅಲ್ಲಿರಲು ಅನಾನುಕೂಲವಾದಾಗ, ಬೇರೊಂದು ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ, ಅಲ್ಲಿಯೇ ಇದ್ದ ಗೌಳಿಗರೊಬ್ಬರ ಮನೆಯಲ್ಲಿ ಅವರ ಹೈನುಗಾರಿಕೆಗೆ ಸಹಾಯ ಮಾಡುವಂತಿದ್ದಲ್ಲಿ ಮಾತ್ರವೇ ಆ ದನ ಕರುಗಳ ಕೊಟ್ಟಿಗೆಯಲ್ಲಿ ವಾಸಿಸುವಂತಹ ಷರತ್ತು ಬದ್ಧ ಅವಕಾಶ ದೊರೆಯುತ್ತದೆ.

ಬೆಳಿಗ್ಗೆ 5 ಗಂಟೆಗೆಲ್ಲಾ ಎದ್ದು ಆ ದನಗಳ ಕೊಟ್ಟಿಗೆಯನ್ನು ಶುಧ್ಹೀಕರಿಸಿ ಆಶ್ರಯದಾತ ಹಾಲುಗಾರನಿಗೆ ಆತನ ಕೆಲಸದಲ್ಲಿ ಸಹಾಯ ಮಾಡಿದ ನಂತತ ತನ್ನ ದೈನಂದಿನ ಕ್ರಿಕೆಟ್ ಅಭ್ಯಾಸಕ್ಕಾಗಿ ಮುಂಬೈ ಚರ್ಚ್ ಗೇಟ್‌ ಬಳಿ ಇರುವ ಆಜಾದ್ ಮೈದಾನದ ಕ್ರಿಕೆಟ್ ಮೈದಾನಕ್ಕೆ ಬರಬೇಕಿತ್ತು. ಇಡೀ ದಿನ ಬಿಸಿಲಿನಲ್ಲಿ ಅಭ್ಯಾಸ ನಡೆಸಿ ಮನೆಗೆ ಹಿಂದುರಿಗಿದರೆ, ಆ ದನದ ಕೊಟ್ಟಿಗೆಯಲ್ಲಿ ಯಶಸ್ವಿ ಜೈಸ್ವಾಲ್‌ಗೆ ವಿಶ್ರಾಂತಿ ಪಡೆಯಲು ಸೂಕ್ತವಾದ ಹಾಸಿಗೆಯೂ ಇರಲಿಲ್ಲ ಜೊತೆಗೆ ಸರಿಯಾದ ಆಹಾರ ಸಿಗುತ್ತಿರಲಿಲ್ಲ. ಎಲ್ಲದ್ದಕ್ಕಿಂತಲೂ ಸರಿಯಾದ ಶೌಚಾಲಯವೂ ಇರಲಿಲ್ಲ. ಆದರೂ ಇವೆಲ್ಲವನ್ನೂ ಸಹಿಸಿಕೊಂಡೇ ಇದ್ದ ಜೈಸ್ವಾಲ್ ಅದೊಂದು ದಿನ ತನ್ನ ಕ್ರಿಕೆಟ್ ಆಭ್ಯಾಸವನ್ನು ಮುಗಿಸಿ ಮನೆಗೆ ಹಿಂದುರಿಗಿದಾಗ, ಆ ಗೌಳಿಗ ಜೈಸ್ವಾಲ್ ಕ್ರಿಕೆಟ್ ಕಿಟ್ ಕೊಟ್ಟಿಗೆಯಿಂದ ಹೊರಗೆ ಹಾಕಿದ್ದನ್ನು ಕಂಡು ಆಚ್ಚರಿಯಿಂದ ಕೇಳಿದಾಗ, ನೀನು ನನ್ನ ಕೆಲಸದಲ್ಲಿ ಸರಿಯಾಗಿ ಸಹಕರಿಸದೇ ಇರುವ ಕಾರಣ, ಇನ್ನು ಮುಂದೆ ನೀನು ನಮ್ಮ ಕೊಟ್ಟಿಗೆಯಲ್ಲಿ ಇರುವುದು ಬೇಡಾ ಎಂದು ತಿಳಿಸಿದಾಗ, ಆಕಾಶವೇ ತನ್ನ ತಲೆಯ ಮೇಲೆ ಬಿದ್ದಂತಹ ಅನುಭವ ಜೈಸ್ವಾಲ್ ಗೆ ಆಗಿತ್ತು. ಅಷ್ಟು ದೊಡ್ಡ ನಗರದಲ್ಲಿ ಆತನಿಗೆ ಯಾರೂ ಸಹಾ ಪರಿಚಯವಿರದಿದ್ದ ಕಾರಣ, ತನ್ನ ಕ್ರಿಕೆಟ್ ಕಿಟ್ ತೆಗೆದುಕೊಂಡು ಆಜಾದ್ ಮೈದಾನದ ಕ್ರಿಕೆಟ್ ಮೈದಾನಕ್ಕೆ ಬಂದು ಅಲ್ಲಿ ಕ್ರಿಕೆಟ್ ಆಡಲು ಬಳಸುವ ಮ್ಯಾಟ್ ಮೇಲೆಯೇ ಮಲಗಲು ಆರಂಭಿಸಿದರು.

jaiswal4ಇದನ್ನು ಗಮನಿಸಿದ ಅವರ ತರಬೇತುದಾರ ನೀನು ಉತ್ತಮ ಪ್ರದರ್ಶನ ನೀಡಿದರೆ, ಆಜಾದ್ ಮೈದಾನದ ಒಂದು ಬದಿಯ ಟೆಂಟ್ ನಲ್ಲಿ ಇಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತೇನೆ ಎಂದಾಗ, ಬಹಳ ಸಂತೋಷದಿಂದ ಒಪ್ಪಿದ ಯಶಸ್ವಿ ಜೈಸ್ವಾಲ್ ಕಷ್ಟಪಟ್ಟು ಆವರ ತರಬೇತುದಾರರು ಹೇಳಿದ ಕೆಲಸವನ್ನೆಲ್ಲಾ ಮಾಡಿದ್ದಕ್ಕಾಗಿ ಮೈದಾನ ಟೆಂಟ್‌ನಲ್ಲಿ ವಾಸಿಸಲು ಅವಕಾಶ ದೊರೆಯಿತಾದರೂ. ಅಲ್ಲಿನ ಪರಿಸ್ಥಿತಿಯೂ ದನದ ಕೊಟ್ಟಿಗೆಗಿಂತ ವಿಭಿನ್ನವಾಗಿರಲಿಲ್ಲ. ಅಲ್ಲಿಯೂ ರಾತ್ರಿ ವಿದ್ಯುತ್ ಬೆಳಕು ಇಲ್ಲದೇ, ಶೌಚಾಲಯವೂ ಇಲ್ಲದೇ, ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಸಾರ್ವಜನಿಕ ಶೌಚಾಲಯದಲ್ಲೇ ತನ್ನ ನಿತ್ಯಕರ್ಮಗಳನ್ನು ಮುಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ಜೈಸ್ವಾಲನದಾಗಿತ್ತು.

jaiswal_panipuri ಹಾಗೂ ಹೀಗೂ ಮಲಗಲು ಆಶ್ರಯ ದೊರೆತರೂ ಊಟ ತಿಂಡಿಗಾಗಿ ಪರದಾಡುವ ಸ್ಥಿತಿ ಎದುರಾದಾಗ, ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ, ಜೈಸ್ವಾಲ್ ಬೆಳಗ್ಗೆ ತನ್ನ ಅಭ್ಯಾಸ ಮುಗಿಸಿದ ನಂತರ ಸಂಜೆಯ ಹೊತ್ತಿನಲ್ಲಿ ಮೈದಾನದಲ್ಲಿ ಆಟವಾಡಲು ಬರುತ್ತಿದ್ದವರಿಗೆ ಪಾನಿ ಪುರಿ ಮಾರಾಟ ಮಾಡುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಾ, ಜೀವನವನ್ನು ಸಾಗಿಸುತ್ತಲೇ, ಭಾರತಕ್ಕಾಗಿ ಆಡುವ ಕನಸನ್ನು ಜೀವಂತವಾಗಿರಿಸಿಕೊಂಡು ತನ್ನ ಅಭ್ಯಾಸವನ್ನು ಮುಂದುವರೆಸಿದ.

ಯೋಧರು ಹುಟ್ಟುವುದಿಲ್ಲ ಆದರೆ ಕಠಿಣ ಸಮಯ ಮತ್ತು ಪರಿಸ್ಥಿತಿ ಅವರನ್ನು ಯೋಧರನ್ನಾಗಿಸುತ್ತದೆ ಎಂಬ ಮಾತು ಯಶಸ್ವಿ ಜೈಸ್ವಾಲ್ ವಿಷಯದಲ್ಲಿ ಅಕ್ಷರಶಃ ನಿಜವಾಯಿತು ಎಂದರೂ ಅತಿಶಯವಾಗದು. ಬೆಳಿಗ್ಗೆ ಎಲ್ಲಾ ಆಟಗಾರರು ಅಭ್ಯಾಸಕ್ಕಾಗಿ ಬರುವ ಮುನ್ನಾ ಜೈಸ್ವಾಲ್ ಮೈದಾನವನ್ನು ಶುಚಿಗೊಳಿಸಿ ಮ್ಯಾಟ್ ಹಾಕಿ ವಿಕೆಟ್ ನೆಟ್ಟು ಎಲ್ಲವನ್ನೂ ಸಿದ್ದಪಡಿಸಿ ನಂತರ ಎಲ್ಲರೂ ಬಂದಾಗ ಅವರೊಡನೆ ಕಠಿಣವಾಗಿ ಅಭ್ಯಾಸ ನಡೆಸಿದ ನಂತರ ಮತ್ತೆ ಎಲ್ಲವನ್ನೂ ಎತ್ತಿಡುವ ಜವಾಬ್ಧಾರಿ ಆತನದ್ದಾಗಿತ್ತು. ಇದೇ ರೀತಿಯಲ್ಲಿ ಅಭ್ಯಾಸ ಸಾಗುತ್ತಿದ್ದಾಗ ಅದೊಂದು ದಿನ ಜ್ವಾಲಾ ಸಿಂಗ್ ಎಂಬ ತರಬೇತುದಾರರು ಅಜಾದ್ ಮೈದಾನಕ್ಕೆ ಬಂದಿದ್ದಾಗ ಜೈಸ್ವಾಲ್ ಅವರು ಬ್ಯಾಟಿಂಗ್ ಮಾಡುವುದನ್ನು ನೋಡಿ, ಆ ಯುವಕನ ಪ್ರತಿಭೆ ಮತ್ತು ಇಚ್ಛಾಶಕ್ತಿಯಿಂದ ಪ್ರಭಾವಿತರಾಗಿ, ಆಟಕ್ಕಾಗಿ ಆತ ಪಡುತ್ತಿದ್ದ ಕಷ್ಟಗಳನ್ನೆಲ್ಲಾ ತಿಳಿದು ಮನಮಿಡಿದು ಯಶಸ್ವಿಯ ಮುಂದಿನ ಪೋಷಣೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಲ್ಲದೇ, ತಮ್ಮ ಮನೆಯಲ್ಲೇ ಆತನಿಗೆ ಆಶ್ರಯ ನೀಡಿದರು.

u-19supಆಷ್ಟೆಲ್ಲಾ ಕಷ್ಟ ಮತ್ತು ಹೋರಾಟಗಳನ್ನು ಎದುರಿಸಿದ ನಂತರ ಈ ರೀತಿಯ ಸುಃಖ ದೊರೆತಾಗ ಅದರಿಂದ ಮೈಮರೆಯದೇ, ಮತ್ತೆ ತನ್ನ ನಿರಂತಹ ಅಭ್ಯಾಸವನ್ನು ಮೊದಲಿಗಿಂತಲೂ ಕಠಿಣವಾಗಿ ಮುಂದುವರೆಸಿದ ಕಾರಣ, 17 ನೇ ವಯಸ್ಸಿನಲ್ಲಿಯೇ, ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡಕ್ಕೆ ಆಡಲು ಆಯ್ಕೆಯಾದರು. ತನಗೆ ದೊರೆತ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಡ ಜೈಸ್ವಾಲ್ ರಣಜಿ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ ಆತನ ನಾಗಾಲೋಟವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಈ ಅದ್ಭುತ ಪ್ರದರ್ಶನದ ನಂತರ, ಆತ ಭಾರತ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗ, ಇಷ್ಟು ದಿನಗಳ ಶ್ರಮ ಕೊನೆಗೂ ಫಲ ನೀಡಿತಲ್ಲ ಎಂದು ಸಂಭ್ರಮಿಸಿದ. ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲೇ ಆಡುವ ಅವಕಾಶ ಪಡೆದರೂ, ಮೊದಲ ಎರಡು ಪಂದ್ಯಗಳಲ್ಲಿ, ಕೇವಲ 15 ಮತ್ತು 1 ರನ್ ಗಳಿಸಿದಾಗ ಮುಂದಿನ ಪಂದ್ಯಗಳಲ್ಲಿ ಆಡುವ ೧೧ರ ಬಳಗದಿಂದ ಹೊರಬಿದ್ದು ಬೆಂಚ್ ಕಾಯಿಸಬೇಕಾಯಿತು. ಆದರೆ ಆದೃಷ್ಟ ತನ್ನೊಂದಿಗೆ ಇದ್ದರೆ ಯಾರೂ ಸಹಾ ತಡೆಯಲಾರರು ಎನ್ನುವಂತೆ, ಫೈನಲ್‌ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿದ್ದನ್ನು ಯಶಸ್ವಿಯಾಗಿ ಬಳಸಿಕೊಂಡ ಜೈಸ್ವಾಲ್ 114 ರನ್‌ಗಳನ್ನು ಗಳಿಸುವ ಮೂಲಕ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾಗಿದ್ದಲ್ಲದೇ ಭಾರತ ವಿಶ್ವಕಪ್ ಗೆಲ್ಲಲು ಸಹಕಾರ ನೀಡಿದ ನಂತರ ರಾಷ್ಟ್ರೀಯ ತಂಡದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಿತು.

jaiswal_19ಮುಂದಿನ U19 ವಿಶ್ವಕಪ್ ತಂಡಕ್ಕೆ ತನ್ನ ಅರ್ಹತೆಯ ಆಧಾರದ ಮೇಲೇ ಆಯ್ಕೆಯಾಗಿ, ಇಡೀ ಪಂದ್ಯಾವಳಿಯಲ್ಲಿ, 88, 105*, 62, 57*, 29*, 59 ಓಟಗಳನ್ನು ಗಳಿಸಿ, ಆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ, ‘ಮ್ಯಾನ್ ಆಫ್ ದಿ ಟೂರ್ನಮೆಂಟ್‘ ಪ್ರಶಸ್ತಿಗೂ ಭಾಜನರಾದರೂ, ಬಾಂಗ್ಲಾದೇಶದ ವಿರುದ್ಧದ ಆ ಫೈನಲ್‌ನಲ್ಲಿ ಭಾರತ ತಂಡ ಗೆಲ್ಲಲಾಗದಿದ್ದರೂ, ಭಾರತ ಕ್ರಿಕೆಟ್ ತಂಡದ ಭವಿಷ್ಯದ ಸೂಪರ್‌ಸ್ಟಾರ್ ಆಗಿ ಯಶಸ್ವಿ ಜೈಸ್ವಾಲ್ ಹೊರಹೊಮ್ಮಿದರು ಎಂದರೂ ತಪ್ಪಾಗದು.

ಸಹಜವಾಗಿ ಅಂಡರ್ 19 ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನದ ನೀಡುವ ಆಟಗಾರರನ್ನು ಐಪಿಎಲ್‌ ಪಂದ್ಯಾವಳಿಗಳ ಹರಾಜಿನಲ್ಲಿ ಗಣನೆಗೆ ತಗೆದುಕೊಳ್ಳಲಾಗುತ್ತದೆ. ಅದೇ ರೀತಿಯಲ್ಲೇ 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ಅವರನ್ನು ಐಪಿಎಲ್ ಹರಾಜಿನಲ್ಲಿ 2.40 ಕೋಟಿಗೆ ರೂಪಾಯಿಗಳಿಗೆ ಖರೀದಿಸಿದಾಗ ಆತನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಆ ಚೊಚ್ಚಲು ಋತುವಿನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಿ 289 ರನ್ ಗಳಿಸಿದರು. 2021 ರಲ್ಲಿ 10 ಪಂದ್ಯಗಳಲ್ಲಿ 249ಓಟಗಳನ್ನು ಗಳಿಸಿದರೆ, 2022ರ ಪಂದ್ಯಾವಳಿಗಳಲ್ಲಿ 10 ಪಂದ್ಯದಿಂದ 258 ಓಟಗಳನ್ನು ಗಳಿಸುವ ಮೂಲಕ ತಂಡಕ್ಕೆ ಭರವಸೆಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

orange_cap_jaiswal2023ರ ನಾಲ್ಕನೇ ಐಪಿಎಲ್ ಸೀಸನ್ ಅವರ ಪಾಲಿಗೆ ಅವಿಸ್ಮರಣೀಯ ಋತುವಾಗಿದ್ದು ಇದುವರೆಗೆ ಆಡಿರುವ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಪ್ರಸ್ತುತ ಋತುವಿನ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇದ್ದಾರೆ. ಈ ಋತುವಿನ ಆರಂಭದಿಂದಲೂ ಅತ್ಯುತ್ತಮವಾಗಿ ಆಡುತ್ತಿರುವ ಯಶಸ್ವೀ ಎರಡು ಬಾರಿ ಶತಕ ವಂಚಿತರಾಗಿ ಅಂತಿಮವಾಗಿ 9 ಪಂದ್ಯದಲ್ಲಿ ಮುಂಬೈ ವಿರುದ್ಧ ಬಿರುಸಿನ ಶತಕವನ್ನು ಗಳಿಸಿದ್ದಲ್ಲದೇ, ಕಳೆದ ಐದು ವರ್ಷಗಳಲ್ಲಿ 49 ಶತಕಗಳನ್ನು ಬಾರಿಸುವ ಮೂಲಕ ಭಾರತದ ಹಿರಿಯರ ತಂಡದ ಕದವನ್ನು ತಟ್ಟುತ್ತಿದ್ದಾರೆ.

ನಿಮ್ಮ ಯಶಸ್ಸಿನ ರಹಸ್ಯವೇನು ಎಂದು ಪತ್ರಕರ್ತರೊಬ್ಬರು ಜೈಸ್ವಾಲ್ ಅವರನ್ನು ಕೇಳಿದಾಗ, ಈಗ ನಾನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಹೊಂದಿದ್ದೇನೆ. ಪಂದ್ಯಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ನನ್ನ ನಿಯಂತ್ರಣದಲ್ಲಿ ಏನಿದೆಯೋ ಅದನ್ನು ಮಾಡುತ್ತೇನೆ. ನಾನು ಹೃದಯಾಂತರಾಳದಿಂದ ಕ್ರಿಕೆಟ್ ಆಟವನ್ನು ಪ್ರೀತಿಸಿ ಆಡುವ ಕಾರಣ, ಈ ನನ್ನ ಹೋರಾಟ ನಿರಂತವಾಗಿರುತ್ತದೆ ಎಂದಿದ್ದಾರೆ. ಏಕಲೌವ್ಯನ ರೀತಿಯಲ್ಲಿ ಕಠಿಣ ಪರಿಶ್ರಮದಿಂದ ಇಂತಹ ಸ್ಥಾನಕ್ಕೆ ಏರಿರಿರುವ ಯಶಸ್ವಿ ಜೈಸ್ವಾಲ್ ಅವರ ಯಶೋಗಾಥೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತಾ, ಅವರಿಗೆ ಯಶಸ್ವಿ ಭವ ಎಂದು ಹಾರೈಸೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s